ಚಾಂಪಿಯನ್ ಆಟಗಾರರು ಮತ್ತು ಟೀಮ್ ಇಂಡಿಯಾ ಗೆಲುವು
ರಾಜಮಾರ್ಗ ಅಂಕಣ: ಈ ಭಾವುಕ ಕ್ಷಣಗಳನ್ನು ಭಾರತದ ಕೋಟಿ ಕೋಟಿ ಕ್ರಿಕೆಟ್ (Cricket) ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ.
ಸೂರ್ಯಕುಮಾರ್ (Suryakumar yadav) ಹಿಡಿದ ಅದ್ಭುತವಾದ ಕ್ಯಾಚ್, ವಿರಾಟ್ ಕೊಹ್ಲಿಯ ಹೀರೋಯಿಕ್ ಇನ್ನಿಂಗ್ಸ್, ಬುಮ್ರಾ, ಹಾರ್ದಿಕ್, ಆರ್ಷದೀಪ್ ಬೌಲಿಂಗ್‌ನಲ್ಲಿ ತೋರಿದ ಮ್ಯಾಜಿಕ್, ರೋಹಿತ್ ಶರ್ಮಾ (Rohit Sharma) ತೋರಿಸಿದ ತಾಳ್ಮೆ, ಅಕ್ಷರ್ ಪಟೇಲ್ ಆಲ್ರೌಂಡ್ ಆಟ……ಇದ್ಯಾವುದೂ ನಮಗೆ ಮರೆತು ಹೋಗೋದಿಲ್ಲ.
ಭರವಸೆ ನಮ್ಮನ್ನು ಗೆಲ್ಲಿಸಿತು
ಚಾಂಪಿಯನ್ ಆಟಗಾರರ ಮೇಲೆ ಟೀಮ್ ಇಂಡಿಯಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಇಟ್ಟ ಭರವಸೆ ನಿಜ ಆಗಿದೆ. ವಿಶ್ವಕಪ್ಪಿನ ಹಿಂದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಸತತವಾಗಿ ವೈಫಲ್ಯ ಕಂಡಾಗ ಆತನಿಗೆ ವಿಶ್ರಾಂತಿ ಕೊಡಿ, ಆತನಿಗೆ ಓಪನಿಂಗ್ ಸ್ಲಾಟ್ ಬೇಡವೇ ಬೇಡ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿಸಿ ಎಂದೆಲ್ಲ ಟ್ರೋಲ್ ಮಾಡಿದವರಿಗೆ ಈ ಬಾರಿ ಸರಿಯಾದ ಉತ್ತರ ದೊರೆತಿದೆ. ಚಾಂಪಿಯನ್ ಆಟಗಾರ ಯಾವತ್ತೂ ದೊಡ್ಡ ಮ್ಯಾಚಲ್ಲಿ ಮಿಂಚು ಹರಿಸುತ್ತಾನೆ.
ಚಾಂಪಿಯನ್, ನಿನ್ನ ಆಟ ಆಡುತ್ತಾ ಹೋಗು!
ಆತ ಸತತವಾಗಿ ಸೋತು ಅಳುತ್ತಾ ಕೂತಾಗ ರಾಹುಲ್ ದ್ರಾವಿಡ್ ಹೇಳಿದ ಮಾತನೊಮ್ಮೆ ಸೂಕ್ಷ್ಮವಾಗಿ ಗಮನಿಸಿ.
‘ಚಾಂಪಿಯನ್, ನಿನ್ನ ಆಟ ಆಡುತ್ತಾ ಹೋಗು. ನಮಗೆ ನಂಬಿಕೆ ಇದೆ’ ಎಂದು. ಆತನ ಬ್ಯಾಟಿಂಗ್ ಕ್ರಮಾಂಕವನ್ನು ಕೂಡ ಬದಲಾವಣೆ ಮಾಡದೆ ಆತನ ನೆರವಿಗೆ ನಿಂತವರು ಟೀಮ್ ಮ್ಯಾನೇಜ್ಮೆಂಟ್ ಮತ್ತು ಟೀಮ್ ಕೋಚ್ ರಾಹುಲ್ ದ್ರಾವಿಡ್. ಚಾಂಪಿಯನ್ ವಿರಾಟ್ ಕೊಹ್ಲಿ ಇಂದು ಆವರ
ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.
ಹಾರ್ದಿಕ ಪಾಂಡ್ಯನನ್ನು ಟ್ರೋಲ್ ಮಾಡಿದವರಿಗೆ ಈ ಗೆಲುವು ಅರ್ಪಣೆ!
ಅದೇ ರೀತಿ ನಮ್ಮ ಹಾರ್ದಿಕ್ ಪಾಂಡ್ಯನ ಬಗ್ಗೆ ಗಮನಿಸಿ. ಈ ಬಾರಿಯ ಐಪಿಎಲ್ ಪಂದ್ಯಗಳಲ್ಲಿ ಆತನು ಸತತವಾಗಿ ಬೈಗುಳ ತಿಂದ ಆಟಗಾರ. ಆತ ವಿಶ್ವಕಪ್ ತಂಡಕ್ಕೆ ಆಯ್ಕೆ ಆದಾಗ ಎಷ್ಟೊಂದು ಜನರು ರೊಚ್ಚಿಗೆದ್ದು ಬೈದವರಿದ್ದರು! ಆತನ ಖಾಸಗಿ ಜೀವನದ ಮೇಲೆ ಕೆಸರು ಎರಚುವ ಕೆಲಸ ಕೂಡ ಆಗಿತ್ತು. ಅಂತವನ ಕೈಗೆ ಪಂದ್ಯದ 20ನೇ ಓವರು ಕೊಡುವುದೆಂದರೆ? ಟೀಮ್ ಇಂಡಿಯಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಆತನ ಮೇಲಿಟ್ಟ ನಂಬಿಕೆಗೆ ಆತನು ಎಷ್ಟೊಂದು ಅದ್ಭುತವಾಗಿ ಉತ್ತರ ಕೊಟ್ಟು ಬಿಟ್ಟ ನೋಡಿ. ಚಾಂಪಿಯನ್ ಎಂದಿಗೂ ಚಾಂಪಿಯನ್ ಆಗಿರುತ್ತಾನೆ.
ರೋಹಿತ್ ಶರ್ಮಾ ನಾಯಕತ್ವವನ್ನು ಪ್ರಶ್ನೆ ಮಾಡಿದವರಿಗೆ, ಆತ ಸ್ವಾರ್ಥಿ ಎಂದು ಟೀಕೆ ಮಾಡಿವರಿಗೆ ಇಲ್ಲಿ ಸರಿಯಾದ ಉತ್ತರ ದೊರೆತಿದೆ. ಟೀಮ್ ಆಡಳಿತ ಯುವ ಆಟಗಾರರ ಮೇಲೆ ತೋರಿದ ಕಾಳಜಿಯಿಂದ ಶಿವಂ ದುಬೆ, ಆಕ್ಷರ್ ಪಟೇಲ್ ಮೊದಲಾದ ಯಂಗಸ್ಟರ್ಸ್ ಒಳ್ಳೆ ಆಟಗಾರರಾಗಿ ಮಿಂಚಲು ಸಾಧ್ಯವಾಯಿತು. ಅವರಿಗೆ ಖಚಿತವಾಗಿ ಒಳ್ಳೆಯ ಭವಿಷ್ಯವಿದೆ.
ಒಂದು ಪಂದ್ಯ – ಹಲವು ಪಾಠ!
ಭಾರತ ಟಿ 20 ವಿಶ್ವಕಪ್ಪನ್ನು ಅರ್ಹವಾಗಿ ಗೆದ್ದು ಬೀಗಿತು, ವಿರಾಟ್ ಕೊಹ್ಲಿ (Virat Kohli) ಮತ್ತು ರಾಹುಲ್ ದ್ರಾವಿಡ್ (Rahul Dravid) ಅವರಿಗೆ ಗೆಲುವಿನ ವಿದಾಯ ನೀಡಿತು, ರೋಹಿತ್ ಶರ್ಮಾ ತನ್ನ ಮೊದಲ ಐಸಿಸಿ ಟ್ರೋಫಿ ಲಿಫ್ಟ್ ಮಾಡಿದರು ಅನ್ನುವುದು ಮುಂದಿನ ಇತಿಹಾಸದ ಭಾಗ. ತಾಳ್ಮೆಯಿಂದ ನರಗಳನ್ನು ಬಿಗಿ ಹಿಡಿದು ಆಡಿದರೆ ಯಾವ ಪಂದ್ಯವನ್ನೂ ಗೆಲ್ಲಲು ಸಾಧ್ಯ ಎನ್ನುವುದು ಕ್ರಿಕೆಟ್ ಕಲಿಸಿದ ಜೀವನದ ಪಾಠ.
ಕ್ಲಾಸೆನ್ ಮತ್ತು ಕ್ಲಿಂಟನ್ ಡಿಕಾಕ್ ಅವರು ಕ್ರೀಸಿನಲ್ಲಿ ಗಟ್ಟಿ ನಿಂತು ಆಡುತ್ತಿದ್ದಾಗ ದಕ್ಷಿಣ ಆಫ್ರಿಕಾ ಗೆದ್ದೇ ಬಿಟ್ಟಿತು ಎಂದು ಭಾವಿಸಿಕೊಂಡು ಟಿವಿ ಆಫ್ ಮಾಡಿ ಮಲಗಿದವರಿಗೆ ಇದು Life Time Lesson!
ಐಪಿಎಲ್ ಪಂದ್ಯಗಳ ಉದ್ದಕ್ಕೂ ಬಾಸುಂಡೆ ಬರುವ ಹಾಗೆ ಹೊಡೆಸಿಕೊಂಡಿದ್ದ ಭಾರತದ ಬೌಲರಗಳಿಗೆ ಈ ವಿಶ್ವಕಪ್ ಸ್ಟಾರ್ ವ್ಯಾಲ್ಯೂ ಕೊಟ್ಟಿತು ಅನ್ನುವುದು ಭರತವಾಕ್ಯ.
ಕಂಗ್ರಾಚ್ಯುಲೇಶನ್ ರೋಹಿತ್ ಆಂಡ್ ಹುಡುಗರು!
ಇದನ್ನೂ ಓದಿ: ರಾಜಮಾರ್ಗ ಅಂಕಣ: ಮುಖವೇ ಇಲ್ಲದ ಆಕೆಗೆ ತನ್ನ ಹೆಸರೇ ಮರೆತು ಹೋಗಿತ್ತು!