Site icon Vistara News

ರಾಜಮಾರ್ಗ ಅಂಕಣ: ಸಾವನ್ನೇ ಆಹ್ವಾನಿಸಿದ ಸುಂದರಿ ಝೋರಯಾ ಟರ್ ಬ್ರೀಕ್

ರಾಜಮಾರ್ಗ ಅಂಕಣ euthanasia zoraya ter beek

ನೆದರ್‌ಲ್ಯಾಂಡ್ ದೇಶದಲ್ಲೊಂದು ಹೃದಯ ವಿದ್ರಾವಕ ಘಟನೆ

ರಾಜಮಾರ್ಗ ಅಂಕಣ: ಆಕೆ ಲೋಕೋತ್ತರ ಸುಂದರಿ. ವಯಸ್ಸು ಇನ್ನೂ 28. ಆಕೆ ಉತ್ಸಾಹದ ಖಣಿ. ಮೇಲ್ನೋಟಕ್ಕೆ 100% ಫಿಟ್ ಮತ್ತು ಆರೋಗ್ಯಪೂರ್ಣ ಆಗಿದ್ದಾರೆ. ಆದರೆ ಆಕೆ ತನ್ನ ದೇಶದ ಕಾನೂನಿನ ನೆರವು ಪಡೆದುಕೊಡು ತನ್ನ ಜೀವನಕ್ಕೊಂದು ಪೂರ್ಣವಿರಾಮ ಇಡಲು ನಿರ್ಧಾರ ಮಾಡಿದ್ದಾರೆ. ಅದಕ್ಕೆ ಅವರು ಆರಿಸಿಕೊಂಡ ವಿಧಾನ ಅಂದರೆ ದಯಾಮರಣ (euthanasia)! ಅಂದರೆ ತನ್ನ ಇಷ್ಟದ ಪ್ರಕಾರ, ಇಷ್ಟದ ಜಾಗದಲ್ಲಿ, ಇಷ್ಟದ ಜನರ ಮುಂದೆ, ಇಷ್ಟದ ರೀತಿಯಲ್ಲಿ ಸಾಯುವುದು..!

ದಯಾಮರಣ – ನೆದರ್‌ಲ್ಯಾಂಡ್‌ನಲ್ಲಿ ಕಾನೂನು ಸಮ್ಮತ

ನೆದರ್‌ಲ್ಯಾಂಡ್ (Netherlands) ದೇಶವು ದಯಾಮರಣಕ್ಕೆ ಕಾನಾನು ಸಮ್ಮತಿ ನೀಡಿ 22 ವರ್ಷಗಳೇ ಸಂದಿವೆ! ಅಸಹನೀಯ ನೋವು, ಗುಣಪಡಿಸಲು ಆಗದ ಕಾಯಿಲೆ, ಮಾನಸಿಕ ಅಸ್ವಾಸ್ಥ್ಯ ಸೇರಿದಂತೆ ಆರು ಕಾರಣಕ್ಕೆ ಸರಕಾರ ದಯಾಮರಣಕ್ಕೆ ಅನುಮತಿಯನ್ನು ನೀಡುತ್ತದೆ. 2022ರಲ್ಲಿ ಆ ದೇಶದಲ್ಲಿ ಕಾನೂನಿನ ನೆರವು ಪಡೆದು 8730 ಮಂದಿ ದಯಾಮರಣದ ಮೂಲಕ ತಮ್ಮ ಬದುಕನ್ನು ಕೊನೆಗೊಳಿಸಿದ್ದಾರೆ! ಇದು ಕಳೆದ ವರ್ಷಕ್ಕಿಂತ 14% ಅಧಿಕ ಎಂದು ಅಲ್ಲಿನ ಸರಕಾರ ಹೇಳಿದೆ.

ಝೋರಯಾಗೆ ಮಾನಸಿಕ ಕಾಯಿಲೆ

ಈ ಚಂದದ ಹುಡುಗಿ ಝೊರೆಯಾ (Zoraya Ter Beek) ಬಳಲುತ್ತಿರುವುದು ಖಿನ್ನತೆ, ಉದ್ವೇಗ ಆಕೆಯ ಬಾಲ್ಯದ ಒಡನಾಡಿಗಳು. ಇತ್ತೀಚೆಗೆ ಆಟಿಸಂ ಕೂಡ ಸೇರಿಕೊಂಡು ಆಕೆಗೆ ಬದುಕೇ ಅಸಹನೀಯವಾಗುತ್ತು. ಯಾವುದೆಲ್ಲ ಔಷಧಿ, ಚಿಕಿತ್ಸಾ ವಿಜ್ಞಾನ ಮತ್ತು ಕೌನ್ಸೆಲಿಂಗ್ ನಡೆದರೂ ಅವಳಿಗೆ ಅದ್ಯಾವುದೂ ರಿಲೀಫ್ ಕೊಡಲಿಲ್ಲ. ವೈದ್ಯರೂ ʼಇನ್ನು ಸಾಧ್ಯವಿಲ್ಲ’ ಎಂದು ಹೇಳಿದ ನಂತರ ಆಕೆ ಆರಿಸಿಕೊಂಡದ್ದು ಸಾವನ್ನು! ಆತ್ಮಹತ್ಯೆ ಮಾಡಿ ಸಾಯಲು ಮನಸಿಲ್ಲ ಎಂದಾಕೆ ಗಟ್ಟಿಯಾದ ನಿರ್ಧಾರ ತೆಗೆದುಕೊಂಡ ನಂತರ ಆಕೆಗೆ ಉಳಿದದ್ದು ಒಂದೇ ಪರಿಹಾರ – ಅದು ದಯಾಮರಣ! ಆಕೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದು 2020ರಲ್ಲಿ. ಅದೀಗ ಪರ ವಿರೋಧ ಚರ್ಚೆಯಾಗಿ ಈಗ ತೀರ್ಪು ಆಕೆಯ ಪರವಾಗಿ ಬಂದಿದೆ. ಅಂದರೆ ದಯಾಮರಣಕ್ಕೆ ಅನುಮತಿ ದೊರೆತಿದೆ.

ದಯಾಮರಣ ಹೇಗೆ?

ಅರ್ಜಿದಾರರು ಇಷ್ಟಪಡುವ ಸ್ಥಳದಲ್ಲಿ, ಇಷ್ಟಪಡುವ ಸನ್ನಿವೇಶವನ್ನು ಕ್ರಿಯೇಟ್ ಮಾಡಿ ನಿಗದಿ ಪಡಿಸಿದ ದಿನದಂದು ವೈದ್ಯರು ಆಕೆಗೆ ಒಂದು ಅರಿವಳಿಕೆಯ ಇಂಜೆಕ್ಷನ್ ನೀಡುತ್ತಾರೆ. ಆಕೆ ಕೋಮಾ ತಲುಪುವುದನ್ನು ಕಾಯುವ ವೈದ್ಯರು ನಂತರ ಹೃದಯವು ನಿಧಾನವಾಗಿ ನಿಲ್ಲುವ ಔಷಧಿ ಕೊಡುತ್ತಾರೆ. ಒಂದಿಷ್ಟೂ ನೋವು ಪಡದೆ ಅರ್ಜಿದಾರರು ನಿಧಾನವಾಗಿ ಶಾಶ್ವತ ನಿದ್ದೆಗೆ ಜಾರುತ್ತಾರೆ. ಆಗ ದಯಾಮರಣ ಸಮಿತಿಯು ಅವರನ್ನು ಪರಿಶೀಲನೆ ಮಾಡಿ ಸಾವು ಸಂಭವಿಸಿದೆ ಎಂದು ಘೋಷಣೆ ಮಾಡಿದಲ್ಲಿಗೆ ಪ್ರಕ್ರಿಯೆ ಪೂರ್ತಿ ಆಗುತ್ತದೆ.

ಸಾವನ್ನು ಸ್ವಾಗತಿಸಲು ಮಾನಸಿಕ ಸಿದ್ಧತೆ

ಝೋರಯಾ ಮಾನಸಿಕವಾಗಿ ಧೃಡವಾಗಿ ನಿಂತು ತಾನು ತನ್ನ ಮನೆಯ ಲಿವಿಂಗ್ ರೂಮಿನಲ್ಲಿ ಸೋಫಾದ ಮೇಲೆ ಕುಳಿತು ತನ್ನ ಮುದ್ದಿನ ಬೆಕ್ಕುಗಳನ್ನು ನೇವರಿಸುತ್ತಾ ಸಾವನ್ನು ಸ್ವಾಗತ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ತನ್ನ ದೇಹವನ್ನು ಪಂಚಭೂತಗಳಲ್ಲಿ ಲೀನ ಮಾಡಿ. ಅಂತ್ಯಸಂಸ್ಕಾರಕ್ಕೆ ಜನ ಸೇರಿಸುವ ಅಗತ್ಯ ಇಲ್ಲ. ನನ್ನ ಚಿತಾ ಭಸ್ಮವನ್ನು ಕಾಡಿನೊಳಗೆ ಹರಡಿ ಸಾಕು ಅಂದಿದ್ದಾರೆ.

`ನನಗೆ ಪಾಪಪ್ರಜ್ಞೆ ಕಾಡುತ್ತಿಲ್ಲ. ನನಗಾಗಿ ಯಾರೂ ಕಣ್ಣೀರು ಸುರಿಸುವ ಅಗತ್ಯ ಇಲ್ಲ. ಇದು ನಾನೇ ಆರಿಸಿಕೊಂಡ ಸಾವು. ಹಾಗಾಗಿ ನನಗೆ ಯಾವ ವಿಷಾದವೂ ಇಲ್ಲ’ ಎಂದಾಕೆ ನಗುನಗುತ್ತಾ ಹೇಳುವಾಗ ಯಾರ ಮನಸ್ಸಾದರೂ ಕರಗದೆ ಇರದು!

ಹೋಗಿ ಬಾ ಝೊರೆಯಾ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

Exit mobile version