Site icon Vistara News

ರಾಜ ಮಾರ್ಗ ಅಂಕಣ | ಶೋಕ ಗೀತೆಗಳ ಸಾಮ್ರಾಟ ಮುಕೇಶ್‌, ಅವನು ಮೂಕ ಮನಗಳ ನಿತ್ಯ ರಾಗ!

singer mukesh

ಆತ ಬದುಕಿದ್ದರೆ ಮುಂದಿನ ವರ್ಷ ಅವನಿಗೆ ನೂರು ವರ್ಷ ತುಂಬುತ್ತಿತ್ತು. ಅವನು ನಿರ್ಗಮಿಸಿ 46 ವರ್ಷಗಳೆ ಕಳೆದುಹೋಗಿವೆ! ಇಂದು ಲೆಜೆಂಡ್ ಗಾಯಕ ಮುಕೇಶ್ ನಮ್ಮೊಂದಿಗಿಲ್ಲ. ಆದರೆ ಆತ ಹಾಡಿರುವ 1300 ಮಾಧುರ್ಯದ ಹಾಡುಗಳಿವೆ! ‘ದಿಲ್ ಜಲ್ತಾ ಹೆ ತೋ ‘ ಎಂದು ಹಾಡುತ್ತ ನಮ್ಮ ದಿಲ್ ತೊಡಕರ್ ಆತ ಹೊರಟು ಹೋಗಿ 46 ವರ್ಷಗಳೇ ಕಳೆದುಹೋದವು. ಆದ್ರೂ ನಾವು ‘ಜಾನೆ ಕಹಾ ಗಯೇ ಓ ದಿನ್’ ಎಂದು ಹಾಡುತ್ತ, ‘ಕಭಿ ಕಭಿ ಮೇರೆ ದಿಲ್ ಮೇ’ ಎಂದು ಗುನುಗುತ್ತ ಅವನಿಗೆ ಶೃದ್ಧಾಂಜಲಿ ಸಮರ್ಪಣೆ ಮಾಡುತ್ತಾ ಇದ್ದೇವೆ. ಬಾಲಿವುಡ್ಡಿಗೆ ಇನ್ನೊಬ್ಬ ಮುಕೇಶ್ ಮತ್ತೆ ಹುಟ್ಟಿ ಬರಲಿ ಎಂಬ ಹಾರೈಕೆಯೊಂದಿಗೆ!

ಗಾಯಕ ಆಗಿದ್ದೇ ಆಕಸ್ಮಿಕ!
ಅವನ ಪೂರ್ತಿ ಹೆಸರು ಮುಕೇಶ್ ಚಂದ್ ಮಾಥುರ್. ಹುಟ್ಟಿದ್ದು ದೆಹಲಿಯಲ್ಲಿ. ಓದಿದ್ದು ಎಸ್ಸೆಸ್ಸೆಲ್ಸಿ. ಉದ್ಯೋಗವನ್ನು ಮಾಡಿದ್ದು PWD ಇಲಾಖೆಯಲ್ಲಿ. ಅವನ ಅಕ್ಕ ಸುಂದರ ಪ್ಯಾರಿಗೆ ಸಂಗೀತ ಕಲಿಸಲು ಗುರುಗಳು ಪ್ರತೀ ದಿನ ಮನೆಗೆ ಬಂದಾಗ ಪಕ್ಕದ ಕೋಣೆಯಲ್ಲಿ ಹಾಡು ಗುನುಗುತ್ತ ಸಂಗೀತ ಕಲಿತವನು ಮುಕೇಶ್. ಅವನ ಅಕ್ಕನ ಮದುವೆಯ ರಸಮಂಜರಿಯ ವೇದಿಕೆಯಲ್ಲಿ ಆತ ಹಾಡುವಾಗ ಕೇಳಿದ್ದ ಹಿಂದಿಯ ಖ್ಯಾತ ನಟ ಮೋತಿಲಾಲ್ ಅವನಿಗೆ ಹೇಳಿದ್ದು “ನೀನು ಇರಬೇಕಾದ್ದು ಇಲ್ಲಿ ಅಲ್ಲ! ನಡಿ ಮುಂಬೈಗೆ”

ಅಲ್ಲಿಗೆ ಕರೆದುಕೊಂಡು ಬಂದ ಮೋತಿಲಾಲ್ ಅವರು ಅವನ ಸಂಗೀತ ಕಲಿಕೆಗೂ ಅವಕಾಶ ಮಾಡಿಕೊಟ್ಟರು.

ಹೀರೋ ಆಗಲು ಹೋಗಿ ಎಡವಟ್ಟು!
ಅದರ ನಡುವೆ ಎರಡು ಸಿನೆಮಾದಲ್ಲಿ ಹೀರೋ ಆಗಿ ಅಭಿನಯ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದ ಮುಖೇಶ್! ಎರಡೂ ಸಿನೆಮಾ ಓಡಲಿಲ್ಲ. ಅವನಿಗೆ ತಕ್ಷಣ ಗೊತ್ತಾಯಿತು – ಇದು ನನ್ನ ಕ್ಷೇತ್ರ ಅಲ್ಲ!

ಮತ್ತೆ ಅವಕಾಶಗಳನ್ನು ಹುಡುಕುತ್ತ ಸ್ಟುಡಿಯೋಗಳಿಗೆ ಅಲೆದಾಡುವುದು ತಪ್ಪಲಿಲ್ಲ. ಅನಿಲ್ ಬಿಸ್ವಾಸ್ ಕಂಪೋಸ್ ಮಾಡಿದ ‘ಪೆಹ್ಲಿ ನಜರ್’ ಸಿನಿಮಾದ ಸ್ಮರಣೀಯ ಹಾಡು ‘ ದಿಲ್ ಜಲ್ತಾ ಹೈ ತೋ ಜಲನೇ ದೋ’ ಮುಖೇಶ್ ಹಾಡಿದ್ದೇ ಹಾಡಿದ್ದು ಬಂಪರ್ ಹೊಡೆಯಿತು! ಆ ಹಾಡನ್ನು ಕೇಳಿದ ಆಗಿನ ಲೆಜೆಂಡ್ ಸಿಂಗರ್ ಸೈಗಲ್ ಹೇಳಿದರಂತೆ “ಈ ಹಾಡು ನಾನೇ ಹಾಡಿದ್ದಲ್ಲವಾ! ಯಾವಾಗ ಹಾಡಿದ್ದು ಎಂದು ಮರೆತು ಹೋಗಿದೆ!”

ಆಗ ಮುಖೇಶಗೆ ‘ತಾನು ಅರಿವಿಲ್ಲದೆ ಸೈಗಲ್ ಅವರ ಅನುಕರಣೆಯನ್ನು ಮಾಡುತ್ತಿರುವೆ’ ಎಂದು ಅರ್ಥ ಆಗಿತ್ತು!

ಸೈಗಲ್ ಅನುಕರಣೆಯಿಂದ ಹೊರಬಂದ ಮುಕೇಶ್!
ಅನುಕರಣೆಯಿಂದ ಹೊರಬಂದು ಅವನದ್ದೇ ವಾಯ್ಸ್ ಡೆವೆಲಪ್ ಮಾಡಲು ತರಬೇತಿ ನೀಡಿದವರು ನೌಶಾದ್ ಸಾಬ್. ಅವರನ್ನು ಮುಕೇಶ್ ಕೊನೆಯತನಕ ಮರೆಯಲಿಲ್ಲ!

ಬಾಲಿವುಡ್‌ನಲ್ಲಿ ಗಟ್ಟಿಯಾಗಿ ಕಾಲು ಊರುವ ಮೊದಲೇ ಆತ ಪ್ರೀತಿಯ ಬಲೆಗೆ ಬಿದ್ದಾಗಿತ್ತು. ಅವಳ ಹೆಸರು ಸರಲಾ. ಕೋಟ್ಯಾಧಿಪತಿ ಅಪ್ಪನ ಪ್ರೀತಿಯ ಮಗಳು. ಇವನು ‘ಮಾನಾ ಆಪ್ನಿ ಜೇಬ್ ಸೆ ಫಕೀರ್ ಹೈ ‘ಎಂದು ಹಾಡುತ್ತಿದ್ದ ಐಡೆಂಟಿಟಿ ಇಲ್ಲದ ಹಿನ್ನೆಲೆ ಗಾಯಕ! ‘ಮೈನಾ ಭೂಲೂಂಗಾ’ ಎಂದು ಹಾಡುತ್ತ ಮುಖೇಶ್ ಅವಳಿಗೆ ಮೋಡಿ ಮಾಡಿದ್ದ!

ಪತ್ನಿ ಸರಲಾ ತ್ರಿವೇದಿ ಜತೆ ಮುಕೇಶ್‌

‘ಚಂಚಲ ಶೀತಲ್ ‘ ಸರಲಾ ಅವನನ್ನು ಬಿಟ್ಟಿರಲು ಆಗದೇ ಒಂದು ದಿನ ‘ಭಾಗ್ ಚಲೇ’ ಎಂದಳು! ಸರಳವಾಗಿ ಒಂದು ‘ಸಾವನ್‌ ಕಾ ಮಹೀನಾ’ ಅವರು ಒಂದು ದೇವಸ್ಥಾನದಲ್ಲಿ ಮದುವೆ ಆದರು. ಕೊನೆಯವರೆಗೂ ಪ್ರೀತಿಯಿಂದ ಬಾಳಿದರು.

ಹಾಡಿದ್ದು ಒಟ್ಟು 1300 ಅಮರ ಹಾಡುಗಳನ್ನು
1945-1978ರ ಅವಧಿಯಲ್ಲಿ ಮುಕೇಶ್ ಹಾಡಿದ್ದು 1300 ಅಮರ ಹಾಡುಗಳನ್ನು! ಅವನ ಸಮಕಾಲೀನ ಗಾಯಕರಾದ ರಫೀ ಮತ್ತು ಕಿಶೋರ್ ಕುಮಾರ್ ಅವರಿಗೆ ಹೋಲಿಸಿದರೆ ಈ ಸಂಖ್ಯೆ ತುಂಬಾ ಕಡಿಮೆ. ಆದರೆ ಮುಕೇಶ್ ಹಾಡಿದ ಹಾಡುಗಳು ಎಲ್ಲವೂ ಸೂಪರ್ ಹಿಟ್. ಮಾಧುರ್ಯದ ಪರಾಕಾಷ್ಠೆ!

ಶೋಕ ಗೀತೆಗಳ ಸಾಮ್ರಾಟ ಮುಖೇಶ್!
ಅವನ ಧ್ವನಿಯಲ್ಲಿ ಮೊಹಮ್ಮದ್ ರಫಿಯ ವೈವಿಧ್ಯತೆಯು ಇರಲಿಲ್ಲ. ಕಿಶೋರ್ ಕುಮಾರ್‌ನ ಕಶಿಷ್ ಇರಲಿಲ್ಲ. ಆದರೆ ಒಂದು ಹಾಂಟಿಂಗ್ ಮೆಲೊಡಿ ಖಂಡಿತವಾಗಿ ಇತ್ತು. ಒಂದು ಗಜಲ್ ಇಂಪ್ಯಾಕ್ಟ್ ಇತ್ತು. ಒಂದು ಮಾದಕತೆ ಇತ್ತು. ಅದರಲ್ಲೂ ಭಗ್ನಪ್ರೇಮಿಗಳಿಗೆ ಒಂದಿಷ್ಟು ಸಾಂತ್ವನ ನೀಡುವ ವಿಷಾದ ಇತ್ತು. ಅದಕ್ಕೆ ಅವನನ್ನು ‘ಶೋಕ ಗೀತೆಗಳ ಸಾಮ್ರಾಟ’ ಎಂದು ಜನ ಕರೆದರು. ನೋವನ್ನು ಸೃಜಿಸುವ ಆ ಧ್ವನಿ ಬೇರೆ ಯಾವ ಗಾಯಕನಲ್ಲೂ ಇರಲಿಲ್ಲ!

ಆಗಿನ ಕಾಲದ ಶ್ರೇಷ್ಟ ಸಂಗೀತ ನಿರ್ದೇಶಕರಾದ ಶಂಕರ್ ಜೈಕಿಷನ್, ಕಲ್ಯಾಣ್‌ಜಿ ಆನಂದ್‌ಜಿ, ಸಚಿನ್ ದೇವ್ ಬರ್ಮನ್, ಖಯ್ಯಾಂ, ಸಲೀಲ್ ಚೌಧರಿ ಮೊದಲಾದ ಸಂಗೀತ ನಿರ್ದೇಶಕರು ಮುಖೇಶನ ಒಳಗಿದ್ದ ಅದ್ಭುತ ಗಾಯಕನನ್ನು ಕಡೆದು ನಿಲ್ಲಿಸಿದರು. ಆಗಿನ ಕಾಲದಲ್ಲಿ ಸ್ಟುಡಿಯೋ ವ್ಯವಸ್ಥೆಯು ಹೇಗಿತ್ತು ಎಂದರೆ ಎಲ್ಲಾ ವಾದ್ಯಗಳ ಕಲಾವಿದರು ಸಾಕಷ್ಟು ರಿಹರ್ಸಲ್ ಮಾಡಿ ಲೈವ್ ಆಗಿ ನುಡಿಸಬೇಕಾಗಿತ್ತು. ಹಿನ್ನೆಲೆ ಗಾಯಕರಿಗೆ ರೀ ಟೇಕ್ ಮಾಡಲು ಅವಕಾಶ ಇಲ್ಲದೆ ಒಂದೇ ಉಸಿರಲ್ಲಿ ಹಾಡಿ ಮುಗಿಸಬೇಕು. ಮುಖೇಶ್ ಇಂತಹ ಸವಾಲನ್ನು ಗೆದ್ದು ಬಂದಿದ್ದರು!

ಮುಖೇಶ್ ನನ್ನ ಆತ್ಮ ಅಂದರು ರಾಜ್ ಕಪೂರ್!
ಹಿಂದಿ ಸಿನೆಮಾ ರಂಗದ ಮಹಾ ನಟ, ಶೋಮ್ಯಾನ್ ರಾಜ್ ಕಪೂರ್ ಅವರ ವ್ಯಕ್ತಿತ್ವಕ್ಕೆ ಮುಖೇಶ್ ಧ್ವನಿಯು ತುಂಬಾ ಚೆನ್ನಾಗಿ ಹೊಂದಾಣಿಕೆ ಆಗುತ್ತಿತ್ತು. ಅದರಿಂದ ಹುಟ್ಟಿ ಬಂದದ್ದು ಎವರ್ ಗ್ರೀನ್ ಆದ ನೂರಾರು ಹಾಡುಗಳು! ಆವಾರಾ, ಬರ್ಸಾತ್, ಶ್ರೀ 420, ಸಂಗಂ, ಮೇರಾ ನಾಮ್ ಜೋಕರ್, ಅನಾರಿ, ಆಗ್, ಜಿಸ್ ದೇಶ್ ಮೆ ಗಂಗಾ ಬೇಹತಿ ಹೈ……ಸಿನಿಮಾದ ಹಾಡುಗಳನ್ನು ಒಮ್ಮೆ ಕೇಳಿ ನೋಡಿ. ಅಂತಹ ಹಾಡುಗಳಿಗೆ ಸಾವಿಲ್ಲ. ಅದಕ್ಕೆ ಮುಂದೆ ಮುಖೇಶ್ ನಿಧನ ಆದಾಗ ರಾಜಕಪೂರ್ ಹೇಳಿದ್ದು – ನಾನು ನನ್ನ ಧ್ವನಿಯನ್ನು ಕಳೆದುಕೊಂಡೆ!

ಮುಖೇಶನಿಗೆ ‘ರಜನಿ ಗಂಧಾ’ ಸಿನಿಮಾದ ಹಾಡಿಗೆ ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿಯು ದೊರೆಯಿತು‌ (ಕಯಿ ಬಾರ್ ಯೂ ಹಿ ದೇಖಾ ಹೈ). ನಾಲ್ಕು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ, ಬೆಂಗಾಲಿ ಪತ್ರಕರ್ತರ ಸಂಘದ ಮೂರು ಪ್ರಶಸ್ತಿಗಳು ದೊರೆತಿವೆ. ಇದೆಲ್ಲಕ್ಕಿಂತ ಹೆಚ್ಚಾಗಿ ಅವರ ಹಾಡುಗಳನ್ನು ಈಗಲೂ ಕೇಳುವ, ಆಸ್ವಾದಿಸುವ, ಫೀಲ್ ಮಾಡಿಕೊಳ್ಳುವ ಬಹು ದೊಡ್ಡ ಅಭಿಮಾನಿಗಳ ಪ್ರೀತಿ ದೊರೆತಿತು. ಮುಖೇಶನಿಗೆ ಈಗಲೂ ವಿದೇಶದಲ್ಲಿ ಕೂಡ ಬಹಳ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗ ಇದೆ. ಅಮೆರಿಕಾದಲ್ಲಿ ಪ್ರತೀ ವರ್ಷ ಮುಖೇಶ್ ಅವರ ಹಾಡುಗಳ ರಸಮಂಜರಿ ಕಾರ್ಯಕ್ರಮ ನಡೆಯುತ್ತದೆ.

1976 ಆಗಸ್ಟ್ 27ರಂದು ಅಮೆರಿಕಾದ ಒಂದು ಆರ್ಕೆಸ್ಟ್ರಾ ಕಾರ್ಯಕ್ರಮಕ್ಕೆ ಹಾಡಲು ಹೋಗಿದ್ದಾಗ ಹೃದಯಾಘಾತಕ್ಕೆ ಒಳಗಾಗಿ ಮುಖೇಶ್ ಉಸಿರು ನಿಂತು ಹೋಯಿತು. ಅಲ್ಲಿ ಕೂಡಾ ಆತ ಹಾಡಿದ ಕೊನೆಯ ಹಾಡು ಅದೇ! ದಿಲ್ ಜಲ್ತಾ ಹೈ ತೋ ಜಲ್ನೇ ದೋ! ನೆನಪು ಮಾಡಿಕೊಳ್ಳಿ, ಅದು ಮುಖೇಶ್ ಹಾಡಿದ ಮೊದಲ ಹಾಡು ಕೂಡ ಆಗಿತ್ತು! ಆಗ ಅವರಿಗೆ ಕೇವಲ 53 ವರ್ಷ!

ಅವನ ಸಾವಿರದ ಹಾಡುಗಳನ್ನು ಆರಾಧಿಸುತ್ತಾ ಅವುಗಳನ್ನು ಕಾಲೇಜಿನ ವೇದಿಕೆಯಲ್ಲಿ, ಸ್ಪರ್ಧೆಗಳಲ್ಲಿ ಆರ್ದ್ರವಾಗಿ ಹಾಡುತ್ತ ಇದ್ದ ನನ್ನ ಹಾಗೆ ಇರುವ ಕೋಟಿ ಕೋಟಿ ಅಭಿಮಾನಿಗಳ ಮೇಲೆ ಆತ ಭಾರೀ ದಟ್ಟವಾದ ಪ್ರಭಾವವನ್ನು ಬಿಟ್ಟು ಹೋಗಿದ್ದಾನೆ. ಆತನ ಟಾಪ್ 12 ಹಾಡುಗಳನ್ನು ಪಟ್ಟಿ ಮಾಡಿ ನಿಮ್ಮ ಮುಂದೆ ಇಟ್ಟು ಅವನಿಗೆ ಶ್ರದ್ಧಾಂಜಲಿಯನ್ನು ಕೊಡುತ್ತಿರುವೆ. ಅವನ ಸಾವಿರದ ಹಾಡುಗಳಿಗೆ ಕಿವಿ ಆಗಿ ಆಯ್ತಾ!

೧) ಹೊಂಟೋ ಪೆ ಸಚ್ಚಾಯಿ ರಹತಿ ಹೈ( ಜೀಸ್ ದೇಶ್ ಮೆ ಗಂಗಾ ಬೇಹತಿ ಹೈ)
೨)ದೋಸ್ತ್ ದೋಸ್ತ್ ನಾ ರಹಾ( ಸಂಗಂ)
೩) ಸಾವನ ಕಾ ಮಹೀನಾ ಪವನ್ ಕರೆ ಶೋರ್ (ಮಿಲನ್)
೪) ಬಸ್ ಏಹಿ ಅಪರಾಧ್ ( ಪೆಹಾಚಾನ್)
೫) ಜಾನೆ ಕಹಾನ್ ಗಯೇ ಓ ದಿನ್ (ಮೇರಾ ನಾಮ್ ಜೋಕರ್)
೬) ಕಹೀನ್ ದೂರ್ ಜಬ್ ದಿನ್ ಧಲ ಜಾಯೆ ( ಆನಂದ್)
೭) ಮೈ ನಾ ಭೂಲೂನ್ಗಾ (ರೋಟಿ ಕಪ ಡಾ ಔರ್ ಮಕಾನ್)
೮) ಏಕ್ ದಿನ್ ಭಿಕ್ ಜಾಯೆಗಾ ( ಧರಂ ಕರಂ)
೯) ಕಭೀ ಕಭಿ ಮೇರೆ ದಿಲ್ ಮೆ( ಕಭೀ ಕಭಿ)
೧೦) ಮೇರಾ ಜೂತಾ ಹೈ ಜಪಾನಿ( ಆವಾರ)
೧೧) ತಾಲ್ ಮಿಲೆ ನದೀ ಕೆ ಜಲ್‌ ಮೆ ( ಅನೋಖಿ ರಾತ)
೧೨) ದಿಲ್ ತಡಪ್ ತಡಪ್ ಕೆ ( ಮಧುಮತಿ).

ಸಹಸ್ರಮಾನದ ಆ ಧ್ವನಿಗೆ ಕೋಟಿ ಪ್ರಣಾಮಗಳು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಭೀಮಸೇನ್‌ ಜೋಷಿ ಜನ್ಮಶತಮಾನೋತ್ಸವ, ಮರೆಯದಿರೋಣ ಆ ಮಹಾ ಉತ್ಸವ

Exit mobile version