ಒಬ್ಬ ವ್ಯಕ್ತಿತ್ವ ವಿಕಸನದ ತರಬೇತುದಾರನಾಗಿ ನಾನು ತುಂಬಾ ಓದುತ್ತೇನೆ. ಓದು ನನಗೆ ಅನಿವಾರ್ಯ ವ್ಯಸನ! ನಾನು ಓದಿರುವ ಸಾವಿರಾರು ಪುಸ್ತಕಗಳಲ್ಲಿ ನನ್ನನ್ನು ಗಾಢವಾಗಿ ತಟ್ಟಿದ ಪುಸ್ತಕ ಇದು. ಅದನ್ನು ಓದುತ್ತಾ ಹೋದಂತೆ ಕಣ್ಣೀರು ಸ್ಫೋಟವಾಗಿ ಗಲ್ಲದ ಮೇಲೆ ನೀರಾಗಿ ಹೋಯಿತು ಅಂದರೆ ಅದು ಉತ್ಪ್ರೇಕ್ಷೆ ಅಲ್ಲ! ಅದು ಸೂಕ್ಷ್ಮ ಭಾವನೆಯವರಿಗೆ ಮಾತ್ರ ಅರ್ಥ ಆಗುವ ಫೀಲ್!
ಆ ಪುಸ್ತಕದ ಹೆಸರು – ದ ಲಾಸ್ಟ್ ಲೆಕ್ಚರ್!
ಬರೆದವರು – ಖ್ಯಾತ ಶಿಕ್ಷಕ ರಾಂಡಿ ಪಾಷ್ ಮತ್ತು ಜೆಫ್ರಿ ಜಸ್ಲೋ.
ಕನ್ನಡಕ್ಕೆ ಅನುವಾದ ಮಾಡಿದವರು – ಎಸ್. ಉಮೇಶ್.
ಯಾರೀ ರಾಂಡಿ ಪಾಶ್?
ಆತನನ್ನು ಜನರು ‘ಪಿಟ್ಸ್‌ಬರ್ಗ್‌ನ ಸಂತ ‘ಎಂದು ಕರೆದರು! ಕೇವಲ 47 ವರ್ಷ ಮಾತ್ರ ಬದುಕಿದ್ದ ರಾಂಡಿ ಮುಂದಾಗುವುದನ್ನು ಮೊದಲೇ ಗ್ರಹಿಸಿದ ಹಾಗೆ ಬದುಕಿದ! ಒಂದರ ಹಿಂದೆ ಒಂದು ಕನಸು ಕಂಡ. ತನ್ನ ಎಲ್ಲ ಕನಸುಗಳನ್ನು ನನಸು ಮಾಡಿ ಇನ್ನು ಮುಗಿಯಿತು, ಇದೋ ಹೊರಟೆ! ಎಂಬ ಹಾಗೆ ಹೊರಟುಹೋದ.
ರಾಂಡಿ ಹುಟ್ಟಿದ್ದು ಅಮೆರಿಕಾದಲ್ಲಿ. ಆತ ಮಹಾ ಪ್ರತಿಭಾವಂತ. ಆತ ವೃತ್ತಿಯಿಂದ ಒಬ್ಬ ಕಂಪ್ಯೂಟರ್ ವಿಜ್ಞಾನಿ. ಅವನಿಗೆ ದೊಡ್ಡ ಸಂಬಳದ ನೌಕರಿ ಇತ್ತು! ಸಮಾಜದಲ್ಲಿ ದೊಡ್ಡ ಹೆಸರಿತ್ತು! ದಂತದ ಗೊಂಬೆಯ ಹಾಗಿರುವ ಹೆಂಡತಿ ಇದ್ದಳು! ಅರಮನೆಯ ಹಾಗಿದ್ದ ಬಂಗಲೆ ಇತ್ತು! ಮೂರು ತಲೆಮಾರುಗಳಿಗೆ ಬೇಕಾದಷ್ಟು ಬ್ಯಾಂಕ್ ಬ್ಯಾಲೆನ್ಸ್ ಇತ್ತು! ಮೂವರು ಬುದ್ಧಿವಂತ ಮಕ್ಕಳು ಇದ್ದರು. ಅವನಿಗೆ ಎಲ್ಲವೂ ಕಠಿಣ ದುಡಿಮೆಯಿಂದ ದೊರಕಿತ್ತು. ಅವನಿಗೆ ಸಾವಿರಾರು ಜನ ಅಭಿಮಾನಿಗಳು ಇದ್ದರು. ಅವನು ಕಂಡಿದ್ದ ಅಷ್ಟೂ ಕನಸುಗಳು ಆತನ ಕಾಲ ಬುಡಕ್ಕೆ ಬಂದು ಬಿದ್ದಾಗಿತ್ತು! ನಾನು ಜಗತ್ತಿನ ಅತ್ಯಂತ ದೊಡ್ಡ ಸೆಲೆಬ್ರಿಟಿ ಎಂದು ಭಾವಿಸುವ ಹೊತ್ತಿನಲ್ಲಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಆತನನ್ನು ಆವರಿಸಿದ್ದು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್!
ಸಾವನ್ನು ಎದುರಿಸಲು ಮಾನಸಿಕ ಸಿದ್ಧತೆ!
ಕ್ಯಾನ್ಸರ್ ಮೊದಲ ಬಾರಿಗೆ ಟ್ರೇಸ್ ಆದಾಗ ಆತನು ಭರವಸೆ ಕಳೆದುಕೊಳ್ಳಲಿಲ್ಲ. ತನ್ನ ಆಪ್ತ ಗೆಳೆಯನಾಗಿದ್ದ ಡಾಕ್ಟರ್ ಮುಂದೆ ಕೂತು ಎಲ್ಲ ಪರೀಕ್ಷೆಗಳನ್ನು ಮಾಡಿಕೊಂಡ. ಆ ವೈದ್ಯನ ಮೇಲೆ ರಾಂಡಿಗೆ ಭಾರಿ ಭರವಸೆ. ಆದರೆ ಆ ಡಾಕ್ಟರ್ ಅವನ ಹೆಗಲ ಮೇಲೆ ಕೈ ಹಾಕಿ ಪ್ರೀತಿಯಿಂದ ಹೇಳಿದ ಮಾತು – ಸಾರಿ ಡಿಯರ್! ಕ್ಯಾನ್ಸರ್ ನಿನ್ನ ದೇಹವನ್ನು ಆಕ್ರಮಿಸಿ ಆಗಿದೆ!
ಯಾರ ವಿರುದ್ಧ ಆದರೂ ಹೋರಾಡಬಹುದು. ಆದರೆ, ಸಾವಿನ ವಿರುದ್ಧ ಹೋರಾಡಿ ಗೆದ್ದವರು ಇದ್ದಾರಾ? ಸಾವು ಖಂಡಿತ ಎಂದು ಗೊತ್ತಾದಾಗ ರಾಂಡಿ ಅದನ್ನು ಎದುರಿಸಲು ಮಾನಸಿಕವಾಗಿ ಸಿದ್ಧತೆ ಮಾಡಿದನು. ಪ್ರೀತಿಯ ಹೆಂಡತಿ ಜೈ ಜೋರಾಗಿ ಕಣ್ಣೀರು ಹಾಕಿದಳು. ಆಕೆಯ ಕಣ್ಣೀರು ಒರೆಸುತ್ತಾ ರಾಂಡಿ ಹೇಳಿದ ಒಂದೇ ಮಾತು – ಜೈ ಡಾರ್ಲಿಂಗ್! ಅಳಬೇಡ. ನನ್ನ ಅನುಪಸ್ಥಿತಿಯಲ್ಲಿ ನೀನು ಬದುಕಲು ಕಲಿಯಬೇಕು!
ತನ್ನ ವೀಲುನಾಮೆ ಇತ್ಯಾದಿ ಆತ ಬೇಗ ಬೇಗನೆ ಮುಗಿಸಿಕೊಂಡ. ಮಕ್ಕಳ ಭವಿಷ್ಯಕ್ಕೆ ಏನೆಲ್ಲ ಮಾಡಲು ಸಾಧ್ಯ ಇದೆಯೋ ಅದನ್ನೆಲ್ಲ ಮಾಡಿದ! ಹೆಂಡತಿಗೆ ಧೈರ್ಯ ತುಂಬಿಸಿದ.
ದ ಲಾಸ್ಟ್ ಲೆಕ್ಚರ್ ರೂಪುಗೊಂಡದ್ದು ಹೇಗೆ?
ಅಮೆರಿಕಾದಲ್ಲಿ ಒಬ್ಬ ದೊಡ್ಡ ಸಾಧಕ ಸಾವಿನ ಮನೆಯ ಕದ ತಟ್ಟುತ್ತ ಇದ್ದಾನೆ ಎಂದು ಖಚಿತ ಆದಾಗ ಒಂದು ಸಂಪ್ರದಾಯ ಇದೆ. ಆತನ ಅಥವ ಆಕೆಯ ಸಮಾನ ಮನಸ್ಕರು ಒಂದು ಕಡೆ ಸೇರಿ ಒಂದು ಉಪನ್ಯಾಸ ಕೇಳಲು ಸಿದ್ಧರಾಗುತ್ತಾರೆ. ಸಾಯಲು ಹೊರಟ ವ್ಯಕ್ತಿ ತನ್ನ ಜೀವನದ ಸತ್ಯ ಘಟನೆಗಳನ್ನು ಒಂದು ಉಪನ್ಯಾಸ ರೂಪದಲ್ಲಿ ಅವರ ಮುಂದೆ ಇಡುತ್ತಾನೆ. ತನ್ನ ಬದುಕಿನ ಕಪ್ಪು ಪುಟಗಳನ್ನು ಕೂಡ ಆತ ಹೇಳಲು ಹಿಂಜರಿಯುವುದಿಲ್ಲ. ಅದನ್ನು ‘ಲಾಸ್ಟ್ ಲೆಕ್ಚರ್’ ಎಂದು ಕರೆಯುತ್ತಾರೆ. ರಾಂಡಿ ಪಾಶ್ ತನ್ನ ಗೆಳೆಯರಿಂದ ವಿನಂತಿ ಬಂದಾಗ ಖುಷಿಯಿಂದ ಒಪ್ಪಿಕೊಂಡ. ಸ್ಥಿತಪ್ರಜ್ಞನಾಗಿ ಮಾತಾಡಲು ನಿಂತ. ಆತನ ಒಂದೂಕಾಲು ಘಂಟೆಯ ಉಪನ್ಯಾಸದ ಒಟ್ಟು ಸಾರಾಂಶವೆ ಈ ಪುಸ್ತಕ – ದ ಲಾಸ್ಟ್ ಲೆಕ್ಚರ್!
ಏನಿದೆ ಆ ಪುಸ್ತಕದಲ್ಲಿ?
ರಾಂಡಿ ಪಾಷ್ ಮಾಡಿದ ಆ ಉಪನ್ಯಾಸದಲ್ಲಿ ಆತನ ಜೀವನ ಪ್ರೀತಿ ಇದೆ. ಆತನ ಪ್ರೇಮ ಕಥೆಯಿದೆ. ಬಾಳಿನ ವ್ಯಥೆ ಇದೆ. ಎಲ್ಲರನ್ನೂ ಬಿಟ್ಟು ಹೋಗುತ್ತಿರುವ ನೋವಿದೆ. ಸಂಕಟವಿದೆ. ತನಗೆ ಬದುಕಲ್ಲಿ ತುಂಬು ಪ್ರೀತಿಯನ್ನು ಕೊಟ್ಟವರ ಬಗ್ಗೆ ಗಂಟಲು ಕಟ್ಟುವ ಕೃತಜ್ಞತೆ ಇದೆ. ಸೋಲುಗಳ ಬಗ್ಗೆ ತಿರಸ್ಕಾರ ಇದೆ. ಬದುಕಿನ ಬಗ್ಗೆ ಅಗಾಧ ಪ್ರೀತಿ ಇದೆ. ಕನಸುಗಳನ್ನು ಸಾಕ್ಷಾತ್ಕಾರ ಮಾಡಿದ ಬಗ್ಗೆ ಆನಂದ ಬಾಷ್ಪ ಇದೆ. ಮಾಡದೆ ಬಾಕಿ ಉಳಿದ ಕೆಲಸಗಳ ಬಗ್ಗೆ ಒಂದಿಷ್ಟು ವಿಷಾದ ಇದೆ!
“ತುಂಬಿದ ನಗೆಯನ್ನು ತುಟಿಯಲ್ಲಿ ತುಂಬಿಕೊಂಡು ಈ ಜಗತ್ತನ್ನು ಬಿಟ್ಟು ಹೋಗುತ್ತಿದ್ದೇನೆ! ನನ್ನ ಎಲ್ಲ ಇಗೋ ಸುಟ್ಟುಕೊಂಡು ಬರಿಗೈಯಿಂದ ಹೊರಡುತ್ತೇನೆ. ನಿಮ್ಮ ಹಾರೈಕೆ ನನಗಿರಲಿ!” ಎಂದು ಹೇಳುತ್ತ ರಾಂಡಿ ತನ್ನ ಉಪನ್ಯಾಸವನ್ನು ಮುಗಿಸುತ್ತಾನೆ.
ಅದರಲ್ಲಿ ನೂರಾರು ಹೃದಯ ಹಿಂಡುವ ಘಟನೆಗಳು ಇವೆ. ಅವನು ಉಪನ್ಯಾಸ ಕೊಡಲು ಹೊರಡುವ ದಿನ ಆತನ ಪ್ರೀತಿಯ ಹೆಂಡತಿ ಜೈ ಅವರ 41ನೆಯ ಹುಟ್ಟುಹಬ್ಬ. ಆಕೆಯ ಹಣೆಯ ಮೇಲೆ ಒಂದು ಮುತ್ತು ಕೊಟ್ಟು ಹೊರಡುವಾಗ ಆಕೆ ಹೇಳಿದ ಮಾತು – “ರಾಂಡಿ, ನನ್ನನ್ನು ಬಿಟ್ಟು ದೂರ ಹೋಗಲು ನಿನಗೆ ಮನಸ್ಸಾದರೂ ಹೇಗೆ ಬಂತು?”
ರಾಂಡಿಗೆ ಕ್ಯಾನ್ಸರ್ ಬಂದಾಗಿನಿಂದ ತನ್ನ ಹೆಂಡತಿಯ ಎಲ್ಲ ಆಸೆಗಳನ್ನು ಪೂರ್ತಿ ಮಾಡುವ ಶಪಥ ಮಾಡಿ ಓಡುತ್ತಿದ್ದ.
ಆ ‘ ಲಾಸ್ಟ್ ಲೆಕ್ಚರ್’ ವಿಡಿಯೊ ತುಂಬ ಭಾವಪೂರ್ಣ ಆಗಿದೆ. ರಾಂಡಿ ಒಂದಿಷ್ಟೂ ಭಾವಾವೇಶಕ್ಕೆ ಒಳಗಾಗದೆ ಒಂದೂಕಾಲು ಘಂಟೆ ಮಾತಾಡಿದ್ದಾನೆ. ಆ ವಿಡಿಯೊವನ್ನು ಈವರೆಗೆ ಒಂದು ಕೋಟಿ ಮಂದಿ ವೀಕ್ಷಣೆ ಮಾಡಿದ್ದಾರೆ! ಈಗಲೂ ವೀಕ್ಷಣೆ ಮಾಡುತ್ತಾ ಇದ್ದಾರೆ. ಅದು ಪುಸ್ತಕವಾಗಿ ಬಂದ ನಂತರ ಈವರೆಗೆ 34 ಲಕ್ಷ ಮಂದಿ ಆ ಪುಸ್ತಕವನ್ನು ಓದಿದ್ದಾರೆ! ಅದರಲ್ಲಿ 53 ಅಧ್ಯಾಯಗಳು ಇವೆ. ಪುಸ್ತಕ ಓದಿದ ಲಕ್ಷ ಲಕ್ಷ ಮಂದಿ ಕಣ್ಣೀರು ಹಾಕಿದ್ದಾರೆ. ಎಷ್ಟೋ ಜನರು ಆ ಪುಸ್ತಕ ಓದಿ ತಮ್ಮ ಬದುಕಿನ ದಿಕ್ಕನ್ನೇ ಬದಲಾವಣೆ ಮಾಡಿಕೊಂಡಿದ್ದಾರೆ! ಜಗತ್ತಿನ ಅತ್ಯಂತ ಜನಪ್ರಿಯ ಪುಸ್ತಕ ಅದು! 2008ರಲ್ಲಿ ನಮ್ಮನ್ನು ಅಗಲಿದ ರಾಂಡಿಗೆ ನಾವು ಅರ್ಪಿಸುವ ನಿಜವಾದ ಶೃದ್ಧಾಂಜಲಿ ಎಂದರೆ ಆ ಪುಸ್ತಕವನ್ನು ಓದುವುದು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಎಷ್ಟು ವೈವಿಧ್ಯಮಯ, ಎನಿತು ವಿಸ್ಮಯವೀ ಜಗತ್ತು! ಇಲ್ಲಿವೆ 40 ಅದ್ಭುತ ಸಂಗತಿಗಳು!