ಅವರಿಬ್ಬರೂ ಗುಜರಾತ್ ಮೂಲದವರು (Couple from Gujarat). ಅಮೆರಿಕದ ಸಿಲಿಕಾನ್ ಸಿಟಿಯಲ್ಲಿ (Silicon city in America) ಐಟಿ ಉದ್ಯೋಗದಲ್ಲಿ (IT Employees) ಇದ್ದವರು. ಪ್ರೀತಿಸಿ ಮದುವೆ (Love Marriage) ಆದವರು. ಕೈ ತುಂಬಾ ಸಂಪಾದನೆ, ಸ್ವಂತ ಮನೆ, ಪರಸ್ಪರ ಪ್ರೀತಿ… ಬೇರೇನು ಬೇಕು (ರಾಜ ಮಾರ್ಗ ಅಂಕಣ) ಬದುಕಿಗೆ?
ಬಾಲ್ಯದ ನೆನಪು ಕೃಷಿಯ ಕಡೆಗೆ ಸೆಳೆಯಿತು
ವಿವೇಕ್ ಮತ್ತು ಬೃಂದಾ (Vivek and Brinda) ಪ್ರತೀ ದಿನವೂ ಜೊತೆಯಾಗಿ ಅಡುಗೆ ಮಾಡಿ ಊಟ ಮಾಡುವವರು. ಆಗೆಲ್ಲ ಒಂದು ಪ್ರಶ್ನೆ ಅವರನ್ನು ಕಾಡುತ್ತಿತ್ತು. ‘ನಾವು ಅಡುಗೆ ಮಾಡಲು ಬಳಸುವ ಈ ತರಕಾರಿ ಮತ್ತು ಹಣ್ಣುಗಳು ಎಲ್ಲಿಂದ ಬರುತ್ತವೆ?’ ಎಂದು.
ಅವರ ಮನೆಯ ಸುತ್ತ ಹಣ್ಣಿನ ಮರಗಳಿದ್ದವು. ಆಗ ವಿವೇಕ್ ಅವರಿಗೆ ತನ್ನ ಬಾಲ್ಯದ ನೆನಪಾಗುತ್ತಿತ್ತು. ಬರಿಗಾಲಲ್ಲಿ ಮರ ಹತ್ತಿ ಹಣ್ಣು ಕಿತ್ತು ತಿನ್ನುವ ಖುಷಿ ಎಲ್ಲವೂ ನೆನಪಾಗುತ್ತಿತ್ತು. ಈ ನೆನಪುಗಳಿಗೆ ಉತ್ತರ ಹುಡುಕುತ್ತಾ ಅವರಿಗೆ ನಿಧಾನವಾಗಿ ಕೃಷಿಯ ಬಗ್ಗೆ ಆಸಕ್ತಿ ಹುಟ್ಟಿತ್ತು. ಅವರು ತಮ್ಮ ರಜೆಯ ಅವಧಿಯಲ್ಲಿ ಕ್ಯಾಲಿಫೋರ್ನಿಯಾದ ಕಡೆಗೆ ಕಾರಿನಲ್ಲಿ ಹೋಗಿ ಕೃಷಿಯ ಬಗ್ಗೆ ಅಧ್ಯಯನ ಮಾಡಲು ತೊಡಗಿದರು. ಒಮ್ಮೆ ಅವರ ಜೀವನದ ಟರ್ನಿಂಗ್ ಪಾಯಿಂಟ್ ಬಂದೇ ಬಿಟ್ಟಿತು!
ಸ್ಟ್ರಾಬೆರಿ ಹಣ್ಣಿನ ತೋಟ ನೋಡುತ್ತ ಅವರು ಬೆಚ್ಚಿ ಬಿದ್ದರು!
ಒಮ್ಮೆ ಕಾರಲ್ಲಿ ಅವರು ತೋಟದ ಕಡೆ ಹೋಗುತ್ತಿದ್ದಾಗ ರಸ್ತೆಯ ಎರಡೂ ಬದಿಗಳಲ್ಲಿ ಸ್ಟ್ರಾಬೆರಿ ಹಣ್ಣಿನ ತೋಟವನ್ನು ನೋಡುತ್ತಾರೆ. ಅಲ್ಲಿ ಕಾರ್ಮಿಕನೊಬ್ಬ ತನ್ನ ಪೂರ್ಣ ದೇಹದ ಸುತ್ತಲೂ ರಕ್ಷಾಕವಚ ಧರಿಸಿಕೊಂಡು ತೋಟಕ್ಕೆ ಏನೋ ದ್ರಾವಣವನ್ನು ಸಿಂಪಡಣೆ ಮಾಡುವುದನ್ನು ನೋಡುತ್ತಾರೆ. ಅದನ್ನು ನೋಡಿ ಅವರ ಬೆನ್ನು ಮೂಳೆಯ ಒಳಗೆ ನಡುಕ ಹುಟ್ಟಿತು. ‘ಆ ಕಾರ್ಮಿಕ ತನ್ನ ದೇಹವನ್ನು ರಾಸಾಯನಿಕ ದ್ರಾವಣದಿಂದ ರಕ್ಷಣೆ ಮಾಡುತ್ತಾನೆ. ಆದರೆ ಆ ಮರ ಮತ್ತು ಹಣ್ಣುಗಳಿಗೆ ರಕ್ಷಣೆ ಯಾರು ಕೊಡಬೇಕು?’ ಅವರ ನಿದ್ದೆ ಹಾರಿಹೋಯಿತು.
ಮುಂದಿನ ಒಂದೂವರೆ ತಿಂಗಳು ದಂಪತಿಗಳು ರಜೆ ಹಾಕಿ ಮನೆಯಲ್ಲಿ ಕೂತು ತಮ್ಮ ಆಹಾರದ ಮೂಲಕ ಎಷ್ಟು ರಾಸಾಯನಿಕಗಳು ತಮ್ಮ ದೇಹವನ್ನು ಪ್ರವೇಶ ಮಾಡುತ್ತಿವೆ ಎಂದು ಲೆಕ್ಕ ಮಾಡಿದರು. ಅವರ ಬೆನ್ನು ಮೂಳೆಯಲ್ಲಿ ಮಿಂಚು ಹೊಡೆದ ಅನುಭವ ಆಯಿತು.
ಐಟಿ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು ಗುಜರಾತಿಗೆ ಬಂದರು
ಒಂದು ಕ್ಷಣವೂ ಕಾಯದೆ ಇಬ್ಬರೂ ತಮ್ಮ ಐಟಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ತಮ್ಮ ಸ್ವಂತ ರಾಜ್ಯವಾದ ಗುಜರಾತಿಗೆ ಮರಳಿದರು. ತಮ್ಮ ವಿಚಾರಗಳನ್ನು ಮನೆಯವರೊಂದಿಗೆ ವಿನಿಮಯ ಮಾಡಿದಾಗ ಅವರಿಂದ ಕೂಡ ಒಳ್ಳೆಯ ಸ್ಪಂದನೆ ದೊರಕಿತು. ಅವರ ಎರಡೂ ಕುಟುಂಬಗಳಿಗೆ ಕೃಷಿಯ ಅನುಭವ ಇರಲಿಲ್ಲ. ಆದ್ದರಿಂದ ಅವರಿಬ್ಬರೂ ಸ್ವಲ್ಪ ಹೆಚ್ಚು ಶ್ರಮ ವಹಿಸಬೇಕಾಗಿ ಬಂತು.
2017ರಲ್ಲಿ ನಡಿಯಾಡ್ ಎಂಬ ನಗರದ ಹೊರವಲಯದಲ್ಲಿ ಹತ್ತು ಎಕರೆ ಭೂಮಿಯನ್ನು ಅವರು ಖರೀದಿ ಮಾಡುತ್ತಾರೆ. ಅದರ ಸುತ್ತಲೂ ಕಂದಕಗಳನ್ನು ತೋಡಿ ಮಳೆಯ ನೀರನ್ನು ಇಂಗಿಸುತ್ತಾರೆ. ಮಣ್ಣಿನ ಸಾರವನ್ನು ಕಾಪಾಡುವ ದೃಷ್ಟಿಯಿಂದ ಭೂಮಿಯನ್ನು ಸರಿಯಾಗಿ ಏಳು ಭಾಗವನ್ನಾಗಿ ಮಾಡುತ್ತಾರೆ. ಆ ಏಳು ಭಾಗಗಳಿಗೂ ಬೇರೆ ಬೇರೆ ಆರ್ಗಾನಿಕ್ ಟ್ರೀಟ್ಮೆಂಟ್ ಕೊಟ್ಟು ಬೇರೆ ಬೇರೆ ಬೆಳೆಯನ್ನು ಬೆಳೆಯುವುದು ಅವರ ಉದ್ದೇಶವಾಗಿತ್ತು. ಸಿರಿ ಧಾನ್ಯ, ಗೋಧಿ, ಬಟಾಟೆ, ನುಗ್ಗೆ, ಬಾಳೆ ಹಣ್ಣು, ಪಪ್ಪಾಯ, ಬದನೆ, ಮಾವು, ಪೇರಳೆ…….ಹೀಗೆ ಬೇರೆ ಬೇರೆ ಭಾಗದಲ್ಲಿ ಬೇರೆ ಬೇರೆ ಬಿತ್ತನೆಯನ್ನು ಅವರು ಮಾಡಿದರು.
ಕೃಷಿಭೂಮಿಯ ಮಧ್ಯದಲ್ಲಿ ದೊಡ್ಡ ನೀರು ಸಂಗ್ರಹಣಾ ಹೊಂಡವನ್ನು ಮಾಡಿ ಶುದ್ಧ ನೀರನ್ನು ಸಂಗ್ರಹಿಸುತ್ತಾರೆ. ಅದರಲ್ಲಿ ಮೀನು ಮತ್ತು ಬಾತುಕೋಳಿಗಳು ವಿಹಾರ ಮಾಡಲು ಅನುಕೂಲ ಮಾಡಿ ಕೊಡುತ್ತಾರೆ. ಅದರಿಂದ ಕುಡಿಯುವ ಶುದ್ಧ ನೀರು ದೊರೆಯಿತು. ತೋಟದ ಸುತ್ತ ಹೊರ ವಲಯದಲ್ಲಿ ತುಳಸಿ ಮತ್ತು ಲಿಂಬೆ ಹುಲ್ಲು ಬೆಳೆಸಿ ಹಣ್ಣಿನ ಗಿಡಗಳಿಗೆ ಕ್ರಿಮಿ ಮತ್ತು ನೊಣಗಳು ಬಾರದ ಹಾಗೆ ದಿಗ್ಬಂಧನ ಹಾಕುತ್ತಾರೆ.
ಸಾವಯವ ಮತ್ತು ಸಾವಯವ ಗೊಬ್ಬರ ಮಾತ್ರ
ತಮ್ಮ ತೋಟದ ಒಳಗೆ ಒಂದು ತೊಟ್ಟು ರಾಸಾಯನಿಕ ಗೊಬ್ಬರ ಕೂಡ ಬೀಳಬಾರದು ಎನ್ನುವುದು ಅವರ ಯೋಜನೆ ಆಗಿತ್ತು. 100% ಸಾವಯವ ಗೊಬ್ಬರ ಅವರೇ ತಯಾರಿ ಮಾಡಿ ತೋಟಕ್ಕೆ ಬಳಸುತ್ತಾರೆ. ಗೋವುಗಳನ್ನು ಸಾಕಿ ಹಟ್ಟಿ ಗೊಬ್ಬರ ತಯಾರಿಸುತ್ತಾರೆ. ತಮ್ಮ ತೋಟದ ಸೊಪ್ಪನ್ನೇ ಹಟ್ಟಿಗೊಬ್ಬರಕ್ಕೆ ಬಳಸುತ್ತಾರೆ. ಹಕ್ಕಿಗಳು, ಜೇನು ನೊಣಗಳು, ಚಿಟ್ಟೆಗಳು ತೋಟಕ್ಕೆ ಆಕರ್ಷಿತ ಆಗುವಂತೆ ಪಾತಿಗಳಲ್ಲಿ ಹೂವಿನ ಗಿಡವನ್ನು ನೆಡುತ್ತಾರೆ. ಇದರಿಂದ ಪರಾಗಸ್ಪರ್ಶ ಸುಲಭವಾಯಿತು.
ತೋಟದ ನಡುವೆ ಸಾವಯವ ಮನೆ!
ತೋಟದ ಮಧ್ಯೆ ಬಹಳ ಸುಂದರವಾದ ಒಂದು ‘ಸಾವಯವ ಮನೆ’ಯನ್ನು ಕಟ್ಟುತ್ತಾರೆ. ತೋಡಿದ ಮಣ್ಣು, ದನದ ಸೆಗಣಿ, ಕಲ್ಲುಗಳು ಇಷ್ಟು ಮಾತ್ರ ಬಳಕೆ ಮಾಡಿ ಅವರ ಮನೆಯು ಸಿದ್ಧವಾಯಿತು. ಕೇವಲ ಮೂರು ವರ್ಷಗಳ ಅವಧಿಯಲ್ಲಿ ಗಂಡ ಹೆಂಡತಿ ಇಬ್ಬರೂ ಸೇರಿ ಆ ಹತ್ತು ಎಕರೆ ಭೂಮಿಯನ್ನು ‘ಹಸಿರು ಸ್ವರ್ಗ’ ಮಾಡಿದ್ದಾರೆ. ಈಗ ಎಲ್ಲಾ ಹಣ್ಣಿನ ಮರಗಳು ಫಲ ಕೊಡುತ್ತಿವೆ. ಒಂದೊಂದು ಬೆವರ ಹನಿ ಮುತ್ತಾಗಿದೆ. ಅವರ ತೋಟದ ಬಾಳೆಹಣ್ಣು ಚಿಪ್ಸ್ ಆಗಿ ಮಾರುಕಟ್ಟೆಗೆ ಬರುತ್ತಿದೆ. ಹಣ್ಣುಗಳ ಕೆಚ್ ಅಪ್, ಸ್ಕ್ವಾಷ್, ಜ್ಯೂಸ್ ತಯಾರಿಸುವ ಫ್ಯಾಕ್ಟರಿ ಕೂಡ ಅವರೇ ಅಭಿವೃದ್ಧಿಪಡಿಸಿದ್ದು ನೂರಾರು ಜನರಿಗೆ ಉದ್ಯೋಗ ಕೂಡ ನೀಡಿದ್ದಾರೆ. ಫಾರ್ಮರ್ ಎನ್ನುವ ತಮ್ಮದೇ ಬ್ರಾಂಡ್ ಮಾಡಿದ್ದಾರೆ.
ಈ ದಂಪತಿ ಕೃಷಿ ಮಾಡಿ ಗೆದ್ದಿದ್ದಾರೆ
ವಿವೇಕ್ ಷಾ ಮತ್ತು ಬೃಂದಾ ಸೇರಿ ಮಾಡಿದ ಪರಿಪೂರ್ಣ ಹಸಿರು ಸಾವಯವ ತೋಟಕ್ಕೆ
‘ಬೃಂದಾವನ’ ಎಂದು ಹೆಸರಿಟ್ಟಿದ್ದಾರೆ. ‘ನಾವು ಐಟಿ ಕ್ಷೇತ್ರದಲ್ಲಿ ಪಡೆಯುವ ಸಂಬಳಕ್ಕಿಂತ ಹೆಚ್ಚು ಆದಾಯವನ್ನು ಕೃಷಿಯ ಮೂಲಕ ಪಡೆಯುತ್ತಿದ್ದೇವೆ’ ಎಂದು ಹೇಳುವಾಗ ಅವರ ಕಣ್ಣಲ್ಲಿ ಗೆದ್ದ ಖುಷಿ ಇತ್ತು. ಅವರಿಗೆ ಅಭಿನಂದನೆಗಳು.
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಕ್ಷಮಿಸಿ, ನಾನೀಗ ದುಡ್ಡಿನಿಂದ ಎಲ್ಲವನ್ನೂ ಖರೀದಿಸಲಾಗದು ಎಂದು ವಾದ ಮಾಡುವುದಿಲ್ಲ!