ಬಸ್ ಕಂಡಕ್ಟರ್, ಕ್ಲೀನರ್ ಆಗಿದ್ದ ಅವರು ʼಕನ್ನಡದ ಕಾನನ್ ಡಯಲ್’ ಆದದ್ದು ಹೇಗೆ?
ರಾಜಮಾರ್ಗ ಅಂಕಣ: ಕನ್ನಡದಲ್ಲಿ ʼಪತ್ತೇದಾರಿ ಕಾದಂಬರಿಗಳ ಜನಕ ‘ (detective novels) ಎಂದು ಕರೆಸಿಕೊಂಡ ಎನ್ ನರಸಿಂಹಯ್ಯ (N Narasimhaiah) ಬರೆದು ಮುಗಿಸಿದ್ದು ಬರೋಬ್ಬರಿ 550 ಪತ್ತೇದಾರಿ ಕಾದಂಬರಿಗಳನ್ನು ಮತ್ತು 50 ಸಾಮಾಜಿಕ ಕಾದಂಬರಿಗಳನ್ನು ಅಂದರೆ ನಂಬುವುದು ಕಷ್ಟ! ಅದರಲ್ಲಿಯೂ ಬಡತನಕ್ಕೆ ಕಾರಣವಾಗಿ ನಾಲ್ಕನೇ ತರಗತಿಗೆ ಶಾಲೆ ತೊರೆದ ಅವರು ಅಷ್ಟೊಂದು ಪತ್ತೇದಾರಿ ಕಾದಂಬರಿ ಬರೆದರೆಂದರೆ ಅಂದರೆ ಅದು ನಿಜಕ್ಕೂ ಸಾಹಿತ್ಯದ ವಿಸ್ಮಯ ಮತ್ತು ಬರವಣಿಗೆಯ ಬೆರಗು!
ಪತ್ತೇದಾರ ಪುರುಷೋತ್ತಮನ ಜನಕ
1925 ಸೆಪ್ಟೆಂಬರ್ 18ರಂದು ಬೆಂಗಳೂರಿನಲ್ಲಿ ಜನಿಸಿದ ಎನ್ ನರಸಿಂಹಯ್ಯ ಅವರ ತಂದೆ ಸಿ. ನಂಜಪ್ಪನವರು ಜನಪದ ಕವಿ ಆಗಿದ್ದರು. ಬಾಲ್ಯದಲ್ಲಿ ಅಪ್ಪ ತೀರಿಹೋದ ಕಾರಣ ಅವರು ನಾಲ್ಕನೇ ತರಗತಿಗೆ ಶಾಲೆ ಬಿಡಬೇಕಾಯಿತು. ಅಲ್ಲಿಂದ ಮುಂದೆ ತಾಯಿ ಊರಾದ ಚಿಕ್ಕಮಗಳೂರಿಗೆ ಬಂದು ಒಂದೆರಡು ವರ್ಷ ಕಾಫಿ ತೋಟದಲ್ಲಿ ಕೆಲಸ ಮಾಡಿದರು.
ಮತ್ತೆ ಬೆಂಗಳೂರಿಗೆ ಬಂದು ಬಸ್ ಕ್ಲೀನರ್, ಬಸ್ ಕಂಡಕ್ಟರ್ ಕೂಡ ಆದರು. ಅದು ಹೊಟ್ಟೆಪಾಡಿಗೆ ಅನಿವಾರ್ಯ ಆಗಿತ್ತು. ಬಿಡುವು ದೊರೆತಾಗಲೆಲ್ಲ ಸಿಕ್ಕಾಪಟ್ಟೆ ಓದುತ್ತಿದ್ದರು. ಹಾಗೆಯೇ ಮುಂದೆ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಮೊಳೆ ಜೋಡಿಸುವ ಕೆಲಸ ದೊರೆಯಿತು. ಆಗೆಲ್ಲ ಪ್ರಿಂಟಿಂಗ್ ಬರುವ ಎಲ್ಲ ಪುಸ್ತಕಗಳನ್ನು ಓದುವ ಲಾಭ ದೊರೆಯಿತು. ಮುಂದೆ ಬೆಂಗಳೂರಿನಲ್ಲಿ ಒಂದು ಸಣ್ಣ ಅಂಗಡಿ ಬಾಡಿಗೆಗೆ ಪಡೆದು ಒಂದು ಲೈಬ್ರೆರಿ ತೆರೆದರು. ಅದು ಎಂಟಾಣೆ ತಿಂಗಳ ಚಂದಾ ಇರುವ ಲೈಬ್ರರಿ. ಆಗ ಮ.ನ.ಮೂರ್ತಿ ಅವರ ಪತ್ತೇದಾರಿ ಕಾದಂಬರಿ ಓದಿ ನಾನೂ ಈ ರೀತಿಯ ಕಾದಂಬರಿಯನ್ನು ಬರೆಯಬಹುದಲ್ಲಾ ಎಂದು ಅನ್ನಿಸಿತ್ತು. ಅವರ ಆಸೆಗೆ ಪೂರಕವಾಗಿ ಟಿ ನಾರಾಯಣ ಅಯ್ಯಂಗಾರ್ ಎಂಬ ಪ್ರಕಾಶಕರ ನೆರವನ್ನು ಪಡೆದು ಮೊದಲನೇ ಪತ್ತೇದಾರಿ ಕಾದಂಬರಿ ಬರೆದರು. ಅದು ‘ಪುರುಷೋತ್ತಮನ ಸಾಹಸ’ (1952). ಆ ಪುಸ್ತಕವು ಎಷ್ಟು ಜನಪ್ರಿಯ ಆಯಿತೆಂದರೆ ಒಂದು ತಿಂಗಳ ಒಳಗೆ ಪ್ರತಿಗಳು ಖಾಲಿ ಆಗಿ ಮತ್ತೆ ಮತ್ತೆ ಪ್ರಿಂಟ್ ಆಯಿತು! ಅಲ್ಲಿಂದ ನರಸಿಂಹಯ್ಯ ಮತ್ತೆ ಹಿಂದೆ ನೋಡುವ ಪ್ರಸಂಗವೇ ಬರಲಿಲ್ಲ.
ಪುರುಷೋತ್ತಮ, ಮಧುಸೂದನ, ಅರಿಂಜಯ, ಗಾಳಿರಾಯ…
ಅಲ್ಲಿಂದ ಒಂದು ದಿನವೂ ಬಿಡುವು ಕೊಡದೆ ನರಸಿಂಹಯ್ಯ ಪತ್ತೇದಾರಿ ಕಾದಂಬರಿಗಳನ್ನು ಬರೆಯುತ್ತಾ ಹೋದರು. ಅವರ ಎಲ್ಲ ಕಾದಂಬರಿಗಳು ಬಿಸಿ ದೋಸೆಯ ಹಾಗೆ ಮಾರಾಟವಾದವು. ಅವರು ಬರೆದ ಎಲ್ಲ ಪುಸ್ತಕಗಳು ಮತ್ತೆ ಮತ್ತೆ ಪ್ರಿಂಟ್ ಆದವು. ಪ್ರಕಾಶಕರ ಒತ್ತಡವು ಹೆಚ್ಚಾದಂತೆ ನರಸಿಂಹಯ್ಯ ರಾತ್ರಿ ಹಗಲು ಕೂತು ಬರೆಯುತ್ತಾ ಹೋದರು. ಕೆಲವೊಮ್ಮೆ ದಿನಕ್ಕೆ 200 ಪುಟಗಳನ್ನು ಬರೆದದ್ದೂ ಇತ್ತು! ಮೂರು ದಿನಕ್ಕೆ ಒಂದು ಪತ್ತೇದಾರಿ ಕಾದಂಬರಿಯನ್ನು ಬರೆದು ಮುಗಿಸಿದ್ದೂ ಇದೆ! ಬಳೆಪೇಟೆಯ ಪ್ರಕಾಶಕರ ಅಂಗಡಿಯಲ್ಲಿ ಕುಳಿತು ಊಟ ತಿಂಡಿ ಮರೆತು ಬರೆದದ್ದೂ ಇದೆ! ಅವರು ಬರೆದ ಎಲ್ಲ ಪುಸ್ತಕಗಳೂ ಪ್ರಿಂಟ್ ಆಗಿ ಖಾಲಿ ಆಗಿ ಮತ್ತೆ ಮತ್ತೆ ಮುದ್ರಣ ಆಗುತ್ತಿದ್ದವು. ಓದುಗರಿಗೆ ಎನ್ ನರಸಿಂಹಯ್ಯ ಯಾರು ಎಂದು ಗೊತ್ತಿರಲಿಲ್ಲ. ಅವರು ಜನರ ನಡುವೆ ಇದ್ದರೂ ಅವರ ಗುರುತು ಯಾರಿಗೂ ಆಗುತ್ತಲೇ ಇರಲಿಲ್ಲ! ಆದರೆ ಅವರೇ ಸೃಷ್ಟಿ ಮಾಡಿದ ಪತ್ತೇದಾರ ಪುರುಷೋತ್ತಮನ ಪಾತ್ರ ಎಲ್ಲರಿಗೂ ಗೊತ್ತಿತ್ತು! ಅವರ ಪುಸ್ತಕಗಳು ವಿದೇಶದ ಭಾಷೆಗಳೂ ಸೇರಿ ಭಾರತದ ವಿವಿಧ ಭಾಷೆಗಳಿಗೆ ಅನುವಾದ ಆದವು!
ಅವರು 150 ಪುಸ್ತಕಗಳನ್ನು ಮುಗಿಸಿದ ನಂತರ ಇನ್ನೋರ್ವ ಪತ್ತೇದಾರ ಮಧುಸೂದನ ಅವರ ಲೇಖನಿಯಿಂದ ಜನ್ಮ ತಾಳಿದನು. ಮತ್ತೆ ನೂರಾರು ಪುಸ್ತಕ ಆದ ನಂತರ ಅರಿಂಜಯ ಎಂಬ ಇನ್ನೊಬ್ಬ ಪತ್ತೇದಾರನ ಪ್ರವೇಶ ಆಯಿತು. ಕೊನೆಗೆ ಗಾಳಿರಾಯ ಎಂಬ ಪತ್ತೇದಾರನ ಆವಿರ್ಭಾವ ಕೂಡ ಆಯಿತು. ಬರೆದು ಮುಗಿಸಿದ್ದು 550 ಪತ್ತೇದಾರಿ ಕಾದಂಬರಿಗಳನ್ನು! ಅದ್ಯಾವುದರ ಲೆಕ್ಕ ಅವರು ಇಟ್ಟದ್ದೂ ಇಲ್ಲ. ಬರೆಯುವುದನ್ನು ನಿಲ್ಲಿಸಿದ್ದೂ ಇಲ್ಲ. ಎಷ್ಟೋ ಕಾದಂಬರಿಗಳನ್ನು ಅವರು ಪ್ರಿಂಟಿಂಗ್ ಮೆಶಿನ್ ಮುಂದೆ ಕೂತು ಬರೆದದ್ದು ಉಂಟು!
ಪತ್ತೇದಾರಿ ಕಾದಂಬರಿ ಬರೆಯುವುದು ಅಷ್ಟು ಸುಲಭವಾ?
ಖಂಡಿತ ಸುಲಭ ಅಲ್ಲ. ತುಂಬಾ ವೇಗವಾಗಿ ಬರೆಯುತ್ತಿದ್ದ ಕಾರಣ ಏಕತಾನತೆ ಕಾಪಾಡುವುದು ದೊಡ್ಡ ಸವಾಲು ಆಗಿತ್ತು. ಮತ್ತೆ ಭಾರತೀಯ ದಂಡ ಸಂಹಿತೆಯ ವಿವರಗಳು, ಪೊಲೀಸ್ ತನಿಖೆಯ ಹಂತಗಳು, ಸಿಐಡಿಗಳು ಮಾಡುವ ವಿವರಣೆಯ ಆಯಾಮಗಳು, ಕೋರ್ಟು ಕಲಾಪಗಳು ಇವೆಲ್ಲವೂ ಕೇವಲ ನಾಲ್ಕನೇ ಕ್ಲಾಸ್ ಕಲಿತ ನರಸಿಂಹಯ್ಯ ಅವರಿಗೆ ಅರ್ಥ ಆದದ್ದು ಹೇಗೆ? ಅನೂಹ್ಯ ತಿರುವುಗಳು, ಸೊಗಸಾದ ನಿರೂಪಣೆ, ಸರಳವಾದ ಭಾಷೆ, ಕುತೂಹಲವನ್ನು ಕಾಪಾಡಿಕೊಂಡು ಹೋಗುವ ಕಥನ ಕಲೆ ಅವರ ಪತ್ತೆದಾರಿ ಕಾದಂಬರಿಗಳ ಹೆಚ್ಚುಗಾರಿಕೆ! ಒಮ್ಮೆ ಅವರ ಪುಸ್ತಕ ಓದಲು ಆರಂಭ ಮಾಡಿದರೆ ಅದು ಮುಗಿಯದೆ ನಮಗೆ ಪುಸ್ತಕ ಕೆಳಗಿಡಲು ಮನಸ್ಸೇ ಬರುತ್ತಿರಲಿಲ್ಲ! ಇದು ಎನ್ ನರಸಿಂಹಯ್ಯ ಅವರ ತಾಕತ್ತು! ಅವರು ಬರೆದ ಪ್ರತೀಯೊಂದು ಕಾದಂಬರಿಯಲ್ಲಿ ನ್ಯಾಯಕ್ಕೆ ಗೆಲುವು ದೊರೆಯುತ್ತಿತ್ತು. ಇದರಿಂದಾಗಿ ಅವರನ್ನು ‘ಕನ್ನಡದ ಕಾನನ್ ಡಾಯ್ಲ್ ‘ ಎಂದು ಅಭಿಮಾನಿ ಓದುಗರು ಕರೆದರು.
ಅವರು ಅದೇ ವೇಗದಲ್ಲಿ 50 ಸಾಮಾಜಿಕ ಕಾದಂಬರಿಗಳನ್ನು ಕೂಡ ಬರೆದರು. ಅವುಗಳೂ ಜನಪ್ರಿಯ ಆದವು.
ಅವರ ತುಂಬಾ ಪ್ರಸಿದ್ಧವಾದ ಪುಸ್ತಕಗಳು
ಭಯಂಕರ ಬೈರಾಗಿ, ಸಾವಿನ ಸೋಲು, ಕನ್ನಡಿಯ ಮುಂದೆ, ಮಾಟಗಾತಿಯ ಮಗಳು, ಕಾಮದ ಗೊಂಬೆ, ನೀಲಿ ಕೋಟು, ವಿಚಿತ್ರ ಕೊಲೆಗಾರ, ಕಲಿಯುಗದ ಪಾಂಚಾಲಿ, ಗಿಣಿ ಕಚ್ಚಿದ ಹಣ್ಣು, ಅವಳಿ ಜವಳಿ, ಎರಡು ತಲೆ ಹಾವು, ಸ್ಮಶಾನ ಬೈರಾಗಿ, ಪಂಜರದ ಪಿಶಾಚಿ ಇವುಗಳು ಅವರ ಅತ್ಯಂತ ಜನಪ್ರಿಯ ಪುಸ್ತಕಗಳು.
ಹಾದಿ ತಪ್ಪಿದ ಹೆಣ್ಣು, ಜೀವನ ಸಂಗಾತಿ, ಪಂಚವರ್ಣದ ಗಿಣಿ ಇವು ಅವರ ಜನಪ್ರಿಯ ಸಾಮಾಜಿಕ ಕಾದಂಬರಿಗಳು. ಅವರು ಅಗಲಿದ ನಂತರವೂ ಅವರ ಪುಸ್ತಕಗಳು ಮತ್ತೆ ಮತ್ತೆ ಮುದ್ರಣ ಆಗುತ್ತಿರುವುದು ನಿಜಕ್ಕೂ ಗ್ರೇಟ್!
ಅಷ್ಟೊಂದು ಬರೆದರೂ ಬಡತನ ಬೆನ್ನು ಬಿಡಲಿಲ್ಲ!
ಮೊದಲ 150 ಕಾದಂಬರಿಗಳು ಮುಗಿಯುವತನಕ ಅವರು ಒಂದು ಕಾದಂಬರಿಗೆ ಪಡೆಯುತ್ತಿದ್ದ ಗೌರವ ಧನ 50-60 ರೂಪಾಯಿ ಮಾತ್ರ ಎಂದರೆ ನಾವು ನಂಬಲೇ ಬೇಕು. ಮುಂದೆ ತನ್ನ ಪುಸ್ತಕಗಳ ಬೆಲೆಯ 10% ಗೌರವಧನಕ್ಕೆ ಅವರು ಬೇಡಿಕೆ ಇಟ್ಟರೂ ಎಷ್ಟೋ ಪ್ರಕಾಶಕರು ಅವರಿಗೆ ಮೋಸ ಮಾಡಿದರು. ಒಂದು ಸಾವಿರ ಪ್ರತಿಗಳು ಎಂದು ಹೇಳಿ ಐದರಿಂದ ಹತ್ತು ಸಾವಿರ ಪ್ರತಿಗಳನ್ನು ಪ್ರಿಂಟ್ ಮಾಡಿ ಮಾರುತ್ತಿದ್ದರು! ನರಸಿಂಹಯ್ಯ ಅವರಿಗೆ ಹೇಳದೆ ಅವರ ಪುಸ್ತಕ ಮರುಮುದ್ರಣ ಆಗುತ್ತಿತ್ತು. ಸಂತನ ಹಾಗೆ ಸರಳವಾಗಿ ಬದುಕುತ್ತಿದ್ದ ನರಸಿಂಹಯ್ಯ ಅಷ್ಟು ಪುಸ್ತಕ ಬರೆದರೂ ದಾರಿದ್ರ್ಯದಲ್ಲಿ ಬದುಕಿದರು. ಬಡತನದಲ್ಲಿಯೇ ಕಣ್ಣು ಮುಚ್ಚಿದರು (2011).
ಆದರೆ ಅವರ ಕಾದಂಬರಿಗಳನ್ನು ಪ್ರಕಾಶನ ಮಾಡಿದವರು ಎಷ್ಟೋ ಮಂದಿ ಕೋಟ್ಯಾಧಿಪತಿ ಆದರು ಅನ್ನೋದು ಕನ್ನಡದ ದುರಂತ!
ಇದನ್ನೂ ಓದಿ: ರಾಜಮಾರ್ಗ ಅಂಕಣ: 28 ಒಲಿಂಪಿಕ್ ಪದಕಗಳ ವಿಶ್ವದಾಖಲೆ- ಮೈಕೆಲ್ ಫೆಲ್ಪ್ಸ್