ಲಯಾನುಸಾರಿಯಾಗಿ ಕವಿ ಬರೆದ ಸಾಲನ್ನು ಅರ್ಥಾನುಸಾರಿಯಾಗಿ ಓದುಗ ಓದಿಕೊಳ್ಳುವುದು ಗಮಕ. ಇದು ಕಾವ್ಯಜಗತ್ತಿನ ಅಧ್ಯಯನದಲ್ಲಿ ನಾವು ಗಮನಿಸಬೇಕಾದ ಬಹುಮುಖ್ಯವಾದ ಅಂಶ. ಹಾಗೆ ಲಯಾನುಸಾರಿಯಾಗಿ ಬರೆಯದಿದ್ದರೆ ನಾಲಗೆ ಸರಾಗವಾಗಿ ಓಡುವುದಿಲ್ಲ, ಪುಸ್ತಕಗಳಿಲ್ಲದ ಕಾಲದಲ್ಲಿ ಕಾವ್ಯವನ್ನು ನೆನಪಿಟ್ಟುಕೊಳ್ಳಲು, ಹಾಡಲು ಲಯಾನುಸಾರಿಯಾಗಿ ಬರೆಯುವುದು ಅತ್ಯವಶ್ಯಕವೇ ಆಗಿತ್ತು. ಅಡಿಗರು ಇದನ್ನು ಪ್ರಶ್ನಿಸಿ ಬದಲಿಸಿದರು. ಓದು ಅರ್ಥಾನುಸಾರಿಯಾಗಬಹುದಾದರೆ ಲಯವೂ ಏಕೆ ಅರ್ಥಾನುಸಾರಿಯಾಗಬಾರದು ಎಂದು ಛಂದಸ್ಸು ಕೂಡಾ ಅರ್ಥವನ್ನು ಅನುಸರಿಸುವಂತೆ ಬದಲಿಸಿದರು. ಹಾಗೆ ಬದಲಿಸಿದಾಗ ಓದುಗನ ಗಮನ ಸೆಳೆಯಲು ಅಲ್ಲಲ್ಲಿ ಲಯಭಂಗ ಮಾಡುತ್ತಿದ್ದರು. ಈ ಎರಡೂ ರೀತಿಗಿಂತ ಭಿನ್ನವಾಗಿ ಬರೆಯಲೆತ್ನಿಸಿದವರು ಎ.ಕೆ ರಾಮಾನುಜನ್.
ರಾಮಾನುಜನ್ ಪದ್ಯಗಳ ರೀತಿಯೇ ಬಹಳ ವಿಶಿಷ್ಟ. ಅವರ ಪದ್ಯಗಳನ್ನು ಓದ ಹೊರಟಾಗ ಸರಳವೆನಿಸುವ ಹೊತ್ತಿಗೇ ಇಳಿದಷ್ಟೂ ಇಳಿಸಿಕೊಳ್ಳುವ ತಾಕತ್ತುಳ್ಳಷ್ಟು ಸಂಕೀರ್ಣ ಎನ್ನಿಸುವಂಥಹವು. ಎಷ್ಟು ಸಾಧ್ಯವೋ ಅಷ್ಟು ಸಂಕ್ಷಿಪ್ತ. ತುಂಬಿಸಬಹುದಾದ ಅರ್ಥ ಅಗಾಧ. ಅವರು ಮಿಕ್ಕ ಕವಿಗಳಂತಲ್ಲ. ಅಡಿಗರಂತೆ ಅವರ ಕವನಗಳು ಪ್ರತಿಮೆಗಳ ಸಮುಚ್ಛಯವಲ್ಲ, ಒಂದೇ ಪ್ರತಿಮೆ ಒಂದು ಪದ್ಯಕ್ಕೆ. ಅದನ್ನೇ ಬೆಳೆಸುತ್ತಾರೆ. ಆ ಬೆಳವಣಿಗೆಯೂ ನರೆಟಿವ್ ಅಲ್ಲ. ಅದೊಂದು ವಿಶಿಷ್ಟ ಅನುಭೂತಿ. ಪದ್ಯ ಓದಿದ ನಂತರ ಹೊಳೆದ ಬೆಳಕಲ್ಲಿ ಕನಿಷ್ಠ ಅರ್ಧ ತಾಸಾದರೂ ಮೀಯುತ್ತಾ ಕೂರುವ, ದಿನವಿಡೀ ನೆನೆ ನೆನೆದು ಪುಳಕಗೊಳ್ಳುವಂತಹಾ ಅನುಭೂತಿ. ಅಮೂರ್ತದತ್ತ ಅವರ ಸೆಳೆತ, ಆ ನುಡಿತ ಬೆರಗು. ಇಲ್ಲೊಂದು ಪದ್ಯವಿದೆ ನೋಡಿ.
ಆ ಹಕ್ಕಿ ಬೇಕಾದರೆ
ಮಂಗೋಲಿಯಾದಲ್ಲಿ ಒಬ್ಬ ರಾಜ
ಇದ್ದನಂತಲ್ಲ.
ಅವನು ಯಾವುದೋ
ದೂರ ದೇಶಕ್ಕೆ ದಂಡೆತ್ತಿ ಹೋದಾಗ
ಅಲ್ಲೊಂದು ಹೊಸಹಕ್ಕಿ ಹಾಡು ಕೇಳಿಸಿ
ಆ ಹಾಡು ತನಗೆ ಬೇಕು ಎಂದು
ಹಾಡಿಗೆಂದು ಹಕ್ಕಿ ಹಿಡಿದು
ಹಕ್ಕಿಯ ಜತೆಗೆ ಗೂಡೆತ್ತಿ
ಗೂಡಿನೆಡೆ ರೆಂಬೆ
ರೆಂಬೆಗೆ ಕೊಂಬೆ
ಕೊಂಬೆಗೆ ಮರ
ಮರದಡಿಯ ಬೇರು
ಬೇರು ಸುತ್ತಿನ ಹೆಂಟೆ ಮಣ್ಣು
ಆ ಊರು
ನೀರು
ಹಿಂಗಾರು
ಆ ಪ್ರದೇಶ
ದೇಶ
ಆ ಇಡೀ ರಾಜ್ಯ
ಎಲ್ಲ ಹೊತ್ತು ಹಾಕಬೇಕು
ಎನ್ನಿಸಿ
ಇದ್ದಬಿದ್ದ ಆನೆ ಕುದುರೆ ರಥ
ಸೈನ್ಯ ಎಲ್ಲ ಕೂಡಿಸಿ
ಇಡೀ ರಾಜ್ಯವನ್ನೆಲ್ಲ ಗೆದ್ದು
ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡು
ಮನೆಗೇ ಹೋಗಲಿಲ್ಲ.
ಇದೊಂದು ಪರಿಚಿತ ಕಥೆಯೇ. ಈ ಕಥೆಯನ್ನು ಎಕೆಆರ್ ಹೇಗೆ ಪದ್ಯವನ್ನಾಗಿಸಿದ್ದಾರೆ ಎಂಬುದನ್ನು ಅನುಭವಿಸಲು ಇದನ್ನು ಗಟ್ಟಿಯಾಗಿ ಒಮ್ಮೆ ಓದಿಕೊಳ್ಳಬೇಕು. ಆ ರಾಜ ಹೊಸಹಕ್ಕಿಯನ್ನು ಹಿಡಿದು ಕೊಂಡೊಯ್ಯಬಲ್ಲ, ಆದರೆ ಅವನಿಗೆ ಹಕ್ಕಿಯಷ್ಟೇ ಬೇಕಿಲ್ಲ, ಅದರ ಹಾಡು ಬೇಕು. ಅದು ಹಾಡಬೇಕೆಂದರೆ ಅದಕ್ಕೆ ಹಾಡುವ ಮನಸ್ಸು ಬೇಕು. ಹಾಗೆ ಮನಸ್ಸು ಬರಲು ಅದರ ಜೊತೆ ಏನೇನಿರಬೇಕು (ಮತ್ತು ಅವೆಲ್ಲವೂ ಆ ಹಕ್ಕಿಗೆ ಸುಪರಿಚಿತವೂ, ತನ್ನದೇ ಎಂದುಕೊಳ್ಳುವಷ್ಟು ಹಕ್ಕಿಗೆ ಅಭ್ಯಾಸವೂ ಆಗಿರಬೇಕು) ಎಂಬುದನ್ನು ಒಂದರ ಕೆಳಗೊಂದು ಪಟ್ಟಿ ಮಾಡುತ್ತಾ ಹೋಗುತ್ತಾರೆ. ಅದನ್ನು ಓದುಗ ಓದಿಕೊಳ್ಳುವಾಗ ಪ್ರತಿ ಸಾಲಿನ ನಂತರ (ಸಾಲಿಗೆ ಒಂದು ಅಥವಾ ಎರಡೇ ಪದ) ಒಂದು pause ಕೊಟ್ಟು ಮುಂದುವರಿಯುತ್ತಾನೆ. ಅಂದರೆ ಆ ಪಟ್ಟಿಯಲ್ಲಿನ ಎಲ್ಲವೂ ಒಂದೊಂದಾಗಿ, ಆರೋಹಣ ಕ್ರಮದಲ್ಲಿ ಓದುಗನ ಮನಸ್ಸಿನಲ್ಲಿ ರಿಜಿಸ್ಟರ್ ಆಗುತ್ತಾ ಹೋಗುತ್ತದೆ. ಮತ್ತು ಆ ಪಟ್ಟಿಯಲ್ಲಿ ಒಂದನ್ನು ಬಿಟ್ಟರೂ ಲಿಂಕ್ ತಪ್ಪಿಬಿಡುತ್ತದೆ.
ಕೊನೆಯ ಸಾಲಲ್ಲಿ ಮನೆಗೇ ಹೋಗಲಿಲ್ಲ ಎಂಬ ಎರಡು ಪದಗಳು ಇಡೀ ಪಟ್ಟಿಯತ್ತ ಮತ್ತೆ ಕಣ್ಣು ಹಾಯಿಸುವಂತೆ ಮಾಡಿ ಅವನು ಏಕೆ ಹೋಗಲಿಲ್ಲ ಎಂದರೆ ಹಾಡು ಬೇಕಾದಲ್ಲಿ ಅವನು ಈ ಯಾವುದನ್ನೂ ಬಿಟ್ಟು ಹೋಗುವಂತಿಲ್ಲ, ಗೆದ್ದ ಮಾತ್ರಕ್ಕೆ ಅದೆಲ್ಲವನ್ನೂ ತನ್ನಿಚ್ಛೆಗೆ ಬಂದ ಹಾಗೆ ಬಳಸಿಕೊಳ್ಳಲು, ಸಾಗಿಸಲು ಸಾಧ್ಯವಿಲ್ಲ ಎಂಬುದು ಥಟ್ಟನೆ ಹೊಳೆದ ಕ್ಷಣದಲ್ಲಿ ಓದುಗ ಕವಿತೆಯೇ ಆಗಿಬಿಡುತ್ತಾನೆ. ಅವರದ್ದು ವಿಶೇಷವಾಗಿ ಚಾಕ್ಷುಷ ಪ್ರತಿಭೆ. ಕಣ್ಣಿಗೆ ಕಾಣುವ ಚಿತ್ರವಾಗಿಯೇ ಅವರು ಅನುಭವವನ್ನು ಗ್ರಹಿಸುತ್ತಾರೆ, ಆ ಚಿತ್ರಕ ಶಕ್ತಿಯ ಮೂಲಕವೇ ಓದುಗನಿಗೆ ಅದನ್ನು ದಕ್ಕುವಂತೆ ಮಾಡುತ್ತಾರೆ.
ಅನುಮಾನವಿದ್ದರೆ ಅವರ ಅಂಗುಲದ ಹುಳ ಪದ್ಯವನ್ನು ಓದಿ. ಅವರ ಅತ್ಯುತ್ತಮ ಪದ್ಯಗಳಲ್ಲಿ ಅದೂ ಒಂದು. ಪುಸ್ತಕದಲ್ಲಿ ಆ ಪದ್ಯ ಪ್ರಕಟವಾಗಿರುವ ಪದಗಳ ರೀತಿಯನ್ನು ಗಮನಿಸಿ ನೋಡಿ.
ಒಂದಂಗುಲದ ಹುಳ-
ಹಸಿಮೈ ಹಸಿರು,
ಮೂಗು ಕೆಂಪು ಮೂಗುತಿ.
ಮುಖ ಒತ್ತಿ,
ಬೆನ್ನೆಳೆದು
ಮಾ
ಕ ನಾ
ಗಿ ಮೈ ಮಡಿಸಿ
ಈಗ ಇದನ್ನು ಓದುಗ ಹೇಗೆ ಓದಬೇಕು? ರೂಢಿಯಲ್ಲಿರುವ ಸಾಲಿನ ನಂತರ ಮತ್ತೊಂದು ಸಾಲನ್ನು ಓದುವ ಕ್ರಮದನ್ವಯ ʻಮಾಕನಾಗಿʼ ಎಂದು ಓದಬೇಕಾಗುತ್ತದೆ. ಆದರೆ ರಾಮಾನುಜನ್ ಮತ್ತು ಓದುಗ ಇಬ್ಬರೂ ದಡ್ಡರಲ್ಲ. ಕಮಾನಾಗಿ ಎಂದೇ ಓದುಗರು ಓದಿಕೊಳ್ಳುತ್ತಾರೆ ಎಂಬುದು ಕವಿಗೆ ಸ್ಪಷ್ಟವಾಗಿ ಗೊತ್ತಿದೆ. ಆ ಸಾಲನ್ನು ಓದುವಾಗ ಅವನು ಆ ಚಲನೆಯನ್ನು ಅನುಭವಿಸುತ್ತಾನೆ ಕೂಡಾ. ಮುಖ ಒತ್ತಿ ಎಂಬ ಸಾಲು ಮುಂದೆ ಬಂದಿದೆ, ಬೆನ್ನೆಳೆದು ಎಂಬ ಸಾಲು ಹಿಂದಿದೆ. ಈಗ ಅದನ್ನು ನಿಧಾನವಾಗಿ ಓದಿಕೊಳ್ಳುವಾಗ, ಮುಖ ಒತ್ತಿ ಎನ್ನುವಲ್ಲಿ ಓದುಗನ ಗದ್ದ ಮುಂದಾಗಿ ಬೆನ್ನೆಳೆದು ಎಂದಾಗ ಬೆನ್ನುಹುರಿ ಕೊಂಚ ಹಿಂದಾಗಿ ಕಮಾನಾಗಿ ಎನ್ನುವಾಗ ಮೈ ಬಾಗಿ ಇಡೀ ಪದ್ಯವನ್ನು ಸ್ವತಃ ಅನುಭವಿಸುತ್ತಾನೆ. ಇದು ಎಕೆಆರ್ ಬಳಸಿರುವ ತಂತ್ರ. ಅಂಗುಲದ ಹುಳುವಿನ ಚಲನೆ, ಅದರ ಮೈ ಎಲ್ಲವೂ ಅಯಾಚಿತವಾಗಿ ಓದುಗನದೇ ಆಗಿಬಿಡುತ್ತದೆ.
ರಾಮಾನುಜನ್ ಕವಿತೆಯನ್ನು ವಿವರಿಸಹೊರಡುವುದು ಅಂಗುಲದ ಹುಳ ಕೋಗಿಲೆಯ ಹಾಡನ್ನು ಅಳೆಯಹೊರಟ ಹಾಗೆ. ಅದು ಸಾಧ್ಯ ಅಸಾಧ್ಯದ ಪ್ರಶ್ನೆಗಿಂತ ಅನುಭೂತಿಯ ಪ್ರಶ್ನೆ. ಅವರೇ ಓದಿದ ʼನಿನ್ನೆ ತಾನೇ ಮೈಸೂರಿನಿಂದ ಹೈಡ್ ಪಾರ್ಕಿಗೆ ಬಂದ ಹಾಗಿದೆʼ ಪದ್ಯವನ್ನು ಮತ್ತೆ ಮತ್ತೆ ಕೇಳಿದ್ದೇನೆ. ನಾನು ಓದಿದಾಗಿಗಿಂತ ಅವರ ಓದಿನಲ್ಲಿ ಅದರ ಅರ್ಥವ್ಯಾಪ್ತಿ ವಿಸ್ತಾರವಾಗಿದ್ದನ್ನು ಗಮನಿಸಿ ಬೆರಗಾಗಿದ್ದೇನೆ. ಪದ್ಯದ ಕಂಟೆಂಟ್, ಪದ್ಯದ ಛಂದಸ್ಸು ಎಲ್ಲದರೊಟ್ಟಿಗೆ ಆ ಪದರಂಗೋಲಿಯೊಳಗೆ ಓದುಗ ತನ್ಮಯನಾಗುವುದು ಎಂತಹಾ ವಿಶಿಷ್ಟ ಪ್ರಯೋಗ, ವಿನೂತನ ಕಲ್ಪನೆ. ಇದನ್ನು ಕನ್ನಡದಲ್ಲಿ ಬೇರೆ ಯಾರಾದರೂ ಮಾಡಿದ್ದಾರಾ? ನನ್ನ ಓದಿಗೆ ಸಿಕ್ಕಿಲ್ಲ. (ಆರ್ಯರ ಮನುಷ್ಯ ಸಂಕಲನದಲ್ಲಿ ಅವರು ಚಿತ್ರಕಾವ್ಯದ ಪ್ರಯೋಗ ಮಾಡಿದ್ದರೂ ಅದಕ್ಕೆ ಬಹು ಆಯಾಮಗಳಿಲ್ಲ.)
ಅಮೂರ್ತ ವಿಷಯಗಳ ಕುರಿತ ಅವರ ಮೋಹವಂತೂ ನನ್ನನ್ನು ಮತ್ಮತ್ತೆ ಸೆಳೆಯುತ್ತದೆ. ಆ ರೂಪಕಗಳು… ಚಿಕ್ಕಂದಿನಲ್ಲಿ ಬರುತ್ತಿದ್ದ ಆನೆ ಅದು ಬೆಳೆದು ಬೃಹತ್ತಾಗಿ ನಿಂತ ಹೊತ್ತಲ್ಲಿ ಚಿಕ್ಕದಾಗುವ ಮನೆ, ಮನೆಯೊಡೆಯ… ಒಡೆದ ಬಳೆಚೂರು, ಗಾಜು ಸೇರಿ ಕೆಲಿಡೋಸ್ಕೋಪ್ ಆಗುವ ವಿಸ್ಮಯ, ಅಮೂರ್ತವಾದ ಹಾಡನ್ನು ಅಳೆಯುತ್ತಾ ಮಾಯವಾಗುವ ಅಂಗುಲದ ಹುಳು (ಅದು ತಪ್ಪಿಸಿಕೊಂಡಿದ್ದಾ ಅಥವಾ ಅಳೆಯುವುದು ಮುಗಿಯದ್ದಾ?) ಓದುವಾಗ ನಮ್ಮದೇ ಎನಿಸುವ ನಮ್ಮದೇ ಆಗಿಬಿಡುವ, ಮುಟ್ಟಹೊರಟ ಕೂಡಲೇ ಮೈ ಮುದುರಿಕೊಂಡು ಬಿಡುವ ಈ ಪದ್ಯಗಳನ್ನು ಯಾವ ಧೈರ್ಯದ ಮೇಲೆ ವಿವರಿಸಹೊರಡುವುದು?
ವಿವರಿಸಹೊರಟರೆ ಏನಾಗುತ್ತದೆ ಎಂಬುದನ್ನು ಅವರ ಪದ್ಯದ ಮಾತು ಬೇರೆ ಎಂಬ ಪದ್ಯದಲ್ಲಿ ನೋಡೋಣ.
ನಾನು ಕಾಗದಗಳಿಗೆ ಉತ್ತರ
ಬರೆಯೋದಿಲ್ಲ, ಬರೆದರೂ
ಪೋಸ್ಟ್ ಮಾಡುವುದಿಲ್ಲ, ಪೋಸ್ಟ್ ಮಾಡಿದರೂ
ಎಷ್ಟೋ ಸಾರಿ ಅದು ಬರೆದವರಿಗೆ ಹೋಗಿ
ಸೇರೋದಿಲ್ಲ, ಸೇರಿದರೂ
ಅವರು ಅದನ್ನ ಪೂರ್ತಿ ಓದೋದಿಲ್ಲ, ಏನೇನೋ
ಕೆಲಸ ಅವರಿಗೆ. ಹಾಗೆ ಓದಿದರೂ
ನಾನೂ ಹೇಳಿದ್ದೊಂದು, ಅವರಿಗೆ ಅರ್ಥ
ಆಗಿದ್ದೊಂದು. ಇದರಿಂದ ಮನಸ್ತಾಪ ಬೇರೆ.
ನನಗೆ ಮಿಕ್ಕವರಿಂದ ಕಾಗದ ಬಂದಾಗಲೂ
ಇದೇ ಗತಿ. ಅದಕ್ಕೇ ನಾನು ಕಾಗದಕ್ಕೆ ಉತ್ತರ
ಬರೆಯೋದಿಲ್ಲ.
ಹೀಗೆ ಆರಂಭವಾಗುವ ಪದ್ಯ ನಾವು ಮತ್ತೊಬ್ಬರಿಗೆ ಅಗತ್ಯವಾಗಿ ಹೇಳಲೇಬೇಕಾದ ಮಾತುಗಳು ಹೇಗೆ ಕಮ್ಯುನಿಕೇಟ್ ಮಾಡುವಲ್ಲಿ ಸೋಲುತ್ತದೆ ಮತ್ತು ನೇರವಾಗಿ ಆಡುವ ಮಾತುಗಳಲ್ಲಿನ ದ್ವನಿಯನ್ನು ಆಲಿಸದೆ ಸಾಲುಗಳ ನಡುವೆ ಮತ್ತೇನನ್ನೋ ಹುಡುಕುವ, ಇಲ್ಲದ್ದನ್ನು ಊಹಿಸುವ ಕುರಿತು ಸೊಗಸಾಗಿ ಹೇಳುತ್ತದೆ. ಪತ್ರದ ವಿಷಯ ಹೀಗಾಯಿತಲ್ಲ.. ಪದ್ಯ ಬರೆದರೆ? ಅದು ಸಲೀಸು ನಿಜಕ್ಕೂ.
ಅದು ಕುದುರಿಬಿಟ್ಟರಂತೂ
ಅಪಾರ್ಥ ಮಾಡಿಕೊಂಡರೆ
ಅದೂ ಒಂದು ತರಹ ಅರ್ಥವೇ ಅಂತ ಅನಿಸಿಬಿಡುತ್ತೆ.
ಪದ್ಯದಲ್ಲಿ ಅನರ್ಥ ವ್ಯರ್ಥ ಸಾರ್ಥ ಅನಿಸಿದರೆ
ಅವೆಲ್ಲ ನಿರರ್ಥಕ ಕಲ್ಲುಮಣ್ಣಿನ ಗಣಿ
ಯಲ್ಲಿ ಸಿಕ್ಕಿದ ಅರ್ಥ
ಸೋಸಿಕೊಳ್ಳುವ ಬೇರೆ ಬೇರೆ ತಂತ್ರ.
ಎಲ್ಲವೂ ಸಮರ್ಥ, ಸುಳ್ಳು ಕೂಡ ನಿಜ
ಪದವೇ ಪದಾರ್ಥ.
ಅದರ ಮಣ್ಣಿನಲ್ಲಿ ಚಿನ್ನದ ಕಣ
ಕಲ್ಲಿನಲ್ಲಿ ಬೆಳ್ಳಿಯ ನರ
ಕೆಸರಿನಲ್ಲೂ ಚಾಲೀಸ ಬಡಿದ ಹಳದಿಕಣ್ಣು
ಕೆತ್ತನೆಗೆ ಕಾದಿರುವ ವೈಢೂರ್ಯ.
ಪದ್ಯವೆಂದರೆ ಹೀಗೆ.. ನಾನಾ ಅರ್ಥ.. ದಕ್ಕಿಸಿಕೊಂಡಷ್ಟು.
ಲಂಕೆ ಸುಟ್ಟಿದ್ದು ಹೇಗೆ ಅಂತ ಚರಿತ್ರೆ
ಕೇಳಿದವನ ಮನೆಯನ್ನೇ ʻಹೀಗೆʼ
ಅಂತ ಸುಟ್ಟು ತೋರಿಸಿ
ತೆನಾಲಿರಾಮ
ಆ ಹೊಗೆ ಆ ಬೂದಿ ಆ ಹಾಹಾಕಾರದೊಳಗೆ,
“ನೋಡಿ ಇಲ್ಲಿ,
ಯಥಾರ್ಥ ರಾಮಾಯಣ ಇದೇ” ಅಂತ
ತೋರಿಸಿದನಲ್ಲ,
ಹಾಗೆ.
ನಿಜ… ಪದ್ಯದ ಮಾತು ಬೇರೆಯೇ!
ಸಾಲುಸಾಲುಗಳ ನಡುವೆ ಮತ್ತೇನನ್ನೋ ಅರಸುವ, ಮತ್ತಿನ್ನೇನನ್ನೋ ಹುದುಗಿಸಿಡುವ, ತಾನೇ ಹುದುಗಿಸಿಟ್ಟಿದ್ದನ್ನು ತಾನೇ ಕೂತು ಅರಸುವ ರಾಮಾನುಜನ್ ಪದ್ಯಗಳ ಬಗ್ಗೆ ಅವರದೇ ಒಂದು ಪುಟ್ಟ ಪದ್ಯವೊಂದನ್ನು ಉಲ್ಲೇಖಿಸಬಯಸುತ್ತೇನೆ.
ಕಣ್ಣೆದುರಿಗೆ ಪ್ರತ್ಯಕ್ಷ
ವಾದದ್ದನ್ನು
ನೋಡು
ವುದಕ್ಕೆ ಎರಡು ಕಣ್ಣು
ಸಾಲದು ಸ್ವಾಮೀ
ಅದೃಷ್ಟ
ಬೇಕು…
ಅದೃಷ್ಟಕ್ಕಾಗಿ ಹಂಬಲಿಸುತ್ತಾ…