ಭಾರತವು ಎಲ್ಲ ವಿಭಾಗದಲ್ಲಿ ಕೂಡ ವಿಶ್ವಗುರು ಆಗಿರುವ ಹಾಗೆ ಪ್ರಾಕೃತಿಕ ಸೌಂದರ್ಯದಲ್ಲಿ (Beauty of Nature) ಕೂಡ ಶ್ರೇಷ್ಠವೇ ಆಗಿದೆ. ಹುಡುಕುತ್ತ ಹೋದರೆ ಹೆಜ್ಜೆಗೆ ಒಂದರಂತೆ ಅಚ್ಚರಿಯ ಮತ್ತು ವಿಸ್ಮಯದ ತಾಣಗಳು ಕಾಲಿಗೆ ತೊಡರುತ್ತವೆ. ಇಂದು (ಸೆಪ್ಟೆಂಬರ್ 27) ವಿಶ್ವ ಪ್ರವಾಸೋದ್ಯಮ ದಿನದ (September 27 World Tourism day) ನೆಪದಲ್ಲಿ ಭಾರತದ ಟಾಪ್ ಟೆನ್ ಪ್ರವಾಸಿ ತಾಣಗಳನ್ನು (Top 10 Tourist spots of INDIA) ಸುತ್ತಾಡಿಕೊಂಡು ಬರೋಣ ಬನ್ನಿ (Raja Marga Column).
1. ಆಗ್ರಾ – ನೆನಪುಗಳ ಮೆರವಣಿಗೆ
ಭಾರತದಲ್ಲಿ ಅತೀ ಹೆಚ್ಚು ಪ್ರವಾಸಿಗಳು ಭೇಟಿ ನೀಡುವ ತಾಣ ಎಂದರೆ ತಾಜ್ ಮಹಲ್ (Taj Mahal). ಆಗ್ರಾದ ಹೃದಯ ಭಾಗದಲ್ಲಿ ಯಮುನಾ ನದಿಯ ದಡದಲ್ಲಿ ಇರುವ ಮೋಹಕ ವಾಸ್ತುಶಿಲ್ಪ ಇದು. ಅದರ ಐತಿಹಾಸಿಕ ಹಿನ್ನೆಲೆ ಏನೇ ಇದ್ದರೂ ಅದರ ಸೌಂದರ್ಯಕ್ಕೆ ಮಾರು ಹೋಗದವರು ಯಾರೂ ಇಲ್ಲ. ಸಂಪೂರ್ಣ ಅಮೃತಶಿಲೆಯ ಕಟ್ಟಡ ಇದು. ನಾಲ್ಕು ಕಡೆಯಿಂದ ನೋಡಿದರೂ ಒಂದೇ ರೀತಿ ಕಾಣುವ ಸೌಂದರ್ಯ. ಹುಣ್ಣಿಮೆ ರಾತ್ರಿಯಂದು ಇಲ್ಲಿ ಬಂದು ಕೂತರೆ ಹಿಂದೆ ಬರಲು ಮನಸ್ಸೇ ಆಗುವುದಿಲ್ಲ. ಅದಕ್ಕೆ ತಾಗಿ ಕೊಂಡಿರುವ ಆಗ್ರಾ ಕೋಟೆ, ಅಕ್ಬರ್ ಕಟ್ಟಿದ ಫತ್ತೇಪೂರ ಸಿಕ್ರಿ ನೋಡದೇ ಹಿಂದೆ ಬರುವ ಹಾಗೆ ಇಲ್ಲ. ಆಗ್ರಾ ಅಂದರೆ ನೆನಪುಗಳ ಮೆರವಣಿಗೆ.
2. ಗೋವಾ – ಬಿಳಿ ಮರಳಿನ ಬೀಚುಗಳೇ ಆಕರ್ಷಣೆ
ಗೋವಾದಲ್ಲಿ ಇರುವ 51 ಅತ್ಯದ್ಭುತ ಬೀಚುಗಳೇ ಪ್ರವಾಸಿಗಳ ಸ್ವರ್ಗಗಳು (White Beaches of Goa)! ತಾಳೆ ಮರದ ನೆರಳಿನಲ್ಲಿ ಮೈ ಚಾಚಿ ಮಲಗಿರುವ ಬಿಳಿ ಮರಳಿನ ಚಾದರಗಳು. ಕಲಂಗೂಟ್ ಬೀಚ್ ಅವುಗಳಲ್ಲಿ ನಿಜವಾಗಿಯು ಮೈ ಮರೆಸುತ್ತದೆ. ಸಾರಸ್ವತರ ಶ್ರೀಮಂತ ದೇವಸ್ಥಾನಗಳು, ಕೋಟೆಗಳು, ಪೋರ್ಚುಗೀಸರ ಆಳ್ವಿಕೆಯ ಅವಶೇಷಗಳು, ಬೆಸ್ತರ ಬಸ್ತಿಗಳು ಗೋವಾವನ್ನು ಆಕರ್ಷಣೆಯ ಕೇಂದ್ರವನ್ನಾಗಿ ಮಾಡಿವೆ. ಗೋವಾದಲ್ಲಿ ಪ್ರವಾಸೋದ್ಯಮವೇ ಪ್ರಮುಖ ಆದಾಯದ ಮೂಲ ಅಂದರೆ ಆ ರಾಜ್ಯದ ಶಕ್ತಿ ನಮಗೆ ಗೊತ್ತಾಗುತ್ತದೆ.
3. ಅಮೃತಸರ – ಸ್ವರ್ಣ ದೇಗುಲದ ಆಕರ್ಷಣೆ
ಪಂಜಾಬ್ ರಾಜ್ಯದ ಪ್ರವಾಸೀ ತಾಣಗಳಲ್ಲಿ ಅಮೃತಸರದ ಗೋಲ್ಡನ್ ಟೆಂಪಲ್ (Golden Temple of Amritsara) ಪ್ರಮುಖ ಆಕರ್ಷಣೆ ಆಗಿದೆ. 1577ರಲ್ಲಿ ಗುರು ರಾಮದಾಸ್ ಅವರಿಂದ ಸ್ಥಾಪನೆ ಆದ ಈ ದೇಗುಲವು ಹೊಳೆಯುವ ಸರೋವರದ ನಡುವೆ ಇದೆ. ಪಕ್ಕದಲ್ಲಿಯೇ ಇರುವ ಅಖಾಲ್ ತಕ್ತ್, ಮಾತಾ ಟೆಂಪಲ್, ಐತಿಹಾಸಿಕ ಪ್ರಾಮುಖ್ಯದ, ಬ್ರಿಟಿಷ್ ಅಧಿಕಾರಿ ಸಾವಿರಾರು ಭಾರತೀಯರನ್ನು ಕೊಂದು ಹಾಕಿದ ಜಲಿಯಾನ್ ವಾಲಾ ಭಾಗ್ ನೋಡಿ ಬಂದರೆ ಕಣ್ಣು ತುಂಬಿ ಬರುತ್ತದೆ ಮಾತ್ರವಲ್ಲ ಸಿಖ್ ಧರ್ಮದ ಶ್ರದ್ಧೆಯ ಸಂಕೇತವಾಗಿಯೂ ಕಂಡು ಬರುತ್ತದೆ.
4. ಶಿಮ್ಲಾ – ಹಿಮಾಲಯದ ಕ್ಯಾನ್ವಾಸ್
ಶಿಮ್ಲಾ ಹಿಮಾಚಲ ಪ್ರದೇಶದ ರಾಜಧಾನಿ ಮತ್ತು ಕೀರ್ತಿ ಪಡೆದ ಹಿಲ್ ಸ್ಟೇಷನ್ (Himalayan Hill Station Shimla). ಎಲ್ಲಿ ನಿಂತು ನೋಡಿದರೂ ಹಿಮಾಲಯದ ಆಹ್ಲಾದಕರ ದೃಶ್ಯ ಕಣ್ಣು ತುಂಬುತ್ತದೆ. ಬೀಸಿ ಬರುವ ಶೀತಲ ಗಾಳಿ ಮೈಯ್ಯನ್ನು ಚುಂಬಿಸುತ್ತಾ ಹೋಗುತ್ತದೆ. ಭೂಮಿಯ ನೆತ್ತಿಯ ಮೇಲೆ ನಿಂತ ಅನುಭೂತಿ ಮೂಡುವುದು ಖಂಡಿತ. ಶಿಮ್ಲಾ ಭೂಮಿಯ ಸೌಂದರ್ಯದ ಶಿಖರ ಎಂದರೆ ಅದರಲ್ಲಿ ಒಂದಕ್ಷರವೂ ಉತ್ಪ್ರೇಕ್ಷೆ ಇಲ್ಲ.
5. ಊಟಿ – ಇಂಚಿಂಚಲ್ಲಿಯೂ ಬ್ಯೂಟಿ
ತಮಿಳುನಾಡಿನ ಉದ್ದಕ್ಕೂ ಹಾದುಹೋಗುವ ಸಹ್ಯಾದ್ರಿ ಪರ್ವತ ಶ್ರೇಣಿಯ ಮಗ್ಗುಲಲ್ಲಿ ಮೊಗ್ಗಾಗಿ ಮಲಗಿರುವ ಉದಕ ಮಂಡಲ(ಊಟಿ) ನಿಜವಾಗಿ ಪ್ರವಾಸಿಗಳ ಸ್ವರ್ಗ (Beauty of Ooty). ಟೀ ತೋಟಗಳ ಉದ್ದಕ್ಕೂ ಹಸಿರು ಹಾಸು, ವಿಶಾಲವಾದ ಮೈದಾನಗಳು, ಕೇಂದ್ರ ಭಾಗದಲ್ಲಿ ಇರುವ ವಿಶಾಲವಾದ ಸರೋವರ, ಪ್ರಕೃತಿಯ ರಮಣೀಯ ಬೊಟಾನಿಕಲ್ ಗಾರ್ಡನ್, ಎತ್ತರಕ್ಕೆ ಬೆಳೆಯುವ ನೀಲಗಿರಿ ಮರಗಳು ಇವುಗಳು ಊಟಿಯ ಪ್ರಮುಖ ಆಕರ್ಷಣೆಗಳು. ಇಡೀ ವರ್ಷ ಒಂದಲ್ಲ ಒಂದು ಸಿನಿಮಾ ಶೂಟಿಂಗ್ ಸ್ಪಾಟ್ ಆಗಿರುವ ಊಟಿ ಪ್ರೇಮಿಗಳ ಹಾಟ್ ಸ್ಪಾಟ್ ಕೂಡ ಹೌದು.
6. ಅಲೆಪ್ಪಿ – ಮಲಬಾರದ ಕರಾವಳಿಯ ಪಚ್ಚೆ ಹವಳ
ಜಗತ್ತಿನ ಅತ್ಯಂತ ಸುಂದರವಾದ ಹತ್ತು ತಾಣಗಳಲ್ಲಿ ಆಲೆಪ್ಪಿ (Back waters of Alleppy) ಒಂದು ಎಂದರೆ ಅದು ಹೆಚ್ಚು ಸರಿ. ಬ್ಯಾಕ್ ವಾಟರಿನಲ್ಲಿ ವೈಭವದ ಬೋಟ್ ಹೌಸಿನಲ್ಲಿ ಇಡೀ ದಿನ ಕಳೆದರೆ ಅದು ಲೈಫ್ ಟೈಮ್ ಮೆಮೊರಿ ಆಗಬಲ್ಲದು. ಅಲೆಪ್ಪಿಯ ವಿಸ್ತಾರವಾದ ಬೀಚುಗಳು ನಿಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಅಲ್ಲಿರುವ ಆಯುರ್ವೇದಿಕ್ ರೆಸಾರ್ಟ್ಸ್, ಅಲ್ಲಿ ಇರುವ ಎಣ್ಣೆಯ ಮಸಾಜ್, ಸೂರ್ಯ ಸ್ನಾನ ನಿಮ್ಮನ್ನು ಯಾವುದೋ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ.
7. ಜೈಪುರ – ಖಗೋಳ ವಿಜ್ಞಾನದ ವಿಸ್ಮಯ
ಭಾರತದ ‘ಪಿಂಕ್ ಸಿಟಿ’ ಎಂಬ (Pink City Jaipur) ಕೀರ್ತಿಯು ಒಂದೆಡೆ ಆದರೆ ರಾಜಾ ಜಯಸಿಂಹನ ಖಗೋಳ ವಿಜ್ಞಾನದ ಸಂಕೇತವಾದ ಹವಾ ಮಹಲ್, ಸಿಟಿ ಪ್ಯಾಲೇಸ್, ಜಂತರ್ ಮಂತರ್ ಎಲ್ಲವೂ ಜೈಪುರದ ಚುಂಬಕ ಆಕರ್ಷಣೆಗಳು. ಅಮಿತಾಬ್ ಬಚ್ಚನ್ ನಿರೂಪಣೆ ಮಾಡಿದ ಅಂಬರ್ ಕೋಟೆಯ ದೃಶ್ಯಗಳು ನಮ್ಮನ್ನು ಹಿಂದೆ ಬರಲು ಬಿಡುವುದಿಲ್ಲ.
8. ಲಡಾಖ್ – ತಂಪು ತಂಪು ಸರೋವರಗಳ ಗಣಿ
ಜಮ್ಮು ಕಾಶ್ಮೀರಕ್ಕೆ ಹೋದವರು ಲಡಾಖ್ (Beauty of Ladakh) ನೋಡದೆ ಬಂದರೆ ಅದು ಖಾಲಿ ಖಾಲಿ. ತಂಪು ಗಾಳಿ ಬೀಸಿ ಬರುವ ಹಿಮ ಶಿಖರಗಳ ತೆಕ್ಕೆಯಲ್ಲಿ ಇರುವ ಸರೋವರಗಳನ್ನು ಸೀಳಿಕೊಂಡು ಹೋಗುವ ಬೋಟ್ ಪ್ರಯಾಣ ನಿಮಗೆ ಆನಂದದ ಶಿಖರದ ಅನುಭವ ಕೊಡದಿದ್ದರೆ ಮತ್ತೆ ಹೇಳಿ. ಲಡಾಖ್ ಅಂದರೆ ಹಿಮ ಪರ್ವತಗಳ ಶಿರೋಮಣಿ ಅಂದರೆ ಅದು ಉತ್ಪ್ರೇಕ್ಷೆ ಅಲ್ಲ. ಹಳದಿ ಮರಳ ದಿಬ್ಬಗಳು ಇಲ್ಲಿ ಹೆಚ್ಚುವರಿ ಆಕರ್ಷಣೆಗಳು.
9. ಮೈಸೂರು – ಚಾಮುಂಡಿ ಹರಸಿದ ಸೂರು
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಏನುಂಟು ಏನಿಲ್ಲ? 1399-1947ರವರೆಗೆ ಅದು ಮೈಸೂರು ಒಡೆಯರ ರಾಜಧಾನಿ ಆಗಿತ್ತು. ಅಲ್ಲಿ ರಾಜ ವೈಭವವು ಹೆಜ್ಜೆ ಹೆಜ್ಜೆಗೂ ಕಣ್ಣಿಗೂ ರಾಚುತ್ತದೆ. ಮೈಸೂರು ನಗರದ ನಡುವೆ ಇರುವ ಅಂಬಾ ವಿಲಾಸ ಅರಮನೆ (Mysore Palace) ಜಗತ್ತಿನ ಅತೀ ಶ್ರೀಮಂತ ಅರಮನೆ ಎಂದೇ ಕರೆಯಲ್ಪಡುತ್ತದೆ. ಚಾಮುಂಡಿ ಬೆಟ್ಟ, ದೊಡ್ಡ ಮೃಗಾಲಯ, ಲಲಿತ ಮಹಲ್ ಅರಮನೆ, ಬೃಂದಾವನ ಗಾರ್ಡನ್, ಸಂಗೀತ ಕಾರಂಜಿ ನಮ್ಮನ್ನು ಮೋಹಕವಾಗಿ ಸೆಳೆದು ಬಿಡುತ್ತವೆ. ಮೈಸೂರು ಕರ್ನಾಟಕದ ಹೆಮ್ಮೆ ಎಂದರೆ ಅದು ನಿಜವಾದ ಮಾತು.
10. ಡಾರ್ಜಿಲಿಂಗ್ – ಹಿಮಾಲಯದ ಡಾರ್ಲಿಂಗ್
ಹಿಮಾಲಯದ ತಪ್ಪಲಿನಲ್ಲಿ ಚಳಿ ಗಾಳಿಯನ್ನು ಹೊದ್ದು ಮಲಗಿದ ವೈಭವದ ನಗರ ಡಾರ್ಜಿಲಿಂಗ್ (Darjiling). ಎಲ್ಲಿ ನಿಂತು ನೋಡಿದರೂ ಹಿಮಾಲಯದ ಎತ್ತರದ ಶಿಖರ ಕಾಂಚನ ಜಂಗಾ ಕಣ್ಣಿಗೆ ತಂಪು ಅನುಭವ ನೀಡುತ್ತದೆ. ಸಮುದ್ರ ಮಟ್ಟದಿಂದ 2050 ಮೀ. ಎತ್ತರ ಇರುವ ಈ ಬೆಟ್ಟದಾಣದ ಉದ್ದಕ್ಕೂ ಹಸಿರು ಚೆಲ್ಲುವ ಟೀ ತೋಟಗಳ ಸಾಲು, ಸ್ವರ್ಗಸದೃಶವಾದ ಹಿಮಾಲಯದ ಶಿಖರಗಳು ಮರೆಯಾಗುವುದೆ ಇಲ್ಲ. ಅಲ್ಲಿರುವ ಆಟಿಕೆ ರೈಲಿನಲ್ಲಿ ನಗರವನ್ನು ಒಂದು ಸುತ್ತು ಬಂದರೆ ಡಾರ್ಜಿಲಿಂಗ್ ನಮಗೆ ಡಾರ್ಲಿಂಗ್ ಅನುಭವ ನೀಡುತ್ತದೆ.
ಇದನ್ನೂ ಓದಿ: Raja Marga Column : ನಿಮ್ಮ ಮಕ್ಕಳನ್ನು ಸೂಪರ್ ಹೀರೊ ಮಾಡಲು ಹೋಗ್ಬೇಡಿ; ರಿಯಾಲಿಟಿ ಶೋಗಳಿಗೆ ಬೇಕು ಬ್ರೇಕ್!
ಭರತ ವಾಕ್ಯ
ಈ ತಾಣಗಳ ಒಂದು ಪ್ರವಾಸ ಮುಗಿಸಿಕೊಂಡು ಬಂದು ನನಗೆ ಹೇಳಿ. ನೀವು ಭಾರತವನ್ನು ಮೊದಲಿಗಿಂತ ಹೆಚ್ಚು ಪ್ರೀತಿ ಮಾಡಲು ನಿಮಗೆ ಸಾಧ್ಯವಾಗದೆ ಹೋದರೆ ನಾನು ಮತ್ತೆ ಲೇಖನ ಬರೆಯುವುದಿಲ್ಲ!!