Site icon Vistara News

ರಾಜಮಾರ್ಗ ಅಂಕಣ: ಪ್ರತಿಭೆಗಳು ಹಾವುಗಳ ಹಾಗೆ, ಯಾವುದೋ ಹುತ್ತದಲ್ಲಿ ಅಡಗಿರುತ್ತವೆ!

mayank yadav

ಮಯಾಂಕ್ ಯಾದವ್ 156.7 ಕಿಮೀ ವೇಗವನ್ನು ಪಡೆದದ್ದು ಹೇಗೆ?

ರಾಜಮಾರ್ಗ ಅಂಕಣ: ವರ್ಷ ಐಪಿಎಲ್ (IPL) ಪಂದ್ಯಗಳನ್ನು ನೀವು ನೋಡುತ್ತಿದ್ದರೆ ಈ ಬೌಲರ್ (Bowler) ಮಿಸ್ ಆಗುವ ಸಾಧ್ಯತೆಯೇ ಇಲ್ಲ. ಲಕ್ನೋ ಸೂಪರ್ ಜಯಂಟ್ಸ್ (Lucknow Super Jaints) ತಂಡದ ಪರವಾಗಿ ಆಡುತ್ತಿರುವ ಈ ವೇಗದ ಬೌಲರ್ ದಾಖಲೆಯ 156.7 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ್ದು, ಸತತ ಎರಡು ಪಂದ್ಯಗಳಲ್ಲಿ ದಿಗ್ಗಜ ಆಟಗಾರರನ್ನು ಔಟ್ ಮಾಡಿದ್ದು, ಎರಡೂ ಪಂದ್ಯಗಳಲ್ಲಿ ‘ಮ್ಯಾನ್ ಆಫ್ ದ ಮ್ಯಾಚ್’ ಪ್ರಶಸ್ತಿಗಳನ್ನು ತನ್ನದಾಗಿಸಿದ್ದನ್ನು ನೋಡುತ್ತಿದ್ದರೆ ಭಾರತೀಯ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಭವಿಷ್ಯದ ಕೋಲ್ಮಿಂಚು ಕಣ್ಣ ಮುಂದೆ ಬರುತ್ತದೆ. ಆತನು ಮುಂದಿನ ಟಿ 20 ವಿಶ್ವಕಪ್ (T20 Worldcup) ಆಡಬೇಕು ಎಂದು ಕ್ರಿಕೆಟ್ ಅಭಿಮಾನಿಗಳು ಆಗ್ರಹ ಮಾಡುತ್ತಿದ್ದಾರೆ ಅಂದರೆ ಆತನ ದೈತ್ಯ ಪ್ರತಿಭೆ ಥಟ್ಟನೆ ಗಮನ ಸೆಳೆಯುತ್ತದೆ.

ಯಾರೀ ಮಯಾಂಕ್ ಯಾದವ್?

ದೆಹಲಿಯಲ್ಲಿ ಪೊಲೀಸ್ ವಾಹನಗಳಿಗೆ ಸೈರನ್ ಅಳವಡಿಸುವ ಸಣ್ಣ ಉದ್ಯಮ ನಡೆಸುತ್ತಿರುವ ಪ್ರಭು ಯಾದವ್ ಅವರ ಮಗ ಮಯಾಂಕ್. ಚಿಕ್ಕಂದಿನಿಂದ ವೇಗದ ಬೌಲರ್ ಆಗಬೇಕು ಎನ್ನುವ ಕನಸು. ಆತನ ಕನಸಿಗೆ ಎಲ್ಲಾ ರೀತಿಯ ಸಪೋರ್ಟ್ ಅಪ್ಪನದ್ದು. ಮಗನನ್ನು ಕರೆದುಕೊಂಡು ದೆಹಲಿಯ ಎಲ್ಲ ಕ್ರಿಕೆಟ್ ಕ್ಲಬ್ ಬಾಗಿಲು ಬಡಿದರೂ ಯಾರೂ ಅವರನ್ನು ಕರೆದು ಮಾತನಾಡಿಸಲಿಲ್ಲ. ಯಾರೂ ಒಳಗೆ ಬಿಡಲಿಲ್ಲ. ಕೊನೆಗೆ ಅಪ್ಪ ದುಂಬಾಲು ಬಿದ್ದ ನಂತರ ಪ್ರಸಿದ್ಧವಾದ ಸಾನೆಟ್ ಕ್ಲಬ್ ಆತನ ಮೇಲೆ ಭರವಸೆ ಇಟ್ಟಿತು. ಖ್ಯಾತ ಕ್ರಿಕೆಟ್ ಕೋಚ್ ತಾರಕ್ ಸಿನ್ಹಾ ಆತನ ಪ್ರತಿಭೆಯನ್ನು ಗುರುತಿಸಿದರು. ಆತನ ಶಕ್ತಿಶಾಲಿ ಮತ್ತು ಉದ್ದವಾದ ತೋಳುಗಳಿಗೆ ಹೈ ಆರ್ಮ್ ಆಕ್ಷನ್ ಕಲಿಸಿಕೊಟ್ಟರು. ವೇಗದ ಜೊತೆಗೆ ನಿಖರತೆ, ಗುಡ್ ಲೆಂಥ್, ನಿಯಂತ್ರಣ, ಬೌನ್ಸ್, ಸ್ವಿಂಗ್ ಎಲ್ಲವನ್ನೂ ಕಲಿಸಿದರು. ಮಯಾಂಕ್ ಎಲ್ಲವನ್ನೂ ವೇಗವಾಗಿ ಕಲಿಯುತ್ತಾ ಹೋದರು. ಕೋಚ್ ತಾರಕ್ ಸಿನ್ಹಾ ಆತನಿಗೆ ಪ್ರತಿಭೆಗೆ ಮಾರುಹೋಗಿ ಶುಲ್ಕವನ್ನು ಪಡೆಯದೆ ಆತನಿಗೆ ಕೋಚಿಂಗ್ ನೀಡಿದರು.

ವಿಜಯ್ ಹಜಾರೆ ಟ್ರೋಫಿ ಆತನಿಗೆ ಉಡ್ಡಯನ ವೇದಿಕೆ ಆಯ್ತು

2021ರ ವಿಜಯ ಹಜಾರೆ ಟ್ರೋಫಿಗೆ ಆತನಿಗೆ ಅವಕಾಶ ದೊರಕಿದ್ದು ಆತನ ಭಾಗ್ಯದ ಬಾಗಿಲು ತೆರೆಯುವಂತೆ ಮಾಡಿತ್ತು. ಗುರುಶರಣ್ ಸಿಂಘ್ ಆತನನ್ನು ದೊಡ್ಡ ರೀತಿಯಲ್ಲಿ ಪ್ರಭಾವ ಬಳಸಿ ದೆಹಲಿ ತಂಡಕ್ಕೆ ಆಯ್ಕೆ ಆಗುವಂತೆ ಮಾಡಿದ್ದರು. ಮೊದಲ ವರ್ಷದ ಎರಡು ಪಂದ್ಯಗಳಲ್ಲಿ ಆರು ವಿಕೆಟ್ ಪಡೆದಾಗ, ಮುಂದಿನ ವರ್ಷ ಮತ್ತೆ ಹತ್ತು ವಿಕೆಟ್ ಪಡೆದಾಗ ಕ್ರಿಕೆಟ್ ಪಂಡಿತರು ಹುಬ್ಬೇರಿಸಿ ಆತನನ್ನು ಗಮನಿಸಿದರು. ಕಪಿಲ್ ದೇವ್, ಚೇತನ್ ಶರ್ಮಾ, ಆಶೀಶ್ ನೆಹ್ರಾ, ವರುಣ್ ಆರೋನ್, ಉಮ್ರಾನ್ ಮಲಿಕ್, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅಜಿತ್ ಅಗರ್ಕರ್, ಇರ್ಫಾನ್ ಪಠಾಣ್ ಮೊದಲಾದ ವೇಗದ ಬೌಲಿಂಗ್ ಲೆಜೆಂಡಗಳ ಸಾಲಿನಲ್ಲಿ ಒಬ್ಬ ಉತ್ತರಾಧಿಕಾರಿ ದೊರೆತಿದ್ದಾನೆ ಎಂದು ಕೊಂಡಾಡಿದರು. ಕ್ರಿಕೆಟ್ ಪಂಡಿತರ ನಿರೀಕ್ಷೆಗೆ ಸರಿಯಾಗಿ ಮಯಾಂಕ್ ಆಟವಾಡುತ್ತ ಹೋದರು. ದೆಹಲಿ ಪರವಾಗಿ ಹಲವು ರಣಜಿ ಪಂದ್ಯಗಳನ್ನೂ ಆಡಿದರು.

ಈ ವರ್ಷದ ಐಪಿಎಲ್ ತಾರೆ ಮಯಾಂಕ್.

ಸಾಕಷ್ಟು ನವೋದಿತ ತಾರೆಗಳೇ ತುಂಬಿರುವ ಲಕ್ನೋ ಸೂಪರ್ ಜಯಂಟ್ಸ್ ತಂಡವು ಕಳೆದ ವರ್ಷ ಆತನನ್ನು 20 ಲಕ್ಷ ಕೊಟ್ಟು ಖರೀದಿ ಮಾಡಿತ್ತು. ಆದರೆ ಗಾಯದ ಕಾರಣಕ್ಕೆ ಮಯಾಂಕ್ ಒಂದು ಪಂದ್ಯವನ್ನೂ ಆಡಲು ಸಾಧ್ಯ ಆಗಲಿಲ್ಲ. ಆದರೆ ಈ ಬಾರಿ ಮತ್ತೆ ಅದೇ ತಂಡ ಆತನ ಮೇಲೆ ವಿಶ್ವಾಸ ಇಟ್ಟು ಖರೀದಿ ಮಾಡಿದಾಗ ಮಯಾಂಕ್ ಆ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಹಾಗೆ ಅನ್ನಿಸುತ್ತದೆ. ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಖ್ಯಾತನಾಮ ಬ್ಯಾಟರಗಳಾದ ಜಾನಿ ಬೇರ್ಸ್ಟ್ರೋ, ಪ್ರಭಸಿಮ್ರನ್ ಸಿಂಗ್, ಜಿತೆಶ್ ಶರ್ಮ ಅವರನ್ನು ಔಟ್ ಮಾಡಿದ ರೀತಿ ಅದ್ಬುತವಾಗಿ ಇತ್ತು. ಮೊದಲ ಪಂದ್ಯದಲ್ಲಿ ‘ಮ್ಯಾನ್ ಆಫ್ ದ ಮ್ಯಾಚ್’ ಪ್ರಶಸ್ತಿ ದೊರೆಯಿತು. ಎರಡನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ. ಅಲ್ಲಿ ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್ ಅವರನ್ನು ಬೀಟ್ ಮಾಡಿದ ಎಸೆತಗಳು ಅದ್ಭುತವೇ ಆಗಿದ್ದವು. ಆ ಪಂದ್ಯದಲ್ಲಿ ದಾಖಲೆಯ 156.7 ಕಿಮೀ ವೇಗದ ಬಾಲ್ ದಾಖಲಾಯಿತು. ಆ ಪಂದ್ಯದಲ್ಲಿ ಕೇವಲ 14 ರನ್ನಿಗೆ ಮೂರು ವಿಕೆಟ್ ಮತ್ತು ‘ಮ್ಯಾನ್ ಆಫ್ ದ ಮ್ಯಾಚ್’ ಪ್ರಶಸ್ತಿ ದೊರೆಯಿತು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ನೇಪಾಳ ಸರಕಾರದ ದುರಾಸೆಗೆ ಬಲಿ ಆಗುತ್ತಿದೆ ದೇವ ಶಿಖರ

ದಿಗ್ಗಜರಿಂದ ಶಹಬ್ಬಾಸ್

ಕ್ರಿಕೆಟ ದಿಗ್ಗಜರಾದ ಡೆಲ್ ಸ್ಟೇನ್, ಸ್ಟುವರ್ಟ್ ಬ್ರಾಡ್, ಸ್ಟೀವ್ ಸ್ಮಿತ್ ಆತನ ಬೌಲಿಂಗ್ ಕೌಶಲ್ಯವನ್ನು ಹಾಡಿ ಹೊಗಳಿದ್ದಾರೆ. ಆತನ ಪ್ರತೀಯೊಂದು ಎಸೆತವು ಗುಡ್ ಲೆಂಥ್ ಸ್ಪಾಟನಲ್ಲಿ ಬಿದ್ದು ಆಫ್ ಸ್ಟಂಪ್ ಸೀಳಿಕೊಂಡು ಹೋಗುವುದನ್ನು ನೋಡುವುದೇ ಒಂದು ವಿಸ್ಮಯ ಎಂದು ಡೆಲ್ ಸ್ಟೆನ್ ಹೇಳಿದ್ದಾರೆ.

ದೇಶಕ್ಕಾಗಿ ಆಡುವ ಬಯಕೆ

ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡುವ ಬಯಕೆ ತನಗಿದೆ ಎಂದು ಹೇಳಿರುವ ಮಯಾಂಕ್ ಪ್ರತಿಭೆಯನ್ನು ಜತನದಿಂದ ಕಾಪಾಡುವುದು ಬಿಸಿಸಿಐ ಹೊಣೆ. ಹಾಗೆಯೇ ವೇಗದ ಬೌಲರಗಳಿಗೆ ಶಾಪವಾಗಿ ಕಾಡುವ ಬೆನ್ನು ನೋವು ಮೊದಲಾದ ದೈಹಿಕ ಸಮಸ್ಯೆಗಳಿಗೆ ಮಯಾಂಕ್ ಸಿಲುಕದಿರಲಿ ಎಂಬ ಹಾರೈಕೆ ಕ್ರಿಕೆಟ್ ಪ್ರೇಮಿಗಳದ್ದು. ಮಯಾಂಕ್ ಭಾರತದ ಭವಿಷ್ಯದ ಕ್ರಿಕೆಟ್ ತಾರೆ ಎನ್ನುವುದರಲ್ಲಿ ಯಾವ ಅನುಮಾನ ಕೂಡ ಬೇಡ.

ಆಲ್ ದ ಬೆಸ್ಟ್ ಮಯಾಂಕ್.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಮೊಂಡು ಕೈಗಳಿಂದ ಜಗತ್ತನ್ನು ಗೆಲ್ಲಲು ಹೊರಟ ಹೋರಾಟಗಾರನ ಕಥೆ

Exit mobile version