1999ರ ಆಗಸ್ಟ್ ತಿಂಗಳ ಒಂದು ಸಂಜೆ ನಾನು ಭಾರತ-ಪಾಕಿಸ್ತಾನ್ ಬಾರ್ಡರ್ ಆದ ‘ವಾಘಾ ಬಾರ್ಡರ್’ ಮುಂದೆ ನಿಂತಿದ್ದೆ. ಅದು ಪಾಕಿಸ್ತಾನದ ಲಾಹೋರ್ ನಗರದಿಂದ 22 ಕಿಲೋಮೀಟರ್ ಮತ್ತು ಭಾರತದ ಅಮೃತಸರದಿಂದ 28 ಕಿಲೋಮೀಟರ್ ದೂರದಲ್ಲಿ ಇದೆ. ಅಲ್ಲಿ ಪ್ರತೀ ದಿನ ಸಂಜೆ ನಡೆಯುವ ವಿಶಿಷ್ಟವಾದ ಕವಾಯತು ವೀಕ್ಷಣೆ ಮಾಡಲು ಸಾವಿರಾರು ಜನರು ಸೇರುತ್ತಾರೆ. ಅಂದೂ ತುಂಬಾ ಜನದಟ್ಟಣೆ ಇತ್ತು.
ಪ್ರತೀ ದಿನ ಸಂಜೆ ನಡೆಯುವ ಈ ಕವಾಯತಿಗೆ ವಿಶೇಷವಾದ ಹಿನ್ನೆಲೆ ಇದೆ. 1959ರಿಂದ ಈ ಕವಾಯತು ದಿನವೂ ನಡೆಯುತ್ತಿದೆ. ಅದಕ್ಕೆ ‘ಬೀಟಿಂಗ್ ರಿಟ್ರೀಟ್’ ಎಂಬ ಹೆಸರು ಇದೆ. ಸುಮಾರು 45 ನಿಮಿಷ ನಡೆಯುವ ಈ ವಿರಾಟ್ ಶೋದಲ್ಲಿ ಎರಡೂ ರಾಷ್ಟ್ರಗಳ ಸೈನಿಕರು ಕವಾಯತಿನಲ್ಲಿ ಭಾಗವಹಿಸುವುದು ವಿಶೇಷ.
ಭಾರತದಿಂದ ಬಾರ್ಡರ್ ಸೆಕ್ಯುರಿಟಿ ಫೋರ್ಸ್‌ನವರು ಭಾಗವಹಿಸಿದರೆ ಪಾಕಿಸ್ತಾನದ ರೇಂಜರ್ಸ್ ಇಲ್ಲಿ ಆಕರ್ಷಕವಾದ ಕವಾಯತು ಮಾಡುತ್ತದೆ. ಆ ಮುಖಾಮುಖಿ ತುಂಬಾ ಆಕರ್ಷಕ ಮತ್ತು ಸುಂದರವಾಗಿರುತ್ತದೆ.
ವಿಶೇಷವಾದ ಹಬ್ಬಗಳು ಬಂದಾಗ ಉಡುಗೊರೆಗಳ ಪರಸ್ಪರ ವಿನಿಮಯ ಆಗುತ್ತವೆ. ದೀಪಾವಳಿ ಹಬ್ಬ ಬಂದರೆ ಪಾಕ್ ಸೈನಿಕರು ನಮ್ಮ ಸೈನಿಕರಿಗೆ ಉಡುಗೊರೆ ಕೊಟ್ಟರೆ ರಂಝಾನ್ ಹಬ್ಬಕ್ಕೆ ಅವರಿಗೆ ನಮ್ಮ ಉಡುಗೊರೆಗಳು ದೊರೆಯುತ್ತವೆ. ಇಡೀ 45 ನಿಮಿಷದ ಕಾಲ ಪ್ರೀತಿ, ಸೌಹಾರ್ದತೆ ಅಲ್ಲಿ ನೆಲೆ ಆಗಿರುತ್ತದೆ. ಕೆಲವೊಮ್ಮೆ ಸಿಟ್ಟು, ಆಕ್ರೋಶ ಕಂಡು ಬಂದರು ಯಾರೂ ಮಿತಿ ಮೀರುವುದಿಲ್ಲ! ಕೊನೆಯದಾಗಿ ಎರಡೂ ರಾಷ್ಟ್ರಗಳ ರಾಷ್ಟ್ರಗೀತೆಯನ್ನು ನುಡಿಸಿ ನಂತರ ರಾಷ್ಟ್ರಧ್ವಜಗಳ ಅವರೋಹಣ ಆಗುವಲ್ಲಿಗೆ ಆ ಸ್ಮರಣೀಯವಾದ ಕಾರ್ಯಕ್ರಮ ಮುಗಿಯುತ್ತದೆ. ನನಗಂತೂ ಅದು ಲೈಫ್ ಟೈಮ್ ಮೆಮೊರಿ ಆಗಿದೆ. ಕಾರ್ಯಕ್ರಮ ಮುಗಿದ ನಂತರ ಎತ್ತರವಾದ ಗೇಟ್ ಹಾಕುವುದರ ಮೂಲಕ ಬೀಟಿಂಗ್ ರಿಟ್ರೀಟ್ ಮುಕ್ತಾಯ ಆಗುತ್ತದೆ.
ಆ ಕಾರ್ಯಕ್ರಮ ನಡೆದ ನಂತರ ಒಬ್ಬ ಭಾರತೀಯ ಸೈನಿಕನನ್ನು ನಾನು ಮಾತಿಗೆ ಎಳೆದೆ. ನಾನು ಕೇಳಿದೆ – ನೀವು ಈ ಕವಾಯತು ಮೂಲಕ ಪ್ರೀತಿ, ಸೌಹಾರ್ದ ಪ್ರಕಟ ಮಾಡುತ್ತೀರಿ. ಹಬ್ಬಗಳು ಬಂದಾಗ ಉಡುಗೊರೆ ವಿನಿಮಯ ಮಾಡುತ್ತೀರಿ. ಯಾವುದೇ ಕಾರಣಕ್ಕೆ ಭಾರತ-ಪಾಕ್ ಯುದ್ಧ ಆರಂಭ ಆದರೆ ನೀವು ಇದೇ ಪ್ರೀತಿಯ ಸಂಬಂಧದ ಪೋಷಣೆ ಮಾಡುತ್ತೀರಾ?”
ಆತ ಒಂದು ಕ್ಷಣ ಕೂಡ ಯೋಚನೆ ಮಾಡದೆ ಆತ ಹೇಳಿದ ಮಾತು ನನಗೆ ನಿಜಕ್ಕೂ ಶಾಕ್ ನೀಡಿತು. ಆತ ಹೇಳಿದ- “ಪರಸ್ಪರ ಪ್ರೀತಿ, ಸೌಹಾರ್ದತೆ ನಾವು ಬಯಸುತ್ತೇವೆ. ಆದರೆ ಭಾರತ-ಪಾಕಿಸ್ತಾನ ಯುದ್ಧ ಆರಂಭ ಆದ ಕ್ಷಣಕ್ಕೆ ನನಗೆ ಆ ಸೈನಿಕನ ಸ್ಥಳದಲ್ಲಿ ಒಬ್ಬ ಗೆಳೆಯ ಕಾಣುವುದೇ ಇಲ್ಲ! ಆಗ ಅವನು ನನಗೆ ಶತ್ರು ದೇಶದ ಸೈನಿಕ ಅಷ್ಟೇ! ಆತನ ಎದೆಗೆ ಗುಂಡು ತೂರಲು ನಾನು ಒಂದು ಕ್ಷಣ ಕೂಡ ಹಿಂದೆ ಮುಂದೆ ನೋಡುವುದಿಲ್ಲ. ನನಗೆ ನನ್ನ ರಾಷ್ಟ್ರವೇ ಮೊದಲು. ನೇಷನ್ ಫಸ್ಟ್!”
ನಾನು ಆತನಿಗೆ ಸೆಲ್ಯೂಟ್ ಹೊಡೆದು ಬೀಳ್ಕೊಟ್ಟೆ.
ಇದನ್ನೂ ಓದಿ| ಮೃತ ನೆನಪು-75 | ಸ್ವಾತಂತ್ರ್ಯ ಹೋರಾಟದ ಜ್ವಾಲೆಯಲ್ಲಿ ಹವಿಸ್ಸಾದವರು ಇವರು!