ಇಂದು ಕಾರ್ಗಿಲ್ ವಿಜಯ ದಿವಸದ ರಜತ ಮಹೋತ್ಸವ
ರಾಜಮಾರ್ಗ ಅಂಕಣ: ಭಾರತವು ಗೆದ್ದ ಅತ್ಯಂತ ಕಠಿಣ ಯುದ್ಧ (Kargil Vijay Diwas) ಅದು! 1999ರಲ್ಲಿ ಭಾರತೀಯ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ವಿ.ಪಿ ಮಲಿಕ್ ಬರೆದಿರುವ ‘KARGIL – FROM SURPRISE TO VICTORY’ ಓದುತ್ತಾ ಹೋದಂತೆ ನಾನು ಹಲವಾರು ಬಾರಿ ಬೆಚ್ಚಿಬಿದ್ದಿದ್ದೇನೆ! ಯಾಕೆಂದರೆ ಅದು ಭಾರತವು ಎದುರಿಸಿದ ಅತ್ಯಂತ ಕಠಿಣವಾದ ಯುದ್ಧ (India0 Pakistan War) ಮತ್ತು ದೀರ್ಘಕಾಲದ ಯುದ್ಧ. ಪಾಕಿಸ್ತಾನ (Pakistan) ಎಂಬ ದ್ರೋಹಿ ರಾಷ್ಟ್ರವನ್ನು ಇನ್ನು ಮುಂದೆ ಯಾವಾಗಲೂ ನಂಬಲೇ ಬಾರದು ಎಂಬ ಪಾಠವನ್ನು ಭಾರತಕ್ಕೆ ಕಲಿಸಿಹೋದ ಮೃತ್ಯುಂಜಯ ಯುದ್ಧ ಅದು!
ಯುದ್ಧದ ಹಿನ್ನೆಲೆ – ಮುಷರಫ್ ಕುತಂತ್ರ
ಆಗಷ್ಟೇ ಭಾರತವು ಅಣುಪರೀಕ್ಷೆ ಮಾಡಿ ಜಗತ್ತಿನ ಕಣ್ಣು ಕೋರೈಸುವ ಸಾಧನೆಯನ್ನು ಮಾಡಿತ್ತು. ಪಾಕ್ ಕೂಡ ಅಮೇರಿಕಾದ ನೆರವು ಪಡೆದು ತನ್ನ ಬಳಿ ಅಣುಬಾಂಬು ಇದೆ ಎಂದು ಹೇಳಿಕೊಂಡಿತ್ತು. ಆಗ ಭಾರತದ ಪ್ರಧಾನಿ ಆಗಿದ್ದ ವಾಜಪೇಯಿ (Atal Bihari Vajpayee) ಅವರು ತುಂಬಾ ಮೃದು ನಿಲುವಿನ ನಾಯಕ ಎಂದು ಪಾಕ್ ನಂಬಿ ಕುಳಿತಿತ್ತು. ಪಾಕಿಸ್ಥಾನಕ್ಕೆ ಜಗತ್ತಿನ ಅತೀ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ (Siachin) ವಶಪಡಿಸಿಕೊಳ್ಳಬೇಕು ಎಂಬ ದುರಾಸೆ. ಅಲ್ಲಿಂದ ಮುಂದೆ ಕಾರ್ಗಿಲ್ ಮತ್ತು ಮುಂದೆ ಇಡೀ ಕಾಶ್ಮೀರವನ್ನು ಕಬಳಿಸಬೇಕು ಎನ್ನುವ ಮಾಸ್ಟರ್ ಪ್ಲಾನ್! ಆಗ ಪಾಕಿಸ್ತಾನದ ಸೇನಾ ನಾಯಕ ಪರ್ವೇಜ್ ಮುಷರಫ್ (Parvez Musharraf) ಹೊಂಚು ಹಾಕಿ ಕುಳಿತ ಕಾಲ ಅದು.
ಅದಕ್ಕೆ ಪೂರಕವಾಗಿ 1998ರ ಜೂನ್ ತಿಂಗಳಿಂದಲೇ ಪಾಕಿಸ್ಥಾನದ 5000ರಷ್ಟು ಸೈನಿಕರು ಲೈನ್ ಆಫ್ ಕಂಟ್ರೋಲ್ ದಾಟಿ ಭಾರತದ 4-10 ಕಿ.ಮೀ. ಒಳಗೆ ಬಂದು ಎತ್ತರದ ಪ್ರದೇಶದಲ್ಲಿ ಜಮಾವಣೆ ಆಗತೊಡಗಿದ್ದರು! ಅವರ ಬಳಿಗೆ ಆಧುನಿಕ ಶಸ್ತ್ರಾಸ್ತ್ರಗಳು ಬಂದು ತಲುಪಿದ್ದವು. ಆದರೆ 1999ರ ಮೇ 18ರವರೆಗೆ ಭಾರತ ಸರಕಾರಕ್ಕೆ ಇದರ ಬಗ್ಗೆ ಮಾಹಿತಿಯೇ ಇರಲಿಲ್ಲ. ಭಾರತೀಯ ಸೇನಾ ಗೂಢಚಾರ ಸಂಸ್ಥೆಯವರು ಇನ್ನೂ ಸ್ವಲ್ಪ ದಿನ ಮೈಮರೆತಿದ್ದರೆ…! ಆ ಕುರಿಗಾಹಿ ಹುಡುಗರು ಆ ನುಸುಳುಕೋರ ಸೈನಿಕರ ಬಗ್ಗೆ ಭಾರತೀಯ ಸೇನೆಗೆ ಮಾಹಿತಿ ಕೊಡದೇ ಹೋಗಿದ್ದರೆ…! ನಾನು ಬೆಚ್ಚಿ ಬಿದ್ದದ್ದು ಆಗ.
ಭಾರತದ ಸೈನಿಕರ ಬಳಿ ಯುದ್ಧದ ಸಿದ್ಧತೆಗೆ ಸಮಯ ಇರಲಿಲ್ಲ
ಗಡಿಯ ಒಳಗೆ ಅಷ್ಟು ದೊಡ್ಡ ಸಂಖ್ಯೆಯ ಸೈನಿಕರು ನುಸುಳಿಬಂದ ವಿಷಯ ಭಾರತಕ್ಕೆ ಗೊತ್ತಾಯಿತು ಅಂದಾಗ ಮುಷರಫ್ ಅಲರ್ಟ್ ಆದರು. ಅವರು ನಮ್ಮ ಸೈನಿಕರೇ ಅಲ್ಲ, ಯಾವುದೋ ಭಯೋತ್ಪಾದಕ ಸಂಘಟನೆಯವರು ಎಂದು ಬಿಟ್ಟರು ಮುಷರಫ್! ಆದರೆ ಈಗ ಭಾರತದ ಪ್ರಧಾನಿ ವಾಜಪೇಯಿ, ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಸೇನಾ ಮುಖ್ಯಸ್ಥರನ್ನು ಕರೆಸಿ ಯುದ್ಧ ಘೋಷಣೆ ಮಾಡಿಬಿಟ್ಟರು. ಆದರೆ ಭಾರತೀಯ ಸೈನ್ಯಕ್ಕೆ ಆ ಯುದ್ಧಕ್ಕೆ ಸಿದ್ಧತೆ ಮಾಡಲು ದೊರೆತದ್ದು 24 ಘಂಟೆ ಮಾತ್ರ! ಆದರೂ 1999ರ ಮೇ 3ರಂದು ಭಾರತ ಯುದ್ಧ ಘೋಷಣೆ ಮಾಡಿ ಆಗಿತ್ತು!
ಆರಂಭದಲ್ಲಿ ಭಾರತಕ್ಕೆ ಹಿನ್ನಡೆ ಆದದ್ದು ನಿಜ. ಆದರೆ ಮೇ 30 ಆಗುವಾಗ ಭಾರತದ 30,000 ಸೈನಿಕರು ಟೈಗರ್ ಹಿಲ್ ಬಳಿ ಬಂದು ಜಮಾವಣೆ ಮಾಡಿ ಆಗಿತ್ತು. ಭಾರತದ ಭೂಸೈನ್ಯ ಮತ್ತು ವಾಯು ಸೈನ್ಯಗಳು ವೀರಾವೇಶದಿಂದ ಹೋರಾಟಕ್ಕೆ ಇಳಿದಿದ್ದವು. ಎರಡೂ ಕಡೆಯ ಸೈನಿಕರು, ಬಾಂಬುಗಳು, ಮದ್ದುಗುಂಡುಗಳು, ಶೆಲ್‌ಗಳು ಸಿಡಿಯುತ್ತ ಕಾರ್ಗಿಲ್ ಯುದ್ಧಭೂಮಿಯು ರಕ್ತದಲ್ಲಿ ಒದ್ದೆಯಾಗುತ್ತಾ ಹೋಯಿತು. ಟೈಗರ್ ಹಿಲ್ ಏರಿ 10 ಪಾಕ್ ಸೈನಿಕರ ಹತ್ಯೆಯನ್ನು ನಮ್ಮ ಸೈನಿಕರು ಮಾಡಿದಾಗ ಭಾರತವು ಯುದ್ಧದಲ್ಲಿ ಸಣ್ಣ ಮೇಲುಗೈ ಸಾಧಿಸಿತು.
ಅಲ್ಲಿಂದ ಮುಂದೆ ಭಾರತದ ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಸ್ವತಃ ಯುದ್ಧಭೂಮಿಗೆ ಬಂದು ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಿದ್ದು, ಪ್ರಧಾನಿ ವಾಜಪೇಯಿ ವಾರ್ ರೂಮಿನಲ್ಲಿ ಕುಳಿತು ಸೈನ್ಯಕ್ಕೆ ನಿರ್ದೇಶನವನ್ನು ಕೊಟ್ಟದ್ದು ಭಾರತವನ್ನು ಗೆಲ್ಲಿಸುತ್ತಾ ಹೋದವು. 75 ದಿನಗಳ ಘನಘೋರ ಯುದ್ಧದ ನಂತರ ಭಾರತ ಜುಲೈ 26ರಂದು ದ್ರಾಸ್ ಪರ್ವತದ ತಪ್ಪಲಲ್ಲಿ ಇದ್ದ ಕೊನೆಯ ಪಾಕ್ ಸೈನಿಕನನ್ನೂ ಹೊಸಕಿ ಹಾಕಿದಾಗ ಭಾರತ ವಿಜಯೋತ್ಸವ ಆಚರಣೆ ಮಾಡಿತು. ಕಾರ್ಗಿಲ್ ಮೈದಾನದಲ್ಲಿ ಸೈನಿಕರ ನಡುವೆ ತ್ರಿವರ್ಣಧ್ವಜ ಹಾರಿಸಿದ ಕ್ಷಣವೇ ಕಾರ್ಗಿಲ್ ವಿಜಯ ದಿನ.
ಹುತಾತ್ಮರಾದವರು ಭಾರತದ 527 ಸೈನಿಕರು!
ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಸೈನಿಕರ ಬಲಿದಾನ ಭಾರತಕ್ಕೆ ಒಂದು ದೊಡ್ಡ ವಿಜಯವನ್ನು ತಂದುಕೊಟ್ಟಿತ್ತು. ಅದರಲ್ಲಿ ಕರ್ನಾಟಕದ 21 ಸೈನಿಕರೂ ಇದ್ದರು. ಸಾವಿರಾರು ಯೋಧರು ತೀವ್ರವಾಗಿ ಗಾಯಗೊಂಡರು. ಪಾಕಿಸ್ತಾನವೂ ದೊಡ್ಡ ಸಂಖ್ಯೆಯ ಸೈನಿಕರನ್ನು ಕಳೆದುಕೊಂಡಿತ್ತು.
ನಮ್ಮ ಸೈನಿಕರಾದ ಸಿಯಾಚಿನ್ ಹೀರೋ ನಾಯಬ್ ಸುಬೇದಾರ್ ಬಾಣಾ ಸಿಂಗ್, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಮೇಜರ್ ಪದ್ಮಪಾಣಿ ಆಚಾರ್ಯ, ಗ್ರೆನೆಡಿಯರ್ ಯೋಗೇಂದರ್ ಸಿಂಘ್ ಯಾದವ್, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ಅನುಜ್ ನಯ್ಯರ್, ಲೆಫ್ಟಿನೆಂಟ್ ಬಲವಾನ್ ಸಿಂಘ್, ರೈಫಲ್ ಮ್ಯಾನ್ ಸಂಜಯ ಕುಮಾರ್, ಕ್ಯಾಪ್ಟನ್ ವಿಜಯವಂತ್ ಥಾಪರ್, ಮೇಜರ್ ಸೋನಂ ವಾಂಗಚುಕ್, ಲೆಫ್ಟಿನೆಂಟ್ ಕರ್ನಲ್ ವೈ.ಕೆ. ಜೋಷಿ ಇವರೆಲ್ಲರೂ ನಿಜವಾದ ಕಾರ್ಗಿಲ್ ಹೀರೋಗಳು. ಅದರಲ್ಲಿ ಹೆಚ್ಚಿನವರು ಹುತಾತ್ಮರಾದವರು. ಅವರಿಗೆಲ್ಲ ವಿವಿಧ ಸೇನಾ ಶೌರ್ಯ ಪ್ರಶಸ್ತಿಗಳನ್ನು ನೀಡಿ ಭಾರತ ಸರಕಾರವು ಗೌರವಿಸಿತು.
ಕಾರ್ಗಿಲ್ ಯುದ್ಧದ ಫಲಶ್ರುತಿ ಏನೆಂದರೆ ಮುಂದೆ ಭಾರತವು ಎಂದಿಗೂ ಪಾಕಿಸ್ತಾನವನ್ನು ನಂಬಲಿಲ್ಲ ಮತ್ತು ಪಾಕಿಸ್ತಾನ ಯಾವತ್ತೂ ಭಾರತದ ಮೇಲೆ ಮತ್ತೆ ದಂಡೆತ್ತಿ ಬರುವ ಸಾಹಸವನ್ನು ಮಾಡಲಿಲ್ಲ!
ಜೈ ಹಿಂದ್.
ಇದನ್ನೂ ಓದಿ: ರಾಜಮಾರ್ಗ ಅಂಕಣ: ಕನ್ನಡದ ಶ್ರೇಷ್ಠ ಲೇಖಕ ನಿರಂಜನರನ್ನು ನಾಡು ಮರೆತರೆ ಹೇಗೆ?