Site icon Vistara News

ರಾಜ ಮಾರ್ಗ ಅಂಕಣ: ನಿಖಿಲ್‌ ಕಾಮತ್‌ 34ನೇ ವರ್ಷಕ್ಕೆ ಬಿಲಿಯನೇರ್‌ ಆಗಿದ್ದು ಹೇಗೆ?

Nikhil Kamath

#image_title

ಅವರ ಬಗ್ಗೆ ತಿಳಿದುಕೊಳ್ಳುತ್ತಾ ಹೋದಂತೆ ನನಗೆ ಅಚ್ಚರಿಯ ಮೇಲೆ ಅಚ್ಚರಿಯು ಮೂಡುತ್ತ ಹೋಯಿತು. ಬೆಂಗಳೂರು ಮೂಲದ ‘ಜೆರೋಧಾ’ ಎಂಬ ಶೇರ್ ಬ್ರೋಕರ್ ಕಂಪನಿಯ (Zerodha Share broking company) ಸ್ಥಾಪಕರಲ್ಲಿ ಒಬ್ಬರಾದ ನಿಖಿಲ್ ಕಾಮತ್ (Nikhil Kamath) ಅವರ ಹೋರಾಟದ ಬದುಕು ನನಗೆ ಭಾರಿ ಸ್ಫೂರ್ತಿ ಕೊಟ್ಟಿದೆ. ಕಂಪನಿ ಆರಂಭ ಮಾಡಿದ ಹನ್ನೊಂದೇ ವರ್ಷದಲ್ಲಿ ‘ದೇಶದ ಯಂಗೆಸ್ಟ್ ಬಿಲಿಯನೇರ್’ (Youngest billionaire) ಆಗಿ ಮೂಡಿಬಂದ ಅವರ ಯಶೋಗಾಥೆಯು ಇಂದು ನಿಮ್ಮ ಮುಂದೆ (ರಾಜ ಮಾರ್ಗ ಅಂಕಣ).

ಬಾಲ್ಯದಿಂದಲೂ ಸ್ವಂತ ಬಿಸಿನೆಸ್ ಕನಸು

ಮಧ್ಯಮ ವರ್ಗದ ಕುಟುಂಬದಿಂದ ಬಂದ ಕಾಮತ್ ಸೋದರರಲ್ಲಿ ನಿಖಿಲ್ ಕಾಮತ್ ಕಿರಿಯರು. ಚಿಕ್ಕಂದಿನಿದಲೂ ಸ್ವಂತ ಬಿಸಿನೆಸ್ ಮಾಡುವ ಕನಸು ಅವರಿಗಿತ್ತು. ಹದಿನಾಲ್ಕನೇ ವಯಸ್ಸಿಗೇ ಸೆಕೆಂಡ್ ಹ್ಯಾಂಡ್ ಮೊಬೈಲ್ ವ್ಯಾಪಾರ ಆರಂಭ ಮಾಡಿದರು ಅವರು. ‘ ಮೊಬೈಲ್ ವ್ಯಾಪಾರ ಮಾಡುವುದಾದರೆ ಶಾಲೆಗೆ ಬರುವುದೇ ಬೇಡ’ ಎಂದು ಶಿಕ್ಷಕರು ಬೈದಾಗ ಶಾಲೆಯನ್ನೇ ಬಿಟ್ಟು ಬಿಸಿನೆಸ್ ಕ್ಷೇತ್ರ ಆರಿಸಿಕೊಂಡವರು. ಅವರು ಎಸ್ಸೆಸೆಲ್ಸಿ ಪರೀಕ್ಷೆಯನ್ನೂ ಬರೆಯಲಿಲ್ಲ. ರಿಸ್ಕ್ ತೆಗೆದುಕೊಳ್ಳಲು ಅವರು ಎಂದಿಗೂ ಹಿಂದೇಟು ಹಾಕಿದವರೇ ಅಲ್ಲ.

ಹದಿನೆಂಟು ವರ್ಷಕ್ಕೆ ಕಾಲ್ ಸೆಂಟರ್ ಉದ್ಯೋಗ

ಮುಂದೇನು ಮಾಡುವುದು ಎಂದು ಗೊತ್ತಿರಲಿಲ್ಲ. ಬಿಸಿನೆಸ್ ಮಾಡಲು ಬಂಡವಾಳ ಬೇಕು. ಅನುಭವ ಬೇಕು. ಎರಡೂ ಇಲ್ಲ ಅಂದಾಗ ಅವರು ತನ್ನ ಹದಿನೆಂಟನೇ ವಯಸ್ಸಿಗೇ ಕಾಲ್ ಸೆಂಟರ್ ಉದ್ಯೋಗಕ್ಕೆ ಸೇರಿದರು. ದಿನಕ್ಕೆ ಒಂಬತ್ತು ಘಂಟೆ ಕೆಲಸ. ಎಂಟು ಸಾವಿರ ಸಂಬಳ. ಸ್ವಂತ ಬಿಸಿನೆಸ್ ಮಾಡುವ ಕನಸು ಜೀವಂತವಾಗಿ ಇತ್ತು. ಮನೆಯವರು ದುಡ್ಡು ಕೊಡಲು ಆರಂಭದಲ್ಲಿ ಒಪ್ಪಲೇ ಇಲ್ಲ. ಬ್ಯಾಂಕುಗಳು ನೆರವಿಗೆ ಬರಲಿಲ್ಲ. ನಿಖಿಲ್ ಭಾರೀ ಹಠವಾದಿ. ಅವರ ಅಣ್ಣ ನಿತಿನ್ ಕಾಮತ್ ಇಬ್ಬರೂ ಜಿದ್ದಿಗೆ ಬಿದ್ದು ಹೆತ್ತವರನ್ನು ಕನ್ವಿನ್ಸ್ ಮಾಡಿದರು. ಅಪ್ಪ ಅವರ ಬಿಸಿನೆಸ್‌ಗೆ ಸಪೋರ್ಟ್ ಮಾಡಲು ಒಪ್ಪಿದರು. ಗೆಳೆಯರು ನೆರವಿಗೆ ಬಂದರು. ಬ್ಯಾಂಕುಗಳು ಸಾಲ ಕೊಡಲು ಒಪ್ಪಿದವು.

ಸ್ವಂತ ಬಿಸಿನೆಸ್ ಕನಸು ನನಸಾಯಿತು

ಪರಿಣಾಮವಾಗಿ 2006ರಲ್ಲಿ ಬೆಂಗಳೂರಿನಲ್ಲಿ ‘ಕಾಮತ್ ಆಂಡ್ ಅಸೋಸಿಯೇಟ್’ ಸಂಸ್ಥೆಯು ಅಸ್ತಿತ್ವಕ್ಕೆ ಬಂದಿತು. 2010ರಲ್ಲಿ ಸ್ಟಾಕ್ ಮಾರುಕಟ್ಟೆ ಕಂಪೆನಿಯಾದ ಜೆರೋಧಾ (Zerodha) ಅಸ್ತಿತ್ವಕ್ಕೆ ಬಂದಿತು. ಆಗ ನಿಖಿಲ್ ಕಾಮತ್ ಅವರಿಗೆ ಕೇವಲ 23 ವರ್ಷ.

ಒಂದೊಂದು ಬೆವರ ಹನಿಯು ಫಲ ನೀಡಿತು

ಕಾಮತ್ ಸೋದರರ ದಣಿವು ಅರಿಯದ ಪರಿಶ್ರಮ, ಬಿಸಿನೆಸ್ ಪಟ್ಟುಗಳು, ಮಾರ್ಕೆಟಿಂಗ್
ಸ್ಟ್ರಾಟಜಿಗಳು, ರಿಸ್ಕ್ ತೆಗೆದುಕೊಳ್ಳುವ ಗುಣ, ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇವುಗಳಿಂದ ಜೆರೋಧಾ ಹತ್ತೇ ವರ್ಷಗಳಲ್ಲಿ ಜಾಗತಿಕ ಇನ್ವೆಸ್ಟ್‌ಮೆಂಟ್ ಕಂಪೆನಿ ಆಗಿ ರೂಪುಗೊಂಡಿತು! ಕಿರಿಯ ಸೋದರ ನಿಖಿಲ್ ಕಾಮತ್ ಅವರು ವಾಣಿಜ್ಯ ಯೋಜನಾ ವಿಭಾಗವನ್ನು ಮುನ್ನಡೆಸುತ್ತಿದ್ದು ಕಂಪನಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ನಿಖಿಲ್ ಕಾಮತ್ ಅವರ ಪ್ರಭಾವಶಾಲಿ ಮಾತುಗಳು, ಆಕರ್ಷಕ ವ್ಯಕ್ತಿತ್ವ, ಪರಿಣಾಮಕಾರಿ ನಾಯಕತ್ವ ಅವರನ್ನು ಬಿಸಿನೆಸ್ ಮ್ಯಾಗ್ನೆಟ್ ಆಗಿ ಮಾಡಿತು.

ಮುಂದೆ ಆಸ್ತಿ ನಿರ್ವಹಣಾ ಕಂಪನಿ ಆದ ಟ್ರೂ ಬೇಕಾನ್ (True Beacon) ಸ್ಥಾಪನೆ ಮಾಡಿದರು. ಎರಡೂ ಕಂಪೆನಿಗಳು ಅಲ್ಪ ಅವಧಿಯಲ್ಲಿ ಜಾಗತಿಕ ಮಟ್ಟದ ಕಂಪನಿಗಳಾಗಿ ಬೆಳೆದವು. 2019ರಲ್ಲಿ ಅವರ ಕಂಪನಿ ಜೀರೋಧಾ ಭಾರತದ ಅತೀ ದೊಡ್ಡ ಸ್ಟಾಕ್ ವಿನಿಮಯ ಕಂಪನಿ ಆಗಿ ಕೀರ್ತಿ ಪಡೆಯಿತು. 2021ರಲ್ಲಿ ಅವರು ‘ಭಾರತದ ಅತ್ಯಂತ ಕಿರಿಯ ಬಿಲಿಯನೇರ್’ ಆಗಿ ಘೋಷಣೆ ಆದರು. ಆಗ ಅವರ ವಯಸ್ಸು ಕೇವಲ 34 ವರ್ಷ ಆಗಿತ್ತು!

ಅಮೆರಿಕಾದ ಫೋರ್ಬ್ಸ್ ಪತ್ರಿಕೆಯ ವರದಿಯ ಪ್ರಕಾರ ಅವರ ಒಟ್ಟು ಆಸ್ತಿಯ ಮೌಲ್ಯವು ಈಗ 28,000 ಕೋಟಿ! ಕಳೆದ ಒಂದೇ ವರ್ಷದಲ್ಲಿ ಜೆರೋಧಾ ಕಂಪನಿಯು 82% ಬಿಸಿನೆಸ್ ಗ್ರೋಥ್ ಮಾಡಿದೆ! ಕಂಪನಿಯ ಲಾಭವು 2094 ಕೋಟಿ ತಲುಪಿದೆ! ಜಗತ್ತಿನ ‘ಟಾಪ್ 30 ಅಂಡರ್ 30 ಬಿಲಿಯನೇರ್’ ಪಟ್ಟಿಯಲ್ಲಿ ನಿಖಿಲ್ ಕಾಮತ್ ಅವರ ಹೆಸರು ಈಗ ಪ್ರಕಟವಾಗಿದೆ! ಅವರ ಸ್ಟಾಕ್ ವಿನಿಮಯ ಕಂಪನಿಗೆ ಹತ್ತು ಮಿಲಿಯನ್ ಸಂತೃಪ್ತರಾದ ಗ್ರಾಹಕರು ಇರುವುದೂ ಒಂದು ದಾಖಲೆ!

ನಿಖಿಲ್‌ ಕಾಮತ್

ಬೆಂಗಳೂರಿನ ಕಿಂಗ್ ಫಿಶರ್ ಟವರ್‌ನಲ್ಲಿ ಅವರ ಐಷಾರಾಮಿ ಬಂಗಲೆ ಇದೆ. ಏಳು ಸಾವಿರ ಚದರಡಿ ವಿಸ್ತೀರ್ಣ ಇರುವ ವಿಶಾಲವಾದ ಪ್ಯಾಲೇಸ್ ಅದು. ಶ್ರೀಮಂತ ಕಪ್ಪು ಕಾರುಗಳಾದ ಆಡಿ, ಫೋರ್ಸ್ ಕಾರುಗಳು ಅವರ ಹತ್ತಿರ ಇವೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಕೂಡ ಪೂರ್ತಿ ಮಾಡದ, ಕೇವಲ ಹತ್ತು ವರ್ಷಗಳ ಹಿಂದೆ ಕಾಲ್ ಸೆಂಟರ್ ಉದ್ಯೋಗಿ ಆಗಿದ್ದ ನಿಖಿಲ್ ಕಾಮತ್ ಇವತ್ತು ತಮ್ಮ ಕಂಪನಿಯ ಮೂಲಕ ಜಾಗತಿಕ ಮಟ್ಟಕ್ಕೆ ಬೆಳೆದಿದ್ದಾರೆ.

ಅಷ್ಟೇ ಆಗಿದ್ದರೆ ನಾನಿಂದು ಅವರ ಬಗ್ಗೆ ಖಂಡಿತ ಬರೆಯುತ್ತಿರಲಿಲ್ಲ.

ಚಾರಿಟಿಯಲ್ಲಿ ಕೂಡ ನಿಖಿಲ್ ಕಾಮತ್ ಭಾರೀ ಮುಂದೆ!

ಅವರು ಇತ್ತೀಚೆಗೆ ತಮ್ಮ ಸಂಪತ್ತಿನ 50% ಭಾಗವನ್ನು ಚಾರಿಟಿಯ ಉದ್ದೇಶಕ್ಕೆ ಬಳಕೆ ಮಾಡಲು ನಿರ್ಧಾರ ಮಾಡಿದ್ದಾರೆ. ಬಡವರಿಗೆ ಶಿಕ್ಷಣ ಮತ್ತು ಆರೋಗ್ಯ, ಹವಾಮಾನ ವೈಪರೀತ್ಯ ನಿರ್ವಹಣೆ ಈ ಉದ್ದೇಶಗಳಿಗಾಗಿ ಅವರು ತಮ್ಮ ಸಂಪತ್ತಿನ ವಿನಿಯೋಗ ಮಾಡಲು ಮುಂದೆ ಬಂದಿದ್ದಾರೆ. ಬಹಳ ದೊಡ್ಡ ಚಾರಿಟಿಯ ಮೂಲಕ ಸುದ್ದಿ ಮಾಡುತ್ತಿರುವ ರತನ್ ಟಾಟಾ, ಅಜೀಂ ಪ್ರೇಂಜಿ, ನಂದನ್ ನಿಲೇಕಣಿ, ನಾರಾಯಣ್ ಮೂರ್ತಿ ಅವರ ಹೆಜ್ಜೆಗಳಲ್ಲಿ ಮುನ್ನಡೆಯುತ್ತಿರುವ ನಿಖಿಲ್ ಕಾಮತ್ ಅವರು ಕನ್ನಡಿಗರು ಎಂಬ ಹೆಮ್ಮೆ ನಮಗಿರಲಿ. ಅವರಿಗೆ ಶುಭವಾಗಲಿ. ಒಂದೆರಡು ತಿಂಗಳ ಒಳಗೆ ಅವರನ್ನು ನಾನು ಖಂಡಿತವಾಗಿ ಭೇಟಿ ಮಾಡಿ ಅಭಿನಂದನೆ ಹೇಳಬೇಕು.

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಆದಿ ಪುರುಷ್: ಮೌಲ್ಯಗಳು ಕಡಿಮೆ, ಎಲ್ಲವೂ ಡಿಜಿಟಲ್ ಮಹಿಮೆ!

Exit mobile version