Site icon Vistara News

ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

Rishabh Pant

ಹೋರಾಟಗಾರ ಕ್ರಿಕೆಟರ್ ಕ್ರಿಟಿಕಲ್ ಇಂಜುರಿ ಗೆದ್ದು ಬಂದ ಕಥೆ

ರಾಜಮಾರ್ಗ ಅಂಕಣ: 2022 ಡಿಸೆಂಬರ್ 30ರ ಮಧ್ಯರಾತ್ರಿ ರೂರ್ಕಿ ಎಂಬಲ್ಲಿ ಆ ಕ್ರಿಕೆಟರ್ ಕಾರು ಅಪಘಾತಕ್ಕೆ ಒಳಗಾಗಿತ್ತು. ಆ ಅಪಘಾತದ ತೀವ್ರತೆಯನ್ನು ನೋಡಿದವರು ಆತ ಬದುಕಿದ್ದೇ ಗ್ರೇಟ್ ಅಂದಿದ್ದರು. ಬಲಗಾಲಿನ ಮಂಡಿ ಚಿಪ್ಪು ಸಮೇತ 90 ಡಿಗ್ರೀಯಷ್ಟು ತಿರುಗಿ ನಿಂತಿತ್ತು! ಮೈಯೆಲ್ಲಾ ಗಾಯಗಳು ಮತ್ತು ಎಲುಬು ಮುರಿತಗಳು! ಡೆಹ್ರಾಡೂನ್ ಆಸ್ಪತ್ರೆಯ ವೈದ್ಯರು ಆತನ ದೇಹದಲ್ಲಾದ ಗಾಯ ಮತ್ತು ಮೂಳೆ ಮುರಿತಗಳನ್ನು ನೋಡಿದಾಗ ‘ನೀನಿನ್ನು ಕ್ರಿಕೆಟ್ ಆಡೋದು ಕಷ್ಟ’ ಅಂದಿದ್ದರು. ಒಬ್ಬರಂತೂ ‘ನೀನು ನಿನ್ನ ಕಾಲುಗಳ ಮೇಲೆ ನಿಂತರೆ ಅದೇ ದೊಡ್ಡ ಸಾಧನೆ’ ಅಂದಿದ್ದರು!

ಅಮ್ಮಾ ನನಗೆ ಸಹಾಯ ಮಾಡು, ನಾನು ವಿಶ್ವಕಪ್ ಆಡಬೇಕು!

ಆ ಕ್ರಿಕೆಟಿಗ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಚೀರಿ ಚೀರಿ ಹಾಗೆ ಹೇಳುತ್ತಿದ್ದರೆ ನರ್ಸ್ ಮತ್ತು ವೈದ್ಯರು ಕಣ್ಣೀರು ಸುರಿಸುತ್ತಿದ್ದರು! ಕ್ರಿಕೆಟ್ ವಿಶ್ವಕಪ್ ಆರಂಭವಾಗಲು ಕೇವಲ ಒಂದೂವರೆ ವರ್ಷ ಬಾಕಿ ಇತ್ತು. ವೈದ್ಯರು ‘ಅನಿವಾರ್ಯ ಆದರೆ ಆತನ ಒಂದು ಕಾಲು ತುಂಡು ಮಾಡಬೇಕಾಗಬಹುದು!’ ಎಂದು ಅವನ ಅಮ್ಮನ ಕಿವಿಯಲ್ಲಿ ಪಿಸುಗುಟ್ಟಿದ್ದು, ಆತನ ಅಮ್ಮ ಬಾತ್ ರೂಮ್ ಒಳಗೆ ಹೋಗಿ ಕಣ್ಣೀರು ಸುರಿಸಿದ್ದು ಎಲ್ಲವೂ ನಡೆದು ಹೋಗಿತ್ತು!

ಆತ ರಿಶಭ್ ಪಂತ್ – ಆಕ್ರಮಣಕ್ಕೆ ಇನ್ನೊಂದು ಹೆಸರು!

ಅಪಘಾತ ಆಗುವ ಮೊದಲು ಆತ ಭಾರತೀಯ ಕ್ರಿಕೆಟ್ ತಂಡದ ಮೂರೂ ಫಾರ್ಮಾಟಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದ! ಆಕ್ರಮಣಕ್ಕೆ ಹೆಸರಾಗಿದ್ದ. ಸಲೀಸಾಗಿ ಒಂದೇ ಅವಧಿಯಲ್ಲಿ ಡಬಲ್ ಸೆಂಚುರಿ ಹೊಡೆಯುತ್ತಿದ್ದ. ವಿಕೆಟ್ ಹಿಂದೆ ಪಾದರಸದ ಚುರುಕು ಇತ್ತು. ಆತನ ಆಟವನ್ನು ನೋಡಿದವರು ʻಈತ ಧೋನಿಯ ಉತ್ತರಾಧಿಕಾರಿ ಆಗುವುದು ಖಂಡಿತ’ ಅನ್ನುತ್ತಿದ್ದರು!

Rishabh Panth

ಅಂತಹ ರಿಶಭ್ ಪಂತ್ ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಅರ್ಧ ಹೆಣವಾಗಿ ಮಲಗಿದ್ದ! ಯಾರಿಗೂ ಆತ ಮರಳಿ ಕ್ರಿಕೆಟ್ ಆಡುವ ಭರವಸೆ ಇರಲಿಲ್ಲ.

ಆತನ ನೆರವಿಗೆ ನಿಂತವರು ಕೇವಲ ನಾಲ್ಕೇ ಜನ

ಮರಳಿ ಕ್ರಿಕೆಟ್ ಮೈದಾನಕ್ಕೆ ಇಳಿಯಬೇಕು ಎಂದು ನಿದ್ದೆಯಲ್ಲಿಯೂ ಕನವರಿಸುತ್ತಿದ್ದ ಆತನ ನೆರವಿಗೆ ನಿಂತವರು ಕೇವಲ ನಾಲ್ಕೇ ಜನ. ಅವರೆಲ್ಲರೂ ಆತನ ಕ್ರಿಕೆಟ್ ದೈತ್ಯ ಪ್ರತಿಭೆಯನ್ನು ಕಂಡವರು. ಒಬ್ಬರು ಆತನಿಗೆ ಶಸ್ತ್ರಚಿಕಿತ್ಸೆ ಮಾಡಿದ ಮುಂಬಯಿಯ ಅಂಬಾನಿ ಆಸ್ಪತ್ರೆಯ ಖ್ಯಾತ ಸರ್ಜನ್ ದಿನ್ ಶಾ ಪಾದ್ರಿವಾಲ. ಇನ್ನೊಬ್ಬರು ಉತ್ತರಾಖಂಡದ ಶಾಸಕ ಉಮೇಶ್ ಕುಮಾರ್. ಇನ್ನೊಬ್ಬರು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಕೋಚ್ ಆದ ಧನಂಜಯ್ ಕೌಶಿಕ್. ನಾಲ್ಕನೆಯರು ರಿಷಭನ ತಾಯಿ! ಆಕೆ ನಿಜಕ್ಕೂ ಗಾಡ್ಸ್ ಗ್ರೇಸ್ ಅನ್ನಬಹುದು. ಅವರೆಲ್ಲರಿಗೂ ಆತ ಭಾರತಕ್ಕೆ ಎಷ್ಟು ಅಮೂಲ್ಯ ಆಟಗಾರ ಎಂದು ಗೊತ್ತಿತ್ತು! ಆಸ್ಪತ್ರೆಯ ಹಾಸಿಗೆಗೆ ಒರಗಿ ಆತ ಪಟ್ಟ ಮಾನಸಿಕ ಮತ್ತು ದೈಹಿಕ ನೋವು, ಹೊರಹಾಕಿದ ನಿಟ್ಟುಸಿರು ಎಲ್ಲವೂ ಆ ನಾಲ್ಕು ಮಂದಿಗೆ ಗೊತ್ತಿತ್ತು.

ಆ ಹದಿನೈದು ತಿಂಗಳು…!

Rishabh Panth

ಆ ಅವಧಿಯಲ್ಲಿ ಏಷಿಯಾ ಕಪ್, ವಿಶ್ವ ಟೆಸ್ಟ್ ಚಾಂಪಿಯನಶಿಪ್, ವಿಶ್ವ ಕಪ್ ಎಲ್ಲವೂ ನಡೆದುಹೋಯಿತು! ಭಾರತ ಹಲವು ವಿಕೆಟ್ ಕೀಪರಗಳ ಪ್ರಯೋಗ ಮಾಡಿತು. ಭಾರತ ಒಂದೂ ಕಪ್ ಗೆಲ್ಲಲಿಲ್ಲ. ಭಾರತಕ್ಕೆ ಶಾಶ್ವತವಾದ ವಿಕೆಟ್ ಕೀಪರ್ ಸಿಗಲಿಲ್ಲ! ರಿಷಭ್ ಈ ಎಲ್ಲ ಪಂದ್ಯಗಳನ್ನು ನೋಡುತ್ತಿದ್ದ. ವಿಕೆಟ್ ಹಿಂದೆ ಅವನಿಗೆ ಅವನೇ ಕಾಣುತ್ತಿದ್ದ!

ಹಾಸಿಗೆಯಿಂದ ಎದ್ದು ಕ್ರಚಸ್ ಹಿಡಿದು ನಡೆದದ್ದು, ನಂತರ ಕ್ರಚಸ್ ಬದಿಗೆ ಇಟ್ಟು ಗೋಡೆ ಹಿಡಿದು ನಡೆದದ್ದು, ನಂತರ ಎಲ್ಲವನ್ನೂ ಬಿಟ್ಟು ನಿಧಾನವಾಗಿ ತನ್ನ ಕಾಲ ಮೇಲೆ ಗಟ್ಟಿಯಾಗಿ ನಿಂತದ್ದು, ಜಾಗಿಂಗ್ ಮಾಡಿದ್ದು, ಓಡಿದ್ದು, ಕಾಲುಗಳಿಗೆ ಫಿಸಿಯೋ ಥೆರಪಿ ಆದದ್ದು, ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಕೌನ್ಸೆಲಿಂಗ್ ನೆರವು ಪಡೆದದ್ದು….ಇವೆಲ್ಲವೂ ಕನಸಿನಂತೆ ಗೋಚರ ಆಗುತ್ತಿದೆ. ಮುಂದೆ ನಿರಂತರ ಕ್ರಿಕೆಟ್ ಕೋಚಿಂಗ್, ಮೈದಾನದಲ್ಲಿ ಬೆವರು ಹರಿಸಿದ್ದು, ಅಪಘಾತವಾದ ಕಾಲು ಬಗ್ಗಿಸಲು ತುಂಬ ಕಷ್ಟಪಟ್ಟದ್ದು ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಂತೆ ಅನ್ನಿಸುತ್ತಿದೆ.

2024 ಮಾರ್ಚ್ 12….

ಒಬ್ಬ ಕ್ರಿಕೆಟರ್ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ ಮೈದಾನಕ್ಕೆ ಇಳಿಯಲು ಬಿಸಿಸಿಐ ಫಿಟ್ನೆಸ್ ಸರ್ಟಿಫಿಕೇಟ್ ಕೊಡಬೇಕು. ಅದು ಸುಲಭದ ಕೆಲಸ ಅಲ್ಲ. ಅಲ್ಲಿ ಕೂಡ ರಿಶಭ್ ಇಚ್ಛಾಶಕ್ತಿ ಗೆದ್ದಿತ್ತು. ಮಾರ್ಚ್ 12ರಂದು ಆತನು ಕ್ರಿಕೆಟ್ ಆಡಲು ಸಂಪೂರ್ಣ ಫಿಟ್ ಎಂದು ಬಿಸಿಸಿಐ ಘೋಷಣೆ ಮಾಡಿದಾಗ ಆತ ಮೈದಾನದ ಮಧ್ಯೆ ಕೂತು ಜೋರಾಗಿ ಕಣ್ಣೀರು ಹಾಕಿದ್ದನು! ಎರಡೇ ದಿನದಲ್ಲಿ ಡೆಲ್ಲಿ ಐಪಿಎಲ್ ತಂಡವು ಆತನನ್ನು ತೆರೆದ ತೋಳುಗಳಿಂದ ಸ್ವಾಗತ ಮಾಡಿ ನಾಯಕತ್ವವನ್ನು ಕೂಡ ಆತನಿಗೆ ನೀಡಿತ್ತು! ಈ ಐಪಿಎಲ್ ಸೀಸನ್‌ನಲ್ಲಿ ವಿಕೆಟ್ ಮುಂದೆ ಮತ್ತು ಹಿಂದೆ ಆತ ಆಕ್ರಮಣಕಾರಿ ಆಗಿ ಆಡುತ್ತಿರುವುದನ್ನು ನೀವು ನೋಡಿಯೇ ನೋಡಿರುತ್ತೀರಿ!

ಮುಂದಿನ T20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಒಬ್ಬ ಅದ್ಭುತ ಬ್ಯಾಟರ್ ಮತ್ತು ವಿಕೆಟ್ ಕೀಪರ್ ದೊರಕಿದ್ದನ್ನು ನಾವು ಸಂಭ್ರಮಿಸಲು ಯಾವ ಅಡ್ಡಿ ಕೂಡ ಇಲ್ಲ ಎನ್ನಬಹುದು. ಆತನಿಗೆ ಶುಭವಾಗಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

Exit mobile version