Site icon Vistara News

ವಾರದ ವ್ಯಕ್ತಿ ಚಿತ್ರ | Nitin Gadkari | ರಸ್ತೆ ಕ್ರಾಂತಿಯ ರೂವಾರಿ ನಿತಿನ್‌ ಗಡ್ಕರಿ, ಅವರು ನಡೆದದ್ದೇ ಹೆದ್ದಾರಿ!

gadkari

ಕೇಶವ ಪ್ರಸಾದ್‌ ಬಿ. ಬೆಂಗಳೂರು

ನಿತಿನ್‌ ಗಡ್ಕರಿ (Nitin Gadkari)! ಅವರು ಕೇವಲ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವರು ಮಾತ್ರ ಅಲ್ಲವೇ ಅಲ್ಲ…! ರಸ್ತೆಗಳ ರಾಜ ಎಂದೇ ಕೊಂಡಾಡಲಾಗುತ್ತಿದೆ. ಇಡೀ ದೇಶ ಅವರ ಭರಪೂರ ಸಾಧನೆಯನ್ನು ಬೆರಗಿನಿಂದ ನೋಡುತ್ತಿದೆ. ಮಾತಿಗೆ ನಿಂತರೆ ಅತ್ಯದ್ಭುತ ಪರಿಕಲ್ಪನೆಗಳನ್ನು ಅಂಕಿ ಅಂಶಗಳ ಸಹಿತ ತೆರೆದಿಡುತ್ತಾರೆ. ಅದೊಂದು ವಿಶ್ವ ದಾಖಲೆ. ವಿಶ್ವ ದರ್ಜೆಯ ಮೂಲಸೌಕರ್ಯ.

ಮೈಸೂರು-ಬೆಂಗಳೂರು, ಚೆನ್ನೈ-ಬೆಂಗಳೂರು ಹೆದ್ದಾರಿಗಳ ಸಾರಥ್ಯ

ಮೊನ್ನೆ ಮೈಸೂರು-ಬೆಂಗಳೂರು ದಶಪಥಗಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೀಕ್ಷಣೆಗೆ ಹೆಲಿಕಾಪ್ಟರ್‌ ಏರಿದರು. ಮಾತ್ರವಲ್ಲದೆ ಹೊಸ ಹೆದ್ದಾರಿಯಲ್ಲೇ ಇಳಿಸಿದರು. ಈ ಮೂಲಕ ಹೆದ್ದಾರಿಯ ಗುಣಮಟ್ಟದ ಬಗ್ಗೆ ಟೀಕಿಸುತ್ತಿದ್ದವರಿಗೆ ಪರೋಕ್ಷವಾಗಿ ಸಂದೇಶ ರವಾನಿಸಿದರು. ಗಡ್ಕರಿ ಸಾರಥ್ಯದಲ್ಲಿ ಹಿಂದೆಂದೂ ಕಂಡರಿಯದಂತೆ ದೇಶಾದ್ಯಂತ ಹೆದ್ದಾರಿಗಳ ಜಾಲ ಶರವೇಗದಲ್ಲಿ ನಿರ್ಮಾಣವಾಗುತ್ತಿದೆ. ಉದಾಹರಣೆಗೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇಯನ್ನೇ ಗಮನಿಸಿ.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 117 ಕಿ.ಮೀ ಉದ್ದದ 10 ಲೇನ್‌ಗಳನ್ನು (ದಶಪಥ) ಹೊಂದಿರುವ ಹಾಗೂ ಬೆಂಗಳೂರು-ಮೈಸೂರು ನಡುವೆ ಸಂಪರ್ಕ ಕಲ್ಪಿಸುವ ಹೈವೇ. ಇದರಲ್ಲಿ 6 ಲೇನ್‌ಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಹೊರತುಪಡಿಸಿ, ನಾಲ್ಕು ಮತ್ತು ಹೆಚ್ಚಿನ ಚಕ್ರದ ವಾಹನಗಳು ನಿಗದಿತ ವೇಗದಲ್ಲಿ ಸಂಚರಿಸಬಹುದು. ದ್ವಿಚಕ್ರ-ತ್ರಿಚಕ್ರ ವಾಹನಗಳು ಇದರ ಇಕ್ಕೆಲಗಳಲ್ಲಿರುವ 2 ಲೇನ್‌ಗಳ ಸರ್ವೀಸ್‌ ರಸ್ತೆಯಲ್ಲಿ ಸಂಚರಿಸಬಹುದು. 5 ಬೈಪಾಸ್‌ಗಳನ್ನು ಇದು ಒಳಗೊಂಡಿದೆ. ಒಟ್ಟು 8.408 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಇದರಿಂದ ಬೆಂಗಳೂರು-ಮೈಸೂರು ನಡುವಣ ಪ್ರಯಾಣದ ಅವಧಿ ಈಗಿನ 3 ಗಂಟೆಯ ಬದಲಿಗೆ 90 ನಿಮಿಷಗಳಿಗೆ ತಗ್ಗಲಿದೆ.

ಎರಡನೆಯದಾಗಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ. ಎಂಟು ಲೇನ್‌ಗಳ ಎಕ್ಸ್‌ಪ್ರೆಸ್‌ವೇಯ ಉದ್ದ 262 ಕಿ.ಮೀ. ಇದರ ಒಟ್ಟು ವೆಚ್ಚ 16,730 ಕೋಟಿ ರೂ. ಬೆಂಗಳೂರು-ಚೆನ್ನೈ ನಡುವಣ 300 ಕಿ,ಮೀ ಅಂತರವನ್ನು 262 ಕಿ.ಮೀಗೆ ಇಳಿಸಲಿದೆ. ಪ್ರಯಾಣದ ಅವಧಿ 5 ಗಂಟೆಯಿಂದ 2.5 ಗಂಟೆಗೆ ಇಳಿಕೆಯಾಗಲಿದೆ. ಇವೆರಡೂ ಹೆದ್ದಾರಿಗಳಿಂದ ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಮೈಸೂರು ನಡುವೆ ಪ್ರಯಾಣದ ಅವಧಿ ತಗ್ಗುವುದರ ಜತೆಗೆ ಆರ್ಥಿಕ, ವಾಣಿಜ್ಯ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಚೆನ್ನೈ ಬಂದರಿಗೆ ರಾಜ್ಯದ ಸಂಪರ್ಕ ಹತ್ತಿರವಾಗಲಿದೆ.

ಮೋದಿ ಸರ್ಕಾರದ ಹಿರಿಯ ಸಚಿವ ನಿತಿನ್‌ ಗಡ್ಕರಿ ತಮ್ಮ ಅದಮ್ಯ ಪರಿಶ್ರಮ, ಸಾಹಸಗಳಿಂದ ಪಕ್ಷದ ಒಳಗೂ, ಸಾರ್ವಜನಿಕ ಜೀವನದಲ್ಲೂ, ಸರ್ಕಾರದ ಮಟ್ಟದಲ್ಲೂ ಹೆಸರಾದವರು. ನಾಗ್ಪುರ ಮೂಲದ ಗಡ್ಕರಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜತೆಗೆ ನಿಕಟ ಒಡನಾಟ ಇಟ್ಟುಕೊಂಡವರು. ಆರೆಸ್ಸೆಸ್‌ನ ಪ್ರಧಾನ ಕಚೇರಿಯೂ ನಾಗ್ಪುರದಲ್ಲಿದೆ. ದೇಶಭಕ್ತಿ, ಬದ್ಧತೆ, ಶಿಸ್ತು, ನಾಯಕತ್ವ, ಆವಿಷ್ಕಾರ, ಸೃಜನಶೀಲತೆಯ ಸಂಸ್ಕಾರಗಳನ್ನು ಆರೆಸ್ಸೆಸ್‌ ಪ್ರೇರಣೆಯಿಂದ ಕಲಿತರು. ಜಗತ್ತಿನಾದ್ಯಂತ ಸಾರಿಗೆ ವ್ಯವಸ್ಥೆಯಲ್ಲಿನ ಹೊಸ ಸಂಶೋಧನೆಗಳನ್ನು ಅಧ್ಯಯನ ನಡೆಸಿ, ಅವುಗಳನ್ನು ಭಾರತದಲ್ಲೂ ಜಾರಿಗೆ ತಂದ ಕೀರ್ತಿ ಗಡ್ಕರಿಯವರಿಗೆ ಸಲ್ಲುತ್ತದೆ. ಒಂದು ಯೋಜನೆಯನ್ನು ಹಿಡಿದರೆ, ಅದು ಪೂರ್ಣವಾಗಿ ಹಾಗೂ ಕ್ಷಿಪ್ರವಾಗಿ ಅಂತ್ಯವಾಗುವ ತನಕ ವೈಯಕ್ತಿಕ ಬದ್ಧತೆಯಿಂದ ದುಡಿದು ಸಾಧಿಸುವ ವಿಶೇಷ ಗುಣ ಅವರಲ್ಲಿದೆ. ಸಾರಿಗೆ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಗಳಿಸಿರುವ ಅಪಾರ ಜ್ಞಾನ, ಅಂಕಿ ಅಂಶಗಳ ತಿಳುವಳಿಕೆ, ಜಾಣ್ಮೆಯಿಂದ ಸಾಧ್ಯವಾಗಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದೆಯೂ, ಯೋಜನೆಯ ವೆಚ್ಚವನ್ನು ಇಳಿಸುವ ಚಾಕಚಕ್ಯತೆ ಮತ್ತು ಶಿಸ್ತು ಅವರಲ್ಲಿದೆ. ಆಡಳಿತಶಾಹಿ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ, ಮಂದಗತಿಯ ಧೋರಣೆಗಳ ನಡುವೆಯೂ ಸಂಕೀರ್ಣ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವುದು ಅವರ ಹೆಗ್ಗಳಿಕೆ.

ಮುಂಬಯಿ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ 2,000 ಕೋಟಿ ರೂ. ಉಳಿತಾಯ

ಈ ಹಿಂದೆ 1995ರಲ್ಲಿ ಮುಂಬಯಿ-ಪುಣೆ ಎಕ್ಸ್‌ಪ್ರೆಸ್‌ವೇ ಯೋಜನೆಯ ಅನುಷ್ಠಾನದ ಶ್ರೇಯಸ್ಸು ಆಗ ಮಹಾರಾಷ್ಟ್ರದ ಲೋಕೋಪಯೋಗಿ ಸಚಿವರಾಗಿದ್ದ ಗಡ್ಕರಿಯವರಿಗೆ ಸಲ್ಲುತ್ತದೆ. ಆಗ ರಿಲಯನ್ಸ್‌ ಇಂಡಸ್ಟ್ರಿಗೆ ಟೆಂಡರ್‌ನಲ್ಲಿ ನಿರಾಕರಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಆಗಿನ ಮಹಾರಾಷ್ಟ್ರ ಸಿಎಂ ಮನೋಹರ್‌ ಜೋಷಿ ಮತ್ತು ಶಿವ ಸೇನಾ ಮುಖ್ಯಸ್ಥ ಬಾಳಾಸಾಹೇಬ್‌ ಠಾಕ್ರೆಯವರ ಅಸಮಾಧಾನಕ್ಕೂ ಗುರಿಯಾಗಿದ್ದರು. ಬಳಿಕ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಯಿತು. ಟೆಂಡರ್‌ನಲ್ಲಿ ರಿಲಯನ್ಸ್‌ 3,600 ಕೋಟಿ ರೂ. ಕೋಟ್‌ ಮಾಡಿತ್ತು. ಆದರೆ ನಾವು ಕೇವಲ 1,600 ಕೋಟಿ ರೂ.ಗೆ ಯೋಜನೆಯನ್ನು ಪೂರ್ಣಗೊಳಿಸಿದ್ದೆವು. ಸರ್ಕಾರದ ಬೊಕ್ಕಸಕ್ಕೆ 2,000 ಕೋಟಿ ರೂ. ಉಳಿತಾಯವಾಯಿತು ಎಂದು ನೆನಪಿಸಿಕೊಳ್ಳುತ್ತಾರೆ ಗಡ್ಕರಿ.

1995-1999ರ ಅವಧಿಯಲ್ಲಿ ಶಿವಸೇನಾ-ಬಿಜೆಪಿ ನೇತೃತ್ವದ ಸರ್ಕಾರ ಮಹಾರಾಷ್ಟ್ರದಲ್ಲಿತ್ತು. ಲೋಕೋಪಯೋಗಿ ಸಚಿವರಾಗಿ ನಿತಿನ್‌ ಗಡ್ಕರಿ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಈಡೇರಿಸಿದರು. ಮುಂಬಯಿ ಮಹಾನಗರದಲ್ಲಿ 55 ಫ್ಲೈ ಓವರ್‌ಗಳನ್ನು ನಿರ್ಮಿಸಿ ಸಂಚಾರ ದಟ್ಟಣೆಯನ್ನು ಆಗ ಗಣನೀಯವಾಗಿ ಪರಿಹರಿಸಿದರು. ಫ್ಲೈ ಓವರ್‌ ಮ್ಯಾನ್‌ ಎನ್ನಿಸಿದ್ದರು ಗಡ್ಕರಿ.

ವಿಶ್ವ ದಾಖಲೆ ವೇಗದಲ್ಲಿ ರಸ್ತೆ ನಿರ್ಮಾಣ

ನಿತಿನ್‌ ಗಡ್ಕರಿ 2014ರಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಬಂದರು ಖಾತೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ದೇಶದಲ್ಲಿ ವಿಶ್ವದಾಖಲೆಯ ವೇಗದಲ್ಲಿ ರಸ್ತೆಗಳನ್ನು ನಿರ್ಮಿಸಿದರು. ಸೊಲ್ಲಾಪುರ-ವಿಜಯಪುರ ನಡುವೆ ನಾಲ್ಕು ಲೇನ್‌ಗಳಲ್ಲಿ 2.5 ಕಿ.ಮೀ ಕಾಂಕ್ರಿಟ್‌ ರಸ್ತೆಯನ್ನು ಕೇವಲ 24 ಗಂಟೆಯಲ್ಲಿ ನಿರ್ಮಿಸಿ ಗಿನ್ನೆಸ್‌ ದಾಖಲೆ ಸೃಷ್ಟಿಸಲಾಯಿತು. 2020-21ರಲ್ಲಿ ದಿನಕ್ಕೆ ಸರಾಸರಿ 37 ಕಿ.ಮೀ ಹೆದ್ದಾರಿ ನಿರ್ಮಾಣವಾಗಿತ್ತು. 2014-21ರಲ್ಲಿ ಹೆದ್ದಾರಿಗಳ ನಿರ್ಮಾಣ 50% ಹೆಚ್ಚಳವಾಗಿತ್ತು. 2014 ಏಪ್ರಿಲ್‌ನಲ್ಲಿ 91,287 ಕಿ.ಮೀ ಹೆದ್ದಾರಿಗಳಿದ್ದರೆ, 2021ರ ಮಾರ್ಚ್‌ 20ರ ವೇಳೆಗೆ 1,37,625 ಕಿ.ಮೀಗೆ ಏರಿಕೆಯಾಗಿತ್ತು. ಹೆದ್ದಾರಿಗಳ ಬದಿಯಲ್ಲಿ ಗಿಡಗಳನ್ನು ನೆಡಲು ಹಾಗೂ ಸೌಂದರ್ಯ ಹೆಚ್ಚಿಸಲು ಆದ್ಯತೆ ನೀಡಿದ್ದಾರೆ. 2014-22ರ ನಡುವೆ ರಸ್ತೆಗಳ ಅಭಿವೃದ್ಧಿಗೆ ಬಜೆಟ್‌ ಅನುದಾನ ಹಲವು ಪಟ್ಟು ವೃದ್ಧಿಸಿದೆ. 33,414 ಕೋಟಿ ರೂ.ಗಳಿಂದ 1,83,101 ಕೋಟಿ ರೂ.ಗೆ ಹೆಚ್ಚಳವಾಗಿದೆ. 2010-14ಕ್ಕೆ ಹೋಲಿಸಿದರೆ 2015-20ರಲ್ಲಿ ವಾರ್ಷಿಕ ಸರಾಸರಿ ಹೆದ್ದಾರಿಗಳ ನಿರ್ಮಾಣದಲ್ಲಿ 83% ಏರಿಕೆ ಕಂಡು ಬಂದಿದೆ. ದಿಲ್ಲಿಯಲ್ಲಿ ಪೂರ್ವ ವಲಯದ ಮತ್ತು ಪಶ್ಚಿಮ ಹೊರ ವಲಯ ವರ್ತುಲ ರಸ್ತೆಗಳ ನಿರ್ಮಾಣವನ್ನು ಮೂರೇ ವರ್ಷಗಳಲ್ಲಿ ಗಡ್ಕರಿ ಪೂರ್ಣಗೊಳಿಸಿದ್ದರು.

ಭಾರತ್‌ ಮಾಲಾ ಯೋಜನೆಯಡಿಯಲ್ಲಿ 65,000 ಕಿ.ಮೀ ಹೈವೇಗಳನ್ನು ನಿರ್ಮಿಸಲಾಗುತ್ತಿದೆ. ಇದರ ಉದ್ದಕ್ಕೂ ಆರ್ಥಿಕ ಚಟುವಟಿಕೆಗಳ ಕಾರಿಡಾರ್‌ ನಿರ್ಮಾಣವಾಗುತ್ತಿದೆ. ಈಶಾನ್ಯ ರಾಜ್ಯಗಳಲ್ಲಿಯೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಗಡ್ಕರಿ ಕೊಡುಗೆ ದೊಡ್ಡದು. ರಸ್ತೆ ಸಾರಿಗೆ ಮಾತ್ರವಲ್ಲದೆ ಸಾಗರಮಾಲಾ ಯೋಜನೆಯಡಿಯಲ್ಲಿ ಬಂದರುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 574 ಯೋಜನೆಗಳನ್ನು (6 ಲಕ್ಷ ಕೋಟಿ ರೂ.) ಕೈಗೊಳ್ಳಲಾಗಿದೆ. ಬಂದರು ಆಧಾರಿತ ಕೈಗಾರಿಕೆ ಅಭಿವೃದ್ಧಿಗೆ ಹಾದಿ ಸುಗಮವಾಗಿದೆ. ಬಂದರುಗಳ ಆಧುನೀಕರಣಕ್ಕೆ 210 ಪ್ರಾಜೆಕ್ಟ್‌ಗಳನ್ನು ಕೈಗೊಳ್ಳಲಾಗಿದೆ.

ಗಡ್ಕರಿ ಸಾಧನೆಗಳ ಹಿನ್ನೋಟ

ನಿತಿನ್‌ ಗಡ್ಕರಿ ಅವರ ಹುಟ್ಟೂರು ಮಹಾರಾಷ್ಟ್ರದ ನಾಗ್ಪುರ. 1957ರ ಮೇ 27ರಂದು ಕೃಷಿಕ ಕುಟುಂಬದಲ್ಲಿ ಜನಿಸಿದರು. ಬಿಕಾಮ್‌, ಎಲ್‌ಎಲ್‌ಬಿಯನ್ನು ನಾಗ್ಪುರದ ಜಿಎಸ್‌ ಕಾಮರ್ಸ್‌ ಕಾಲೇಜು ಮತ್ತು ಕಾನೂನು ವಿವಿಯಲ್ಲಿ ಓದಿದರು. 1979ರಲ್ಲಿ ವಿದರ್ಭ ವಲಯದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕಾರ್ಯದರ್ಶಿಯಾದರು. 1985ರಲ್ಲಿ ಬಿಜೆಪಿಯ ನಾಗ್ಪುರ ನಗರ ಘಟಕದ ಕಾರ್ಯದರ್ಶಿಯಾದರು. 1990ರಲ್ಲಿ ವಿಧಾನ ಪರಿಷತ್‌ ಸದಸ್ಯರಾದರು. ಮತ್ತೆ 1996ರಲ್ಲಿ ಮರು ಆಯ್ಕೆಯಾದರು. 1995ರಲ್ಲಿ ರಾಜ್ಯದ ಲೋಕೋಪಯೋಗಿ ಸಚಿವರಾದರು. ಈ ಅವಧಿಯಲ್ಲಿ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಜಾರಿಗೊಳಿಸಿದರು.

ಭಾರತದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಮೂಲ ಸೌಕರ್ಯ ಯೋಜನೆಗಳನ್ನು ಹೇಗೆ ಯಶಸ್ವಿಯಾಗಿ ಹಾಗೂ ಕ್ಷಿಪ್ರವಾಗಿ ಅನುಷ್ಠಾನ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರೇ ಗಡ್ಕರಿ. ಬಿಒಟಿ (ಬೋಟ್)‌ ಪರಿಕಲ್ಪನೆಯನ್ನು ಪರಿಚಯಿಸಿದರು. ಅಂದರೆ Build-Operate-Transfer) ಮಾದರಿ. ಈಗ ಅದನ್ನೇ ದೇಶಾದ್ಯಂತ ಖಾಸಗಿ ಸಹಭಾಗಿತ್ವದಲ್ಲಿ ಬೃಹತ್‌ ಮೂಲಸೌಕರ್ಯ ಯೋಜನೆಗಳ ಜಾರಿಗೆ ಬಳಸಲಾಗುತ್ತಿದೆ.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಗಡ್ಕರಿ ಅವರ ಸಾಮರ್ಥ್ಯ, ಕೌಶಲದ ಅರಿವಿತ್ತು. ಹೀಗಾಗಿ ಮೂಲಸೌಕರ್ಯ ಅಭಿವೃದ್ಧಿ ಕುರಿತ ಸಮಿತಿಗೆ ಉಸ್ತುವಾರಿಯಾಗಿ ಗಡ್ಕರಿಯವರನ್ನು ನೇಮಿಸಿದ್ದರು. ವಾಜಪೇಯಿ ಅವರ ಮಹತ್ತ್ವಾಕಾಂಕ್ಷೆಯ ಸುವರ್ಣ ಚತುಷ್ಪಥ ಯೋಜನೆ ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯನ್ನು ಮುಂಚೂಣಿಯಲ್ಲಿ ನಿಂತು ನಿರ್ವಹಿಸಿದರು. 2009ರ ಡಿಸೆಂಬರ್‌ನಲ್ಲಿ ಭಾರತಾದ್ಯಂತ ಸಂಚರಿಸಿ ಯುಪಿಎಯ ವೈಫಲ್ಯಗಳನ್ನು ಪ್ರಚಾರ ಮಾಡಿದ್ದರು. 52ರ ವಯಸ್ಸಿನಲ್ಲಿ ಬಿಜೆಪಿಯ ಕಿರಿಯ ಅಧ್ಯಕ್ಷರಾಗಿದ್ದರು. 2014ರಲ್ಲಿ ನಾಗ್ಪುರ ಲೋಕಸಭೆ ಕ್ಷೇತ್ರದಲ್ಲಿ 2.85 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು. ಆಗ ದಿನಕ್ಕೆ 12 ಕಿ.ಮೀನಂತೆ ನಿರ್ಮಾಣವಾಗುತ್ತಿದ್ದ ಹೆದ್ದಾರಿಗಳ ನಿರ್ಮಾಣದ ವೇಗವನ್ನು 30 ಕಿ.ಮೀಗೆ ವೃದ್ಧಿಸಿದ್ದು ಗಡ್ಕರಿ. 2020-21ರಲ್ಲಂತೂ ದಿನಕ್ಕೆ ಸರಾಸರಿ 37 ಕಿ.ಮೀಗೆ ಜಿಗಿಯಿತು.

ಎಲೆಕ್ಟ್ರಿಕ್‌ ವಾಹನಗಳ ಕ್ರಾಂತಿಗೆ ಗಡ್ಕರಿ ರೆಡಿ!

ನೂತನ ಮೋಟಾರು ವಾಹನ ಕಾಯಿದೆ ರಚನೆಯಲ್ಲೂ ಗಡ್ಕರಿ ಪಾತ್ರ ದೊಡ್ಡದು. ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಕ್ರಾಂತಿಗೆ ಗಡ್ಕರಿ ಈಗ ಅಣಿಯಾಗುತ್ತಿದ್ದಾರೆ. 2023ರಲ್ಲಿ ಎಲೆಕ್ಟ್ರಿಕ್‌ ಕಾರುಗಳು ಪೆಟ್ರೋಲ್‌ ಕಾರುಗಳ ದರದಲ್ಲಿಯೇ ಸಿಗಲಿದೆ ಎಂಬುದು ಅವರ ಆಶಯ. 2022ರಲ್ಲಿ 17 ಲಕ್ಷ ಎಲೆಕ್ಟ್ರಿಕ್‌ ವಾಹನಗಳು ನೋಂದಣಿಯಾಗಿದೆ. ಭಾರತದಲ್ಲಿ 1.5 ಲಕ್ಷ ಸಾರಿಗೆ ಬಸ್‌ಗಳು ಇವೆ. ಅವುಗಳಲ್ಲಿ 93% ಬಸ್‌ಗಳು ಯೋಗ್ಯವಾಗಿಲ್ಲ. ಸರ್ಕಾರ ಈ ಬಸ್‌ಗಳ ಬದಲಿಗೆ ಎಲೆಕ್ಟ್ರಿಕ್‌ ಬಸ್‌ಗಳನ್ನು ಓಡಿಸಲು ಯೋಜಿಸುತ್ತಿದೆ ಎನ್ನುತ್ತಾರೆ ಗಡ್ಕರಿ! ಹೀಗೆ ಆರ್ಥಿಕತೆ, ಪರಿಸರ, ಸಾಮಾಜಿಕ, ಔದ್ಯೋಗಿಕವಾಗಿ ಅನುಕೂಲವಾಗುವ ಬೃಹತ್‌ ಯೋಜನೆಗಳನ್ನು ಲೀಲಾಜಾಲವಾಗಿ ಅನುಷ್ಠಾನಗೊಳಿಸುತ್ತಿರುವುದರಿಂದ ಗಡ್ಕರಿ ಇದ್ದಲ್ಲಿ ಉತ್ಸಾಹ ಗರಿಗೆದರುತ್ತದೆ. ಎಲ್ಲರೂ ಅವರ ಮಾತುಗಳನ್ನು ಆಸಕ್ತಿಯಿಂದ ಆಲಿಸುತ್ತಾರೆ.

Exit mobile version