ಎಲ್ಲ ನನ್ನ ಯುವ ಓದುಗರಿಗೆ ‘ಸ್ವಾರ್ಥ ಇಲ್ಲದ ಪ್ರೇಮಿಗಳ ದಿನ’ದ ಶುಭಾಶಯಗಳು. ಇಂದು ನಾನು ನಿಮಗೆ ಅಟ್ಲಾಂಟಿಕ್ ಸಾಗರದಲ್ಲಿ 1912ರಲ್ಲಿ ಮುಳುಗಿದ ಜಗತ್ತಿನ ಅತ್ಯಂತ ವೈಭವದ ಹಡಗಿನ ಕಥೆಯನ್ನು ಹೇಳಬೇಕು. ಆ ದುರಂತದ ಹಿನ್ನೆಲೆಯಲ್ಲಿ ಅರಳಿದ ಒಂದು ಸುಂದರವಾದ ಪ್ರೇಮಕಥೆಯನ್ನೂ ಹೇಳಬೇಕು. ಅವೆರಡೂ ತುಂಬಾನೇ ರೋಚಕವಾಗಿದೆ!
ಜಗತ್ತಿನ ಅತ್ಯಂತ ಶ್ರೀಮಂತ ಹಡಗು
ಮೊದಲ ಪ್ರಯಾಣದಲ್ಲಿಯೇ ಮುಳುಗಿತು!
1912ರ ಒಂದು ದಿನ ಇಂಗ್ಲೆಂಡಿನ ಒಂದು ಬಂದರಿನಿಂದ ಅಮೆರಿಕದ ಕಡೆಗೆ ಹೊರಟಿದ್ದ ಅದ್ಭುತವಾದ ಹಡಗು ಟೈಟಾನಿಕ್. ಅದು ಇಂಗ್ಲೆಂಡ್ ರಾಣಿಯ ಅರಮನೆಗಿಂತ ದೊಡ್ಡದಾಗಿತ್ತು ಮತ್ತು ಶ್ರೀಮಂತ ಆಗಿತ್ತು! ಎಂದಿಗೂ ಮುಳುಗದ ಹಡಗು ಎಂಬ ಕೀರ್ತಿಯು ಅದಕ್ಕಿತ್ತು. ಅಂತಹ ಹಡಗು ತನ್ನ ಮೊದಲ ಪ್ರಯಾಣದಲ್ಲಿಯೇ 1500 ಪ್ರಯಾಣಿಕರ ಜೊತೆಗೆ ಏಪ್ರಿಲ್ 14ರ ಮಧ್ಯರಾತ್ರಿ ನೀರ್ಗಲ್ಲಿಗೆ ಡಿಕ್ಕಿ ಹೊಡೆದು ಮುಳುಗಿ ಹೋಯಿತು ಎಂದರೆ ನಂಬುವುದು ಹೇಗೆ? ಲೈಫ್ ಬೋಟ್‌ಗಳ ಕೊರತೆಯಿಂದಾಗಿ ಅಂದಾಜು ಒಂದು ಸಾವಿರ ಮಂದಿ ಪ್ರಾಣ ಕಳೆದುಕೊಂಡರು!
ಶೀತಲವಾದ ಮೈ ಕೊರೆಯುವ ಉಪ್ಪುನೀರಲ್ಲಿ ಮುಳುಗಿ ಟೈಟಾನಿಕ್ ಹಡಗು ಪೂರ್ತಿ ಚೂರಾಯಿತು. ಮುಂದೆ ಹಲವು ದಶಕಗಳ ಕಾಲ ಅದರ ಅವಶೇಷಗಳನ್ನು ಟ್ರೇಸ್ ಮಾಡುವ ಪ್ರಯತ್ನಗಳು ನಡೆದರೂ ದೊಡ್ಡ ದೊಡ್ಡ ಅಲೆಗಳ ಅಟ್ಲಾಂಟಿಕ್ ಸಾಗರವು ತನ್ನ ಗುಟ್ಟನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡಲೇ ಇಲ್ಲ! ಮುಂದಿನ ಶತಮಾನಗಳ ಕಾಲ ಟೈಟಾನಿಕ್ ದುರಂತವನ್ನು ಜನರು ಮರೆಯಲಿಲ್ಲ!
ಜೇಮ್ಸ್ ಕ್ಯಾಮರೂನ್ ಎಂಬ ಮಹಾ ಹಾಲಿವುಡ್ ನಿರ್ದೇಶಕ!
ದುರಂತ ಕಥೆಗಳಲ್ಲಿಯೂ ಪ್ರೇಮಕಥೆ ಹುಡುಕುವ ಹಾಲಿವುಡ್ ನಿರ್ದೇಶಕರಲ್ಲಿ ತುಂಬಾ ಸೃಜನಶೀಲ ಪ್ರತಿಭೆ ಆದ ಜೇಮ್ಸ್ ಕ್ಯಾಮರೂನ್ ಇದೇ ದುರಂತವನ್ನು ಕ್ಯಾನ್ವಾಸ್ ಆಗಿಟ್ಟುಕೊಂಡು ಒಂದು ಪ್ರೇಮಕತೆಯನ್ನು ಹೆಣೆದು ಚಿತ್ರೀಕರಣಕ್ಕೆ ಸಿದ್ಧರಾದರು. ಆ ಹಡಗಿನಲ್ಲಿ ಜೊತೆಯಾಗಿ ಹೊರಟಿದ್ದ 17 ವರ್ಷದ ಸುರಸುಂದರಿ ರೋಸ್ ಮತ್ತು ಒಬ್ಬ ಸಾಮಾನ್ಯ ಚಿತ್ರ ಕಲಾವಿದ ಜಾಕ್ ಎಂಬ ಕಾಲ್ಪನಿಕ ಪಾತ್ರಗಳನ್ನು ಕ್ರಿಯೇಟ್ ಮಾಡಿ ತುಂಬಾ ಜಾಣ್ಮೆಯಿಂದ ಒಂದು ಅದ್ಭುತ ಸಿನಿಮಾವನ್ನು ಜಗತ್ತಿಗೆ ಅರ್ಪಿಸಿದರು.
ಆ ಸಿನಿಮಾದ ಮಧ್ಯಂತರದವರೆಗೆ ಅವರಿಬ್ಬರ ಪ್ರೇಮಕಥೆಯು ಹುಟ್ಟುವ, ಬೆಳೆಯುವ ಹೆಜ್ಜೆಗಳನ್ನು ತೋರಿಸಿದರೆ ಮಧ್ಯಂತರದ ನಂತರ ಹಡಗು ನೀರ್ಗಲ್ಲಿಗೆ ಡಿಕ್ಕಿ ಆಗಿ ಮುಳುಗುವ ಜನರು ತಮ್ಮ ಪ್ರಾಣ ಉಳಿಸಲು ದಿಕ್ಕಾಪಾಲಾಗಿ ಓಡುವ ಘಟನೆಗಳನ್ನು ರೋಮಾಂಚಕಾರಿ ಆಗಿ ತೋರಿಸಿದ್ದಾರೆ. ಮೊದಲ ಅರ್ಧದಲ್ಲಿ ರೋಮಾಂಚನ ನೀಡುವ ರೊಮ್ಯಾನ್ಸ್ ಇದ್ದರೆ ಎರಡನೆಯ ಅರ್ಧದಲ್ಲಿ ಉಸಿರುಗಟ್ಟುವ ವಾಸ್ತವ ದೃಶ್ಯಗಳು ಇವೆ! ಪ್ರೇಕ್ಷಕರು ಮೈಮರೆತು ಮೂರು ಘಂಟೆಯ ಆ ಸಿನಿಮಾ ನೋಡಿದರು ಮತ್ತು ಜಗತ್ತಿನಾದ್ಯಂತ ಆ ಪ್ರೇಮಕಾವ್ಯವನ್ನು ಗೆಲ್ಲಿಸಿದರು! ಭಾರತದಲ್ಲಿ ಟೈಟಾನಿಕ್ ಸಿನಿಮಾ ಕ್ರಿಯೇಟ್ ಮಾಡಿದ ಹವಾ ಇದೆಯಲ್ಲಾ ಅದು ನಿಜಕ್ಕೂ ವಿಸ್ಮಯವೇ ಆಗಿತ್ತು! ಭಾರತೀಯರಿಗೆ ಅದು ತಮ್ಮದೇ ಕತೆ ಅನ್ನಿಸಿತ್ತು! ಆ ಸಿನೆಮಾ ಎರಡು ಬಿಲಿಯನ್ ಡಾಲರ್ ಸಂಪಾದನೆ ಮಾಡಿದ್ದು ಮಾತ್ರವಲ್ಲ ಅತೀ ಹೆಚ್ಚು ಆಸ್ಕರ್ ಪ್ರಶಸ್ತಿ ಪಡೆದು ದಾಖಲೆ ಮೆರೆಯಿತು!
ಟೈಟಾನಿಕ್ ಸಿನಿಮಾ ಪ್ರಕಾರ ಪ್ರೀತಿಯ ಅರ್ಥ ಏನು?
ಆ ಸಿನಿಮಾದ ಕಥಾನಾಯಕಿಯಾದ ರೋಸ್ ಅತ್ಯಂತ ಶ್ರೀಮಂತ ಕುಟುಂಬದಿಂದ ಬಂದವಳು. ಹಡಗು ಹತ್ತುವ ಮೊದಲೇ ಆಕೆಗೆ ಮದುವೆ ಫಿಕ್ಸ್ ಆಗಿತ್ತು. ವಯಸ್ಸು ಕೇವಲ 17. ಆಕೆ ನಿಜವಾದ ಸೌಂದರ್ಯ ದೇವತೆ! ಅದಕ್ಕೆ ವಿರುದ್ಧವಾಗಿ ಜಾಕ್ ಒಬ್ಬ ಬಡ ಕಲಾವಿದ. ಎಲ್ಲ ಅಂತಸ್ತುಗಳನ್ನು ಮೀರಿ ಅವರ ಪ್ರೀತಿಯು ಗೆಲ್ಲುತ್ತ ಹೋಗುತ್ತದೆ.
ಒಮ್ಮೆ ಆತ ತನ್ನ ಬೆತ್ತಲೆ ಚಿತ್ರವನ್ನು ಬಿಡಿಸಬೇಕು ಎಂದು ಆಕೆಗೆ ಆಸೆ ಹುಟ್ಟುತ್ತದೆ. ಆ ಹಡಗಿನಲ್ಲಿ ದೊರೆತ ಭಾರೀ ಬೆಲೆ ಬಾಳುವ ವಜ್ರದ ಹಾರವನ್ನು ಧರಿಸಿ ಆಕೆ ಅವನ ಮುಂದೆ ಬೆತ್ತಲೆಯಾಗಿ ಮಲಗುತ್ತಾಳೆ. ತನ್ನ ಮುಂದೆ ಅಪರಿಮಿತ ಸೌಂದರ್ಯದ ರಾಶಿ ಮಲಗಿದ್ದರೂ ಅವನು ವಿಚಲಿತನಾಗದೆ ಒಬ್ಬ ಕಲಾವಿದನಾಗಿ ಆಕೆಯ ಚಿತ್ರ ಪೂರ್ತಿ ಮಾಡುತ್ತಾನೆ. ಇಬ್ಬರ ಶ್ವಾಸ ಬಿಸಿ ಆಗುವುದಿಲ್ಲ. ಆಕೆಯೂ ವಿಚಲಿತ ಆಗುವುದಿಲ್ಲ! ಅಲ್ಲಿಗೆ ಅವರ ಪ್ರೀತಿ ಮತ್ತೆ, ಮತ್ತೆ ಗೆಲ್ಲುತ್ತದೆ. ಯಾಕೆಂದರೆ ಅದು ದೇಹದ ಆಕರ್ಷಣೆ ಮೀರಿದ ಪ್ರೀತಿ ಎಂದು ಸಾಬೀತಾಗುತ್ತದೆ!
ಪ್ರೀತಿಯ ನಿಜವಾದ ಅರ್ಥವೇ ತ್ಯಾಗ ಮತ್ತು ಅರ್ಪಣೆ!
ಈ ಸಿನಿಮಾದ ಕೊನೆಯ ದೃಶ್ಯದಲ್ಲಿ ನಮಗೆ ಪ್ರೀತಿಯ ನಿಜವಾದ ಅರ್ಥವೇ ದೊರೆಯುತ್ತದೆ. ಪ್ರಾಣ ಉಳಿಸುವ ಹೋರಾಟದಲ್ಲಿ ಇಬ್ಬರೂ ಬೇರೆ ಬೇರೆಯಾಗಿ ರೆಸ್ಕ್ಯೂ ಆಗುವ ಹಲವು ಅವಕಾಶಗಳು ಇಬ್ಬರಿಗೂ ದೊರೆಯುತ್ತವೆ. ಆದರೆ ಅವರು ಒಬ್ಬರನ್ನು ಒಬ್ಬರು ಬಿಟ್ಟು ಕೊಡುವುದಿಲ್ಲ!
ಅದು ಸಮರ್ಪಣಾ ಭಾವದ ಪ್ರೀತಿ! ಒಬ್ಬರನ್ನು ಒಬ್ಬರು ಬಿಟ್ಟುಹೋಗದ ಪ್ರೀತಿ! ಸ್ವಾರ್ಥವೇ ಇಲ್ಲದ ನಿರ್ವ್ಯಾಜ ಪ್ರೀತಿ! ತ್ಯಾಗದ ಪರಾಕಾಷ್ಠೆ ಆದ ಅದ್ಭುತ ಪ್ರೀತಿ! ತಮ್ಮೊಳಗಿನ ಬೇಧಗಳನ್ನು ಮೆಟ್ಟಿ ನಿಲ್ಲುವ ಅನನ್ಯ ಪ್ರೀತಿ!
ಕೊನೆಯದಾಗಿ ಜಾಕ್ ತನ್ನ ಉಸಿರಾದ ರೋಸ್ ಮಡಿಲಲ್ಲಿ ಉಸಿರು ಚೆಲ್ಲುವ ಮೂಲಕ ಸಿನಿಮಾ ಅಂತ್ಯವಾಗುತ್ತದೆ. ರೋಸ್ ಆತನ ನೆನಪಿನಲ್ಲಿ ಮುಂದೆ ಬದುಕುತ್ತಾಳೆ. ಅಮರ ಪ್ರೀತಿಯನ್ನು ತನ್ನ ಹೃದಯದಲ್ಲಿ ಇಟ್ಟು ಪ್ರೇಮಿಗಳಿಗೆ ಮಾದರಿ ಆಗುತ್ತಾಳೆ. ಸಿನಿಮಾ ನೋಡಿ ಹೊರಬರುವಾಗ ಪ್ರೇಕ್ಷಕರ ಕಣ್ಣಲ್ಲಿ ಸಾಗರದ ಉಪ್ಪು ನೀರು ಹರಿಯುತ್ತದೆ!
ಜಗತ್ತಿಗೆ ‘ಟೈಟಾನಿಕ್’ ಎಂಬ ಅದ್ಭುತವಾದ ಪ್ರೇಮಕಾವ್ಯ ನೀಡಿದ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರಿಗೆ ನಮ್ಮ ಅಭಿನಂದನೆ ಇರಲಿ. ಅದೇ ರೀತಿ ರೋಸ್ ಆಗಿ ಅಭಿನಯ ಮಾಡಿದ ಕೇಟ್ ವಿನ್ಸ್‌ಲೆಟ್ ಮತ್ತು ಜಾಕ್ ಆಗಿ ಅಭಿನಯ ಮಾಡಿದ ಲಿಯನಾರ್ಡ್ ಡಿಕ್ಯಾಪ್ರಿಯೋ ಅವರಿಗೆ ಕೂಡ ನಮ್ಮ ಅಭಿನಂದನೆಯು ಸಲ್ಲಲಿ.
ಇದನ್ನೂ ಓದಿ : ರಾಜ ಮಾರ್ಗ ಅಂಕಣ | ವಯಸ್ಸಿನ ಬಗ್ಗೆ ಅವನು ಅಚಿಂತ! 40ನೇ ವಯಸ್ಸಲ್ಲಿ ಕೈಯಲ್ಲಿತ್ತು ನಾಲ್ಕು ಪದಕ