Site icon Vistara News

ರಾಜ ಮಾರ್ಗ ಅಂಕಣ: ಕನ್ನಡದ ಕೀರ್ತಿಯನ್ನು ದಶದಿಕ್ಕುಗಳಿಗೂ ಹರಡಲಿದೆ ಕೋಟಿ ಕಂಠ ಗಾಯನ

kannada

೧೯೫೬ರ ನವೆಂಬರ್ ಒಂದರಂದು ಕನ್ನಡ ಮಾತಾಡುವ ಕೋಟಿ ಕೋಟಿ ಮಂದಿ ಒಂದೆಡೆ ಸೇರಿ ಆವಿರ್ಭವ ಆಗಿದ್ದು ಮೈಸೂರು ರಾಜ್ಯ! ಮುಂದೆ ಅದನ್ನು ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕ ಎಂದು ನಾಮಕರಣ ಆಯಿತು. ಕರ್ನಾಟಕ ಏಕೀಕರಣದ ಸುದೀರ್ಘ ಹೋರಾಟದಲ್ಲಿ ದುಡಿದ ಬಿಎಂಶ್ರೀ, ಹುಯಿಲಗೋಳ ನಾರಾಯಣ ರಾಯರು, ಕಯ್ಯಾರರು ಇವರೆಲ್ಲರ ಆಶಯ ಏನಿತ್ತು ಎಂದರೆ ಕರ್ನಾಟಕದಲ್ಲಿ ‘ಕನ್ನಡವೇ ಸಾರ್ವಭೌಮ’ ಆಗಬೇಕು ಎಂದು!

ಕರ್ನಾಟಕದಲ್ಲಿ ಕನ್ನಡವೇನೋ ಆಡಳಿತ ಭಾಷೆ ಆಯಿತು. ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಕವಾಗಿ ಕನ್ನಡ ಬೃಹತ್ತಾಗಿ ಬೆಳೆಯಿತು. ಏಳು ಜ್ಞಾನಪೀಠ ಪ್ರಶಸ್ತಿಗಳನ್ನು ಗೆದ್ದಿತು. ಕನ್ನಡ ಸಿನಿಮಾ, ಕನ್ನಡ ಭಾಷೆ, ಕನ್ನಡ ಸಾಹಿತ್ಯ, ಕನ್ನಡ ಸಂಸ್ಕೃತಿ, ಕನ್ನಡ ಪತ್ರಿಕೋದ್ಯಮ, ಕನ್ನಡ ಜನಪದ ಹೀಗೆ ಎಲ್ಲವೂ ಗೆದ್ದವು!

ಆದರೆ ಕನ್ನಡದ ನೆಲದಲ್ಲಿ ಕನ್ನಡವು ಅನ್ನದ ಭಾಷೆ ಆಗಬೇಕು ಎನ್ನುವ ಹೋರಾಟವು ಈವರೆಗೆ ಗೆಲ್ಲಲಿಲ್ಲ. ಕನ್ನಡ ಶಾಲೆಗಳ ಅಳಿವು ಉಳಿವಿನ ಹೋರಾಟಕ್ಕೆ ಈವರೆಗೆ ಗೆಲುವು ಸಿಕ್ಕಲಿಲ್ಲ ಅನ್ನುವ ಸಣ್ಣ ನೋವು ಇದೆ. ಇವೆಲ್ಲ ವಿಷಾದಗಳ ನಡುವೆ ಕೂಡ ಕನ್ನಡವು ಕರ್ನಾಟಕದಲ್ಲಿ ಬೃಹತ್ತಾಗಿ ಬೆಳೆದಿದೆ. ಅದರ ಬಗ್ಗೆ ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡಲು ಇನ್ನೂ ನೂರಾರು ಕಾರಣಗಳು ಇವೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿ. ಸುನಿಲ್ ಕುಮಾರ್
ಹಿಂದೆ ಸಾಕಷ್ಟು ಮಂದಿ ಈ ಇಲಾಖೆಯಲ್ಲಿ ಮಂತ್ರಿಗಳಾಗಿ ಕೆಲಸ ಮಾಡಿದ್ದು ಉಂಟು. ಆದರೆ ಯಾವಾಗ ಕಾರ್ಕಳದ ಶಾಸಕರಾದ ವಿ. ಸುನಿಲ್‌ ಕುಮಾರ್ ಅವರು ಈ ಖಾತೆಯ ಮಂತ್ರಿ ಆದರೋ ಆಗ ಇಲಾಖೆಯು ಹೊಸ ಆಯಾಮಗಳನ್ನು ಪಡೆದು ವೇಗವನ್ನು ಪಡೆಯಿತು.

‘ಮಾತಾಡ್‌ ಮಾತಾಡ್ ಕನ್ನಡ’ ಕಾರ್ಯಕ್ರಮ ದಾಖಲೆ ಬರೆದಿತ್ತು!
ಕಳೆದ ವರ್ಷ ೬೬ನೇ ರಾಜ್ಯೋತ್ಸವದ ಅಂಗವಾಗಿ ರಾಜ್ಯದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ದೊಡ್ಡ ಮಟ್ಟದಲ್ಲಿ ‘ಮಾತಾಡ್ ಮಾತಾಡ್ ಕನ್ನಡ ‘ ಎಂಬ ಕಾರ್ಯಕ್ರಮವು ಏರ್ಪಾಟು ಆಗಿತ್ತು. ಹೆಚ್ಚು ಸಿದ್ಧತೆ ಮಾಡಲು ಸಮಯ ಕಡಿಮೆ ಇತ್ತು. ಆದರೂ ರಾಜ್ಯದಲ್ಲಿ ೪೦೦೦ಕ್ಕಿಂತ ಅಧಿಕ ಸ್ಥಳಗಳಲ್ಲಿ ೨೨ ಲಕ್ಷ ಮಂದಿ ಕನ್ನಡದ ಹಾಡುಗಳನ್ನು ಹಾಡಿ ದಾಖಲೆ ಬರೆದರು! ಆ ರೀತಿಯ ಗೆಲುವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಕನ್ನಡಿಗರಲ್ಲಿ ಕನ್ನಡದ ಪ್ರೀತಿ ಕಡಿಮೆ ಇದೆ ಎಂದು ಟೀಕೆ ಮಾಡುತ್ತಾ ಬಂದವರಿಗೆ ಅಂದು ಸರಿಯಾದ ಉತ್ತರ ದೊರೆತಿತ್ತು.
ಅದರ ಯಶಸ್ಸು ಈ ವರ್ಷದ ಮಹೋನ್ನತ ಕಾರ್ಯಕ್ರಮಕ್ಕೆ ಮುನ್ನುಡಿ ಎಂದೇ ಹೇಳಬಹುದು.

ಗಿನ್ನೆಸ್ ದಾಖಲೆ ಬರೆಯಲಿದೆ ಕನ್ನಡ ಗೀತ ಗಾಯನ!
ಈ ವರ್ಷ ೬೭ನೇ ವರ್ಷದ ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಹೆಚ್ಚು ಮಾಡಲು ಸುಮಾರು ಮೂರು ತಿಂಗಳ ಅವಧಿಯ ಯೋಜನೆಯ ಜೊತೆ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮವು ಇಂದು ವೇದಿಕೆ ಏರಲಿದೆ! ಅದಕ್ಕಾಗಿ ಕನ್ನಡದ ಅತೀ ಶ್ರೇಷ್ಠವಾದ ಆರು ಹಾಡುಗಳನ್ನು ಆರಿಸಿಕೊಳ್ಳಲಾಗಿದೆ.

೧) ಕನ್ನಡದ ನಾಡ ಗೀತೆ – ಜಯ ಭಾರತ ಜನನಿಯ ತನುಜಾತೆ (ಕುವೆಂಪು)
೨) ಬಾರಿಸು ಕನ್ನಡ ಡಿಂಡಿಮವ (ಕುವೆಂಪು)
೩) ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು (ಹುಯಿಲಗೋಳ ನಾರಾಯಣ ರಾಯರು)
೪) ಹಚ್ಚೇವು ಕನ್ನಡದ ದೀಪ (ಡಿ. ಎಸ್. ಕರ್ಕಿ)
೫) ವಿಶ್ವ ವಿನೂತನ ವಿದ್ಯಾಚೇತನ( ಚೆನ್ನವೀರ ಕಣವಿ)
೬) ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು (ಹಂಸಲೇಖ)
ಈ ಆರು ಹಾಡುಗಳು ಕನ್ನಡದ ಅತೀ ಶ್ರೇಷ್ಠವಾದ ಹಾಡುಗಳು ಅನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ!

ಕೋಟಿ ದಾಟಿದ ಕನ್ನಡಿಗರ ನೋಂದಣಿ!
ಈ ಕಾರ್ಯಕ್ರಮಕ್ಕೆ QR ಕೋಡ್ ಮೂಲಕ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಹಾಡುವವರ ನೋಂದಣಿ ಮಾಡಲಾಗಿದೆ. ಎರಡು ದಿನಗಳ ಮೊದಲೇ ಒಂದು ಕೋಟಿ ಹತ್ತು ಲಕ್ಷ ಮಂದಿ ನೋಂದಣಿ ಮಾಡಿ ದಾಖಲೆ ಬರೆದಿದ್ದಾರೆ ಅನ್ನುತ್ತದೆ ಕನ್ನಡ ಸಂಸ್ಕೃತಿ ಇಲಾಖೆ! ನೋಂದಣಿ ಮಾಡಿದವರಲ್ಲಿ ಹೊರ ರಾಜ್ಯ, ಹೊರದೇಶಗಳ ಕನ್ನಡಿಗರು ಬಹುದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ರಿಕ್ಷಾ ಚಾಲಕರು, ಬಸ್ಸು ಚಾಲಕರು, ವಿದ್ಯಾರ್ಥಿಗಳು, ಶಿಕ್ಷಕರು, ವಕೀಲರು, ವೈದ್ಯರು, ಸಾಹಿತಿಗಳು, ಕಾರ್ಮಿಕರು, ಶ್ರಮಿಕರು, ರೈತರು, ಕಲಾವಿದರು ಎಲ್ಲರೂ ಇದ್ದಾರೆ ಎನ್ನುವಲ್ಲಿಗೆ ಈ ಕಾರ್ಯಕ್ರಮದ ಯಶಸ್ಸು ಖಾತರಿ ಎಂದೇ ಹೇಳಬಹುದು!

ಬೃಹತ್ ಮಟ್ಟದ ಕನ್ನಡದ ಗೀತ ಗಾಯನ ಅಭಿಯಾನ!
ಮೊನ್ನೆಯ ತನಕದ ವರದಿಯ ಪ್ರಕಾರ ೪೧ ದೇಶಗಳು, ೨೭ ರಾಜ್ಯಗಳು, ೧೮,೮೦೦ ಸಂಘ ಸಂಸ್ಥೆಗಳು, ೧೦,೦೦೦ಕ್ಕಿಂತ ಅಧಿಕ ಬೃಹತ್ ವೇದಿಕೆಗಳು, ರಾಜ್ಯದ ಎಲ್ಲ ಶಾಲಾ ಕಾಲೇಜುಗಳು ಈ ಬೃಹತ್ ಅಭಿಯಾನದಲ್ಲಿ ಸ್ವಯಂ ಆಸಕ್ತಿಯಿಂದ ಪಾಲುಗೊಳ್ಳುತ್ತಿವೆ. ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ಬೃಹತ್ ಆದ ವೇದಿಕೆಯು ಸಿದ್ಧವಾಗಿದೆ. ಎಲ್ಲ ಮೆಟ್ರೋ, ರೈಲು ನಿಲ್ದಾಣ, ವಿಮಾನ ನಿಲ್ದಾಣ, ಬಸ್ ಸ್ಟಾಂಡ್, ಎಲ್ಲ ಆಸ್ಪತ್ರೆಗಳು, ಐಟಿ ಕಂಪನಿಗಳು, ಬಟ್ಟೆ ಗಿರಣಿಗಳ ಕಾರ್ಮಿಕರು, ಸೆರೆಮನೆಯ ಕೈದಿಗಳು, ಉಡುಪಿ, ಮಂಗಳೂರು, ಕಾರವಾರದ ವಿಸ್ತಾರವಾದ ಬೀಚ್‌ಗಳು, ಆಳ್ವಾಸ್ ಕಾಲೇಜಿನ ಬೃಹತ್ ವಿರಾಸತ್ ವೇದಿಕೆ, ನ್ಯಾಯಾಲಯದ ಕ್ಯಾಂಪಸ್, ಕಲ್ಯಾಣ ಮಂಟಪಗಳು…. ಹೀಗೆ ಎಲ್ಲ ಕಡೆಯಲ್ಲೂ ಆರು ಕನ್ನಡದ ಹಾಡುಗಳನ್ನು ಸಾಮೂಹಿಕವಾಗಿ ಹಾಡುವ ವ್ಯವಸ್ಥೆ ಆಗಿದೆ. ದೆಹಲಿ, ಮುಂಬೈ, ಚೆನ್ನೈ, ಪೂನಾ, ನಾಗಪುರ, ಭೋಪಾಲ್, ಹೈದರಾಬಾದ್‌ಗಳಲ್ಲಿ ವಾಸವಾಗಿರುವ ಹೊರನಾಡ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿದ್ದಾರೆ. ಹೊರ ರಾಷ್ಟ್ರಗಳಲ್ಲಿ ವಾಸವಾಗಿರುವ ಕನ್ನಡಿಗರೂ ಬಹುದೊಡ್ಡ ಸಂಖ್ಯೆಯಲ್ಲಿ ಕನ್ನಡದ ಹಾಡುಗಳನ್ನು ಈ ಶುಕ್ರವಾರ ಹನ್ನೊಂದು ಗಂಟೆಗೆ ಹಾಡಲಿದ್ದಾರೆ.

ಇದು ಎಲ್ಲ ರೀತಿಯಿಂದಲೂ ನಮ್ಮ ಕನ್ನಡದ ಗೆಲುವು!
ಕನ್ನಡಿಗರ ಕನ್ನಡ ಪ್ರೇಮವನ್ನು ಒಂದು ಜಾಗತಿಕ ದಾಖಲೆಗೆ ವಿಸ್ತರಿಸುವ ಈ ಬೃಹತ್ ಆಶಯದ ಕಾರ್ಯಕ್ರಮದ ಹಿಂದೆ ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್ ಅವರ ದಣಿವರಿಯದ ಶ್ರಮ ಮತ್ತು ದೂರದೃಷ್ಟಿ ಇದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಹಿಂದಿನ ‘ಮನ್ ಕೀ ಬಾತ್ ‘ ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಶ್ರೇಷ್ಠ ಕಾರ್ಯಕ್ರಮಗಳ ಉಲ್ಲೇಖ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದರು. ಅದೇ ಸ್ಫೂರ್ತಿಯ ಈ ‘ಕೋಟಿ ಕಂಠ ಗೀತ ಗಾಯನ’ ಅಭಿಯಾನವು ವಿಶ್ವ ದಾಖಲೆಯನ್ನು ಬರೆಯುವುದರಲ್ಲಿ ಯಾವ ಅನುಮಾನವೂ ಇಲ್ಲ. ಕನ್ನಡ ಶಾಲೆಗಳಲ್ಲಿ ಓದಿರುವ ನನ್ನಂತವರಿಗೆ ಭಾರೀ ಸ್ಫೂರ್ತಿ ತುಂಬುವ ಕಾರ್ಯಕ್ರಮ ಇದು.

ಬನ್ನಿ, ಇಂದು ನಡೆಯುವ ಈ ಕನ್ನಡದ ಬೃಹತ್ ಅಭಿಯಾನದಲ್ಲಿ ಪಾಲು ಪಡೆಯೋಣ. ಜೈ ಕನ್ನಡಾಂಬೆ. ಕನ್ನಡಂ ಗೆಲ್ಗೆ. ಕನ್ನಡಂ ಬಾಳ್ಗೆ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ವಿರಾಲಿ ಮೋದಿಯ ಎರಡೂ ಕಾಲುಗಳಲ್ಲಿ ಬಲವಿಲ್ಲ, ಆದರೆ ಆಕೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತುತ್ತಾಳೆ!

Exit mobile version