Site icon Vistara News

ರಾಜ ಮಾರ್ಗ ಅಂಕಣ | ಅಜೀಂ ಪ್ರೇಮ್​​ ಜಿ ಹೇಳಿದ ಮೊಲದ ಕಥೆ! ಶಾಲೆಗೂ ಮೊಲಕ್ಕೂ ಏನು ಸಂಬಂಧ?

ajeem premji

ಅಜೀಂ ಪ್ರೇಮ್‌ಜಿ ಯಾರಿಗೆ ಗೊತ್ತಿಲ್ಲ ಹೇಳಿ? ತನ್ನ ವಿಪ್ರೋ ಕಂಪೆನಿಯ ಮೂಲಕ ಜಗತ್ತಿನ ಶ್ರೇಷ್ಠ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದವರು ಅವರು.

1945ರ ಜುಲೈ 24ರಂದು ಜನಿಸಿದ ಅವರು ಅತ್ಯಂತ ಪರಿಶ್ರಮದಿಂದ ಅವರು ಈ ಎತ್ತರಕ್ಕೆ ತಲುಪಿದವರು. 1999-2005ರ ಅವಧಿಯಲ್ಲಿ ಅವರು ಭಾರತದ ನಂಬರ್ ಒನ್ ಉದ್ಯಮಿಯಾಗಿ ಇದ್ದರು ಎಂದು ಫೋರ್ಬ್ಸ್ ಪತ್ರಿಕೆ ವರದಿ ಮಾಡಿತ್ತು! ಅವರೇ ಸ್ಥಾಪನೆ ಮಾಡಿದ ವಿಪ್ರೋ ಸಾಫ್ಟ್ ವೇರ್ ಕಂಪೆನಿಯ 84% ಶೇರ್‌ಗಳು ಅವರ ಹೆಸರಲ್ಲಿ ಇದ್ದವು! ಅವರ ಆದಾಯದಲ್ಲಿ ಒಂದು ರೂಪಾಯಿ ಕೂಡ ಕಪ್ಪು ಹಣ ಇಲ್ಲ ಎಂದು ಅವರು ಘಂಟಾ ಘೋಷವಾಗಿ ಹೇಳಿದ್ದಾರೆ! ಅತೀ ಹೆಚ್ಚು ಆದಾಯ ತೆರಿಗೆ ಕಟ್ಟುವ ಭಾರತದ ಉದ್ಯಮಿಗಳ ಪಟ್ಟಿಯಲ್ಲಿ ಅವರು ಟಾಪ್ ಮೋಸ್ಟ್ ಸ್ಥಾನದಲ್ಲಿ ಇದ್ದಾರೆ! ಹಾಗೆಯೇ ಸಾವಿರಾರು ಮಂದಿ ಯುವಜನತೆಗೆ ಅವರು ಉದ್ಯೋಗ ನೀಡಿದ ಹೆಮ್ಮೆ ಹೊಂದಿದ್ದಾರೆ!

ಅಜೀಂ ಪ್ರೇಮ್‌ಜಿ ಅವರು ಬೇರೆ ಉದ್ಯಮಿಗಳ ಹಾಗಲ್ಲ. ಅವರ ಆದ್ಯತೆ ಮತ್ತು ಯೋಚನೆಗಳು ಭಿನ್ನವಾಗಿವೆ. ಅವರು ಒಂದು ಮಹಾ ಉದ್ದೇಶ ಹೊತ್ತುಕೊಂಡು 2000ರಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಶನ್ ಸ್ಥಾಪನೆ ಮಾಡಿದರು. ತನ್ನ ಆದಾಯದ ಅರ್ಧಕ್ಕಿಂತ ಹೆಚ್ಚು ಮೊತ್ತವನ್ನು ಆ ಫೌಂಡೇಷನ್‌ಗೆ ದಾನ ಮಾಡಿದರು! ಅವರು ತನ್ನ ಫೌಂಡೇಶನ್‌ನಲ್ಲಿ ಹೂಡಿಕೆ ಮಾಡಿರುವ ಮೊತ್ತ 2,87,000 ಕೋಟಿ ರೂಪಾಯಿಗಿಂತ ಹೆಚ್ಚು! ಅವರ ಆದ್ಯತೆ ಬೇರೆಯವರ ಹಾಗೆ ಸಮಾಜ ಸೇವೆ ಅಲ್ಲ! ಅವರು ಕನಸು ಕಂಡ ಕ್ಷೇತ್ರ ಪ್ರಾಥಮಿಕ ಶಿಕ್ಷಣದ ಗುಣಮಟ್ಟ! ಈ ಕ್ಷೇತ್ರದ ಬಗ್ಗೆ ಅವರ ಯೋಚನೆ ಮತ್ತು ದೃಷ್ಟಿಕೋನಗಳು ತುಂಬಾ ಪ್ರಖರವಾಗಿ ಇವೆ. ಅವರ ಮಾತುಗಳನ್ನು ಕೇಳುತ್ತಾ ಹೋಗೋಣ.…

ದೇಶ ಬಲಿಷ್ಠವಾಗಲು ಗಟ್ಟಿ ಮಾಡಬೇಕಾದದ್ದು ಶೈಕ್ಷಣಿಕ ಗುಣಮಟ್ಟವನ್ನು. ಅದರಲ್ಲಿಯೂ ಪ್ರಾಥಮಿಕ ಶಾಲೆಗಳ ಗುಣಮಟ್ಟವನ್ನು! ಸರಕಾರ ತನ್ನ ಅನುದಾನಗಳ ಮೂಲಕ ಶಾಲೆಗಳ ಭೌತಿಕ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದೆ. ಶಾಲೆಗೆ ಕಟ್ಟಡ, ಮೈದಾನ, ಶೌಚಾಲಯ, ಗ್ರಂಥಾಲಯ ಅತ್ಯಂತ ಅಗತ್ಯ ಹೌದು. ಆದರೆ ಅದಕ್ಕಿಂತ ಹೆಚ್ಚು ಮುಖ್ಯವಾದದ್ದು ಮಾನವ ಸಂಪನ್ಮೂಲ ಅಭಿವೃದ್ಧಿ! ಶಿಕ್ಷಕರ ಉನ್ನತೀಕರಣ, ಗುಣಮಟ್ಟ ಅಭಿವೃದ್ಧಿ, ತರಬೇತಿಗಳು, ಅದಕ್ಕೆ ಪೂರಕವಾದ ಪಠ್ಯಪುಸ್ತಕಗಳು, ಪೂರಕಪಠ್ಯ ಚಟುವಟಿಕೆ, ಸ್ಮಾರ್ಟ್ ಕ್ಲಾಸ್ ರೂಂಗಳು, ಶೈಕ್ಷಣಿಕ ಸಂಶೋಧನೆಗಳು, ಕಂಪ್ಯೂಟರ್ ತರಬೇತಿ, ಸುಂದರವಾದ ಪ್ರಯೋಗಾಲಯಗಳು…ಇವುಗಳ ಬಗ್ಗೆ ಸರಕಾರದ ಕಾಳಜಿ ಸಾಲದು. ಅದನ್ನು ನಾವು ನಮ್ಮ ಫೌಂಡೇಶನ್ ವತಿಯಿಂದ ಮಾಡುತ್ತಿದ್ದೇವೆ.

ಕರ್ನಾಟಕ ಸೇರಿದಂತೆ ಆರು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ (ಪಾಂಡಿಚೇರಿ) ಸಾವಿರಾರು ಪ್ರಾಥಮಿಕ ಶಾಲೆಗಳನ್ನು ನಾವು ಆಯ್ಕೆ ಮಾಡಿಕೊಂಡು ಅವುಗಳನ್ನು ಮಾದರಿ ಮಾಡಲು ಹೊರಟಿದ್ದೇವೆ! ಅವುಗಳನ್ನು ಮಕ್ಕಳ ಸ್ಫೂರ್ತಿಯ ತಾಣಗಳಾಗಿ ರೂಪಿಸುವುದು ನಮ್ಮ ಉದ್ದೇಶ. ಶಿಕ್ಷಣವು ಪರೀಕ್ಷಾ ಆಧಾರಿತ ಆಗಬಾರದು. ಅದು ಜ್ಞಾನ ಮತ್ತು ಕೌಶಲ ಆಧಾರಿತ ಆಗಿರಬೇಕು. ಮಕ್ಕಳು ತಮ್ಮ ಶಿಕ್ಷಕರ ಜೊತೆ, ಸಹಪಾಠಿಗಳ ಜೊತೆಗೆ, ಸುತ್ತಲಿನ ಪರಿಸರದ ಜೊತೆಗೆ, ಪ್ರಾಣಿ ಪಕ್ಷಿಗಳ ಜೊತೆಗೆ ಹೇಗೆ ವರ್ತಿಸಬೇಕು ಎಂದು ಕಲಿಯದೆ ಶಿಕ್ಷಣ ಪೂರ್ತಿ ಆಗುವುದೇ ಇಲ್ಲ!

ಈ ಮಹಾ ಉದ್ದೇಶಕ್ಕಾಗಿ ಅವರ ಫೌಂಡೇಶನ್ ಪ್ರತೀ ವರ್ಷ ಕೋಟಿ ಕೋಟಿ ರೂಪಾಯಿ ಅನುದಾನವನ್ನು ಶಾಲೆಗಳಿಗೆ ಸುರಿಯುತ್ತಿದೆ.

ಪ್ರಾಥಮಿಕ ಶಾಲೆಗಳ ಗುಣಮಟ್ಟದ ಬಗ್ಗೆ ಅವರಿಗೆ ಇರುವ ಕಾಳಜಿ ಮತ್ತು ಪ್ರೀತಿ ನಿಜಕ್ಕೂ ಶ್ಲಾಘನೀಯ ಆಗಿದೆ. ಅವರು ಒಂದು ಕಡೆ ಹೇಳಿದ ಮೊಲದ ಕತೆಯು ಇಂದಿನ ಶಾಲೆಗಳ ದುಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ನೀವೂ ಕೇಳಿ..

ಒಂದೂರಲ್ಲಿ ಒಂದು ಮೊಲಗಳ ಶಾಲೆ ಇತ್ತು. ಅದಕ್ಕೆ ಒಂದು ಮೊಲದ ಮರಿ ಹೊಸದಾಗಿ ಸೇರ್ಪಡೆ ಆಗಿತ್ತು. ಇಡೀ ವರ್ಷ ಅಲ್ಲಿ ಕಲಿತ ಮೇಲೆ ಅದಕ್ಕೆ ಪುಟಿಯುವ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಬಂತು. ಆದರೆ ಈಜುವ ಪರೀಕ್ಷೆಯಲ್ಲಿ ಅದಕ್ಕೆ ಸೊನ್ನೆ ಮಾರ್ಕ್ ಬಂತು! ಆಗ ಮೊಲದ ಪೋಷಕರಿಗೆ ಆತಂಕ ಆಯಿತು. ಅವರು ತಮ್ಮ ಮರಿಗೆ ಹೇಳಿದರು- ನೀನು ಹೇಗೂ ಪುಟಿಯುವುದರಲ್ಲಿ ಚಾಂಪಿಯನ್ ಆಗಿದ್ದೀ. ಇನ್ನು ಮುಂದೆ ಪುಟಿಯುವುದನ್ನು ಮರೆತು ಬಿಡು! ನಿನ್ನನ್ನು ಸ್ವಿಮ್ಮಿಂಗ್ ಕ್ಲಾಸಿಗೆ ಸೇರಿಸುತ್ತೇವೆ. ನಮಗೆ ರಿಸಲ್ಟ್ ಬೇಕು ಎಂದರು.

ಅದೇ ರೀತಿ ಮೊಲವು ಸ್ವಿಮ್ಮಿಂಗ್ ಕ್ಲಾಸಿಗೆ ಸೇರಿತು. ಪುಟಿಯುವುದನ್ನು ಮರೆತಿತು. ಇಡೀ ವರ್ಷ ಸ್ವಿಮ್ಮಿಂಗ್ ಕಲಿತರೂ ಅದಕ್ಕೆ ಸ್ವಿಮ್ಮಿಂಗ್ ಬರಲಿಲ್ಲ. ಅದು ಅದರ ಸ್ವಭಾವ ಆಗಿರಲಿಲ್ಲ. ಅಲ್ಲಿಗೆ ಮೊಲದ ಮರಿಯು ತನ್ನ ಸ್ವಾಭಾವಿಕ ಕೌಶಲವನ್ನು ಪೂರ್ತಿ ಕಳೆದುಕೊಂಡಿತು!

ಇದು ಅಜೀಂ ಪ್ರೇಮ್‌ಜಿ ಅವರು ನಮ್ಮ ಶಿಕ್ಷಣ ವ್ಯವಸ್ಥೆಗೆ ಹಿಡಿದ ಕೈಗನ್ನಡಿ! ನಮ್ಮ ಶಾಲೆಗಳಲ್ಲಿ ಇಂದು ಆಗುತ್ತಿರುವುದು ಅದೇ ಅಲ್ಲವೇ?

ಇದೆಲ್ಲವೂ ಬದಲಾಗಬೇಕು ಎನ್ನುವ ನಿಟ್ಟಿನಲ್ಲಿ ಸತತವಾಗಿ ಪರಿಶ್ರಮಿಸುತ್ತಿದ್ದಾರೆ ಪ್ರೇಮ್‌ಜಿ. ಈ ಕಾರಣಕ್ಕಾಗಿ ಅವರು ಭಾರತದ ಅಭಿಮಾನದ ಉದ್ಯಮಿ ಎಂದು ನನಗೆ ಅನಿಸುತ್ತದೆ. ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಈಗಾಗಲೇ ದೊರೆತಿದ್ದು ಭಾರತರತ್ನ ಪ್ರಶಸ್ತಿ ಮಾತ್ರ ಬಾಕಿ ಇದೆ, ಮತ್ತು ಅದಕ್ಕೆ ಅವರು ಅತ್ಯಂತ ಅರ್ಹರಾಗಿದ್ದಾರೆ!

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಲಕ್ಕಿ ಮ್ಯಾನ್‌ ಮತ್ತು ರಿವೈಂಡೆಡ್‌ ಲೈಫ್‌! ಹೀಗೆ ನಾವೂ ಮರಳಿ ಜೀವಿಸೋ ಅವಕಾಶ ಸಿಕ್ಕರೆ ಚೆನ್ನಾಗಿತ್ತಲ್ವ?

Exit mobile version