Site icon Vistara News

ರಾಜ ಮಾರ್ಗ ಅಂಕಣ | ಅವನಿಯ ಕಾಲುಗಳಲ್ಲಿ ಶಕ್ತಿಯೇ ಇಲ್ಲ; ಆದರೆ, ಇಡೀ ದೇಶ ಎದ್ದು ನಿಂತು ಸಲಾಂ ಅನ್ನುತ್ತಿದೆ!

Avani lekhara

ಕಳೆದ ವರ್ಷದವರೆಗೂ ಈ ಹುಡುಗಿ ಯಾರೆಂಬುದು ಯಾರಿಗೂ ಗೊತ್ತಿರಲಿಲ್ಲ! ಆದರೆ ಇಂದು ಪ್ರತೀ ಒಬ್ಬ ತಂದೆಯೂ ಮಗಳಿದ್ದರೆ ಅವಳ ಹಾಗೆ ಇರಬೇಕು ಎಂದು ಆಸೆ ಪಡಲು ಆರಂಭ ಮಾಡಿದ್ದಾರೆ! ಅವಳ ಮುಗ್ಧ ನಗು ಒಂದೇ ಸಾಕು ನಮ್ಮ ಮನವನ್ನು ಸೂರೆ ಮಾಡಲು!

ಕಳೆದ ವರ್ಷ ಟೋಕಿಯೋ ಒಲಿಂಪಿಕ್ಸ್ ಮುಗಿದು ಹತ್ತು ದಿನಗಳಲ್ಲಿ ಅದೇ ಕ್ರೀಡಾಂಗಣದಲ್ಲಿ ಪಾರಾ ಒಲಿಂಪಿಕ್ಸ್ ಆರಂಭ ಆಗಿತ್ತು. ಆದರೆ, ಅದಕ್ಕೊಂದು ಸರಿಯಾದ ಪ್ರಚಾರವೇ ಇರಲಿಲ್ಲ. ನಿಜಕ್ಕಾದರೆ ವಿಶೇಷ ಚೇತನ ಸಾಧಕರ ಕ್ರೀಡಾ ಅನುಪಮ ಸಾಧನೆಗಳು ಮಾಧ್ಯಮಗಳಲ್ಲಿ ತುಂಬಾ ಪ್ರಚಾರವನ್ನು ಪಡೆಯಬೇಕಿತ್ತು. ಆದರೆ ಅದು TRP ಸರಕು ಅಲ್ಲದ ಕಾರಣ ಪ್ರಚಾರ ದೊರೆಯುತ್ತಲೆ ಇರಲಿಲ್ಲ! ಅಂತವರ ಮಹಾ ಸಾಧನೆಗಳು ಯಾರ ಗಮನವನ್ನೂ ಸೆಳೆಯುತ್ತಿರಲಿಲ್ಲ. ಹಾಗೆ ನಿರ್ಲಕ್ಷ್ಯ ಮಾಡಿದವರ ಧಿಮಾಕು ಕರಗಿಸುವ ರೀತಿ ಅವನಿ ಗೆದ್ದು ಬಂದಿದ್ದಾರೆ!

ಅವನಿ ಜೈಪುರದಲ್ಲಿ ಹುಟ್ಟುವಾಗ ನಮ್ಮ ನಿಮ್ಮ ಹಾಗೆ ಇದ್ದರು. ಛಬ್ಬಿ ಛಬ್ಬಿ ಕ್ಯೂಟ್ ಗರ್ಲ್! ಮಧ್ಯಮ ವರ್ಗದ ಕುಟುಂಬ ಆದರೂ ಪ್ರೀತಿಯ ಕೊರತೆ ಒಂದಿಷ್ಟು ಕೂಡ ಇರಲಿಲ್ಲ. ಒಂದಿಷ್ಟು ಗೆಳೆಯರು, ಗೆಳತಿಯರು, ರಾಶಿ ರಾಶಿ ಕನಸುಗಳು, ಪುಟಿಯುವ ಉತ್ಸಾಹ ಅಂದ್ರೆ ಅದು ಅವನಿ!

ಆದರೆ ಹನ್ನೊಂದನೇ ವಯಸ್ಸಿಗೆ ಆದ ಒಂದು ಕಾರು ಅಪಘಾತವು ಅವಳ ಉತ್ಸಾಹವನ್ನು ಖಾಲಿ ಮಾಡಿತು! ಅದು ಪಾರಾಪ್ಲೇಜಿಯ ಸ್ಥಿತಿ! ಕಲ್ಪನೆ ಮಾಡಲು ಕೂಡ ಭಯ ಪಡುವ ದೈಹಿಕ ಸ್ಥಿತಿ! ಬೆನ್ನು ಮೂಳೆಗೆ ಘಾಸಿ ಆದಾಗ ದೇಹದ ಒಂದು ಭಾಗದ ನಿಯಂತ್ರಣ ತಪ್ಪಿ ಹೋಗುತ್ತದೆ. ಹಾಗೆ ಅವನಿಗೆ ಸೊಂಟದ ಕೆಳಗಿನ ಭಾಗ ಪೂರ್ತಿ ಜೀವವನ್ನು ಕಳೆದುಕೊಂಡಿತ್ತು. ವಾಶ್ ರೂಮಿಗೆ ಹೋಗುವಾಗ ಕೂಡ ಅಮ್ಮ ಹೊತ್ತುಕೊಂಡು ಹೋಗಬೇಕಾದ ಅಸಹಾಯಕ ಪರಿಸ್ಥಿತಿ! ಮುಂದಿನ ಬದುಕು ವೀಲ್ ಚೇರ್ ಮೇಲೆ ಎಂದು ವೈದ್ಯರು ಷರಾ ಬರೆದಾಗ ಅವನಿ ನೋವಿನಲ್ಲಿ ಅವರನ್ನೇ ಕೇಳಿದ ಒಂದೇ ಪ್ರಶ್ನೆ – ಡಾಕ್ಟರ್, ಎಲ್ಲಿಯವರೆಗೆ?

ವೈದ್ಯರು ಹೇಳಿದರು – Treatment can help. But this condition can’t be cured. ಅಂದರೆ ಚಿಕಿತ್ಸೆ ಸಹಾಯ ಮಾಡಬಹುದು. ಆದ್ರೆ ದೇಹಸ್ಥಿತಿಯು ಸುಧಾರಣೆ ಆಗುವುದಿಲ್ಲ!

ಮೂರು ದಿನ ಅವನಿ ಜೋರಾಗಿ ಅಳುತ್ತಲೇ ಇದ್ದಳು. ಚಿಕ್ಕಂದಿನಿಂದ ಅಪ್ಪ ಅವಳ ಬೆಸ್ಟ್ ಫ್ರೆಂಡ್. ಆಗಲೂ ಧೈರ್ಯ ತುಂಬಿದ್ದು ಅವಳ ಅಪ್ಪನೇ. ಅವಳಿಗಾಗಿ ಒಂದು ವಿಶೇಷವಾದ ವೀಲ್ ಚೇರ್ ಸಿದ್ಧವಾಯಿತು. ಎರಡು ವರ್ಷಗಳ ನಂತರ ಅವಳು ಮತ್ತೆ ಶಾಲೆಗೆ ವೀಲ್ ಚೇರ್ ಮೇಲೆ ಬಂದಾಗ ಅವಳ ಎಲ್ಲಾ ಫ್ರೆಂಡ್ಸ್ ಎದ್ದು ನಿಂತು ಚಪ್ಪಾಳೆ ಹೊಡೆದು ಅವಳನ್ನು ಸ್ವಾಗತ ಮಾಡಿದ್ದರು! ನೋವು ಮರೆತು ಹೊರಗೆ ಬರಲು ಅದರಿಂದ ನನಗೆ ಸಾಧ್ಯ ಆಯಿತು ಎಂದು ಆಕೆ ಹೇಳುತ್ತಾರೆ. ಪೂರ್ತಿ ಬಾಡಿ ಹೋಗಿದ್ದ ಆಕೆಯ ಮುಖದಲ್ಲಿ ಮತ್ತೆ ಅದೇ ನಗು ತುಳುಕಲು ಆಕೆಯ ಫ್ರೆಂಡ್ಸ್ ಸಹಾಯ ಮಾಡಿದರು.

ಬದುಕಿನ ಏಕತಾನತೆಯನ್ನು ಕಳೆಯಲು ಅವಳ ಅಪ್ಪ ಮಗಳಿಗೆ ಆಯ್ಕೆ ಮಾಡಲು ಹೇಳಿದ್ದು ಎರಡು ಮಾಧ್ಯಮಗಳನ್ನು. ಒಂದು ಮ್ಯೂಸಿಕ್. ಇನ್ನೊಂದು ಕ್ರೀಡೆ. ಅವಳ ಅಪ್ಪನಿಗೆ ಪಾರಾ ಒಲಿಂಪಿಕ್ಸ್ ಬಗ್ಗೆ ಹೆಚ್ಚು ಗೊತ್ತಿತ್ತು. ಅದಕ್ಕೆ ಪೂರಕವಾಗಿ ಮಗಳಿಗೆ ಒಳ್ಳೆಯ ಕೋಚ್ ಮೂಲಕ ಬಿಲ್ವಿದ್ಯೆಯ (ಆರ್ಚರಿ)ತರಬೇತಿಯು ಆರಂಭ ಆಯಿತು. ಆದರೆ ಕೇವಲ ಮೂರು ತಿಂಗಳ ಒಳಗೆ ಅವಳ ಆಸಕ್ತಿಯು ಆರ್ಚರಿಯಿಂದ ಶೂಟಿಂಗ್ ಕಡೆಗೆ ಹೊರಳಿತು. ಅದು ಭಾರತದ ಭಾಗ್ಯ ಎಂದೇ ಹೇಳಬಹುದು!

ಅವಳಿಗೆ ಸುಮಾ ಸಿದ್ಧಾರ್ಥ್ ಶಿರೂರು ಎಂಬ ಬೆಸ್ಟ್ ಕೋಚ್ ದೊರೆತರು. ಅವರು ನನ್ನ ಬೆಸ್ಟ್ ಫ್ರೆಂಡ್ ಆಗಿ ಗೈಡ್ ಮಾಡುತ್ತಿದ್ದರು ಎಂದು ಅವನಿ ಹೇಳುತ್ತಾರೆ. Go Sports Foundation ಎಂಬ ಒಂದು NGO ಆಕೆಯ ಪ್ರಾಯೋಜಕತ್ವ ವಹಿಸಿತು. ಪ್ರತೀ ದಿನಕ್ಕೆ ಆರು ಗಂಟೆಗೆ ಕಡಿಮೆ ಆಗದ ಹಾಗೆ 6-7 ವರ್ಷಗಳ ಕಠಿಣ ತರಬೇತು ಆಕೆಯನ್ನು ಟೋಕಿಯೋ ಪಾರಾ ಒಲಿಂಪಿಕ್ಸ್‌ ವರೆಗೆ ಕರೆದುಕೊಂಡು ಹೋಯಿತು. ಪಾರಾ ಇವೆಂಟ್ ಆರಂಭ ಆಗುವಾಗ ಆಕೆ ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಐದನೇ ರ‍್ಯಾಂಕಲ್ಲಿ ಇದ್ದರು.

ಆದ್ರೆ 10 ಮೀಟರ್ ಏರ್ ರೈಫಲ್ ಶೂಟಿಂಗ್‌ನ ಫೈನಲ್ ಪಂದ್ಯದಲ್ಲಿ ಆಕೆ ಸಂಪಾದನೆ ಮಾಡಿದ್ದು ಬರೋಬ್ಬರಿ ವಿಶ್ವದಾಖಲೆಯ 249.6 ಅಂಕಗಳನ್ನು! ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಆಕೆಯ ಕೊರಳಿಗೆ ಚಿನ್ನದ ಪದಕ ಒಲಿಯಿತು! ರಾಷ್ಟ್ರಗೀತೆ ಜನ ಗಣ ಮನವು ಸ್ಟೇಡಿಯಂನಲ್ಲಿ ರಿಬೌಂಡ್ ಆದಾಗ ಆಕೆಯ ಕಣ್ಣಲ್ಲಿ ತುಂಬಿ ತುಳುಕಿದ್ದ ಸಾರ್ಥಕ್ಯದ ನಗುವನ್ನು ಒಮ್ಮೆ ನೀವು ನೋಡಬೇಕಿತ್ತು! ಅದು ಭಾರತಕ್ಕೆ ದೊರಕಿದ ಮೊತ್ತ ಮೊದಲ ಚಿನ್ನದ ಪದಕ ಆಗಿತ್ತು!

ಮೂರೇ ದಿನದಲ್ಲಿ ಅವನಿ 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಮತ್ತೆ ಕಂಚಿನ ಪದಕ ಗೆದ್ದರು. ಅವಳಿ ಪದಕಗಳನ್ನು ಗೆದ್ದ ಅವನಿ ಆ ಸಾಧನೆಯನ್ನು ಮಾಡಿದ ಮೊದಲ ಭಾರತೀಯರು ಅಂದಾಗ ಆ ಅಪ್ಪನ ಖುಷಿಯನ್ನು ಒಮ್ಮೆ ಫೀಲ್ ಮಾಡಿ ನೋಡಿ! ನಿಮಗೆ ಅವರ ಬದ್ಧತೆ, ಪ್ರೀತಿ, ತ್ಯಾಗ ಕಣ್ಣು ಮುಂದೆ ಬರಬಹುದು.

ಈ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಆಕೆ ಭಾರತದ ಧ್ವಜಧಾರಿಯಾಗಿ ವೀಲ್ ಚೇರ್ ಮೇಲೆ ವಿಹಾರ ಮಾಡುವ ದೃಶ್ಯವು ಮುಂದಿನ ಹತ್ತಾರು ವರ್ಷಗಳ ಕಾಲ ಪಾರಾ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಭಾರತಕ್ಕೆ ಇನ್ನಷ್ಟು ಪದಕಗಳನ್ನು ಮೊಗೆದು ತರುವ ಶಕ್ತಿ ಹೊಂದಿದೆ!

ಅಂದ ಹಾಗೆ 20 ವರ್ಷದ ಅವನಿ ಜೈಪುರದಲ್ಲಿ ಈಗ ಕಾನೂನು ಶಿಕ್ಷಣ ಪಡೆಯುತ್ತಿದ್ದಾರೆ. ಹ್ಯಾಟ್ಸಾಫ್ ಅವನಿ ಲೇಖರ! We are so proud of you.

ಇದನ್ನೂ ಓದಿ | ರಾಜ ಮಾರ್ಗ ಅಂಕಣ: ಇದು ಜಗತ್ತಿನ ಬೆಸ್ಟ್‌ ಟೀಚರ್‌ ಆನ್ನಿ ಸುಲೈವಾನ್‌ ಕಥೆ, ಅಂದ ಹಾಗೆ ಆಕೆಗೆ ಕಣ್ಣೇ ಕಾಣ್ತಿರ್ಲಿಲ್ಲ!

Exit mobile version