ಆಸ್ಟ್ರೇಲಿಯ ಕ್ರಿಕೆಟ್ ಟೀಮ್‌ನಲ್ಲಿ ಬ್ರೆಟ್ ಲೀ ಎಂಬ ಅತ್ಯಂತ ವೇಗದ ಬೌಲರ್ ಇದ್ದಿದ್ದು ಎಲ್ಲರಿಗೂ ಗೊತ್ತು. ಗಂಟೆಗೆ 150 ಕಿ.ಮೀ. ವೇಗದಲ್ಲಿ ಅವರು ಬೌಲಿಂಗ್ ಮಾಡುತ್ತಿದ್ದರೆ ಯಾವ ಬ್ಯಾಟರ್‌ನ ಎದೆ ಕೂಡ ನಡುಗುತ್ತಿತ್ತು! ಸಚಿನ್ ತೆಂಡೂಲ್ಕರ್ ತಮ್ಮ ಕ್ರಿಕೆಟ್ ಜೀವನದ ಶಿಖರದಲ್ಲಿ ಇದ್ದಾಗ. ಬ್ರೆಟ್ ಲೀ ವಿರುದ್ಧ ನಿರ್ಭೀತಿಯಿಂದ ಆಡುತ್ತಿದ್ದರು.
ಸಚಿನ್ ಕೊಟ್ಟ ಉತ್ತರವು ಅತ್ಯಂತ ಮಾರ್ಮಿಕ ಆಗಿತ್ತು!
ಆಗ ಯಾರೋ ಸಚಿನ್ ಅವರನ್ನು ಕೇಳಿದ್ದರು – ನಿಮಗೆ ಬ್ರೆಟ್ ಲೀ ಅವರನ್ನು ಎದುರಿಸುವಾಗ ಭಯ ಆಗೋದಿಲ್ಲವಾ ಎಂದು! ಅದಕ್ಕೆ ಸಚಿನ್ ಕೊಟ್ಟ ಉತ್ತರವು ತುಂಬಾ ಮಾರ್ಮಿಕ ಆಗಿತ್ತು.
ಅವರು ಹೇಳಿದ್ದರು – ಹೌದು ನನಗೆ ಭಯ ಆಗ್ತದೆ! ಆದರೆ ನನಗೆ ಒಂದು ಸತ್ಯ ಗೊತ್ತಿದೆ. ನಾನು ಬ್ರೆಟ್ ಲೀ ವಿರುದ್ಧ ಬ್ಯಾಟ್ ಮಾಡುವಾಗ ಎಷ್ಟು ಹೆದರುತ್ತೇನೆಯೋ ಅವರು ನನಗೆ ಬೌಲಿಂಗ್ ಮಾಡುವಾಗ ಅಷ್ಟೇ ಹೆದರುತ್ತಾರೆ! ಅಲ್ಲಿಗೆ ನನ್ನ ಭಯ ಹೊರಟುಹೋಗುತ್ತದೆ!
ಸಚಿನ್ ಹೇಳಿದ್ದು ಸರಿ ಅಲ್ವಾ? ಇನ್ನಷ್ಟು ಉದಾಹರಣೆ ಕೊಡ್ಬೇಕು ಅಂದರೆ ಯಾವುದಾದರೂ ಪರೀಕ್ಷೆಯಲ್ಲಿ ನೀವೊಬ್ಬರೇ ಫೇಲ್ ಆದರೆ ತುಂಬಾ ದುಃಖ ಆಗ್ತದೆ. ಅದೇ ತುಂಬಾ ಜನ ಫೇಲ್ ಆದರೆ ನಿಮ್ಮ ದುಃಖ ಖಂಡಿತ ಕಡಿಮೆ ಆಗ್ತದೆ ಅಲ್ವಾ?
ಈ ಭಯ ಎಲ್ಲಿಂದ ಬರೋದು?
ಸಣ್ಣ ಸಣ್ಣ ಮಕ್ಕಳಿಗೆ ಭಯದ ಲವಲೇಶವೂ ಇರುವುದಿಲ್ಲ!
ಅಕ್ಕಪಕ್ಕದಲ್ಲಿ ಒಂದು ಹಾವು ಕಂಡರೆ ಅದನ್ನು ಹಿಡಿದು ಹಾರ ಮಾಡ್ಕೊಂಡು ಮಗು ಕುತ್ತಿಗೆಗೆ ಹಾಕಿಕೊಳ್ಳುತ್ತದೆ ಅಲ್ವಾ? ಆಗ ಆ ಮಗುವಿನ ತಾಯಿ ಅಥವಾ ತಂದೆ ಅಥವಾ ಬೇರೆ ಯಾರಾದ್ರೂ ಅಯ್ಯೋ ಹಾವು! ಎಂದು ಜೋರಾಗಿ ಕಿರುಚಿದಾಗ ಆ ಮಗುವಿನಲ್ಲಿ ಭಯವು ಇಂಡ್ಯುಸ್ ಆಗುತ್ತದೆ.
ಅಯ್ಯೋ! ಕತ್ತಲೆ ಆಯ್ತು. ಒಬ್ಬನೇ ಹೊರಗೆ ಹೋಗಬೇಡ ಎಂದು ಭಯ ಹುಟ್ಟಿಸುವುದು ಯಾರು?
ಪರೀಕ್ಷೆಗೆ ಮಗು ಹೊರಟಾಗ ಮಾರ್ಕ್ಸ್ ಕಡಿಮೆ ಆದರೆ ನೋಡು! ಎಂದು ಭಯ ಹುಟ್ಟಿಸುವುದು ಯಾರು?
ಯಾವುದೇ ಸ್ಪರ್ಧೆಯಲ್ಲಿ ಮಗು ಖುಷಿಯಿಂದ ಭಾಗವಹಿಸಲು ಆಸೆ ಪಡುತ್ತದೆ. ಆದರೆ ಚೆನ್ನಾಗಿ ಪ್ರಾಕ್ಟೀಸ್ ಮಾಡಿಕೋ. ಬಹುಮಾನ ಸಿಗದಿದ್ದರೆ ನೋಡು! ಎಂದು ಭಯ ಹುಟ್ಟಿಸುವುದು ಯಾರು?
ಮಗುವಿಗೆ ಹಸಿವು ಇಲ್ಲದೆ ಊಟ ಮಾಡದೇ ಅಳುವಾಗ ಗುಮ್ಮ ಬರ್ತಾನೆ, ದೆವ್ವ ಬರ್ತದೆ ಎಂದು ಹೆದರಿಸೋದು ಯಾರು?
ನಿನ್ನನ್ನು ಕತ್ತಲೆಯ ಕೋಣೆಯಲ್ಲಿ ಕೂಡಿ ಹಾಕುತ್ತೇನೆ ನೋಡು!
ಅವರ ಮನೆಗೆ ಹೋದರೆ ಜಾಗ್ರತೆ! ಅವರ ಜೊತೆಗೆ ಆಡಲು ಹೋದರೆ ಜಾಗ್ರತೆ!
ಅವರ ಮನೆಯ ಅಂಗಳಕ್ಕೆ ಆಟ ಆಡಲು ಹೋದರೆ ಕೈ ಕಾಲು ಮುರಿದು ಹಾಕ್ತೇವೆ!
ಮೊಬೈಲ್ ಮುಟ್ಟಿದರೆ ಕೈ ಮುರಿದು ಹಾಕುತ್ತೇನೆ!
ಈ ರೀತಿಯ ದೊಡ್ಡವರ ಒಂದೊಂದು ಹೇಳಿಕೆಯು ಕೂಡ ಮಗುವಿನಲ್ಲಿ ಭಯ ಮತ್ತು ಆತಂಕ ಉಂಟುಮಾಡುತ್ತದೆ. ಇದು ಸ್ವಾಭಾವಿಕವಾದ ಭಯ ಅಲ್ಲ. ಹೆತ್ತವರು, ಶಿಕ್ಷಕರು ಅಥವಾ ಬೇರೆ ಯಾರೋ ಇಂಡ್ಯುಸ್ ಮಾಡಿದ ಭಯ. ಈ ಭಯವು ಮುಂದೆ ಆ ಮಗುವಿನಲ್ಲಿ ವ್ಯಕ್ತಿತ್ವದ ಭಾರಿ ದೋಷ ಉಂಟುಮಾಡುತ್ತದೆ. ಆ ಭಯಗಳು ಮಗುವಿನ ಆತ್ಮವಿಶ್ವಾಸವನ್ನು ಕುಂದಿಸಿಬಿಡುತ್ತವೆ. ಈ ಭಯವು ಇನ್ನೂ ಹೆಚ್ಚಾಯಿತು ಅಂದರೆ ಮಗು ಮುಂದೆ ಸಣ್ಣ ಸಣ್ಣ ವಿಷಯಗಳಿಗೂ ಭಯ ಪಡುವ ಸನ್ನಿವೇಶ ಉಂಟಾಗುತ್ತದೆ. ನಿದ್ದೆಯಲ್ಲೂ ಆ ಮಗು ಬೆಚ್ಚಿ ಬೀಳುವ ಸಾಧ್ಯತೆ ಇದೆ. ಮುಂದೆ ಅದೇ ಭಯವು ಮಗುವಿಗೆ ಮಾನಸಿಕ ತಡೆ ಆಗಿಬಿಡುವ ಸಾಧ್ಯತೆ ಇದೆ!
ಈ ಉದಾಹರಣೆಗಳನ್ನು ಗಮನಿಸಿ
ಅಪ್ಪನ ಕಿಸೆಯಿಂದ ಹಸಿವಿಗಾಗಿ ಹತ್ತು ರೂಪಾಯಿ ಮಗುವು ಕದ್ದಿತು ಎಂದಾದಾಗ ಕೈಗೆ ಬರೆ ಹಾಕುವ ಪೋಷಕರನ್ನು ನಾನು ನೋಡಿದ್ದೇನೆ! ಒಬ್ಬ ಹುಡುಗನು ಪರೀಕ್ಷೆಯಲ್ಲಿ ಕಾಪಿ ಮಾಡಿದ (ಆ ಹುಡುಗನ ತುಡಿತ ಇದ್ದದ್ದು ಪಾಸ್ ಆಗಲೇಬೇಕು ಎಂದು!) ಎಂದು ಐದನೇ ತರಗತಿಯ ಮಗುವನ್ನು ಬೈದು ದಂಡಿಸುವ ಶಿಕ್ಷಕರನ್ನು ನೋಡಿದ್ದೇನೆ! ಒಬ್ಬಳು ಆರನೇ ತರಗತಿಯ ಹುಡುಗಿಯು ತನ್ನ ತರಗತಿಯ ಹುಡುಗನಿಗೆ ಸಣ್ಣ ಚೀಟಿಯಲ್ಲಿ ಪ್ರೇಮಪತ್ರ ಬರೆದಳು ಎಂದು ಬಹಿರಂಗ ಸಭೆ ಮಾಡಿ ಆಕೆಯ ಮಾನ ಮರ್ಯಾದೆ ಹರಾಜು ಹಾಕುವ ಶಿಕ್ಷಕರು ನನಗೆ ಗೊತ್ತಿದೆ! ಒಬ್ಬ ಸಣ್ಣ ಹುಡುಗ ತನ್ನ ಫ್ರೆಂಡ್ ಮನೆಗೆ ಇಸ್ಪೀಟ್ ಆಡಲು ಹೋದ ಎಂದು ಆತನನ್ನು ರಾತ್ರಿ ಇಡೀ ಕತ್ತಲೆಯ ಕೋಣೆಯಲ್ಲಿ ಕೂಡಿ ಹಾಕಿದ ಹೆತ್ತವರನ್ನು ನಾನು ನೋಡಿದ್ದೇನೆ!
ಅನುದ್ದೇಶಿತ ತಪ್ಪುಗಳಿಗೆ ಶಿಕ್ಷೆ ಬೇಡ!
ಇವೆಲ್ಲವೂ ಮಗುವಿನ ಅನುದ್ದೇಶಿತ ತಪ್ಪುಗಳು. ಮಕ್ಕಳು ತಿಳಿವಳಿಕೆ ಇಲ್ಲದೆ ಮಾಡುವ ತಪ್ಪುಗಳು! ಸ್ವಲ್ಪ ಪ್ರೀತಿಯಿಂದ ಬುದ್ಧಿ ಹೇಳಿದರೆ ಆ ಮಕ್ಕಳು ತಮ್ಮ ತಪ್ಪನ್ನು ತಕ್ಷಣ ಒಪ್ಪಿಕೊಳ್ಳುತ್ತಾರೆ ಮತ್ತು ಆ ತಪ್ಪುಗಳಿಂದ ಹೊರಬರುತ್ತಾರೆ. ಹೆತ್ತವರಲ್ಲಿ ಮತ್ತು ಶಿಕ್ಷಕರಲ್ಲಿ ಒಂದಿಷ್ಟು ತಾಳ್ಮೆ, ವ್ಯವಧಾನ ಮತ್ತು ಕ್ಷಮಾಗುಣ ಇದ್ದರೆ ಇಂತಹ ತಪ್ಪುಗಳನ್ನು ಪ್ರೀತಿಯಿಂದಲೇ ಸರಿ ಪಡಿಸಬಹುದು! ಅದು ಶಾಶ್ವತವಾದ ಬದಲಾವಣೆ ಆಗಿರುತ್ತದೆ. ಅದೇ ಭಯದಿಂದ, ಪೆಟ್ಟು ಕೊಡುವುದರಿಂದ, ಬಯ್ಯುವುದರಿಂದ, ಶಿಕ್ಷೆ ಕೊಡುವುದರಿಂದ, ಅಪಮಾನ ಮಾಡುವುದರಿಂದ ಆಗುವ ಬದಲಾವಣೆಗಳು ಶಾಶ್ವತ ಆಗಿರುವುದೇ ಇಲ್ಲ!
ಹೆತ್ತವರು ಅಥವಾ ಶಿಕ್ಷಕರು ಅರ್ಥ ಮಾಡಿಕೊಳ್ಳಲೇ ಬೇಕಾದ ಸಂಗತಿ ಏನೆಂದರೆ ಆ ಮಗುವು ಮಾಡಿದ ಎಷ್ಟೋ ತಪ್ಪುಗಳನ್ನು ಅವರೂ ಬಾಲ್ಯದಲ್ಲಿ ಮಾಡಿರುತ್ತಾರೆ ಎನ್ನುವುದು! ಇದನ್ನು ಅರ್ಥ ಮಾಡಿಕೊಂಡರೆ ಆ ಮಕ್ಕಳಿಗೆ ನಾವು ಶಿಕ್ಷೆ ಕೊಡಲು ಸಾಧ್ಯವೇ ಇಲ್ಲ. ಮಕ್ಕಳ ನಡವಳಿಕೆಯನ್ನು ತಿದ್ದಲು ಪ್ರೀತಿಯೊಂದೇ ಮಂತ್ರ ದಂಡ ಎನ್ನುವುದು ನೂರಕ್ಕೆ ನೂರರಷ್ಟು ಸಾಬೀತು ಆಗಿದೆ!
ಮಗುವಿನ ಸುಪ್ತ ಮನಸಿನಲ್ಲಿ ಭಯ ನೆಟ್ಟರೆ ಆಗುವ ಪರಿಣಾಮ…!
ಬಾಲ್ಯದಲ್ಲಿ ಮಗುವಿನ ಸುಪ್ತ ಮನಸ್ಸಿನ ಒಳಗೆ ನೆಟ್ಟು ಹೋದ ಭಯಗಳು ಮುಂದೆ ಅದೇ ಮಗುವಿನ ಹದಿಹರೆಯ ಮತ್ತು ಯೌವ್ವನದಲ್ಲಿ ತುಂಬಾ ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತವೆ. ಕತ್ತಲೆ ಕಂಡರೆ ಭಯ, ನೀರು ಕಂಡರೆ ಭಯ, ಪರೀಕ್ಷೆ ಬಂದರೆ ಭಯ, ಬೆಂಕಿ ಕಂಡರೆ ಭಯ, ಫೋನ್ ರಿಂಗ್ ಆದರೆ ಭಯ, ಜನಸಮೂಹ ಕಂಡರೆ ಭಯ… ಹೀಗೆ ನೂರಾರು ಭಯಗಳು ಮಗುವಿನ ಸುಪ್ತ ಮನಸ್ಸಿನ ಗೋಡೆಯ ಒಳಗೆ ಗಟ್ಟಿಯಾಗಿ ಕೂತುಬಿಟ್ಟರೆ ಆ ಮಗು ಮುಂದೆ ಜೀವನದಲ್ಲಿ ತುಂಬಾ ಕಷ್ಟ ಪಡುತ್ತದೆ.
ಮುಂದೆ ಆಪ್ತವಾದ ವಲಯದಲ್ಲಿ ಸಪೋರ್ಟ್ ಮಾಡುವ ವಾತಾವರಣವು ಇದ್ದರೆ ಅಥವ ಆ ಮಗುವಿನಲ್ಲಿ ಸ್ಟ್ರಾಂಗ್ ಆದ ಇಚ್ಛಾಶಕ್ತಿ ಮುಂದೆ ಡೆವಲಪ್ ಆದರೆ ಮಾತ್ರ ಆ ಭಯವನ್ನು ನಿವಾರಣೆ ಮಾಡಬಹುದು. ಆದರೆ ಇದು ತುಂಬಾ ಕಷ್ಟವಾದ ಕೆಲಸ.
ಮುಂದೆ ಭಯ ನಿವಾರಣೆ ಮಾಡಲು ಹೊರಡುವುದಕ್ಕಿಂತ ಬಾಲ್ಯದಲ್ಲಿ ಭಯ ತುಂಬದಿರುವುದು ಸುಲಭ! ನಾವು ದೊಡ್ಡವರು ಅಂತ ತಿಳಿದುಕೊಂಡವರು ಸ್ವಲ್ಪ ವಿವೇಚನೆಯಿಂದ ಕೆಲಸ ಮಾಡಿದರೆ ಮುಂದೆ ಆಗುವ ಅನಾಹುತವನ್ನು ತಪ್ಪಿಸಬಹುದು. ಏನಂತೀರಿ?
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಗಾಯಕಿ ಶ್ರೇಯಾ ಘೋಷಾಲ್: 22 ವರ್ಷಗಳಿಂದ ಆಕೆ ಹಾಡಿದ್ದೆಲ್ಲ ಕಮಾಲ್!