Site icon Vistara News

ರಾಜ ಮಾರ್ಗ ಅಂಕಣ| 565 ದೇಶೀಯ ಸಂಸ್ಥಾನಗಳನ್ನು ಭಾರತಕ್ಕೆ ಸೇರಿಸಿದ್ದು ಸಣ್ಣ ಸಾಧನೆಯಾ?

sardar patel

ಸಾಮ, ದಾನ, ಬೇಧ, ದಂಡ ಎಲ್ಲವನ್ನೂ ಬಳಸಿದ್ದರು ಪಟೇಲರು!

1947 ಆಗಸ್ಟ್ 15ರ ಸ್ವಾತಂತ್ರ್ಯವನ್ನು ಪಡೆಯುವ ಸವಾಲಿನಷ್ಟೆ ದೊಡ್ಡ ಸವಾಲು ಭಾರತದ ಒಳಗೆ ಸ್ವತಂತ್ರವಾಗಿ ಮೆರೆಯುತ್ತಿದ್ದ 565 ಸಂಸ್ಥಾನಗಳನ್ನು ಭಾರತಕ್ಕೆ ಸೇರಿಸುವುದು! ಅದಕ್ಕೆ ‘ಉಕ್ಕಿನ ಮನುಷ್ಯ’ ಎಂದೇ ಕರೆಯಲ್ಪಡುತ್ತಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗಿಂತ ಹೆಚ್ಚು ಶಕ್ತಿಶಾಲಿ ಯಾರಿದ್ದಾರೆ?

ಶತಮಾನಗಳಿಂದ ಅರಸೊತ್ತಿಗೆಯನ್ನು ಅನುಭವಿಸುತ್ತಿದ್ದ ಅರಸರನ್ನು ಭಾರತದ ಆಡಳಿತದ ಕೊಡೆಯಲ್ಲಿ ತರುವುದುದಕ್ಕೆ ಪಟೇಲರು ಸಾಮ, ದಾನ, ಬೇಧ, ದಂಡ.. ಹೀಗೆ ಎಲ್ಲ ಪ್ರಯೋಗಗಳನ್ನು ಮಾಡಬೇಕಾಯಿತು. ಆರಂಭದಲ್ಲಿ ಸ್ವತಃ ಪಟೇಲರು ಆ ಅರಸರ ಜೊತೆಗೆ ಮಾತುಕತೆಗೆ ಇಳಿದರು. ಆರಂಭದಲ್ಲಿ ಒಂದಿಷ್ಟು ಹಠ ಹಿಡಿದ ರಾಜರು ಮುಂದೆ ಭಾರತದ ಅಧೀನಕ್ಕೆ ಬರಲು ಒಪ್ಪಿದರು. ಗ್ವಾಲಿಯರ್, ಬರೋಡ, ಬಿಕಾನೆರ್ ಅವರಿಂದ ಆರಂಭವಾದ ಮಾತುಕತೆ ಮುಂದೆ ಸಾಲು ಸಾಲು ಮಹಾರಾಜರ ಸೇರ್ಪಡೆಯೊಂದಿಗೆ ಮುಂದುವರಿಯಿತು.

ಇಂದೋರ್ ಮತ್ತು ಜೋಧಪುರ್ ಭಾರತದ ಅಧೀನಕ್ಕೆ ಬರಲು ಕಷ್ಟ ಆಗಲಿಲ್ಲ. ಆದರೆ ಜುನಾಘಡ್ ಸವಾಲಾಯಿತು. ಅದರ ನವಾಬ ಮೊಹಬ್ಬತ್ ಖಾನ್ ತಾನು ಪಾಕಿಸ್ತಾನಕ್ಕೆ ಸೇರುವುದಾಗಿ ಘೋಷಣೆ ಮಾಡಿದ್ದ! ಅವನನ್ನು ಬಿಟ್ಟರೆ ಮುಂದೆ ಹೈದರಾಬಾದ್ ಮತ್ತು ಕಾಶ್ಮೀರಗಳು ಕೂಡ ಕೈತಪ್ಪುತ್ತಿತ್ತು! ಈ ಅಪಾಯವನ್ನು ಮೊದಲಾಗಿ ಗ್ರಹಿಸಿದ ಪಟೇಲರು ಸೆಪ್ಟೆಂಬರ್ 24ರಂದು ಜುನಾಘಡದ ಒಳಗೆ ಸೇನಾ ತುಕಡಿಯನ್ನು ನುಗ್ಗಿಸಿದರು. ನವಾಬ ಕರಾಚಿಗೆ ತಲೆ ತಪ್ಪಿಸಿಕೊಂಡು ಓಡಿ ಹೋದ. ನವೆಂಬರ್ 9ರಂದು ಜುನಾಘಡವು ಭಾರತೀಯ ಸೇನೆಯ ವಶ ಆಯಿತು.

ಮುಂದಿನ ಅತೀ ದೊಡ್ಡ ಸವಾಲು ಹೈದರಾಬಾದ್ ನಿಜಾಮ! ಪಟೇಲರ ಪ್ರಯತ್ನ ಆರಂಭ ಆಯಿತು. ಅಕ್ಟೋಬರ್ ತಿಂಗಳಲ್ಲಿ ಹೈದರಾಬಾದ್ ನಿಜಾಮರ ಪ್ರತಿನಿಧಿ ಲಯೇಖ ಖಾನ್ ದೆಹಲಿಯಲ್ಲಿ ಪಟೇಲರನ್ನು ಭೇಟಿ ಆಗಿ ‘ನಾವು ಭಾರತಕ್ಕೆ ಸೇರುವ ಪ್ರಶ್ನೆಯೇ ಇಲ್ಲ. ಕಟ್ಟಕಡೆಯ ವ್ಯಕ್ತಿಯವರೆಗೆ ಸ್ವಾತಂತ್ರ್ಯಕ್ಕೆ ಹೋರಾಡುತ್ತೇವೆ!’ ಅಂದನು.

ಒಂದು ಕ್ಷಣ ಕೂಡ ಯೋಚನೆ ಮಾಡದೆ ಪಟೇಲರು ಒಂದೇ ಮಾತು ಹೇಳಿದರು – ‘ನೀವು ಆತ್ಮಹತ್ಯೆಯ ಮಾಡಲು ನಿರ್ಧಾರ ಮಾಡಿದ್ದರೆ ನಾನೇನು ಮಾಡಲಿ?’

ಮುಂದೆ ಸೇನಾ ಕಾರ್ಯಾಚರಣೆ ಅನಿವಾರ್ಯ ಆಯಿತು. ಲೆಫ್ಟಿನೆಂಟ್ ಜನರಲ್ ರಾಜೇಂದ್ರ ಸಿಂಹ, ಮೇಜರ್ ಜನರಲ್ ಜೆ ಎನ್ ಚೌಧರಿ ನೇತೃತ್ವದಲ್ಲಿ ‘ಆಪರೇಶನ್ ಪೋಲೊ’ ಆರಂಭವಾಯಿತು. ಪಟೇಲರು ಸೈನ್ಯಕ್ಕೆ ಪೂರ್ತಿ ಸ್ವಾತಂತ್ರ್ಯ ಕೊಟ್ಟರು. ಭಾರತೀಯ ಸೇನೆಯು ನಿರ್ದಾಕ್ಷಿಣ್ಯವಾಗಿ ಹೈದರಾಬಾದ್ ನಿಜಾಮನ ಸೇನೆಯನ್ನು ಹೊಸಕಿಹಾಕಿತು! ಹೈದರಾಬಾದ್ ಭಾರತದ ಸಾರ್ವಭೌಮತೆಗೆ ಸೇರ್ಪಡೆ ಆಯಿತು.

ಇನ್ನು ಉಳಿದದ್ದು ಕಾಶ್ಮೀರ ಮಾತ್ರ! ಅದನ್ನು ಭಾರತದ ಒಳಗೆ ತರಲು ಪಟೇಲರ ಬಳಿ ಅವರದ್ದೇ ಆದ ಸ್ಟ್ರಾಟಜಿ ಇತ್ತು. ಆದರೆ ಬೇರೆ ರಾಜಕೀಯ ಕಾರಣಕ್ಕೆ ಮತ್ತು ವರಿಷ್ಠರ ಕೈವಾಡದಿಂದ ಪಟೇಲರಿಗೆ ಅದನ್ನು ಪೂರ್ತಿ ಮಾಡಲು ಆಗಲಿಲ್ಲ.

ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ‘ಉಕ್ಕಿನ ಮನುಷ್ಯ’ ಎಂದು ಕರೆದದ್ದು, ಮರಣೋತ್ತರವಾಗಿ 1991ರಲ್ಲಿ ಭಾರತರತ್ನ ಪ್ರಶಸ್ತಿ ಕೊಟ್ಟದ್ದು ಸುಮ್ಮನೆ ಅಲ್ಲ!

ಇದನ್ನೂ ಓದಿ| ರಾಜ ಮಾರ್ಗ ಅಂಕಣ| 3 ವರ್ಷ ಹಾಸಿಗೆ ಮೇಲೆ ಶವದಂತೆ ಬಿದ್ದುಕೊಂಡಿದ್ದ ಈ ಮಹಾನ್‌ ನಟ ಚಿಯಾನ್ ವಿಕ್ರಮ್!

Exit mobile version