ಆ ಮಾಡರ್ನ್ ಹುಡುಗಿಯ ಮಾತು ಕೇಳಿ ನಾನು ಟಿವಿ ಸ್ಟುಡಿಯೋದಲ್ಲಿ ಬೆವತಿದ್ದೆ!
ರಾಜಮಾರ್ಗ ಅಂಕಣ: ಹತ್ತು ವರ್ಷಗಳ ಹಿಂದೆ ನನ್ನ ಟಿವಿ ಡಿಬೇಟಿಗೆ (TV Debate) ಬಂದಿದ್ದ ಒಬ್ಬಳು ಮಾಡರ್ನ್ ಹುಡುಗಿ ʼಡೈವೋರ್ಸ್ (Divorce) ಅನ್ನೋದು ಸ್ತ್ರೀ ಸ್ವಾತಂತ್ರ್ಯದ (Woman freedom) ಪ್ರತೀಕ’ ಎಂದಿದ್ದಳು! ಆಕೆಯ ಮಾತಿನ ವರಸೆ ನೋಡಿ ನಾನು ಹವಾನಿಯಂತ್ರಿತ ಸ್ಟುಡಿಯೋ ಒಳಗೆ ಬೆವರಲು ಆರಂಭಿಸಿದ್ದೆ.
ಅಲ್ಲಿಗೇ ಅವಳ ವಾದವು ನಿಲ್ಲಲಿಲ್ಲ. ʼಈ ಕೆಲವು ಸಿನೆಮಾ ತಾರೆಯರ ಖಾಸಗಿ ಬದುಕು ಇಷ್ಟೊಂದು ಯಾಕೆ ಬರ್ಬಾದ್ ಆಗಿರುತ್ತದೆ?’ ಎಂದು ನಾನು ಕೇಳಿದಾಗ ಅವಳು ಹೇಳಿದ್ದು ʼಅದು ಅವರವರ ಖಾಸಗಿ ಬದುಕು ಸರ್, ನಾವದನ್ನು ಪ್ರಶ್ನೆ ಮಾಡಲು ಹೋಗಬಾರದು’ ಎಂದಿದ್ದಳು! (ಈಗ ಪ್ರತೀ ದಿನವೂ ಒಂದಲ್ಲ ಒಂದು ಸೆಲೆಬ್ರಿಟಿ ದಂಪತಿಗಳ ವಿಚ್ಛೇದನದ (Celebrity divorce) ವರದಿಗಳು ಪತ್ರಿಕೆಯ ಹೆಡ್ ಲೈನ್ ಆಗಿ ಬರುತ್ತಿವೆ).
ಅದಕ್ಕೆ ಅವಳ ಬಳಿ ಸಮರ್ಥನೆ ಕೂಡ ಇತ್ತು!
ತನ್ನ ಹಣೆಯ ಮೇಲೆ ಒರಗುತ್ತಿದ್ದ ಮುಂಗುರುಳನ್ನು ಒಮ್ಮೆ ಎಡದಿಂದ ಬಲಕ್ಕೆ, ಮತ್ತೊಮ್ಮೆ ಬಲದಿಂದ ಎಡಕ್ಕೆ ಹಾರಿಸುತ್ತ ಆಕೆಯ ಮಾತು ಅಣೆಕಟ್ಟು ಒಡೆದ ನದಿಯ ಪ್ರವಾಹದಂತೆ ಮುಂದುವರೆಯಿತು. ಭಾರತದ ಮಹಾನಟ ಎಂದು ಕರೆಸಿಕೊಂಡ ಕಮಲಹಾಸನ್ ತಾನು ಎರಡು ಬಾರಿ ಮದುವೆ ಆದ ಹುಡುಗಿಯರಿಗೆ ಸೋಡಾ ಚೀಟಿ ಕೊಟ್ಟು ಇದೀಗ ಮೂರನೇ ಹುಡುಗಿಯ ಜೊತೆಗೆ ‘ಲಿವಿಂಗ್ ಇನ್ ರಿಲೇಶನ್ ‘ಮೆಂಟೇನ್ ಮಾಡ್ತಾ ಇದ್ದಾನೆ. ಅವನು ಹೇಳಿದ ಮಾತು ‘ನನಗೆ ಭಾರತೀಯ ಮದುವೆಗಳಲ್ಲಿ ನಂಬಿಕೆ ಇಲ್ಲ’ ಎಂದು!
ಅಪ್ಪನಂತೆ ಮಗಳು!
ಅದನ್ನು ಗಟ್ಟಿಯಾಗಿ ಅನುಸರಿಸಿದ ಅವನ ಮಗಳು ಶ್ರುತಿ ಹಾಸನ್ (ಆಕೆ ಕೂಡ ಪ್ರಸಿದ್ಧ ಸಿನೆಮಾ ನಟಿ) ನಾನು ಮದುವೆನೇ ಆಗೋದಿಲ್ಲ ಎಂಬ ಹೇಳಿಕೆ ಕೊಟ್ಟಿದ್ದಾಳೆ! ಹೆಣ್ಣಿನ ಬದುಕಿಗೆ ಮದುವೆ ಆಕೆಯ ಪ್ರಕಾರ ಅನಿವಾರ್ಯ ಅಲ್ಲವಂತೆ! ಅದೇ ಶ್ರುತಿ ಹಾಸನ್ ಮೂರು ಮೂರು ತಿಂಗಳಿಗೆ ಒಬ್ಬೊಬ್ಬ ಹುಡುಗನ ಜೊತೆಗೆ ಡೇಟಿಂಗ್ ಮಾಡಿ ಚಾಪೆ ಎಸೆದ ಹಾಗೆ ಅವರನ್ನು ಮಡಚಿ ಎಸೆಯುತ್ತಿದ್ದಾಳೆ!
ಭಾರತೀಯ ಸಮಾಜವು ಇಂದು ಎತ್ತ ಸಾಗುತ್ತಿದೆ?
ಇವೆಲ್ಲವೂ ನನ್ನಂತಹ ಹಿರಿಯರಿಗೆ ಆತಂಕ ಕೊಡುವ ಸಂಗತಿಗಳು. ಬ್ರಿಟಿಷರು ಭಾರತಕ್ಕೆ ಕೊಟ್ಟು ಹೋದ ವಿಷಫಲಗಳಲ್ಲಿ ಈ ವಿಚ್ಛೇದನದ ಕಾನೂನು ಕೂಡ ಒಂದು. ನಮ್ಮ ಪಾಶ್ಚಿಮಾತ್ಯ ಅನುಕರಣೆಗಳು ಈ ಮಟ್ಟಕ್ಕೆ ಹೋಗಬಾರದಿತ್ತು ಎಂದು ನನಗೆ ಅನ್ನಿಸುತ್ತಿದೆ. ನನ್ನ ನ್ಯಾಯವಾದಿ ಗೆಳೆಯರೊಬ್ಬರು ಹೇಳುವಂತೆ ಡೈವೋರ್ಸ್ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಇದೆ. ಅವರೆಲ್ಲರೂ ಸುಶಿಕ್ಷಿತರು ಮತ್ತು ಸುಸಂಸ್ಕೃತ ಕುಟುಂಬಗಳಿಂದ ಬಂದವರು! ಹೆಚ್ಚಿನವರು ನಗರ ಪ್ರದೇಶಗಳಿಂದ ಬಂದವರು. ನನ್ನ ಆತಂಕ ಏನೆಂದರೆ ಅವರಲ್ಲಿ ಹೆಚ್ಚಿನವರು ಇನ್ನೂ ಸಣ್ಣ ಪ್ರಾಯದವರು. ಹೆಚ್ಚಿನವರು ಮದುವೆ ಆಗಿ ಒಂದು ವರ್ಷದ ಒಳಗೆ ವಿಚ್ಛೇದನಕ್ಕೆ ಅರ್ಜಿ ಹಾಕ್ತಾ ಇದ್ದಾರೆ! ಮದುವೆಯಾಗಿ ಮೊದಲ ರಾತ್ರಿಯಲ್ಲಿ ಗಂಡನಿಂದ ವಿಚ್ಛೇದನ ಬಯಸುವ ಹುಡುಗಿಯರೂ ಇದ್ದಾರೆ (ಮಿಲನ ಸಿನೆಮಾ ನೆನಪಾಯಿತಾ?). ಇಲ್ಲಿ ಹುಡುಗ ಮತ್ತು ಹುಡುಗಿ ಇಬ್ಬರೂ ಸಮಾನ ಅಪರಾಧಿಗಳು.
ಇಲ್ಲಿ ವಿಚ್ಛೇದನಕ್ಕೆ ಹುಡುಗ ಅಥವಾ ಹುಡುಗಿ ಕೊಡುವ ಕಾರಣಗಳೂ ಕೆಲವೊಮ್ಮೆ ತುಂಬಾ ಸಿಲ್ಲಿ ಎಂದು ನನಗೆ ಅನ್ನಿಸುತ್ತದೆ.
ವಿಚ್ಛೇದನಕ್ಕೆ ಅವರು ಕೊಡುವ ಸಿಲ್ಲಿ ಕಾರಣಗಳ ಸ್ಯಾಂಪಲ್ ಇಲ್ಲಿವೆ.
1) ಗಂಡ ತನ್ನ ತಾಯಿಯ ಜೊತೆ ತುಂಬಾ ಅನ್ಯೋನ್ಯ ಆಗಿದ್ದಾನೆ ಮತ್ತು ಎಲ್ಲಾ ವಿಷಯಗಳನ್ನು ಅಮ್ಮನ ಜೊತೆ ಶೇರ್ ಮಾಡುತ್ತಾನೆ.
2) ಹೆಂಡತಿಯ ತಂದೆ, ತಾಯಿ ಪದೇ ಪದೇ ಅವರ ಮನೆಗೆ ಭೇಟಿ ಕೊಡುತ್ತಾರೆ ಮತ್ತು ಆಕೆಯ ಬಗ್ಗೆ ವಿಪರೀತ ಕಾಳಜಿ ತೋರಿಸುತ್ತಾರೆ.
3) ಮದುವೆಗೆ ಮೊದಲು ಹೆಂಡತಿಗೆ (ಗಂಡನಿಗೂ) ಒಂದು ಅಫೇರ್ ಇತ್ತು ಮತ್ತು ಅದನ್ನು ಅವರು ಮುಚ್ಚಿಟ್ಟಿದ್ದಾರೆ.
4) ಹೆಂಡತಿ (ಕೆಲವೊಮ್ಮೆ ಗಂಡ ಕೂಡ) ತನ್ನ ಕಲೀಗ್ಸ್ ಜೊತೆ ತುಂಬಾ ಸಲಿಗೆಯಿಂದ ಇದ್ದಾರೆ.
5) ಮದುವೆ ಆದ ನಂತರ ಹೆಂಡತಿಗೆ ಮೂರು ಪ್ರಮೋಶನ್ ಸಿಕ್ಕಿವೆ. ಗಂಡನಿಗೆ ಒಂದೂ ಸಿಕ್ಕಿಲ್ಲ!
6) ಗಂಡನಿಗೆ ನಿದ್ದೆಯಲ್ಲಿ ಗೊರಕೆ ಹೊಡೆಯುವ ಅಭ್ಯಾಸ ಇದೆ.
7) ಹೆಂಡತಿ ವಿಪರೀತ ಖರ್ಚು ಮಾಡುತ್ತಾಳೆ.
8) ಗಂಡನಿಗೆ ಅಡುಗೆ ಮಾಡಲು ಬರೋದಿಲ್ಲ. ಎಲ್ಲವನ್ನೂ ನಾನೇ ಮಾಡಬೇಕು.
9) ಗಂಡ ಅಥವಾ ಹೆಂಡತಿ ನನ್ನ ಖಾಸಗಿ ಬದುಕಿನಲ್ಲಿ ಅತಿಯಾಗಿ ಮೂಗು ತೂರಿಸುತ್ತಾರೆ.
10) ಗಂಡ (ಅಥವಾ ಹೆಂಡತಿ) ಮಾಡರ್ನ್ ಇಲ್ಲ. ಹಳ್ಳಿ ಗುಗ್ಗು ತರ ಬಿಹೇವ್ ಮಾಡ್ತಾರೆ.
11) ಗಂಡ ನನ್ನ ಗಮನಕ್ಕೆ ಬಾರದೇ ಯಾರಿಗೋ ಸಾಲ ಕೊಟ್ಟಿದ್ದಾನೆ.
12) ಅವಳಿಗೆ ದುರಹಂಕಾರ ಜಾಸ್ತಿ. ಪ್ರತಿಯೊಂದಕ್ಕೂ ಎದುರು ಮಾತಾಡುತ್ತಾಳೆ!
13) ಹೆಂಡತಿ ಗಂಡನ ಮನೆಯ ಎಲ್ಲ ಸಂಗತಿಗಳನ್ನು ತನ್ನ ತಾಯಿ ಮನೆಗೆ ಫೋನ್ ಮೂಲಕ ರವಾನೆ ಮಾಡುತ್ತಾಳೆ!
ವಿಚ್ಚೇದನದ ಅರ್ಜಿಗಳನ್ನು ಜಾಲಾಡಿದಾಗ ಇಂತಹ ಅನೇಕ ಸಿಲ್ಲಿ ಕಾರಣಗಳು ಸಿಗುತ್ತವೆ. ಗಂಡ (ಅಥವಾ ಹೆಂಡತಿ) ಪಾರ್ಟಿಗೆ ಬರೋದಿಲ್ಲ, ಡ್ರಿಂಕ್ಸ್ ತೆಗೆದುಕೊಳ್ಳೋದಿಲ್ಲ ಎಂಬ ಕಾರಣಕ್ಕೆ ವಿಚ್ಛೇದನಕ್ಕೆ ಅರ್ಜಿ ಹಾಕಿದ ಅನೇಕ ದಂಪತಿಗಳು ನನ್ನ ಆಪ್ತ ವಲಯದಲ್ಲಿ ಇದ್ದಾರೆ!
ಅವರು ಮುಂದೊಡ್ಡುವ ಯಾವ ಸಮಸ್ಯೆಗಳು ಪರಿಹಾರ ಆಗದ ಸಮಸ್ಯೆಗಳು ಅಲ್ಲ. ಯಾವ ಭಿನ್ನಮತವನ್ನು ಎದುರೆದುರು ಕುಳಿತು ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿ ಪರಿಹಾರ ಮಾಡಿಕೊಳ್ಳಬಹುದು. ಕೌನ್ಸೆಲಿಂಗ್ ಮೊರೆ ಹೋಗಿ ಪರಿಹಾರ ಕಂಡುಕೊಳ್ಳಬಹುದು. ಸಣ್ಣ ಪುಟ್ಟ ತಪ್ಪುಗಳಾದಾಗ ಸಹಜವಾದ ಭಾವನೆಗಳಿಂದ ಸಾರಿ ಕಣೇ (ಅಥವಾ ಸಾರಿ ಕಣೋ) ಅಂದರೆ ಇಬ್ಬರೂ ಕರಗಿಬಿಡುತ್ತಾರೆ.
ಇಲ್ಲಿ ಇಬ್ಬರೂ ಒಂದೆಳೆ ಕಾಂಪ್ರೋ ಆಗಬೇಕು ಅಷ್ಟೇ!
ಮೊದಲು ಎಗರಾಡಿದ್ದು ಅವಳೇ, ಅವಳು ಬಂದು ಸಾರಿ ಕೇಳಬೇಕು ಎಂದು ಗಂಡ ಹಟ ಹಿಡಿಯುವುದರಿಂದ ಅಥವಾ ಅವನೇ ಬಂದು ಮಾತಾಡಿಸಲಿ ಎಂದು ಹೆಂಡತಿ ಹಟ ಹಿಡಿಯುವುದರಿಂದ ಸಂಬಂಧಗಳು ಕೆಡುತ್ತವೆ.
ಅತಿಯಾದ ಹಿಂಸೆ, ಲೈಂಗಿಕ ಅಸಾಮರ್ಥ್ಯ, ಹೊಂದಾಣಿಕೆಯ ಕೊರತೆ, ವ್ಯಸನಗಳು, ಗುಣಪಡಿಸಲು ಆಗದ ಕಾಯಿಲೆಗಳು…ಮೊದಲಾದ ಕಾರಣಕ್ಕೆ ವಿಚ್ಛೇದನ ಪಡೆದರೆ ಅದನ್ನು ಒಪ್ಪಿಕೊಳ್ಳಬಹುದು. ವಿಚ್ಛೇದನ ಪಡೆದವರು ಮತ್ತೆ ಬೇರೆ ಮದುವೆ ಆಗಿ ಸುಖವಾಗಿರುವುದು ಕೂಡ ಸಂತಸದ ವಿಷಯ. ಆದರೆ ಸಣ್ಣ ಸಣ್ಣ ಕಾರಣಕ್ಕೆ ಎಲ್ಲರೂ ವಿಚ್ಛೇದನದ ಮೊರೆ ಹೋದರೆ ಭಾರತೀಯ ಸಮಾಜವು ಹೇಗಿರಬಹುದು?
ಇದನ್ನೂ ಓದಿ: ರಾಜಮಾರ್ಗ ಅಂಕಣ: ದಕ್ಷಿಣ ಆಫ್ರಿಕಾದಲ್ಲಿ ಚಿನ್ನದ ಪದಕ ಗೆದ್ದ ಕಾರ್ಕಳದ ಬೋಳ ಅಕ್ಷತಾ ಪೂಜಾರಿ