Site icon Vistara News

ರಾಜ ಮಾರ್ಗ ಅಂಕಣ : ಶಿವ ನಾಡಾರ್‌; ದೇಶದ ಈ 4ನೇ ಶ್ರೀಮಂತನಿಗೆ ಇಂಗ್ಲಿಷೇ ಅರ್ಥ ಆಗುತ್ತಿರಲಿಲ್ಲ!

Raja Marga Shiv Nadar

ತನ್ನ ಏಳು ಜನ ಗೆಳೆಯರ ಜೊತೆ ಸೇರಿ 1976ರಲ್ಲಿ MICRO COMP ಎಂಬ ಡಿಜಿಟಲ್ ಕ್ಯಾಲ್ಕುಲೇಟರ್ ಮಾರಾಟ ಸಂಸ್ಥೆಯನ್ನು ಆರಂಭ ಮಾಡಿದ ಶಿವ ನಾಡಾರ್ (Shiv Nadar) ಇಂದು ಭಾರತದ ಮಹೋನ್ನತರಾದ ಉದ್ಯಮಿಗಳ (Indian businessman) ಸಾಲಿನಲ್ಲಿ ತಲೆ ಎತ್ತಿ ನಿಲ್ಲುವಂತಾದದ್ದು ಹೇಗೆ? ತನಗೆ ಎದುರಾದ ನೂರಾರು ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಗೆದ್ದದ್ದು ಹೇಗೆ? ಕಲಿಕೆಯಲ್ಲಿ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿದ್ದ ಅವರು ಭಾರತದ ಒಂದು ಶ್ರೇಷ್ಠವಾದ ಯೂನಿವರ್ಸಿಟಿ ಸ್ಥಾಪನೆ ಮಾಡಿದ್ದು ಹೇಗೆ? ಶಿವ ನಾಡಾರ್ ಫೌಂಡೇಶನ್ (Nadar Foundation) ಸ್ಥಾಪನೆ ಮಾಡಿ, ಅದರ ಮೂಲಕ ಸಾವಿರಾರು ಬಡ ವಿದ್ಯಾರ್ಥಿಗಳ ಶಿಕ್ಷಣದ ನೆರವಿಗೆ ನಿಂತದ್ದು ಹೇಗೆ? ದೇಶದ ನಾಲ್ಕನೇ ಅತಿ ಶ್ರೀಮಂತರಾಗಿದ್ದು (Fourth richest indian) ಹೇಗೆ? (ರಾಜ ಮಾರ್ಗ ಅಂಕಣ)

ಅವರ ಯಶೋಗಾಥೆ ಆರಂಭವಾದದ್ದು ತಮಿಳುನಾಡಿನ ಮೂಲೈ ಪೊಳಿ ಎಂಬ ಪುಟ್ಟ ಗ್ರಾಮದಿಂದ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ನತದೃಷ್ಟ ಹುಡುಗ ಆತ. ಶಾಲೆಗೆ ಹೋಗುವಾಗ ಬೇರೆ ಬೇರೆ ಉದ್ಯೋಗಗಳನ್ನು ಮಾಡಿ ಶಾಲೆಯ ಖರ್ಚು ಹೊಂದಿಸಬೇಕಾಯಿತು. ಅವರೇ ಹೇಳುವಂತೆ ಕಲಿಕೆಯಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ ಆತ. ಕಲಿತದ್ದು ತಮಿಳು ಮಾಧ್ಯಮದಲ್ಲಿ. ಇಂಗ್ಲಿಷ್ ಆತನಿಗೆ ಅರ್ಥವೇ ಆಗಲಿಲ್ಲ. ಬಹಳ ಪರಿಶ್ರಮ ಪಟ್ಟು ಕೊಯಂಬತ್ತೂರು ಪಿ.ಎಸ್. ಜಿ ಕಾಲೇಜಿನಿಂದ ಎಲೆಕ್ಟ್ರಿಕಲ್‌ ಎಂಡ್‌ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್ (E&E) ಮುಗಿಸಿದರು.

ತನ್ನ ಕನಸು ಪೂರ್ತಿ ಮಾಡಲು ಉದ್ಯೋಗ ತೊರೆದರು

ಮನೆಯ ಆರ್ಥಿಕ ಸಮಸ್ಯೆಗಳಿಗೆ ಅವರು ಉದ್ಯೋಗ ಮಾಡಲೇ ಬೇಕಿತ್ತು. ಅದಕ್ಕಾಗಿ ವಾಲ್ ಚಂದ್ ಗ್ರೂಪ್ ಕಂಪೆನಿಯ ಉದ್ಯೋಗ ಮಾಡಿದರು. ನಂತರ ಒಂದು ವರ್ಷ DCM (ಡೆಲ್ಲಿ ಕ್ಲಾತ್ ಆಂಡ್ ಜನರಲ್ ಮಿಲ್ಸ್) ಎಂಬ ಕಂಪೆನಿಯಲ್ಲಿ ಕ್ಯಾಲ್ಕುಲೇಟರ್ ಸಿದ್ಧಪಡಿಸುವ ತಂತ್ರಜ್ಞಾನ ಕಲಿತರು. ಒಂದು ದಿನ ಅದಕ್ಕೂ ರಾಜೀನಾಮೆ ಕೊಟ್ಟು ತನ್ನ ಏಳು ಜನ ಸ್ನೇಹಿತರನ್ನು ಸೇರಿಸಿಕೊಂಡು MICRO COMP ಎಂಬ ಕ್ಯಾಲ್ಕುಲೇಟರ್ ಸಿದ್ಧಪಡಿಸುವ ಸಣ್ಣ ಕಂಪೆನಿ ಆರಂಭ ಮಾಡಿದರು. ಕೆಲಸ ಯಾಕೋ ಬಿಟ್ಟದ್ದು? ಎಂದು ಅಮ್ಮ ಕೇಳಿದಾಗ ಶಿವ ಕೊಟ್ಟ ಉತ್ತರ ಮಾರ್ಮಿಕ ಆಗಿತ್ತು – ನಾನು ಯಾರದೋ ಕಂಪೆನಿಯಲ್ಲಿ ಸಂಬಳಕ್ಕೆ ದುಡಿದು ಅವರ ಕನಸುಗಳನ್ನು ಪೂರ್ತಿ ಮಾಡುವುದು ನಿಮಗೆ ಇಷ್ಟವಾ? ನಾನು ನನ್ನ ಕನಸುಗಳ ಕಂಪೆನಿ ಆರಂಭ ಮಾಡಬೇಕು!

1976ರಲ್ಲಿ 1,87,000 ರೂ. ಬಂಡವಾಳದಲ್ಲಿ ಅವರ ಕಂಪನಿ ಆರಂಭವಾಗಿತ್ತು!

ಆಗ ಭಾರತದಲ್ಲಿ ಬಟನ್ ಕ್ಯಾಲ್ಕುಲೇಟರ್ ಮಾತ್ರ ಇತ್ತು. ವೇಗವಾಗಿ ಲೆಕ್ಕ ಮಾಡುವ ಮತ್ತು ಮೆಮೊರಿ ಇರುವ ಡಿಜಿಟಲ್ ಕ್ಯಾಲ್ಕುಲೇಟರ್ ಇರಲಿಲ್ಲ. ಆ ತಂತಜ್ಞಾನ ಅಳವಡಿಸಿಕೊಂಡ ಅವರ ಕಂಪನಿಯ ಡಿಜಿಟಲ್ ಕ್ಯಾಲ್ಕುಲೇಟರ್‌ಗಳು ಭಾರಿ ಜನಪ್ರಿಯ ಆದವು. ತಮಿಳು ಮಾಧ್ಯಮದಲ್ಲಿ ಎಂಜಿನಿಯರಿಂಗ್ ಓದಿದ (ಆ ಸೌಲಭ್ಯ ಈಗಲೂ ತಮಿಳುನಾಡಿನಲ್ಲಿ ಇದೆ) ಶಿವ ನಾಡಾರ್ ಅವರು ಈಗ ಇಂಗ್ಲಿಷ್ ಕಲಿಯಲೇ ಬೇಕಾಯಿತು. ಆಗ ಅನೇಕ ವಿದೇಶದ ಕಂಪ್ಯೂಟರ್ ಕಂಪೆನಿಗಳು ಡೆಸ್ಕ್ ಟಾಪ್ ಕಂಪ್ಯೂಟರ್‌ಗಳನ್ನು ಭಾರತದಲ್ಲಿ ಮಾರ್ಕೆಟ್ ಮಾಡುತ್ತಿರುವುದು ಅವರ ಗಮನಕ್ಕೆ ಬಂದಿತು. ಕೆಲವೇ ವರ್ಷಗಳಲ್ಲಿ ಕ್ಯಾಲ್ಕುಲೇಟರ್ ಯುಗ ಮುಗಿದು ಕಂಪ್ಯೂಟರ್ ಯುಗ ಆರಂಭ ಆಗಲಿದೆ ಎಂದು ಅವರಿಗೆ ಮನವರಿಕೆ ಆಯಿತು.

ಅವರ ಡ್ರೀಮ್ ಕಂಪೆನಿ HCLನ ಉದಯ

ಮೂರೇ ವರ್ಷಗಳಲ್ಲಿ ಅವರು ದೇಶದ ಮೊದಲ ದೇಸಿ ಕಂಪ್ಯೂಟರ್ ಸಿದ್ಧಪಡಿಸಿದರು. ಆಗ ಹುಟ್ಟಿಕೊಂಡದ್ದೇ ಅವರ ಡ್ರೀಮ್ ಕಂಪೆನಿ ಹಿಂದೂಸ್ತಾನ್ ಕಂಪ್ಯೂಟರ್ಸ್ ಲಿಮಿಟೆಡ್ ( HCL). ಶಿವ ನಾಡಾರ್ ಅವರಿಗೆ ದೇಶದ ನಾಡಿಮಿಡಿತವು ಚೆನ್ನಾಗಿ ಗೊತ್ತಿತ್ತು ಮತ್ತು ಅವರು ಅವರ ಕಾಲಕ್ಕಿಂತ ಅಡ್ವಾನ್ಸ್‌ಡ್‌ ಆಗಿದ್ದರು. ಭಾರತದ ಪ್ರಸಿದ್ಧ ಎಂಜಿನಿಯರಿಂಗ್ ಕಾಲೇಜುಗಳನ್ನು ಸುತ್ತಿ ಜೀನಿಯಸ್ ಆದ ಕಂಪ್ಯೂಟರ್ ಎಂಜಿನಿಯರಿಂಗ್‌ ಪದವೀಧರರನ್ನು ತನ್ನ ಕಂಪನಿಗೆ ಆಮಂತ್ರಿಸಿದರು. ಕಂಪ್ಯೂಟರನಲ್ಲಿ ನಾವೀನ್ಯತೆ, ತಂತ್ರಜ್ಞಾನ ಮತ್ತು ಆಕರ್ಷಣೆಗಳನ್ನು ಧಾರೆ ಎರೆದರು. ಆರಂಭದಲ್ಲಿ ಹಾರ್ಡವೇರ್ ಮಾತ್ರ ಡೆವಲಪ್ ಮಾಡುತ್ತಿದ್ದ ಕಂಪನಿಯು ಕೆಲವೇ ವರ್ಷಗಳಲ್ಲಿ ಪ್ರಸಿದ್ಧ IT ಕಂಪೆನಿಯಾಗಿ ರೂಪುಗೊಳ್ಳುವಲ್ಲಿ ಶಿವ ನಾಡಾರ್ ಅವರ ಪಾತ್ರವು ಅತ್ಯಂತ ಪ್ರಮುಖವಾಗಿತ್ತು. ಹಲವು ದೇಶಗಳನ್ನು ಸುತ್ತಿದ ಅವರು ವಿದೇಶದ ಮಾರ್ಕೇಟಗಳಲ್ಲಿ ಭಾರತದ ಕಂಪ್ಯುಟರಗಳನ್ನು ಮಾರಾಟ ಮಾಡಿದರು.

ಈಗ HCL ಭಾರತದ ಅತ್ಯಂತ ದೊಡ್ಡ ಕಂಪ್ಯೂಟರ್ ಕಂಪನಿ

‘HCL ಬ್ರಾಂಡ್ ಕಂಪ್ಯೂಟರ್ ಹೊಂದಿರುವುದು ನನಗೆ ಹೆಮ್ಮೆಯ ಸಂಗತಿ. ಯಾಕೆಂದರೆ ಅದು ಭಾರತದಲ್ಲಿಯೇ ನಿರ್ಮಿತವಾದ ಭಾರತದ ಕಂಪ್ಯೂಟರ್ʼ ಎಂದು ಕಾಲೇಜಿನ ಮಕ್ಕಳು ಹೇಳುವ ಜಾಹೀರಾತುಗಳು ಭಾರೀ ಇಂಪ್ಯಾಕ್ಟ್ ಮಾಡಿದವು. ಆ ಕಂಪೆನಿಯು ಕಾಲಕಾಲಕ್ಕೆ ಆಧುನಿಕ ಸಾಫ್ಟ್ ವೇರ್ ಮತ್ತು ತಾಂತ್ರಿಕತೆಯನ್ನು ಒಳಗೊಂಡು ಅಪಡೇಟ್ ಆಗುತ್ತ ಹೋಯಿತು.

ಈ ಯೋಜನೆಗಳಿಂದ ಅವರ ಕಂಪೆನಿಯು ಭಾರತದ ಅತೀ ದೊಡ್ಡ IT ಕಂಪನಿಯಾಯಿತು. ಶಿವ ನಾಡಾರ್ ಭಾರತದ ನಾಲ್ಕನೇ ಶ್ರೀಮಂತ ವ್ಯಕ್ತಿ ಆದರು. ಜಗತ್ತಿನ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 50ನೆಯ ರಾಂಕ್ ಪಡೆದರು. ಇಂದವರ ಆಸ್ತಿಗಳ ವರ್ಥ್ 12,36,600 ಕೋಟಿಗೂ ಹೆಚ್ಚು!

45 ವರ್ಷಗಳ ಅವಧಿಯಲ್ಲಿ HCL ಕಂಪೆನಿಯ ಜನಪ್ರಿಯತೆಯ ಗ್ರಾಫ್ ಏರುಗತಿಯಲ್ಲಿಯೇ ಇದೆ.

ಶಿವ ನಾಡಾರ್ ಅವರ ‘ಬಿಯಾಂಡ್ ದ ಬಿಸಿನೆಸ್’ ಚಿಂತನೆ

ತಮ್ಮ ಪರಿಶ್ರಮ, ಉತ್ಸಾಹ ಮತ್ತು ದೂರದರ್ಶಿತ್ವಗಳಿಂದ ತನ್ನ ಉದ್ಯಮ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ ಶಿವ ನಾಡಾರ್ ಅವರು 1994ರಲ್ಲಿ ತನ್ನ ‘ಬಿಯಾಂಡ್ ದ ಬಿಸಿನೆಸ್ ‘ (Beyond the business) ಚಿಂತನೆಯಿಂದ ಶಿವ ನಾಡಾರ್ ಫೌಂಡೇಶನ್ ಆರಂಭ ಮಾಡಿದರು. ತನ್ನ ಸಂಪತ್ತಿನ ಬಹು ದೊಡ್ಡ ಭಾಗವನ್ನು ಅವರು ಚಾರಿಟಿ ಉದ್ದೇಶಕ್ಕೆ ವಿನಿಯೋಗ ಮಾಡಿದರು.

ಮೊದಲು ಚೆನ್ನೈಯಲ್ಲಿ ತನ್ನ ತಂದೆಯವರ ಹೆಸರಿನಲ್ಲಿ ಒಂದು ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡಿದರು. ಮುಂದೆ ಉತ್ತರ ಪ್ರದೇಶದ ಐವತ್ತು ಜಿಲ್ಲೆಗಳಲ್ಲಿ ‘ವಿದ್ಯಾ ಜ್ಞಾನ್’ ಎಂಬ ಹೆಸರಿನ ಉಚಿತ ಪ್ರೈಮರಿ ಶಾಲೆಗಳನ್ನು ಸ್ಥಾಪನೆ ಮಾಡಿದರು. ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣದ ವೆಚ್ಚಕ್ಕೆ ಹೆಗಲು ಕೊಟ್ಟರು. ನೂರಾರು ಶಾಲೆ, ಕಾಲೇಜುಗಳಿಗೆ ತಮ್ಮ ಕಂಪೆನಿಯ ಕಂಪ್ಯುಟರ್‌ಗಳನ್ನು ಉಚಿತವಾಗಿ ಹಂಚಿದರು. ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳ ವಿದೇಶದ ಅಧ್ಯಯನಕ್ಕೆ ನೆರವಾದರು. ನೂರಾರು ಚಾರಿಟಿ ಶಾಲೆಗಳನ್ನು ಕಟ್ಟಿದರು. ಅವರು ಕಟ್ಟಿದ ಅಷ್ಟೂ ಕಾಲೇಜುಗಳು ಸೇರಿ ಮುಂದೆ ಶಿವ ನಾಡಾರ್ ಯೂನಿವರ್ಸಿಟಿಯು ನಿರ್ಮಾಣ ಆಯಿತು.

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ರೊನಾಲ್ಡೋ, ಮೆಸ್ಸಿಗಿಂತ ಏನೂ ಕಮ್ಮಿ ಇಲ್ಲ ನಮ್ಮ ಸುನೀಲ್‌ ಚೆಟ್ರಿ

ಇದುವರೆಗೆ ಅವರು ತನ್ನ ಚಾರಿಟಿ ಫೌಂಡೇಶನ್ ಮೂಲಕ ಮಾಡಿದ ಸೇವಾಕಾರ್ಯಗಳ ಒಟ್ಟು ವೆಚ್ಚ 1.1 ಬಿಲಿಯನ್ ಡಾಲರಿಗಿಂತ ಹೆಚ್ಚು ಅಂದರೆ ನಮಗೆ ನಂಬಲು ಕಷ್ಟ ಆಗಬಹುದು. ಭಾರತದಲ್ಲಿ ಅಜೀಂ ಪ್ರೇಂಜಿ ಬಿಟ್ಟರೆ ಶಿಕ್ಷಣಕ್ಕೆ ಇಷ್ಟೊಂದು ದೊಡ್ಡ ಮೊತ್ತವನ್ನು ವಿನಿಯೋಗ ಮಾಡಿದ ಬೇರೆ ಉದ್ಯಮಿಯು ನನಗೆ ಕಾಣುವುದಿಲ್ಲ. ಆದ್ದರಿಂದ ಅವರು ಗ್ರೇಟ್.

The world is full of opportunities ಎಂಬ ಮಂತ್ರವನ್ನು ತನ್ನ ಜೀವನದ ಉದ್ದಕ್ಕೂ ಪೋಷಣೆ ಮಾಡಿಕೊಂಡು ಬಂದ ಶಿವ ನಾಡಾರ್ ಅವರಿಗೆ 2008ರಲ್ಲಿ ಪದ್ಮಭೂಷಣ ಪ್ರಶಸ್ತಿ ದೊರೆಯಿತು.

ಇಂದು ( ಜುಲೈ 14) ಅವರ 78ನೆಯ ಹುಟ್ಟಿದ ಹಬ್ಬ. ತನ್ನ ಕಂಪೆನಿಯ ಹೊಣೆಯನ್ನು ತನ್ನ ಮಗಳಿಗೆ ವಹಿಸಿ ಈಗ ಫೌಂಡೇಶನ್ ಕೆಲಸ ಮಾತ್ರ ಮಾಡುತ್ತಿರುವ ಶಿವ ನಾಡಾರ್ ಅವರಿಗೆ ಹ್ಯಾಪಿ ಬರ್ತ್ ಡೇ ಹೇಳೋಣ ಅಲ್ವಾ?

Exit mobile version