ಬಾಲಿವುಡ್ (Bollywood) ನಟಿ ವಿದ್ಯಾ ಬಾಲನ್ (Vidya Balan) ಬದುಕು ಅಪಮಾನ, ತಿರಸ್ಕಾರ, ನೋವು ಇವೆಲ್ಲದರ ಮೊತ್ತ! ಅದೊಂದು ತೆರೆದಿಟ್ಟ ಪುಸ್ತಕ. ಆಕೆಯೇ ಹೇಳುವಂತೆ ಅವರ ಬದುಕಿನಲ್ಲಿ ಯಾವುದನ್ನೂ ಮುಚ್ಚಿಡಲು ಇಲ್ಲ. ಆಕೆಯನ್ನು ಒಂದು ಕಾಲದಲ್ಲಿ ಐರನ್ ಲೆಗ್ ಲೇಡಿ ಎನ್ನುತ್ತಿದ್ದರು. ಆದರೆ, ಇಂದು ಬಾಲಿವುಡ್‌ನ ನಾಲ್ಕನೇ ಖಾನ್ (ರಾಜ ಮಾರ್ಗ ಅಂಕಣ)!
ಸಿನಿಮಾಕ್ಕಾಗಿ ಎಲ್ಲವನ್ನೂ ಕಲಿತರು
ಆಕೆಯು ಹುಟ್ಟಿದ್ದು ಕೇರಳದ ಒತ್ತುಪಾಲಂ ಎಂಬಲ್ಲಿ. ಬೆಳೆದದ್ದು ಮಾತ್ರ ಮುಂಬೈಯಲ್ಲಿ. ಆಕೆ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ಶಾಸ್ತ್ರೀಯ ಭರತನಾಟ್ಯ, ಕಥಕ್, ಶಾಸ್ತ್ರೀಯ ಸಂಗೀತಗಳನ್ನೂ ಕಲಿತವರು. ತನ್ನೊಳಗೆ ಅದ್ಭುತವಾದ ಅಭಿನಯ ಪ್ರತಿಭೆ ಇದೆ, ತಾನು ಇಂದಲ್ಲ ನಾಳೆ ಬೆಳ್ಳಿಪರದೆಯಲ್ಲಿ ಮಹಾರಾಣಿ ಆಗಿ ಮೆರೆಯುತ್ತೇನೆ ಎಂದು ಬಲವಾಗಿ ನಂಬಿದವರು. 16ನೆಯ ವರ್ಷಕ್ಕೆ ಏಕತಾ ಕಪೂರ್ ಅವರ ‘ಹಮ್ ಪಾಂಚ್’ ಧಾರಾವಾಹಿಯಲ್ಲಿ ಮಿಂಚಿದರು. ಆದರೆ ಅವರ ಸಿನೆಮಾ ಪ್ರವೇಶದ ಹಾದಿಯು ತುಂಬಾ ಕಠಿಣ ಮತ್ತು ದುರ್ಗಮವಾಗಿತ್ತು. ಅವರ ಕುಟುಂಬದ ಯಾರೂ ಸಿನಿಮಾದಲ್ಲಿ ಇರಲಿಲ್ಲ. ಗಾಡ್ ಫಾದರ್ ಇಲ್ಲದೆ ಬಾಲಿವುಡ್‌ನಲ್ಲಿ ಹೆಜ್ಜೆ ಊರಲು ಸಾಧ್ಯವೇ ಇರಲಿಲ್ಲ.
ಸಾಲು ಸಾಲು ಸೋಲುಗಳು, ಅಪಮಾನಗಳು
ಬಂಗಾಳಿ ಭಾಷೆಯ ‘ಭಾಲೋ ತೇಕೊ’ ಆಕೆಯ ಮೊದಲ ಫಿಲ್ಮ್. ಅದರಲ್ಲಿ ಮುಗ್ಧ ಆನಂದಿಯ ಪಾತ್ರವು ಅವರಿಗೆ ಬಂಗಾಳದ ರಾಜ್ಯಪ್ರಶಸ್ತಿಯನ್ನೇ ತಂದುಕೊಟ್ಟಿತು. ಮುಂದೆ ಅವರು ದಕ್ಷಿಣ ಭಾರತದ ಸಿನಿಮಾಗಳ ಕಡೆಗೆ ಗಮನ ಹರಿಸುತ್ತಾರೆ. ಅಲ್ಲಿ ಆರಂಭವಾಯಿತು ನೋಡಿ ಸಾಲು ಸಾಲು ಸೋಲುಗಳು. ಮೋಹನ್ ಲಾಲ್ ಜೊತೆಗೆ ಆಕೆಯ ಮೊದಲ ಚಿತ್ರದ ಶೂಟಿಂಗ್ ಅರ್ಧಕ್ಕೇ ನಿಂತಿತು. ಮುಂದಿನದು ಅರ್ಧ ಭಾಗ ಶೂಟಿಂಗ್ ಆದ ನಂತರ ಅವರ ಪಾತ್ರಕ್ಕೆ ಮೀರಾ ಜಾಸ್ಮಿನ್ ಬಂದರು. ಮತ್ತೊಂದರಲ್ಲಿ ಕೂಡ ಅವರ ಜಾಗದಲ್ಲಿ ತ್ರಿಷಾ ಕೃಷ್ಣನ್ ರಿಪ್ಲೇಸ್ ಆದರು. ನಂತರ ಅವರು ನಟಿಸಿದ ಹಲವಾರು ಸಿನಿಮಾದಲ್ಲಿ ಅವರ ಅಭಿನಯದ ದೃಶ್ಯಗಳಿಗೆ ಕತ್ತರಿ ಪ್ರಯೋಗ ಆಯಿತು. ಮೂರು ವರ್ಷಗಳ ಅವಧಿಯಲ್ಲಿ 12 ಮಲಯಾಳಂ ಸಿನಿಮಾಗಳಿಂದ ಅವರನ್ನು ವಸ್ತುಶಃ ಹೊರದಬ್ಬಲಾಯಿತು!
ಜನರು ಅವರನ್ನು’ಐರನ್ ಲೆಗ್ ಲೇಡಿ’ ಎಂದು ಕರೆದರು
ಜನರು ಅವರನ್ನು ದುರದೃಷ್ಟದ ನಟಿ ಎಂಬ ಹಣೆ ಪಟ್ಟಿ ಹಚ್ಚಿ ಕರೆದರು. ಕೆಲವರು ಆಕೆಯನ್ನು ಓವರ್ ವೇಯ್ಟ್ ಎಂದರು. ಮುಖ ‘ಫೋಟೊಜೆನಿಕ್’ ಅಲ್ಲ ಅಂದರು. ಡ್ರೆಸ್ಸಿಂಗ್ ಸೆನ್ಸ್ ಇಲ್ಲ ಅಂದರು. ನಮ್ಮ ಸಿ- ಗ್ರೇಡ್ ಸಿನಿಮಾದಲ್ಲಿ ನಟಿಸುವೆಯಾ ಎಂದು ಕೇಳಿದರು! ದಕ್ಷಿಣ ಭಾರತದ ಸಿನಿಮಾಗಳು ಅವರಿಗೆ ಯಾವ ಹೆಸರನ್ನೂ ತಂದುಕೊಡಲಿಲ್ಲ.
ಆದರೆ ಅವರ ನಿಜವಾದ ಕನಸು ಇದ್ದದ್ದು ಹಿಂದಿ ಸಿನಿಮಾ ರಂಗದಲ್ಲಿ
ಬಂಗಾಳಿ ಕಾದಂಬರಿ ಆಧಾರಿತ ಹಿಂದಿ ಚಿತ್ರಕ್ಕೆ (ಪರಿನೀತಾ) ಅವರಿಗೆ ಆಹ್ವಾನ ಬಂದಾಗ ಸ್ವರ್ಗಕ್ಕೆ ಮೂರೇ ಗೇಣು ಅಂತ ಅವರು ಭಾವಿಸಿದ್ದರು. ಆದರೆ ಅಲ್ಲೂ ಅವಮಾನಗಳ ಪರಂಪರೆಯು ಮುಂದುವರಿಯಿತು. ಚಿತ್ರ ನಿರ್ಮಾಪಕ ವಿಧು ವಿನೋದ್ ಚೋಪ್ರಾ ಅವರನ್ನು ಆರು ತಿಂಗಳ ಕಾಲ ಆಡಿಷನ್ ಎಂದು ಮಾನಸಿಕ ಹಿಂಸೆ ಕೊಟ್ಟರು. ಇಡೀ ದಿನ ಅವರು ಅಮ್ಮನ ಜೊತೆ ವಿಧು ಚೋಪ್ರಾ ಆಫೀಸಿನ ಮುಂದೆ ಬಾಗಿಲು ಕಾಯಬೇಕಾಯಿತು.
‘ಪರಿನೀತಾ’ ಬಿಡುಗಡೆ ಆದಾಗ ಜನ ಸೌಂದರ್ಯ ದೇವತೆ ಎಂದು ಕರೆದರು
ಮುಂದೆ ಆ ಸಿನಿಮಾ ರಿಲೀಸ್ ಆದಾಗ ಸಿನಿಮಾ ವಿಮರ್ಶಕರು ಆಕೆಯ ಸೌಂದರ್ಯ ಮತ್ತು ಅಭಿನಯ ಸಾಮರ್ಥ್ಯಕ್ಕೆ ಬೆರಗಾದರು. ಆದರೆ ಬಾಲಿವುಡ್ ಪಂಡಿತರ ಅಪಸ್ವರ ನಿಲ್ಲಲೇ ಇಲ್ಲ! “ಅವಳ ಮಾತಲ್ಲಿ ಮಲಯಾಳಿ ಅಸೆಂಟ್ ಇದೆ. ಮಾಡರ್ನ್ ಲುಕ್ ಇಲ್ಲ, ಸೀರೆ ಬಿಟ್ಟರೆ ಬೇರೆ ಯಾವ ಡ್ರೆಸ್ ಕೂಡ ಸೂಟ್ ಆಗೋಲ್ಲ” ಹೀಗೆ ಏನೇನೋ ಕುಹಕದ ನುಡಿಗಳು! ಕಟಕಿಯ ಮಾತುಗಳು! ಬೇರೆ ಯಾರಾದರೂ ಕುಸಿದು ಹೋಗುತ್ತಿದ್ದರು. ಆದರೆ ಆಕೆ ಮಹಾ ತಾಳ್ಮೆಯ ಸಾಕಾರ ಮೂರ್ತಿ.
ತನ್ನ ಅಭಿನಯ, ತನ್ನ ಪಾತ್ರ, ತನ್ನ ಸಿನಿಮಾ ಇಷ್ಟು ಮಾತ್ರ ಆಕೆಯ ಜಗತ್ತು. ಒಂದೊಂದು ಪಾತ್ರದಲ್ಲೂ ಪರಕಾಯ ಪ್ರವೇಶ ಆಕೆಗೆ ಸಲೀಸು. ಅದರಿಂದಾಗಿ ಮುಂದೆ ಲಗೇ ರಹೋ ಮುನ್ನಾ ಭಾಯಿ, ಇಷ್ಕೀಯ, ಡರ್ಟಿ ಪಿಕ್ಚರ್, ಕಹಾನಿ, ಮಿಷನ್ ಮಂಗಲ್, ಭೂಲ್ ಭೂಲಯ್ಯ, ಪಾ, ನೋ ಒನ್ ಕಿಲ್ಲಡ್ ಜೆಸ್ಸಿಕಾ, ಗುರು…….ಹೀಗೆ ಒಂದರ ಹಿಂದೆ ಒಂದು ಸವಾಲಿನ ಮತ್ತು ವೈವಿಧ್ಯಮಯ ಪಾತ್ರಗಳು! ಮಹಿಳಾ ಕೇಂದ್ರಿತ ಸಿನಿಮಾಗಳು! ಎಲ್ಲವೂ ಸೂಪರ್ ಹಿಟ್! ಸಾಲು ಸಾಲು 6 ಫಿಲ್ಮ್ ಫೇರ್ ಪ್ರಶಸ್ತಿಗಳು, ಡರ್ಟಿ ಪಿಕ್ಚರ್ ಸಿನಿಮಾದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ, ಸ್ಕ್ರೀನ್ ಅವಾರ್ಡ್ಸ್, ಗೌರವ ಡಾಕ್ಟರೇಟ್, ಪದ್ಮಶ್ರೀಯ ಗೌರವ, ಭಾರತ ಸರಕಾರದ ಸ್ವಚ್ಛತೆಯ ರಾಯಭಾರಿಯ ಶ್ರೇಯ ಇಷ್ಟೆಲ್ಲ ಅವರಿಗೆ ದೊರೆತವು.
ಆಕೆಯ ಪಾತ್ರ ವೈವಿಧ್ಯತೆ ಅದ್ಭುತ
ಆಕೆಯ ವೈವಿಧ್ಯಮಯ ಪಾತ್ರಗಳ ಬಗ್ಗೆ ನಾನು ಎರಡು ವಾಕ್ಯಗಳನ್ನು ಬರೆಯಬೇಕು. ಲಗೇ ರಹೋ ಮುನ್ನಾಭಾಯಿ ಸಿನಿಮಾದಲ್ಲಿ RJ ಪಾತ್ರ, ಡರ್ಟಿ ಪಿಕ್ಚರ್‌ನಲ್ಲಿ ಸಿಲ್ಕ್ ಸ್ಮಿತಾ ಜೀವನದ ಪಾತ್ರ, ಪಾ ಚಿತ್ರದಲ್ಲಿ ವಿಚಿತ್ರ ಪ್ರೋಜೇರಿಯ ಕಾಯಿಲೆಯಿಂದ ಬಳಲುವ ಮಗನ(ಅಮಿತಾಬ್) ತಾಯಿಯ ಪಾತ್ರ, ಕಹಾನಿ ಚಿತ್ರದಲ್ಲಿ ತನ್ನ ಗಂಡನನ್ನು ಹುಡುಕಿಕೊಂಡು ಹೋಗುವ ಗರ್ಭಿಣಿ, ಜೆಸ್ಸಿಕಾದಲ್ಲಿ ನ್ಯಾಯಕ್ಕಾಗಿ ಹೋರಾಡುವ ಪಾತ್ರ, ಪರಿನೀತಾ ಸಿನಿಮಾದಲ್ಲಿ ಹಳ್ಳಿ ಹೆಂಗಸಿನ ಪಾತ್ರ, ಮಿಷನ್ ಮಂಗಲ್‌ನಲ್ಲಿ ಉತ್ಸಾಹಿ ಯುವ ವಿಜ್ಞಾನಿ, ಗುರು ಚಿತ್ರದಲ್ಲಿ ರೋಗಗ್ರಸ್ತ ಹೆಂಗಸಿನ ರೋಲ್, ತುಮಾರಿ ಸುಲು ಹಿಂದಿ ಸಿನಿಮಾದಲ್ಲಿ ಮನೆ ಮಗಳು, ಭೂಲಭೂಲಯ್ಯ ಸಿನಿಮಾದಲ್ಲಿ ಕನ್ನಡದ ಆಪ್ತ ಮಿತ್ರದಲ್ಲಿ ಸೌಂದರ್ಯ ಮಾಡಿದ ಪಾತ್ರ……ಹೀಗೆ ಅದ್ಭುತವಾದ ಪಾತ್ರಗಳು, ಅದ್ಭುತ ಅಭಿನಯ! 2007ರಲ್ಲಿ ಆಕೆಯ ನಾಲ್ಕು ಸಿನೆಮಾಗಳು ಸೂಪರ್ ಹಿಟ್ ಆದವು. ಆಕೆಯ ಹ್ಯುಮನ್ ಕಂಪ್ಯೂಟರ್ ಶಕುಂತಲಾ ದೇವಿಯ ಪಾತ್ರ ಅದು ಎಪಿಕ್ ಆಯಿತು.
ಎಲ್ಲವೂ ಸ್ತ್ರೀ ಕೇಂದ್ರಿತವಾದ ಸಿನಿಮಾಗಳು
ಆಕೆ ಸಿನಿಮಾ ರಂಗ ಪ್ರವೇಶ ಮಾಡುವ ಮೊದಲು ಇದ್ದ ಹೆಚ್ಚಿನ ನಟಿಯರು ಗ್ಲಾಮರಸ್ ಗೊಂಬೆಗಳು. ಹೀರೊ ಜೊತೆಗೆ ಮರ ಸುತ್ತುವ ಪಾತ್ರಗಳಿಗೆ ಸೀಮಿತ ಆದವರು. ಆದರೆ ಆಕೆ ಸ್ತ್ರೀ ಕೇಂದ್ರಿತ ಮತ್ತು ಕಥಾ ಪ್ರಧಾನ ಪಾತ್ರಗಳನ್ನೇ ಆಯ್ಕೆ ಮಾಡಿದರು. ಮಹಿಳೆಯ ಪಾತ್ರಗಳ ಚಿತ್ರಣವನ್ನೇ ಬದಲಾಯಿಸಿದರು. ಸಿನಿಮಾ ನಿರ್ಮಾಪಕ ಮತ್ತು ಉದ್ಯಮಿ ಸಿದ್ಧಾರ್ಥ್ ರಾಯ್ ಕಪೂರ್ ಅವರನ್ನು ಪ್ರೀತಿಸಿ ಮದುವೆ ಆದರು. ಹಲವು ಸಿನಿಮಾಗಳನ್ನು ನಿರ್ಮಾಣ ಕೂಡ ಮಾಡಿದರು.
ಯಾವ ಜನ ಅವರನ್ನು ಅವಮಾನ ಮಾಡಿದ್ದರೋ ಇಂದು ಅದೇ ಜನ ಅವರನ್ನು ‘ಬಾಲಿವುಡ್ಡಿನ ನಾಲ್ಕನೆಯ ಖಾನ್’ ಎಂದು ಗೌರವದಿಂದ ಕರೆಯುತ್ತಿದ್ದಾರೆ! ಅತೀ ಹೆಚ್ಚು ಸಂಭಾವನೆ ಪಡೆಯುವ, ತನ್ನ ಪಾತ್ರವನ್ನು ತಾನೇ ಆರಿಸಿಕೊಳ್ಳುವ ಸ್ವಾತಂತ್ರ್ಯ ಇರುವ ನಟಿಯಾಗಿ ಅವರು ಇಂದು ಕೀರ್ತಿ ಶಿಖರ ತಲುಪಿದ್ದಾರೆ. ಆಕೆಯ ಮಾತನ್ನು ನೀವೊಮ್ಮೆ ಕೇಳಬೇಕು.
“ಜನ ನನ್ನ ಬಗ್ಗೆ ಏನು ಹೇಳುತ್ತಾರೆ ಎನ್ನುವುದು ನನಗೆ ಮುಖ್ಯವಲ್ಲ. ನನ್ನ ಬಗ್ಗೆ ನನ್ನ ಭಾವನೆ ನನಗೆ ಮುಖ್ಯ! ನನ್ನ ಓವರ್ ವೇಯ್ಟ್ ಬಗ್ಗೆ ಕಾಮೆಂಟ್ ಮಾಡುವವರಿಗೆ ನಾನು ಏನೂ ಹೇಳುವುದಿಲ್ಲ. ನನ್ನಲ್ಲಿ ಹಾರ್ಮೋನ್ ಸಮಸ್ಯೆ ಇದೆ. ಆದ್ದರಿಂದ ವೇಯ್ಟ್ ಸಹಜ. ಅದನ್ನು ಕರಗಿಸಲು ನಾನು ಜಿಮ್ಮಿಗೆ ಹೋಗಲಾರೆ. ಕನ್ನಡಿ ಮುಂದೆ ನಿಂತಾಗ ನನಗೆ ನಾನು ಚಂದ ಕಂಡರೆ ಸಾಕು. ನಾನು 100% ಸಸ್ಯಾಹಾರಿ. ಸಾಂಪ್ರದಾಯಿಕ ಕುಟುಂಬದಿಂದ ಬಂದವಳು. ನನ್ನ ದೇಹ ಪ್ರಕೃತಿಗೆ ಸೀರೆ ಮಾತ್ರವೇ ಚಂದ ಕಾಣುತ್ತದೆ. I love what I am and don’t want to change myself for the sake of the people who comment or criticize me!”
ಭರತ ವಾಕ್ಯ
ವಿದ್ಯಾ ಬಾಲನ್ ನನಗೆ ಇಷ್ಟ ಆಗಿರುವುದು ಇಂತಹ ಕಾರಣಕ್ಕೆ. ಆಕೆ ನಿಜವಾಗಿಯೂ ಇತರರಿಗಿಂತ ಭಿನ್ನ ಎಂಬ ಕಾರಣಕ್ಕೆ. ಟೀಕೆ ಮಾಡುವ ಮಂದಿಯ ಮುಂದೆ ಆಕೆ ತಲೆ ಎತ್ತಿ ನಿಲ್ಲುವ ಗುಣಕ್ಕೆ. ಫೀನಿಕ್ಸ್ ಹಕ್ಕಿಯ ಹಾಗೆ ಎದ್ದು ಬರುವ ನೆವರ್ ಡೈಯಿಂಗ್ ಸ್ಪಿರಿಟಿಗೆ.
ಇದನ್ನೂ ಓದಿ: ರಾಜ ಮಾರ್ಗ ಅಂಕಣ: ಉಸಿರಿರುವವರೆಗೂ ಭುಜದ ಮೇಲೆ ಐದು ನಕ್ಷತ್ರ ಹೊಂದಿದ್ದ ಕನ್ನಡಿಗ ಕಾರಿಯಪ್ಪ