Site icon Vistara News

ಸಾಲಭಂಜಿಕೆ ಅಂಕಣ | ಬಂಗಾರದಂಥ ಹುಡುಗಿ ನಗ ಬಯಸಿದಳೇ?

ks narasimhswamy

ಕೆ.ಎಸ್‌.ನರಸಿಂಹಸ್ವಾಮಿ ಅವರ ಕಾವ್ಯ, ಭಾಗ -2

ನರಸಿಂಹಸ್ವಾಮಿಯವರ ಕಾವ್ಯದ ಆ ಜಾನಪದ ಜಗತ್ತು ನವ್ಯಕ್ಕೆ ಬಂದೊಡನೆಯೇ ಬದಲಾಗಿಬಿಡುತ್ತದೆ. ಜಾನಪದ ಜಗತ್ತಿನಲ್ಲಿ ಅವಳಿಗೆ ಪದುಮಳೆಂಬ ಚೆಂದದ ಹೆಸರಿದೆ. ಅವಳು ಅವನು ಕಳಿಸಿದ ಅವನೂರ ಬಂಡಿಯಲ್ಲಿ ಕುಳಿತು ಹೊರಟಾಗ ದಾರಿ ಬಲು ಬೇಗ ಓಡುತ್ತದೆ. ಆ ದಾರಿಯ ವೈಭವ ನೋಡಿ. ದಾರಿಯುದ್ದಕ್ಕೂ ತೆಂಗು ಬಾಳೆ ಮುಳ್ಳು ಬೇಲಿಯಲ್ಲೂ ಮಲ್ಲಿಗೆಯ ಮೊಗ್ಗುಗಳು. ಪುಟ್ಟಕಂದನ ಕೇಕೆ ತೊಟ್ಟಿಲಲ್ಲಿ ತುಂಬಿದೆ. ಪಯಣ ಅವಳ ಕಾತರದಷ್ಟೇ ಬೇಗ ಸಾಗುತ್ತಿದೆ. ಅವನ ಕಾತುರವೇನೂ ಕಡಿಮೆಯದ್ದಲ್ಲ. ಊರಬೇಲಿಯಲ್ಲೇ ನಿಂತು ಕಾದಿದ್ದಾನೆ. ಅವನ ಕುಶಲ ವಿಚಾರಿಸುವ ಪ್ರಶ್ನೆಗೆ ತುಟಿಯಲ್ಲೇನೋ ಬಂದು ಕಣ್ಣಲ್ಲಿ ಇನ್ನೇನೋ ಇದೆ. ಅಕ್ಕಪಕ್ಕ ಕೂತವರಿಗೆ ತಿಳಿಯಬಾರದಲ್ಲ. ಕೆನ್ನೆಯ ಕೆಂಪು ಬಿಟ್ಟುಕೊಡದಿದ್ದೀತೆ? ಕನಸುವ ಚಿತ್ರಣ ಅದು.

ಹಾಗಿದ್ದೇ ಇನ್ನೊಂದು ಪಯಣವನ್ನೂ ನರಸಿಂಹಸ್ವಾಮಿಯವರ ʻರೈಲ್ವೆ ನಿಲ್ದಾಣದಲ್ಲಿʼ ಎಂಬ ತೆರೆದ ಬಾಗಿಲು ಸಂಕಲನದ ಮನಮುಟ್ಟುವ ಪದ್ಯದಲ್ಲಿ ನೋಡಬಹುದು. ಮಗಳು ರೈಲಿನಲ್ಲಿ ಕುಳಿತಿದ್ದಾಳೆ. ತಾಯಿ ಎಲ್ಲಿದ್ದೀಯೆ ಮೀನಾ ಎಂದು ಕೇಳುತ್ತಿದ್ದಾಳೆ. ಅದು ಹುಡುಕಾಟದ ಕೂಗಲ್ಲ ಎನ್ನಿಸುವುದು ಮುಂದಿನ ಸಾಲುಗಳಲ್ಲಿ. ಮಗಳು ಅನ್ಯಮನಸ್ಕಳಾಗಿದ್ದಾಳೆ. ತಾಯಿ ಈ ಪ್ರಪಂಚಕ್ಕೆ ಕರೆಯುತ್ತಿದ್ದಾಳೆ. ಆ ರೈಲ್ವೆ ನಿಲ್ದಾಣ ತಾಯಿತನದ್ದು. ಅಮ್ಮನ ಸರದಿ ಮುಗಿದು ಮಗಳ ತಾಯ್ತನದ ಪಯಣ ಆರಂಭವಾಗಿದೆ. ಅವಳೊಬ್ಬಳೆ ಹೊರಟಿದ್ದಾಳೆ. ಇಲ್ಲಿ ಹಳೆಯಕಾಲದ ಬಂಡಿಯಿಲ್ಲ. ಇದು ಆಧುನಿಕ ಪಯಣ. ಮಗಳಿರುವ ರೀತಿಯನ್ನು ನೋಡಿ ತಾಯಿಗೆ ಆತಂಕ. ಏನನ್ನಾದರೂ ಮರೆತೆಯಾ? ಏನು ನೆನಪಾಗುತ್ತಿದೆ ಎಂದೆಲ್ಲ ಕೇಳುತ್ತಿದ್ದಾಳೆ. ಮರೆಯುವುದು ಹೇಗೆ? ನಾನಿರುವುದೇ ಹಾಗೆ ಎಂದು ಚುಟುಕಾಗಿ ಉತ್ತರಿಸುತ್ತಿದ್ದಾಳೆ ಮಗಳು. ಮಗುವಿನ ಹಾಲಿನ ಪುಡಿಗೆ ಬಿಸಿನೀರಿದೆಯೇ ಎಂದು ತಾಯಿ ಪ್ರಶ್ನಿಸಿದಾಗ ಬೇಕಾದಷ್ಟಿದೆ ಎಂದು ಉತ್ತರಿಸುವ ಮಗಳು ಕಣ್ಣಲ್ಲೂ ಜೊತೆಗೆ ಎಂಬುದನ್ನು ತಾಯಿಗೆ ಕೇಳಿಸದಂತೆ ನುಂಗುತ್ತಾಳೆ.

ನರಸಿಂಹಸ್ವಾಮಿಯವರ ಪ್ರತಿಭೆ ನೋಡಿ. ಕಣ್ಣೀರು ಬೇರೆ, ಕಣ್ಣಲ್ಲಿ ಬಿಸಿನೀರು ಬೇರೆ… ನಮ್ಮ ಸಹಸ್ರಾರು ಹೆಣ್ಣುಮಕ್ಕಳು ಗಂಡನ ಮನೆಯ ಕಷ್ಟಗಳನ್ನು ತಾಯಿಯ ಬಳಿ ತೋರಿಸಿಕೊಳ್ಳದೆ ನುಂಗುವ ರೀತಿಯನ್ನು ಸೂಚ್ಯವಾಗಿ ಹೇಳಿದ ಸಾಲು ಅದು. ಇಷ್ಟು ದಿನದ ಅಕ್ಕರೆಯ ತವರಿನ ದಿನಗಳು ಮುಗಿದು ಈಗ ಗಂಡನ ಮನೆಯ ಹೊಸಿಲು ತುಳಿಯಬೇಕಿದೆ. ಈ ಪಯಣ ಬೇಗ ಸಾಗುವುದಲ್ಲ, ಈ ದಾರಿಯಲ್ಲಿ ತೆಂಗುಗಳು ತಲೆದೂಗಿ ಬಾಳೆ ತೋಳ ಬೀಸುವುದಿಲ್ಲ. ಮಲ್ಲಿಗೆಯ ಕಂಪು ಸೆಳೆಯುವುದಿಲ್ಲ. ಇಲ್ಲಿಯ ಪಯಣ ಸಹನೀಯವಾಗಬೇಕಾದರೆ ಕಿಟಕಿಯನ್ನೇ ಮುಚ್ಚಿಬಿಡಬೇಕು. ಮುಚ್ಚದಿದ್ದರೆ ಕಿಡಿಗಳು ಬಿದ್ದೀತು, ತನಗೂ ತನ್ನ ಕಂದನಿಗೂ. ಆದರೆ ಹಾಗೆ ಮುಚ್ಚಿದರೆ ತಾಯಿಯೂ ಕಾಣುವುದಿಲ್ಲ. ಇಲ್ಲಿಂದಲೆ ಕೈಮುಗಿಯುವೆನಲ್ಲಿಂದಲೆ ಹರಸು ಎನ್ನುತ್ತಾ ಕಿಟಕಿಯನ್ನು ಮುಚ್ಚುವ ಮಗಳ ಮನಸ್ಥಿತಿ ನಮ್ಮ ಅದೆಷ್ಟೋ ಹೆಣ್ಣುಮಕ್ಕಳ ಆಡಲಾರದ, ಅನುಭವಿಸಲಾದ ನೋವನ್ನು ಬಿಂಬಿಸುತ್ತದೆ.

ಹೀಗಿದ್ದ ಪಯಣ ನಮ್ಮ ಜಾನಪದ ಜಗತ್ತಿಗೂ ಹೊಸದಲ್ಲ. ತೊಟ್ಟಿಲ ಹೊತ್ಕೊಂಡು, ತವರು ಬಣ್ಣ ಉಟ್ಕೊಂಡು, ಅಪ್ಪ ಕೊಟ್ಟೆಮ್ಮೆ ಹೊಡಕೊಂಡು ತವರೂರ ತಿಟ್ಟಹತ್ತಿ ತಿರುಗಿ ನೋಡ್ಯಾಳು.. ಸಾಲುಗಳನ್ನು ನೆನಪಿಸಿಕೊಳ್ಳಿ. ತವರು ಮನೆಯ ಅಕ್ಕರೆಯ ಸೀರೆ ಮೈಸುತ್ತಿದೆ. ಆಗೆಲ್ಲ ಸೊಸೆಯ ಸ್ವಾತಂತ್ರ್ಯ ಸೀಮಿತ ಎನ್ನಿಸುತ್ತದೆ. ಅವಳಿಗೆ ಅಲ್ಲಿ ತಾನೇ ಹಾಲು ತೆಗೆದುಕೊಂಡು ಕುಡಿಯುವ ಅಧಿಕಾರವೂ ಇದ್ದಿರಲಾರದು. ಯಾರಾದರೂ ಕೊಟ್ಟರಷ್ಟೇ… ಆದರೆ ಮಗಳು ಬಾಣಂತಿ. ಅವಳದೇ ಒಂದು ಎಮ್ಮೆಯಿದ್ದರೆ ಅವಳಿಗೆ ಸ್ವಲ್ಪವಾದರೂ ಆರೈಕೆ ದಕ್ಕೀತು ಎಂಬ ದೂರಾಲೋಚನೆಯಿಂದ ಅಪ್ಪ ಒಂದು ಎಮ್ಮೆಯನ್ನೇ ಮಗಳಿಗೆ ಕೊಟ್ಟಿದ್ದಾನೆ. ಅಲ್ಲಿ ಹಾಲಿನ ಪುಡಿ ಇದ್ದರೆ ಇಲ್ಲಿ ಹಾಲಿನ ಆಕರವೇ ಇದೆ. ಕಿಟಕಿ ಮುಚ್ಚಿಕೊಳ್ಳುವ ಪ್ರಮೇಯವೇ ಇಲ್ಲದ ಬಯಲು ಅದು. ಹೋಗುವಾಗ ಎತ್ತರದ ಪ್ರದೇಶದಲ್ಲಿ ನಿಂತು ಒಮ್ಮೆ ತವರನ್ನು ತಿರುಗಿ ನೋಡುತ್ತಿದ್ದಾಳೆ. ಅಲ್ಲಿ ಹಾಗೆ ನಿಂತ ಅವಳ ಮನ ತುಂಬಿ ಬರುತ್ತಿದೆ “ಹಾಲುಂಡ ತವರೀಗೆ ಏನೆಂದು ಹಾಡಲೇ ಹೊಳೆದಂಡೆಲಿರುವ ಕರಕೀಯ ಕುಡಿಹಂಗ ಹಬ್ಬಲಿ ಅವರ ರಸಬಳ್ಳಿ” ಎಂದು ಮನದುಂಬಿ ಹಾರೈಸಿ ಮುನ್ನಡೆಯುತ್ತಾಳೆ.

ಇದನ್ನೂ ಓದಿ | ಸಾಲಭಂಜಿಕೆ ಅಂಕಣ| ಬಳೆಗಾರನಿಗೇಕೆ ಹಾಡುವ ಪಾಡು?

ಈ ಜಾನಪದ ಜಗತ್ತು ಕೆಎಸ್‌ನ ಅವರ ಪದ್ಯಗಳಲ್ಲಿ ಹೇಗೆ ಮರುಹುಟ್ಟು ಪಡೆದಿವೆ ಎಂಬುದನ್ನು ಗ್ರಹಿಸಲು ಮೇಲಿನ ಎರಡು ಪದ್ಯಗಳು ನೆರವಾಗುತ್ತವೆ. ಮೊದಲಿನದು ಸುಕುಮಾರ ಪ್ರಪಂಚ, ಅಲ್ಲಿ ತವರೂರ ಹಾದಿಯ ಸುಖವಿದೆ. ಅದನ್ನೂ ಮೀರಿದ ಗಂಡನ ಒಲವ ಸೆಳೆತವೂ (ನವಿಲೂರಿಗಿಂತಲೂ ಹೊನ್ನೂರೆ ಸುಖವೆಂದು ನಿಲ್ಲಿಸಿತು ಪ್ರೇಮ ಕೂಗಿ) ಇದೆ. ಎರಡನೆಯದರಲ್ಲಿ ತವರೂರನ್ನು ಬಿಟ್ಟು ಗಂಡನ ಮನೆಯತ್ತ ಹೊರಡುವ ಸಂಕಟವಿದೆ. ಆ ಪಯಣ “ಕಿಡಿಗಳು ಹೊರಳುವ ಹೊಗೆಯಲಿ ಹೆಗ್ಗಾಲಿಗಳುರುಳು” ಆ ಪದ್ಯಕ್ಕೆ ಅದೆಷ್ಟು ಆಯಾಮಗಳು.. ಪಯಣ ಹೊರಟ ತಕ್ಷಣ ನಡುಗುವ ಬಂಡಿಯ ಮೈ, ಆ ಅಬ್ಬರದಲ್ಲಿ ತಾಯಿ ಎಲ್ಲಿದ್ದೀಯೆ ಎಂದು ಕೂಗಿದಾಗ ಇಲ್ಲೇ ಇದ್ದೇನೆ ಎನ್ನುತ್ತಲೇ ಮಗಳು ಕಿಟಕಿ ಮುಚ್ಚಿಕೊಳ್ಳುವ ಬಗ್ಗೆ ಹೇಳುವ ಪದ್ಯ ಹೇಳುವುದೇನು? ಬದುಕಿನಲ್ಲೂ ಕಿಡಿ ಬೀಳದ ಹಾಗೆ ಮನಸ್ಸಿನ ಕಿಟಕಿಯನ್ನೂ ಮುಚ್ಚಿಕೊಳ್ಳುತ್ತಿದ್ದಾಳೆ ಎಂದೇ?

ಕಷ್ಟ ಕೆಎಸ್‌ನ ಅವರಿಗೆ. ಅವರ ಕನಸಿನ ಪ್ರಪಂಚದ ಮೈಸೂರು ಮಲ್ಲಿಗೆಯ ಪದುಮಳನ್ನು ತನಗೆ ಬೇಕಾದಂತೆ ಚಿತ್ರಿಸಿದ್ದೇನೆ ಎಂಬ ಭಾವವಿತ್ತೆ? ನರಸಿಂಹಸ್ವಾಮಿಯವರ ಒಟ್ಟು ಕಾವ್ಯದಲ್ಲಿ ಅವಳು ಮಾತನಾಡಿದ್ದು ಬಹಳ ಕಡಿಮೆ. ಮಾತನಾಡುವುದೆಲ್ಲವೂ ಅವನು. ಅವನ ಮಡದಿಯನ್ನು ಬಣ್ಣಿಸುವ ಬಗೆಯಲ್ಲಿ, ಆ ಪದಗಳಲ್ಲಿ ಅವಳನ್ನು ಅರಿಯಬೇಕು. ʻಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ, ಬಂಗಾರದಂಥ ಹುಡುಗಿʼ ಎಂಬುದು ಅವಳ ನೈಜ ಸ್ವರೂಪವೋ, ಹಾಗಿರಲಿ ಎಂಬುದು ಅವನ ಬಯಕೆಯೋ ತಿಳಿಯುವುದಿಲ್ಲ. ಶಿಲಾಲತೆಯಲ್ಲಿ ಮಾತ್ರ ಅವಳೇ, ಅವಳೊಬ್ಬಳೇ ನೇರವಾಗಿ ಮಾತನಾಡಿದ ಒಂದು ಪದ್ಯವಿದೆ.

ಇಕೋ ಬಂದೆನು!
ನಗಬಾರದು ಎಂದೆ ಬಂದೆ ಕಲ್ಲು ನಿಂತೆ ನಿಮ್ಮ ಮುಂದೆ
ಕರೆದಿರಲ್ಲ ಏಕೆ? ಎಂದೆ- ಮುಳ್ಳುತಂತಿ ವೀಣೆಯಾಗಿ ಹೂವ ಹಾಡಿತ್ತು.
ಕರೆದಿರೇನೋ, ಎಂದು ಬಂದೆ, ಉತ್ತರ: ಕರೆದಿಲ್ಲ ಎಂದೆ?
ನಡೆವುದೆಲ್ಲ ನಡೆಯಲಿಂದೆ- ಎಲ್ಲ ಎಂದೋ ಮುಗಿದುದಲ್ಲ ಏನು ಉಳಿದಿತ್ತು

ನೀವು ಒಳ್ಳೆಯವರು- ಅಲ್ಲ? ನನ್ನ ಪುಣ್ಯಕ್ಕೆಣೆ ಇಲ್ಲ!
ಚೆಲುವೆಯಲ್ಲ, ಜಾಣೆಯಲ್ಲ? ಚೆಲುವೆ, ಜಾಣೆ -ಎನಿಸಿಕೊಂಡ ಕಾಲವೊಂದಿತ್ತು.
ತುಂಬಿದಿರುಳ ಕಡಲಿನಲ್ಲಿ ನಿಟ್ಟುಸಿರಿನ ಒಡಲಿನಲ್ಲಿ
ನನ್ನ ದೋಣಿ ಮುಳುಗಿದಲ್ಲಿ, ನಿಮ್ಮ ಪ್ರೀತಿ ಮೊಸಳೆಗಣ್ಣ ತೆರೆದು ನೋಡಿತ್ತು

ಮೊದಲಿನಿಂದ ನಾನು ಬಲ್ಲೆ; ಬರಿಯ ತಂತ್ರ ʻನಲ್ಲ, ನಲ್ಲೆ’
ಹಾವು ಹಾವೆ, ಕಲ್ಲು ಕಲ್ಲೆ ನೊಂದ ಜೀವ ನಿಮ್ಮ ಹಿಂದೆ ಹೆಜ್ಜೆಯೆಳೆದಿತ್ತು
ನಿಮ್ಮ ನೆರಳು ನಿಮ್ಮದಲ್ಲ; ನಿಮ್ಮ ಪ್ರೀತಿ ನನ್ನದಲ್ಲ
ಬದುಕು ಕಳೆದ ಕಾಲವಲ್ಲ, ನಗದ ಕಣ್ಣು ಲೆಕ್ಕವಿಟ್ಟು ಬೆಳ್ಳಗಾಗಿತ್ತು

ನಾನು ನಕ್ಕು ಏನು ನಿಮಗೆ? ನಗಲಿಲ್ಲ, ಎನ್ನುವ ಕೊರಗೆ?
ನಗುವ ಆಸೆ ಇಲ್ಲ ನನಗೆ, ಕೈಮುಗಿವೆನು ಹೋಗಿಬನ್ನಿ; ನಕ್ಕು, ಅರಿಯೆನು
ʻನಗು’ ʻನಗು’ ʻನಗು’ ಎಂದು, ಇರಿವಿರೇಕೆ ನಗುತ ಬಂದು!
ನಗಬೇಡವೆ? ಅದೂ ಒಂದು ಹಳೆಯ ಸಾಲ ತೀರಿತೆಂದು ಇಕೋ ನಕ್ಕೆನು.

ಇದನ್ನೂ ಓದಿ | ಸಾಲಭಂಜಿಕೆ ಅಂಕಣ: ಚೋಮನ ದುಡಿಯೂ ನಮ್ಮ ನುಡಿಯೂ

ಈ ಪದ್ಯದ ಪೂರ್ಣ ಪಾಠ ಇಲ್ಲಿ ಹಾಕಿದ್ದು ಈ ಪದ್ಯ ಸಾಗುವ ರೀತಿಯನ್ನು ಹೇಳಲು. ಈ ಪದ್ಯವನ್ನು ಅವರ ಕಾವ್ಯನಾಯಕಿಯ ಮನದಾಳದ ಸಾಲುಗಳೆಂದು ಅಂದುಕೊಳ್ಳೋಣವೇ? ನರಸಿಂಹಸ್ವಾಮಿಯವರ ನಾಯಕಿಯ ಮತ್ತೊಂದು ಮುಖ ಎಂದುಕೊಳ್ಳೋಣವೇ? ಆದರೆ ಇದನ್ನೂ ಅವರೇ ಬರೆದದ್ದು. ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ ಎಂದು ಕರೆಸಿಕೊಂಡ ನಾಯಕಿ ನಗ ಬೇಡವೆ ಎನ್ನುತ್ತಲೇ ಹಳೆಯ ಸಾಲ ತೀರಿತೆಂದು ನಗುತ್ತಾಳೆ. ಅದು ನಗು ನಗ ಎರಡನ್ನೂ ಆಗಿಸಿದ್ದು ಕವಿಯ ಜಾಣ್ಮೆ. ಅಲ್ಲಿ ತಮ್ಮ ಮೊದಲ ಕವನಗಳ ಎಲ್ಲ ಸಾಲುಗಳನ್ನೂ ಸಾರಾಸಗಟಾಗಿ ತಳ್ಳಿಹಾಕುವಂತೆ ಕವಿ ಬರೆಯುತ್ತಾರೆ. ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ ಎಂದು ಅವಳ ಮಾತುಗಳನ್ನು ತಮ್ಮ ಕಾವ್ಯದಲ್ಲಿ ಆಡಿಸುವ ಕವಿ ಅವಳಿಗೆ ಹೀಗೂ ಅನ್ನಿಸಿರಬಹುದು ಎಂದು ಈ ಮಾತುಗಳನ್ನೂ ಆಡಿಸಿರುವುದು ಮನಮುಟ್ಟುತ್ತದೆ. ಹಾಗಾಗಿಯೇ ಅವರಿಗೆ ದಾರಿಯಲ್ಲಿ ಎಡವಿದರೂ, ಮುಳ್ಳು ಚುಚ್ಚಿದರೂ ಅವಳ ನೆನಪಾಗುತ್ತದೆ.

ಜಾನಪದ ಜಗತ್ತು ನವ್ಯಕ್ಕೆ ಬದಲಾಗುವ ಹೊತ್ತಲ್ಲೂ ತನ್ನ ಸತ್ವವನ್ನು ಬಿಟ್ಟುಕೊಡುವುದೇ ಇಲ್ಲ. ನವ್ಯವನ್ನು ಬರೆಯುವಾಗಲೂ ನವ್ಯರ ವ್ಯಷ್ಟಿಯ ವ್ಯಾಪ್ತಿಯನ್ನು ಹಿಗ್ಗಿಸಿದವರು ನರಸಿಂಹಸ್ವಾಮಿ ಎಂದು ನಾನು ಹೇಳಿದ್ದು ಇದೇ ಅರ್ಥದಲ್ಲಿ. ಸುಖ ದುಃಖ ನೋವು ನಲಿವು ಎಲ್ಲ ರೀತಿಯಲ್ಲೂ ಸಮಗ್ರವಾಗಿ ಅವಳನ್ನು, ಅವಳ ಭಾವಗಳನ್ನು ಒಪ್ಪಿಕೊಂಡು ಬದುಕಿಗೆ ಅಪ್ಪಿಕೊಂಡವರು ಅವರು. ಅವಳ ಯಾವ ಭಾವಕ್ಕೂ ಅವರಲ್ಲಿ ಮನ್ನಣೆಯುಂಟು, ಆ ಭಾವದ ಕುರಿತು ಕಾಳಜಿಯುಂಟು. ಇಂತಹಾ ನರಸಿಂಹಸ್ವಾಮಿ ಎಂಬ ಬೆರಗನ್ನು ನಾನು ಬಿಟ್ಟ ಕಂಗಳಿಂದ ನೋಡುತ್ತಲೇ ಇರುತ್ತೇನೆ ಯಾವತ್ತೂ.

(ಲೇಖಕರು ಕನ್ನಡ ಸಾಹಿತ್ಯ ವಿಮರ್ಶಕರು. ʻವಿಹಂಗಮʼ ಸಂಪಾದಿತ ಕೃತಿ.)

Exit mobile version