Site icon Vistara News

Sadguru Prerane : Do you believe? ಜೀವಕ್ಕೆ ಜೀವ, ಉಸಿರಿಗೆ ಉಸಿರು ಕೊಡುವ ಜಗತ್ತಿನ ಏಕೈಕ ಫ್ರೆಂಡ್‌ ಎಂದರೆ ಮರಗಳು!

sadguru and trees

ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್‌
(Sadguru Jaggi Vasudev, Isha Foundation)
ಜನರು ನನ್ನನ್ನು ಯಾವಾಗಲೂ (Sadguru Prerane) ಕೇಳುತ್ತಿರುತ್ತಾರೆ, “ಒಬ್ಬ ಆಧ್ಯಾತ್ಮಿಕ ನಾಯಕ, ಒಬ್ಬ ಯೋಗಿ, ಯಾಕೆ ಮರಗಳನ್ನು ನೆಡುತ್ತಿದ್ದಾರೆ? (planting trees)” ಎಂದು. ದುರಾದೃಷ್ಟವಷಾತ್, ಮನುಷ್ಯರ ಮನಸ್ಸುಗಳಲ್ಲಿ, ನಾವು ಜೀವನವನ್ನು ಯಾವ ರೀತಿಯಲ್ಲಿ ವಿಭಜಿಸಿದ್ದೇವೆಂದರೆ, ಒಂದನ್ನು ಧ್ವಂಸಗೊಳಿಸುತ್ತೇವೆ ಮತ್ತು ಮತ್ತೊಂದು ಬದುಕುತ್ತದೆ ಎಂದು ಆಶಿಸುತ್ತಿದ್ದೇವೆ. ಮರಗಳು ನಮ್ಮ ಅತ್ಯಂತ ಹತ್ತಿರದ ಸಂಬಂಧಿಗಳು (Trees are close relatives). ಅವು ಬಿಟ್ಟ ಗಾಳಿಯನ್ನು ನಾವು ತೆಗೆದುಕೊಳ್ಳುತ್ತೇವೆ; ನಾವು ಬಿಟ್ಟ ಉಸಿರನ್ನು ಅವು ತೆಗೆದುಕೊಳ್ಳುತ್ತವೆ ಮತ್ತು ಅದರಿಂದಲೇ ನಮ್ಮ ಜೀವನ ನಡೆಯುತ್ತಿದೆ. ಅವು ನಮ್ಮ ಶ್ವಾಸಕೋಶದ ಹೊರಭಾಗದಂತೆ (External lungs) ಕೆಲಸ ಮಾಡುತ್ತಿವೆ. ನೀವು ಜೀವಿಸಿರಬೇಕಾದರೆ ನೀವು ನಿಮ್ಮ ಶರೀರವನ್ನು ಕಡೆಗಣಿಸಲಾಗದು. ಈ ಭೂಮಿಯು ಅದಕ್ಕಿಂತ ಯಾವ ರೀತಿಯಲ್ಲೂ ಬೇರೆಯಲ್ಲ. ನೀವು “ನನ್ನ ಶರೀರ” ಎಂದು ಕರೆಯುತ್ತಿರುವುದು ಈ ಭೂಮಿಯ ಒಂದು ತುಣುಕಷ್ಟೆ (Body is piece of Earth).

ನಾವು “ಆಧ್ಯಾತ್ಮಿಕತೆ” ಎಂದು ಹೇಳಿದಾಗ, ನಾವು ಮೇಲೆ ಅಥವಾ ಕೆಳಗೆ ನೋಡುವುದರ ಬಗ್ಗೆ ಮಾತನಾಡುತ್ತಿಲ್ಲ. ಅದು ಒಳಮುಖವಾಗುವುದಾಗಿದೆ. ಒಳಗೆ ನೋಡುವುದರ ಮೊದಲ ಮೂಲಭೂತ ಅಂಶವೆಂದರೆ ನೀವು ಸಹಜವಾಗಿಯೇ ನಿಮ್ಮ ಸುತ್ತಲಿನ ಎಲ್ಲದರ ಭಾಗವಾಗಿದ್ದೀರಿ ಎನ್ನುವುದನ್ನು ಮನಗಾಣುವುದು. ಆ ತಿಳುವಳಿಕೆಯಿಲ್ಲದಿದ್ದರೆ, ಖಂಡಿತವಾಗಿಯೂ ಆಧ್ಯಾತ್ಮಿಕತೆ ಎನ್ನುವುದು ಸಾಧ್ಯವಿಲ್ಲ. ಅದು ಆಧ್ಯಾತ್ಮಿಕತೆಯ ಗುರಿಯಲ್ಲ, ಮೂಲಭೂತ ಅಂಶ.

sadguru in forest

ಇಂದು ಆಧುನಿಕ ಭೌತಶಾಸ್ತ್ರವು (Modern Physics) ಇಡೀ ಅಸ್ತಿತ್ವವು ಒಂದೇ ಶಕ್ತಿಯ ಅಭಿವ್ಯಕ್ತಿಯಾಗಿದೆ ಎಂದು ಹೇಳುತ್ತಿದೆ. ಇಂದು, ನಿಮ್ಮ ಶರೀರದ ಪ್ರತಿಯೊಂದು ಕಣವೂ ವಿಶ್ವದೊಂದಿಗೆ ನಿರಂತರವಾಗಿ ವ್ಯವಹರಿಸುತ್ತದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳು ಲಭ್ಯವಿದೆ. ಆಧ್ಯಾತ್ಮಿಕ ಪ್ರಕ್ರಿಯೆ ಎನ್ನುವುದು ವ್ಯಕ್ತಿಯ ಗ್ರಹಣ ಸಾಮರ್ಥ್ಯವನ್ನು ವೃದ್ಧಿಸುವುದು ಮತ್ತು ಇದನ್ನು ಅನುಭವಕ್ಕೆ ತಂದುಕೊಳ್ಳುವುದಾಗಿದೆ. ಈ ಶುಷ್ಕ ಮಾಹಿತಿಯು ನಿಮ್ಮ ಕಲ್ಪನೆಯನ್ನು ಪ್ರಚೋದಿಸುವುದನ್ನು ಬಿಟ್ಟರೆ ನಿಮ್ಮ ಜೀವನವನ್ನೇನೂ ಸುಧಾರಿಸುವುದಿಲ್ಲ, ಅದೊಂದು ಜೀವಂತ ಅನುಭವವಾದಾಗ, ನೀವು ನಿಮ್ಮ ಬಗ್ಗೆ ಕಾಳಜಿ ವಹಿಸುವಂತೆಯೇ ನಿಮ್ಮ ಸುತ್ತಲಿರುವುದರ ಬಗ್ಗೆ ಕಾಳಜಿ ವಹಿಸುವುದು ಸಹ ಒಂದು ಸಹಜ ಪ್ರಕ್ರಿಯೆಯಾಗುತ್ತದೆ.

ವಿಶ್ವಸಂಸ್ಥೆಯು, 2050ರ ವೇಳೆಗೆ ನಮ್ಮ ಜನಸಂಖ್ಯೆ (Population of India) 9.6 ಶತಕೋಟಿ ತಲುಪುತ್ತದೆ ಎಂದು ಹೇಳುತ್ತಿದೆ. ಭಾರತದಲ್ಲಿ, ಈಗ 140 ಕೋಟಿ ಜನರಿಗೆ ಆಹಾರ ನೀಡಲು ಶೇಕಡಾ ಐವತ್ತೆರಡರಷ್ಟು ಭೂಮಿಯನ್ನು ಉಳಲಾಗುತ್ತಿದೆ. ನಮ್ಮ ರೈತರು, ಕೇವಲ ಪ್ರಾಥಮಿಕ ಹಾಗೂ ಶಿಥಿಲಗೊಂಡ ಮೂಲಸೌಕರ್ಯಗಳನ್ನು ಬಳಸಿಕೊಂಡು ಸುಮಾರು ಒಂದುನೂರು ಕೋಟಿ ಜನರಿಗೆ ಆಹಾರವನ್ನು ಒದಗಿಸುತ್ತಿರುವುದು ಅತ್ಯದ್ಭುತ ಸಂಗತಿಯಾಗಿದೆ. ಆದಾಗ್ಯೂ, ಆಹಾರವನ್ನು ಉತ್ಪಾದಿಸುವವರೇ ಸರಿಯಾದ ಆಹಾರವನ್ನು ತಿನ್ನುತ್ತಿಲ್ಲ. ಅದು ಹೆಮ್ಮೆ ಪಡುವ ಸಂಗತಿಯಲ್ಲ. ನಮ್ಮೆಲ್ಲರಿಗಾಗಿ ಆಹಾರವನ್ನು ಉತ್ಪಾದಿಸುವ ಜನರ ಮಕ್ಕಳು ಹೊಟ್ಟೆತುಂಬಾ ಉಣ್ಣುವುದಿಲ್ಲ. ಅದೊಂದು ಪ್ರಶಂಸನೀಯ ಸಂಗತಿಯಲ್ಲ.

ಇದಕ್ಕೆ ಮುಖ್ಯವಾದ ಕಾರಣ “ಇಷ್ಟು ಭೂಮಿಗೆ, ಎಷ್ಟು ಜನಸಂಖ್ಯೆಯನ್ನು ನಾವು ಪೋಷಿಸಬಹುದು?” ಎಂಬುದನ್ನು ನಿರ್ಧರಿಸುವ ಹೊಣೆಗಾರಿಕೆಯನ್ನು ನಾವು ತೆಗೆದುಕೊಂಡಿಲ್ಲದಿರುವುದು. ನಮ್ಮ ಭೂಮಿಯು ಕೊನೆಯಿಲ್ಲದ ಮಾನವ ಜನಸಂಖ್ಯಾ ಸ್ಫೋಟವನ್ನು (population Explosion) ಖಂಡಿತವಾಗಿಯೂ ಪೋಷಿಸಲಾರದು. ನಾವು ನಮ್ಮ ಜನಸಂಖ್ಯೆಯನ್ನು ಪ್ರಜ್ಞಾಪೂರ್ವಕವಾಗಿ ನಿಯಂತ್ರಿಸಬೇಕು ಅಥವಾ ಪ್ರಕೃತಿಯು ಅದನ್ನು ಬಹಳ ಕ್ರೂರವಾದ ಮತ್ತು ದುಃಖಕರ ರೀತಿಯಲ್ಲಿ ಮಾಡುತ್ತದೆ. ಇದೇ ನಮಗಿರುವ ಆಯ್ಕೆ.

sadguru in forest

ಈ ಭೂಮಿ ಕೇವಲ ಮನುಷ್ಯರಿಗಾಗಿ ಮಾತ್ರ ಸೃಷ್ಟಿಸಲ್ಪಟ್ಟಿದೆ ಎನ್ನುವುದು ಒಂದು ಅತ್ಯಂತ ಒರಟಾದ ಭಾವನೆಯಾಗಿದೆ. ನೀವು ದೇವರ ಪ್ರತಿಸೃಷ್ಟಿಯಾಗಿದ್ದೀರಿ ಎಂದೆಲ್ಲ ಏನೇನೋ ಹೇಳಿ, ಈ ಭಾವನೆಯನ್ನು ಜನರ ಮನಸ್ಸುಗಳಲ್ಲಿ ಬಿತ್ತಲಾಗಿದೆ. ಮನುಷ್ಯರು ತಮ್ಮ ದೇವರು ಒಬ್ಬ ದೊಡ್ಡ ಮನುಷ್ಯ ಎಂದು ಭಾವಿಸಿಕೊಳ್ಳುವುದಾದರೆ, ಒಂದು ಹುಳು, ದೇವರು ಒಂದು ದೊಡ್ಡ ಹುಳುವಾಗಿರಬೇಕು ಎಂದು ಭಾವಿಸಿಕೊಂಡಿರಬೇಕು. ಇದು ಕೇವಲ ಪರಿಸರದ ಕಾರಣಗಳಿಂದಲ್ಲದೇ, ನಿಮ್ಮ ಮನುಷ್ಯತ್ವದ ದೃಷ್ಟಿಯಿಂದ, ಈ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಅದರದೇ ಆದ ಸಂಪೂರ್ಣ ಜೀವನವಿದೆ ಎನ್ನುವುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಒಂದು ಕೀಟಕ್ಕೂ ಸಹ ತನ್ನದೇ ಆದ ಜೀವನವಿರುತ್ತದೆ, ಅದಕ್ಕೆ ಒಂದು, ಕುಟುಂಬವಿರುತ್ತದೆ, ಸಮಾಜವಿರುತ್ತದೆ – ಅದರ ಜೀವನದಲ್ಲಿ ಅನೇಕ ಸಂಗತಿಗಳು ನಡೆಯುತ್ತಿರುತ್ತವೆ. ಇನ್ನೊಂದು ಜೀವಿಯು ನಿಮಗಿಂತ ಚಿಕ್ಕದಾಗಿರುವ ಮಾತ್ರಕ್ಕೆ ಮತ್ತು ನಿಮಗಿಂತ ಭಿನ್ನವಾಗಿ ಕಾಣುವ ಮಾತ್ರಕ್ಕೆ, ಅದಕ್ಕೆ ಜೀವಿಸುವ ಹಕ್ಕಿಲ್ಲವೆಂದು ಮತ್ತು ನಿಮಗೆ ಮಾತ್ರ ಇಲ್ಲಿ ಜೀವಿಸುವ ಹಕ್ಕು ಇದೆಯೆಂದು ಭಾವಿಸುವುದು, ಅತ್ಯಂತ ಒರಟಾದ ಧೋರಣೆಯಾಗಿದೆ.

ಮನುಷ್ಯತ್ವವಿಲ್ಲದ ಮಾನವತೆ – ಇದು ಇಂದಿನ ಮಾನವಕುಲದ ಸ್ಥಿತಿಯಾಗಿದೆ. ಮನುಷ್ಯತ್ವವು ಎಲ್ಲರಲ್ಲೂ ಅಭಿವ್ಯಕ್ತಗೊಳ್ಳದೆ ಈ ಪರಿಸರ ಯೋಜನೆಗಳು ಯಶಸ್ವಿಯಾಗುತ್ತವೆ ಎಂದು ನಾನು ಭಾವಿಸುವುದಿಲ್ಲ. ಸರಕಾರಗಳು ಕಾನೂನುಗಳನ್ನು ರೂಪಿಸಬೇಕೆನ್ನುವುದು ಸರಿಯಷ್ಟೇ, ಆದರೆ ಸರಕಾರಗಳು ಒಂದು ಪ್ರಜಾಪ್ರಭುತ್ವದಲ್ಲಿ ಇವುಗಳನ್ನು ಬಲವಂತವಾಗಿ ಜಾರಿಗೆ ತರಲಾಗುವುದಿಲ್ಲ. ಖಂಡಿತವಾಗಿಯೂ, ಸರಕಾರದಲ್ಲಿರುವ ಜನರು ಈ ಭಾವನೆಯನ್ನು ಮುನ್ನೆಲೆಗೆ ತರಬೇಕು. ಒಂದು ಕಾಲದಲ್ಲಿ ಭಾರತ ಸರ್ಕಾರವು ಕುಟುಂಬ ನಿಯಂತ್ರಣ ಯೋಜನೆಯ ಬಗ್ಗೆ ಪ್ರಚಾರ ಮಾಡುತ್ತಿತ್ತು. ಈಗ ನಾವು ಸಮಸ್ಯೆಯನ್ನು ಪರಿಹರಿಸಿಕೊಂಡಿದ್ದೇವೇನೋ ಎಂಬಂತೆ, ದೇಶದಲ್ಲೆಲ್ಲೂ ಆ ಪ್ರಚಾರವು ಕಾಣಬರುತ್ತಿಲ್ಲ. 

sadguru in forest

ಜನಸಂಖ್ಯೆಯನ್ನು ನಿಯಂತ್ರಿಸದೇ – ಪರಿಸರ, ಭೂಮಿ ಮತ್ತು ನೀರಿನ ಸಂರಕ್ಷಣೆಯ ಬಗ್ಗೆ ಮಾತನಾಡುವುದು ವ್ಯರ್ಥ, ಏಕೆಂದರೆ ವಿಜ್ಞಾನ ಮತ್ತು ತಂತ್ರಜ್ಞಾನಗಳ ರೂಪದಲ್ಲಿ ಜನರಲ್ಲಿರುವ ಉತ್ತೇಜನವು ಪ್ರತಿಯೊಬ್ಬ ಮನುಷ್ಯನನ್ನೂ ಅತಿಯಾಗಿ ಕ್ರಿಯಾಶೀಲನನ್ನಾಗಿಸುತ್ತಿದೆ. ನೀವು ಮನುಷ್ಯರ ಕ್ರಿಯಾಶೀಲತೆಯನ್ನು ನಿಯಂತ್ರಿಸಲಾಗುವುದಿಲ್ಲ; ನೀವು ಕೇವಲ ಮನುಷ್ಯರ ಸಂಖ್ಯೆಯನ್ನು ನಿಯಂತ್ರಿಸಬಹುದು ಅಷ್ಟೆ. ನೀವು ಯಾವುದೇ ರೀತಿಯಲ್ಲಿ ಮನುಷ್ಯ ಚಟುವಟಿಕೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಏಕೆಂದರೆ ಅದು ಮಾನವ ಆಶೋತ್ತರಗಳನ್ನು ನಿಯಂತ್ರಿಸಲು ಪ್ರಯತ್ನಿಸಿದಂತಾಗುತ್ತದೆ. ಮತ್ತು ಇಂದು, ನಮ್ಮ ಆಶೋತ್ತರಗಳು ಹೇಗಿವೆಯೆಂದರೆ ಎಲ್ಲರೂ ಶಿಕ್ಷಿತರಾಗಬೇಕು, ಮತ್ತು ದೊಡ್ಡ ದೊಡ್ಡ ಕನಸುಗಳನ್ನು ಮತ್ತು ಮಹತ್ವಾಕಾಂಕ್ಷೆಗಳನ್ನು ಹೊಂದಿರಬೇಕು ಎನ್ನುವುದಾಗಿದೆ. ನಾವು ಎಲ್ಲಿ ನಿಲ್ಲಿಸಬೇಕು ಎನ್ನುವುದನ್ನು ಹೆಚ್ಚು ಪ್ರಜ್ಞಾಪೂರ್ವಕವಾಗಿ ನಿರ್ಧರಿಸುವ ವಿಧಾನಕ್ಕಾಗಿ ಪ್ರಯತ್ನಿಸದೇ, ನಮ್ಮ ಆಶೋತ್ತರಗಳನ್ನು ಈಗಿನ ಜನಸಂಖ್ಯೆಯ ಪ್ರಮಾಣದಿಂದ ಸಾಧಿಸಲಾಗುವುದಿಲ್ಲ. ಮತ್ತು ಅದು ಅಸಾಧ್ಯವೆಂದು ನಾನು ಭಾವಿಸುವುದಿಲ್ಲ.

ಇದನ್ನೂ ಓದಿ: Prerane column : ನಿಮ್ಮ ನಿಮ್ಮ ಬದುಕಿಗೆ ನೀವೇ ಜವಾಬ್ದಾರಿ; ಅದನ್ನು ಬೇರೆಯವರ ಮೇಲೆ ಹೊರಿಸಿದರೆ ನೀವು Waste Body!

ಹಾಗಾಗಿ ಈಗಿನ ಪ್ರಶ್ನೆಯೆಂದರೆ – ನಾವು ನಮ್ಮಲ್ಲಿರುವ ಸಂಪನ್ಮೂಲಗಳಿಗೆ ತಕ್ಕಂತೆ ನಮ್ಮ ಜನಸಂಖ್ಯೆಯನನ್ನು ಹೊಂದಿಸುತ್ತೇವೆಯೇ? ನಾವು ಮಾಡಬಹುದಾದದ್ದು ಅಷ್ಟೆ ಮತ್ತು ನಾವು ಮಾಡಬಹುದಾದ ಅತ್ಯಂತ ಸುಲಭವಾದ ಕೆಲಸ ಅದೇ ಆಗಿದೆ. ನಾವು ಅಗತ್ಯವಿರುವ ಶಿಕ್ಷಣ ಮತ್ತು ಅರಿವನ್ನು ಅವರ ಜೀವನಗಳಲ್ಲಿ ಒದಗಿಸಿದರೆ, ಅದು ಪ್ರತಿಯೊಬ್ಬರೂ ಮಾಡಬಹುದಾದ ವಿಷಯವೇ ಆಗಿದೆ, ಆ ವಿಚಾರವನ್ನು ಜಾರಿಗೆ ತಂದರೆ, ನಾವು ಗಿಡಗಳನ್ನು ನೆಡಬೇಕಾಗಿಲ್ಲ. ನಾವು ಭೂಮಿಯಿಂದ ದೂರವುಳಿದರೆ, ಮರಗಳು ಬೆಳೆಯುತ್ತವೆ, ನೀವದನ್ನು ನಿಲ್ಲಿಸಲಾಗದು. ಭೂಮಿ ಗಂಡಾಂತರದಲ್ಲಿಲ್ಲ, ಮನುಷ್ಯ ಕುಲ ಗಂಡಾಂತರದಲ್ಲಿದೆ ಅಷ್ಟೆ. ಇದನ್ನು ಮನುಷ್ಯರು ಅರ್ಥಮಾಡಿಕೊಳ್ಳಬೇಕು. ಜನರು ಭೂಮಿಯು ಗಂಡಾಂತರದಲ್ಲಿದೆ ಎಂದು ಬಿಂಬಿಸುತ್ತಿದ್ದಾರೆ. ಭೂಮಿಯು ಯಾವುದೇ ರೀತಿಯಲ್ಲಿ ಗಂಡಾಂತರದಲ್ಲಿಲ್ಲ. ಮನುಷ್ಯ ಜೀವನ ಮಾತ್ರ ಅಪಾಯದಲ್ಲಿದೆಯಷ್ಟೆ. ನಾವಿದರ ಬಗ್ಗೆ ಎಚ್ಚೆತ್ತುಕೊಂಡು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ನಾನು ಆಶಿಸುತ್ತೇನೆ.

(ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ. ಸಂಪರ್ಕಕ್ಕೆ isha.sadhguru.org/in/kn. ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ – kannadapublications@ishafoundation.org)

Exit mobile version