Site icon Vistara News

ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್- ಆಯ್ಕೆ ಮಂಡಳಿ ನಿರ್ಧಾರ ಸರಿ ಇದೆಯೇ?

rajamarga column t20 world cup team

ಕೆ.ಎಲ್ ರಾಹುಲ್, ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ಮಿಸ್ ಆದದ್ದು ಹೇಗೆ?

ರಾಜಮಾರ್ಗ ಅಂಕಣ: ಆಲ್ ದ ಬೆಸ್ಟ್ ಟೀಮ್ ಇಂಡಿಯಾ!

ಐಪಿಎಲ್ (IPL) ಕಾರಣಕ್ಕೆ ಭಾರತದಲ್ಲಿ ನೂರಾರು ಕ್ರಿಕೆಟ್ (Cricket) ಪ್ರತಿಭೆಗಳು ಪ್ರಕಾಶನಕ್ಕೆ ಬಂದಿವೆ. ಹತ್ತು ಕ್ರಿಕೆಟ್ ಟೀಮ್ ರಚಿಸಲು ಸಾಧ್ಯ ಇರುವಷ್ಟು ಆಟಗಾರರು ಈಗ ಭಾರತದಲ್ಲಿ ಇದ್ದಾರೆ! ಅದರಿಂದಾಗಿ ಈ ಬಾರಿ ಕ್ರಿಕೆಟ್ ಆಯ್ಕೆ ಮಂಡಳಿಯು ಸಾಕಷ್ಟು ಅಳೆದು ತೂಗಿ ಒಂದು ಬಲಿಷ್ಠವಾದ ಟಿ 20 (T20) ತಂಡವನ್ನು ವಿಶ್ವಕಪ್‌ಗೆ (World Cup) ಆಯ್ಕೆ ಮಾಡಿದೆ. ಅದರಲ್ಲಿ ಒಂದಿಷ್ಟು ಅಪಸ್ವರ, ಒಂದಿಷ್ಟು ಭಿನ್ನ ಧ್ವನಿಗಳು ಬರುವುದು ಸಹಜವೇ ಆಗಿದೆ.

ಆದರೆ ಸ್ಟ್ರಾಟಜಿಯ ದೃಷ್ಟಿಯಿಂದ ಈ ಬಾರಿ ಆರಿಸಿದ ತಂಡವು ಹೆಚ್ಚು ಸಮತೋಲಿತ ಎಂದು ಖಂಡಿತವಾಗಿ ಹೇಳಬಹುದು.

ರೋಹಿತ್ ಶರ್ಮ – ಉತ್ತಮ ಕ್ಯಾಪ್ಟನ್

ರೋಹಿತ್ ಶರ್ಮ (Rohit Sharama) ಸದ್ಯಕ್ಕೆ ಭಾರತದ ಯಶಸ್ವೀ ಕ್ಯಾಪ್ಟನ್. ಐದು ಬಾರಿ ಐಪಿಲ್ ಟ್ರೋಫಿ ಎತ್ತಿದ ಸಾಧನೆ ಆತನದ್ದು. ಹಾಗೆಯೇ ಮೊನ್ನೆ ನಡೆದ ಕ್ರಿಕೆಟ್ ವಿಶ್ವಕಪ್ಪಿನಲ್ಲಿ ಅದ್ಭುತವಾಗಿ ಆಡಿ ಫೈನಲ್ ತನಕ ಬಂದ ಸಾಧನೆಯು ಸಣ್ಣದಲ್ಲ. ಆರಂಭಿಕ ಆಟಗಾರನಾಗಿ ಸಲೀಸಾಗಿ ಬೌಂಡರಿ, ಸಿಕ್ಸರ್ ಎತ್ತುವ ಛಾತಿ ಆತನಿಗೆ ಇದೆ. ಆದ್ದರಿಂದ ರೋಹಿತ್ ಶರ್ಮಾ ಆಯ್ಕೆಯು ನಿರ್ವಿವಾದ.

ಉಪನಾಯಕನಾಗಿ ಸಂಜು ಸ್ಯಾಮ್ಸನ್ ಅಥವಾ ರಿಷಭ್ ಪಂತ್ ಅವರಿಗೆ ಹೊಣೆ ನೀಡುವ ನಿರೀಕ್ಷೆ ಇತ್ತು. ಆದರೆ ಆಯ್ಕೆ ಮಂಡಳಿ ರಿಸ್ಕ್ ತೆಗೆದುಕೊಳ್ಳಲು ಹೋಗದೆ ಪಾಂಡ್ಯ ಅವರನ್ನೇ ಮುಂದುವರೆಸಿದೆ. ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಆತನ ನಾಯಕತ್ವದ ಹೆಚ್ಚಿನ ನಿರ್ಧಾರಗಳು ಟೀಕೆಗೆ ಗುರಿಯಾಗಿವೆ. ಆದರೆ ಪಾಂಡ್ಯ ಒಬ್ಬ ಆಲರೌಂಡರ್ ಮತ್ತು ಹೋರಾಟಗಾರ ಎಂಬ ಕಾರಣಕ್ಕೆ ಆತನಿಗೆ ತಂಡದಲ್ಲಿ ಸ್ಥಾನ ದೊರೆತಿದೆ ಎನ್ನುತ್ತದೆ ಆಯ್ಕೆ ಮಂಡಳಿ. ಆತನ ಬದಲಿಗೆ ತಿಲಕ್ ವರ್ಮ, ಸಾಯಿ ಸುದರ್ಶನ್ ಅಥವಾ ರುಥುರಾಜ್ ಗಾಯಕವಾಡ್ ಆಯ್ಕೆ ಆಗಿದ್ದರೆ ಚೆನ್ನಾಗಿತ್ತು ಎಂದು ಕ್ರಿಕೆಟ್ ಪ್ರೇಮಿಗಳು ಗಟ್ಟಿಯಾಗಿ ಹೇಳುತ್ತಿದ್ದಾರೆ. ಒಬ್ಬ ಬೌಲಿಂಗ್ ಆಲ್ರೌಂಡರ್ ಎಂಬ ದೃಷ್ಟಿಯಿಂದ ಹಾರ್ದಿಕ್ ಆಯ್ಕೆ ಆಗಿರಬಹುದು.

rajamarga column t20 world cup team

ಯಶಸ್ವೀ ಜೈಸ್ವಾಲ್ ಆಯ್ಕೆಯಲ್ಲಿ ಯಾರಿಗೂ ಅಚ್ಚರಿ ಆಗಲು ಸಾಧ್ಯವೇ ಇಲ್ಲ. ಕ್ರಿಕೆಟಿನ ಮೂರೂ ಫಾರ್ಮಾಟಗಳಲ್ಲಿ ಆತನ ನಿರ್ವಹಣೆಯು ತುಂಬಾ ಚೆನ್ನಾಗಿದೆ. ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಆತ ವಿಫಲನಾದರೂ ಈಗ ನಿಧಾನಕ್ಕೆ ಫಾರ್ಮ್ ಕಂಡು ಕೊಂಡಿದ್ದಾರೆ. ಆತನ ಆಕ್ರಮಣಶೀಲತೆ ಮತ್ತು ಹೊಡೆತಗಳ ಆಯ್ಕೆ ಚೆನ್ನಾಗಿರುವ ಕಾರಣ ಆತನ ಮೇಲೆ ಆಯ್ಕೆ ಮಂಡಳಿ ಭರವಸೆ ಇಟ್ಟ ಹಾಗಿದೆ.

ಕೊಹ್ಲಿ ಆಯ್ಕೆಯು ನಿರೀಕ್ಷಿತ

ವಿಶ್ವ ಕ್ರಿಕೆಟಿನ ಅತ್ಯದ್ಭುತ ಆಟಗಾರ ವಿರಾಟ್ ಕೊಹ್ಲಿ ಆಯ್ಕೆ ನಿರೀಕ್ಷಿತ. ಅದರೆ ಈ ಬಾರಿಯ ಐಪಿಲ್ ಪಂದ್ಯಗಳಲ್ಲಿ ಆತನ ಆಕ್ರಮಣಶೀಲತೆಯು ಕಡಿಮೆ ಆಗಿದೆ(?) ಎಂಬಂತೆ ಕಾಣುತ್ತಿರುವ ಕಾರಣ ಆತನನ್ನು ನಂಬರ್ 3 ಸ್ಥಾನಕ್ಕೆ ಆಡಿಸಬಹುದು ಅಥವಾ ನಂಬರ್ 3 ಸ್ಥಾನಕ್ಕೆ ಸಂಜು ಸಾಮ್ಸನ್ ಆಯ್ಕೆ ಪಡೆಯಬಹುದು. ಆದರೂ 90% ಭಾರತದ ಕ್ರಿಕೆಟ್ ಪ್ರೇಮಿಗಳು ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಬೇಕು ಎಂದು ಆಸೆ ಪಡುತ್ತಾರೆ.

ಸೂರ್ಯಕುಮಾರ್ ಯಾದವ್ ಟಿ 20 ಫಾರ್ಮಾಟಿಗೆ ಹೇಳಿ ಮಾಡಿಸಿದ ಆಟಗಾರ. ಒಮ್ಮೆ ಕುದುರಿಕೊಂಡರೆ ಸರಾಸರಿಯನ್ನು ಸಲೀಸಾಗಿ 200 ದಾಟಿಸುವ ಶಕ್ತಿ ಇದೆ. ಆದರೆ ದೀರ್ಘ ಅವಧಿಗೆ ಗಾಯಾಳು ಆಗಿ ಹೊರಗೆ ಕೂತ ಕಾರಣ ಆತನ ತಲೆಯ ಮೇಲೆ ತೂಗುಕತ್ತಿ ಇದ್ದೇ ಇತ್ತು. ಆದರೆ ಆಯ್ಕೆ ಮಂಡಳಿ ಆತನ ಹಿಂದಿನ ಸಾಧನೆಯ ಮೇಲೆ ಭರವಸೆ ಇಟ್ಟ ಹಾಗಿದೆ. ನಂಬರ್ 3 ಸ್ಥಾನಕ್ಕೆ ಆಯ್ಕೆಗಳು ಹೆಚ್ಚಿದ್ದ ಕಾರಣ ಸಹಜವಾಗಿ ಕೆ ಎಲ್ ರಾಹುಲ್ ಹೊರಗೆ ಕೂರಬೇಕಾಯಿತು ಅಷ್ಟೇ.

rajamarga column t20 world cup team

ಸಂಜು ಸ್ಯಾಮ್ಸನ್ ದಶಕಗಳಿಂದ ಐಪಿಲ್ ಆಡುತ್ತಾ ಇದ್ದಾರೆ. ಈ ಐಪಿಎಲ್ ಟೂರ್ನಿಯಲ್ಲಿ ಆತನ ಸರಾಸರಿ ಮತ್ತು ಕನ್ಸಿಸ್ಟೇನ್ಸಿಗಳು ತುಂಬಾ ಚೆನ್ನಾಗಿ ಇದ್ದ ಕಾರಣ ಅವರ ಆಯ್ಕೆ ಸಲೀಸಾಯ್ತು. ರಾಹುಲ್ ಬ್ಯಾಟಿಂಗ್ ಮತ್ತು ಕೀಪಿಂಗ್ ಚೆನ್ನಾಗಿದ್ದರೂ ಡ್ರಾಪ್ ಆದರು. ಈ ನೋವು ಕನ್ನಡಿಗರನ್ನು ಕಾಡದೇ ಇರದು. ಸಂಜು ಸ್ಯಾಮ್ಸನ್ ಅವರಿಗೊಂದು ಅವಕಾಶ ಕೊಡಲೇಬೇಕು ಎಂದು ದೀರ್ಘಕಾಲದಿಂದ ಭಾರತ ಆಸೆ ಪಡುತ್ತಿತ್ತು.

ಬಲಿಷ್ಠ ಮಿಡಲ್ ಆರ್ಡರ್

ಭಾರತಕ್ಕೆ ಅಗತ್ಯವಾಗಿ ಬೇಕಾಗಿದ್ದ ಬಲಿಷ್ಠ ಮಿಡಲ್ ಆರ್ಡರ್ ಈ ಬಾರಿ ನಿಸ್ಸಂಶಯವಾಗಿಯೂ ದೊರೆತಿದೆ. ರಿಶಭ್ ಪಂತ್ ಮತ್ತು ಶಿವಂ ದುಬೆ ಅಲ್ಲಿ ಮಿಂಚು ಹರಿಸುವುದು ಖಂಡಿತ. ಇನ್ನಷ್ಟು ಬಲಿಷ್ಠ ಮಾಡಲು ರವೀಂದ್ರ ಜಡೇಜಾ ಇದ್ದೇ ಇರುತ್ತಾರೆ.

ಇಡೀ ಐಪಿಲ್ ಪಂದ್ಯಾಟದಲ್ಲಿ ಮಿಂಚಿದ ತಿಲಕ್ ವರ್ಮ, ರಥುರಾಜ್ ಗಾಯಕವಾಡ, ಅಭಿಷೇಕ್ ಶರ್ಮಾ, ಸಾಯಿ ಸುದರ್ಶನ್, ರಿಯಾನ್ ಪರಾಗ್ ಯಾಕೆ ಮಿಸ್ ಆದರು?ಎಂಬ ಪ್ರಶ್ನೆಯು ನಿಮ್ಮ ಮನಸಿಗೆ ಕೂಡ ಬಂದಿರಬಹುದು. ಅವರು ಮುಂದಿನ ವಿಶ್ವಕಪ್ ತನಕ ಕಾಯಲೇಬೇಕು ಅನ್ನುವುದು ವಾಸ್ತವ.

rajamarga column t20 world cup team

ಬೌಲಿಂಗ್ ವಿಭಾಗ ಅಚ್ಚರಿ ಇಲ್ಲ

ಜಸ್ಪ್ರೀತ್ ಬುಮ್ರಾ, ಆರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ವಿಭಾಗದ ಅಸ್ತ್ರಗಳು. ಖಲೀಲ್ ಅಹ್ಮದ್ ಮತ್ತು ಆವೇಶ್ ಖಾನ್ ಅವರು ಮೀಸಲು ಆಟಗಾರರಾಗಿ ಇರುವ ಕಾರಣ ಇಲ್ಲಿ ಅಚ್ಚರಿಯ ಮುಖಗಳು ಇಲ್ಲ. ಹಾರ್ದಿಕ ಪಾಂಡ್ಯ ಕೂಡ ಮಿದು ವೇಗದ ಬೌಲಿಂಗ್ ಮಾಡಬಲ್ಲರು. ದಾಖಲೆ ವೇಗದಲ್ಲಿ ಎಸೆಯಬಲ್ಲ ಮಯಾಂಕ್ ಯಾದವ್ ಫಿಟ್ನೆಸ್ ಕಾರಣಕ್ಕೆ ಡ್ರಾಪ್ ಆದ ಕಾರಣ ಸಿರಾಜ್ ಆಯ್ಕೆ ಸುಲಭ ಆಯ್ತು. ಸ್ಪಿನ್ ವಿಭಾಗದಲ್ಲಿ ಐಪಿಎಲನ ಗರಿಷ್ಠ ವಿಕೆಟ್ ಕಿತ್ತಿರುವ ಯಜುವೇಂದ್ರ ಚಹಲ್, ಯಾವ ಮೈದಾನದಲ್ಲಿಯೂ ಬಾಲ್ ಸ್ಪಿನ್ ಮಾಡುವ ಶಕ್ತಿ ಇರುವ ಕುಲದೀಪ್ ಯಾದವ್, ಆಕ್ಷರ್ ಪಟೇಲ್ ಇರುತ್ತಾರೆ. ರವಿ ಬಿಷ್ಣೊಯಿ ಇರಬೇಕಿತ್ತು ಎಂಬುದು ಹಲವರ ಅಭಿಪ್ರಾಯ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

ಭಾರತವು ಮೂರು ವೇಗ ಪ್ಲಸ್ ಎರಡು ಸ್ಪಿನ್ ಸಂಯೋಜನೆಯ ಜೊತೆಗೆ ಆಡಲು ಇಳಿಯಬಹುದು. ಇನ್ನು ಫಿನಿಶರ್ ಸ್ಥಾನಕ್ಕೆ ಶಿವಂ ದುಬೆ, ರಿಶಬ್ ಪಂತ್, ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಘ್ (ಮೀಸಲು) ಇರುವ ಕಾರಣ ದಿನೇಶ್ ಕಾರ್ತಿಕ್ ಡ್ರಾಪ್ ಆದರು ಅನ್ನಿಸುತ್ತದೆ. ಆತನ ಪ್ರಾಯ ಕೂಡ ಇಲ್ಲಿ ನಿರ್ಣಾಯಕ ಆಗಿರಬಹುದು.

2024ರ ವಿಶ್ವಕಪ್‌ಗೆ ಇದು ಡ್ರೀಮ್ ಟೀಮ್

ಧೋನಿ ನಾಯಕತ್ವದಲ್ಲಿ ಚೊಚ್ಚಲ T20 ವಿಶ್ವಕಪ್ ಗೆದ್ದು ಸಾಧನೆ ಮಾಡಿದ್ದ ಭಾರತ ಈ ಬಾರಿ ಇನ್ನೂ ಬಲಿಷ್ಠ ತಂಡದ ಜೊತೆಗೆ ಆಡಲು ಇಳಿಯುತ್ತಿದೆ. ಈ ತಂಡದಲ್ಲಿ ಆಕ್ರಮಣ, ಅನುಭವ, ಪರಿಣತಿ, ವೇಗ, ತಂತ್ರಗಾರಿಕೆ… ಎಲ್ಲವೂ ಇದೆ. ಉತ್ತಮ ಆಲ್ರೌಂಡರ್ ಆಟಗಾರರೂ ಇದ್ದಾರೆ. ಒತ್ತಡ ತಡೆಕೊಳ್ಳುವ ಶಕ್ತಿ ಇದ್ದವರು ಮಾತ್ರ ವಿಶ್ವಕಪ್ ಗೆಲ್ಲುತ್ತಾರೆ.

ಆದರೆ ಐಪಿಎಲ್ 2024ರಲ್ಲಿ ಸಖತ್ ಮಿಂಚುತ್ತಿರುವ ವಿದೇಶಿ ಆಟಗಾರರಾದ ಫಿಲ್ ಸಾಲ್ಟ್, ವಿಲ್ ಜಾಕ್ಸ್, ಮಾರ್ಕಸ್ ಸ್ಟಾಯಿನಿಸ್, ಟಿಮ್ ಡೇವಿಡ್, ಮೊಹಮ್ಮದ್ ನಬಿ, ಹೆನ್ರಿ ಕ್ಲಾಸೆನ್, ಜೋಸ್ ಬಟ್ಲರ್ ……ಮೊದಲಾದವರು ಬ್ಯಾಟ್ ಬೀಸುವ ವೇಗವನ್ನು ನೋಡುವಾಗ ಭಾರತೀಯರ ಎದೆಬಡಿತವು ಸ್ವಲ್ಪ ಹೆಚ್ಚಾಗಬಹುದು. ಏನಿದ್ದರೂ ಭಾರತಕ್ಕೆ ‘ಆಲ್ ದ ಬೆಸ್ಟ್’ ಹೇಳೋದಕ್ಕೆ ನಾವು ಖಂಡಿತ ಕಂಜೂಸ್ ಮಾಡುವುದಿಲ್ಲ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕಾಂತ್ ಬೊಳ್ಳಾ

Exit mobile version