ಒಂದು ಸಣ್ಣ ಪ್ರಶಸ್ತಿ ಗೆದ್ದರೆ ಅದನ್ನೇ ಜಗತ್ತಿನ ಮೇರು ಸಾಧನೆ ಎಂದು ಬಿಂಬಿಸುವ ಮಂದಿ ಇದ್ದಾರೆ. ಆದರೆ ಒಂದು ಕುಟುಂಬವು ಸಾಲು ಸಾಲಾಗಿ ಐದು ನೊಬೆಲ್ ಪ್ರಶಸ್ತಿಗಳನ್ನು ಗೆದ್ದಿದೆ. ಆದರೆ, ಅದು ಯಾವ ಸದ್ದು ಗದ್ದಲ ಮಾಡದೆ ತಣ್ಣಗಿದೆ! ಅದರಲ್ಲೂ ಆ ಕುಟುಂಬದ ಹಿರಿಯಳಾದ ಒಬ್ಬ ಮಹಿಳೆ ಎರಡು ನೊಬೆಲ್ ಗೆದ್ದಿದ್ದಾರೆ. ಅದೂ ಒಂದು ಭೌತಶಾಸ್ತ್ರದಲ್ಲಿ, ಇನ್ನೊಂದು ರಸಾಯನ ಶಾಸ್ತ್ರದಲ್ಲಿ. ಇಂಥ ಸಾಧನೆ ಮಾಡಿದವರು ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ. ಆ ಮಹಾ ಸಾಧಕಿಯೇ ಮೇರಿ ಕ್ಯೂರಿ!
ಆ ಕುಟುಂಬದ ಹಿರಿಯರಾದ ಮೇರಿ ಕ್ಯೂರಿ 1903ರಲ್ಲಿ ಭೌತಶಾಸ್ತ್ರಕ್ಕೆ, 1911ರಲ್ಲಿ ರಸಾಯನ ಶಾಸ್ತ್ರಕ್ಕೆ ಒಟ್ಟು ಎರಡು ನೊಬೆಲ್ ಗೆದ್ದರು. ಮುಂದೆ 1935ರಲ್ಲಿ ಅವರ ಮಗಳು ಐರೀನ್ ಮತ್ತು ಅವರ ಗಂಡ ಫ್ರೆಡ್ರಿಕ್ ಜೂಲಿಯೆಟ್ ರಸಾಯನ ಶಾಸ್ತ್ರದಲ್ಲಿ ನೊಬೆಲ್ ಗೆದ್ದರು. 1965ರಲ್ಲಿ ಮೇರಿ ಕ್ಯೂರಿಯ ಎರಡನೇ ಅಳಿಯ ಹೆನ್ರಿ ಲೇಬೌಸಿ ವಿಶ್ವಶಾಂತಿಯ ವಿಭಾಗದಲ್ಲಿ ನೊಬೆಲ್ ಗೆದ್ದಾಗ ಈ ಅಸಾಮಾನ್ಯ ದಾಖಲೆ ಸೃಷ್ಟಿ ಆಗಿತ್ತು! ಒಟ್ಟು ಐದು ನೊಬೆಲ್ ಪ್ರಶಸ್ತಿ ಒಂದೇ ಕುಟುಂಬಕ್ಕೆ ಎಂದರೆ ಮುಂದೆ ಕೂಡ ಈ ದಾಖಲೆ ಯಾರೂ ಮುರಿಯಲು ಸಾಧ್ಯವೇ ಇಲ್ಲ!
ಜಗತ್ತಿನಲ್ಲಿ ಈವರೆಗೆ ಕೇವಲ ಮೂವರು ಸಾಧಕರು ಮಾತ್ರ ಎರಡೆರಡು ನೊಬೆಲ್ ಗೆದ್ದಿದ್ದಾರೆ. ಅವರೆಂದರೆ ಮೇರಿ ಕ್ಯೂರಿ, ಜಾನ್ ಬಾರ್ಡಿನ್ ಮತ್ತು ಫ್ರೆಡ್ರಿಕ್ ಸ್ಯಾಂಗರ್. ಅದರಲ್ಲಿ ಎರಡೆರಡು ವಿಭಾಗಗಳಲ್ಲಿ ನೊಬೆಲ್ ಗೆದ್ದವರು ಮೇರಿ ಕ್ಯೂರಿ ಮಾತ್ರ!
ವಿದ್ಯಾರ್ಥಿ ದೆಸೆಯಲ್ಲಿಯೇ ಏನನ್ನಾದರೂ ಕಂಡು ಹಿಡಿಯಬೇಕು ಎಂದು ಆಸೆ ಪಟ್ಟು ವಿಜ್ಞಾನ ಕಲಿತವರು ಕ್ಯೂರಿ! ಆಕೆಯು ತಂದೆ ಪೋಲೆಂಡ್‌ನಲ್ಲಿ ಪ್ರೊಫೆಸರ್ ಆಗಿದ್ದರು. ಆದರೆ ಆ ದೇಶದಲ್ಲಿ ಹೆಣ್ಣು ಮಕ್ಕಳು ಆ ಕಾಲದಲ್ಲಿ ಕಾಲೇಜಿಗೆ ಹೋಗಲು ಅನುಮತಿ ಇರಲಿಲ್ಲ. ಆ ಕಾರಣ ಅವರು ದೇಶವನ್ನು ಬದಲಾಯಿಸಿ ಫ್ರಾನ್ಸಿಗೆ ಬಂದರು. ಅಲ್ಲಿ ಅವರಿಗೆ ನೂರಾರು ಅಪಮಾನಗಳು ಮತ್ತು ನಿರಾಸೆಗಳು ಎದುರಾದವು. ತನ್ನ ಸಂಕಲ್ಪ ಶಕ್ತಿಯ ಮೂಲಕ ಎಲ್ಲವನ್ನೂ ಗೆದ್ದವರು ಕ್ಯೂರಿ.
ಜೀವನಪೂರ್ತಿ ವಿದ್ಯಾರ್ಥಿ ಆಗಿ, ಸಂಶೋಧಕಿ ಆಗಿ, ಒಂದು ಸಂಸ್ಥೆಯ ನಿರ್ದೇಶಕಿ ಆಗಿ ಅವರು ಮಾಡಿದ್ದು ಸಂಶೋಧನೆ, ಸಂಶೋಧನೆ ಮತ್ತು ಸಂಶೋಧನೆ ಮಾತ್ರ! ಆಕೆ ವಿಶ್ರಾಂತಿ ಪಡೆದದ್ದು ಮರಣದ ನಂತರವೇ ಅನ್ನಬಹುದು!
ವಿಕಿರಣ ವಿಜ್ಞಾನ ಇವತ್ತು ಭಾರಿ ಮುಂದುವರಿದ ಕ್ಷೇತ್ರ. ಕೆಲವು ಭಾರವಾದ ಮೂಲ ವಸ್ತುಗಳು ವಿಕಿರಣಗಳನ್ನು ಹೊರಸೂಸುತ್ತವೆ ಎಂದು ಜಗತ್ತಿಗೆ ಮೊದಲು ತೋರಿದವರು ಅವರು. ಅದಕ್ಕೆ ಅವರೇ ವಿಕಿರಣಶೀಲತೆ (ರೇಡಿಯೋಆಕ್ಟಿವಿಟಿ) ಎಂದು ನಾಮಕರಣ ಮಾಡಿದರು. ಆಗ ಅವರಿಗೆ ಸಾಥ್ ಕೊಟ್ಟ ಇನ್ನೊಬ್ಬ ವಿಜ್ಞಾನಿ ಹೆನ್ರಿ ಬ್ಯಾಕ್ವಿರಲ್. ಮುಂದೆ ಅವರು ಕೂಡ ಮೇರಿ ಕ್ಯೂರಿ ಜೊತೆ ನೊಬೆಲ್ ಪ್ರಶಸ್ತಿ ಗೆದ್ದರು.
ಪಿಚ್ ಬ್ಲೆಂಡ್ ಎಂಬ ಅದಿರಿನಲ್ಲಿ ಸುಮಾರು 35 ಮೂಲ ವಸ್ತುಗಳಿವೆ. ಅವುಗಳಲ್ಲಿ ವಿಕಿರಣ ಶೀಲ ರೇಡಿಯಂ ಕೂಡ ಒಂದು. ಆದರೆ ಅದರ ಪ್ರಮಾಣ ತುಂಬಾ ತುಂಬಾ ಚಿಕ್ಕದು. ಎಂಟು ಟನ್ ಪಿಚ್ ಬ್ಲೆಂಡ್ ಅದಿರನ್ನು ಕರಗಿಸಿದಾಗ ಅದರಲ್ಲಿ ಕೇವಲ ಒಂದು ಗ್ರಾಮ್ ರೇಡಿಯಂ ದೊರೆಯುತ್ತದೆ. ಪಿಚ್ ಬ್ಲೆಂಡ್‌ನಿಂದ ರೇಡಿಯಂ ಪ್ರತ್ಯೇಕ ಮಾಡುವುದು ಸುಲಭದ ಮಾತಲ್ಲ.
ಅದು ಒಂದು ಮಹಾಯುದ್ಧವನ್ನು ಗೆದ್ದದ್ದಕ್ಕೆ ಸಮ! ಹಾಗೆಯೇ ಅತ್ಯಂತ ಅಪಾಯಕಾರಿ ಕೂಡ ಹೌದು. ವಿಕಿರಣಗಳಿಗೆ ನಮ್ಮ ದೇಹವು ಎಕ್ಸ್‌ಪೋಸ್ ಆದರೆ ಅದು ಮಾರಣಾಂತಿಕ! ಆದರೆ ಜಗತ್ತಿನ ಕ್ಷೇಮಕ್ಕೆ ಹೊರಟವರಿಗೆ ಆ ಅಪಾಯಗಳು ಯಾವ ಲೆಕ್ಕ ಹೇಳಿ?
ಹಾಗೆ ವರ್ಷಾನುಗಟ್ಟಲೆ ಹೋರಾಟ ಮಾಡಿ ರೇಡಿಯಂ ಸಂಶೋಧನೆ ಮಾಡಿದ್ದು ಮೇರಿ ಕ್ಯೂರಿ! ಮುಂದೆ ಅವರು ಪೊಲೊನಿಯಮ್ ಎಂಬ ಇನ್ನೊಂದು ವಿಕಿರಣಶೀಲ ಧಾತು ಕೂಡ ಕಂಡುಹಿಡಿದರು. ಅದನ್ನು ತನ್ನ ದೇಶವಾದ ಪೋಲೆಂಡ್‌ಗೆ ಸಮರ್ಪಣೆ ಮಾಡಿದರು.
ಸಂಶೋಧನೆ ಅಪಾರವಾದರೂ ಪ್ರಚಾರದ ಹಂಗಿಲ್ಲ. ಅವರ ಸಂದರ್ಶನವನ್ನು ಬಯಸಿ ಬಂದ ವರದಿಗಾರನಿಗೆ ಅವರು ಸಂದರ್ಶನ ನಿರಾಕರಿಸಿದರು. ಅದಕ್ಕೆ ಅವರು ಕೊಟ್ಟ ಕಾರಣ – ವಿಜ್ಞಾನದಲ್ಲಿ ವ್ಯಕ್ತಿ ಮುಖ್ಯ ಅಲ್ಲ. ಸಂಗತಿ ಮಾತ್ರ ಮುಖ್ಯ!
ಅವರು ರೇಡಿಯಂ ಸಂಶೋಧನೆ ಮಾಡಿದಾಗ ಅದನ್ನು ಪೇಟೆಂಟ್ ಮಾಡಲು ತುಂಬಾ ಜನರು ಒತ್ತಾಯ ಮಾಡಿದರು. ಆದರೆ ಮೇರಿ ಕ್ಯೂರಿ ಹೇಳಿದ್ದು ಒಂದೇ ಮಾತು – ವಿಜ್ಞಾನ ಎಲ್ಲರಿಗೂ ಸೇರಿದ್ದು! ಅದಕ್ಕೆ ಪೇಟೆಂಟ್ ಪಡೆಯಲಾರೆ.
ಹೀಗೆ ಮಾಡುವುದರಿಂದ ತುಂಬಾ ಶ್ರೀಮಂತೆ ಆಗುವ ಅವಕಾಶವನ್ನು ಅವರೇ ನಿರಾಕರಿಸಿದರು. ತನ್ನ ಸಂಶೋಧನೆಯ ಮೂಲಕ ಬಂದ ರಾಶಿ ರಾಶಿ ದುಡ್ಡನ್ನು ಅವರು ಸ್ವಂತಕ್ಕೆ ಉಪಯೋಗ ಮಾಡದೆ ತನ್ನ ಸಂಶೋಧನೆಗೆ ಬಳಸಿದರು. ಯುದ್ಧ ಕಾಲದಲ್ಲಿ ಗಾಯಗೊಂಡ ಸೈನಿಕರಿಗೆ ಚಿಕಿತ್ಸೆ ನೀಡಲು ಅವರೇ ಮುಂದೆ ನಿಂತು ತನ್ನ ಸಂಶೋಧನೆಯನ್ನು ಬಳಸಿದರು. ಮೊದಲ ಮಹಾಯುದ್ಧದ ಸಂಕಷ್ಟದ ಸಂದರ್ಭದಲ್ಲಿ ಮೇರಿ ಕ್ಯೂರಿ ತಾನು ಸಂಶೋಧನೆ ಮಾಡಿದ ಎಕ್ಸ್ ರೇ ಉಪಕರಣ ಹೊಂದಿದ್ದ ಆಂಬ್ಯುಲೆನ್ಸ್ ಘಟಕಗಳ ಮೂಲಕ ಸಾವಿರಾರು ಸೈನಿಕರ ಪ್ರಾಣಗಳನ್ನು ಉಳಿಸಿದರು.
ಮೇರಿ ಕ್ಯೂರಿ ಬಗ್ಗೆ ಬರೆಯುವಾಗ ಆಕೆಯ ಪ್ರೇರಣಾ ಶಕ್ತಿಯಾದ ಅವರ ಗಂಡ ಪಿಯರಿ ಕ್ಯೂರಿ ಬಗ್ಗೆ ಎರಡು ವಾಕ್ಯ ಬರೆಯಲೇ ಬೇಕು. ಅವರೂ ಸಂಶೋಧಕರು ಮತ್ತು ಪ್ರೊಫೆಸರ್ ಆಗಿದ್ದವರು. ಮೇರಿ ಕ್ಯೂರಿಯ ಎಲ್ಲ ಸಂಶೋಧನೆಯ ಕೆಲಸಗಳಿಗೆ ಅತೀ ದೊಡ್ಡ ಬೆಂಬಲಿಗ ಅಂದರೆ ಅವರೇ! ಆದರೆ ಕೇವಲ 47ನೆಯ ವಯಸ್ಸಿಗೆ ಪಿಯರಿ ರಸ್ತೆ ಅಪಘಾತದಲ್ಲಿ ಸಾವನ್ನು ಅಪ್ಪಿದಾಗ ಮೇರಿ ಕ್ಯೂರಿ ಒಬ್ಬಂಟಿ ಆಗಿಬಿಟ್ಟರು. ಅವರ ಮುಂದಿನ ಬದುಕು ಪೂರ್ತಿ ಅವರು ಅಂತರ್ಮುಖಿ ಆಗಿಯೇ ಕಳೆದರು.
ಅವರೇ ಸಂಶೋಧನೆ ಮಾಡಿದ ರೇಡಿಯಂ ಮತ್ತು ಪೊಲೊನಿಯಮ್ ವಿಕಿರಣಕ್ಕೆ ಒಡ್ಡಿ ಕೊಂಡ ಅವರ ದೇಹವು ಮುಂದೆ ಮಾರಣಾಂತಿಕ ಕಾಯಿಲೆಗಳಿಗೆ ಮನೆಯಾಯಿತು. ಅವರ ಅಂತ್ಯವು ಅತ್ಯಂತ ದಾರುಣ ಆಗಿತ್ತು. ಆಗಲೇ ಅವರು ಸೆಲೆಬ್ರಿಟಿ ಆಗಿದ್ದ ಕಾರಣ ಅವರು ತನ್ನ ಹೆಸರನ್ನು ಬದಲಾವಣೆ ಮಾಡಿಕೊಂಡು ಆಸ್ಪತೆಗಳಿಗೆ ಅಡ್ಮಿಟ್ ಆಗುತ್ತಿದ್ದರು. ಆಸ್ಪತ್ರೆಗಳಲ್ಲಿ ವರ್ಷಾನುಗಟ್ಟಲೆ ನರಳಿದರು. ಅತಿಯಾದ ನೋವು ಅವರನ್ನು ಹಿಂಡಿ ಹಿಪ್ಪೆ ಮಾಡಿತ್ತು.
1934ರ ಜುಲೈ 4ರಂದು ಮೇರಿ ಕ್ಯೂರಿ ತನ್ನ ಇಹಲೋಕದ ವ್ಯಾಪಾರ ಮುಗಿಸಿದರು. ಅವರು ಬದುಕಿದ್ದದ್ದು ಕೇವಲ 66 ವರ್ಷ. ಆದರೆ ಸಾಧನೆ ಮಾಡಿದ್ದು ಸಾವಿರ ವರ್ಷಗಳದ್ದು!
ತನ್ನ ಇಡೀ ಜೀವನವನ್ನು ಮಾನವೀಯತೆಗೆ ಮತ್ತು ವಿಜ್ಞಾನಕ್ಕೆ ಮುಡಿಪಾಗಿಟ್ಟ ಮಹಾ ವಿಜ್ಞಾನಿ ಒಬ್ಬರು ಅವರೇ ಸಂಶೋಧನೆ ಮಾಡಿದ ವಿಕಿರಣಗಳಿಗೆ ಒಡ್ಡಿಕೊಂಡು ಪ್ರಾಣ ಕಳೆದುಕೊಂಡದ್ದು ನಮಗೆ ಕಣ್ಣೀರು ತರಿಸುವ ದುರಂತ!
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಅಪ್ಪ ಮಗನಾದ, ಮಗ ಅಪ್ಪನಾದ ಅಪರೂಪದ ಸಿನಿಮಾ ʻಪಾʼ: ಬಿಗ್ ಬಿ ಬದ್ಧತೆಯ ಸಾಕ್ಷ್ಯ ಚಿತ್ರ!