ಇಂದು ಸಾಕಷ್ಟು ಸ್ಪರ್ಧಾತ್ಮಕ ಆಗಿರುವ ಭಾರತೀಯ ಮಹಿಳಾ ಕ್ರಿಕೆಟ್ ರಂಗದಲ್ಲಿ ಇವತ್ತಿನ ದಿನದಲ್ಲಿ ಇಂಗ್ಲೆಂಡಿನ ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್ ಒಂದು ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿ ಆಗಲಿದೆ! 40 ವರ್ಷ ಪ್ರಾಯದ ಭಾರತೀಯ ಕ್ರಿಕೆಟಿನ ಆಲ್ ರೌಂಡರ್ ಜೂಲನ್ ಗೋಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಇಂದು ಗುಡ್ ಬೈ ಹೇಳಲಿದ್ದಾರೆ! ಅವರು ಇನ್ನೂ ಆಡಲಿ ಎಂದು ನೀವು ಆಸೆ ಪಡಲು ಸಾಧ್ಯ ಇಲ್ಲ! ಏಕೆಂದರೆ ಆಕೆಗೆ ಪ್ರಾಯ 40! ಇಂದಿನ ನಂತರ ಚಕಡಾ ಎಕ್ಸಪ್ರೆಸ್ ಓಡುವುದಿಲ್ಲ ಅನ್ನುವುದು ಅಪಾರ ನೋವಿನ ಸಂಗತಿ. ಇಪ್ಪತ್ತು ವರ್ಷ ದೇಶಕ್ಕಾಗಿ ಆಡುವುದು, ನಲ್ವತ್ತು ವರ್ಷದವರೆಗೆ ವೇಗದ ಬೌಲರ್ ಆಗಿ ಮಿಂಚುವುದು ಸಾಮಾನ್ಯ ಸಂಗತಿ ಅಲ್ಲ!
ಇಂದು ಭಾರತ ಇಂಗ್ಲೆಂಡಿನ ವಿರುದ್ಧದ ODI ಸರಣಿ ಗೆಲ್ಲುವುದರ ಜೊತೆಗೆ ಜೂಲನ್ ಗೋಸ್ವಾಮಿಗೆ ವಿದಾಯ ಹೇಳುವುದು ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ಭಾರೀ ರೋಮಾಂಚನವನ್ನು ಕೊಡಲಿದೆ!
ಆಕೆ ಬಾರ್ನ್ ಫೈಟರ್! ಅಲ್ಟಿಮೇಟ್ ಚಾಂಪಿಯನ್! ಕೊನೆಯ ಚೆಂಡಿನವರೆಗೂ ಸೋಲನ್ನು ಒಪ್ಪಿಕೊಳ್ಳದ ಪ್ರಬಲ ಇಚ್ಛಾಶಕ್ತಿ! ಬೆಟ್ಟದಷ್ಟು ಆತ್ಮವಿಶ್ವಾಸದ ಪ್ರತೀಕ! ಎಲ್ಲಕ್ಕಿಂತ ಮಿಗಿಲಾಗಿ ಯಾರೊಂದಿಗೂ ಜಗಳ ಮಾಡದ ಸಜ್ಜನಿಕೆಯ ಕ್ರಿಕೆಟರ್!
ಬಂಗಾಳದ ಚಕಡಾ ಎಂಬ ಪುಟ್ಟ ಗ್ರಾಮದಲ್ಲಿ ಕೆಳ ಮಧ್ಯಮ ವರ್ಗದ ಕುಟುಂಬ ಒಂದರಲ್ಲಿ ಜನಿಸಿದ ಆಕೆಗೆ ಬಾಲ್ಯದಲ್ಲಿ ಫುಟ್ಬಾಲ್ ಮಾತ್ರ ಆಸಕ್ತಿ ಇತ್ತು. ಆದರೆ 1992ರ ವಿಶ್ವಕಪ್ ಕ್ರಿಕೆಟ್ ಪಂದ್ಯಗಳನ್ನು ಟಿವಿಯಲ್ಲಿ ವೀಕ್ಷಣೆ ಮಾಡಿದ ನಂತರ ಜೂಲನ್ ಕ್ರಿಕೆಟನಲ್ಲಿ ಆಸಕ್ತಿ ಹೊಂದಿದರು. ಹದಿನೈದನೇ ವರ್ಷದಲ್ಲಿ ಅವರ ಕ್ರಿಕೆಟ್ ತರಬೇತಿ ಆರಂಭ ಆಯಿತು.
ತನ್ನ ಊರಲ್ಲಿ ಕ್ರಿಕೆಟ್ ಕೋಚಿಂಗ್ ಇಲ್ಲದ ಕಾರಣ ಅವರು ದಿನವೂ ಎರಡೂವರೆ ಗಂಟೆ ಉಸಿರುಕಟ್ಟುವ ರೈಲಿನಲ್ಲಿ ಪ್ರಯಾಣ ಮಾಡಿ ಕೋಲ್ಕೊತಾಗೆ ಬರುತ್ತಿದ್ದರು. ಸಂಜೆ ಕತ್ತಲಾದ ನಂತರ ಅದೇ ದಾರಿಯಲ್ಲಿ ಹಿಂದೆ ಬರುವುದು ಮತ್ತು ಸುಸ್ತಾಗಿ ಬೇಗ ಮಲಗುವುದು… ಹೀಗೇ ಸಾಗಿತ್ತು ಅವರ ದಿನಚರಿ. ಅದರಿಂದಾಗಿ ಶಿಕ್ಷಣ ಹಿಂದೆ ಬಿತ್ತು! ಆಕೆಗೆ ಯಾರೂ ಪ್ರಾಯೋಜಕರು ಸಿಗದ ಕಾರಣ ಹೆತ್ತವರು ತುಂಬಾ ಸಾಲ ಕೂಡ ಮಾಡಬೇಕಾಯಿತು.
ಆಕೆಯ ಕಠಿಣ ಪರಿಶ್ರಮ, ಆಕ್ರಮಣಕಾರಿ ಪ್ರವೃತ್ತಿ, ಬಲಿಷ್ಠ ತೋಳುಗಳು, ವೇಗದ ಓಟ ಆಕೆಯನ್ನು ಜಗತ್ತಿನ ಅತ್ಯುತ್ತಮ ವೇಗದ ಬೌಲರ್ ಆಗಿ ರೂಪಿಸಿದವು. ಅದರ ಜೊತೆಗೆ ಆಕೆ ಮಧ್ಯಮ ಹಂತದ ಬ್ಯಾಟರ್ ಕೂಡ ಆಗಿ ಭಾರತದ ನೆರವಿಗೆ ಬಂದರು. 19ನೇ ವರ್ಷಕ್ಕೆ ಭಾರತೀಯ ಮಹಿಳಾ ತಂಡದ ಮೂಲಕ ಜಾಗತಿಕ ಕ್ರಿಕೆಟ್ ರಂಗವನ್ನು ಪ್ರವೇಶಿಸಿದ ಆಕೆ ಮುಂದೆ ಇಪ್ಪತ್ತು ವರ್ಷ ಭಾರತಕ್ಕಾಗಿ ಆಡಿದರು! ಕೆಲವು ವರ್ಷ ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಕೂಡ ಆಗಿ ಮೆರೆದರು.
ಕ್ರಿಕೆಟಿನ ಮೂರೂ ಪ್ರಕಾರಗಳಲ್ಲಿ ಆಕೆಯ ದಾಖಲೆಗಳು ಅತ್ಯುತ್ತಮ ಆಗಿವೆ. ಅದರಲ್ಲಿ ಕೂಡ ಏಕದಿನದ ಪಂದ್ಯಗಳಲ್ಲಿ ಆಕೆಯ ದಾಖಲೆಗಳು ಆಕೆಯ ಶ್ರೇಷ್ಠತೆಗೆ ಸಾಕ್ಷಿ ಹೇಳುತ್ತವೆ!
ಜೂಲನ್ ದಾಖಲೆಗಳ ಮೇಲೆ ಒಮ್ಮೆ ಕಣ್ಣು ಹಾಯಿಸಿ ಬರೋಣ ಬನ್ನಿ.
1) 203 ಏಕದಿನದ ಪಂದ್ಯ ಆಡಿರುವ ಜೂಲನ್ ಪಡೆದಿರುವ ಅಂತಾರಾಷ್ಟ್ರೀಯ ವಿಕೆಟಗಳ ಸಂಖ್ಯೆ 253! ಇದು ಜಗತ್ತಿನಲ್ಲಿಯೇ ಅತೀ ಹೆಚ್ಚು! ಬೇರೆ ಯಾವ ಮಹಿಳಾ ಬೌಲರ್ ಕೂಡ 200ರ ಗಡಿ ದಾಟಿಲ್ಲ!
2) ಆಕೆ ಇಂದು ವೇಗದಲ್ಲಿ ಕೂಡ ವಿಶ್ವದ ನಂಬರ್ ಒನ್ ಸ್ಥಾನದಲ್ಲಿ ಇದ್ದಾರೆ!
3) ಏಕದಿನದ ಪಂದ್ಯಗಳಲ್ಲಿ ಆಕೆ ಲಾಸ್ಟ್ ಓವರ್ ಪರಿಣಿತ ಬೌಲರ್! ತನ್ನ ನಿಯಂತ್ರಣದಿಂದ ಆಕೆ ಭಾರತಕ್ಕೆ ಹತ್ತಾರು ಮ್ಯಾಚ್ ಗೆಲ್ಲಿಸಿ ಕೊಟ್ಟಿದ್ದಾರೆ. ಒಮ್ಮೆ ಲಾಸ್ಟ್ ಓವರ್ ಬೌಲಿಂಗ್ ಮಾಡಿ ಎರಡು ರನ್ ಡಿಫೆಂಡ್ ಮಾಡಿ ಭಾರತವನ್ನು ಗೆಲ್ಲಿಸಿದ ಉದಾಹರಣೆ ಇದೆ! ಹಲವು ಬಾರಿ ಲಾಸ್ಟ್ ಓವರ್ ಮೇಡನ್ ವಿಕೆಟ್ ಕೂಡ ಅವರ ದಾಖಲೆಯ ಭಾಗ!
4) ಅವರಿಗೆ 2007ರಲ್ಲಿ ‘ಐಸಿಸಿ ಬೆಸ್ಟ್ ಮಹಿಳಾ ಕ್ರಿಕೆಟರ್’ ವಿಶ್ವ ಮಟ್ಟದ ಪ್ರಶಸ್ತಿಯು ಬಂದಿತ್ತು!
5) ಜೂಲನ್ ಗೊಸ್ವಾಮಿ ಅವರಿಗೆ 2020ರಲ್ಲಿ ‘ದಶಕದ ಬೆಸ್ಟ್ ಮಹಿಳಾ ಕ್ರಿಕೆಟರ್’ ಪ್ರಶಸ್ತಿಯು ದೊರೆಯಿತು! ಮತ್ತು ಆ ಪ್ರಶಸ್ತಿ ಗೆದ್ದ ಮೊದಲ ಭಾರತೀಯರು ಅವರೇ!
ಆಕೆಯ ಫೈಟಿಂಗ್ ಸ್ಪಿರಿಟ್ ಅದ್ಭುತ ಎನ್ನುವುದಕ್ಕೆ ನೂರಾರು ಸಾಕ್ಷಿಗಳು ನಮಗೆ ದೊರೆಯುತ್ತವೆ.
2017ರ ಮಹಿಳಾ ವಿಶ್ವಕಪ್ ಕೂಟದಲ್ಲಿ ಆಕೆಯೇ ಮುಂದೆ ನಿಂತು ಹೋರಾಟ ಸಂಘಟಿಸಿ ಭಾರತವನ್ನು ಫೈನಲಿನವರೆಗೆ ತೆಗೆದುಕೊಂಡು ಬಂದಿದ್ದರು. ಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡಕ್ಕೆ ಸೋತಾಗ ಇಡೀ ಕ್ರಿಕೆಟ್ ತಂಡ ಕಣ್ಣೀರು ಹಾಕಿತ್ತು. ಜೂಲನ್ ಪಿಚ್ ಮಧ್ಯದಲ್ಲಿ ಕೂತು ಕಣ್ಣೀರು ಸುರಿಸಿದ ದೃಶ್ಯವು ನನಗೆ ಮರೆತುಹೋಗುವುದಿಲ್ಲ!
ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಪ್ರತ್ಯೇಕವಾದ ಬೌಲಿಂಗ್ ಕೋಚ್ ಇಲ್ಲದ ಕಾರಣ ಆಕೆ ಬೌಲರ್ ಕಂ ಬೌಲಿಂಗ್ ಕೋಚ್ ಆಗಿ ಭಾರತದ ಸೇವೆ ಮಾಡಿದರು. ಅತ್ಯಂತ ಕ್ಲಿಷ್ಟಕರ ಪಂದ್ಯಗಳನ್ನು ಭಾರತಕ್ಕಾಗಿ ಗೆಲ್ಲಿಸಿಕೊಟ್ಟರು.
ದಾಖಲೆಗಾಗಿ ಯಾವ ಪಂದ್ಯವನ್ನೂ ಆಡದೆ ಭಾರತದ ಗೆಲುವಿಗಾಗಿ ಆಡಿದರು.
ಒಂದು ಕಾಲದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡವು ಹಿನ್ನಡೆ ಅನುಭವಿಸುತ್ತಾ ಇದ್ದಾಗ ಇದೇ ಜೂಲನ್ ಗೋಸ್ವಾಮಿ, ಹರ್ಮನ್ ಪ್ರೀತ್ ಕೌರ್, ವೇದಾ ಕೃಷ್ಣಮೂರ್ತಿ, ಮಿತಾಲಿ ರಾಜ್, ಸ್ಮೃತಿ
ಮಂಧಾನಾ.. ಮೊದಲಾದ ಮಹಿಳಾರತ್ನಗಳು ಭಾರತದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದು ಉಲ್ಲೇಖನೀಯ. ಅದರಲ್ಲಿಯೂ ಜೂಲನ್ ಮಹಿಳಾ ಕ್ರಿಕೆಟಿನ ‘ಅಮೆಜಾನ್ ನದಿ’ ಎಂದು ನಾವು ಖಂಡಿತ ಕರೆಯಬಹುದು!
ಆಕೆಗೆ ಈಗಾಗಲೇ ಪದ್ಮಶ್ರೀ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಎಲ್ಲವೂ ದೊರೆತಿವೆ. ಈ ವರ್ಷ ‘ಧ್ಯಾನಚಂದ್ ಖೇಲ್ ರತ್ನ’ ಪ್ರಶಸ್ತಿಯು ಕೂಡ ದೊರೆಯಲಿ ಎನ್ನುವುದು ಹಾರೈಕೆ. ಆಕೆಯ ಹೆಸರಿನಲ್ಲಿ ಭಾರತೀಯ ಅಂಚೆ ಇಲಾಖೆಯು ಸ್ಟಾಂಪ್ ಬಿಡುಗಡೆ ಮಾಡಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಆಕೆಯ ಬದುಕಿನ ಹೋರಾಟದ ಕತೆಯನ್ನು ಆಧಾರವಾಗಿಟ್ಟು ‘ಚಕಡಾ ಎಕ್ಸ್‌ಪ್ರೆಸ್’ ಎಂಬ ಹಿಂದಿ ಸಿನೆಮಾವು 2017ರಲ್ಲಿ ಬಿಡುಗಡೆ ಆಗಿದೆ. ಆ ಸಿನೆಮಾ ನೀವು ನೋಡಿದರೆ ಬಂಗಾಳದ ‘ನೆಹರೂ ಪಾರ್ಕಿನಿಂದ’ ಆರಂಭವಾಗಿ ಇಂಗ್ಲೆಂಡಿನ ವೈಭವದ ‘ಲಾರ್ಡ್ಸ್ ಮೈದಾನದವರೆಗೆ’ ತಲುಪಿದ ಅವರ ಯಶೋಗಾಥೆಯು ನಮ್ಮ ಕಣ್ಣ ಮುಂದೆ ಬರುತ್ತದೆ! ಆಕೆಯ ಬಗ್ಗೆ ನಿಜವಾಗಿ ಹೆಮ್ಮೆ ಮೂಡುತ್ತದೆ.
ಆಕೆಯು ಭಾರತದ ಮಹಿಳಾ ಕ್ರಿಕೆಟ್ ವೈಭವದ ಒಂದು ‘ಸುವರ್ಣ ಅಧ್ಯಾಯ’ ಎನ್ನುವುದರಲ್ಲಿ ಎರಡನೇ ಮಾತೇ ಇಲ್ಲ!ಅಲ್ವಿದಾ ಜೂಲನ್ ಗೋಸ್ವಾಮಿ ಮೇಡಂ!
ಇದನ್ನೂ ಓದಿ | ರಾಜ ಮಾರ್ಗ ಅಂಕಣ: ಶೇನ್ ವಾರ್ನ್ ಅಂದರೆ ಹೆದರುತ್ತಿದ್ದ ಸಚಿನ್ ತಿರುಗಿಬಿದ್ದಿದ್ದು ಹೇಗೆ?