Site icon Vistara News

ಕೇರಂ ಬೋರ್ಡ್‌ ಅಂಕಣ | ಉಸಿರು ಹಿಡಿದು ಹಾಡುವೆ, ಕೇಳಡಿ ಕಣ್ಮಣಿ!

spb

1990 ಎಂದರೆ ತಮಿಳು ಚಿತ್ರರಂಗದಲ್ಲಿ (ಕನ್ನಡದಲ್ಲೂ) ಕಾಲೇಜ್‌ ರೊಮ್ಯಾನ್ಸ್‌ಗಳ ಕಾಲ. ಅದೇ ಸಂದರ್ಭದಲ್ಲಿ ʻಕೇಳಡಿ ಕಣ್ಮಣಿʼ ಎಂಬ ಸಿನಿಮಾ ಬಂತು. 285 ದಿನ ದಿನ ಥಿಯೇಟರ್‌ಗಳಲ್ಲಿ ಓಡಿತು. ಎಸ್‌.ಪಿ ಬಾಲಸುಬ್ರಹ್ಮಣ್ಯಂ ಈ ಸಿನಿಮಾದ ಹೀರೋ! ಅದುವರೆಗೂ ಬಾಲು ಸಿನಿಮಾಗಳಲ್ಲಿ ಸಣ್ಣ ಪುಟ್ಟ ರೋಲ್‌ ಮಾಡುತ್ತಿದ್ದುದಿತ್ತು. ಇಂಥದೇ ಒಂದು ಕ್ಯಾಮಿಯೋ ರೋಲ್‌ ಶೂಟ್‌ ಮಾಡುತ್ತಿದ್ದ ಸಂದರ್ಭದಲ್ಲಿ ತರುಣ ನಿರ್ದೇಶಕ ವಸಂತ್‌ ಇವರನ್ನು ಗಮನಿಸಿದರು. ‘ಎಷ್ಟೊಂದು ಕ್ಯಾಶುಯಲ್ಲಾಗಿ, ಕ್ಯಾಮೆರಾ ಎದುರಿಗಿಲ್ಲ ಎಂಬಂತೆ ಇರುತ್ತಾರಲ್ಲʼ ಎನಿಸಿತು ಅವರಿಗೆ. ನಂತರ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು ಅನಂತು ಜತೆ ಸೇರಿ ಒಂದು ಸ್ಕ್ರಿಪ್ಟ್‌ ರಚಿಸಿದರು.

ಆಗ ಬಾಲು ಸರ್‌ ಹಾಡುವುದರಲ್ಲಿ ಬ್ಯುಸಿಯಾಗಿದ್ದ ಕಾಲ. ವಸಂತ್‌ ಸ್ಕ್ರಿಪ್ಟ್‌ ತೆಗೆದುಕೊಂಡು ಅವರ ಬಳಿ ಹೋದಾಗ, ʼʼಈ ಸಿನಿಮಾ ಫೇಲ್‌ ಆದರೆ ನಾನೇನೋ ಮತ್ತೆ ಹಾಡುಗಾರಿಕೆಗೆ ಮರಳುವೆ. ಆದರೆ ನಿನ್ನ ಕಥೆಯೇನು?ʼʼ ಎಂದು ಬಾಲು ತಮಾಷೆ ಮಾಡಿದರಂತೆ. ವಸಂತ್‌ ಅವರನ್ನು ಉಳಿಸುವುದು ಬಾಲು ಇರಾದೆಯಾಗಿತ್ತು. ಆದರೆ ವಸಂತ್‌ ಹಠ ಹಿಡಿದರು. ಬಾಲು ಬಗ್ಗಿದರು.

ವಸಂತ್‌ಗೂ ಅದು ಹೊಸತು, ಲೀಡ್‌ ರೋಲ್‌ ಆಗಿ ಎಸ್‌ಪಿಬಿಗೂ ಹೊಸತು. ಬಾಲು ಸರ್‌ಗೆ ಜತೆಗಾತಿಯಾಗಿ ರಾಧಿಕಾ. ಇವರು ಪ್ರಬುದ್ಧ ವಯಸ್ಸಿನ ಪ್ರೇಮಿಗಳಾಗಿ ಕಾಣಿಸಿಕೊಂಡರು. ಇನ್ನೊಂದು ಯುವಜೋಡಿ- ಆ ಪಾತ್ರಗಳಲ್ಲಿ ನಮ್ಮ ರಮೇಶ್‌ ಅರವಿಂದ್‌ ಮತ್ತು ಅಂಜು. ಚಿತ್ರ ಆರಂಭವಾಗುವುದು ಕಾಲೇಜ್‌ಮೇಟ್‌ಗಳಾದ ರಮೇಶ್‌ ಮತ್ತು ಅಂಜು ಅವರ ರೊಮ್ಯಾನ್ಸ್‌, ಹುಡುಗಾಟಿಕೆಯ ದೃಶ್ಯಗಳಿಂದ. ಇದರ ಮೂಲಕ ಪ್ರೇಕ್ಷಕರನ್ನು ಚಿತ್ರದೊಳಕ್ಕೆ ಸೆಳೆದುಕೊಳ್ಳುವ ವಸಂತ್‌, ನಿಧಾನವಾಗಿ ಬಾಲು ಮತ್ತು ರಾಧಿಕಾರ ಪ್ರೌಢ ಪ್ರೇಮದ ಸುಳಿಯೊಳಕ್ಕೆ ನಮ್ಮನ್ನು ಸೆಳೆದುಕೊಂಡುಬಿಡುತ್ತಾರೆ.

ಬಾಲು ಇದರಲ್ಲಿ ವಿಧುರ ಮತ್ತು ಪುಟ್ಟ ಹುಡುಗಿಯೊಬ್ಬಳ ಸಿಂಗಲ್‌ ಫಾದರ್‌. ರಾಧಿಕಾ ಇದರಲ್ಲಿ ಟೀಚರ್.‌ ತಂದೆ ತಾಯಿಗೆ ಮಾತು- ಶ್ರವಣ ಸಮಸ್ಯೆ ಇರುವುದರಿಂದಾಗಿ, ಅವರನ್ನು ನೋಡಿಕೊಳ್ಳುವುದಕ್ಕಾಗಿ ಎಂದೂ ಮದುವೆಯಾಗದಿರುವ ನಿರ್ಧಾರ ಮಾಡಿದ್ದಾಳೆ ಆಕೆ. ಆದರೆ ಸನ್ನಿವೇಶಗಳು ಬಾಲು ಮತ್ತು ರಾಧಿಕಾರನ್ನು ಹತ್ತಿರ ಹತ್ತಿರ ತರುತ್ತವೆ.

ರಾಧಿಕಾ- ಬಾಲು ಪ್ರೇಮ ಒಂದು ತಂಗಾಳಿಯಂತೆ, ಶ್ರೀಗಂಧದ ಪರಿಮಳದಂತೆ ಈ ಚಿತ್ರದಲ್ಲಿ ಸಾಗುತ್ತದೆ. ಇಬ್ಬರಿಗೂ ತಮ್ಮೆದುರು ಇರುವ ಅಡೆತಡೆಗಳ ಅರಿವು ಇದೆ. ಎಸ್‌ಪಿಬಿ ಈ ಚಿತ್ರದಲ್ಲಿ ಮೊದಲ ಪ್ರವೇಶದಲ್ಲಿ ನಮಗೆ ಇಷ್ಟವಾಗದಿರಬಹುದು. ಆದರೆ ನಂತರ ಗುಂಡುಗುಂಡಾದ ತಮ್ಮ ದೇಹದಲ್ಲಿ ಸದಾ ಚಿಮ್ಮುವ ಲವಲವಿಕೆ, ಮುಗುಳುನಗೆಗಳಿಂದ ಇಡೀ ಚಿತ್ರವನ್ನು ತಮ್ಮ ಹೆಸರಿಗೆ ಬರೆಸಿಕೊಂಡುಬಿಡುತ್ತಾರೆ. ಸಿನಿಮಾದಲ್ಲಿ ಸ್ಮರಣೀಯ ಅನಿಸುವ ಹಲವಾರು ದೃಶ್ಯಗಳಿವೆ. ತನ್ನ ಅಪ್ಪನನ್ನು ಬೇರೊಬ್ಬ ತಾಯಿಯ ಜತೆ ಹಂಚಿಕೊಳ್ಳಲಾಗದ ಪುಟ್ಟ ಮಗು ಅನುವಿನ ಸಿಟ್ಟು, ಪರಿತ್ಯಕ್ತ ಭಾವ, ಅದರಿಂದಾಗಿ ಬಾಲು- ರಾಧಿಕಾ ಜೋಡಿ ತೆಗೆದುಕೊಳ್ಳಬೇಕಾಗಿ ಬರುವ ವಿಷಾದಮಯ ನಿರ್ಧಾರಗಳೆಲ್ಲ ಒಂದು ಪ್ರೇಮಮಯ ಚಿತ್ರಪಟದ ಶಿಖರಗಳು.

ಈ ಸಿನಿಮಾ ಬಾಲು ಸರ್‌ ಅವರ ಗಾಯನ ಪ್ರತಿಭೆಗೂ ನಟನಾ ಪ್ರತಿಭೆಗೂ ಜನ ಸಲ್ಲಿಸಿದ ಘನತೆಯ ಗೌರವ ಎಂಬಂತೆ ತಮಿಳುನಾಡಿನ ಥಿಯೇಟರ್‌ಗಳಲ್ಲಿ 285 ದಿನ ʻಕಿತ್ತುಕೊಂಡು ಓಡಿತುʼ. ಯಾವ ಸ್ಟಾರ್‌ ಫಿಲಂಗಳಿಗೂ ಇದನ್ನು ನಿಲ್ಲಿಸಲಾಗಲಿಲ್ಲ. ಇಂದಿಗೂ ತಮಿಳು ಸಿನಿಮಾ ಹಿಸ್ಟರಿಯಲ್ಲಿ ಈ ಫಿಲಂ ಟಾಪ್‌ ಟೆನ್‌ ಲಿಸ್ಟಿನಲ್ಲಿ ಸದಾ ಇರುವಂಥದು. ಇದರ ಬಳಿಕವೂ ಮೊದಲೂ ಬಾಲು ಅನೇಕ ಫಿಲಂಗಳಲ್ಲಿ ನಟಿಸಿದ್ದಾರೆ. ಆದರೆ ಯಾವುದರಲ್ಲೂ ಕೇಳಡಿ ಕಣ್ಮಣಿಯಂಥ ಪ್ರಮುಖ ಪಾತ್ರ ಮಾಡಲಿಲ್ಲ (ʼಮಿಥುನʼ ಮಾತ್ರ ಇದಕ್ಕೆ ಅಪವಾದ).

ಚಿತ್ರದಲ್ಲಿ ಎಲ್ಲದಕ್ಕೂ ಕಲಶವಿಟ್ಟಂತೆ ಇರುವುದು ʼಮನ್ನಿಲ್‌ ಇಂದ ಕಾದಲನ್ರಿʼ ಹಾಡು. ನೀವು ಯೂಟ್ಯೂಬ್‌ನಲ್ಲಿ ಹೋಗಿ ʻಎಸ್‌ಪಿಬಿ ಬ್ರೆತ್‌ಲೆಸ್‌ ಸಾಂಗ್‌ʼ ಎಂದು ಸರ್ಚ್‌ ಕೊಟ್ಟರೆ ಮೊದಲು ಕಾಣಿಸಿಕೊಳ್ಳುವುದೇ ಈ ಹಾಡು. ಈ ಹಾಡಿನ ಮೂಲ ಪರಿಕಲ್ಪನೆ ನಿರ್ದೇಶಕ ವಸಂತ್‌ ಅವರದ್ದಂತೆ. ಸಂಗೀತ ನಿರ್ದೇಶನ ಒನ್ಸ್‌ ಎಗೇಯ್ನ್‌ ದಿ ಗ್ರೇಟ್‌, ಇಳಯರಾಜ ಅವರದು. ಆದರೆ ಹಾಡಿಗೆ ಜೀವ ತುಂಬಿದವರು ಬಾಲು. ʻʻಪ್ರೇಮವಿಲ್ಲದೇ ಯಾರಾದರೂ ಜೀವಿಸಬಹುದೇ? ಹೆಣ್ಣಿನ ನೋಟವಿಲ್ಲದೆ ಏಳು ಸ್ವರಗಳು ಸಂಗೀತವಾಗಬಹುದೆ? ಹೆಣ್ಣು ಜೀವವಿಲ್ಲದೆ ಯಾವ ಸಂತೋಷ?ʼʼ ಎಂದು ಆರಂಭವಾಗುವ ಹಾಡನ್ನು ಉಸಿರು ಬಿಗಿಹಿಡಿದು ಹಾಡುತ್ತೇನೆಂದು ರಾಧಿಕಾ ಮುಂದೆ ಸವಾಲು ಹಾಕುತ್ತಾರೆ ಬಾಲು. ಹಾಗೇ ನಂತರದ ಎರಡು ಚರಣಗಳನ್ನು ಉಸಿರು ತೆಗೆದುಕೊಳ್ಳದೆ ಹಾಡುತ್ತಾರೆ.

ಇದನ್ನೂ ಓದಿ | ಕೇರಂ ಬೋರ್ಡ್‌ ಅಂಕಣ | ಅಂಡರ್‌ಪಾಸ್‌ಗಳಲ್ಲಿ ಪಿಸುಗುಡುವ ಕಡಲು

ಕಡಲಿನ ಅಲೆಗಳ ಮುಂದೆ ಬಾಲು- ರಾಧಿಕಾ ಜೋಡಿ, ಹಿಡಿದಿಟ್ಟುಕೊಂಡ ಉಸಿರಲ್ಲಿ ಹಾಡುತ್ತಾ ರಾಧಿಕಾ ಮುಂದೆ ಬಂದು ನಿಂತು ನಿಲ್ಲಿಸಿ ಫಟ್ಟನೆ ಉಸಿರುಬಿಡುವ ಬಾಲು ಎಷ್ಟು ಮುದ್ದು ಉಕ್ಕಿಸುತ್ತಾರೆಂದರೆ…ಸಂಗೀತಪ್ರೇಮಿಗಳಿಗೂ ಸಿನಿಪ್ರೇಮಿಗಳಿಗೂ ಅವರು ಇಷ್ಟವಾಗಿದ್ದರಲ್ಲಿ ವಿಶೇಷವೇನು! ಈ ಹಾಡಿನ ಮೂಲಕ ಉಸಿರು ನಿಲ್ಲಿಸಿಕೊಂಡು ಹಾಡುವ ಒಂದು ಸಾಧ್ಯತೆಯನ್ನೂ, ಧ್ವನಿಯ ಏರಿಳಿತದ ಮೂಲಕವೇ ಉಸಿರನ್ನು ನಿಭಾಯಿಸುವ ತಂತ್ರವನ್ನೂ ಬಾಲು ಹೇಳಿಕೊಟ್ಟರು ಎಂದರೆ ಅತಿಶಯೋಕ್ತಿಯಲ್ಲ. ಇದಾದ ಎಷ್ಟೋ ಕಾಲದ ನಂತರ ಶಂಕರ್‌ ಮಹದೇವನ್‌ ಹಿಂದಿಯಲ್ಲೂ ಬ್ರೆತ್‌ಲೆಸ್‌ ಹಾಡು ಹಾಡಿದರು. ಮಧ್ಯೆ ನಮ್ಮ ರಾಜೇಶ್‌ಕೃಷ್ಣನ್‌ ಕೂಡ ʼಒಂದೇ ಉಸಿರಂತೆʼ ಹಾಡಿದರು. ಆದರೆ ಮನ್ನಿಲ್‌ ಇಂದ ಹಾಡಿನಲ್ಲಿರುವ ಸಾಂದ್ರ ಪ್ರೇಮ ಮತ್ತು ಉಸಿರುಗಟ್ಟಿಸುವ ವಿಷಾದ ಇವೆರಡರಲ್ಲೂ ಇಲ್ಲ. ಹೀಗಾಗಿಯೇ ಇದು cult classic ಅನ್ನಿಸಿಕೊಂಡಿದ್ದರಲ್ಲೂ ಅರ್ಥವಿದೆ.

ಈಗ ನೋಡಿದರೆ, ಎಸ್‌ಪಿಬಿ ನಿಜಕ್ಕೂ ಸಮಯದ ವಿರುದ್ಧ ಸವಾಲಿಗೆ ಬಿದ್ದವರಂತೆ, ತಮ್ಮ ಜೀವನದುದ್ದಕ್ಕೂ ಉಸಿರುಗಟ್ಟಿ ಹಾಡಿದವರಂತೆ ಕಾಣಿಸುತ್ತಾರೆ. ಹಾಗೆ ನೋಡಿದಾಗ ಈ ಹಾಡೇ ಅವರ ಜೀವನಕ್ಕೆ ಒಂದು ಹೋಲಿಕೆ. ಬಾಲು ಹಾಡಿದ ಹಾಡುಗಳ ಸಂಖ್ಯೆ ನಲುವತ್ತು ಸಾವಿರ ಅನ್ನುತ್ತಾರಾದರೂ ನಿಜಕ್ಕೂ ಯಾರಿಗೂ ಅದು ಎಷ್ಟೆಂದು ಗೊತ್ತಿಲ್ಲ. ಹಿಂದಿಯಿಂದ ಮಲಯಾಳದವರೆಗೂ ಹತ್ತಾರು ಭಾಷೆಗಳಲ್ಲಿ ಹಾಡಿದಂತೆ ಕ್ಲಾಸಿಕ್‌ ಚಿತ್ರಗಳಿಂದ ಸ್ಥಳೀಯ ಕ್ಷೇತ್ರಗಳ ಭಜನಾ ಕ್ಯಾಸೆಟ್‌ಗಳವರೆಗೆ ಅವರ ರೇಂಜು ಹಬ್ಬಿದೆ. ಸ್ಟುಡಿಯೋಗೆ ಬಂದ ಕ್ಷಣಾರ್ಧದಲ್ಲಿ ರೆಡಿಯಾಗಿ ಒಂದೇ ಟೇಕ್‌ನಲ್ಲಿ ಹಾಡಿ ಓಕೆ ಅನ್ನಿಸಿಕೊಳ್ಳುತ್ತಿದ್ದ ಅವರ ಅಗಾಧ ಪ್ರತಿಭೆಯ ಮುಂದೆ ಉಳಿದವರು ಮಂಕಾಗಿಬಿಡುತ್ತಾರೆ. ಉಸಿರು ಬಿಗಿಹಿಡಿದು ಹಾಡಿ ನಮ್ಮನ್ನೆಲ್ಲ ರಂಜಿಸಲೆಂದೇ ಧರೆಗಿಳಿದ ಗಂಧರ್ವನೇ ಏನೋ ಅನಿಸಿಬಿಡುತ್ತಾರೆ ಅವರು.

ಕೇಳಡಿ ಕಣ್ಮಣಿ- ಎಂಬುದಕ್ಕೆ “ಕೇಳು, ಕಣ್ಮಣಿʼ ಎಂದರ್ಥ. ಎಸ್‌ಪಿಬಿ ಇಲ್ಲದ ಹೊತ್ತಿನಲ್ಲಿ ನಮಗೆ ಅವರ ಹಾಡುಗಳನ್ನು ಕೇಳುವುದೇ ಆನಂದದ, ಅವರಿಲ್ಲದ ಶೂನ್ಯವನ್ನು ತುಂಬಿಕೊಳ್ಳುವ ದಾರಿ ಎನಿಸುತ್ತದಲ್ಲವೇ. ೧೯೮೫ರಲ್ಲಿ ತಮಿಳಿನಲ್ಲಿ ಬಂದ ʻಉದಯ ಗೀತಂʼ ಎಂಬ ಒಂದು ಸಿನಿಮಾದಲ್ಲಿ ʻಸಂಗೀತ ಮೇಘಂʼ ಎಂಬ ಒಂದು ಹಾಡು ಇದೆ. ಇಳಯರಾಜ ಸಂಗೀತ ನಿರ್ದೇಶನದಲ್ಲಿ ಈ ಹಾಡನ್ನು ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಇದರಲ್ಲೊಂದು ಸಾಲು- ʻಇಂದ ದೇಹಂ ಮರೈಯಾಂದಾಲುಂ/ ಇಸೈಯಾಯಿ ಮಲರ್ವೆನ್…‌ʼʼ ಇದರ ಅರ್ಥ- ʼʼಈ ದೇಹ ಮರೆಯಾಗುತ್ತದೆ, ಆದರೆ ನಾನು ಸಂಗೀತವಾಗಿ ಮರಳುವೆʼʼ ಎಂದಾಗುತ್ತದೆ. ಈ ಹಾಡನ್ನು ಎಸ್‌ಪಿಬಿಗಾಗಿಯೇ ಬರೆದಿರಬೇಕು. ಅವರ ವಿಷಯದಲ್ಲಿ ಇದು ಅಕ್ಷರಶಃ ನಿಜ. ಅವರು ನಮ್ಮ ಎದೆಗೆ ಸಂಗೀತವಾಗಿ ಮತ್ತೆ ಮತ್ತೆ ಮರಳುತ್ತಲೇ ಇರುವವರು.

ಇದನ್ನೂ ಓದಿ | ರಾಜಮಾರ್ಗ ಅಂಕಣ | ಎ‌ಸ್ಪಿಬಿ ಹೃದಯ ವೈಶಾಲ್ಯತೆ ಒಬ್ಬ ಹೊಸ ಗಾಯಕನಿಗೆ ಜನ್ಮ ಕೊಟ್ಟಿತು!

Exit mobile version