Site icon Vistara News

ರಾಜ ಮಾರ್ಗ ಅಂಕಣ | ಬದುಕಿನಲ್ಲಿ ರಿಸ್ಕ್‌ ಬೇಡ ಎಂದರೆ ಹೇಗೆ? ರಿಸ್ಕ್‌ಗೆ ಮುಖಾಮುಖಿ ಆಗದೆ ಸಾಧನೆಯೇ ಇಲ್ಲ!

niel armstrong

ಅಂದು 1969 ಜುಲೈ 21!
ಅಮೆರಿಕಾದ ನಾಸಾ ಸಂಸ್ಥೆಯು ಚಂದ್ರನ ಮೇಲೆ ಮೊತ್ತ ಮೊದಲ ಮಾನವ ಯಾತ್ರೆಯ ನೌಕೆಯನ್ನು ಇಳಿಸಿತ್ತು. ಇಡೀ ಜಗತ್ತು ಕುತೂಹಲದ ಕಾವಿನ ಮೇಲೆ ಕೂತಿತ್ತು! ಎಲ್ಲರೂ ರೇಡಿಯೋಗೆ ಕಿವಿ ಹಚ್ಚಿ ಕೂತಿದ್ದರು!
ಅಪೋಲೋ 11 ನೌಕೆಯಲ್ಲಿ ಇದ್ದ ಆಕಾಶಯಾನಿಗಳು ಕೇವಲ ಇಬ್ಬರು! ಒಬ್ಬಾತ ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಇನ್ನೊಬ್ಬ ಎಡ್ವಿನ್ ಆಲ್ಡ್ರಿನ್. ಇಬ್ಬರೂ ಅನುಭವಿಗಳು. ಇನ್ನೇನು ನೌಕೆಯ ಬಾಗಿಲು ತೆರೆದು ಚಂದ್ರನ ಮೇಲೆ ಇಳಿಯಲು ಇಬ್ಬರೂ ಮಾನಸಿಕವಾಗಿ ಸಿದ್ಧರಾಗುತ್ತಿದ್ದರು. ಇಬ್ಬರೂ ತುಂಬಾ ಎಕ್ಸೈಟ್ ಆಗಿ ನಾಸಾದಿಂದ ಬರುತ್ತಿದ್ದ ಸಂಕೇತಗಳನ್ನು ಕಾದು ಕೂತಿದ್ದರು.

ಮೊದಲು ಇಳಿಯಬೇಕಾದವನು ಆಲ್ಡ್ರಿನ್!
ಅಪೋಲೋ 11 ನೌಕೆಯು ಭೂಮಿಯಿಂದ ಹೊರಡುವ ಮೊದಲೇ ಎಲ್ಲ ಯೋಜನೆಗಳು ಪಕ್ಕಾ ಆಗಿದ್ದವು. ಎಡ್ವಿನ್ ಆಲ್ಡ್ರಿನ್ ಮೊದಲು ಚಂದ್ರನ ಮೇಲೆ ಇಳಿದು ಸ್ವಲ್ಪ ಹೊತ್ತಿನ ನಂತರ ನೀಲ್ ಆರ್ಮ್‌ಸ್ಟ್ರಾಂಗ್ ಇಳಿಯುವ ಯೋಜನೆ ಅಂತಿಮ ಆಗಿತ್ತು. ನಾಸಾದಿಂದ ಅದಕ್ಕೆ ಪೂರಕವಾದ ಸಂಕೇತಗಳು ಬರುತ್ತಿದ್ದವು. ಆದರೆ ದಪ್ಪ ಗಾಜಿನ ಕಿಟಕಿಯ ಮೂಲಕ ಹೊರಗೆ ನೋಡುತ್ತ ಕುಳಿತಿದ್ದ ಎಡ್ವಿನ್ ಆಲ್ಡ್ರಿನ್ ತಲೆಯಲ್ಲಿ ಬೇರೆಯೇ ಸಮೀಕರಣ ಓಡುತ್ತಿತ್ತು!

ಇಬ್ಬರೂ ಆಕ್ಸಿಜನ್ ಸಿಲಿಂಡರ್ ಬೆನ್ನಿಗೆ ಕಟ್ಟಿಕೊಂಡು ಸನ್ ಗ್ಲಾಸ್ ಇತ್ಯಾದಿಗಳನ್ನು ಧರಿಸಿಕೊಂಡು ಮಹಾಯಾತ್ರೆಗೆ ಮಾನಸಿಕವಾಗಿ ಸಿದ್ಧತೆ ಮಾಡುತ್ತಿದ್ದರು. ಕ್ಷಣಗಣನೆ ಆರಂಭ ಆಗಿತ್ತು.

ಎಡ್ವಿನ್ ಆಲ್ಡ್ರಿನ್ ಸಣ್ಣ ಅಳುಕು ಇತಿಹಾಸ ಬದಲಿಸಿತು!
ಚಂದ್ರನ ಮೇಲೆ ವಾತಾವರಣದ ಬಗ್ಗೆ ಇಬ್ಬರಿಗೂ ಸ್ಪಷ್ಟತೆಯು ಇರಲಿಲ್ಲ. ಚಂದ್ರನ ಗುರುತ್ವವು ಭೂಮಿಯ ಗುರುತ್ವದ ಆರನೇ ಒಂದು ಭಾಗ ಎಂದು ಮಾತ್ರ ಅವರಿಗೆ ಗೊತ್ತಿತ್ತು. ಅಂದರೆ ಚಂದ್ರನ ಮೇಲೆ ತೇಲುವ ಅನುಭವ ಖಚಿತ.

ಕಲ್ಲು ಬಂಡೆಗಳು, ಮರುಭೂಮಿಯ ಪಳೆಯುಳಿಕೆ, ದೊಡ್ಡ ದೊಡ್ಡ ಹೊಂಡಗಳು, ಮೇಲೆ ದಟ್ಟ ಹೊಗೆಯ ಮೋಡ…… ಹೀಗೆ ಒಂದಿಷ್ಟು ಅಂಶಗಳು ಮಾತ್ರ ಅವರಿಗೆ ಕಾಣುತ್ತಿದ್ದವು. ಆದರೆ ಆಮ್ಲಜನಕದ ಅಂಶವೇ ಇಲ್ಲ ಎಂಬ ವಿಷಯವು ಇಬ್ಬರಿಗೂ ಗೊತ್ತಿತ್ತು.

ಆಗ ಒಂದಿಷ್ಟು ಅಳುಕಿದ ಎಡ್ವಿನ್ ಆಲ್ಡ್ರಿನ್ ತನ್ನ ಸಹ ಪ್ರಯಾಣಿಕ ನೀಲ್ ಆರ್ಮಸ್ಟ್ರಾಂಗ್ ಬಳಿಗೆ ಬಂದು “ನೀನು ಮೊದಲು ಇಳಿ, ನಂತರ ನಾನು ಇಳಿಯುವೆ” ಎಂದು ವಿನಂತಿ ಮಾಡಿದರು!
ಆರ್ಮಸ್ಟ್ರಾಂಗ್ ಒಪ್ಪಿದರು.

ಅವಕಾಶ ಮಿಸ್‌ ಮಾಡಿಕೊಂಡ ಆಲ್ಡ್ರಿನ್‌

ಚಂದ್ರನ ಮೇಲೆ ಮೊದಲ ಹೆಜ್ಜೆ ಇಟ್ಟು ಹೀರೋ ಆದರು ನೀಲ್!
ಆಕಾಶ‌ ನೌಕೆಯ ಬಾಗಿಲು ತೆರೆದಾಗ ಒಂದಿಷ್ಟು ಅಳುಕದೆ ನೀಲ್ ಆರ್ಮ್‌ಸ್ಟ್ರಾಂಗ್ ಏಣಿಯ ಮೂಲಕ ಚಂದ್ರನ ಮೇಲೆ ಮೊದಲ ಹೆಜ್ಜೆ ಊರಿ ಇತಿಹಾಸ ನಿರ್ಮಿಸಿದರು! ಮುಂದೆ 19 ನಿಮಿಷಗಳ ನಂತರ ಎಡ್ವಿನ್ ನಿಧಾನಕ್ಕೆ ಇಳಿದುಬಂದ! ಮುಂದೆ ಏನೆಲ್ಲ ಆಯಿತು ಅನ್ನುವುದು ಜಗತ್ತಿನ ಮುಂದೆ ಇದೆ!
ನೀಲ್ ಆರ್ಮಸ್ಟ್ರಾಂಗ್ ರಾತ್ರೋ ರಾತ್ರಿ ಜಗತ್ತಿನ ಕಣ್ಣಲ್ಲಿ ಹೀರೋ ಆದರು! ಒಂದು ಕ್ಷಣ ವಿಚಲಿತ ಆದ ಆಲ್ಡ್ರಿನ್ ಇವತ್ತು ಜಗತ್ತಿಗೆ ಮರೆತೇ ಹೋಗಿದ್ದಾನೆ!

ನಮ್ಮ ಹಿರಿಯರು ರಿಸ್ಕ್ ಬಗ್ಗೆ ಭಯ ಪಟ್ಟಿದ್ದರೆ?
ಪ್ಲೇಗ್ ಕಾಯಿಲೆಗೆ ಲಸಿಕೆಯನ್ನು ಕಂಡು ಹಿಡಿದ ಹ್ಯಾಪ್ಕೀನ್ ಎಂಬ ವಿಜ್ಞಾನಿಯು ಅದನ್ನು ಪರೀಕ್ಷೆ ಮಾಡಿಸಿಕೊಳ್ಳಲು ಬೇರೆ ಯಾರೂ ಮುಂದೆ ಬಾರದೆ ಹೋದಾಗ ತನ್ನ ಸ್ವಂತ ಮಗನ ಮೇಲೆ ಪ್ರಯೋಗ ಮಾಡಿ ಗೆದ್ದ ಉದಾಹರಣೆಯು ನನಗೆ ತುಂಬಾ ಸ್ಫೂರ್ತಿ ನೀಡಿದೆ. ತನ್ನ ಒಬ್ಬನೇ ಮಗನನ್ನು ಕಳೆದುಕೊಳ್ಳುವ ಅಪಾಯ ಹ್ಯಾಪ್ಕೀನ್ ಮುಂದೆ ಇತ್ತು!

ಜಗತ್ತಿನ ಮಹಾ ಮಹಾ ಸಾಹಸಗಳ ಹಿಂದೆ ಎಷ್ಟೊಂದು ರಿಸ್ಕ್‌ಗಳು ಇದ್ದವು?
ಮೌಂಟ್ ಎವರೆಸ್ಟ್ ಮೇಲೆ ಮೊದಲ ಹೆಜ್ಜೆಯನ್ನು ಇರಿಸಲು ತೇನ್‌ಸಿಂಗ್ ಹೊರಟಾಗ ರಿಸ್ಕ್ ಕಡಿಮೆ ಇತ್ತೇನು?
ತೇನ್‌ಸಿಂಗ್ ಎವರೆಸ್ಟ್ ಶಿಖರ ಏರುವ ಮೊದಲು ನೂರಾರು ಸಾಹಸಿಗಳು ವಿಫಲ ಆಗಿದ್ದರು ಅಥವಾ ಕಣ್ಮರೆ ಆಗಿದ್ದರು ಅಥವಾ ಪ್ರಾಣ ಕಳೆದುಕೊಂಡಿದ್ದರು!

ಜಗತ್ತಿನ ಮೊದಲ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ವೈದ್ಯರು ನಿರ್ಧಾರ ಮಾಡಿದಾಗ ಅಷ್ಟೂ ವೈದ್ಯರು ತಮ್ಮ ವೃತ್ತಿಯನ್ನು ಕಳೆದುಕೊಳ್ಳುವ ರಿಸ್ಕ್ ಇತ್ತು!

ಜಗತ್ತಿನ ಯಾವುದೇ ಸಾಹಸ, ಜೈತ್ರಯಾತ್ರೆಗಳನ್ನು ಮಾಡಲು ಹೊರಟಾಗ, ಹೊಸತನ್ನು ಅನ್ವೇಷಣೆ ಮಾಡಲು ಹೊರಟಾಗ ರಿಸ್ಕ್ ಬಗ್ಗೆ ಯೋಚನೆ ಮಾಡುತ್ತಾ ಕೂತಿದ್ದರೆ ಅವೆಲ್ಲವೂ ಪೂರ್ತಿ ಆಗುತ್ತಿದ್ದವಾ?

ಧೀರೂಭಾಯಿ ಅಂಬಾನಿ ಅವರು ತಮ್ಮ ಬದುಕಿನ ಆರಂಭದ ಹಂತದಲ್ಲಿ ತಾವು ಎದುರಿಸಿದ್ದ ನೂರಾರು ಸವಾಲುಗಳನ್ನು ತನ್ನ ಬದುಕಿನ ಅನುಭವದ ಪುಸ್ತಕವಾದ ‘ಧೀರುಬಾಯಿಸಮ್’ ಇದರಲ್ಲಿ ಬರೆದಿಟ್ಟಿದ್ದಾರೆ. ಸಣ್ಣ ಸಣ್ಣ ಸೋಲಿಗೆ ಅಂಬಾನಿ ಕ್ವಿಟ್ ಮಾಡಿದ್ದರೆ ಇಂದು ಲೆಜೆಂಡ್ ಆಗುತ್ತಿದ್ದರಾ?

ವಿಶ್ವೇಶ್ವರಯ್ಯ

ವಿದೇಶದ ದೊಡ್ಡ ಹುದ್ದೆಗೆ ರಾಜೀನಾಮೆ ಕೊಟ್ಟು ಖಾಲಿ ಕೈಯ್ಯಲ್ಲಿ ಭಾರತಕ್ಕೆ ಬಂದು ಪುಸ್ತಕ ಬರೆದು ಬದುಕುವ ಚೇತನ್ ಭಗತ್ ಅವರ ದಿಟ್ಟ ನಿರ್ಧಾರದ ಹಿಂದೆ ಅದೆಷ್ಟು ಸವಾಲುಗಳು ಇದ್ದವು? ಅವುಗಳ ಬಗ್ಗೆ ಯೋಚನೆಯನ್ನು ಮಾಡುತ್ತ ಚೇತನ್ ಭಗತ್ ಕೂತಿದ್ದರೆ ಇಂದವರು ದೇಶದ ಶ್ರೇಷ್ಠ ಲೇಖಕರು ಆಗಲು ಸಾಧ್ಯ ಇತ್ತಾ?

ಸಾಧಕರು ರಿಸ್ಕ್ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ!
ಹೆಚ್ಚು ಕಡಿಮೆ ಜಗತ್ತಿನ ಎಲ್ಲಾ ಸಾಧಕರು, ಲೆಜೆಂಡ್‌ಗಳು ತಮ್ಮ ಬದುಕಿನ ಮೊದಲ ಹೆಜ್ಜೆಗಳಲ್ಲಿ ಅನುಭವಿಸಿದ ನೋವುಗಳು, ಮೈ ಒಡ್ಡಿದ್ದ ಅಪಾಯಗಳು, ಎದುರಿಸಿದ ಸವಾಲುಗಳು ನಮ್ಮ, ನಿಮ್ಮ ಊಹೆಗಳಿಗೆ ಮೀರಿದ್ದು! ಅವರೇನಾದರೂ ಸೋಲಿನ ಭಯದಲ್ಲಿ ಕ್ವಿಟ್ ಮಾಡಿದ್ದರೆ ಇಂದು ನಾವು ಅವರನ್ನು ನೆನಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ.

ಡಾಕ್ಟರ್ ವಿಶ್ವೇಶ್ವರಯ್ಯ ಅವರು ಕನ್ನಂಬಾಡಿ ಅಣೆಕಟ್ಟು ಕಟ್ಟಲು ಹೊರಟಾಗ ಎದುರಾದ ಪ್ರತಿರೋಧಕ್ಕೆ ಹೆದರಿ ಯೋಜನೆ ಕೈ ಬಿಟ್ಟಿದ್ದರೆ?

ಅವರೆಲ್ಲ ಅವರ ಕಾಲದಲ್ಲಿ ಆಗದು ಎಂದು ಕೈಕಟ್ಟಿಕೊಂಡು ಕುಳಿತಿದ್ದರೆ ಜಗತ್ತಿನ ಯಾವ ಅದ್ಭುತವಾದ ಸಾಧನೆಗಳು ಇಂದು ಸಂಭವಿಸುತ್ತಲೇ ಇರಲಿಲ್ಲ. ಅಲ್ಲವೇ?

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಕ್ರಿಕೆಟಿನ ಡಾನ್ ಬ್ರಾಡ್ಮನ್! ಕೊನೆಯ ಇನಿಂಗ್ಸ್‌ನಲ್ಲಿ 1 ಬೌಂಡರಿ ಬಾರಿಸಿದ್ದರೆ ಕಥೆಯೇ ಬೇರೆ ಆಗ್ತಿತ್ತು!

Exit mobile version