ಸಹಸ್ರಮಾನದ ಬಾಲಿವುಡ್ ಗಾಯಕ ಮುಕೇಶ್ – ನೂರಾ ಒಂದರ ನೆನಪು
ರಾಜಮಾರ್ಗ ಅಂಕಣ: ಆತನು ಬದುಕಿದ್ದರೆ ಮೊನ್ನೆ ಜುಲೈ 22ಕ್ಕೆ ನೂರಾ ಒಂದು ವರ್ಷಗಳು ತುಂಬಿದ ಸಂಭ್ರಮವು ಇರುತ್ತಿತ್ತು! ಇಂದು ಮುಕೇಶ್ (Mukesh) ನಮ್ಮೊಂದಿಗಿಲ್ಲ! ಆದರೆ ಆ ಗಾಯಕ (Singer) ಹಾಡಿರುವ 1300 ಮಾಧುರ್ಯದ ಹಾಡುಗಳಿವೆ! ಸಾವಿಲ್ಲದ ಹಾಡುಗಳನ್ನು ಮುಕೇಶ್ ಬಾಲಿವುಡ್ (Bollywood) ಜಗತ್ತಿನಲ್ಲಿ ಹಾಡಿ ಸೂತಕದ ಛಾಯೆ ಮೂಡಿಸಿ ಹೊರಟೇ ಹೋದರು!
ದಿಲ್ ಜಲ್ತಾ ಹೈ ತೋ ಜಲನೇ ದೋ
ʼದಿಲ್ ಜಲ್ತಾ ಹೆ ತೋ’ ಎಂದು ನೋವಿನಲ್ಲಿ ಹಾಡುತ್ತ ನಮ್ಮ ʼದಿಲ್ ತೋಡಕರ್’ ಆತನು ಹೊರಟು ಹೋಗಿ 46 ವರ್ಷಗಳೇ ಕಳೆದುಹೋದವು! ಆದ್ರೂ ನಾವು ʼಜಾನೆ ಕಹಾ ಗಯೇ ಓ ದಿನ್’ ಎಂದು ಹಾಡುತ್ತ, ʼಕಭಿ ಕಭಿ ಮೇರೆ ದಿಲ್ ಮೆ’ ಎಂದು ಗುನುಗುತ್ತ ಅವನಿಗೆ ಶ್ರದ್ಧಾಂಜಲಿ ಸಮರ್ಪಣೆ ಮಾಡುತ್ತಾ ಇದ್ದೇವೆ. ಬಾಲಿವುಡ್ಡಿಗೆ ಇನ್ನೊಬ್ಬ ಮುಕೇಶ್ ಮತ್ತೆ ಹುಟ್ಟಿ ಬರಲಿ ಎಂಬ ಹಾರೈಕೆಯೊಂದಿಗೆ!
ಆವಾರಾ ಹೂಂ…ಆವಾರಾ ಹೂಂ!
ಅವನ ಪೂರ್ತಿ ಹೆಸರು ಮುಕೇಶ್ ಚಂದ್ ಮಾಥುರ್. ಹುಟ್ಟಿದ್ದು ದೆಹಲಿಯಲ್ಲಿ. ಓದಿದ್ದು ಎಸೆಸೆಲ್ಸಿ. ಉದ್ಯೋಗ ಮಾಡಿದ್ದು PWD ಇಲಾಖೆಯಲ್ಲಿ. ಅವನ ಅಕ್ಕ ಸುಂದರ ಪ್ಯಾರಿಗೆ ಸಂಗೀತ ಕಲಿಸಲು ಗುರುಗಳು ಪ್ರತೀ ದಿನ ಮನೆಗೆ ಬಂದಾಗ ಪಕ್ಕದ ಕೋಣೆಯಲ್ಲಿ ಹಾಡುಗಳನ್ನು ಗುನುಗುತ್ತ ಸಂಗೀತವನ್ನು ಕಲಿತವನು ಮುಕೇಶ್. ಅವನ ಅಕ್ಕನ ಮದುವೆಯ ರಸಮಂಜರಿಯ ವೇದಿಕೆಯಲ್ಲಿ ಆತನು ಹಾಡುವಾಗ ಕೇಳಿದ್ದ ಹಿಂದಿಯ ಖ್ಯಾತ ನಟ ಮೋತಿಲಾಲ್ ಅವನಿಗೆ ಹೇಳಿದ್ದು ‘ನೀನು ಇರಬೇಕಾದ್ದು ಇಲ್ಲಿ ಅಲ್ಲ! ನಡಿ ಮುಂಬೈಗೆ!’
ಮುಂಬೈಗೆ ಕರೆದುಕೊಂಡು ಬಂದ ಮೋತಿಲಾಲ್ ಅವರು ಅವನ ಸಂಗೀತ ಕಲಿಕೆಗೂ ಅವಕಾಶ ಮಾಡಿಕೊಟ್ಟರು.
ಅದರ ನಡುವೆ ಎರಡು ಸಿನೆಮಾದಲ್ಲಿ ಹೀರೋ ಆಗಿ ಅಭಿನಯ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದ ಮುಕೇಶ್! ಸಿನೆಮಾ ಓಡಲಿಲ್ಲ. ಅವನಿಗೆ ತಕ್ಷಣವೇ ಅರ್ಥ ಆಗಿತ್ತು, ಇದು ನನ್ನ ಕ್ಷೇತ್ರ ಅಲ್ಲ!
ಮತ್ತೆ ಅವಕಾಶ ಹುಡುಕುತ್ತ ಸ್ಟುಡಿಯೋಗಳಿಗೆ ಅಲೆದಾಟ ತಪ್ಪಲಿಲ್ಲ. ಅನಿಲ್ ಬಿಸ್ವಾಸ್ ಕಂಪೋಸ್ ಮಾಡಿದ ‘ಪೇಹ್ಲಿ ನಜರ್’ ಸಿನಿಮಾದ ಸ್ಮರಣೀಯ ಹಾಡು ‘ದಿಲ್ ಜಲ್ತಾ ಹೈ ತೋ ಜಲನೇ ದೋ’ ಮುಕೇಶ್ ಹಾಡಿದ್ದೇ ಹಾಡಿದ್ದು, ಬಂಪರ್ ಹೊಡೆಯಿತು! ಆ ಹಾಡನ್ನು ಕೇಳಿದ ಆಗಿನ ಲೆಜೆಂಡ್ ಸಿಂಗರ್ ಸೈಗಲ್ ಹೇಳಿದರಂತೆ, ‘ಈ ಹಾಡು ನಾನೇ ಹಾಡಿದ್ದಲ್ಲವಾ! ಯಾವಾಗ ಹಾಡಿದ್ದು ಎಂದು ಮರೆತುಹೋಗಿದೆ!’
ಆಗ ಅವನಿಗೆ ಅರ್ಥ ಆದದ್ದು ʼನಾನು ಅರಿವಿಲ್ಲದೆ ಸೈಗಲ್ ಅವರ ಅನುಕರಣೆಯನ್ನು ಮಾಡುತ್ತಿರುವೆ’ ಎಂದು!
ಮುಖೇಶಗೆ ಒಲಿದ ಗುರು ನೌಶಾದ್
ಅನುಕರಣೆಯಿಂದ ಹೊರಬಂದು ಅವನದ್ದೇ ವಾಯ್ಸ್ ಡೆವೆಲಪ್ ಮಾಡಲು ತರಬೇತಿ ನೀಡಿದವರು ನೌಶಾದ್ ಸಾಬ್. ಅವರನ್ನು ಮುಕೇಶ್ ಕೊನೆತನಕ ಮರೆಯಲಿಲ್ಲ. ಸಂಗೀತ ಕ್ಷೇತ್ರದಲ್ಲಿ ತಾನು ಮಾಡಿದ ಅಷ್ಟೂ ಸಾಧನೆಯನ್ನು ತನ್ನ ಗುರುವಿಗೆ ಸಮರ್ಪಣೆ ಮಾಡಿದ್ದಾನೆ ಮುಕೇಶ್.
ಚಂಚಲ್ ಶೀತಲ್ ಸರಲಾ!
ಬಾಲಿವುಡ್ಡಿನಲ್ಲಿ ಗಟ್ಟಿಯಾಗಿ ಕಾಲು ಊರುವ ಮೊದಲೇ ಆತ ಪ್ರೀತಿಯ ಬಲೆಗೆ ಬಿದ್ದಾಗಿತ್ತು. ಅವಳ ಹೆಸರು ಸರಲಾ. ಕೋಟ್ಯಾಧಿಪತಿ ಅಪ್ಪನ ಪ್ರೀತಿಯ ಒಬ್ಬಳೇ ಮಗಳು. ಇವನೋ ʼಮಾನಾ ಆಪ್ನಿ ಜೇಬ್ ಸೆ ಫಕೀರ್ ಹೆ’ ಎಂದು ಹಾಡುತ್ತಿದ್ದ ಐಡೆಂಟಿಟಿ ಇಲ್ಲದ ಹಿನ್ನೆಲೆ ಗಾಯಕ! ʼಮೈನಾ ಭೂಲೂಂಗಾ’ ಎಂದು ಹಾಡುತ್ತ ಮುಕೇಶ್ ಅವಳಿಗೆ ಮೋಡಿಯನ್ನು ಮಾಡಿದ್ದ! ʼಚಂಚಲ ಶೀತಲ್’ ಸರಲಾ ಅವನನ್ನು ಬಿಟ್ಟಿರಲು ಆಗದೇ ಒಂದು ದಿನ ʼಭಾಗ್ ಚಲೇ’ ಎಂದಳು!
ಸಾವನ್ ಕಾ ಮಹೀನಾ..
ಸರಳವಾಗಿ ಒಂದು ʼಸಾವನ ಕಾ ಮಹೀನಾ’ ಅವರು ಒಂದು ದೇವಸ್ಥಾನದಲ್ಲಿ ಮದುವೆ ಆದರು. ಕೊನೆಯವರೆಗೂ ಪ್ರೀತಿಯಿಂದ ಬಾಳಿದರು.
1945-1978ರ ಅವಧಿಯಲ್ಲಿ ಅವನು ಹಾಡಿದ್ದು 1300 ಅಮರವಾದ ಹಾಡುಗಳನ್ನು! ಅವನ ಸಮಕಾಲೀನ ಗಾಯಕರಾದ ರಫೀ ಮತ್ತು ಕಿಶೋರ್ ಕುಮಾರ್ ಅವರಿಗೆ ಹೋಲಿಸಿದರೆ ಈ ಸಂಖ್ಯೆಯು ತುಂಬಾ ಕಡಿಮೆ. ಆದರೆ ಮುಕೇಶ್ ಹಾಡಿದ ಹಾಡುಗಳು ಎಲ್ಲವೂ ಸೂಪರ್ ಹಿಟ್. ಮಾಧುರ್ಯದ ಪರಾಕಾಷ್ಠೆ!
ಶೋಕ ಗೀತೆಗಳ ಸಾಮ್ರಾಟ ಮುಕೇಶ್!
ಅವನ ಧ್ವನಿಯಲ್ಲಿ ರಫಿಯ ವೈವಿಧ್ಯತೆ ಇರಲಿಲ್ಲ. ಕಿಶೋರ್ ಕುಮಾರನ ಕಶಿಷ್ ಇರಲಿಲ್ಲ. ಆದರೆ ಒಂದು ಹಾಂಟಿಂಗ್ ಮೆಲಡಿಯು ಖಂಡಿತವಾಗಿಯು ಇರುತ್ತಿತ್ತು. ಅದರಲ್ಲಿ ಕೂಡ ಭಗ್ನಪ್ರೇಮಿಗಳಿಗೆ ಒಂದಿಷ್ಟು ಸಾಂತ್ವನ ನೀಡುವ ವಿಷಾದ ಭಾವ ಇರುತ್ತಿತ್ತು. ಅದಕ್ಕೆ ಅವನನ್ನು ‘ಶೋಕ ಗೀತೆಗಳ ಸಾಮ್ರಾಟ’ ಎಂದು ಜನರು ಕರೆದರು. ನೋವಿನಲ್ಲಿ ಅದ್ದಿ ತೆಗೆದ ಆ ಆರ್ದ್ರ ಧ್ವನಿಯು ಬೇರೆ ಯಾವ ಗಾಯಕನಲ್ಲೂ ಇರಲಿಲ್ಲ! ಒಂದು ರೀತಿಯಲ್ಲಿ ಆತನದ್ದು ನಶೆ ಏರಿಸುವ ಧ್ವನಿ ಆಗಿತ್ತು. ಶಂಕರ್ ಜೈಕಿಷನ್, ಕಲ್ಯಾಣ್ ಜಿ ಆನಂದ ಜಿ, ಸಚಿನ್ ದೇವ್ ಬರ್ಮನ್, ಖಯ್ಯಾಂ, ಸಲೀಲ್ ಚೌಧರಿ ಮೊದಲಾದ ಸಂಗೀತ ನಿರ್ದೇಶಕರು ಮುಕೇಶನ ಒಳಗಿದ್ದ ಅದ್ಭುತ ಗಾಯಕನನ್ನು ಕಡೆದು ನಿಲ್ಲಿಸಿದರು.
ಆಗಿನ ಕಾಲದಲ್ಲಿ ಸ್ಟುಡಿಯೋ ವ್ಯವಸ್ಥೆ ಹೇಗಿತ್ತು ಎಂದರೆ ಎಲ್ಲಾ ವಾದ್ಯಗಳ ಕಲಾವಿದರು ಸಾಕಷ್ಟು ರಿಹರ್ಸಲ್ ಮಾಡಿ ಲೈವ್ ಆಗಿ ನುಡಿಸಬೇಕಾಗಿತ್ತು. ಹಿನ್ನೆಲೆ ಗಾಯಕರು ರೀ ಟೇಕ್ ಮಾಡಲು ಅವಕಾಶ ಇಲ್ಲದೆ ಒಂದೇ ಉಸಿರಲ್ಲಿ ಹಾಡಿ ಮುಗಿಸಬೇಕು. ಮುಕೇಶ್ ಇಂತಹ ಸವಾಲನ್ನು ಗೆದ್ದು ಬಂದಿದ್ದವರು!
ʼಮುಕೇಶ್ ನನ್ನ ಆತ್ಮ’ ಎಂದರು ರಾಜಕಪೂರ್
ಹಿಂದಿ ಸಿನೆಮಾರಂಗದ ಮಹಾನಟ, ಶೋಮ್ಯಾನ್ ರಾಜ್ ಕಪೂರ್ ಅವರ ವ್ಯಕ್ತಿತ್ವಕ್ಕೆ ಮುಕೇಶ್ ಧ್ವನಿಯು ತುಂಬಾ ಚೆನ್ನಾಗಿಯೇ ಹೊಂದಾಣಿಕೆ ಆಗುತ್ತಿತ್ತು. ಅದರಿಂದ ಹುಟ್ಟಿ ಬಂದದ್ದು ಎವರ್ ಗ್ರೀನ್ ಆದ ನೂರಾರು ಹಾಡುಗಳು! ಆವಾರಾ, ಬರ್ಸಾತ್, ಶ್ರೀ 420, ಸಂಗಂ, ಮೇರಾ ನಾಮ್ ಜೋಕರ್, ಅನಾರಿ, ಆಗ್, ಜಿಸ್ ದೇಶ್ ಮೆ ಗಂಗಾ ಬಹತಿ ಹೈ……….. ಈ ಸಿನಿಮಾಗಳ ಹಾಡುಗಳನ್ನು ಕೇಳಿ ನೋಡಿ. ಅಂತಹ ಹಾಡುಗಳಿಗೆ ಸಾವಿಲ್ಲ. ಅದಕ್ಕಾಗಿ ಮುಂದೆ ಮುಕೇಶ್ ನಿಧನರಾದಾಗ ರಾಜಕಪೂರ್ ಹೇಳಿದ್ದು – ನಾನು ನನ್ನ ಆತ್ಮವನ್ನು ಕಳೆದುಕೊಂಡೆ!
ಕಯಿ ಬಾರ್ ಯೂ ಹಿ ದೇಖಾ ಹೈ..
ಮುಕೇಶನಿಗೆ ‘ರಜನಿ ಗಂಧಾ’ ಹಿಂದೀ ಸಿನಿಮಾದ ಹಾಡಿಗೆ ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿ ದೊರೆಯಿತು( ಕಯಿ ಬಾರ್ ಯೂ ಹಿ ದೇಖಾ ಹೈ). ನಾಲ್ಕು ಫಿಲ್ಮ್ ಫೇರ್ ಪ್ರಶಸ್ತಿ, ಬೆಂಗಾಲಿ ಪತ್ರಕರ್ತರ ಸಂಘದ ಮೂರು ಪ್ರಶಸ್ತಿಗಳು ಅವನಿಗೆ ದೊರೆತಿವೆ. ಇದೆಲ್ಲಕ್ಕಿಂತ ಹೆಚ್ಚಾಗಿ ಆತನ ಮೆಲಡಿ ಹಾಡುಗಳನ್ನು ಈಗಲೂ ಕೇಳುವ, ಆಸ್ವಾದಿಸುವ, ಫೀಲ್ ಮಾಡಿಕೊಳ್ಳುವ ಬಹು ದೊಡ್ಡ ಅಭಿಮಾನಿಗಳ ಪ್ರೀತಿಯು ದೊರೆತಿತು. ಮುಖೇಶನಿಗೆ ವಿದೇಶದಲ್ಲಿ ಕೂಡ ಬಹಳ ದೊಡ್ಡ ಸಂಖ್ಯೆಯ ಅಭಿಮಾನಿಗಳ ಬಳಗ ಇದೆ.
ʼದಿಲ್ ಜಲ್ತಾ ಹೈ’ ಮುಕೇಶ್ ಅವನ ಮೊದಲ ಮತ್ತು ಕೊನೆಯ ಹಾಡಾಯಿತು!
1976 ಆಗಸ್ಟ್ 27ರಂದು ಅಮೆರಿಕಾದ ಒಂದು ಆರ್ಕೆಸ್ಟ್ರಾ ಕಾರ್ಯಕ್ರಮಕ್ಕೆ ಹಾಡಲು ಹೋಗಿದ್ದಾಗ ಹೃದಯಾಘಾತಕ್ಕೆ ಒಳಗಾಗಿ ಮುಕೇಶ್ ಉಸಿರು ನಿಂತಿತು. ಅಲ್ಲಿ ಕೂಡಾ ಆತ ಹಾಡಿದ ಕೊನೆಯ ಹಾಡು – ದಿಲ್ ಜಲ್ತಾ ಹೈ ತೋ ಜಲನೆ ದೋ! ನೆನಪು ಮಾಡಿಕೊಳ್ಳಿ, ಅದು ಮುಕೇಶ್ ಹಾಡಿದ ಮೊದಲ ಹಾಡು ಕೂಡ ಆಗಿತ್ತು! ಉಸಿರು ನಿಂತಾಗ ಅವನಿಗೆ ಕೇವಲ 53 ವರ್ಷ ಆಗಿತ್ತು. ಮುಂದೆ ಆತನ ಮಗ ನಿತಿನ್ ಮುಕೇಶ್ ಅಪ್ಪನ ಹಾಗೆ ಹಿನ್ನೆಲೆ ಗಾಯಕರಾಗಿ ಜನಪ್ರಿಯತೆ ಪಡೆದರು.
ಮುಕೇಶನ ಹಾಡುಗಳನ್ನು ಆರಾಧಿಸುತ್ತಾ, ಅವುಗಳನ್ನು ನನಗೆ ದೊರೆತ ಎಲ್ಲಾ ಕಾಲೇಜಿನ ವೇದಿಕೆಯಲ್ಲಿ, ಸ್ಪರ್ಧೆಗಳಲ್ಲಿ ಆರ್ದ್ರವಾಗಿ ಹಾಡುತ್ತ ಇದ್ದ ನನ್ನ ಹಾಗೆ ಇರುವ ಕೋಟಿ ಕೋಟಿ ಅಭಿಮಾನಿಗಳ ಮೇಲೆ ಆತನು ದಟ್ಟವಾದ ಪ್ರಭಾವವನ್ನು ಬಿಟ್ಟು ಹೋಗಿದ್ದಾನೆ. ಆತನ ಟಾಪ್ 12 ಹಾಡುಗಳನ್ನು ಪಟ್ಟಿ ಮಾಡಿ ಇಲ್ಲಿಟ್ಟು ಅವನಿಗೆ ಶ್ರದ್ಧಾಂಜಲಿ ಕೊಡುತ್ತಿರುವೆ. ಅವನ ಸಾವಿರದ ಹಾಡುಗಳಿಗೆ ಕಿವಿ ಆಗಿ ಆಯ್ತಾ!
ಈ ಹಾಡುಗಳನ್ನೊಮ್ಮೆ ಕೇಳಿ, ನೀವು ಮುಕೇಶ್ ಫ್ಯಾನ್ ಆಗದಿದ್ದರೆ ಮತ್ತೆ ಹೇಳಿ!
1) ಹೊಂಟೋ ಪೆ ಸಚ್ಚಾಯಿ ರಹತಿ ಹೈ( ಜೀಸ್ ದೇಶ್ ಮೆ ಗಂಗಾ ಬೇಹತಿ ಹೈ)
2) ದೋಸ್ತ್ ದೋಸ್ತ್ ನಾ ರಹಾ( ಸಂಗಂ)
3) ಸಾವನ ಕಾ ಮಹೀನಾ ಪವನ್ ಕರೆ ಶೋರ್ (ಮಿಲನ್)
4) ಬಸ್ ಏಹಿ ಅಪರಾಧ್ ( ಪೆಹಾಚಾನ್)
5) ಜಾನೆ ಕಹಾನ್ ಗಯೇ ಓ ದಿನ್ (ಮೇರಾ ನಾಮ್ ಜೋಕರ್)
6) ಕಹೀನ್ ದೂರ್ ಜಬ್ ದಿನ್ ಧಲ ಜಾಯೆ ( ಆನಂದ್)
7) ಮೈ ನಾ ಭೂಲೂಂಗಾ(ರೋಟಿ ಕಪಡಾ ಔರ್ ಮಕಾನ್)
8) ಇಕ್ ದಿನ್ ಭಿಕ್ ಜಾಯೆಗಾ ( ಧರಂ ಕರಂ)
9) ಕಭೀ ಕಭಿ ಮೇರೆ ದಿಲ್ ಮೆ( ಕಭೀ ಕಭಿ)
10) ಮೇರಾ ಜೂತಾ ಹೈ ಜಪಾನಿ( ಆವಾರ)
11) ತಾಲ್ ಮಿಲೆ ನದೀ ಕೆ ಜಲ ಮೆ ( ಅನೋಖಿ ರಾತ)
12) ದಿಲ್ ತಡಪ್ ತಡಪ್ ಕೆ (ಮಧುಮತಿ)
ಸಹಸ್ರಮಾನದ ಮುಕೇಶ್ ಧ್ವನಿಗೆ ಕೋಟಿ ಪ್ರಣಾಮಗಳು.
ಇದನ್ನೂ ಓದಿ: ರಾಜಮಾರ್ಗ ಅಂಕಣ: ನಾಲ್ಕನೇ ತರಗತಿ ಮಾತ್ರ ಓದಿದ ಎನ್ ನರಸಿಂಹಯ್ಯ 550 ಪತ್ತೇದಾರಿ ಕಾದಂಬರಿ ಬರೆದರು!