ಅಂಕಣ
ರಾಜ ಮಾರ್ಗ ಅಂಕಣ: ಉಸಿರಿರುವವರೆಗೂ ಭುಜದ ಮೇಲೆ ಐದು ನಕ್ಷತ್ರ ಹೊಂದಿದ್ದ ಕನ್ನಡಿಗ ಕಾರಿಯಪ್ಪ
Raja Marga column: ಬಹಳ ಹಿಂದೆ ನಾನು ಮಾಣೆಕ್ ಷಾ ಬಗ್ಗೆ ಬರೆದ ಲೇಖನಕ್ಕೆ ತುಂಬಾ ಮೆಚ್ಚುಗೆ ಬಂದಿತ್ತು. ಅಷ್ಟೇ ದಿಟ್ಟತನವನ್ನು ಹೊಂದಿದ ಮತ್ತು ತನ್ನ ಭುಜದ ಮೇಲೆ ಐದು ನಕ್ಷತ್ರ ಹೊಂದಿದ್ದ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರು ಕೂಡ ಮಹಾನ್ ಸಾಧಕರು ಮತ್ತು ದೇಶಭಕ್ತರು. ಅವರ ಬಗ್ಗೆ ಇವತ್ತು ತುಂಬು ಪ್ರೀತಿಯಿಂದ ಬರೆದಿದ್ದೇನೆ.
ಕೊಡವರು ತಮ್ಮ ರಾಷ್ಟ್ರಪ್ರೇಮಕ್ಕೆ ಪ್ರಸಿದ್ಧರು. ಪ್ರತೀ ಕೊಡವರ ಮನೆಯಲ್ಲಿ ಕನಿಷ್ಠ ಒಬ್ಬ ಸೈನಿಕ ಇದ್ದೇ ಇರುತ್ತಾನೆ. ಅದೇ ರೀತಿ ನಮ್ಮ ಫೀಲ್ಡ್ ಮಾರ್ಷಲ್ ಕೆ.ಮಾದಪ್ಪ ಕಾರಿಯಪ್ಪ (Field Marshal KM Kariyappa) ಅವರು ಹುಟ್ಟಿದ್ದು ಕೊಡಗಿನ ಶನಿವಾರಸಂತೆ ಸಮೀಪದ ಸಣ್ಣ ಹಳ್ಳಿಯಲ್ಲಿ. ಅವರದ್ದು ದೇಶಭಕ್ತ ಕುಟುಂಬ. ದೇಶಪ್ರೇಮದ ಬಿಸಿರಕ್ತವನ್ನು ಹೃದಯಕ್ಕೆ ಮೆತ್ತಿಕೊಂಡು ಬಂದವರು ಅವರು. ಆಗಿನ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವಿಯನ್ನು ಪಡೆದು ಅವರು ನೇರ ಪ್ರವೇಶಿಸಿದ್ದು ಸೈನ್ಯಕ್ಕೆ. ಮುಂದೆ ಮೂರು ದಶಕಗಳ ಕಾಲ ಅವರು ಭಾರತದ ಹೆಮ್ಮೆಯ ಸೈನಿಕರಾಗಿ ದೇಶಸೇವೆ ಮಾಡಿದರು.
ಎರಡನೇ ವಿಶ್ವ ಯುದ್ಧದಲ್ಲಿ ಭಾಗಿ
1914-18ರ ಮೊದಲ ವಿಶ್ವ ಸಮರದ ಹೊತ್ತಿಗೆ ಅವರು ಮಿಲಿಟರಿಯ ತರಬೇತಿಯಲ್ಲಿ ಇದ್ದರು. ಎರಡನೇ ವಿಶ್ವಯುದ್ಧ ನಡೆದಾಗ ಅವರು ಬ್ರಿಟಿಷ್ ಇಂಡಿಯಾ ಸೈನ್ಯದಲ್ಲಿ ಒಂದು ಬೆಟಾಲಿಯನ್‌ನ ನಾಯಕತ್ವವನ್ನು ವಹಿಸಿದ್ದರು. ಇರಾನ್, ಇರಾಕ್, ಸಿರಿಯಾ ಮತ್ತು ಬರ್ಮಾದಲ್ಲಿ ಅವರು ಸೇನೆಯ ತುಕಡಿಗಳನ್ನು ಮುನ್ನಡೆಸಿದರು. ಅವರ ನಾಯಕತ್ವದ ಗುಣವನ್ನು ಗುರುತಿಸಿದ ಬ್ರಿಟಿಷ್ ಸರಕಾರ ಅವರನ್ನು ಲಂಡನ್ನಿನ ಬಹಳ ಪ್ರಸಿದ್ಧವಾದ ‘ಇಂಪೀರಿಯಲ್ ಡಿಫೆನ್ಸ್ ಕಾಲೇಜಿಗೆ’ ತರಬೇತಿಗೆ ಕಳಿಸಿತು. ಈ ಸಾಧನೆ ಮಾಡಿದ ಕೇವಲ ಎರಡನೆಯ ಭಾರತೀಯ ಕಾರಿಯಪ್ಪ ಅವರು. ಆದರೆ ಅವರ ನಿಜವಾದ ಹೋರಾಟದ ವಿರಾಟ್ ಪರಿಚಯವನ್ನು ಭಾರತವು ಕಂಡದ್ದು ಸ್ವಾತಂತ್ರ್ಯವನ್ನು ಪಡೆದ ನಂತರವೇ!
ಭಾರತದ ಕೇವಲ ಎರಡನೆಯ ಕಮಾಂಡರ್ ಇನ್ ಚೀಫ್
ಕ್ಯಾಪ್ಟನ್, ಮೇಜರ್, ಲೆಫ್ಟಿನೆಂಟ್, ಕರ್ನಲ್ ಮತ್ತು ಬ್ರಿಗೇಡಿಯರ್ ಈ ಎಲ್ಲಾ ಸೇನೆಯ ಅಧಿಕಾರಿ
ಹುದ್ದೆಗಳನ್ನು ಅವರು ದೇಶವು ಸ್ವಾತಂತ್ರ್ಯ ಪಡೆಯುವ ಮೊದಲೇ ಪಡೆದಿದ್ದರು ಜನರಲ್ ಕಾರ್ಯಪ್ಪ ಅವರು. 1947ರ ಮೊದಲ ಭಾರತ ಪಾಕ್ ಯುದ್ಧದಲ್ಲಿ ಅವರದ್ದು ದಿಟ್ಟ ಹೋರಾಟ. ಆ ಯುದ್ಧವನ್ನು ಭಾರತವು ಗೆದ್ದಿತ್ತು. ಕಾರ್ಗಿಲ್, ಝೋಜೀಲ ಮತ್ತು ದ್ರಾಸ್ ಪ್ರಾಂತ್ಯಗಳನ್ನು ಭಾರತದ ಗಡಿ ಒಳಗೆ ತರುವಲ್ಲಿ ನಿರ್ಣಾಯಕ ಹೋರಾಟ ಮಾಡಿದ್ದು ಕಾರಿಯಪ್ಪ. ಇದನ್ನು ಪರಿಗಣಿಸಿ ಭಾರತ ಸರಕಾರ ಅವರನ್ನು ಸ್ವತಂತ್ರ ಭಾರತದ ಮೊದಲ ‘ಕಮಾಂಡರ್ ಇನ್ ಚೀಫ್’ ಆಗಿ ನೇಮಕ ಮಾಡಿತು.
ಭಾರತೀಯ ಸೇನೆಯಲ್ಲಿ ಇತ್ತು ರಾಷ್ಟ್ರ ಪ್ರೇಮದ ಕೊರತೆ!
ಆಗ ಭಾರತ ಸೇನಾಪಡೆಯ ಮನಸ್ಥಿತಿಯು ಎಷ್ಟು ಹಾಳಾಗಿತ್ತು ಅಂದರೆ ಹೆಚ್ಚಿನ ಯೋಧರು ಬ್ರಿಟಿಷ್ ಇಂಡಿಯಾ ಸೇನೆಯಲ್ಲಿ ದೀರ್ಘ ಕಾಲ ಇದ್ದವರು. ರಾಷ್ಟ್ರಪ್ರೇಮದ ಒರತೆಯು ಅವರಲ್ಲಿ ಬತ್ತಿ ಹೋಗಲು ಆರಂಭವಾಗಿತ್ತು. ಹೋರಾಟದ ಕೆಚ್ಚು ನಿಧಾನಕ್ಕೆ ಕಡಿಮೆ ಆಗುತ್ತಿತ್ತು. ಬ್ರಿಟಿಷ್ ಸೇನೆಯನ್ನು ದಾಸ್ಯದ ಮನಸ್ಥಿತಿಯಿಂದ ಭಾರತದ ಕ್ಷಾತ್ರದ ಮನಸ್ಥಿತಿಗೆ ತರಲು ಕಾರಿಯಪ್ಪ ತುಂಬಾ ಶ್ರಮವನ್ನು ಹಾಕಿದರು. ಜಾತಿ, ಮತ, ಧರ್ಮಗಳ ಆಧಾರದಲ್ಲಿ ಆಗುತ್ತಿದ್ದ ಸೇನೆಯ ನೇಮಕಾತಿಯನ್ನು ಬದಲಾಯಿಸಿ ಎಲ್ಲರಿಗೂ ‘ತೆರೆದ ಬಾಗಿಲ’ ನೇಮಕಾತಿಯನ್ನು ಆರಂಭ ಮಾಡಿದವರು ಅವರು. ಮುಂದಿನ ಹಲವು ದಶಕಗಳ ಕಾಲ ಭಾರತ ಸೇನೆಯನ್ನು ಗಟ್ಟಿ ಗೊಳಿಸುವ ವಿಷನ್ ಅವರಲ್ಲಿ ಇತ್ತು. ಸ್ವತಂತ್ರ ಭಾರತದ ಮೊದಲ ಸೇನೆಯನ್ನು ಮುಂದಿನ ಹತ್ತಾರು ಯುದ್ಧ ಮತ್ತು ಹೋರಾಟಗಳಿಗೆ ಸಿದ್ಧ ಪಡಿಸಿದ ಕೀರ್ತಿಯು ಅವರಿಗೆ ಸಲ್ಲುತ್ತದೆ.
1953ರಲ್ಲಿ ಅವರು ಭಾರತೀಯ ಸೇನೆಯಿಂದ ನಿವೃತ್ತರಾದರು. ನಂತರ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳಿಗೆ ಹೈ ಕಮೀಷನರ್ ಆಗಿ ಅವರು ಸೇವೆ ಮಾಡಿದರು. ಮುಂದೆ 1965 ಮತ್ತು 1971ರ ಯುದ್ಧಗಳ ಸಂದರ್ಭದಲ್ಲಿ ಭಾರತೀಯ ಸೇನೆಯ ಆತ್ಮವಿಶ್ವಾಸವನ್ನು ವೃದ್ಧಿಸುವ ನಿಟ್ಟಿನಲ್ಲಿ ಅವರನ್ನು ಸೇನೆ ಕರೆಸುತ್ತಿತ್ತು. ಆಗ ಅವರ ಭಾಷಣ ‘ರಾಷ್ಟ್ರ ಮೊದಲು’ ಎಂಬ ಘೋಷಣೆಯಿಂದ ಶ್ರೀಮಂತ ಆಗಿರುತ್ತಿತ್ತು! 1986ರಲ್ಲಿ ಅವರು ಸೇನೆಯ ಪರಮೋಚ್ಚ ಪದವಿ ಆಗಿರುವ ಫೀಲ್ಡ್ ಮಾರ್ಷಲ್ ಹುದ್ದೆಗೆ ಏರಿದರು. ಮಾಣೆಕ್ ಷಾ ಅವರು ಭಾರತದ ಮೊದಲ ಫೀಲ್ಡ್ ಮಾರ್ಷಲ್ ಆದರೆ ಕಾರಿಯಪ್ಪ ಎರಡನೆಯವರು. ಅವರಿಬ್ಬರ ಧೀರತೆ, ರಾಷ್ಟ್ರ ಪ್ರೇಮವನ್ನು ಎಷ್ಟು ಹೊಗಳಿದರೂ ಅದು ಅತಿಶಯೋಕ್ತಿ ಆಗುವುದಿಲ್ಲ.
ಉಜ್ವಲ ರಾಷ್ಟ್ರಪ್ರೇಮ ಮತ್ತು ಅಸೀಮ ಕರ್ತವ್ಯ ಪ್ರಜ್ಞೆ
ಕಾರಿಯಪ್ಪ ಅವರ ಕರ್ತವ್ಯಪ್ರಜ್ಞೆಯ ಹಾಗೂ ಸ್ವಾಭಿಮಾನದ ಬಗ್ಗೆ ನೂರಾರು ನಿದರ್ಶನಗಳು ಸಿಗುತ್ತವೆ. ಅವುಗಳಲ್ಲಿ ಒಂದನ್ನು ನಾನು ನಿಮಗೆ ಹೇಳಲೇಬೇಕು.
ಮುಂದೆ ಕಾರಿಯಪ್ಪ ಅವರ ಪುತ್ರ ನಂದಾ ಕಾರಿಯಪ್ಪ ಅವರು ಕೂಡ ಭಾರತ ಸೇನೆಗೆ ಸೇರುತ್ತಾರೆ. ಸ್ಕ್ವಾಡ್ರನ್ ಲೀಡರ್ ಹುದ್ದೆಗೆ ಏರುತ್ತಾರೆ. 35 ವರ್ಷದ ನಂದಾ ಕಾರಿಯಪ್ಪ 1965ರ ಭಾರತ ಪಾಕಿಸ್ಥಾನ ಯುದ್ಧದಲ್ಲಿ ಹೋರಾಡುತ್ತಾರೆ. ಅವರಿದ್ದ ಯುದ್ಧ ವಿಮಾನವನ್ನು ಪಾಕ್ ಗಡಿಯಲ್ಲಿ ಪಾಕಿಸ್ಥಾನದ ಸೇನೆಯು ಹೊಡೆದು ಉರುಳಿಸಿತು. ಗಾಯಗೊಂಡ ನಂದಾ ಮತ್ತು ಇತರ ನಾಲ್ಕು ಸೈನಿಕರನ್ನು ಪಾಕ್ ಸೇನೆಯು ಯುದ್ಧ ಕೈದಿಗಳಾಗಿ ಬಂಧಿಸಿತು. ವಿಚಾರಣೆಯ ಹಂತದಲ್ಲಿ ನಂದಾ ತಪ್ಪಿಯೂ ತಾನು ಕಾರಿಯಪ್ಪ ಅವರ ಮಗ ಎಂದು ಹೇಳುವುದಿಲ್ಲ. ಆದರೆ ಪಾಕ್ ಸೇನೆಗೆ ಅವರು ಕಾರಿಯಪ್ಪನವರ ಮಗ ಎಂದು ಗೊತ್ತಾಗುತ್ತದೆ.
ಅವನು ನನ್ನ ಮಗ ಅಲ್ಲ, ಭಾರತದ ಮಗ ಎಂದು ಬಿಟ್ಟರು ಕಾರ್ಯಪ್ಪ
ಆಗ ಪಾಕ್ ಸೇನಾಪಡೆಯ ಮುಖ್ಯಸ್ಥ ಆಗಿದ್ದವರು ಆಯೂಬ್ ಖಾನ್ ಅವರು. ಅವರು ಎರಡನೇ ವಿಶ್ವ ಯುದ್ಧದ ಹೊತ್ತಲ್ಲಿ ಕಾರಿಯಪ್ಪ ಅವರ ದಳದಲ್ಲಿ ಸೈನಿಕರಾಗಿ ಇದ್ದವರು ಮತ್ತು ಕಾರಿಯಪ್ಪ ಅವರ ಬಗ್ಗೆ ತುಂಬಾ ಗೌರವ ಹೊಂದಿದ್ದವರು. ಅವರು ನೇರವಾಗಿ ಕಾರಿಯಪ್ಪ ಅವರಿಗೆ ಕರೆ ಮಾಡಿ “ನಿಮ್ಮ ಮಗನನ್ನು ನಮ್ಮ ಸೇನೆ ಯುದ್ಧ ಕೈದಿಯಾಗಿ ಬಂಧಿಸಿದೆ. ಅವರು ನಿಮ್ಮ ಮಗ ಎಂದು ಗೊತ್ತಿರಲಿಲ್ಲ. ದಯವಿಟ್ಟು ಕ್ಷಮಿಸಿ. ಅವರನ್ನು ತಕ್ಷಣ ಬಿಡುಗಡೆ ಮಾಡಿ ಭಾರತಕ್ಕೆ ಕಳುಹಿಸುತ್ತೇವೆ” ಎಂದರು.
That’s the Spirit of Field Marshal KARIYAPPA
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಜ್ಯೋತಿ ರೆಡ್ಡಿ ಎಂಬ ಅನಾಥ ಹುಡುಗಿ ಅಮೆರಿಕನ್ ಕಂಪನಿಯ ಸಿಇಒ ಆದ ಕಥೆ!
ಆಗ ಕಾರಿಯಪ್ಪ ಅವರು ಕೊಡಗಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದರು. ಅವರ ಸಿಡಿಲಿನ ಉತ್ತರವು ಹೀಗಿತ್ತು. “ಮಿಸ್ಟರ್ ಖಾನ್, ನೀವು ತಪ್ಪುತಿಳಿದಿದ್ದೀರಿ. ನಂದಾ ನನ್ನ ಮಗನಲ್ಲ! ಅವನು ಸೇನೆಗೆ ಸೇರಿದ ತಕ್ಷಣ ಭಾರತ ಮಾತೆಯ ಮಗನಾಗಿದ್ದಾನೆ. ಬಿಡುಗಡೆ ಮಾಡುವುದಾದರೆ ಎಲ್ಲಾ ಐದು ಸೈನಿಕರನ್ನು ಮಾಡಿ. ಇಲ್ಲವಾದರೆ ಯಾರನ್ನೂ ಬೇಡ! ನನ್ನ ಮಗ ಎಂಬ ವಿಶೇಷ ಪರಿಗಣನೆ ಬೇಡ!” ಎಂದು ಫೋನ್ ಇಟ್ಟಿದ್ದರು. ಮುಂದೆ ಪಾಕಿಸ್ಥಾನದ ಸೇನೆಯು ಐದು ಭಾರತೀಯ ಸೈನಿಕರನ್ನು ಕೂಡ ಬಿಡುಗಡೆ ಮಾಡಿತು.
ಅವರು 1993 ಮೇ 15ರಂದು ತಮ್ಮ ಐದು ನಕ್ಷತ್ರಗಳ ಯೂನಿಫಾರ್ಮ್ ಕಳಚಿ ಭೂಮಿಯಿಂದ ನಿರ್ಗಮಿಸಿದರು. ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡಬೇಕು ಎಂಬ ಆಗ್ರಹ ಪೂರ್ವಕ ಹೋರಾಟ ಈಗ ಸಾರ್ವಜನಿಕ ವಲಯದಲ್ಲಿ ಆರಂಭವಾಗಿದ್ದು ಆ ಪ್ರಶಸ್ತಿಗೆ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅತ್ಯಂತ ಅರ್ಹರು ಎಂದು ನನ್ನ ಭಾವನೆ. ಜೈ ಹಿಂದ್!
ಅಂಕಣ
Raja Marga Column : ಅಪ್ಪಾ ಪಾ!! ಅಮಿತಾಭ್ ಬಚ್ಚನ್ ಬದ್ಧತೆ, ಪ್ರಯೋಗಶೀಲತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ?
Raja Marga Column : ತಾನು ಎಷ್ಟು ದೊಡ್ಡ ನಟನಾಗಿ ಬೆಳೆದಿದ್ದರೂ ಗಾತ್ರದಲ್ಲೂ ಸಣ್ಣ ಪಾತ್ರವನ್ನು ಮಾಡಬಲ್ಲೆ ಎಂದು ಎಂದು ಅಮಿತಾಭ್ ಬಚ್ಚನ್ ನಿರೂಪಿಸಿದ ಸಿನಿಮಾ ಪಾ. ಇದು ಕೇವಲ ಸಿನಿಮಾ ಅಲ್ಲ, ಅಮಿತಾಭ್ ಎಂಬ ದೈತ್ಯ ನಟನ ಶ್ರದ್ಧೆ ಮತ್ತು ಪ್ರಯೋಗಶೀಲತೆಯ ದೈತ್ಯ ಉದಾಹರಣೆ.
ಭಾರತೀಯ ಸಿನಿಮಾರಂಗದ (Indian cinema) ಇತಿಹಾಸದಲ್ಲಿಯೇ ಅತ್ಯಂತ ಅಪರೂಪದ ಹಿಂದಿ ಸಿನಿಮಾ ಪಾ (Movie Paa)! ಅಮಿತಾಭ್ ಬಚ್ಚನ್ (Amitabh Bachchan) ಎಂಬ ಮಹಾನಟನ ಪ್ರಯೋಗಶೀಲತೆ (Trying New one), ಬದ್ಧತೆ (Committment of Amitabh) ಮತ್ತು ಸೃಜನಶೀಲ ಅಭಿನಯಕ್ಕೆ (Creative acting) ಸಾಕ್ಷಿ ಈ ಪಾ ಸಿನಿಮಾ! ಅದು ರೂಪುಗೊಂಡ ಕತೆಯೇ ಆ ಸಿನಿಮಾದ ಕತೆಗಿಂತ ಹೆಚ್ಚು ರೋಚಕವಾಗಿದೆ!
ಪಾ ಸಿನಿಮಾ ರೂಪುಗೊಂಡ ಕತೆಯನ್ನು ಆ ಸಿನಿಮಾದ ನಿರ್ದೇಶಕ ಬಾಲ್ಕಿ ಆರ್. (Balki R) ಅವರ ಮಾತುಗಳಲ್ಲಿ ಕೇಳುತ್ತಾ ಮುಂದೆ ಹೋಗೋಣ…
ನಾನು 1996ರಲ್ಲಿ ಬಿಡುಗಡೆಯಾದ ಹಾಲಿವುಡ್ ರೋಚಕ ಸಿನಿಮಾ ‘ಜಾಕ್’ (Hollywood film Jack) ನೋಡಿ ಮೆಚ್ಚಿದ್ದೆ .ಆ ಸಿನಿಮಾವು ನನ್ನ ಮಸ್ತಿಷ್ಕದಲ್ಲಿ ಗಟ್ಟಿಯಾಗಿ ಕೂತು ಬಿಟ್ಟಿತ್ತು. ಅದನ್ನು ಹಿಂದಿ ಭಾಷೆಯಲ್ಲಿ ಮರುನಿರ್ಮಾಣ ಮಾಡಬೇಕು ಎಂಬ ತುಡಿತ ಹೆಚ್ಚಾಯಿತು. ಅದಕ್ಕಾಗಿ ಎರಡು ವರ್ಷಗಳ ಕಾಲ ಸಮಯ ತೆಗೆದುಕೊಂಡು ಕತೆ ಮತ್ತು ಚಿತ್ರಕತೆ ಬರೆದು ಮುಗಿಸಿದ್ದೆ.
ಅದರ ಕತೆಯನ್ನು ಚುಟುಕಾಗಿ ನಿಮಗೆ ನಾನು ಹೇಳಬೇಕು. ಅದರಲ್ಲಿ ಔರೋ ಎಂಬ ಬುದ್ಧಿವಂತ ಹುಡುಗನ ಪಾತ್ರ ಬರುತ್ತದೆ. ಆತನಿಗೆ ಹದಿಮೂರು ವರ್ಷದ ಪ್ರಾಯದಲ್ಲಿ ‘ಪ್ರೋಜೇರಿಯಾ’ (genetic disorder called progeria) ಎಂಬ ವಿಚಿತ್ರವಾದ ಕಾಯಿಲೆಯು ಬಂದಿರುತ್ತದೆ. ಅದು ಬಾಲ್ಯದಲ್ಲಿಯೇ ವೃದ್ಧಾಪ್ಯ ಅಮರುವ (Aging in childhood) ವಿಚಿತ್ರವಾದ ಕಾಯಿಲೆ! ಹತ್ತು ಲಕ್ಷ ಮಂದಿಯಲ್ಲಿ ಒಬ್ಬರಿಗೆ ಮಾತ್ರ ಬರುವ ಕಾಯಿಲೆ ಅದು! ಒಂದು ಕಡೆ ಮುದಿತನದ ಸಮಸ್ಯೆ ಆದರೆ ಮತ್ತೊಂದೆಡೆ ದೊಡ್ಡ ತಲೆ, ಸಣ್ಣ ಕೈ ಕಾಲು, ಉಬ್ಬಿದ ದವಡೆ, ಕೀರಲು ಸ್ವರ…..ಹೀಗೆಲ್ಲ ವಿಚಿತ್ರವಾದ ದೈಹಿಕ ಸಮಸ್ಯೆಗಳು!
ಬಾಲ್ಯದಿಂದ ಅಪ್ಪನ ಮುಖ ನೋಡದ ಔರೋ ತನ್ನ ಅಮ್ಮ (ವಿದ್ಯಾ ಬಾಲನ್-vidya Balan)ನನ್ನು ನನ್ನ ಅಪ್ಪ ಯಾರು ಎಂದು ದಿನವೂ ಕೇಳುತ್ತಾನೆ. ಅಮ್ಮ ಏನೇನೋ ಕಾರಣ ಹೇಳಿ ಗೋಡೆಯ ಮೇಲೆ ದೀಪ ಇಡುತ್ತಾಳೆ.
ಮುಂದೆ ಔರೋ ಕಲಿಯುತ್ತಿರುವ ಶಾಲೆಗೆ ಅವನ ಅಪ್ಪ ವಾರ್ಷಿಕೋತ್ಸವಕ್ಕೆ ಅತಿಥಿಯಾಗಿ ಬರುತ್ತಾನೆ. ಅಲ್ಲಿ ತನ್ನ ಪ್ರತಿಭೆಯ ಮೂಲಕ ಬಹುಮಾನ ಗೆದ್ದ ಔರೋ ಮತ್ತು ಅಪ್ಪನ ಗೆಳೆತನ ಬೆಳೆಯುತ್ತದೆ. ಮುಂದೇನಾಗುತ್ತದೆ ಎಂದು ಸಿನಿಮಾ ನೋಡಿ ನೀವು ಹೇಳಬೇಕು.
ನಾನು ಚಿತ್ರಕತೆಯನ್ನು ಬರೆಯುವಾಗ ಅಪ್ಪನ ಪಾತ್ರವನ್ನು ಅಮಿತಾಭ್ ಮಾಡಬೇಕು, ಮಗ ಔರೋ ಪಾತ್ರ ಅವರ ಮಗ ಅಭಿಷೇಕ್ ಬಚ್ಚನ್ (Abhishek Bachchan) ಮಾಡಲಿ ಎಂದು ಮನಸಲ್ಲಿ ಇಟ್ಟುಕೊಂಡು ಬರೆದಿದ್ದೆ. ಒಂದು ಫೈನ್ ಡೇ ನಾನು ಅವರ ಮನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತಿದೆ.
ಅಂದು ಅಪ್ಪ, ಮಗ ಇಬ್ಬರೂ ಮನೆಯಲ್ಲಿಯೇ ಇದ್ದರು. ಇಬ್ಬರನ್ನೂ ಕೂರಿಸಿ ಇಡೀ ಸಿನಿಮಾದ ಕಥೆಯನ್ನು ಹೇಳಿದೆ. ಇಬ್ಬರೂ ಕೇಳಿದರು. ಅಪ್ಪನ ಪಾತ್ರ ಅಮಿತಾಬ್ ಮಾಡಲಿ ಎಂದೆ. ಮಗ ಅಭಿಷೇಕ್ ಕೂಡ ಪ್ರತಿಭಾವಂತ. ಅವರು ಔರೋ ಪಾತ್ರ ಮಾಡಲಿ ಎಂದೆ.
ಆಗ ಅಭಿಷೇಕ್ ಕಣ್ಣಲ್ಲಿ ಒಂದಷ್ಟು ಗೊಂದಲವು ನನಗೆ ಕಂಡಿತು. ಅವರು ಒಂದೆರಡು ಪ್ರಶ್ನೆ ಕೇಳಿ ಅಪ್ಪನ ಮುಖ ನೋಡುತ್ತಾ ಕೂತ. ಅವರ ಮನಸಿನ ಭಾವನೆ ಅಮಿತಾಭ್‌ಗೆ ಅರ್ಥ ಆಯ್ತು ಅಂತ ನನಗೆ ಅನ್ನಿಸಿತು.
ಅಮಿತಾಭ್ ತನ್ನ ಮಗನನ್ನು ಒಂದು ಕ್ಷಣ ಮನೆಯ ಒಳಗೆ ಕರೆದುಕೊಂಡು ಹೋಗಿ ಹಿಂದೆ ಬಂದರು. ಅವರಿಬ್ಬರೂ ಮಾತಾಡಿ ಒಂದು ನಿರ್ಧಾರಕ್ಕೆ ಬಂದ ಹಾಗೆ ನನಗೆ ಅನ್ನಿಸಿತು.
ಬಂದವರೇ ಅಮಿತಾಭ್ “ಬಾಲ್ಕೀ, ನಿಮಗೆ ಅಭ್ಯಂತರ ಇಲ್ಲಾಂದ್ರೆ ನಾನು ಔರೋ ಪಾತ್ರ ಮಾಡ್ತೇನೆ. ಅಭಿಷೇಕ್ ಅಪ್ಪನ ಪಾತ್ರ ಮಾಡಲಿ!” ಎಂದರು. ನಾನು ನಿಜವಾಗಿಯೂ ಬೆಚ್ಚಿ ಬಿದ್ದೆ! ಯಾಕೆಂದ್ರೆ ಅಂತಹ ಪ್ರಯೋಗ ಭಾರತೀಯ ಸಿನಿಮಾ ರಂಗದಲ್ಲಿ ಎಂದಿಗೂ ಆಗಿರಲಿಲ್ಲ!
ಆಗ ಅಮಿತಾಭ್ ಬಚ್ಚನ್ ಅವರ ವಯಸ್ಸು 67! ಅಂತಹ ಪ್ರಾಯದಲ್ಲಿ 13 ವರ್ಷದ ಹುಡುಗನ ಪಾತ್ರ ಮಾಡುವುದು ಅಂದರೆ..? ಅದು ಕೂಡ ಪ್ರೋಜೇರಿಯ ಸಂತ್ರಸ್ತ ಹುಡುಗನ ಪಾತ್ರ! ಅಲ್ಲದೆ ಅಪ್ಪ ಮಗನ ಪಾತ್ರ ಮಾಡುವುದು, ಮಗ ಅಪ್ಪನ ಪಾತ್ರ ಮಾಡುವುದು…….ಇದು ಹಿಂದೆ ಎಂದೂ ಆಗಿರಲಿಲ್ಲ!
ನನ್ನ ಮೌನ ಅಮಿತಾಭ್ ಅವರಿಗೆ ಅರ್ಥ ಆಯಿತು. ಅವರು “ಬಾಲ್ಕೀ. ನೀವೇನೂ ಆತಂಕ ಮಾಡಬೇಡಿ. ಎಲ್ಲವನ್ನೂ ನಾನು ಮೇನೇಜ್ ಮಾಡುತ್ತೇನೆ. ನನಗೆ ಪಾತ್ರಕ್ಕೆ ಸಿದ್ಧತೆ ಮಾಡಿಕೊಳ್ಳಲು ಮೂರು ತಿಂಗಳ ಸಮಯ ಬೇಕು. ನೀವು ಶೂಟಿಂಗ್ ರೆಡಿ ಮಾಡಿ. ನಾವಿಬ್ಬರೂ ಬರುತ್ತೇವೆ!” ಎಂದು ಕೈಮುಗಿದು ಕಳುಹಿಸಿದರು.
ನಾನಿನ್ನೂ ಶಾಕ್ ನಿಂದ ಹೊರ ಬಂದಿರಲಿಲ್ಲ. ಮನೆಗೆ ಬಂದು ಮತ್ತೆ ಮೂರು ತಿಂಗಳು ತೆಗೆದುಕೊಂಡು ಚಿತ್ರಕಥೆಯನ್ನು ಹಲವು ಬಾರಿ ಟ್ರಿಮ್ ಮಾಡಿದೆ. ಅಮಿತಾಭ್ ಮಾಡುವ ಔರೋ ಪಾತ್ರವು ನನಗೆ ಹಗಲು ರಾತ್ರಿ ಕಣ್ಣ ಮುಂದೆ ಬರಲು ಆಗಲೇ ಆರಂಭ ಆಗಿತ್ತು.
ಅಮಿತಾಭ್ ಆ ಮೂರು ತಿಂಗಳ ಕಾಲ ಹತ್ತಾರು ವೈದ್ಯರನ್ನು ಸಂಪರ್ಕಿಸಿ ಪ್ರೊಜೇರಿಯ ಬಗ್ಗೆ, ಅದರ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುತ್ತ ಹೋದರು. ಆ ಕಾಯಿಲೆಯು ಇರುವ ಮಕ್ಕಳನ್ನು, ಅವರ ಕುಟುಂಬಗಳನ್ನು ಭೇಟಿ ಮಾಡಿ ಬಂದರು. ಅವರ ಒಳಗೆ ಕೂಡ ಆ ಔರೋ ಪಾತ್ರವು ಆಗಲೇ ಇಳಿಯಲು ಆರಂಭ ಆಗಿತ್ತು!
ಇದನ್ನೂ ಓದಿ : Raja Marga Column : ಹೆಣ್ಮಕ್ಕಳು ಶಾಲೆಗೆ ಹೋಗೋದೇ ಕಷ್ಟ ಎಂಬ ಕಾಲದಲ್ಲೇ ಆಕೆ ಒಂದಲ್ಲ, ಎರಡು ನೊಬೆಲ್ ಗೆದ್ದರು!
2009ರ ಒಂದು ಶುಭ ಮುಹೂರ್ತದಲ್ಲಿ ಪಾ ಸಿನೆಮಾದ ಶೂಟಿಂಗ್ ಆರಂಭ ಆಗಿತ್ತು. ಅಮಿತಾಭ್ ಅವರ ವಿಶೇಷ ಮೇಕಪ್‌ಗಾಗಿ ಕ್ರಿಶ್ಚಿಯನ್ ಟಿನ್ಲೆ ಮತ್ತು ಡೊಮಿನಿ ಲಿನ್ ಎಂಬ ಇಬ್ಬರು ವಿದೇಶದ ಮೇಕಪ್ ಕಲಾವಿದರು ಬಂದರು. ಔರೋ ಪಾತ್ರದ ಮೇಕಪ್ ತುಂಬಾ ಸಂಕೀರ್ಣ ಆಗಿತ್ತು.
ದೊಡ್ಡ ಮಂಡೆ ರಚನೆ ಮಾಡಲು ಎಂಟರಿಂದ ಹತ್ತು ಒದ್ದೆ ಮಣ್ಣಿನ ಹೆಂಟೆಗಳನ್ನು ಅಮಿತಾಬ್ ತಲೆಗೆ ಮೆತ್ತುತ್ತಿದ್ದರು. ಅದರಲ್ಲಿ ಉಸಿರಾಟ ಮಾಡಲು ಎರಡು ರಂಧ್ರಗಳು ಮಾತ್ರ ಇರುತ್ತಿದ್ದವು. ಹಣೆ, ಮುಖ, ಕೆನ್ನೆ, ತುಟಿಗಳಿಗೆ ದಪ್ಪವಾದ ಬಟ್ಟೆಗಳ ಲೇಪನ! ಅದರ ಮೇಲೆ ದಪ್ಪವಾದ ಬಣ್ಣಗಳು. ಪಾತ್ರಕ್ಕಾಗಿ ಕಾಲು, ಕೈ, ಎದೆಯ ಮೇಲಿನ ಕೂದಲನ್ನು ಕೂಡ ಕೆರೆದು ತೆಗೆದಿದ್ದರು.
ಪ್ರತೀ ದಿನ ಮೇಕಪ್ ಮಾಡಲು ಕನಿಷ್ಠ ಐದು ಘಂಟೆ ಮತ್ತು ತೆಗೆಯಲು ಎರಡು ಘಂಟೆಗಳ ಅವಧಿ ಬೇಕಾಗುತ್ತಿತ್ತು! 67 ವರ್ಷದ ಅಮಿತಾಬ್ ರಾತ್ರಿ ಹನ್ನೊಂದು ಗಂಟೆಗೆ ಮೇಕಪ್ ಮಾಡಲು ಕೂತರೆ ಬೆಳಿಗ್ಗೆ ನಾಲ್ಕೈದು ಗಂಟೆಗೆ ಮೇಕಪ್ ಮುಗಿಯುವುದು. ನಂತರ ಶೂಟಿಂಗ್ ಆರಂಭ. ಮೇಕಪ್ ತೆಗೆಯುವ ತನಕ ಒಂದು ತೊಟ್ಟು ನೀರು ಕೂಡ ಕುಡಿಯುವ ಅವಕಾಶ ಇಲ್ಲ! ಮೈ, ಮುಖ ಎಲ್ಲ ಕಡೆಯೂ ವಿಪರೀತ ತುರಿಕೆ ಮತ್ತು ನವೆ. ಅಮಿತಾಭ್ ಆ ಕನಸಿನ ಪಾತ್ರಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡರು. ನಗು, ನಗುತ್ತಾ ದಿನವೂ ಶೂಟಿಂಗ್‌ನಲ್ಲಿ ಭಾಗವಹಿಸಿದರು.
ಕೆಲವೊಮ್ಮೆ ನನಗೇ ಮುಜುಗರ ಆಗುತ್ತಿತ್ತು. ಭಾರತೀಯ ಸಿನಿಮಾ ರಂಗದ ಸೂಪರ್ ಸ್ಟಾರ್ ಒಬ್ಬ, ಆ ಪ್ರಾಯದಲ್ಲಿ, ಆ ರೀತಿಯ ಪ್ರಯೋಗಕ್ಕೆ ಒಳಗಾಗುವುದು ಅಂದರೆ….! ಅದು ಅಮಿತಾಬ್ ಬಚ್ಚನ್ ಅಸ್ತಮಾ ರೋಗಿ ಆಗಿದ್ದರು! ಆ ರೀತಿಯ ತಾಳ್ಮೆ ಮತ್ತು ಬದ್ಧತೆಗಳು ಕೇವಲ ಅವರಿಗೆ ಮಾತ್ರ ಸಾಧ್ಯ ಆಗುವಂತದ್ದು.
ಮುಂದೆ ಪಾ ಸಿನಿಮಾ 2009ರ ಡಿಸೆಂಬರ್ ತಿಂಗಳಲ್ಲಿ ಎಲ್ಲ ಕಡೆ ಬಿಡುಗಡೆ ಆಯಿತು. ವಿದೇಶದಲ್ಲಿ ಕೂಡ ಬಿಡುಗಡೆ ಆಯಿತು. ಅದು ನಾವು ನಿರೀಕ್ಷೆ ಮಾಡಿದ್ದಕ್ಕಿಂತ ದೊಡ್ಡ ಹಿಟ್ ಆಯಿತು! ಆ ಸಕ್ಸಸ್ ದೊರೆಯಲು ಪ್ರಮುಖ ಕಾರಣ ಅದು ಖಂಡಿತವಾಗಿಯೂ ಅಮಿತಾಭ್ ಬಚ್ಚನ್ ಅಭಿನಯ ಮತ್ತು ಲವಲವಿಕೆ. ಆ ನಟನ ಜೀವನೋತ್ಸಾಹ ನಿಜಕ್ಕೂ ಒಂದು ಮಿರಾಕಲ್!
ಇಳಯರಾಜ ಸಂಗೀತ ಕೂಡ ಅದ್ಭುತವೇ ಆಗಿತ್ತು. ಇಡೀ ಸಿನಿಮಾದಲ್ಲಿ ಅಪ್ಪ ಮಗನ ಭಾವನಾತ್ಮಕ ಸಂಬಂಧದ ಅಂಡರ್ ಕರೆಂಟ್ ಇತ್ತು. ಇವೆಲ್ಲವೂ ಸಿನಿಮಾವನ್ನು ಭಾರಿ ಸಕ್ಸಸ್ ಮಾಡಿದವು.
ಈ ಸಿನಿಮಾದ ಅಭಿನಯಕ್ಕೆ ಅಮಿತಾಭ್ ಅವರಿಗೆ ಮೂರನೇ ಬಾರಿಗೆ ‘ಅತ್ಯುತ್ತಮ ನಟ’ ರಾಷ್ಟ್ರಪ್ರಶಸ್ತಿಯು ದೊರೆಯಿತು. ಹಾಗೆಯೇ ಐದನೇ ಫಿಲ್ಮ್ ಫೇರ್ ಅತ್ಯುನ್ನತ ನಟ ಪ್ರಶಸ್ತಿ ಕೂಡ ದೊರೆಯಿತು! ಅದು ಅಮಿತಾಭ್ ಬಚ್ಚನ್ ಅವರ ಬದ್ಧತೆ ಮತ್ತು ಪ್ರಯೋಗಶೀಲತೆಗೆ ದೊರೆತ ನಿಜವಾದ ಪ್ರಶಸ್ತಿ ಆಗಿತ್ತು!
ಈ ರೀತಿಯ ಸವಾಲು ಎದುರಿಸುವ ಶಕ್ತಿ ನಿಮಗೆ ಹೇಗೆ ಬಂತು? ಎಂದು ಪತ್ರಿಕೆಯವರು ಅಮಿತಾಬ್ ಅವರನ್ನು ಕೇಳಿದಾಗ ಅವರು ಕೊಟ್ಟ ಕಾರಣ ಅದ್ಭುತವೇ ಆಗಿತ್ತು.
“ನಾನು ಚಿಕ್ಕದಿರುವಾಗ ಒಮ್ಮೆ ನನ್ನ ಗೆಳೆಯರ ಕೈಯ್ಯಲ್ಲಿ ಪೆಟ್ಟು ತಿಂದು ಅಳುತ್ತಾ ಮನೆಗೆ ಬಂದಿದ್ದೆ. ಆಗ ಅಮ್ಮ ತೇಜಿ ಬಚ್ಚನ್ ನನಗೆ ಬೈದು ಒಂದು ಮಾತನ್ನು ಹೇಳಿದ್ದರು – ಮಗನೇ, ಇನ್ನು ಎಂದಿಗೂ ಅಳುತ್ತ ನನ್ನ ಮುಂದೆ ಬಂದು ನಿಲ್ಲಬೇಡ! ನೀನು ಆರಂಭ ಮಾಡಿದ ಯುದ್ಧವನ್ನು ನೀನೇ ಗೆಲ್ಲಬೇಕು ಎಂದು!”
ಪಾ ಸಿನಿಮಾದ ಮೂಲಕ ಅಮಿತಾಬ್ ಬಚ್ಚನ್ ಮತ್ತೆ ಕೀರ್ತಿಯ ಶಿಖರವನ್ನು ಏರಿದರು.
ಅಂಕಣ
ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
ಪ್ರತಿ ಭಾರತೀಯನೂ, ಈ ದೇಶ ನನ್ನದು, ನಾನು ನನ್ನ ಕರ್ತವ್ಯ ನಿರ್ವಹಿಸಿದರೆ ಮಾತ್ರ ದೇಶ ಏಳಿಗೆ ಆಗುತ್ತದೆ ಎಂದು ಭಾವಿಸಬೇಕು. ಆಗ ವಿಶ್ವದ ಯಾವ ಶಕ್ತಿಯೂ ಭಾರತದ ಬೆಳವಣಿಗೆಯನ್ನು ತಡೆಯಲು ಆಗುವುದಿಲ್ಲ.
ಅಪಿ ಸ್ವರ್ಣಮಯಿ ಲಂಕಾ ನ ಮೇ ಲಕ್ಷ್ಮಣ ರೋಚತೇ,
ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ||
ರಾವಣನ ಜತೆಗಿನ ಯುದ್ಧದಲ್ಲಿ ಗೆದ್ದ ನಂತರ ಲಂಕೆಯ ನೆಲದಲ್ಲಿ ನಿಂತು ಶ್ರೀರಾಮ ಈ ಮಾತನ್ನು ಲಕ್ಷ್ಮಣನಿಗೆ ಹೇಳುತ್ತಾನೆ ಎಂಬ ಮಾತಿದೆ. ಇದು ಮೂಲ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ ಎಂದೂ ಕೆಲವರು ಹೇಳುತ್ತಾರೆ. ಅದಿರಲಿ, ಇದರ ಅರ್ಥ ಮಾತ್ರ ರಾಮನ ಸ್ವಭಾವಕ್ಕೆ ಸಹಜವಾಗಿಯೇ ಅನುಗುಣವಾಗಿದೆ. ಈ ಲಂಕೆಯು ಚಿನ್ನದಿಂದ ನಿರ್ಮಾಣ ಆಗಿರಬಹುದು, ಆದರೆ ತಾಯಿ ಮತ್ತು ತಾಯಿ ಭೂಮಿಯು ಸ್ವರ್ಗಕ್ಕಿಂತ ಹಿರಿದಾದದ್ದು ಎನ್ನುವುದು ಈ ಸಂಸ್ಕೃತ ಶ್ಲೋಕದ ಅರ್ಥ. ಶ್ರೀರಾಮನು ಎರಡು ವಿಚಾರಗಳನ್ನು ಇಲ್ಲಿ ಉಲ್ಲೇಖಿಸಿದ್ದಾನೆ. ಮೊದಲನೆಯದು ತಾಯಿ, ಎರಡನೆಯದು ತಾಯಿಭೂಮಿ.
ಲಕ್ಷ್ಮಣದ ಆಶಯದಂತೆ ಲಂಕೆಯಲ್ಲೇ ಇರಬೇಕೆಂದು ಶ್ರೀರಾಮ ನಿರ್ಧಾರ ಮಾಡಿದ್ದೇ ಆಗಿದ್ದರೆ ತಾಯಿ ಕೌಸಲ್ಯೆಯನ್ನು ಇಲ್ಲಿಗೇ ಕರೆತಂದು ವಾಸ ಮಾಡುವುದು ಕಷ್ಟವೇನೂ ಆಗಿರುತ್ತಿರಲಿಲ್ಲ. ಆದರೆ ಎರಡನೆಯದು ತಾಯಿಭೂಮಿ. ತಾಯಿಭೂಮಿ ಬೇಕೆಂದರೆ ಶ್ರೀರಾಮ ಮತ್ತೆ ಅಯೋಧ್ಯೆಗೇ ಮರಳಲೇಬೇಕು. ಅದು ಮಾತೃಭೂಮಿಯ ವಿಶೇಷತೆ. ಮಾತೃಭೂಮಿ ಎಂದರೆ ಏನು? ಅಲ್ಲಿನ ಅರಮನೆಯೇ? ಅಲ್ಲಿರುವ ಸ್ನೇಹಿತರೇ? ಅಲ್ಲಿರುವ ಬಂಧು ಬಳಗವೇ? ಅಲ್ಲಿರುವ ಸೇವಕರೇ? ಅಲ್ಲಿರುವ ಆಸ್ತಿಪಾಸ್ತಿಯೇ? ಇವೆಲ್ಲವೂ ಚಲಿಸುವಂತಹವು ಹಾಗೂ ಜಗತ್ತಿನಲ್ಲಿ ಎಲ್ಲಿಬೇಕಾದರೂ ನಿರ್ಮಾಣ ಮಾಡಿಕೊಳ್ಳಬಹುದಾದ ಸಂಗತಿಗಳು. ಆದರೆ, ಮಾತೃಭೂಮಿಯಲ್ಲಿ ಮಾತ್ರವೇ ಇರುವ ಏಕೈಕ ಅಂಶವೆಂದರೆ ಮಣ್ಣು. ನನ್ನ ಊರಿನ ಮಣ್ಣು, ಅದರ ವಾಸನೆ, ಅದರೊಂದಿಗಿನ ಒಡನಾಟ ಇಡೀ ವಿಶ್ವದ ಇನ್ನಾವ ಮಣ್ಣಿನಲ್ಲೂ ಸಿಗುವುದಿಲ್ಲ. ಅದು ಭಾರತೀಯರಿಗೆ ಮಣ್ಣಿನೊಂದಿಗಿರುವ ಸಂಬಂಧ.
ಸ್ವಾತಂತ್ರ್ಯ ಪ್ರಾಪ್ತಿಯ ಮಾರ್ಗದಲ್ಲಿ ದೇಶದಿಂದ ಬ್ರಿಟನ್ನಿನ ಕಡೆಗೆ ಸಾಗಿದವರು ವೀರ ಸಾವರ್ಕರ್. ಬ್ರಿಟಿಷರ ಗುಹೆಯೊಳಗೇ ನುಗ್ಗಿ ಬೆದರಿಸಿಬರುತ್ತೇನೆ ಎಂದೇನೊ ಸಾವರ್ಕರ್ ಹೊರಡುತ್ತಾರೆ. ಆ ಕಾರ್ಯದಲ್ಲಿ ಸಾಕಷ್ಟು ಯಶವನ್ನೂ ಕಾಣುತ್ತಾರೆ. ಆದರೆ ಅಲ್ಲಿಗೆ ತೆರಳಿದ ನಂತರ ಮಾತೃಭೂಮಿಯ ಮೇಲಿನ ಉತ್ಕಟ ಪ್ರೇಮವನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಅಲ್ಲಿನ ಸಮುದ್ರದ ಬಳಿ ನಿಂತು ಭಾರತದ ಕಡೆಗೆ ತಿರುಗಿ ಕಣ್ಣೀರು ಹಾಕುತ್ತಾರೆ. ಓ ಮಾತೃಭೂಮಿ, ನಿನಗಾಗಿ ತ್ಯಾಗ ಮಾಡುವುದೇ ಜೀವನ, ನಿನ್ನ ಹೊರತಾಗಿ ಜೀವಿಸುವುದೇ ಮರಣ ಎಂದು ಹೇಳಿದವರು ಸ್ವಾತಂತ್ರ್ಯ ವೀರ ಸಾವರ್ಕರ್. ಸಮುದ್ರದ ಬಳಿ ನಿಂತು ʼಸಾಗರಾ ಪ್ರಾಣ ತಳಮಳಲಾ…” ಎಂದು ಹೇಳಿದ್ದು, “ಓ ಮಾತೃಭೂಮಿ…” ಎಂದು ಉಲ್ಲೇಖಿಸುವಾಗಲೂ ಸಾವರ್ಕರ್ ಕಣ್ಣಿನಲ್ಲಿ ಇದ್ದದ್ದು ಇಲ್ಲಿನ ಭೂಭಾಗ, ಅಂದರೆ ಮಣ್ಣೇ ಅಲ್ಲವೇ.
ಇದೇನು ಇಷ್ಟು ಮಹಾನ್ ವಿಚಾರ? ಎಂದು ಯಾರಾದರೂ ಕೇಳಬಹುದು. ಮಣ್ಣಿನ ಕುರಿತು ಈ ಮಟ್ಟಿಗಿನ ಉತ್ಕಟ ಪ್ರೇಮವನ್ನು ಹೊಂದಿರುವ ನಾಗರಿಕತೆಗಳು ಹೆಚ್ಚಿಲ್ಲ. ಜೀವನ ಎಲ್ಲಿದ್ದರೂ ನಡೆಯುತ್ತದೆಯಲ್ಲವೇ? ಮನುಷ್ಯನಿಗೆ ಬೇಕಿರುವುದು ರೋಟಿ, ಕಪಡಾ, ಮಕಾನ್ ತಾನೇ? ಎನ್ನುವವರಿಗೆ ಮಣ್ಣಿನ ಮಹತ್ವ ತಿಳಿಯುವುದಿಲ್ಲ. ಹಾಗೆ ನೋಡಿದರೆ, ಹುಟ್ಟಿದ ಮಣ್ಣಲ್ಲೇ ಮಣ್ಣಾಗಬೇಕು ಎಂಬುದು ಭಾರತದ ಅತಿದೊಡ್ಡ ನಂಬಿಕೆ. ಸತ್ತರೆ ತಮ್ಮ ದೇಹ ಹುಟ್ಟೂರಿನ ಮಣ್ಣಲ್ಲಿ ಸಮಾಧಿಯಾಗಬೇಕು ಇಲ್ಲವೇ ಸುಟ್ಟು ಭಸ್ಮವಾಗಬೇಕು ಎಂಬುದು ಎಲ್ಲರ ಅಂತಿಮ ಬಯಕೆಯೇ ಆಗಿರುತ್ತದೆ. ಹಾಗಾಗಿಯೇ ದೊಡ್ಡ ದೊಡ್ಡ ಸಾಧಕರು, ಮಹಾ ವ್ಯಕ್ತಿಗಳು ನಿಧನರಾದ ಬಳಿಕ, ಅವರ ದೇಹವನ್ನು ತಾಯ್ನೆಲದಲ್ಲಿಯೇ ಮಣ್ಣು ಮಾಡಲಾಗುತ್ತದೆ. ಏಕೆಂದರೆ, ಅವರೆಲ್ಲರೂ ಆ ಮಣ್ಣಿನ ಮಕ್ಕಳೇ ಆಗಿರುತ್ತಾರೆ.
ಮಣ್ಣಿನ ಮಗ ಎನಿಸಿಕೊಳ್ಳುವುದು ಶ್ರೀಸಾಮಾನ್ಯನಿಂದ ಅಸಾಮಾನ್ಯರವರೆಗೆ- ಎಲ್ಲರಿಗೂ ಅಭಿಮಾನದ ಸಂಗತಿ ಇಲ್ಲಿ.
ಈಗ ಪ್ರಧಾನಿ ನರೇಂದ್ರ ಮೋದಿಯವರು ಮೇರೀ ಮಾಠಿ-ಮೇರಾ ದೇಶ್ ಅಭಿಯಾನಕ್ಕೆ ಕರೆ ನೀಡಿದ್ದಾರೆ. ದೇಶಾದ್ಯಂತ ಈಗ ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮಾಚಣೆ ನಡೆಯುತ್ತಿದೆ. ಈ ಸಂಭ್ರಮಾಚರಣೆಯ ಸಮಾರೋಪಕ್ಕೆ ಮೇರೀ ಮಾಠಿ-ಮೇರಾ ದೇಶ್ ಅಂದರೆ ನನ್ನ ಮಣ್ಣು-ನನ್ನ ದೇಶ ಎಂಬ ಅಭಿಯಾನ. ಈ ಅಭಿಯಾನಕ್ಕೆ ಟ್ಯಾಗ್‌ಲೈನ್ ಎಂದರೆ ಮಿಟ್ಟೀ ಕೊ ನಮನ್-ವೀರೋಂ ಕಾ ವಂದನ್ ಎನ್ನುವುದು.
ನಮ್ಮ ದೇಶವನ್ನು ರಕ್ಷಣೆ ಮಾಡುವ ಸೈನಿಕರನ್ನು ಗೌರವಿಸುವುದು, ದೇಶದ ಸಾಧನೆಗಳನ್ನು ಸ್ಮರಿಸುವುದು. ಈ ಕಾರ್ಯಕ್ರಮಗಳನ್ನು ದೇಶದ ಹಳ್ಳಿ ಹಳ್ಳಿಗಳಲ್ಲೂ, ಜಿಲ್ಲಾ ಮಟ್ಟದಲ್ಲೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲೂ ಆಚರಿಸಲು ಕರೆ ನೀಡಿದ್ದಾರೆ. ಈ ಅಭಿಯಾನದಡಿ, ಗ್ರಾಮದಲ್ಲಿ ದೇಸಿ ಸಸಿಗಳನ್ನು ನೆಡುವುದು ಸೇರಿ ಅನೇಕ ಕಾರ್ಯಕ್ರಮಗಳಿವೆ. ದೇಶಕ್ಕೆ ಪ್ರಾಣತ್ಯಾಗ ಮಾಡಿದ ವೀರ ಸೈನಿಕರು, ಪೊಲೀಸರು, ಸ್ವಾತಂತ್ರ್ಯ ಹೋರಾಟಗಾರರ ಹೆಸರಿರುವ ಶಿಲಾಫಲಕವನ್ನು ಗ್ರಾಮ, ಗ್ರಾಮ ಪಂಚಾಯಿತಿಯಲ್ಲಿ ಸ್ಥಾಪಿಸುವುದೂ ಈ ಕಾರ್ಯದಲ್ಲಿ ಒಂದು. ಪಂಚ ಪ್ರಾಣ ಸಂಕಲ್ಪ, ಅಂದರೆ 1. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸುವ ಸಂಕಲ್ಪ, 2. ವಸಾಹತುಶಾಹಿ ಮಾನಸಿಕತೆಯ ಕುರುಹುಗಳನ್ನು ಕಿತ್ತೊಗೆಯುವುದು, 3. ನಮ್ಮ ಪರಂಪರೆಯಲ್ಲಿ ಹೆಮ್ಮೆ ಕಾಣುವುದು, 4. ನಮ್ಮ ಏಕತೆಯೇ ನಮ್ಮ ಶಕ್ತಿ ಎಂದು ತಿಳಿಯುವುದು, 5. ನಾಗರಿಕರಾಗಿ ಪ್ರಾಮಾಣಿಕತೆಯಿಂದ ನಮ್ಮ ಕರ್ತವ್ಯ ನಿರ್ವಹಿಸುವುದು. ಈ ಸಂಕಲ್ಪಗಳನ್ನು ಮಾಡುತ್ತ ಪ್ರತಿ ಗ್ರಾಮದಿಂದಲೂ ಮಣ್ಣನ್ನು ಸಂಗ್ರಹಿಸಿ ನವದೆಹಲಿಗೆ ಕಳಿಸಬೇಕು.
ನವದೆಹಲಿಯಲ್ಲಿ ಸೈನಿಕರ ನೆನಪಿನಲ್ಲಿ ಸ್ಥಾಪನೆಯಾಗಲಿರುವ ವನದಲ್ಲಿ, ದೇಶದ ವಿವಿಧೆಡೆಯಿಂದ ಬಂದ ಈ ಮಣ್ಣನ್ನು ಹಾಕಲಾಗುತ್ತದೆ. ಅಲ್ಲಿ ಸೈನಿಕರಿಗೆ ವಂದನೆ ಸಲ್ಲಿಸುವ ಗುರುತು, ವನ ನಿರ್ಮಾಣ ಮಾಡಲಾಗುತ್ತದೆ. ಪ್ರತಿ ಸೈನಿಕನೂ ಗಡಿಯಲ್ಲಿ ಕಾಯುವುದು ಮಣ್ಣನ್ನೇ. ದೇಶದ ಜನರಿಗೆ ಆಹಾರ ನೀಡುವ ರೈತನೂ, ಗಡಿಯಲ್ಲಿ ದೇಶವನ್ನು ಕಾಯುವ ಸೈನಿಕನೂ ತಾಯಿಯ ಸಂಬಂಧವನ್ನು ಹೊಂದುವುದು ಕೊನೆಗೆ ಮಣ್ಣಿನೊಂದಿಗೆ.
ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದವರು ಹೇಳುವುದು, ಈ ಮಣ್ಣಿಗಾಗಿ ಹೋರಾಡುವೆ ಎಂದು. ಸೈನಿಕರು ಹೇಳುವುದು, ಈ ಮಣ್ಣಿಗಾಗಿ ಪ್ರಾಣ ಕೊಡುವೆ ಎಂದು. ಆದರೆ ಮಣ್ಣು ಎನ್ನುವುದು ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ವಸ್ತುವಾಗಿದೆ, ಇದು ನಮ್ಮ ಮೌಲ್ಯಗಳಿಗೆ ವಿರುದ್ಧವಾದದ್ದು. ಇಂದು ಹಣ ಎನ್ನುವುದು ಮನುಷ್ಯನನ್ನು ಎಷ್ಟು ಆವರಿಸಿಕೊಂಡಿದೆ ಎಂದರೆ, ಅವನಿಗೆ ಮಣ್ಣಿನ ಮೇಲಿನ ಮಾತೃ ಸಂಬಂಧ ಕಡಿಮೆಯಾಗುತ್ತಿದೆ. ರಿಯಲ್ ಎಸ್ಟೇಟ್ ಎನ್ನುವುದು ಒಂದು ಮಾಫಿಯಾವಾಗಿ ದಿನದಿನವೂ ಸಾವಿರಾರು ಎಕರೆ ಹೊಲ, ಗದ್ದೆಗಳನ್ನು ಲೇಔಟ್‌ಗಳಾಗಿ ಪರಿವರ್ತನೆ ಮಾಡುತ್ತಿದೆ. ಇದು ಕೇವಲ ಬೆಂಗಳೂರಿನ ಮಾತಲ್ಲ. ಜಿಲ್ಲಾ ಕೇಂದ್ರಗಳ ಸುತ್ತಮುತ್ತ, ತಾಲೂಕು ಕೇಂದ್ರದ ಆಸುಪಾಸಿನಲ್ಲೂ ಇದು ಹರಡಿಕೊಳ್ಳುತ್ತಿದೆ. ತಮ್ಮ ಜಮೀನನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಸಣ್ಣ ಅಳುಕೂ ಇಲ್ಲದೆ ರೈತರು ಕೋಟಿ ಕೋಟಿ ಹಣಕ್ಕೆ ಸಂತೋಷದಿಂದ ಭೂಮಿಯನ್ನು ಮಾರುವುದನ್ನು ಕಂಡರೆ ಬೇಸರವಾಗುತ್ತದೆ. ಇದೇ ಮಾನಸಿಕತೆ ನಿಧಾನವಾಗಿ ದೇಶದ ಕುರಿತೂ ಮೂಡುತ್ತದೆ.
ಈ ಹಿಂದೆ ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಪ್ರತಿ ಗ್ರಾಮದಿಂದ ಇಟ್ಟಿಗೆಯನ್ನು ಪೂಜಿಸಿ ಕಳಿಸಿಕೊಡಲಾಗಿತ್ತು. ಕನ್ಯಾಕುಮಾರಿಯಲ್ಲಿ ನಿರ್ಮಾಣವಾದ ಸ್ವಾಮಿ ವಿವೇಕಾನಂದ ಶಿಲಾ ಸ್ಮಾರಕಕ್ಕೆ ದೇಶದ ಎಲ್ಲ ಸರ್ಕಾರಗಳಿಂದಲೂ ಹಣ ಸಂಗ್ರಹ ಮಾಡಲಾಗಿತ್ತು. ಗುಜರಾತ್‌ನಲ್ಲಿ ಇತ್ತೀಚೆಗೆ ನಿರ್ಮಿಸಿರುವ ಸರ್ದಾರ್ ಪಟೇಲರ ಪ್ರತಿಮೆಗೆ (ಏಕತೆಯ ಪ್ರತಿಮೆ) ದೇಶದ ಪ್ರತಿ ಗ್ರಾಮದಿಂದ, ಕೃಷಿಯಲ್ಲಿ ಬಳಸಿದ ಕಬ್ಬಿಣದ ತುಂಡನ್ನು ಸಂಗ್ರಹಿಸಲಾಗಿತ್ತು. ಈಗ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಪ್ರತಿ ಪ್ರಜೆಯೂ ಹಣದ ದೇಣಿಗೆ ನೀಡುವ ಮೂಲಕ ತನ್ನ ಕರ್ತವ್ಯ ಮೆರೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಿರ್ಮಾಣವಾದ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೂ ಪ್ರತಿ ಗ್ರಾಮದಿಂದ ಮಣ್ಣು ಸಂಗ್ರಹ ಮಾಡಲಾಗಿತ್ತು.
ಇದೆಲ್ಲ ಏನನ್ನು ಸಚಿಸುತ್ತದೆ? ದೇಶದ ನಿರ್ಮಾಣದಲ್ಲಿ ನಮ್ಮ ಪಾತ್ರವೂ ಇದೆ ಎನ್ನುವುದನ್ನು ಇದು ಜನಮಾನಸದಲ್ಲಿ ಮೂಡಿಸುತ್ತದೆ. ಈ ಪ್ರತಿಮೆ, ಮಂದಿರ ನಿರ್ಮಾಣದಲ್ಲಿ ನನ್ನ ಹಣ, ನನ್ನ ಊರಿನ ಮಣ್ಣು ಇದೆ ಎನ್ನುವುದೇ ಅದು ಸ್ವಂತದ ಅನುಭವ ನೀಡುತ್ತದೆ. ಈಗ ಮೇರಾ ಮಾಠಿ-ಮೇರಾ ದೇಶ್ ಅಭಿಯಾನವೂ ಪ್ರತಿ ಭಾರತೀಯನಲ್ಲಿ ಏಕತೆಯ ಭಾವನೆ ಮೂಡಿಸುತ್ತದೆ.
ಇದೆಲ್ಲ ಭಾವನಾತ್ಮಕ ವಿಚಾರಗಳು. ಈಗೇಕೆ? ಅಭಿವೃದ್ಧಿ ಕಡೆಗೆ ಗಮನ ನೀಡಬೇಕಲ್ಲವೇ ಎಂಬ ಪ್ರಶ್ನೆ ಏಳುತ್ತದೆ. ಈಗ ದೇಶದಲ್ಲಿ ಎಲ್ಲ ಸಂಪನ್ಮೂಲ ಇದೆ, ಮೂಲಸೌಕರ್ಯಗಳೂ ಎಂದಿಗಿಂತ ವೇಗವಾಗಿ ಬೆಳೆಯುತ್ತಿವೆ. ವಿಮಾನಗಳು ಇಳಿಯಬಹುದಾದಂತಹ ರಸ್ತೆಗಳನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ. ಆದರೆ ದೇಶದ ಜನರಲ್ಲಿ ಜಾತಿ, ಲಿಂಗ, ಉಪಾಸನೆ ಆಧಾರದಲ್ಲಿ ಭಿನ್ನತೆ ಮೂಡಿಸುವ ಪ್ರಯತ್ನವೂ ಅಷ್ಟೇ ವೇಗದಿಂದ ಸಾಗಿದೆ. ಸನಾತನ ಧರ್ಮವನ್ನು ನಾಶ ಮಾಡುತ್ತೇನೆ ಎನ್ನುವುದರಿಂದ, ಪ್ರತ್ಯೇಕ ಜಾತಿಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳೂ ಆತಂಕ ಮೂಡಿಸುವಂತಹವು. ಇಂತಹ ಒಡಕನ್ನು ಮೀರಿ ನಿಲ್ಲಲು ಬೇಕಿರುವುದು ಒಮ್ಮತ. ಹಾಗಾಗಿ ಭಾವ ಜಾಗರಣೆಯೇ ಇಂದಿನ ಅಗತ್ಯ.
ಇದನ್ನೂ ಓದಿ: ವಿಸ್ತಾರ ಅಂಕಣ: ತುರ್ತು ಪರಿಸ್ಥಿತಿ ಕಡೆಗೆ ಹೊರಳುತ್ತಿದೆ ಡಿಜಿಟಲ್ ನೈತಿಕ ಪೊಲೀಸ್ ಗಿರಿ
ಪ್ರತಿ ಭಾರತೀಯನೂ, ಈ ದೇಶ ನನ್ನದು, ನಾನು ನನ್ನ ಕರ್ತವ್ಯ ನಿರ್ವಹಿಸಿದರೆ ಮಾತ್ರ ದೇಶ ಏಳಿಗೆ ಆಗುತ್ತದೆ ಎಂದು ಭಾವಿಸಬೇಕು. ಆಗ ವಿಶ್ವದ ಯಾವ ಶಕ್ತಿಯೂ ಭಾರತದ ಬೆಳವಣಿಗೆಯನ್ನು ತಡೆಯಲು ಆಗುವುದಿಲ್ಲ. ಮನಸ್ಸೊಂದಿದ್ದರೆ ಮಾರ್ಗ ಇರುತ್ತದೆ ಎನ್ನುವುದನ್ನು ಕೋವಿಡ್ ಸಮಯದಲ್ಲಿ ಭಾರತ ನಿರೂಪಿಸಿದೆ. ಒಂದೂ ಪಿಪಿಇ ಕಿಟ್ ತಯಾರಾಗದಿದ್ದ ಭಾರತವು ಕೆಲವೇ ತಿಂಗಳಲ್ಲಿ ಪಿಪಿಇ ಕಿಟ್ ರಫ್ತುದಾರ ದೇಶವಾಯಿತು. ತನ್ನ ನೂರ ನಲವತ್ತು ಕೋಟಿ ಜನರಿಗೆ ಲಸಿಕೆ ಅಷ್ಟೆ ಅಲ್ಲದೆ, ವಿಶ್ವದ ಅನೇಕ ದೇಶಗಳಿಗೂ ಲಸಿಕೆಯನ್ನು ಸರಬರಾಜು ಮಾಡಿತು. ಹಾಗಾಗಿ ಇಂದು ಬೇಕಾಗಿರುವುದು ಭಾವಜಾಗೃತಿಯ ಕೆಲಸ. ನಮ್ಮೆಲ್ಲರ ಮೈಯಲ್ಲಿ ಹರಿಯುವ ರಕ್ತವೊಂದೆ, ನಮ್ಮೆಲ್ಲ ನೆಲದಲ್ಲಿನ ಮಣ್ಣು ಒಂದೆ, ನಾವೆಲ್ಲ ಭಾರತೀಯರು ಎಂಬ ಭಾವನೆ ಇಂದು ಬಲವಾಗಿ ಬೇರೂರಬೇಕು. ಈ ಮಂತ್ರವೊಂದೇ ಸಾಕು ನಮ್ಮನ್ನು ವಿಶ್ವಗುರು ಆಗಿಸಲು. ಸದ್ಯ ದೇಶದ ಪ್ರತಿ ಹೃದಯವನ್ನೂ ತಲುಪಬಲ್ಲ ವ್ಯಕ್ತಿ ಎಂದು ಯಾರಾದರೂ ಇದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ಮಾತ್ರ. ಮೇರಿ ಮಾಠಿ-ಮೇರಾ ದೇಶ್ ರೀತಿಯ ಅಭಿಯಾನದ ಮೂಲಕ ದೇಶದಲ್ಲಿ ಭಾವಜಾಗರಣವನ್ನು ಮೋದಿಯವರಿಗಿಂತ ಉತ್ತಮವಾಗಿ ಬೇರೆ ಯಾರಿಂದ ಮೂಡಿಸಲು ಸಾಧ್ಯ? ನಾವೂ ಈ ಅಭಿಯಾನದಲ್ಲಿ ಭಾಗವಹಿಸೋಣ. ನಮ್ಮ ನೆಲ, ಮಣ್ಣಿನ ಮೇಲಿನ ಪ್ರೇಮವನ್ನು ನೈಜವಾಗಿಸಿಕೊಳ್ಳುವ ಮೂಲಕ ದೇಶಸೇವೆಗೆ ಅಳಿಲು ಸೇವೆ ಸಲ್ಲಿಸೋಣ ಅಲ್ಲವೇ?
ಕೊನೆ ಮಾತು: ಅಭಿಯಾನಕ್ಕಾಗಿಯೇ ವೆಬ್‌ಸೈಟ್ www.merimaatimeradesh.gov.inಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಕಾರ್ಯಕ್ರಮದ ಸಂಪೂರ್ಣ ವಿವರ ಅಲ್ಲಿದೆ. ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಪ್ರತಿಜ್ಞೆಯನ್ನು ಓದುವ ಜತೆಗೆ ಮಣ್ಣಿನ ಜತೆಗೆ ಫೋಟೊ ತೆಗೆದುಕೊಂಡು ಅಪ್‌ಲೋಡ್ ಕೂಡ ಮಾಡಬಹುದು. ಈ ಮೂಲಕ ದೇಶದಲ್ಲಿ ಈ ಕಾರ್ಯ ಕೈಗೊಂಡಿರುವ ಕೋಟ್ಯಂತರ ಜನರ ಜತೆಯಾಗಬಹುದು.
ಇದನ್ನೂ ಓದಿ: ವಿಸ್ತಾರ ಅಂಕಣ: ತಮಿಳುನಾಡಿನ ರಾಜಕಾರಣಿಗಳು ಜನರನ್ನು ನಿರಂತರವಾಗಿ ಹೇಗೆ ವಂಚಿಸುತ್ತಿದ್ದಾರೆ ಗೊತ್ತೇ?
ಅಂಕಣ
ಮೊಗಸಾಲೆ ಅಂಕಣ: ಬರಗಾಲ ಇದ್ದರೂ ಸಚಿವರ ದರಬಾರಿಗೆ ಕೊನೆಯೇ ಇಲ್ಲ!
ಸಾರ್ವಜನಿಕ ಉದ್ದೇಶಗಳಿಗೆ ಹಣ ಮಂಜೂರು ಮಾಡುವ ಸಂದರ್ಭಗಳಲ್ಲಿ ಬಜೆಟ್‍ನಲ್ಲಿ ಅದಕ್ಕೆ ಬೇಕಾದ ಹಣದ ಲಭ್ಯತೆ ಇಲ್ಲವೇ ಇಲ್ಲ ಎಂದು ರಾಗ ಎಳೆಯುವ ಅರ್ಥ ಇಲಾಖೆ, ಸಂಪುಟ ಸಚಿವರ ಹೊಸ ಕಾರಿನ ತೆವಲು ಪೂರೈಸುವುದಕ್ಕೆ, ಬಂಗಲೆಗಳ ಅಲಂಕಾರಕ್ಕೆ ದೊಡ್ಡ ಮೊತ್ತದ ಬಿಡುಗಡೆಗೆ ಹಸಿರು ನಿಶಾನೆ ತೋರಿರುವುದು ಆತಂಕಕಾರಿ.
ಅಜ್ಜಿಗೆ ಅರಿವೆಯ ಚಿಂತೆಯಾದರೆ ಮೊಮ್ಮಗಳಿಗೆ…ಚಿಂತೆ ಎಂಬ ಗಾದೆ ನೆನಪಿನಂಗಳದಲ್ಲಿ ಒತ್ತರಿಸುತ್ತಿರುವುದಕ್ಕೆ ರಾಜ್ಯ ಸರ್ಕಾರದ ಎಡಬಿಡಂಗಿ ನೀತಿ ನಿಲುವು ಕಾರಣ. ಇನ್ನೂ ಹೆಚ್ಚು ಸ್ಪಷ್ಟವಾಗಿ ಹೇಳಬಹುದಾದರೆ ಈ ನಿಲುವಿಗೆ ಸರ್ಕಾರ ಬಂದಿರುವುದಕ್ಕೆ ಅರ್ಥ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ (CM Siddaramaiah) ಕಾರಣ ಪುರುಷ. ರಾಜ್ಯದಲ್ಲಿ ಹೊಸ ಸರ್ಕಾರ (Karnataka government) ಬಂದು ಮೂರು ತಿಂಗಳು ಕಳೆದು ಹೋಗಿದೆ. ಸರ್ಕಾರದ ಕಾರ್ಯಕ್ರಮದಲ್ಲಿ ಆದ್ಯತೆ ಎನ್ನುವುದೊಂದು ಅದರ ಹೃದಯದಲ್ಲಿರಬೇಕು. ಆ ಆದ್ಯತೆಗಳಲ್ಲಿ ಮೊದಲನೆಯದು ಆರ್ಥಿಕ ಶಿಸ್ತಿನದಾಗಿರಬೇಕು. ಆ ಶಿಸ್ತನ್ನು ನಿಯಂತ್ರಿಸುವ ಕೆಲಸವನ್ನು ಅರ್ಥ ಇಲಾಖೆ ಮಾಡಬೇಕು. ಗೂಳಿ ಎಲ್ಲೆಂದರಲ್ಲಿ ನುಗ್ಗದಂತೆ ಹಗ್ಗ ಜಗ್ಗುವ ಕೆಲಸವನ್ನು ಸಿದ್ದರಾಮಯ್ಯ ಮಾಡಬೇಕು. ಅವರು ಮಾಡುತ್ತಿಲ್ಲ ಎನ್ನಲು ರಾಜ್ಯದ ಜನತೆ ಹಿಂದೆಮುಂದೆ ನೋಡಬೇಕಾದ ಅಗತ್ಯವಿಲ್ಲ.
ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯೂ ಸೇರಿದಂತೆ 35 ಸಚಿವ ಹುದ್ದೆ ಭರ್ತಿಯಾಗಿದೆ. ಅವರಲ್ಲಿ ಕೆಲವರು ಹಳಬರು, ಅನುಭವಸ್ಥರು. ಮತ್ತೆ ಕೆಲವರು ಇದೇ ಮೊದಲಬಾರಿಗೆ ಸಚಿವ ಸ್ಥಾನ ಪಡೆದವರು. ಅವರಿಗೆಲ್ಲ ಬೆಂಗಳೂರಲ್ಲಿ ವಾಸ್ತವ್ಯಕ್ಕೆ ಅಧಿಕೃತ ಸರ್ಕಾರಿ ಬಂಗಲೆಗಳು ಮಂಜೂರಾಗಿವೆ. ಬಹುತೇಕರು ಮನೆ ಪ್ರವೇಶಕ್ಕೆ ಸುಣ್ಣಬಣ್ಣದ ಕೆಲಸ ಸಮರ್ಪಕವಾಗಿ ಮುಗಿಯಲಿ ಮತ್ತು ಹೊಸ ಪೀಠೋಪಕರಣಗಳ ಅಳವಡಿಕೆ ಕೆಲಸ ಪೂರೈಸಲಿ ಎಂದು ಕಾದಿದ್ದಾರೆ. ಏತನ್ಮಧ್ಯೆ ಎಲ್ಲ ಸಚವರಿಗೂ ಐಷಾರಾಮೀ ಹೊಸ ಕಾರು ಕೊಡಿಸುವ ಸಿದ್ಧತೆ ಸಾಗಿದೆ. ಎಲ್ಲ ಸಚಿವರ ಮನೆ ಅಲಂಕಾರಕ್ಕೆ ಮತ್ತು ಹೊಸ ಕಾರು ಖರೀದಿಗೆ ಅರ್ಥ ಇಲಾಖೆ 24-25 ಕೋಟಿ ರೂಪಾಯಿ ಮೊತ್ತವನ್ನು ಮಂಜೂರು ಮಾಡಿದೆ ಎಂಬ ಸುದ್ದಿ ನಿಜಕ್ಕೂ ಆತಂಕಕಾರಿ.
ಸಾರ್ವಜನಿಕ ಉದ್ದೇಶಗಳಿಗೆ ಹಣ ಮಂಜೂರು ಮಾಡುವ ಸಂದರ್ಭಗಳಲ್ಲಿ ಬಜೆಟ್‍ನಲ್ಲಿ ಅದಕ್ಕೆ ಬೇಕಾದ ಹಣದ ಲಭ್ಯತೆ ಇಲ್ಲವೇ ಇಲ್ಲ ಎಂದು ರಾಗ ಎಳೆಯುವ ಅರ್ಥ ಇಲಾಖೆ, ಸಂಪುಟ ಸಚಿವರ ಹೊಸ ಕಾರಿನ ತೆವಲು ಪೂರೈಸುವುದಕ್ಕೆ, ಬಂಗಲೆಗಳ ಅಲಂಕಾರಕ್ಕೆ ಇಷ್ಟು ದೊಡ್ಡ ಮೊತ್ತದ ಬಿಡುಗಡೆಗೆ ಹಸಿರು ನಿಶಾನೆ ತೋರಿರುವುದು ಆತಂಕಕ್ಕೆ ಕಾರಣ. ರಾಜ್ಯದ ತೊಂಭತ್ತು ಭಾಗ ಬರದಡಿಯಲ್ಲಿ ಸಿಕ್ಕು ನರಳುತ್ತಿರುವ ಈ ಸಂಕಷ್ಟ ಸಮಯದಲ್ಲಿ ಹೊಸ ಕಾರಿನ ಹುಚ್ಚನ್ನು ತೆವಲು ಎನ್ನದೆ ಬೇರಿನ್ಯಾವ ಶಬ್ದ ಬಳಸಿ ಬಣ್ಣಿಸಬೇಕು…?
ಸಚಿವರಿಗೆ ಮಂಜೂರಾಗಿರುವ ಮನೆಗಳು ವರ್ಷಗಳಿಂದ ವಾಗತಿ ಕಾಣದ ಖಾಲಿ ಬಿದ್ದಿರುವ ಭೂತ ಬಂಗಲೆಗಳೇನೂ ಅಲ್ಲ. ಮೂರು ತಿಂಗಳ ಹಿಂದಿನವರೆಗೂ ಆ ಮನೆಗಳಲ್ಲಿ ವಾಸವಿದ್ದವರು ಹಿಂದಿನ ಬಿಜೆಪಿ ಸರ್ಕಾರದ ಸಚಿವರು, ಉಭಯ ಸದನಗಳ ಮುಖ್ಯ ಸಚೇತಕರು, ವಿಧಾನ ಸಭೆ ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕರು ಇತ್ಯಾದಿ. ಎರಡೂ ಸದನಗಳ ಅಧ್ಯಕ್ಷ, ಸಭಾಪತಿ. ಅವರು ಮನೆ ತೊರೆದರು ಎಂದ ಮಾತ್ರಕ್ಕೆ ಅಲ್ಲಿ ಹೊಸದಾಗಿ ಪ್ರವೇಶ ಪಡೆಯುವವರು ದುಂದುವೆಚ್ಚದಲ್ಲಿ ಮನೆ ಅಲಂಕಾರ ಮಾಡಬೇಕೆಂದೇನೂ ಇಲ್ಲ.
ಸಾಮಾನ್ಯವಾಗಿ ಸಚಿವರು ವಾಸವಿರುವ ಮನೆಗಳು ಹಾಳು ಬಿದ್ದಿರದೆ ಒಪ್ಪ ಓರಣವಾಗೇ ಇರುತ್ತವೆ. ಅಂಥ ಮನೆಗಳಿಗೂ ಮತ್ತೆ ಮತ್ತೆ ಸುಣ್ಣಬಣ್ಣ, ಇರುವ ಪೀಠೋಪಕರಣಗಳಿಗೆ ಬದಲಾಗಿ ಹೊಸದಾಗಿ ಕೊಂಡಿದ್ದು, ಕಿಟಕಿ ಬಾಗಿಲುಗಳಿಗೆ ಹೊಸ ಪರದೆ ಬೇಕೆನ್ನುವುದು ಬರಗಾಲದ ಬರ್ಬರ ತೀರ್ಮಾನ. ಓರಣವಾಗಿರುವ ಮನೆಗಳಿಗೆ ಮತ್ತೇಕೆ ಅಷ್ಟೆಲ್ಲ ವೆಚ್ಚದಲ್ಲಿ ಅಂದ ಅಲಂಕಾರ ಎಂದು ಕೇಳಿ ಹಣ ಇಲ್ಲ ಎಂದು ಫೈಲನ್ನು ಹಿಂದಕ್ಕೆ ಕಳಿಸಬೇಕಾದ ಅರ್ಥ ಇಲಾಖೆ ಕಣ್ಮುಚ್ಚಿಕೊಂಡು ಮಂಜೂರಾತಿ ನೀಡುವುದರ ಹಿಂದೆ ಸಾಮಾನ್ಯ ಪ್ರಜ್ಞೆ ಕೆಲಸ ಮಾಡಿದಂತೆ ಕಾಣಿಸುವುದಿಲ್ಲ.
ಕೆಲವು ವರ್ಷ ಹಿಂದೆ ಬಿಜೆಪಿ ಸರ್ಕಾರದಲ್ಲಿ ಎಸ್. ಸುರೇಶ್ ಕುಮಾರ್ ಸಚಿವರಾಗಿದ್ದಾಗಿನ ಮಾತು. ಅವರು ಸರ್ಕಾರಿ ಬಂಗಲೆಗೆ ಸ್ಥಳಾಂತರಗೊಳ್ಳದೆ ತಮ್ಮ ಮತ ಕ್ಷೇತ್ರ ರಾಜಾಜಿ ನಗರದಲ್ಲಿರುವ ಸ್ವಂತ ಮನೆಯಲ್ಲೇ ವಾಸಿಸಲು ತೀರ್ಮಾನ ತೆಗೆದುಕೊಂಡರು. ಎರಡೋ ಮೂರೋ ತಿಂಗಳು ಅಥವಾ ಅದಕ್ಕೂ ತುಸು ಹೆಚ್ಚು ಸಮಯ ಆಗಿರಬಹುದು. ಅವರ ಮನೆಗೆ ಹೊಸ ಪೀಠೋಪಕರಣ ಪೂರೈಸಿ, ಕರ್ಟನ್‍ಗಳನ್ನು ಬದಲಿಸಿ, ಸುಣ್ಣಬಣ್ಣ ಮಾಡಿದ್ದಕ್ಕೆ ಇಷ್ಟು ವೆಚ್ಚವಾಗಿದೆ ಎಂದು ಬಿಲ್ ಸಲ್ಲಿಸಿದ ಸುದ್ದಿ ಅವರ ಗಮನಕ್ಕೆ ಬಂತು. ಅಚ್ಚರಿಯ ಸಂಗತಿ ಎಂದರೆ ಅವರ ಮನೆಗೆ ಯಾವ ಅಲಂಕಾರವೂ ಆಗಿರಲಿಲ್ಲ. ತಕ್ಷಣ ಸಂಬಂಧಿಸಿದ ಇಲಾಖಾ ಮುಖ್ಯಸ್ಥರಿಗೆ ಅವರು ಬರೆದ ಖಾರದ ಪತ್ರ ಸರ್ಕಾರದೊಳಗೆ ಅಧಿಕಾರಿಗಳು ನಡೆಸುವ ಕರಾಮತ್ತನ್ನು ಅನಾವರಣಗೊಳಿಸಿತ್ತು. ಎಲ್ಲರೂ ಸುರೇಶ ಕುಮಾರ್ ಆಗಿರುವುದು ಸಾಧ್ಯವಿಲ್ಲ. ಅವರಿಗೆಲ್ಲ ಹೊಸ ಕಾರು, ಹೊಸದರಂತೆ ಕಾಣಿಸುವ ಬಂಗಲೆ ಬೇಕೇಬೇಕು. ಅದಕ್ಕೆ ತಕ್ಕಂತೆ ಮಣಿಯುವ ಅರ್ಥ ಸಚಿವರು, ಅರ್ಥ ಇಲಾಖೆ ಕಾರ್ಯದರ್ಶಿ ಇದ್ದರೆ ಸುಗ್ಗಿಯೋ ಸುಗ್ಗಿ.
ಇನ್ನು, ಹೊಸ ಐಷಾರಾಮಿ ಕಾರುಗಳ ಖರೀದಿಗೆ ಒಪ್ಪಿಗೆ ನೀಡಿರುವ ಸಮಾಚಾರ. ಹೊಸ ಸಚಿವ ಸಂಪುಟ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಹೊಸ ಮತ್ತು ಹೈಎಂಡ್ ಮಾಡೆಲ್ಲಿನ ಅತ್ಯಾಧುನಿಕ ಕಾರುಗಳಿಗೆ ಬೇಡಿಕೆ ಮಂಡನೆಯಾಗುವುದು ಆ ಪಕ್ಷ ಈ ಪಕ್ಷ ಎನ್ನದೆ ರಾಜಕಾರಣಿಗಳಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುವ ಮತ್ತು ಯಾವತ್ತಿಗೂ ಗುಣವಾಗದ ನಿರ್ಲಜ್ಜ ವ್ಯಾಧಿ. ಸಿದ್ದರಾಮಯ್ಯ ಸಂಪುಟದಲ್ಲಿ ಇರುವ ಸಚಿವರಲ್ಲಿ ಒಬ್ಬಿಬ್ಬರನ್ನು ಹೊರತುಪಡಿಸಿದರೆ ಎಲ್ಲರೂ ನೂರಾರು ಕೋಟಿ ಒಡೆಯರೇ. ಅವರಲ್ಲಿ ಇಲ್ಲದ ಕಾರುಗಳು ಯಾವ ದೇಶದ ಮಾರುಕಟ್ಟೆಯಲ್ಲೂ ಇಲ್ಲ. ಹೀಗಿದ್ದೂ ಅವರಿಗೆ ಸರ್ಕಾರದ ವೆಚ್ಚದಲ್ಲಿ ಹೊಸ ಹೊಸ ಕಾರುಗಳೇ ಬೇಕು. ವ್ಯಸನ ಎಂದು ಕರೆಯುವುದು ಇದನ್ನೇ ಅಲ್ಲವೇ…?
ಇದನ್ನೂ ಓದಿ: ಮೊಗಸಾಲೆ ಅಂಕಣ: ಬರ ಮತ್ತು ಸಾಲ, ರೈತರ ಪಾಲಿನ ಶೂಲ
ಕರ್ನಾಟಕ ಕಂಡ ದಕ್ಷ ಶುದ್ಧ ಹಸ್ತದ ರಾಜಕಾರಣಿಗಳಲ್ಲಿ ಎಂ.ವೈ.ಘೋರ್ಪಡೆ ಒಬ್ಬರು. ದೇವರಾಜ ಅರಸು ಸಂಪುಟದಲ್ಲಿ ಅವರು ಅರ್ಥ ಸಚಿವರಾಗಿ ಕೆಲಸ ಮಾಡಿ ಹೆಸರು ಗಳಿಸಿದವರು. ಸೊಂಡೂರು ಅರಸೊತ್ತಿಗೆಯ ರಾಜಕುಮಾರ ಘೋರ್ಪಡೆ. ಆದರೆ ಅವರಲ್ಲಿ ರಾಜಸ್ತಿಕೆಯ ಸೋಂಕು ಇರಲಿಲ್ಲ. ಅರಸು ಸಂಪುಟದಲ್ಲಿ ಸಚಿವರಾಗಿದ್ದ ಕೆಲವರಿಗೆ ತಾವು ಓಡಾಡಲೆಂದು ಸರ್ಕಾರ ಕೊಟ್ಟ ಅಂಬಾಸಿಡರ್ ಕಾರು ಪುರಾತನವೆನಿಸಿ ಆ ಕಾಲಕ್ಕೆ ಅತ್ಯಾಧುನಿಕ ಎನಿಸಿದ್ದ ಕಾಂಟೆಸ್ಸಾ ಕಾರುಗಳಿಗೆ ಬೇಡಿಕೆ ಮಂಡಿಸಿದ್ದರು. ಕೆಲವರಂತೂ ಅಂಬಾಸಿಡರ್ ಕಾರಿನಲ್ಲಿ ದೂರ ದೂರ ಪ್ರಯಾಣ ಮಾಡಿದರೆ ಮೈಕೈ ವಿಶೇಷವಾಗಿ ಬೆನ್ನು ನೋವು ಖಚಿತ ಎಂದೂ ಅರಸು ಮನ ಕರಗಿಸುವ ಕೆತ್ತೆಬಾಜಿ ನಡೆಸಿದ್ದರು. ಅರಸು ಎಷ್ಟೆಂದರೂ ಅರಸು. ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳದೆ ಅರ್ಥ ಸಚಿವ ಘೋರ್ಪಡೆಯವರೊಂದಿಗೆ ಚರ್ಚೆ ನಡೆಸಿದರು. ಘೋರ್ಪಡೆಯವರು ಕಡ್ಡಿ ಮುರಿದಂತೆ ಹೊಸ ಕಾರಿಗೆ ಹಣ ವೆಚ್ಚ ಮಾಡಬೇಕಾಗಿಲ್ಲ, ಬಳಸಿರುವ ಕಾರುಗಳು ಸುಸ್ಥಿತಿಯಲ್ಲೇ ಇವೆ ಎಂದು ತಮ್ಮಲ್ಲಿದ್ದ ಮಾಹಿತಿಯನ್ನು ಹಂಚಿಕೊಂಡರು. ಅರಸು ಸಮ್ಮತಿಸಿದರು. ಹೊಸ ಕಾಂಟೆಸ್ಸಾ ಕಾರು ಬರಲಿಲ್ಲ ಎಂದಲ್ಲ, ಆ ಸಂದರ್ಭದಲ್ಲಿ ಬರಲಿಲ್ಲ. ಅಲ್ಲೀವರೆಗೆ ಅಂಬಾಸಿಡರ್ ಕಾರಿನಲ್ಲಿ ರಾಜ್ಯ ಸುತ್ತಿದ ಸಚಿವರಿಗೆ ಬೆನ್ನು ನೋವೂ ಬರಲಿಲ್ಲ!
ಇದು ಬರಗಾಲದ ಸಮಯ. ಪ್ರತಿಯೊಂದು ಬಿಲ್ಲೆಯನ್ನೂ ಬಡ ಅಸಹಾಯಕ ಜನರ ಸಂಕಷ್ಟದ ನಿವಾರಣೆಗೆ ವಿನಿಯೋಗಿಸುವ ಮನಸ್ಸನ್ನು ಸರ್ಕಾರ ಸಂಕಲ್ಪದ ರೀತಿಯಲ್ಲಿ ಮಾಡಬೇಕು. ಇಂಥ ವಿಚಾರಗಳಲ್ಲಿ ಸಿದ್ದರಾಮಯ್ಯನವರು ಗಟ್ಟಿ ನಿರ್ಧಾರ ತೆಗೆದುಕೊಂಡು ತಮ್ಮದೇ ಇಲಾಖೆಯ ಅಧಿಕಾರಿಗಳ ಕಿವಿ ಹಿಂಡಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಹಾಗೆ ಮಾಡದೆ ಕಾರುಬಾರಿಗೆ ಸಮ್ಮತಿ ಇತ್ತುದೇ ಹೌದಾದರೆ ಬಡವರ ಬಗೆಗೆ ಅವರು ಆಡುತ್ತಿರುವ ಮಾತು ನಾಟಕದ ಸಂಭಾಷಣೆಯಂತೆ ಜನರಿಗೆ ಕೇಳಿಸಿದರೆ ಅದರಲ್ಲಿ ಆಶ್ಚರ್ಯಪಡುವಂಥದು ಏನೂ ಇರುವುದಿಲ್ಲ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಸನಾತನ ಧರ್ಮ ಮತ್ತು ಸಿಎಂ ಕಾವೇರಿ ಗೃಹಪ್ರವೇಶ!
ಅಂಕಣ
Raja Marga Column : ಹೆಣ್ಮಕ್ಕಳು ಶಾಲೆಗೆ ಹೋಗೋದೇ ಕಷ್ಟ ಎಂಬ ಕಾಲದಲ್ಲೇ ಆಕೆ ಒಂದಲ್ಲ, ಎರಡು ನೊಬೆಲ್ ಗೆದ್ದರು!
Raja Marga Column : ನೀವು ನಂಬಲೇಬೇಕು. ಮೇರಿ ಕ್ಯೂರಿ ಅವರ ಒಂದೇ ಕುಟುಂಬಕ್ಕೆ ಐದು ನೊಬೆಲ್ ಪ್ರಶಸ್ತಿ ಬಂದಿದೆ. ಮೇರಿ ಕ್ಯೂರಿ ಒಬ್ಬರೇ ಎರಡು ನೊಬೆಲ್ ಗೆದ್ದರು, ಅದು ಬೇರೆ ಬೇರೆ ವಿಭಾಗಗಳಲ್ಲಿ! ಹೆಣ್ಣು ಮಕ್ಕಳಿಗೆ ಶಾಲೆಯೇ ಕನಸಾಗಿದ್ದಾಗ ಆಕೆ ಎರಡು ನೊಬೆಲ್ ಗೆದ್ದಿದ್ದಾರೆ ಎಂದರೆ ಆ ಹೆಣ್ಮಗಳ ಶಕ್ತಿ ಎಷ್ಟಿರಬೇಡ?
ದೇಶಕ್ಕೆ ಒಂದು ನೊಬೆಲ್ ಬಂದರೆ ನಾವು ಅದನ್ನೊಂದು ಮಹಾ ಹಬ್ಬದಂತೆ ಸಂಭ್ರಮಿಸುತ್ತೇವೆ! ಆದರೆ ಒಂದು ಕುಟುಂಬವು ಸಾಲು ಸಾಲಾಗಿ ಐದು ನೊಬೆಲ್ ಪ್ರಶಸ್ತಿಗಳನ್ನು (Five Nobel awards to a single Family) ಗೆದ್ದಿತು ಅಂದರೆ ಅದು ಅಳಿಸಲಾಗದ ದಾಖಲೆಯೇ (Raja Marga Column)!
ಆ ಕುಟುಂಬದ ಹಿರಿಯರಾದ ಮೇಡಂ ಮೇರಿ ಕ್ಯೂರಿ (Mary curie) 1903ರಲ್ಲಿ ಭೌತಶಾಸ್ತ್ರಕ್ಕೆ, 1911ರಲ್ಲಿ ರಸಾಯನ ಶಾಸ್ತ್ರಕ್ಕೆ ಒಟ್ಟು ಎರಡು ನೊಬೆಲ್ ಪ್ರಶಸ್ತಿಗಳನ್ನು ಗೆದ್ದರು. ಆ ಸಾಧನೆ ಮಾಡಿದ ಜಗತ್ತಿನ ಏಕೈಕ ವ್ಯಕ್ತಿ ಮೇರಿ ಕ್ಯೂರಿ(Polish-French physicist and chemist)!
ಮುಂದೆ 1935ರಲ್ಲಿ ಅವರ ಹಿರಿಯ ಮಗಳಾದ ಐರೀನ್ ಮತ್ತು ಅಳಿಯ ಫ್ರೆಡ್ರಿಕ್ ಜೊಲಿಯೆಟ್ ಅವರು ರಸಾಯನ ಶಾಸ್ತ್ರದಲ್ಲಿ ನೊಬೆಲ್ ಗೆದ್ದರು. 1965ರಲ್ಲಿ ಮೇರಿ ಕ್ಯೂರಿಯ ಎರಡನೇ ಅಳಿಯ ಹೆನ್ರಿ ಲೇಬೌಸಿ ವಿಶ್ವಶಾಂತಿಯ ಮುಖ್ಯ ವಿಭಾಗದಲ್ಲಿ ನೊಬೆಲ್ ಗೆದ್ದಾಗ ಈ ಅಸಾಮಾನ್ಯ ದಾಖಲೆ ಸೃಷ್ಟಿ ಆಗಿತ್ತು! ಒಟ್ಟು ಐದು ನೊಬೆಲ್ ಪ್ರಶಸ್ತಿಗಳು ಒಂದೇ ಕುಟುಂಬಕ್ಕೆ ಎಂದರೆ ಮುಂದೆ ಕೂಡ ಈ ದಾಖಲೆ ಯಾರೂ ಮುರಿಯಲು ಸಾಧ್ಯವೇ ಇಲ್ಲ!
ಜಗತ್ತಿನಲ್ಲಿ ಈವರೆಗೆ ಕೇವಲ ಮೂವರು ಸಾಧಕರು ಮಾತ್ರ ಎರಡೆರಡು ನೊಬೆಲ್ ಗೆದ್ದವರು ಇದ್ದಾರೆ. ಅವರೆಂದರೆ ಮೇರಿ ಕ್ಯೂರಿ, ಜಾನ್ ಬಾರ್ಡಿನ್ (John Bardeen) ಮತ್ತು ಫ್ರೆಡ್ರಿಕ್ ಸ್ಯಾಂಗರ್ (Frederick Sanger). ಅದರಲ್ಲಿ ಎರಡೆರಡು ವಿಭಾಗಗಳಲ್ಲಿ ನೊಬೆಲ್ ಗೆದ್ದವರು ಮೇರಿ ಕ್ಯೂರಿ ಮಾತ್ರ!
ವಿದ್ಯಾರ್ಥಿ ಆಗಿದ್ದಾಗಲೇ ಏನನ್ನಾದರೂ ಸಂಶೋಧನೆಯನ್ನು ಮಾಡಬೇಕು ಎಂದು ಆಸೆಪಟ್ಟು ವಿಜ್ಞಾನವನ್ನು ಕಲಿತವರು ಮೇರಿ ಕ್ಯೂರಿ! ಆಕೆಯು ತಂದೆ ಪೋಲೆಂಡ್‌ನಲ್ಲಿ ಪ್ರೊಫೆಸರ್ ಆಗಿದ್ದವರು. ಆದರೆ, ಆ ದೇಶದಲ್ಲಿ ಹೆಣ್ಣು ಮಕ್ಕಳು ಆಗ ಕಾಲೇಜಿಗೆ ಹೋಗಲು ಅನುಮತಿ ಇರಲಿಲ್ಲ. ಆ ಕಾರಣ ಅವರು ದೇಶವನ್ನು ಬದಲಾಯಿಸಿ ಫ್ರಾನ್ಸಿಗೆ ಬಂದರು. ಅಲ್ಲಿ ಅವರಿಗೆ ನೂರಾರು ಅಪಮಾನಗಳು ಮತ್ತು ನಿರಾಸೆಗಳು ಎದುರಾದವು. ಆದರೆ ತನ್ನ ಸಂಕಲ್ಪ ಶಕ್ತಿಯ ಮೂಲಕ ಎಲ್ಲವನ್ನೂ ಗೆದ್ದವರು ಕ್ಯೂರಿ.
ಜೀವನಪೂರ್ತಿ ವಿದ್ಯಾರ್ಥಿ ಆಗಿ, ಸಂಶೋಧಕಿ ಆಗಿ, ಒಂದು ಸಂಸ್ಥೆಯ ನಿರ್ದೇಶಕಿ ಕೂಡ ಆಗಿ ಅವರು ಮಾಡಿದ್ದು ಸಂಶೋಧನೆ, ಸಂಶೋಧನೆ ಮತ್ತು ಸಂಶೋಧನೆ ಮಾತ್ರ! ಆಕೆ ವಿಶ್ರಾಂತಿ ಪಡೆದದ್ದು ಮರಣದ ನಂತರವೇ ಎಂದು ಹೇಳಬಹುದು!
ವಿಕಿರಣ ವಿಜ್ಞಾನ ಇಂದು ಭಾರೀ ಮುಂದುವರಿದ ಕ್ಷೇತ್ರ ಆಗಿದೆ. ಕೆಲವು ಭಾರವಾದ ಮೂಲ ವಸ್ತುಗಳು ಸ್ವಯಂ ಆಗಿ ಪ್ರಖರ ವಿಕಿರಣಗಳನ್ನು ಹೊರಸೂಸುತ್ತವೆ ಎಂದು ಜಗತ್ತಿಗೆ ಮೊದಲು ತೋರಿಸಿದವರು ಮೇರಿ ಕ್ಯೂರಿ. ಅದಕ್ಕೆ ಅವರೇ ವಿಕಿರಣಶೀಲತೆ (Radio activity) ಎಂದು ನಾಮಕರಣ ಮಾಡಿದರು. ಆಗ ಅವರಿಗೆ ಸಾಥ್ ಕೊಟ್ಟ ಇನ್ನೊಬ್ಬ ವಿಜ್ಞಾನಿ ಎಂದರೆ ಹೆನ್ರಿ ಬ್ಯಾಕ್ವಿರಲ್. ಮುಂದೆ ಅವರು ಕೂಡ ಮೇರಿ ಕ್ಯೂರಿ ಜೊತೆ ನೊಬೆಲ್ ಪ್ರಶಸ್ತಿ ಗೆದ್ದರು.
ಪಿಚ್ ಬ್ಲೆಂಡ್ ಎಂಬ ಅದಿರಿನಲ್ಲಿ ಸುಮಾರು 35 ಮೂಲ ವಸ್ತುಗಳಿವೆ. ಅವುಗಳಲ್ಲಿ ವಿಕಿರಣಶೀಲ ರೇಡಿಯಂ ಕೂಡ ಒಂದು. ಆದರೆ ಅದರ ಪ್ರಮಾಣ ತುಂಬಾ ತುಂಬಾ ಚಿಕ್ಕದು. ಎಂಟು ಟನ್ ಪಿಚ್ ಬ್ಲೆಂಡ್ ಅದಿರನ್ನು ಕರಗಿಸಿದಾಗ ನಮಗೆ ಅದರಲ್ಲಿ ಕೇವಲ ಒಂದು ಗ್ರಾಮನಷ್ಟು ರೇಡಿಯಂ ದೊರೆಯುತ್ತದೆ.
ಪಿಚ್ ಬ್ಲೆಂಡ್‌ನಿಂದ ರೇಡಿಯಂ ಲೋಹವನ್ನು ಸಂಶ್ಲೇಷಣೆ ಮಾಡುವುದು ಸುಲಭದ ಮಾತಲ್ಲ. ಅದು ಒಂದು ಮಹಾ ಯುದ್ಧವನ್ನು ಗೆದ್ದದ್ದಕ್ಕೆ ಸಮ! ಅದರ ಜೊತೆಗೆ ಅತ್ಯಂತ ಅಪಾಯಕಾರಿ ಕೂಡ ಹೌದು. ವಿಕಿರಣಗಳಿಗೆ ನಮ್ಮ ದೇಹ ಎಕ್ಸ್‌ಪೋಸ್ ಆದರೆ ಅದು ಮಾರಣಾಂತಿಕ! ಆದರೆ ಜಗತ್ತಿನ ಕ್ಷೇಮಕ್ಕೆ ಹೊರಟವರಿಗೆ ಆ ಅಪಾಯಗಳು ಯಾವ ಲೆಕ್ಕ ಹೇಳಿ?
ಹಾಗೆ ವರ್ಷಾನುಗಟ್ಟಲೆ ಹೋರಾಟ ಮಾಡಿ ರೇಡಿಯಮನ್ನು ಸಂಶೋಧನೆ ಮಾಡಿದ್ದು ಮೇರಿ ಕ್ಯೂರಿ! ಮುಂದೆ ಅವರು ಪೊಲೊನಿಯಮ್ ಎಂಬ ಇನ್ನೊಂದು ವಿಕಿರಣಶೀಲ ಧಾತು ಕೂಡ ಕಂಡು ಹಿಡಿದರು. ಅದನ್ನು ತನ್ನ ಹುಟ್ಟಿದ ದೇಶವಾದ ಪೋಲೆಂಡ್‌ಗೆ ಸಮರ್ಪಣೆ ಮಾಡಿದರು.
ಸಂಶೋಧನೆ ಅಪಾರವಾದರೂ ಪ್ರಚಾರದ ಹಂಗಿಲ್ಲ. ಅವರ ಸಂದರ್ಶನವನ್ನು ಬಯಸಿ ಬಂದ ವರದಿಗಾರನಿಗೆ ಅವರು ಸಂದರ್ಶನ ನಿರಾಕರಿಸಿದರು. ಅದಕ್ಕೆ ಅವರು ಕೊಟ್ಟ ಕಾರಣ – ವಿಜ್ಞಾನದಲ್ಲಿ ವ್ಯಕ್ತಿ ಮುಖ್ಯ ಅಲ್ಲ. ಸಂಗತಿ ಮಾತ್ರ ಮುಖ್ಯ!
ಅವರು ರೇಡಿಯಂ ಸಂಶೋಧನೆ ಮಾಡಿದಾಗ ಅದನ್ನು ಪೇಟೆಂಟ್ ಮಾಡಲು ತುಂಬಾ ಜನರು ಒತ್ತಾಯಿಸಿದರು. ಆದರೆ ಮೇರಿ ಕ್ಯೂರಿ ಹೇಳಿದ್ದು ಒಂದೇ ಮಾತು – ವಿಜ್ಞಾನ ಎಲ್ಲರಿಗೂ ಸೇರಿದ್ದು! ಅದಕ್ಕೆ ಪೇಟೆಂಟ್ ಪಡೆಯಲಾರೆ.
ಹೀಗೆ ಮಾಡುವುದರಿಂದ ತುಂಬಾ ಶ್ರೀಮಂತರಾಗುವ ಅವಕಾಶವನ್ನು ಅವರೇ ನಿರಾಕರಿಸಿದರು. ತನ್ನ ವಿಜ್ಞಾನದ ಸಂಶೋಧನೆಯ ಮೂಲಕ ಬಂದ ರಾಶಿ ರಾಶಿ ದುಡ್ಡನ್ನು ಅವರು ತನ್ನ ಸ್ವಂತಕ್ಕೆ ಉಪಯೋಗವನ್ನು ಮಾಡದೆ ಕೇವಲ ಸಂಶೋಧನೆಗೆ ಬಳಸಿದರು.
ಮೊದಲನೇ ಮಹಾಯುದ್ದದ ಕಾಲದಲ್ಲಿ ಗಾಯಗೊಂಡಿದ್ದ ಸೈನಿಕರಿಗೆ ಚಿಕಿತ್ಸೆ ನೀಡಲು ಅವರೇ ಮುಂದೆ ನಿಂತು ತನ್ನ ಸಂಶೋಧನೆಯನ್ನು ಬಳಸಿದರು. ಮೊದಲ ಮಹಾಯುದ್ಧದ ಸಂಕಷ್ಟದ ಸಂದರ್ಭದಲ್ಲಿ ಮೇರಿ ಕ್ಯೂರಿ ತಾನು ಆವಿಷ್ಕಾರ ಮಾಡಿದ ಎಕ್ಸ್ ರೇ ಉಪಕರಣ ಹೊಂದಿದ್ದ ಆಂಬ್ಯುಲೆನ್ಸ್ ಘಟಕಗಳ ಮೂಲಕ ಸಾವಿರಾರು ಸೈನಿಕರ ಪ್ರಾಣಗಳನ್ನು ಉಳಿಸಿದರು.
ಮೇರಿ ಕ್ಯೂರಿ ಬಗ್ಗೆ ಬರೆಯುವಾಗ ಆಕೆಯ ಪ್ರೇರಣಾ ಶಕ್ತಿ ಅವರ ಗಂಡ ಪಿಯರಿ ಕ್ಯೂರಿ ಬಗ್ಗೆ ಒಂದೆರಡು ವಾಕ್ಯವನ್ನು ಬರೆಯಲೇ ಬೇಕು. ಅವರು ಕೂಡ ಸಂಶೋಧಕರು ಮತ್ತು ಪ್ರೊಫೆಸರ್ ಆಗಿದ್ದವರು. ಮೇರಿ ಕ್ಯೂರಿ ಮಾಡಿದ ಎಲ್ಲ ಸಂಶೋಧನೆಯ ಕೆಲಸಗಳಿಗೆ ಅತೀ ದೊಡ್ಡ ಬೆಂಬಲಿಗರು ಅಂದರೆ ಅವರೇ! ಆದರೆ ಕೇವಲ 47ನೆಯ ವಯಸ್ಸಿಗೆ ಪಿಯರಿ ರಸ್ತೆ ಅಪಘಾತದಲ್ಲಿ ಸಾವನ್ನು ಅಪ್ಪಿದಾಗ ಮೇರಿ ಕ್ಯೂರಿ ಒಬ್ಬಂಟಿ ಆಗಿಬಿಟ್ಟರು. ಮುಂದಿನ ಬದುಕು ಪೂರ್ತಿ ಅವರು ಅಂತರ್ಮುಖಿ ಆಗಿಯೇ ಕಳೆದರು.
ಕ್ಯೂರಿ ಅವರೇ ಸಂಶೋಧನೆ ಮಾಡಿದ ರೇಡಿಯಂ ಮತ್ತು ಪೊಲೊನಿಯಮ್ ವಿಕಿರಣಕ್ಕೆ ಒಡ್ಡಿಕೊಂಡ ಅವರ ದೇಹವು ಮುಂದೆ ಮಾರಣಾಂತಿಕ ಕಾಯಿಲೆಗಳಿಗೆ ಮನೆಯಾಯಿತು. ಅವರ ಅಂತ್ಯವು ಅತ್ಯಂತ ದಾರುಣವೇ ಆಗಿತ್ತು. ಆಗಲೇ ಅವರು ಸೆಲೆಬ್ರಿಟಿ ಆಗಿದ್ದ ಕಾರಣ ಅವರು ತನ್ನ ಹೆಸರನ್ನು ಬದಲಾವಣೆ ಮಾಡಿಕೊಂಡು ಆಸ್ಪತ್ರೆಗಳಿಗೆ ಅಡ್ಮಿಟ್ ಆಗುತ್ತಿದ್ದರು. ಆಸ್ಪತ್ರೆಗಳಲ್ಲಿ ವರ್ಷಾನುಗಟ್ಟಲೆ ನರಳಿದರು. ಅತಿಯಾದ ನೋವು ಅವರನ್ನು ಹಿಂಡಿ ಹಿಪ್ಪೆ ಮಾಡಿತ್ತು.
1934ರ ಜುಲೈ 4ರಂದು ಮೇರಿ ಕ್ಯೂರಿ ತನ್ನ ಇಹಲೋಕದ ವ್ಯಾಪಾರ ಮುಗಿಸಿದರು. ಅವರು ಬದುಕಿದ್ದದ್ದು ಕೇವಲ 66 ವರ್ಷ. ಆದರೆ ಸಾಧನೆ ಮಾಡಿದ್ದು ಸಾವಿರ ವರ್ಷಗಳದ್ದು!
ಇದನ್ನೂ ಓದಿ: Raja Marga Column : ಅನಿರುದ್ಧ ರವಿಚಂದರ್: ಕೊಲವೆರಿಯಿಂದ ಕಾವಾಲಯ್ಯವರೆಗೆ ಅದೆಂಥಾ ಮ್ಯೂಸಿಕಲ್ ಜರ್ನಿ?
ತನ್ನ ಸಂಪೂರ್ಣ ಜೀವನವನ್ನು ಮಾನವೀಯತೆಗೆ ಮತ್ತು ವಿಜ್ಞಾನಕ್ಕೆ ಮುಡಿಪಾಗಿಟ್ಟ ಮಹಾ ವಿಜ್ಞಾನಿ ಒಬ್ಬರು ಅವರೇ ಸಂಶೋಧನೆ ಮಾಡಿದ ವಿಕಿರಣಗಳಿಗೆ ತನ್ನ ದೇಹವನ್ನು ಒಡ್ಡಿಕೊಂಡು ಪ್ರಾಣ ಕಳೆದುಕೊಂಡದ್ದು ನಮಗೆ ಕಣ್ಣೀರು ತರಿಸುವ ದುರಂತ! ಮೇರಿ ಕ್ಯೂರಿ ಅಜರಾಮರ ಮತ್ತು ಅನುಕರಣೀಯ!
-
ಕರ್ನಾಟಕ23 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಸುವಚನ18 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ9 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
ದೇಶ13 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ವೈರಲ್ ನ್ಯೂಸ್4 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಅಂಕಣ16 hours ago
ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
-
ದೇಶ23 hours ago
‘ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ’! ಡ್ಯಾನಿಶ್ ಅಲಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
-
South Cinema6 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!