ಒಳ್ಳೆಯ ಪದ್ಯ ಎಂದರೆ ಮುಗಿದ ಮೇಲೂ ಓದುಗನ ಮನಸ್ಸಿನಲ್ಲಿ ಅದು ಬೆಳೆಯುತ್ತಿರಬೇಕು ಎಂಬ ಮಾತೇನೋ ಸತ್ಯವೇ. ಒಂದು ಒಳ್ಳೆಯ ಕವಿತೆಯನ್ನು ಓದುತ್ತಿರಬೇಕಾದರೆ ಓದುಗನ ಮನಸ್ಸಿನಲ್ಲೂ ಅದಕ್ಕೆ ಸಂವಾದಿಯಾದ ಒಂದು ಕವಿತೆ ಹುಟ್ಟಿಕೊಳ್ಳುತ್ತದೆ. ಕವಿ ತನ್ನ ಹಿನ್ನೆಲೆಯಲ್ಲಿ ಗ್ರಹಿಸಿ ಮೂಡಿಸಿದ ಭಾವದ್ರವ್ಯಕ್ಕೆ ಓದುಗ ತನ್ನ ಹಿನ್ನೆಲೆಯ ಗ್ರಹಿಕೆಗಳನ್ನು ಸೇರಿಸಿ ಓದುವಾಗ, ಓದುತ್ತಿರುವ ಕವಿತೆಗಿಂತ ಕೊಂಚ ಭಿನ್ನವಾದ ಈ ಕವಿತೆ ಪ್ರತಿ ಓದುಗನ ಓದೂ ವಿಭಿನ್ನವಾಗಿಸುತ್ತದೆ. ಮತ್ತು ಅದು ಎಷ್ಟು ಓದುಗನ ಹಿನ್ನೆಲೆಗೆ ಹತ್ತಿರವಾಗುತ್ತದೆ ಎಂಬುದರ ಆಧಾರದ ಮೇಲೆ ಅದು ಓದುಗನ ಮನಸ್ಸಿನಲ್ಲಿ ಬೆಳೆಯುತ್ತಾ ಹೋಗುತ್ತದೆ. ಕೆಲವು ಕವಿತೆಗಳಿರುತ್ತವೆ. ಅವು ಓದುಗನ ಮನದಲ್ಲಷ್ಟೇ ಅಲ್ಲ, ಕವಿಯ ಮನಸ್ಸಿನಲ್ಲೂ ಮುಗಿದಿರದೆ ಬೆಳೆಯುತ್ತಲೇ ಇರುತ್ತವೆ. ಪದ್ಯ ಪ್ರಕಟವಾದ ನಂತರವೂ ಕವಿಯನ್ನು ಕಾಡುತ್ತಲೇ ಇರುತ್ತವೆ. (ಒಬ್ಬ ಕವಿ ತನ್ನ ಜೀವಮಾನದಲ್ಲಿ ಬರೆಯುವುದು ಒಂದೇ ಕವಿತೆಯನ್ನು ಎಂಬ ಮಾತು ಇದೆಯಾದರೂ ಇದು ಆ ಕುರಿತ ಮಾತಲ್ಲ). ಆ ಕಾಡುವಿಕೆ ತೀವ್ರ ಸ್ವರೂಪದ್ದಾಗಿದ್ದರೆ ಮತ್ತೊಂದು ಅಷ್ಟೇ ಸಶಕ್ತ ಕವಿತೆ ಹುಟ್ಟಿಕೊಳ್ಳುತ್ತದೆ. ಅಂತಹಾ ಪದ್ಯಗಳಲ್ಲೊಂದು ಎಚ್. ಎಸ್. ವೆಂಕಟೇಶಮೂರ್ತಿಯವರ `ಶಿಶಿರದ ಪಾಡು’ ಎಂಬ ಪದ್ಯ.
ಪದ್ಯದ ಶೀರ್ಷಿಕೆ ಅದರ ಒಳಗನ್ನು ಬಹಳ ಸಮರ್ಥವಾಗಿ ಹೇಳುತ್ತದೆ. ಶಿಶಿರಕ್ಕೆ ಹಾಡಿಲ್ಲ, ಇರುವುದು ಪಾಡು ಮಾತ್ರ. ಏಕೆಂದರೆ ಅದು ತನ್ನದೆಲ್ಲವನ್ನೂ ಕಳೆದುಕೊಳ್ಳುವ ಹೊತ್ತು. ಅದರದು ತನ್ನನ್ನು ತಾನು ಕಳೆದುಕೊಳ್ಳುವ ಪಾಡು. ಆರಂಭದಲ್ಲೇ ಶಿಶಿರದ ಉದುರುವ ಎಲೆಗಳನ್ನು ಕವಿ ವಾಲ್ಮೀಕಿ ತನ್ನ ಕಣ್ಣ ಹನಿಗಳನ್ನೇ ಜಪಮಾಲೆಯಾಗಿಸಿ ನಡುಗುತ್ತಾ, ತದೇಕಚಿತ್ತದಿಂದ ನೋಡುತ್ತಾ ಕುಳಿತಿದ್ದಾನೆ. ಎಚ್ಚೆಸ್ವಿಯವರು ವಾಲ್ಮೀಕಿಯನ್ನು ಋಷಿ ಎಂದಿಲ್ಲ. ಕವಿ ವಾಲ್ಮೀಕಿ ಎನ್ನುತ್ತಾ ಮುಂದೆ ನಡೆಯುವ ಘಟನೆಗಳ ಕುರಿತು ಆತನ ಪ್ರತಿಕ್ರಿಯೆಯ ಸ್ವರೂಪದ ಬಗ್ಗೆ ಓದುಗನ ಗಮನ ಸೆಳೆಯುತ್ತಾರೆ. ಋಷಿಯಾದರೆ ಸಂಯಮದ ಬಗ್ಗೆ ಪಾಠ ಹೇಳಿಯಾನು, ನಿರ್ಲಿಪ್ತನಾಗಿದ್ದಾನು. ಕವಿ ಹಾಗಿರಲು ಸಾಧ್ಯವೇ?
ಗಂಗೆ ಹರಿವ, ಹಕ್ಕಿಯ ಕೂಗಿನ ಸದ್ದಿನ ನಡುವೆ ಯಾರೋ ಅತ್ತ ಸದ್ದು ಕೇಳುತ್ತದೆ ಕವಿಯ ಕಿವಿಗೆ. ಎದ್ದು ಬಂದ ವಾಲ್ಮೀಕಿ ಎದುರಿನಲ್ಲಿ ನೆಲದಲ್ಲಿ ಹೊರಳಿ ಅಳುತ್ತಿರುವ ಹೆಣ್ಣೊಬ್ಬಳನ್ನು ನೋಡಿ ಸಂಕಟದಿಂದ “ಯಾರಮ್ಮ ನೀನು? ನಾನು ಋಷಿ ವಾಲ್ಮೀಕಿ, ರಾಮಾಯಣ ಬರೆದವನು. ಹೆದರಬೇಡ ಹೇಳು” ಎಂದು ಸಂತೈಸುತ್ತಾನೆ. ಇಲ್ಲಿ ಋಷಿ ಎಂಬ ಪದವನ್ನು ಒಂಟಿ ಹೆಣ್ಣು ಹೆದರದಿರಲೆಂದು ಬಳಸುತ್ತಾರೆ ಕವಿ.
ಅವಳು ದುಃಖಿಸುತ್ತಲೇ ತಾನು ಜಾನಕಿ ದಾಶರಥಿಪ್ರಿಯಸತಿ ಎಂದು ಉತ್ತರಿಸಿದಾಗ ವಾಲ್ಮೀಕಿಗೆ ನಂಬಲಾಗುವುದಿಲ್ಲ. ಕವಿ ವಾಲ್ಮೀಕಿಯ ಪ್ರತಿಕ್ರಿಯೆ ನೋಡಿ:
ಹಾ ಎಂದು ಗರ ಹೊಡೆದು ತತ್ತರಿಸಿ ಹೋದ ಕವಿ
ತಾನು ಕೃತಿಯಲ್ಲಿ ಕಡೆದಿಟ್ಟ ಪಾತ್ರ
ಜೀವಂತವಾಗಿ ತನ್ನೆದುರೆ ಮೊಖ್ತ ಬಂದು
ಕಂಬನಿಯ ಮಿಡಿಯುತಿರೆ ಕುಡಿ ಬೆರಳಲಿ
ಹೇಗೆ ನಂಬಲಿ ಇದನು ಹೇಗೆ ನಂಬದೆ ಇರಲಿ
ಎದುರಿಗೇ ಇರುವಾಗ ಲೋಕಮಾತೆ
ಶ್ರೀರಾಮಪಟ್ಟಾಭಿಷೇಕ ಮುಗಿಸಿದ ಮೇಲೆ
ಹೀಗೆ ಎದುರಾಗುವುದೆ ತನ್ನ ಮಾತೆ?
ಕೃತಿಯ ಮುಗಿಸಿದ ತೃಪ್ತಿ ಮಣ್ಣಿನ ಹೊನ್ನನ್ನು
ರೂಪಾಂತರಿಸಿದ ತೃಪ್ತಿ ಶಾಂತಿಯೊಳಗೆ
ರಾಮ ನಾಮ ಧ್ಯಾನ ಏಕ ಶ್ರುತಿ ನಿಂತಾಗ
ಹೇಗೆ ಒಡೆಯಿತು ನೀಲಿ ಶಿಶಿರದೊಳಗೆ?
ಕಾಡು ದಾರಿಯ ಮುಗಿದು ಕೊನೆಗೆ ನಗರದ ನಡುವೆ
ಲಲಿತ ಮಹಲರಳಿ ಶ್ರೀರಾಮ ಸೀತೆ
ಒಂದಾಗಿ ಕೂಡಿರಲು ಕಂಟವನು ಕೆಳಗಿಟ್ಟೆ
ಹೀಗೇಕೆ ಬಂದೆಯೇ ಲೋಕ ಮಾತೆ?
ಕವಿ ಮನ ಕಂಗಾಲಾಗಿದೆ. ತಾನು ಜೊತೆಯಾಗಿಸಿ ಪಟ್ಟದ ಮೇಲೆ ಕೂಡಿಸಿ ಇನ್ನು ಕಥೆ ಮುಗಿಯಿತೆಂದು ಲೇಖನಿಯನ್ನು ಕೆಳಗಿಟ್ಟು ನೆಮ್ಮದಿಯಾಗಿರುವ ಹೊತ್ತಲ್ಲಿ ತನ್ನ ಕಾವ್ಯದ ನಾಯಕಿ ಹೀಗೆ ದೂಳಿನಲ್ಲಿ, ದುಃಖದಲ್ಲಿ ಹೊರಳಾಡಿ ಅಳುತ್ತಿರುವುದನ್ನು ನೋಡಿದರೂ ಅವನಿಗೆ ನಂಬಲಾಗುತ್ತಿಲ್ಲ. ಸಂಕಟವನ್ನು ತಾಳಲಾರದೆ ಮತ್ತೆ ಮತ್ತೆ ಕೇಳುತ್ತಿದ್ದಾನೆ. “ಹೇಳು ಮಗಳೇ ಹೇಳು, ಏಕಿಂಥ ಗತಿ ಬಂತು ಮತ್ತೆ ನಿನಗೆ?”
ರಾಮನಿರುವನಕ ರಾಮಾಯಣವು ಮುಗಿವುದೆ?
ಅಂತೆ ಸೀತೆಯ ಚಿಂತೆ ಸಾಯುವನಕ
ಸೀತೆ ವಿಷಾದದಿಂದ ಹೇಳುತ್ತಾ ಮುಂದುವರಿಸುತ್ತಾಳೆ…
ಅಧಿಕಾರದೊಳಗಿಟ್ಟು ಹೇಗೆ ಕಥೆ ಮುಗಿಸುವಿರಿ
ಆಗಲೇ ಆರಂಭ ಬದುಕಿನಣಕ
ಎಂತಹಾ ಉತ್ತರ! ವಾಲ್ಮೀಕಿಯ ಜೊತೆಗೆ ಓದುಗ ದಂಗುಬಡಿದು ಕೂರುತ್ತಾನೆ.
ಕನ್ನಡಿಯ ಬಿಂಬವೇ ಮುಖವನಣಕಿಸುವಾಗ
ಅರಮನೆಯೆ ಸುಡುಗಾಡು ತವರು ಕಾಡು
ನೀನೆನ್ನ ಹೆತ್ತವನು ರಾಮಾಯಣದ ಹೊರಗೆ
ರಾಮ ಹಾಡಿದ್ದುಂಟು ಇಂಥ ಹಾಡು
ಸೀತೆಯ ನಿಟ್ಟುಸಿರ ತೀವ್ರತೆಗೆ ಕವಿಯ ಕೊರಳು ಕಂಪಿಸುವುದರೊಂದಿಗೆ ಕವಿತೆ ಕೊನೆಯಾಗುತ್ತದೆ. ಸೀತೆ ಕಾಡಿನಲ್ಲಿಯೂ ರಾಮನ ಜೊತೆ ಸುಖವಾಗಿಯೇ ಇದ್ದವಳು. ಕಾಡಿನಲ್ಲಿದ್ದಾಗಲೇ ರಾವಣ ಹೊತ್ತು ಒಯ್ದಿದ್ದು. ರಾಮ ಅವಳಿಗಾಗಿ ಹಗಲಿರುಳು ಪರಿತಪಿಸಿ ಸಾವಿರಾರು ಮೈಲಿ ಕ್ರಮಿಸಿ ಹೋರಾಡಿ ಮತ್ತೆ ಪಡೆದದ್ದು ಅವನು ಕಾಡುಪಾಲಾಗಿದ್ದಾಗ. ನೀವು ತಪ್ಪು ಜಾಗದಲ್ಲಿ ಕೂರಿಸಿ ಕಥೆ ಮುಗಿಸಿದಿರಿ ಎಂದು ಸೀತೆಯ ಬಾಯಲ್ಲಿ ನುಡಿಸುವ ಕವಿ ಏಕಕಾಲದಲ್ಲಿ ಸೀತೆಯನ್ನೂ, ರಾಮನನ್ನೂ, ಅಧಿಕಾರವನ್ನೂ ಅರ್ಥ ಮಾಡಿಸುತ್ತಾರೆ. ಸೀತೆಗೆ ರಾಮನ ಬಗ್ಗೆ ದೂರಿಲ್ಲ, ರಾಮನಿಗೆ ಸೀತೆಯನ್ನು ಉಳಿಸಿಕೊಳ್ಳುವ ಸ್ವತಂತ್ರವಿಲ್ಲ, ಅಧಿಕಾರಕ್ಕೆ ಆ ಖಾಸಗಿತನವಿಲ್ಲ. ಅದೇನೇ ಇದ್ದರೂ ಸೀತೆಯದು ಮಾತ್ರ ಈಗ ಶಿಶಿರದ ಪಾಡು.
ಇಲ್ಲಿಗೆ ಕವಿತೆ ಮುಗಿಯುತ್ತದೆ. ಪದ್ಯ ಬರೆದ ಕವಿಯ ಮನದ ತೊಳಲಾಟ ಮುಗಿಯುವುದಿಲ್ಲ. ದಶಕಗಟ್ಟಲೆ ಆ ಶಿಶಿರದ ಪಾಡು ಕವಿಯ ಮನಸ್ಸಿನಲ್ಲಿ ಒದ್ದಾಡುತ್ತಲೇ ಇರುತ್ತದೆ. ಮುಂದೇನಾಗಿರಬಹುದು ಸೀತೆಯ ಪಾಡು? ರಾಮನ ಪಾಡು? ಅಷ್ಟು ಪ್ರೀತಿಸುವ ಸೀತೆ ತೊರೆದ ಮೇಲೆ ರಾಮ ಹೇಗೆ ತಾನೇ ನೆಮ್ಮದಿಯಿಂದ ಇದ್ದಾನು? ಸೀತೆಗೆ ದೂರೇ ಇಲ್ಲವೇ ರಾಮನ ಕುರಿತು? ಅವತಾರ ಮುಗಿದ ನಂತರವಾದರೂ ಹೇಗೆ ಒಟ್ಟಿಗೆ ಇರುತ್ತಾರೆ? ಸಾಂಸಾರಿಕ ಕವಿ ಎಂದೇ ಹೆಸರುವಾಸಿಯಾದ ಎಚ್ಚೆಸ್ವಿಯವರನ್ನು ಈ ವಿಷಯ ಅದೆಷ್ಟು ನೋಯಿಸಿದೆ ಎಂದರೆ ದಶಕಗಳ ನಂತರ ಮತ್ತೊಂದು ಅಷ್ಟೇ ಸಶಕ್ತ ಕವಿತೆಯೊಂದು ಒಡಮೂಡುತ್ತದೆ. ಅದು ʻರಾಮನವಮಿಯ ರಾತ್ರಿʼ.
ಇದನ್ನೂ ಓದಿ: ಸಾಲಭಂಜಿಕೆ ಅಂಕಣ | ಅದೃಷ್ಟ ಬೇಕು ಪದ್ಯ ಓದಲು
ಈ ಕವಿತೆಯಲ್ಲಿ ಅವತಾರಗಳೆಲ್ಲ ಮುಗಿದು ಗುಡಿ ಕಟ್ಟಿಸಿಕೊಂಡ ರಾಮ ದೇವರಾಗಿದ್ದಾನೆ. ರಾಮನ ಗುಡಿ ಎಂದರೆ ಅಲ್ಲಿ ರಾಮನೊಬ್ಬನೇ ಇರುವುದಿಲ್ಲವಷ್ಟೆ. ಅವನ ಜೊತೆಗೆ ಸೀತೆ ಲಕ್ಷ್ಮಣ ಹನುಮಂತರೂ ಇದ್ದಾರೆ. ಪ್ರತಿದಿನ ಬೆಳಗಿನಲ್ಲಿ ಅರ್ಚಕರು ರಾಮಕಥೆಯನ್ನು ಒಪ್ಪಿಸುತ್ತಾರೆ. ಹಾಗೆ ಒಪ್ಪಿಸುವಾಗ ಸೀತಾ ಪರಿತ್ಯಾಗದ ಕುರಿತು ಹೇಳುತ್ತಾ ಅವರ ಮನಸ್ಸೂ ಕರಗುತ್ತದೆ. ಅವರೂ ನೋಯುತ್ತಲೇ ರಾಘವ ಸೀತಾ ಪರಿತ್ಯಾಗ ನಿನಗೆ ಸಮ್ಮತವೇ ಎನ್ನುತ್ತಲೇ ರಾಮನನ್ನು ಅರ್ಚಿಸುತ್ತಾರೆ. ಇದು ದಿನದ ಕಥೆಯಾಯಿತು. ಕವಿ ರಾಮನವಮಿಯ ರಾತ್ರಿ ಎಂದು ಪದ್ಯಕ್ಕೆ ಹೆಸರನ್ನಿಟ್ಟಿದ್ದಾರೆ. ಅಂದರೆ ನಿಜವಾದ ಕಥೆ ನಡೆಯುವುದು ರಾತ್ರಿಯಲ್ಲಿಯೇ ಎಂದಾಯಿತಲ್ಲ. ಹಗಲಲ್ಲಿ ಅರ್ಚಕರು ಹಾಗೆ ನೆನಪಿಸಿದಾಗ-
ಶ್ರೀಮುಖದಲಾಗ ಸಣ್ಣಗೆ ನೋವು ಸುಳಿಯುವುದು.
ಶಿಲ್ಪಕ್ಕೆ ತುಟಿಯುಂಟು; ಇಲ್ಲ ಮಾತು.
ಕರುಣಾರ್ದ್ರ ತಾಯಿ ನೋಡುವರು ರಾಘವನನ್ನ!
ಅಭಿಷೇಕಜಲ ಕಣ್ಣಲೊಸರುತಿಹುದು.
ರಾಮ ಈಗ ಕಲ್ಲಾದ ದೇವರು. ಕಲ್ಲಿನೊಳಗೆ ಪ್ರಾಣಪ್ರತಿಷ್ಠಾಪನೆಯಾಗಿರುವ ದೇವರು. ರಾಮನ ಮುಖದಲ್ಲಿ ನೋವು ಸುಳಿಯುತ್ತದೆ. ಆದರೆ ತುಟಿಯ ಕೆತ್ತನೆಯಿದ್ದರೂ ಅದಕ್ಕೆ ಮಾತನಾಡಲಾಗುವುದಿಲ್ಲ. ಎದೆ ತುಂಬಾ ದುಗುಡವಿದ್ದರೂ ಕಣ್ಣಲ್ಲಿ ನೀರೊಸರುವುದಿಲ್ಲ. ಸೀತೆ ರಾಮನ ಕಡೆ ನೋಡುವಾಗ ಅರ್ಚಕನ ಅಭಿಷೇಕದ ಜಲ ಕಣ್ಣಲ್ಲಿ… ಸೀತೆ ವ್ಯಂಗ್ಯವಾಗಿ ನೋಡುವುದಿಲ್ಲ, ನನ್ನನ್ನು ಅಂದು ಕಾಡಿಗಟ್ಟಿದೆಯಲ್ಲ, ಇಂದು ನಿನ್ನ ಪಾಡು ಹೀಗಿದೆ ಎಂದು ಹಂಗಿಸುವ ನೋಟವೂ ಅದಲ್ಲ. ಕರುಣಾರ್ದ್ರ ತಾಯಿ ಎಂದು ಹೇಳುವ ಮೂಲಕ ಕವಿ ಆ ಇಡೀ ಸನ್ನಿವೇಶದ ಮನಸ್ಥಿತಿಯನ್ನು ಕಟ್ಟಿಕೊಡುತ್ತಾರೆ.
ಲಕ್ಷ್ಮಣಗೆ ಕಸಿವಿಸಿ. ತಲೆ ತಗ್ಗಿಸಿದ ಹನುಮ.
ತಾಯಿ ಮತ್ತೇನನ್ನೊ ಧ್ಯಾನಿಸುವಳು.
ಇರುಳು ಭಕ್ತರು ಹೋದಮೇಲೆ ರಾಮನು ಇಲ್ಲಿ
ಇರುವ ಬಗೆ ಹೇಗೆಂದು ಚಿಂತಿಸುವಳು.
ಅಂದು ಸೀತೆಯನ್ನು ಅಣ್ಣನ ಅಣತಿಯಂತೆ ಕಾಡಿಗೆ ಬಿಟ್ಟವನು ಲಕ್ಷ್ಮಣ. ಆ ಕಥೆಯಲ್ಲಿ ಅವನ ಪಾತ್ರವೂ ಇತ್ತಲ್ಲ… ಹನುಮಂತ ಸಾಗರವನ್ನೇ ದಾಟಿ ಸೀತೆಯನ್ನು ಹುಡುಕಿದವನು. ಇವರ್ಯಾರೂ ಆ ಸಂದರ್ಭದಲ್ಲಿ ಸೀತೆಯ ಬೆನ್ನಿಗೆ ನಿಂತವರಲ್ಲ. ಸೀತಾ ಪರಿತ್ಯಾಗವನ್ನು ವಿರೋಧಿಸಿ ಜಗಳವಾಡಿದರೂ, ಬೇಡಿಕೊಂಡರೂ ಕೊನೆಗೆ ರಾಮನ ಜೊತೆಗೇ ನಿಂತವರು. ಒಬ್ಬಂಟಿಯಾದವಳು ಸೀತೆ. ಕಾಡಿನಲ್ಲಿ ಕಾಲ ಹಾಕಿದವಳು ಸೀತೆಯೊಬ್ಬಳೇ. ಈಗ ಅರ್ಚಕರು ಆ ಕಥೆಯನ್ನೆಲ್ಲ ಮತ್ತೆ ಮತ್ತೆ ಬಿಚ್ಚಿಡುತ್ತಿದ್ದಾರೆ. ಇವರ ತಪ್ಪುಗಳೆಲ್ಲ ಮತ್ತೆ ಮತ್ತೆ ಎದುರು ಬಂದು ನಿಲ್ಲುತ್ತಿದೆ, ಅದೂ ಸೀತೆಯೆದುರಿಗೇ… ಯಾರಿಗೂ ಸೀತೆಯನ್ನು ತಲೆ ಎತ್ತಿ ದಿಟ್ಟಿಸುವ ಧೈರ್ಯವಿಲ್ಲ. ಎಲ್ಲರ ಮನದಲ್ಲೂ ದುಗುಡ. ಭಕ್ತರೆಲ್ಲ ಹಿಂತಿರುಗಿದ ಮೇಲೆ ರಾತ್ರಿ ಗುಡಿಯ ಬಾಗಿಲನ್ನು ಅರ್ಚಕರು ಮುಚ್ಚಿ ಹೊರಟ ನಂತರ ಏಕಾಂತದಲ್ಲಿ ರಾಮ ಇಲ್ಲಿ ಹೇಗಿರುತ್ತಾನೆ? ಮುಖವೆತ್ತಲಾಗದೆ… ದಿಟ್ಟಿಸಿ ನೋಡಲಾಗದೆ… ಅದನ್ನು ಹೇಗೆ ಸಹಿಸುವುದು ಎಂಬ ಚಿಂತೆ ರಾಮನದಲ್ಲ, ಸೀತೆಯದು.
ಇದನ್ನೂ ಓದಿ: ಸಾಲಭಂಜಿಕೆ ಅಂಕಣ | ಬಂಗಾರದಂಥ ಹುಡುಗಿ ನಗ ಬಯಸಿದಳೇ?
ಅರ್ಚಕರು ಮುಂಜಾನೆ ಮತ್ತದೇ ಕಥೆಯನ್ನು
ಹೇಳಿದರೆ ಕೇಳದೆಯೆ ಇರಲಿ ಹೇಗೆ?
ಅದು ರಾತ್ರಿಗೆ ಮುಗಿಯುವುದೂ ಇಲ್ಲ. ಮರುದಿನ ಬೆಳಗಿನಲ್ಲಿ ಮತ್ತೆ ಅರ್ಚಕರು ಗುಡಿಯ ಬಾಗಿಲನ್ನು ತೆರೆಯುತ್ತಾರೆ, ಪೂಜಿಸುತ್ತಾರೆ… ಅದರೊಟ್ಟಿಗೆ ಅದೇ ಕಥೆಯನ್ನು ಮತ್ತೆ ಹೇಳುತ್ತಾರೆ. ಅನುದಿನವೂ ಅದನ್ನು ಕೇಳಬೇಕಲ್ಲಾ ಎಂಬ ಸಂಕಟ. ತಲೆ ಎತ್ತಲು ಸಾಧ್ಯವೇ ಇಲ್ಲದ ಪರಿಸ್ಥಿತಿ, ಮನಸ್ಥಿತಿ… ಅದು ಕಾಡುವುದು ಕೇವಲ ರಾಮನನ್ನು ಮಾತ್ರವಲ್ಲ, ಸೀತೆಯನ್ನೂ. ಅವಳಿಗೆ ಆ ಕಥೆ ಅವಳ ಸಂಕಷ್ಟಗಳನ್ನು ನೆನಪಿಸಿಕೊಡುತ್ತಿಲ್ಲ, ರಾಮನ ಅಸಹಾಯಕತೆಯನ್ನು ನೆನಪಿಸಿಕೊಡುತ್ತಿದೆ. ಆ ಕಾರ್ಯವನ್ನು ರಾಮ ಎಷ್ಟು ಒತ್ತಡದಲ್ಲಿ ಮಾಡಿದ್ದಾನೆ ಎಂಬುದೂ, ಲಕ್ಷ್ಮಣ, ಹನುಮಂತರ ನಿಸ್ಸಹಾಯಕ ಸ್ಥಿತಿಯೂ ಅವಳಿಗೆ ಅರಿವಿದೆ. ಇದರಾಚೆಗೂ ಸೀತೆ ಯೋಚಿಸುತ್ತಿರುವುದು ಕಲ್ಲಾಗಿ ನಿಂತ ವಿಗ್ರಹಗಳ ನಿರಾಳ ರಾತ್ರಿಯ ಬಗ್ಗೆ.
ನಿಂತರೂ ನಡೆದವರ ನಡೆದ ನಡೆ ಕಾಡುವುದು
ಮುಗಿದಿರುವ ಹಾಡ ಪಲ್ಲವಿಯ ಹಾಗೆ.
ನಡೆಗಳು ಮುಗಿದುಹೋದ ನಂತರವೂ ನಿಂತವರನ್ನು ನಡೆದ ನಡೆಗಳ ಗುರುತು ಕಾಡದೆ ಬಿಡುವುದಿಲ್ಲ. ನಿಂತವರನ್ನು ಅಷ್ಟೇ ಅಲ್ಲ, ನಿಂತವರ ನಡೆಗಳನ್ನು ಪಠಿಸುವವರಿಗೂ ಅವು ಕಾಡುತ್ತವೆ. ಆ ನಡೆ ಅಸಹಾಯಕತೆಯಲ್ಲಿಯೇ ಬಂದಿದ್ದರೂ, ಅನಿವಾರ್ಯವೇ ಆಗಿದ್ದರೂ ಅದಕ್ಕೆ ಕ್ಷಮೆಯಿದ್ದರೂ, ಅವು ಮುಗಿದೇ ಹೋಗಿದ್ದರೂ ಆ ನಡೆಗಳು ಎಂದಿಗೂ ಜೀವಂತ. ಸಾಂಸಾರಿಕ ಕವಿ, ಹೆಣ್ಣು ಮನದ ಕವಿ ಇದನ್ನು ಬಿಚ್ಚಿಡುವುದು ಹೀಗೆ. ನೀನು ದೇವರೇ ಆದರೂ ಈ ಕೃತ್ಯ ನಿನ್ನನ್ನೂ ಕಾಡದೆ ಬಿಡುವುದಿಲ್ಲ. ನಿನ್ನನ್ನು ಕಾಡಿದಷ್ಟೇ, ಆ ಕಾಡುತ್ತಿರುವ ನಿನ್ನ ಸಂಕಟ ನಿನ್ನವರನ್ನೂ ಕಾಡುವ ಸಂಕಟವಾಗಿ ಪರಿಣಮಿಸುತ್ತದೆ ಎಂಬ ನಿಲುವು ಅದು.
ಎಂದೋ ಹುಟ್ಟಿದ ಶಿಶಿರದ ಪಾಡು. ರಾಮನ ಪಾಡಿನಲ್ಲಿ, ಅದನ್ನು ನೋಡಿ ಕರಗುವ ಸೀತೆಯ ಪಾಡಿನಲ್ಲಿ ಹೀಗೆ ಮುಗಿಯುತ್ತದೆ. ಒಂದು ಕವಿತೆ ಹುಟ್ಟಿ ಮತ್ತೊಂದು ಕವಿತೆಯಲ್ಲಿ ಮುಗಿಯುವ ಬಗೆಯಿದು… ಮುಗಿಯದ ಭಾವದ ಕವಿತೆ.
ಇದನ್ನೂ ಓದಿ: ಸಾಲಭಂಜಿಕೆ ಅಂಕಣ| ಬಳೆಗಾರನಿಗೇಕೆ ಹಾಡುವ ಪಾಡು?