ರಾಜಮಾರ್ಗ ಅಂಕಣ: ಕನ್ನಡದ ನಿರೂಪಣಾ ಕ್ಷೇತ್ರದ ಲೆಜೆಂಡ್ ಇವತ್ತು ನಮ್ಮನ್ನೆಲ್ಲ ದುಃಖದ ಕಡಲಲ್ಲಿ ಮುಳುಗಿಸಿ ನಿರ್ಗಮಿಸಿದ್ದಾರೆ. ಅಲ್ಪ ಕಾಲದ ಅನಾರೋಗ್ಯ ಅವರನ್ನು ಸೆಳೆದುಕೊಂಡು ಹೋಗಿದೆ ಎಂದರೆ ನನಗೆ ನಂಬಲು ಕಷ್ಟವಾಗುತ್ತಿದೆ.
1983ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ʼಮಸಣದ ಹೂವು’ ಸಿನೆಮಾದ ಕಥಾನಾಯಕಿ ಆಗಿ ಅವರು ನಾಡಿಗೆ ಪರಿಚಿತರಾದರು. ಮುಂದೆ ಹಲವಾರು ಸಿನೆಮಾಗಳಲ್ಲಿ ಅವರ ಪ್ರತಿಭೆ ಪ್ರಕಾಶನಕ್ಕೆ ಬಂದಿತು. ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯಲ್ಲಿ ಅನಂತನಾಗ್ ಮಗಳಾಗಿ ಅಪರ್ಣಾ ಭಾರೀ ಮಿಂಚಿದರು.
ಆದರೆ ಮುಂದೆ ಅವರಾಗಿ ಆರಿಸಿಕೊಂಡದ್ದು ನಿರೂಪಣಾ ಕ್ಷೇತ್ರವನ್ನು. ಯಾವುದೇ ವೇದಿಕೆಯ ಕಾರ್ಯಕ್ರಮದ ನಿರೂಪಣೆಗೆ ಅಪರ್ಣಾ ಇದ್ದಾರೆ ಎಂದರೆ ಯಶಸ್ಸು ನೂರಕ್ಕೆ ನೂರು ನಿಶ್ಚಿತ ಅನ್ನುವ ನಂಬಿಕೆಯು ಎಂದಿಗೂ ಸುಳ್ಳಾದ ನಿದರ್ಶನವೇ ಇಲ್ಲ ಎನ್ನಬಹುದು. ಅದು ರಾಜಕೀಯ, ಧಾರ್ಮಿಕ, ಸಾಹಿತ್ಯಿಕ, ಪುಸ್ತಕ ಬಿಡುಗಡೆ, ಭಾವಗೀತೆಗಳ ಯಾವುದೇ ಕಾರ್ಯಕ್ರಮ ಇರಲಿ ಅಲ್ಲಿ ಅಪರ್ಣಾ ಇರಲೇ ಬೇಕು ಎನ್ನುವ ಮಾತು ಜನಜನಿತ ಆಗಿತ್ತು. ಪ್ರತೀಯೊಂದು ಕಾರ್ಯಕ್ರಮಕ್ಕೂ ಆಕೆಯು ಚಂದವಾದ ಸಿದ್ಧತೆ ಮಾಡದೇ ವೇದಿಕೆ ಏರುತ್ತಲೇ ಇರಲಿಲ್ಲ.
ನವಿರಾದ ಮತ್ತು ಸಾಹಿತ್ಯಿಕವಾದ ಕನ್ನಡ, ಪ್ರೌಢವಾದ ಮತ್ತು ಸುಲಲಿತ ಭಾಷೆ, ಸ್ಪಷ್ಟವಾದ ಉಚ್ಛಾರ ಸಮೀಚೀನ ಪದಗಳ ಬಳಕೆ, ಆಳವಾದ ಧ್ವನಿ, ನಿರರ್ಗಳತೆ ಮತ್ತು ಭಾವನಾತ್ಮಕ ಟಚ್ ಇವುಗಳು ಕೇವಲ ಅಪರ್ಣಾ ಅವರ ಬ್ರ್ಯಾಂಡ್‌ಗಳು. ನಿರಂತರವಾಗಿ 12 ಘಂಟೆಗಳ ಒಂದು ವೇದಿಕೆಯ ಕಾರ್ಯಕ್ರಮವನ್ನು ವಿರಾಮವೇ ಇಲ್ಲದೆ ನಿರೂಪಣೆ ಮಾಡಿದ ದಾಖಲೆಯು ಅವರ ಹೆಸರಲ್ಲಿ ಇದೆ.
ದೂರದರ್ಶನದ ಸಾವಿರಾರು ಕಾರ್ಯಕ್ರಮಗಳ ನಿರೂಪಣೆ, ವಾಯ್ಸ್ ಒವರ್ ಗಳು, ಸ್ಕ್ರಿಪ್ಟಗಳು ಅವರ ಅಗಾಧವಾದ ಪ್ರತಿಭೆಯ ಎರಕಗಳೇ ಆಗಿವೆ. ಅವರು ತುಂಬಾ ಪುಸ್ತಕ ಓದುತ್ತಿದ್ದರು. ಓದುವ ಅಭ್ಯಾಸ ಅಪ್ಪನ ಮೂಲಕ ಬಂದಿತು ಎಂದು ಅವರು ಹೇಳುತ್ತಿದ್ದರು.
ಅವರ ಜೊತೆಗೆ ಹಲವಾರು ವೇದಿಕೆಯ ನಿರೂಪಣೆಯ ಕಾರ್ಯಕ್ರಮಗಳನ್ನು ಬೆಂಗಳೂರಿನಲ್ಲಿ ಹಂಚಿಕೊಂಡ ಭಾಗ್ಯ ನನ್ನದು. ನಾನವರನ್ನು ಅಕ್ಕಾ ಎಂದೇ ಕರೆಯುವುದು. ಅವರು ತಮ್ಮ ಎಂದು ನನ್ನನ್ನು ಕರೆದರೆ ನನಗೆ ಖುಷಿ.
ನಾಲ್ಕು ವರ್ಷಗಳ ಹಿಂದೆ ಅವರ ಬಗ್ಗೆ ‘ಇಂದಿನ ಐಕಾನ್’ ಸರಣಿಯಲ್ಲಿ ಲೇಖನ ಬರೆದಿದ್ದೆ. ಅದು ಯಾರೋ ಅವರ ಗೆಳೆಯರ ಮೂಲಕ ಅವರಿಗೆ ತಲುಪಿತ್ತು. ಆಗ ಅವರೇ ಫೋನ್ ಮಾಡಿ ಮೆಚ್ಚುಗೆ ಹೇಳಿ ಥ್ಯಾಂಕ್ಸ್ ಎಂದಿದ್ದರು. ಅದರ ನಂತರವೂ ನನ್ನ ಹಲವಾರು ಲೇಖನ ವಾಟ್ಸಾಪ್ ಮೂಲಕ ಅವರಿಗೆ ತಲುಪಿದಾಗ ತುಂಬಾ ಚಂದ ಬರಿತೀರಿ ಎಂದೆಲ್ಲ ಬೆನ್ನು ತಟ್ಟುವ ಮಾತು.
ಅಕ್ಕ ಇದ್ದದ್ದೇ ಹಾಗೆ! ಅದೇ ಪಾಸಿಟಿವ್ ಸೌಲ್. ಯಾವ ನೋವಿದ್ದರೂ ನಗು ಮತ್ತು ನಗು ಮಾತ್ರ. ಬಿಗ್ ಬಾಸ್ ವೇದಿಕೆಯಲ್ಲಿ ಅವರು ಕಾಣಿಸಿಕೊಂಡಾಗ ಅದು ನಿಮಗೆ ಸೂಟ್ ಆಗೋದಿಲ್ಲ ಅಕ್ಕ ಎಂದು ಮೆಸೇಜ್ ಹಾಕಿದ್ದೆ. ಅದಕ್ಕೆ ಅವರು ಒಂದು ನಗುವ ಇಮೋಜಿ ಹಾಕಿದ್ದರು.
ಅಪರ್ಣಾ ಅಕ್ಕ ಇಂದು ನಿರ್ಗಮಿಸಿದ ಸುದ್ದಿ ಬಂದಿದೆ. ಇಡೀ ನಾಡಿಗೆ ಅದು ಶಾಕಿಂಗ್. ಯಾಕೆಂದರೆ ನಿರೂಪಣೆಯ ಕ್ಷೇತ್ರಕ್ಕೆ ಆಕೆ ಒಂದು ಲೆಜೆಂಡ್. ಈ ಸುದ್ದಿಯು ಸುಳ್ಳಾಗಲಿ ದೇವರೇ ಎಂದು ಈಗಲೂ ಒಳಮನಸ್ಸು ಹೇಳುತ್ತ ಇದೆ.
ಅಪರ್ಣ ಒಳ್ಳೆಯ ಅಕ್ಕ. ಹೋಗಿ ಬನ್ನಿ ಅಕ್ಕ.
ಇದನ್ನೂ ಓದಿ: ರಾಜಮಾರ್ಗ ಅಂಕಣ: ವಿವಾಹ ವಿಚ್ಛೇದನ ಮತ್ತು ಭಾರತೀಯ ಸಮಾಜ