ಚೀನಾ (China) ಇತ್ತೀಚೆಗೆ ತಾನು ಜಾಗತಿಕ ಮಟ್ಟದಲ್ಲಿ ಪ್ರಾದೇಶಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಶಾಂತಿ ಸ್ಥಾಪಕ ಎಂಬ ಹೊಸ ಪಾತ್ರವನ್ನು ನಿರ್ವಹಿಸಲು ಹೊರಟಿದೆ. ಅದನ್ನು ಪುಷ್ಟೀಕರಿಸುವಂತಹ ಒಂದು ಬೆಳವಣಿಗೆಯಲ್ಲಿ ಇರಾನಿನ ಸೆಕ್ಯುರಿಟಿ ಕೌನ್ಸಿಲ್ ಅಲಿ ಶಮ್‌ಖಾನಿ ಹಾಗೂ ಸೌದಿ ಅರೇಬಿಯಾದ ಸಚಿವರಾದ ಮುಸಾದ್ ಬಿನ್ ಮೊಹಮ್ಮದ್ ಅಲ್ ಆಯ್ಬನ್ ಅವರಿಬ್ಬರೂ ಬೀಜಿಂಗ್‌ನಲ್ಲಿ ಪರಸ್ಪರ ಕೈ ಕುಲುಕಿದ್ದು, ಅವರಿಬ್ಬರ ಮಧ್ಯೆ ಚೀನಾದ ಅತ್ಯುನ್ನತ ರಾಜತಾಂತ್ರಿಕ ಅಧಿಕಾರಿ ವಾಂಗ್ ಯಿ ಅವರು ನಸುನಗುತ್ತಾ ನಿಂತಿದ್ದರು.
ಆ ಛಾಯಾಚಿತ್ರ ಸಾಂಪ್ರದಾಯಿಕ ವೈರಿಗಳಾದ ಸೌದಿ ಅರೇಬಿಯಾ ಮತ್ತು ಇರಾನ್‌ಗಳ ಮಧ್ಯೆ ಚೀನಾ ಮಧ್ಯಸ್ಥಿಕೆ ವಹಿಸಿ, ರಾಜತಾಂತ್ರಿಕ ಸಂಬಂಧಗಳನ್ನು ಮರುಸ್ಥಾಪನೆ ಮಾಡಿದ ಸಂದರ್ಭದ್ದಾಗಿತ್ತು. ಈ ಬೆಳವಣಿಗೆಯಿಂದಾಗಿ ಚೀನಾ ಜಗತ್ತಿನಲ್ಲಿ ಶಕ್ತಿಶಾಲಿ ರಾಷ್ಡ್ರವಾಗಿದ್ದು, ಪ್ರಾದೇಶಿಕ ಕಾರ್ಯಗಳಲ್ಲಿ ಅಮೆರಿಕಾಗಿಂತಲೂ ತಾನು ಪ್ರಭಾವಶಾಲಿ ಎಂದು ಸಾಬೀತುಪಡಿಸಿದೆ. ಇದು ಒಂದು ರೀತಿಯಲ್ಲಿ ಚೀನಾ ಅಮೆರಿಕಾವನ್ನು ಹಿಂದಿಕ್ಕಿ, ತಾನು ಜಾಗತಿಕ ಶಾಂತಿಸ್ಥಾಪಕ ಎಂಬಂತೆ ಬಿಂಬಿಸಲು ನಡೆಸುತ್ತಿರುವ ಪ್ರಯತ್ನವಾಗಿದೆ.
ಜೆಲೆನ್‌ಸ್ಕಿಗೆ ದೂರವಾಣಿ ಕರೆ ಮಾಡಿದ ಕ್ಸಿ
ರಷ್ಯಾ (Russia) ಉಕ್ರೇನ್ (Ukraine) ಮೇಲೆ ದಾಳಿ ನಡೆಸಿದ 61 ವಾರಗಳ ಬಳಿಕ, ಚೀನಾದ ಸರ್ವಾಧಿಕಾರಿ ನಾಯಕ ಕ್ಸಿ ಜಿನ್‌ಪಿಂಗ್ (Xi jinping) ಅಂತಿಮವಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರೊಡನೆ ಬುಧವಾರ, ಎಪ್ರಿಲ್ 26ರಂದು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಕ್ಸಿ ಜಿನ್‌ಪಿಂಗ್ ಅವರು ಈ ದೂರವಾಣಿ ಕರೆಯಲ್ಲಿ ಚೀನಾ ಉಕ್ರೇನಿನ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದಾಗಿ ಹೇಳಿದ್ದು, ಚೀನಾ ಮತ್ತು ಉಕ್ರೇನ್‌ಗಳ ಸಂಬಂಧ ವಿಶ್ವಸಂಸ್ಥೆ ರೂಪಿಸಿದ ರಾಜಕೀಯ ಬುನಾದಿಯ ಆಧಾರಿತವಾಗಿದೆ ಎಂದು ಹೇಳಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ವರದಿ ಮಾಡಿದೆ. ಆದರೆ ಚೀನಾ 2014ರಲ್ಲಿ ರಷ್ಯಾ ಆಕ್ರಮಿಸಿಕೊಂಡ ಕ್ರಿಮಿಯಾ ಪರ್ಯಾಯ ದ್ವೀಪದ ಕುರಿತು ಯಾವುದೇ ಮಾತನಾಡಿಲ್ಲ.
“ಚೀನಾ ಶಾಂತಿಯನ್ನು ಬಯಸುತ್ತದೆ. ಮಾತುಕತೆಯಿಂದ ಮಾತ್ರವೇ ಇದನ್ನು ಪರಿಹರಿಸಲು ಸಾಧ್ಯ” ಎಂದು ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ ಎನ್ನಲಾಗಿದೆ. “ಒಂದು ಪರಮಾಣು ಯುದ್ಧ ನಡೆದರೆ ಅದರಲ್ಲಿ ಯಾರೂ ಗೆಲ್ಲಲು ಸಾಧ್ಯವಿಲ್ಲ. ಇಂತಹ ಸಮಸ್ಯೆಯನ್ನು ರಾಜತಾಂತ್ರಿಕವಾಗಿ ಪರಿಹರಿಸಿಕೊಳ್ಳಲು ಸೂಕ್ತವಾದ ಪರಿಸ್ಥಿತಿಯನ್ನು ನಿರ್ಮಿಸುವುದು ಅವಶ್ಯಕವಾಗಿದೆ. ಚೀನಾ ಮಾತುಕತೆಯನ್ನು ಆಯೋಜಿಸಲು ಪ್ರಯತ್ನ ನಡೆಸುವುದನ್ನು ಮುಂದುವರಿಸಿ, ಕದನ ವಿರಾಮದ ಘೋಷಣೆಗೆ ಮತ್ತು ಶಾಂತಿ ಸ್ಥಾಪನೆಗೆ ಪ್ರಯತ್ನಿಸಲಿದೆ” ಎಂದಿದ್ದಾರೆ. ಇದರಲ್ಲಿ ಉಕ್ರೇನ್ ಮತ್ತು ಇತರ ರಾಷ್ಟ್ರಗಳಿಗೆ ದೂತರನ್ನು ಕಳುಹಿಸುವುದು ಸಹ ಸೇರಿದ್ದು, “ಆ ಮೂಲಕ ನಾವು ಎಲ್ಲ ತಂಡಗಳೊಡನೆಯೂ ಆಳವಾದ ಸಂವಹನ ಸಾಧಿಸಿ, ಉಕ್ರೇನ್ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ನಡೆಸುತ್ತೇವೆ” ಎಂದು ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ ಎನ್ನಲಾಗಿದೆ.
ಮಾಸ್ಕೋದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಡನೆ ಸಭೆ ನಡೆಸಿದ ಒಂದು ತಿಂಗಳ ಬಳಿಕ ಕ್ಸಿ ಜಿನ್‌ಪಿಂಗ್ ಜೆಲೆನ್ಸ್ಕಿ ಅವರಿಗೆ ಕರೆ ಮಾಡಿದ್ದಾರೆ. ಪಾಶ್ಚಾತ್ಯ ನಾಯಕರು ಸತತವಾಗಿ ಚೀನಾ ಮೇಲೆ ಒತ್ತಡ ಹೇರಿ, ರಷ್ಯಾದ ಅಧ್ಯಕ್ಷ ಪುಟಿನ್ ಅವರೊಡನೆ ಸೌಹಾರ್ದ ಸಂಬಂಧ ಹೊಂದಿರುವ ಕ್ಸಿ ಜಿನ್‌ಪಿಂಗ್ ಅವರಿಗೆ ಶಾಂತಿ ಸ್ಥಾಪನೆಗೆ ಪ್ರಯತ್ನ ನಡೆಸುವಂತೆ ಒತ್ತಾಯ ಹೇರಿದ್ದರ ಪರಿಣಾಮವಾಗಿ ಜಿನ್‌ಪಿಂಗ್ ಈ ಕರೆ ಮಾಡಿದ್ದಾರೆ ಎನ್ನಲಾಗಿದೆ. ರಷ್ಯಾ 2022ರ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕ, ಇದೇ ಮೊದಲ ಬಾರಿ ಕ್ಸಿ ಹಾಗೂ ಜೆಲೆನ್ಸ್ಕಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಜೆಲೆನ್ಸ್ಕಿ ಅವರೂ ಈ ಮಾತುಕತೆ ಧನಾತ್ಮಕವಾಗಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ. “ನಾನು ಚೀನಾ ಅಧ್ಯಕ್ಷರಾದ ಕ್ಸಿ ಜಿನ್‌ಪಿಂಗ್ ಅವರೊಡನೆ ದೀರ್ಘ ಕಾಲ ದೂರವಾಣಿ ಸಂಭಾಷಣೆ ನಡೆಸಿದೆ. ಈ ಕರೆ ಫಲಪ್ರದವಾಗಿದ್ದು, ಚೀನಾದಲ್ಲಿ ಉಕ್ರೇನ್ ರಾಯಭಾರಿಯ ನೇಮಕದ ಕುರಿತೂ ಚರ್ಚೆ ನಡೆಸಲಾಗಿದೆ. ಇದು ನಮ್ಮ ಎರಡು ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಪೂರಕವಾಗಿದೆ” ಎಂದು ಜೆಲೆನ್ಸ್ಕಿ ಟ್ವೀಟ್ ಮಾಡಿದ್ದರು.
ಚೀನಾ ಮತ್ತು ರಷ್ಯಾ – ಉಕ್ರೇನ್ ಯುದ್ಧ
ಫೆಬ್ರವರಿ ತಿಂಗಳಲ್ಲಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಂಬಿಕಸ್ಥ, ಚೀನೀ ಕಮ್ಯೂನಿಸ್ಟ್ ಪಕ್ಷದ ಪಾಲಿಟ್ ಬ್ಯೂರೋ ಹಾಗೂ ಸೆಂಟ್ರಲ್ ಕಮಿಟಿಯ ಸದಸ್ಯ, ಫಾರೀನ್ ಅಫೇರ್ಸ್ ಕಮಿಷನ್ ಮುಖ್ಯಸ್ಥ ವಾಂಗ್ ಯಿ ಅವರು ತನ್ನ ಯುರೋಪ್ ಪ್ರವಾಸವನ್ನು ಧನಾತ್ಮಕವಾಗಿ ಮುಗಿಸಿದ್ದರು. ಮಾಸ್ಕೋದಲ್ಲಿ ಅವರು ಭದ್ರತಾ ಸಮಿತಿ ಕಾರ್ಯದರ್ಶಿ ಪಾಟ್ರುಶೆವ್, ಸೆರ್ಗೇ ಲೆವೆರೊವ್, ಹಾಗೂ ಅಧ್ಯಕ್ಷ ಪುಟಿನ್ ಜೊತೆ ಸಮಾಲೋಚನೆ ನಡೆಸಿದ್ದರು.
ಯುರೋಪಿನ ಕಠಿಣ ಹಾದಿ, ಹಲವು ಕಷ್ಟಕರ ಸಭೆಗಳು ಹಾಗೂ ಹೇಳಿಕೆಗಳು ಹಾಗೂ ಚೀನಾದ ವಿದೇಶಾಂಗ ನೀತಿಗಳನ್ನು ಗಮನಿಸಿದಾಗ, ಉಕ್ರೇನ್ ಸಮಸ್ಯೆಯನ್ನು ಸರಿಪಡಿಸಲು ಚೀನಾ ಏಕೈಕ ಮಧ್ಯಸ್ಥಿಕೆದಾರ ಎಂಬ ಭಾವನೆಗಳು ಮೂಡಿದ್ದವು. ಈಗಾಗಲೇ ಟರ್ಕಿ ಹಾಗೂ ಮಧ್ಯಪೂರ್ವ ರಾಷ್ಟ್ರಗಳು ವಿಫಲವಾದ ಶಾಂತಿ ಸ್ಥಾಪನೆಗೆ ಚೀನಾ ಪ್ರಯತ್ನ ಪಡಲಿದೆ.
ಸುಡಾನ್‌ನಲ್ಲಿ ಶಾಂತಿ ಸ್ಥಾಪನೆಗೆ ಚೀನಾದ ಕರೆ
ವಿಶ್ವಸಂಸ್ಥೆಯಲ್ಲಿ ಚೀನಾದ ಖಾಯಂ ಪ್ರತಿನಿಧಿ ಜಾ಼ಂಗ್ ಜುನ್ ಸೂಡಾನ್ ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಕ್ಷಣವೇ ತಡೆಗಟ್ಟಬೇಕು ಎಂದು ಆಗ್ರಹಿಸಿದ್ದರು. ಅವರು ಸುಡಾನಿನ ಸೇನಾ ಮುಖ್ಯಸ್ಥ ಅಬ್ದೆಲ್ ಫತ್ತಾ ಅಲ್ ಬುರ್ಹಾನ್ ಹಾಗೂ ಶಕ್ತಿಶಾಲಿ ಮಿಲಿಟರಿ ಗುಂಪು ರಾಪಿಡ್ ಸಪೋರ್ಟ್ ಫೋರ್ಸ್ ನಾಯಕತ್ವ ಹೊಂದಿರುವ ಮೊಹಮದ್ ಹಮ್ದಾನ್ ಡಗಾಲೋ ಅವರಿಗೆ ತಕ್ಷಣವೇ ಕದನವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದರು.
ಇತ್ತೀಚಿನ ಸೂಡಾನಿನ ಕದನಗಳು ನಾಗರಿಕರ ಸಾವು ನೋವು ಮತ್ತು ಮೂಲಭೂತ ವ್ಯವಸ್ಥೆಗಳ ನಾಶಕ್ಕೆ ಕಾರಣವಾಗಿದೆ. ಸೂಡಾನಿನ ಉತ್ತಮ ಸ್ನೇಹಿತ ಮತ್ತು ಸಹಯೋಗಿಯಾಗಿರುವ ಚೀನಾಗೆ ಈ ಬೆಳವಣಿಗೆಗಳಿಂದ ಸಾಕಷ್ಟು ನೋವಾಗಿದ್ದು, ಸೂಡಾನ್ ಮರಳಿ ಪ್ರಕ್ಷುಬ್ಧತೆಯನ್ನು ಎದುರಿಸುವುದನ್ನು ನೋಡಲು ಕಷ್ಟವಾಗುತ್ತಿದೆ ಎಂದು ಜಾ಼ಂಗ್ ಹೇಳಿದ್ದಾರೆ.
ಇದನ್ನೂ ಓದಿ: ಸಮರಾಂಕಣ: ಸುಳ್ಳು ಪತ್ತೆ ಯಂತ್ರಗಳು ಎಷ್ಟು ನಂಬಿಕೆಗೆ ಅರ್ಹ? ಅವುಗಳನ್ನು ನಿಜಕ್ಕೂ ಬಳಸಬೇಕೆ?
ಸುಡಾನಿನ ಸಶಸ್ತ್ರ ಹೋರಾಟ ನೂರಾರು ಅಮಾಯಕರ ಸಾವುನೋವಿಗೆ, ಆಸ್ತಿಪಾಸ್ತಿ ನಾಶಕ್ಕೆ ಕಾರಣವಾಗಿದೆ. ಜಾ಼ಂಗ್ ಅವರ ಪ್ರಕಾರ, ಸೂಡಾನಿನ ಮಿತ್ರನಾಗಿರುವ ಚೀನಾಗೆ ಈ ಬೆಳವಣಿಗೆ ನೋವುಂಟು ಮಾಡಿದೆ.
ಆಫ್ರಿಕಾದಾದ್ಯಂತ ಚೀನಾ ಒಂದು ಶಕ್ತಿಶಾಲಿ ಪಡೆಯಾಗಿದ್ದು, ಆಫ್ರಿಕಾ ಖಂಡದ ತುದಿಯಲ್ಲಿರುವ, ತೈಲ ಸಮೃದ್ಧ ಗಲ್ಫ್ ರಾಷ್ಟ್ರಗಳ ಸನಿಹವಿರುವ ಸೂಡಾನ್ ಶಕ್ತಿಯ ಸ್ಪರ್ಧೆಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಆದರೆ ಚೀನಾ ಸೂಡಾನನ್ನು ಈ ಮೊದಲಿನಂತೆ ಧನಾತ್ಮಕವಾಗಿ ನೋಡುತ್ತಿಲ್ಲ. ಚೀನಾ ಈಗ ತೈಲ ಪೂರೈಕೆಗೆ ಈ ಉತ್ತರ ಆಫ್ರಿಕಾದ ರಾಷ್ಟ್ರದ ಮೇಲೆ ಅವಲಂಬಿತವಾಗಿಲ್ಲ. ಬಹುತೇಕ ಹತ್ತು ವರ್ಷಗಳ ಹಿಂದೆ, ಸೂಡಾನ್ ಚೀನಾದ ಆರನೇ ಅತಿದೊಡ್ಡ ವಿದೇಶೀ ತೈಲ ಪೂರೈಕೆದಾರ ರಾಷ್ಟ್ರವಾಗಿತ್ತು. ಅದು ಚೀನಾದ 5.5% ತೈಲದ ಅವಶ್ಯಕತೆಯನ್ನು ಪೂರೈಸುತ್ತಿತ್ತು.
ಆದರೆ ಸೂಡಾನ್ ಪಾಲಿಗೆ ಇಂದಿಗೂ ಚೀನಾ ಅತ್ಯಂತ ಪ್ರಮುಖ ವ್ಯಾಪಾರ ಸಹಯೋಗಿ ರಾಷ್ಟ್ರವಾಗಿದ್ದು, ಗಣಿಗಾರಿಕೆ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಚೀನಾ ಹೂಡಿಕೆದಾರನಾಗಿದೆ. ಹಲವಾರು ಚೀನೀಯರು ಸುಡಾನಿನ ಮೂಲಭೂತ ಸೌಲಭ್ಯ ಕ್ಷೇತ್ರದಲ್ಲಿ, ಹೈಡ್ರೋಕಾರ್ಬನ್ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ.
ಒಂದು ವೇಳೆ ಚೀನಾ ಏನಾದರೂ ಸೆಣಸಾಡುತ್ತಿರುವ ಎರಡು ಪಕ್ಷಗಳನ್ನು ಮಾತುಕತೆಗೆ ಬರುವಂತೆ ಮಾಡಲು ಸಫಲವಾದರೆ ಅದೊಂದು ಆಸಕ್ತಿದಾಯಕ ಬೆಳವಣಿಗೆಯಾಗಲಿದೆ. ಆದರೆ ಗ್ಲೋಬಲ್ ಸೆಕ್ಯುರಿಟಿ ಇನಿಷಿಯೇಟಿವ್ (ಜಿಎಸ್ಐ) ಮೂಲಕ ಚೀನಾ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಪ್ರಮುಖ ಪಾತ್ರ ವಹಿಸುವುದನ್ನು ಮುಂದುವರಿಸುವ ನಿರೀಕ್ಷೆಗಳಿವೆ.
ಇದನ್ನೂ ಓದಿ: ಸಮರಾಂಕಣ | ವಿಮಾನವಾಹಕ ನೌಕೆಯ ಮೇಲಿಳಿಯುವ ಅವಕಾಶ ವಂಚಿತವಾದ ನೌಕಾಪಡೆಯ ಪೈಲಟ್‌ಗಳು