ಪೋಲಿಯೋ ಎಂಬ ರೋಗದ ಬಗ್ಗೆ 25- 30 ವರ್ಷಗಳ ಹಿಂದಿನವರೆಗೆ ಎಷ್ಟೊಂದು ಭೀತಿಯು ಜಗತ್ತಿನಲ್ಲಿ ಹರಡಿತ್ತು ಎಂದರೆ ನೀವು ನಂಬಲು ಸಾಧ್ಯವೇ ಇಲ್ಲ! ಆ ಕಾಲದಲ್ಲಿ ವರ್ಷಕ್ಕೆ ಜಗತ್ತಿನಲ್ಲಿ ಅಂದಾಜು ಮೂರೂವರೆ ಲಕ್ಷ ಮಕ್ಕಳು ಈ ಕಾಯಿಲೆಗೆ ಬಲಿಪಶು ಆಗುತ್ತಿದ್ದರು! ಚಿಕ್ಕ ಪ್ರಾಯದ ಅಷ್ಟೂ ಮಕ್ಕಳು ಕಾಲಿನ ತ್ರಾಣ ಕಳೆದುಕೊಂಡು ಮೂಲೆಯನ್ನು ಸೇರುತ್ತಿದ್ದರು. ಮಕ್ಕಳು ತಮ್ಮ ಹೆತ್ತವರಿಗೆ ಭಾರವಾಗಿ ಬದುಕುವ ಸ್ಥಿತಿ ಅದು! ಆ ಕಾಯಿಲೆಗೆ ಮದ್ದೇ ಇಲ್ಲ ಎಂಬ ನಂಬಿಕೆ ಇತ್ತು. ಅದು ದೇವರ ಶಾಪ ಎಂದು ನಂಬುವ ಮಂದಿಗೂ ಕೊರತೆ ಇರಲಿಲ್ಲ!
ಆದರೆ ಈಗ ಜಗತ್ತಿನಲ್ಲಿ ವರ್ಷಕ್ಕೆ ನೂರು ಮಕ್ಕಳು ಮಾತ್ರ ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ! ಈ ಕ್ರಾಂತಿಕಾರಕ ಬದಲಾವಣೆಗೆ ಕಾರಣ ಯಾರು? ಅದಕ್ಕೆ ಲಸಿಕೆ ಕಂಡು ಹಿಡಿಯಲು ಆತನು ಮಾಡಿದ ತ್ಯಾಗ ಯಾವುದು? ನಾವು ಪರಿಚಯ ಮಾಡಲೇ ಬೇಕಾದ ಆ ಅಮೆರಿಕನ್ ವೈದ್ಯ ಯಾರು?
ಆ ವೈದ್ಯನ ಹೆಸರು ಜೋನಾಸ್ ಎಡ್ವರ್ಡ್ ಸಾಲ್ಕ್!
ಆತನಿಗೆ ವೈದ್ಯಕೀಯ ಸಂಶೋಧನೆಯಲ್ಲಿ ಮಾತ್ರ ಆಸಕ್ತಿ!
ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಜನಿಸಿದ ಆತ ವೈದ್ಯಕೀಯ ವಿಜ್ಞಾನವನ್ನು ಓದಿ ವೈದ್ಯನಾಗಿ ಪ್ರಾಕ್ಟೀಸ್ ಮಾಡಿ ತುಂಬಾ ಹಣವನ್ನು ಸಂಪಾದನೆ ಮಾಡಬಹುದಿತ್ತು. ಆದರೆ ಆತನಿಗೆ ಸಂಶೋಧನೆಯಲ್ಲಿ ಮಾತ್ರ ಆಸಕ್ತಿ ಇತ್ತು. ಪ್ರತೀ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಹರಡಿ ಸಾವಿರಾರು ಮಕ್ಕಳ ಕಾಲುಗಳನ್ನು ನಿಶ್ಯಕ್ತಿ ಮಾಡುವ ಪೋಲಿಯೋ ಬಗ್ಗೆ ಭಾರೀ ಭಯ ಹರಡಿದ್ದ ಕಾಲ ಅದು!
1950ರ ಹೊತ್ತಿಗೆ ಅಮೆರಿಕನ್ನರು ಹೆದರುತ್ತಿದ್ದದ್ದು ಅಣು ಬಾಂಬಿಗೆ ಮತ್ತು ಪೋಲಿಯೋ ರೋಗಕ್ಕೆ ಮಾತ್ರ! ಅದಕ್ಕೆ ಲಸಿಕೆಯನ್ನು ಕಂಡು ಹಿಡಿಯುವ ಮಹಾನ್ ಕಾರ್ಯಕ್ಕೆ ಕೈ ಹಾಕಿದ ಡಾಕ್ಟರ್ ಸಾಲ್ಕ್ ಏಳು ವರ್ಷಗಳ ಕಾಲ ಊಟ, ತಿಂಡಿ, ನಿದ್ರೆ, ವಿಶ್ರಾಂತಿ ಎಲ್ಲವನ್ನೂ ಮರೆತು ಸಂಶೋಧನೆಗೆ ಇಳಿದರು. ಅದಕ್ಕಾಗಿ ನೂರಾರು ಸವಾಲುಗಳನ್ನು ಎದುರಿಸಿದರು.
ಮುಳ್ಳಿನಿಂದ ಮುಳ್ಳಿನಿಂದಲೇ ತೆಗೆದ ಡಾಕ್ಟರ್ ಸಾಲ್ಕ್ !
ಪೋಲಿಯೋ ಲಸಿಕೆ ಸಂಶೋಧನೆ ಮಾಡಲು ಆತನು ಅಳವಡಿಸಿದ ವಿಧಾನವು ತುಂಬಾ ಕುತೂಹಲಕಾರಿ ಆಗಿದೆ. ಪೋಲಿಯೋ ರೋಗವನ್ನು ಹರಡುವ ಒಂದು ವೈರಸ್ ಇದೆ. ಅದನ್ನು ಆತನು ಜೀವಂತವಾಗಿ ಸೃಷ್ಟಿಸಿದ! ಅದರ ಕೆಟ್ಟ ಗುಣಗಳನ್ನು ಹೋಗಲಾಡಿಸಿ ಅದನ್ನು ಜೀವಂತವಾಗಿ ದೇಹದ ಒಳಗೆ ಸೇರಿಸಿದಾಗ ಅದು ಲಸಿಕೆಯಾಗಿ ಕೆಲಸ ಮಾಡಲು ಆರಂಭ ಮಾಡುತ್ತದೆ! ಈ ವಿಧಾನದಿಂದ ಡಾಕ್ಟರ್ ಸಾಲ್ಕ್ ಪೋಲಿಯೋ ಲಸಿಕೆಯನ್ನು 1955ರಲ್ಲೀ ಯಶಸ್ವೀ ಆಗಿ ಸಂಶೋಧನೆ ಮಾಡಿದ್ದರು!
ಅಮೆರಿಕಾಕ್ಕೆ ಅಮೆರಿಕಾವೆ ಸೆಲ್ಯೂಟ್ ಹೊಡೆದು ನಿಂತಿತು!
1957ರಲ್ಲೀ ಅಮೆರಿಕಾದ 18 ಲಕ್ಷ ಮಕ್ಕಳಿಗೆ ಈ ಲಸಿಕೆಯನ್ನು ಹಾಕಲಾಯಿತು. ಫಲಿತಾಂಶ ನೂರಕ್ಕೆ ನೂರು ದೊರೆಯಿತು!
ಆಗ ಇಡೀ ಅಮೆರಿಕಾ ಅವರಿಗೆ ಸೆಲ್ಯೂಟ್ ಹೊಡೆದು ನಿಂತಿತ್ತು! ಒಂದು ಯುದ್ಧವನ್ನು ಗೆದ್ದ ಸಂಭ್ರಮವು ಅಲ್ಲಿ ಮನೆ ಮಾಡಿತ್ತು. ರಾತ್ರಿ ಹಗಲು ಆಗುವುದರ ಒಳಗೆ ಡಾಕ್ಟರ್ ಸಾಲ್ಕ್ ಅಮೆರಿಕಾದ ಕಣ್ಮಣಿ ಆಗಿ ಮಾರ್ಪಟ್ಟರು! ಯಾವಾಗ ಈ ಲಸಿಕೆಯು ಫಲಿತಾಂಶವನ್ನು ಕೊಡಲು ಆರಂಭ ಮಾಡಿತೋ ಆಗ ಜಗತ್ತಿನ ಎಲ್ಲ ಶ್ರೀಮಂತ ರಾಷ್ಟ್ರಗಳು ಆ ಲಸಿಕೆಯನ್ನು ಖರೀದಿ ಮಾಡಲು ಕ್ಯೂ ನಿಂತವು!
ಡಾಕ್ಟರ್ ಸಾಲ್ಕ್ ಆ ಲಸಿಕೆಯನ್ನು ಮಾರಾಟ ಮಾಡಲೇ ಇಲ್ಲ!
ಎಲ್ಲ ದೇಶಗಳಿಗೂ ಪೋಲಿಯೋ ಭೀತಿ ಇದ್ದ ಕಾರಣ ಅವರೆಲ್ಲರೂ ಸ್ಪರ್ಧೆಗೆ ಬಿದ್ದು ಖರೀದಿಗೆ ನಿಂತವು. ಡಾಕ್ಟರ್ ಸಾಲ್ಕ್ ಆಗಲೇ ಆ ಲಸಿಕೆಯ ಪೇಟೆಂಟ್ ಪಡೆದು ಕೊಂಡಾಗಿತ್ತು. ವಿಶ್ವದ ಶ್ರೀಮಂತ ರಾಷ್ಟ್ರಗಳು ಯಾವ ರೇಟ್ ಆದರೂ ಕೊಟ್ಟು ಖರೀದಿ ಮಾಡುವ ಸಾಮರ್ಥ್ಯ ಹೊಂದಿದ್ದವು. ಆ ಲಸಿಕೆ ಮಾರಾಟ ಆಗಿದ್ದರೆ ಡಾಕ್ಟರ್
ಸಾಲ್ಕ್ ಆ ಕಾಲಘಟ್ಟದಲ್ಲಿಯೇ ಅಂದಾಜು 43,000 ಕೋಟಿ ರೂಪಾಯಿ ಸಂಪಾದನೆ ಮಾಡಬಹುದಾಗಿತ್ತು! ಆ ವ್ಯವಹಾರದಿಂದ ಡಾಕ್ಟರ್ ಸಾಲ್ಕ್ ಜಗತ್ತಿನ ಅತೀ ಶ್ರೀಮಂತ ವ್ಯಕ್ತಿ ಆಗಬಹುದಾಗಿತ್ತು! ಆದರೆ ಡಾಕ್ಟರ್ ಸಾಲ್ಕ್ ಆ ಲಸಿಕೆಯನ್ನು ಮಾರಾಟ ಮಾಡಲು ಒಪ್ಪಲೇ ಇಲ್ಲ!
ಅವರು ಹಾಗೆ ಮಾರಾಟ ಮಾಡಿದ್ದರೆ ಪೋಲಿಯೋ ಲಸಿಕೆ ಕೇವಲ ಶ್ರೀಮಂತರ ಮಕ್ಕಳಿಗೆ ಮಾತ್ರ ಲಭ್ಯ ಆಗುತ್ತಿತ್ತು. ಬಡವರ ಮಕ್ಕಳು ಮತ್ತೆ ಅದೇ ಪೋಲಿಯೋ ಮಹಾಮಾರಿಗೆ ಬಲಿ ಆಗಬೇಕಾಗುತ್ತಿತ್ತು! ಅದರಿಂದ ಡಾಕ್ಟರ್ ಸಾಲ್ಕ್ ಜೀವನಪೂರ್ತಿ ಪಾಪ ಪ್ರಜ್ಞೆಯಿಂದ ಹೊರಬರಲು ಆಗುತ್ತಲೇ ಇರಲಿಲ್ಲ! ಅದಕ್ಕಾಗಿ ಅವರು ತಮ್ಮ ಏಳು ವರ್ಷಗಳ ಸಂಶೋಧನೆಯ ಫಲವಾದ ಪೋಲಿಯೋ ಲಸಿಕೆಯನ್ನು ಎಲ್ಲ ದೇಶಗಳಿಗೂ ಉಚಿತವಾಗಿ ಹಂಚಿದರು! ಇಡೀ ಮಾನವ ಕುಲವೇ ಅವರ ಈ ಕೊಡುಗೆಯಿಂದ ಭಾರಿ ಲಾಭವನ್ನು ಪಡೆಯಿತು ಮತ್ತು ಅವರನ್ನು ಶಾಶ್ವತವಾಗಿ ನೆನೆಯಿತು!
ನೀವ್ಯಾಕೆ ಈ ಲಸಿಕೆ ಮಾರಾಟ ಮಾಡಿ ಲಾಭ ಪಡೆಯಲಿಲ್ಲ? ಎಂದು ಅವರನ್ನು ಯಾರೋ ಕೇಳಿದಾಗ ಅವರು ಹೇಳಿದ ಮಾತು: “ಸೂರ್ಯ ಮತ್ತು ಭೂಮಿಯ ಮೇಲೆ ಯಾರಾದರೂ ಹಕ್ಕು ಸ್ಥಾಪನೆ ಮಾಡಲು ಸಾಧ್ಯವೇ? ಇದೂ ಹಾಗೆ!”
ಭಾರತದಲ್ಲಿಯೂ ಪೋಲಿಯೋ ಲಸಿಕೆ ಕ್ರಾಂತಿ ಮಾಡಿತು!
ಡಾಕ್ಟರ್ ಜೋನಾಸ್ ಸಾಲ್ಕ್ ಅವರ ಸಂಶೋಧನೆಯ ಫಲವಾಗಿ ಭಾರತದಲ್ಲಿ ಕೂಡ ‘ಪಲ್ಸ್ ಪೋಲಿಯೋ’ ಅಭಿಯಾನವು ಭಾರೀ ವೇಗವನ್ನು ಪಡೆಯಿತು. ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯು ಈ ಅಭಿಯಾನದ ಹೊಣೆಯನ್ನು ಹೊತ್ತುಕೊಂಡು ಯಶಸ್ವೀ ಆಗಿ ನಿರ್ವಹಣೆ ಮಾಡಿತು. ಪರಿಣಾಮವಾಗಿ ಮಾರ್ಚ್ 27, 2014ರ ದಿನ ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ‘ಪೋಲಿಯೊ ಮುಕ್ತ ‘ಎಂದು ಘೋಷಣೆ ಮಾಡಿತು!
ಅದರ ಬಹುಪಾಲು ಕ್ರೆಡಿಟ್ ವೈದ್ಯ ಡಾಕ್ಟರ್ ಜೋನಾಸ್ ಸಾಲ್ಕ್ ಅವರಿಗೆ ಸಲ್ಲಬೇಕು ಅಲ್ಲವೇ? ಅವರ ಮಾನವೀಯ ಮುಖಕ್ಕೆ ಕೂಡ ಒಂದು ಸಲಾಂ ಹೇಳೋಣ ಅಲ್ವಾ? ಆದರೆ ಅವರಿಗೆ ನೊಬೆಲ್ ಪ್ರಶಸ್ತಿ ಯಾಕೆ ಸಿಗಲಿಲ್ಲ ಅನ್ನುವ ಒಂದು ಸಣ್ಣ ನೋವು ನನ್ನನ್ನು ಇಂದಿಗೂ ಕಾಡುತ್ತಿದೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಸುನೀಲ್ ಛೇಟ್ರಿ: ಭಾರತೀಯ ಫುಟ್ಬಾಲ್ ಲೋಕದ ಒಂದು ದಂತ ಕತೆ