‘ನ್ಯಾಚುರಲ್ ಐಸ್ ಕ್ರೀಮ್’ (Natural Ice Cream) ಇಂದು ಯಾರಿಗೆ ಗೊತ್ತಿಲ್ಲ ಹೇಳಿ? ವೆನಿಲ್ಲಾ, ಸ್ಟ್ರಾಬೆರಿ, ಚಾಕೊಲೇಟ್ ಮೊದಲಾದ ಕೃತಕ ಫ್ಲೇವರ್‌ಗಳ ಈ ಕಾಲದಲ್ಲಿ ತಾಜಾ ಹಣ್ಣುಗಳ ತಿರುಳನ್ನು (pulp of Fresh furits) ಬೆರೆಸಿ ತಯಾರಿಸಿರುವ ಸ್ವಾದಿಷ್ಟವಾದ ಐಸ್ ಕ್ರೀಂ ಯಾರಿಗೆ ಇಷ್ಟ ಆಗೋದಿಲ್ಲ ಹೇಳಿ?
ಅದು 1984ರಲ್ಲಿ ಮುಂಬೈಯಲ್ಲಿ ಜನ್ಮ ತಾಳಿದ ಮತ್ತು ಇಂದು ಭಾರತದ ನೂರಾರು ಮಹಾನಗರಗಳಿಗೆ ವಿಸ್ತರಿಸಿರುವ ಭಾರತದ ಟಾಪ್ ಮೋಸ್ಟ್ ಐಸ್ ಕ್ರೀಮ್ ಬ್ರಾಂಡ್ ಬೆಳೆದು ನಿಂತ ಕಥೆ! (Raja marga Column) ಅದರ ಹಿಂದಿರುವ ವಿಶನರಿ ಮೂಲತಃ ಒಬ್ಬ ಹಣ್ಣಿನ ವ್ಯಾಪಾರಿಯ ಮಗ. ಅವರು ಮೂಲತಃ ಮುಲ್ಕಿಯವರು. ಹೆಸರು ರಘುನಂದನ್ ಶ್ರೀನಿವಾಸ್ ಕಾಮತ್ (Raghunandan Shrinivas Kamat).
15ನೆಯ ವರ್ಷಕ್ಕೆ ಮುಂಬೈಗೆ ಹೊರಟರು
ಅವರ ತಂದೆ ಮೂಲ್ಕಿಯಲ್ಲಿ ಒಬ್ಬ ಸಣ್ಣ ಹಣ್ಣಿನ ವ್ಯಾಪಾರಿ ಆಗಿದ್ದರು. ಈ ಹುಡುಗ ರಘುನಂದನ್ ಮನೆಯ ಏಳು ಮಂದಿ ಮಕ್ಕಳಲ್ಲಿ ಅತ್ಯಂತ ಕಿರಿಯರು. ಹುಟ್ಟಿದ್ದು 1954ರಲ್ಲಿ. ಮನೆಯಲ್ಲಿ ತೀವ್ರ ಬಡತನ ಇದ್ದ ಕಾರಣ ಶಿಕ್ಷಣ ಅರ್ಧಕ್ಕೆ ನಿಂತಿತು. ಅಪ್ಪನ ಜೊತೆ ಹೋಗಿ ಹಣ್ಣುಗಳನ್ನು ಕಿತ್ತು ತರುವುದು, ಒಳ್ಳೆಯ ಹಣ್ಣುಗಳನ್ನು ಆಯುವುದು ಅವರ ಕೆಲಸ. ಮುಂದೆ ಹಸಿವು ತಡೆಯಲು ಕಷ್ಟ ಆದಾಗ ಹದಿನೈದನೇ ವರ್ಷಕ್ಕೇ ಮುಂಬೈಗೆ ಪ್ರಯಾಣ ಬೆಳೆಸಿದರು.
ಅಲ್ಲಿ ಅವರ ಅಣ್ಣನ ಸಣ್ಣ ಹೋಟೆಲು ಇತ್ತು. ಅಲ್ಲಿ ಕೆಲಸ ಮಾಡುತ್ತ ರಘುನಂದನ್ ಹೋಟೆಲ್ ಕೆಲಸ ಕಲಿತರು. ಅಣ್ಣನ ಹೋಟೆಲಿನಲ್ಲಿ ವಿವಿಧ ಕಂಪೆನಿಯ ಐಸ್ ಕ್ರೀಮ್ ದೊರೆಯುತ್ತಿದ್ದವು. ಅವುಗಳೆಲ್ಲ ಕೃತಕ ಫ್ಲೇವರ್ ಹೊಂದಿದ್ದವು. ನಾವ್ಯಾಕೆ ತಾಜಾ ಹಣ್ಣಿನ ತಿರುಳು ಇರುವ ಐಸ್ ಕ್ರೀಂ ಮಾಡಬಾರದು? ಎಂಬ ಯೋಚನೆಯು ಅವರ ಪುಟ್ಟ ಮೆದುಳಿಗೆ ಬಂದಿತು. ಅದನ್ನು ಅವರ ಅಣ್ಣನ ಜೊತೆಗೆ ಚರ್ಚೆ ಮಾಡಿದಾಗ ಅವರ ಅಣ್ಣ ರಿಸ್ಕ್ ತೆಗೆದುಕೊಳ್ಳಲು ಒಪ್ಪಲಿಲ್ಲ. ಬಂಡವಾಳ ಹಾಕೋದು ಸಾಧ್ಯವೇ ಇಲ್ಲ ಎಂದು ಬಿಟ್ಟರು. ಆದರೆ ರಘುನಂದನ್ ಕನಸು ಸಾಯಲೇ ಇಲ್ಲ.
1983ರಲ್ಲಿ ಜುಹೂನಲ್ಲಿ ಅವರ ಒಂದು ಸಣ್ಣ ಹೋಟೆಲು ಆರಂಭ ಮಾಡಿದರು
ರಘುನಂದನ್ ಆರಂಭ ಮಾಡಿದ 200 ಚದರಡಿ ಜಾಗದ ಉಸಿರು ಕಟ್ಟುವ ಸಣ್ಣ ಹೋಟೆಲು ಅದು. ನಾಲ್ಕು ಜನ ಕೆಲಸದವರು. ಒಟ್ಟು ಆರು ಟೇಬಲ್ಗಳು. ಪಾವ್ ಬಾಜಿ ಮತ್ತು ಕೆಲವೇ ಕೆಲವು ತಾಜಾ ಹಣ್ಣಿನ ಐಸ್ ಕ್ರೀಂ ತಯಾರಿ ಮಾಡಿ ಗ್ರಾಹಕರ ಮುಂದೆ ಅವರು ಇರಿಸಿದರು. ಆರಂಭದಲ್ಲಿ ಅನಾನಸು, ದ್ರಾಕ್ಷಿ, ಪಪ್ಪಾಯ, ಚಿಕ್ಕು, ದಾಳಿಂಬೆ ಮೊದಲಾದ ಹಣ್ಣುಗಳ ಐಸ್ ಕ್ರೀಮಗಳು ರೆಡಿ ಆದವು.
ಮುಂಬೈಯ ಗ್ರಾಹಕರಿಗೆ ಈ ನ್ಯಾಚುರಲ್ ಐಸ್ ಕ್ರೀಂ ಭಾರೀ ಇಷ್ಟ ಆಯ್ತು. ಜನ ಕ್ಯೂ ನಿಂತು ಐಸ್ ಕ್ರೀಮ್ ಚಪ್ಪರಿಸಿ ತಿಂದರು. ಜುಹೂ ನಗರದ ರಸ್ತೆಗಳಲ್ಲಿ ಇವರ ಕ್ರೀಮ್ ಪಾರ್ಲರ್ ಕಾರಣಕ್ಕೆ ಟ್ರಾಫಿಕ್ ಜಾಮ್ ಆಯಿತು! ಒಂದು ವರ್ಷ ಮುಗಿಯುವುದರ ಒಳಗೆ ಹತ್ತು ಹಣ್ಣಿನ ತಿರುಳು ಇರುವ ಐಸ್ ಕ್ರೀಮ್ ಅವರು ರೆಡಿ ಮಾಡಿದ್ದರು. ಜನರಿಗೆ ತುಂಬಾ ತಾಜಾ ಆದ ಹಾಗೂ ಸ್ವಾದಿಷ್ಟತೆ ಇರುವ ಈ ಹಣ್ಣುಗಳ ಐಸ್ ಕ್ರೀಂ ತುಂಬಾನೇ ಇಷ್ಟ ಆಯ್ತು. ಕ್ರಮೇಣ ಪಾವ್ ಭಾಜಿ ನಿಲ್ಲಿಸಿ ಅವರು ಐಸ್ ಕ್ರೀಂ ಕಾರ್ನರ್ ಮಾತ್ರ ರೆಡಿ ಮಾಡಿದರು.
ನ್ಯಾಚುರಲ್ ಐಸ್ ಕ್ರೀಮ್ ಅಂದರೆ ರಾಜಿ ಇಲ್ಲದ ಗುಣಮಟ್ಟ ಮತ್ತು ಸ್ವಾದ
ರಘುನಂದನ್ ಕಾಮತ್ ಅವರ ದಣಿವು ಅರಿಯದ ಉತ್ಸಾಹ, ಸಂಶೋಧನಾ ಪ್ರವೃತ್ತಿ, ಗ್ರಾಹಕರ ಅಭಿರುಚಿಯನ್ನು ರೀಡ್ ಮಾಡುವ ಕೌಶಲ ಮತ್ತು ಗುಣಮಟ್ಟವನ್ನು ಕಾಪಾಡುವ ಆಸ್ತೆ…ಇವುಗಳಿಂದ NATURALS ICE CREAM ಮುಂಬೈ ಮಹಾನಗರದ ಭಾರೀ ದೊಡ್ಡ ಬ್ರಾಂಡ್ ಆಗಿ ಬೆಳೆಯಲು ಹೆಚ್ಚು ವರ್ಷ ಬೇಕಾಗಲಿಲ್ಲ. Taste the original ಅನ್ನುವುದು ಅದರ ಟ್ಯಾಗ್ ಲೈನ್ ಆಗಿತ್ತು.
ಕೇವಲ ಹತ್ತು ವರ್ಷಗಳ ಅವಧಿಯಲ್ಲಿ ಮುಂಬೈಯಲ್ಲಿ ಐದು ಸುಸಜ್ಜಿತ ಕ್ರೀಮ್ ಪಾರ್ಲರ್ ಉದ್ಘಾಟನೆ ಆದವು. ಪೇರಳೆ, ಸೀಯಾಳ, ಹಲಸಿನ ಹಣ್ಣು, ಮಸ್ಕ್ ಮೇಲನ್, ಕಲ್ಲಂಗಡಿ, ಮಾವಿನ ಹಣ್ಣು, ಲಿಚ್ಚಿ, ಫಿಗ್, ಸೀತಾ ಫಲ, ಜಾಮೂನ್, ನೇರಳೆ ಹಣ್ಣುಗಳ ಐಸ್ ಕ್ರೀಂಗಳು ಭಾರೀ ಜನಪ್ರಿಯವಾದವು.
ಜಾಹೀರಾತಿಗೆ ವಿನಿಯೋಗ ಮಾಡಿದ್ದು 1% ದುಡ್ಡು ಮಾತ್ರ!
ಪಾರ್ಲರ್‌ಗಳಲ್ಲಿ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ವಾತಾವರಣ ರೆಡಿ ಆಯ್ತು. ತರಬೇತು ಆದ ಸಿಬ್ಬಂದಿ ವರ್ಗ ಗ್ರಾಹಕರ ಸೇವೆಗೆ ಸಿದ್ಧವಾಯಿತು. ಗುಣಮಟ್ಟ ಮತ್ತು ಸ್ವಾದ ಚೆನ್ನಾಗಿದ್ದ ಕಾರಣ ಕಾಮತರು ಕೇವಲ ಒಂದು ಶೇಕಡಾ ವ್ಯಾಪಾರದ ದುಡ್ಡನ್ನು ಜಾಹೀರಾತಿಗೆ ಖರ್ಚು ಮಾಡಿದರು. ಗ್ರಾಹಕರ ಬಾಯಿಂದ ಬಾಯಿಗೆ ಹರಡುವ ಮೆಚ್ಚುಗೆಯ ಮಾತುಗಳೇ ಕಂಪೆನಿಗೆ ಜಾಹೀರಾತು ಆದವು. ಗ್ರಾಹಕರ ವಿಶ್ವಾಸ ಹೆಚ್ಚಿದಂತೆ ಅವರ ಐಸ್ ಕ್ರೀಂ ಬಹಳ ದೊಡ್ಡ ಬ್ರಾಂಡ್ ಆಗಿ ಬೆಳೆಯಿತು.
ಮುಂದೆ ದೂರದ ಊರುಗಳಿಂದ ಬೇಡಿಕೆ ಬಂದಾಗ ಐಸ್ ಕ್ರೀಂ ಸಾಗಾಟವು ತೊಂದರೆ ಆಯಿತು. ಆಗ ಕಾಮತರು ವಿಶೇಷವಾದ ಥರ್ಮೋಕೊಲ್ ಪ್ಯಾಕೇಜಿಂಗ್ ಇಂಡಸ್ಟ್ರಿ ಆರಂಭ ಮಾಡಿದರು. ಅದರಿಂದ ಐಸ್ ಕ್ರೀಮನ್ನು ದೀರ್ಘ ಕಾಲಕ್ಕೆ ಕಾಪಿಡಲು ಸಾಧ್ಯ ಆಯ್ತು. ರಘುನಂದನ್ ಕಾಮತ್ ಅವರ ಉತ್ಸಾಹಕ್ಕೆ ಎಣೆಯೇ ಇರಲಿಲ್ಲ. ಅವರು ಶುದ್ಧವಾದ ಹಾಲು, ತಾಜಾ ತೋಟದ ಹಣ್ಣುಗಳು ಇಡೀ ವರ್ಷ ದೊರೆಯುವಂತೆ ಮಾಡಿದರು. ಕೆಲವೇ ಕೆಲವು ಸೀಸನಲ್ ಹಣ್ಣುಗಳ ಐಸ್ ಕ್ರೀಮ್ ಕೂಡ ಸಿದ್ಧವಾಯಿತು. ಹಣ್ಣುಗಳನ್ನು ಅವರು ರೈತರಿಂದ ನೇರ ಖರೀದಿ ಮಾಡಿದರು. ಇದೆಲ್ಲದರ ಫಲವಾಗಿ ನ್ಯಾಚುರಲ್ ಐಸ್ ಕ್ರೀಂ ಕಂಪೆನಿ ಮುಂಬೈ ಮಹಾನಗರದ ಹೊರಗೆ ತನ್ನ ಶಾಖೆಗಳನ್ನು ತೆರೆಯಿತು. ಫ್ರಾಂಚೈಸಿಗಳಿಗೆ ಬೇಡಿಕೆ ಬಂದಿತು.
ನ್ಯಾಚುರಲ್ ಐಸ್ ಕ್ರೀಂ ಬ್ರಾಂಡಿನ ಸೀಮೋಲ್ಲಂಘನ!
2015ರ ಹೊತ್ತಿಗೆ ಕಂಪೆನಿಯು 125 ಹಣ್ಣುಗಳ ತಿರುಳು ಇರುವ ಐಸ್ ಕ್ರೀಮ್ ರೆಡಿ ಮಾಡಿತು. ನೂರು ಕೋಟಿ ಟರ್ನ್ ಓವರ್ ದಾಖಲು ಮಾಡಿತು. ಭಾರತದ ನೂರಾರು ನಗರಗಳನ್ನು ತಲುಪಿತು. ಕೋಟಿ ಕೋಟಿ ಗ್ರಾಹಕರ ನಾಲಗೆಯಲ್ಲಿ ಸ್ವಾದದ ಸಿಗ್ನೇಚರ್ ಮಾಡಿ ಜನಪ್ರಿಯ ಆಯಿತು. 2020ರ ಹೊತ್ತಿಗೆ ಕಂಪೆನಿಯು 330 ಕೋಟಿ ಟರ್ನ್ ಓವರ್ ದಾಖಲಿಸಿ ಭಾರೀ ದೊಡ್ಡ ದಾಖಲೆ ಮಾಡಿತು. ಒಮ್ಮೆ 2009ರಲ್ಲಿ 3000 ಕಿಲೋಗ್ರಾಂ ತೂಗುವ ಒಂದೇ ಫ್ಲೇವರ್ ಇರುವ ಕ್ರೀಮ್ ಸ್ಲಾಬ್ ರೆಡಿ ಮಾಡಿ ಲಿಮ್ಕಾ ದಾಖಲೆ ಬರೆಯಿತು. ಅವರ ಸೌತೆಕಾಯೀ ತಿರುಳಿನ ಐಸ್ ಕ್ರೀಂ ರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆಯಿತು.
ಈಗ 2023ರಲ್ಲಿ ನ್ಯಾಚುರಲ್ ಐಸ್ ಕ್ರೀಂಗೆ ಸ್ಪರ್ಧೆಯೇ ಇಲ್ಲ!
ಈಗ ರಘುನಂದನ್ ಕಾಮತ್ ಅವರ ಮಗ ಸಿದ್ಧಾಂತ ಕಾಮತ್ ಅಪ್ಪನ ಉದ್ಯಮದಲ್ಲಿ ಕೈ ಜೋಡಿಸಿದ್ದಾರೆ. ಭಾರತದ 150 ಮಹಾ ನಗರಗಳಲ್ಲಿ ಇಂದು ನ್ಯಾಚುರಲ್ ಐಸ್ ಕ್ರೀಮಿನ ಔಟ್ ಲೆಟ್ ಇವೆ. ಹನ್ನೊಂದು ರಾಜ್ಯಗಳ ಮಾರ್ಕೆಟ್ ಗೆದ್ದು ಆಗಿದೆ. ನೂರಾ ಹತ್ತೊಂಬತ್ತು ಫ್ರಾಂಚೈಸಿ ಸ್ಟೋರ್ ಇವೆ. ವಿದೇಶದ ನಗರಗಳಿಗೆ ನ್ಯಾಚುರಲ್ ಐಸ್ ಕ್ರೀಂ ತಲುಪಿಸುವ ಪ್ರಯತ್ನಗಳು ಆರಂಭ ಆಗಿವೆ. ಇಂದು ನ್ಯಾಚುರಲ್ ಐಸ್ ಕ್ರೀಂ ಭಾರತದ ಟಾಪ್ ಥ್ರೀ ಫ್ಲೇವರ್‌ಗಳಲ್ಲಿ ಸ್ಥಾನ ಪಡೆದಿದೆ! ಅದರ ಹಿಂದೆ ರಘುನಂದನ್ ಕಾಮತ್ ಎಂಬ ಉದ್ಯಮಿಯ ಪರಿಶ್ರಮ ಇದೆ.
ರಘುನಂದನ್ ಕಾಮತ್ ಸಜ್ಜನಿಕೆಯ ಸಾಕಾರ ಮೂರ್ತಿ
ಅಂತಹ ರಘುನಂದನ್ ಕಾಮತ್ ಅವರನ್ನು ಒಂದು ಸಮ್ಮೇಳನದಲ್ಲಿ ನಾನು ಭೇಟಿ ಮಾಡಿದ್ದೆ. ಅಂದು ಅವರು ಮಾತಾಡುತ್ತ ಹೇಳಿದ ಮಾತು ನನಗೆ ಅದ್ಭುತವಾದ ಸ್ಫೂರ್ತಿ ನೀಡಿತ್ತು.
‘ವೆನಿಲ್ಲಾ, ಸ್ಟ್ರಾಬೆರಿ, ಚಾಕೊಲೇಟ್ ಮೊದಲಾದ ಕೃತಕ ಫ್ಲೇವರ್ ರೆಡಿ ಮಾಡಲು ನಾನು ಹೊರಟಿದ್ದರೆ ಇಷ್ಟೆಲ್ಲ ಕಷ್ಟ ಪಡುವ ಅಗತ್ಯವೇ ಇರಲಿಲ್ಲ. ಗ್ರಾಹಕರಿಗೆ ತಾಜಾ ಹಣ್ಣುಗಳ ಸಿಹಿಯನ್ನು ಐಸ್ ಕ್ರೀಂ ಮಾಧ್ಯಮದ ಮೂಲಕ ತಲುಪಿಸಬೇಕು ಎಂಬುದು ನನ್ನ ಬಯಕೆ ಆಗಿತ್ತು. ಜನರಿಗೂ ಅದು ಇಷ್ಟ ಆಯ್ತು. ಇದು ನನ್ನ ಸಾಧನೆ ಏನೂ ಇಲ್ಲ. ನಾನು ನಂಬಿರುವ ದೇವರು ನನ್ನ ಕೈಯನ್ನು ಹಿಡಿದು ಮುನ್ನಡೆಸುತ್ತಿದ್ದಾರೆ ‘ಎಂದಿದ್ದರು.
ಇದನ್ನೂ ಓದಿ: Raja Marga column : ಜನ ಮನ ಅವರಿಸಿದ ಪೀಪಲ್ಸ್ ಪ್ರೆಸಿಡೆಂಟ್; ಕಲಾಂ ಸರ್ ಪ್ರೀತಿಸಲು ನೂರಾರು ಕಾರಣ
ಭರತ ವಾಕ್ಯ
ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಹೆಚ್ಚಿನ ನಗರಗಳಲ್ಲಿ ನ್ಯಾಚುರಲ್ ಐಸ್ ಕ್ರೀಂ ಔಟ್‌ಲೆಟ್‌ಗಳು ಇವೆ. ಒಮ್ಮೆ ಭೇಟಿ ಕೊಡಿ ಮತ್ತು ತೋಟದ ಹಣ್ಣುಗಳ ಫ್ರೆಶ್ ರುಚಿ ಇರುವ ಐಸ್ ಕ್ರೀಂ ನೀವು ಸವಿದು ಇಷ್ಟ ಪಟ್ಟರೆ ರಘುನಂದನ್ ಕಾಮತ್ ಅವರಿಗೊಂದು ಮನಸಿನಲ್ಲಿ ಥ್ಯಾಂಕ್ಸ್ ಹೇಳಿ.