1955ರ ಹೊತ್ತಿಗೆ ಅಮೆರಿಕದ ಇಬ್ಬರು ಮನಶ್ಶಾಸ್ತ್ರಜ್ಞರು ಅಭಿವೃದ್ಧಿಪಡಿಸಿದ ಈ ವ್ಯಕ್ತಿತ್ವ ಶೋಧದ ಅನನ್ಯ ಮಾದರಿಯು ‘ಜೋಹಾರಿ ಕಿಟಕಿ’ ಎಂದು ಮುಂದೆ ಜಾಗತಿಕ ಮನ್ನಣೆ ಪಡೆಯಿತು. ಅವರೆಂದರೆ ಜೋಸೆಫ್ ಲುಫ್ಟ್ ಮತ್ತು ಹ್ಯಾರಿ ಇಂಘಮ್. ಅದು ನಮ್ಮೆಲ್ಲರ ಅಂತರಂಗ ಶೋಧದ ಹಾಗೂ ವ್ಯಕ್ತಿತ್ವ ವಿಕಸನದ ಅತ್ಯುತ್ತಮ ಮಾದರಿ ಎಂದು ಇಂದು ವಿಶ್ವದೆಲ್ಲೆಡೆ ಮಾನ್ಯತೆ ಪಡೆದಿದೆ. ಅದರ ಪರಿಚಯ ಈ ಲೇಖನದಲ್ಲಿ.
ನಾಲ್ಕು ಕಿಟಕಿಗಳ ಮೂಲಕ ನಮ್ಮ ವ್ಯಕ್ತಿತ್ವ!
ಜೋಹಾರಿ ಹೇಳುವ ಪ್ರಕಾರ ನಮ್ಮ ವ್ಯಕ್ತಿತ್ವವು ನಾಲ್ಕು ಕಿಟಕಿಗಳನ್ನು ಒಳಗೊಂಡಿದೆ. ಪ್ರತಿಯೊಂದು ಕಿಟಕಿಯು ನಮಗೆ ನಮ್ಮ ಅಂತರ್ ದರ್ಶನಕ್ಕೆ ಸಹಾಯ ಮಾಡುತ್ತದೆ. ಆ ಕಿಟಕಿಗಳ ವಿವರಣೆ ಇದೋ ಇಲ್ಲಿದೆ.
೧) ತೆರೆದ ಕಿಟಕಿ (ಓಪನ್ ವಿಂಡೋ)
ನಮಗೆ ನಮ್ಮ ಬಗ್ಗೆ ಗೊತ್ತಿರುವ ಮತ್ತು ಬೇರೆಯವರಿಗೆ ಕೂಡ ಗೊತ್ತಿರುವ ವಿಷಯಗಳು ಇಲ್ಲಿ ಸ್ಟೋರ್ ಆಗಿರುತ್ತವೆ. ಉದಾಹರಣೆಗೆ ನಮ್ಮ ಹೆಸರು, ಉದ್ಯೋಗ, ನಮ್ಮ ವಿಳಾಸ, ಸಾಮರ್ಥ್ಯಗಳು, ನಮ್ಮ ನಂಬಿಕೆಗಳು, ನಮ್ಮ ಮನೋಭಾವಗಳು, ನಮ್ಮ ಒಡನಾಡಿಗಳು, ನಮ್ಮ ಕೌಶಲಗಳು… ಹೀಗೆ ಸಾಕಷ್ಟು ಅಂಶಗಳನ್ನು ಈ ಕಿಟಕಿಯು ಒಳಗೊಂಡಿರುತ್ತದೆ. ಇಲ್ಲಿ ಯಾವುದೂ ಮುಚ್ಚಿಡುವ ಅಂಶಗಳು ಇರುವುದಿಲ್ಲ. ನಾನೊಬ್ಬ ಭಾವಜೀವಿ, ಭಾವತೀವ್ರತೆಯ ವ್ಯಕ್ತಿ ಎನ್ನುವುದು ನನಗೆ ಗೊತ್ತಿದೆ ಮಾತ್ರವಲ್ಲ ನನ್ನ ನೂರಾರು ಗೆಳೆಯರಿಗೆ ಗೊತ್ತಿದೆ. ನಾನು ಬೇರೆಯವರ ಕಷ್ಟಗಳಿಗೆ ಬೇಗ ಕರಗುತ್ತೇನೆ ಎಂದು ನನಗೂ, ಬೇರೆಯವರಿಗೂ ಸ್ಪಷ್ಟವಾಗಿ ಗೊತ್ತಿದೆ. ಹೀಗೆ ನೀವು ಪಟ್ಟಿ ಮಾಡುತ್ತ ಹೋದರೆ ನೂರಾರು ಸಂಗತಿಗಳು ನಿಮ್ಮ ಓಪನ್ ವಿಂಡೋದ ಭಾಗವಾಗಿರುತ್ತವೆ. ಈ ಪಟ್ಟಿ ಉದ್ದವಾದಷ್ಟು ನೀವು ಪಾಸಿಟಿವ್ ವ್ಯಕ್ತಿ ಆಗುತ್ತೀರಿ. ಈ ಕಿಟಕಿ ಅಗಲವಾಗುತ್ತಾ ಹೋದಂತೆ ನೀವು ಲೆಜೆಂಡ್ ಆಗುತ್ತೀರಿ. ಉದಾಹರಣೆಗೆ ಅಬ್ದುಲ್ ಕಲಾಂ ಅವರ ಜೀವನದಲ್ಲಿ ಮುಚ್ಚಿಡುವ ಸಂಗತಿ ಯಾವುದೂ ಇರಲಿಲ್ಲ. ಅವರ ಬಗ್ಗೆ ಅವರಿಗೆಷ್ಟು ಗೊತ್ತಿತ್ತೋ ಅಷ್ಟೂ ವಿಷಯಗಳು ಜಗತ್ತಿಗೆ ಗೊತ್ತಿತ್ತು! ಹಾಗೆ ಅವರ ಓಪನ್ ವಿಂಡೋ ಶ್ರೀಮಂತ ಆಗಿತ್ತು ಅನ್ನಬಹುದು!
೨) ಕುರುಡು ಕಿಟಕಿ (ಬ್ಲೈಂಡ್ ವಿಂಡೋ)
ನಮ್ಮ ಬಗ್ಗೆ ಬೇರೆಯವರಿಗೆ ಗೊತ್ತಿರುವ ಎಷ್ಟೋ ಸಂಗತಿಗಳು ನಮಗೆ ಗೊತ್ತಿರುವುದಿಲ್ಲ! ಅವುಗಳ ಸಂಗ್ರಹವೇ ಈ ಕುರುಡು ಕಿಟಕಿ. ಉದಾಹರಣೆಗೆ ನಿಮಗೆ ಸ್ಟ್ರಾಂಗ್ ಆದ ಮೆಮೊರಿ ಇದೆ ಎಂದು ನಿಮಗೆ ಗೊತ್ತಿರುವುದಿಲ್ಲ. ಆದರೆ ಬೇರೆಯವರಿಗೆ ಗೊತ್ತಿರುತ್ತದೆ. ನಿಮ್ಮ ನಗು ಚಂದ ಇದೆ ಎಂದು ನಿಮಗೆ ಗೊತ್ತಿರುವುದಿಲ್ಲ. ಆದರೆ ಬೇರೆ ಯಾರೋ ಹೇಳಿದ ನಂತರ ನಿಮಗೆ ಗೊತ್ತಾಗುತ್ತದೆ.
ನಿಮ್ಮ ಎಷ್ಟೋ ಸಾಮರ್ಥ್ಯಗಳು, ದೌರ್ಬಲ್ಯಗಳು, ಕೌಶಲಗಳು ನಿಮಗೆ ಗೊತ್ತಿರುವುದಿಲ್ಲ. ಆದರೆ, ಬೇರೆಯವರಿಗೆ ಗೊತ್ತಿರುತ್ತದೆ. ಉದಾಹರಣೆಗೆ ಸಚಿನ್ ತೆಂಡೂಲ್ಕರ್ ಒಬ್ಬ ಕ್ರಿಕೆಟ್ ಲೆಜೆಂಡ್ ಆಗುತ್ತಾರೆ ಎಂದು ಸಚಿನ್ ಅವರಿಗೆ ಗೊತ್ತಿರಲಿಲ್ಲ. ಆದರೆ ಅವರ ಗುರು ರಮಾಕಾಂತ್ ಆಚ್ರೇಕರ್ ಅವರಿಗೆ ಸ್ಪಷ್ಟವಾಗಿ ಗೊತ್ತಿತ್ತು!
ಈ ಕಿಟಕಿಯ ಪ್ರಭಾವದಿಂದ ಎಷ್ಟೋ ಜನ ಉತ್ತಮ ಸಿಂಗರ್ಸ್ ಆಗುವವರು ಇಂದಿಗೂ ಬಾತ್ ರೂಂ ಸಿಂಗರ್ ಆಗಿ ಉಳಿದಿದ್ದಾರೆ. ಎಷ್ಟೋ ಜನ ಒಳ್ಳೆಯ ಭಾಷಣಕಾರ ಆಗಬಲ್ಲವರು ವೇದಿಕೆಗೆ ಬಾರದೇ ಕೆಳಗೇ ಕೂತು ಬಿಡುತ್ತಾರೆ! ಈ ಕಿಟಕಿಯ ಸಾಕ್ಷಾತ್ಕಾರ ಆಗಬೇಕಾದರೆ ನಿಮಗೆ ಹದಿಹರೆಯದ ಹೊತ್ತಿನಲ್ಲಿ ಒಳ್ಳೆಯ ಗುರು ಅಥವ ಮೆಂಟರ್ ಅಥವಾ ಒಳ್ಳೆಯ ತರಬೇತುದಾರರು ದೊರೆಯಬೇಕು. ಹೆಚ್ಚು ತರಬೇತಿಗಳು ದೊರೆಯಬೇಕು.
೩) ಮುಚ್ಚಿದ ಕಿಟಕಿ (ಹಿಡನ್ ವಿಂಡೋ)
ಇದು ಇನ್ನೂ ವಿಸ್ಮಯಕಾರಿ ಕಿಟಕಿ. ನಿಮ್ಮ ಬಗ್ಗೆ ನಿಮಗೆ ಮಾತ್ರ ಗೊತ್ತಿರುವ ಮತ್ತು ಬೇರೆಯವರಿಗೆ ಗೊತ್ತೇ ಇಲ್ಲದ ನೂರಾರು ಸಂಗತಿಗಳು ಈ ಕಿಟಕಿಯ ಭಾಗ ಆಗಿರುತ್ತವೆ. ಅಂದರೆ ನಿಮ್ಮ ಜೀವನದ ಟಾಪ್ ಮೋಸ್ಟ್ ರಹಸ್ಯಗಳು ಇಲ್ಲಿ ಹೆಪ್ಪುಗಟ್ಟಿರುತ್ತವೆ. ನಮ್ಮ ಜೀವನ ಎಷ್ಟು ತೆರೆದ ಪುಸ್ತಕ ಎಂದು ನಾವು ಹೇಳಿದರೂ ನಾವು ಯಾರ ಹತ್ತಿರವೂ ಶೇರ್ ಮಾಡಲು ಸಾಧ್ಯವೇ ಆಗದ ನೂರಾರು ಸಂಗತಿಗಳು ಒಳಗೆ ಇರುತ್ತವೆ! ನಾವು ಅಂತರ್ಮುಖಿಗಳು ಆದರೆ ಈ ಕಿಟಕಿ ಇನ್ನಷ್ಟೂ ಅಗಲ ಆಗುತ್ತದೆ. ಮುಚ್ಚಿದ ಕಿಟಕಿ ಕಿರಿದಾದಷ್ಟು ನಮಗೆ ನಿರಾಳ! ಈ ಕಿಟಕಿ ಅಗಲ ಆದಷ್ಟು ನಾವು ಫೇಕ್ ಆಗುತ್ತೇವೆ.
ಅದಕ್ಕೆ ಮನಸ್ಸು ತೆರೆದು ಮಾತಾಡಲು ಸಾಧ್ಯವಾಗುವ ಗೆಳೆಯರು, ಒಡನಾಡಿಗಳು ಬೇಕು ಅನ್ನುವುದು. ದಿನಕ್ಕೆ ಸ್ವಲ್ಪ ಹೊತ್ತು ಮನಸ್ಸು ತೆರೆದು ಮಾತಾಡಲು ನಮಗೆ ಸಾಧ್ಯವಾದರೆ ನಮ್ಮ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ.
೪) ಅಜ್ಞಾತ ಕಿಟಕಿ ( Unknown Window)
ನಮ್ಮ ಬಗ್ಗೆ ನಮಗೆ ಗೊತ್ತಿಲ್ಲದ ಮತ್ತು ಬೇರೆಯವರಿಗೂ ಗೊತ್ತಿಲ್ಲದ ಎಷ್ಟೋ ಸಂಗತಿಗಳು ಈ ಅಜ್ಞಾತ ಕಿಟಕಿಯಲ್ಲಿ ಸ್ಥಾನ ಪಡೆಯುತ್ತವೆ. ಈ ಸಂಗತಿಗಳು ನಿಜಕ್ಕೂ ನಮಗೇ ಕೆಲವು ಬಾರಿ ವಿಸ್ಮಯಕಾರಿ ಆಗಬಹುದು. ಎಷ್ಟೋ ಬಾರಿ ನಾವು ಮಾತಾಡುವಾಗ ಬಂದ ಮಾತು ಅದು ಎಲ್ಲಿಂದ ಬಂದದ್ದು ಎಂದು ನಮಗೇ ಆಶ್ಚರ್ಯ ಆಗಬಹುದು! ಒಬ್ಬರು ಅಜ್ಜಿ ತಾನು ಸಾಯುವ ದಿನ, ಘಳಿಗೆ ಎಲ್ಲವನ್ನು ಮೊದಲೇ ಬರೆದಿಟ್ಟು ತನ್ನ ಮನೆಯವರನ್ನು ಎಲ್ಲರನ್ನೂ ಕರೆದು ಪಾಯಸ ಮಾಡಿ ಕುಡಿದು ಉಸಿರು ನಿಲ್ಲಿಸಿತ್ತು! ಅದು ಹೇಗೆ ಸಾಧ್ಯವಾಯಿತು? ಗೊತ್ತಿಲ್ಲ. ಒಬ್ಬ ಗೆಳೆಯ ತನಗೆ ಬೈಕ್ ಅಪಘಾತ ಆಗುತ್ತದೆ ಎಂಬುದನ್ನು ಮುಂಚಿತವಾಗಿ ಎಲ್ಲರಿಗೂ ಹೇಳಿದ್ದ. ಹೇಗೆ? ನನಗಿನ್ನೂ ಗೊತ್ತಿಲ್ಲ. ಈ ಅಜ್ಞಾತ ಕಿಟಕಿಯಲ್ಲಿ ಸಂಗ್ರಹ ಆಗಿರುವ ಸಾವಿರಾರು ಸಂಗತಿಗಳಿಗೆ ಯಾವ ಕಾರ್ಯ ಕಾರಣ ಸಂಬಂಧ ಕೂಡ ಇರುವುದಿಲ್ಲ! ಅದು ಅತೀಂದ್ರಿಯ ಶಕ್ತಿಯನ್ನು ಕೂಡ ಮೀರಿದ್ದು.
ಘಟನೆ ನಡೆದ ನಂತರ ಅವುಗಳ ವಿಶ್ಲೇಷಣೆ ಮಾಡಿದರೆ ನಮಗೆ ಅವುಗಳ ರೂಟ್ ಯಾವುದು ಎಂದು ಗೊತ್ತಾಗಬಹುದು. ಆದರೆ ಈ ಅಜ್ಞಾತ ಕಿಟಕಿಯ ಬಗ್ಗೆ ವಿಜ್ಞಾನಿಗಳು ಎಷ್ಟು ಸಂಶೋಧನೆ ಮಾಡಿದರೂ ಈವರೆಗೆ ಅದರ ಆಳ, ಅಗಲ, ವಿಸ್ತಾರಗಳನ್ನು ಅಳೆಯಲು ಸಾಧ್ಯ ಆಗಿಲ್ಲ!
ಒಟ್ಟು ಸಾರಾಂಶ ಏನೆಂದರೆ, ನಾವು ಯಶಸ್ವೀ ಆಗಬೇಕು ಅಂತಾದರೆ ತೆರೆದ ಕಿಟಕಿಯು ಇನ್ನಷ್ಟು ಅಗಲ ಆಗಬೇಕು. ಕುರುಡು ಕಿಟಕಿಯು ಇನ್ನಷ್ಟು ಕಿರಿದು ಆಗಬೇಕು. ಅಂದರೆ ನಮ್ಮ ಒಳಗಿರುವ ಅನೇಕ ಸಾಮರ್ಥ್ಯಗಳು ಆದಷ್ಟು ಬೇಗ ಬೆಳಕಿಗೆ ಬರಬೇಕು. ಮುಚ್ಚಿದ ಕಿಟಕಿ ತೆರೆದು ಬೆಳಕು ಚೆಲ್ಲಬೇಕು. ಮನಸ್ಸನ್ನು ಬಿಚ್ಚಿ ಮಾತಾಡಿ ಹಗುರ ಆಗಬೇಕು. ಅಜ್ಞಾತ ಕಿಟಕಿಯ ಘಟನೆಗಳನ್ನು ವಿಶ್ಲೇಷಣೆ ಮಾಡಬೇಕು. ಅಂತರಾವಲೋಕನ ಮಾಡಬೇಕು. ಆಗ ನಾವು ಖಂಡಿತವಾಗಿ ಲೆಜೆಂಡ್ ಆಗುತ್ತೇವೆ. ಈ ವಿಕಸನದ ಅನನ್ಯ ಮಾದರಿಯನ್ನು ನಮಗೆ ನೀಡಿದ ಜೋಹಾರಿ ಗೆಳೆಯರಿಗೆ ನಮ್ಮ ಧನ್ಯವಾದ ಇರಲಿ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ನಾವು ನಾವಾಗಿಯೇ ಇರಬೇಕು, ಬೇರೆಯವರಂತಲ್ಲ: ಅನನ್ಯ ಅನ್ನುವುದೇ ನಮ್ಮ ಬ್ರಾಂಡ್!