ಬಹುತೇಕ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭಾರತೀಯ ನೌಕಾಪಡೆಯ ಫೈಟರ್ ಪೈಲಟ್‌ಗಳು ವಿಮಾನವಾಹಕ ನೌಕೆಯ ಮೇಲೆ ಭೂಸ್ಪರ್ಶ ಮಾಡಲು ಸಾಧ್ಯವಾಗಿಲ್ಲ. ಆದರೆ ಐಎನ್ಎಸ್ ವಿಕ್ರಾಂತ್ ವಿಮಾನವಾಹಕ ನೌಕೆಯ ಮೇಲೆ ಯುದ್ಧ ವಿಮಾನಗಳ ಪ್ರಥಮ ಭೂಸ್ಪರ್ಶ 2023ರ ಆರಂಭದಲ್ಲಷ್ಟೇ ನಡೆಯಲು ಸಾಧ್ಯ ಎನ್ನಲಾಗಿದೆ. ಅದರೊಡನೆ ಐಎನ್ಎಸ್ ವಿಕ್ರಮಾದಿತ್ಯ ವಿಮಾನವಾಹಕ ನೌಕೆಯ ಮರುಜೋಡಣೆ ಹಾಗೂ ದುರಸ್ತಿ ಕಾರ್ಯಗಳು ಸಾಕಷ್ಟು ವಿಳಂಬವಾಗಿರುವುದರಿಂದ, ನೌಕಾಪಡೆಯ ಪೈಲಟ್‌ಗಳು ಈಗ ಗೋವಾದ ತೀರ ಆಧಾರಿತ ಪರೀಕ್ಷಾ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಮೂಲಗಳ ಪ್ರಕಾರ, ಐಎನ್ಎಸ್ ವಿಕ್ರಮಾದಿತ್ಯ ವಿಮಾನವಾಹಕ ನೌಕೆಯ ಮರುಜೋಡಣೆಯ ಬಳಿಕ ಜುಲೈ ತಿಂಗಳಲ್ಲಿ ಸಮುದ್ರದಲ್ಲಿ ಪರೀಕ್ಷಾ ಸಾಗಾಟ ನಡೆಸುತ್ತಿದ್ದಾಗ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದರ ಪರಿಣಾಮವಾಗಿ ವಿಮಾನವಾಹಕ ನೌಕೆ ಕಾರ್ಯಾಚರಣೆಗೆ ಇಳಿಯುವುದು ತಡವಾಗಿತ್ತು. ಮೂಲತಃ ರಷ್ಯಾ ನಿರ್ಮಾಣದ ಈ ವಿಮಾನವಾಹಕ ನೌಕೆ ಈ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಸಂಪೂರ್ಣವಾಗಿ ಕಾರ್ಯಾಚರಣೆಗೆ ಲಭ್ಯವಾಗಲಿದೆ.
ನೌಕಾಪಡೆಯ ಪೈಲಟ್‌ಗಳು ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳೊಡನೆ ಜಂಟಿ ಅಭ್ಯಾಸಗಳಲ್ಲಿ ಭಾಗವಹಿಸಿದ್ದಾರೆ. ಆದರೆ ಆ ನೌಕೆಗಳಲ್ಲಿ ವಿಕ್ರಮಾದಿತ್ಯ ಹಾಗೂ ವಿಕ್ರಮ್‌ಗಳಲ್ಲಿ ಇರುವಂತೆ ಸ್ಕೈ ಜಂಪ್ ವ್ಯವಸ್ಥೆ ಇಲ್ಲದಿರುವ ಕಾರಣ ಪೈಲಟ್‌ಗಳಿಗೆ ಟೇಕಾಫ್ ಮಾಡಲು ಸಾಧ್ಯವಾಗಿಲ್ಲ. ನೂತನವಾಗಿ ಸೇವೆಗೆ ಸೇರ್ಪಡೆಗೊಂಡಿರುವ ಐಎನ್ಎಸ್ ವಿಕ್ರಾಂತ್ ನೌಕೆಯ ಪರೀಕ್ಷೆಗಳು ಈ ತಿಂಗಳು ನಡೆಯಬೇಕಾಗಿತ್ತು. ಆದರೆ ಅದರ ಮೇಲೆ ಮಿಗ್ 29ಕೆ ವಿಮಾನದ ಪೈಲಟ್‌ಗಳು 2023ರ ಕೊನೆಯ ವೇಳೆಗೆ ವಿಕ್ರಾಂತ್ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಗೆ ಸಿದ್ಧವಾದಾಗಲಷ್ಟೇ ಭೂಸ್ಪರ್ಶ ಮಾಡಲು ಸಾಧ್ಯವಾಗುತ್ತದೆ.
ಆದರೆ ಮೂಲಗಳ ಪ್ರಕಾರ ವಿಮಾನವಾಹಕ ನೌಕೆ ಕಾರ್ಯಾಚರಣೆಗೆ ಲಭ್ಯವಿರದಿದ್ದರೂ ಪೈಲಟ್‌ಗಳ ತರಬೇತಿಗೆ ಯಾವ ತೊಂದರೆಯೂ ಉಂಟಾಗಿಲ್ಲ. ಅವರು ನೆಲದ ಮೇಲಿನ ತಾಣಗಳಿಂದ ಹಲವು ಕಾರ್ಯಾಚರಣೆಗಳಿಗೆ ಹಾರಾಟ ನಡೆಸುತ್ತಾ ಬಂದಿದ್ದಾರೆ. ಅದರೊಡನೆ ಐಎನ್ಎಸ್ ಹನ್ಸಾ ದಲ್ಲಿನ ಶೋರ್ ಬೇಸ್ಡ್ ಟೆಸ್ಟ್ ಫೆಸಿಲಿಟಿ (ಟಿಬಿಎಸ್ಎಫ್) ಸಿಮ್ಯುಲೇಟರ್ ಮೂಲಕ ಸ್ಕೈ ಜಂಪ್ ಅಭ್ಯಾಸವನ್ನೂ ನಡೆಸುತ್ತಿದ್ದಾರೆ. ಆದರೆ, ಅಧಿಕಾರಿಗಳು ವಿಮಾನವಾಹಕ ನೌಕೆಯ ಮೇಲೆ ಲ್ಯಾಂಡಿಂಗ್ ನಡೆಸುವುದಕ್ಕೆ ಅದರದ್ದೇ ಆದ ಆಯಾಮಗಳಿದ್ದು, ಸಿಮ್ಯುಲೇಟರ್ ಪ್ರಯೋಗಗಳು ಅದರ ಸನಿಹ ಬರುವುದಿಲ್ಲ ಎಂದಿದ್ದಾರೆ.
ಪೈಲಟ್‌ಗಳು ವಿಮಾನವಾಹಕ ನೌಕೆಗಳ ಮೇಲೆ ಹಲವಾರು ಸಂದರ್ಭಗಳಲ್ಲಿ ಇಳಿದು, ಹಾರಿ ಮಾಡುತ್ತವೆ. ಅವುಗಳನ್ನು ಬೇರೆ ಬೇರೆ ಸಾಗರ ಪ್ರದೇಶಗಳಲ್ಲಿ, ರಾತ್ರಿಯ ಲ್ಯಾಂಡಿಂಗ್‌ಗಳಲ್ಲಿ ಬಳಸಲಾಗುತ್ತದೆ. ಇವುಗಳನ್ನು ಡೊಗ್ಲಾಸ್ ಸೀ ಸ್ಕೇಲ್‌ನಲ್ಲಿ ಅಳೆಯಲಾಗುತ್ತದೆ. ಇಂತಹ ಲ್ಯಾಂಡಿಂಗ್ ಸಂಖ್ಯೆಗಳ ಆಧಾರದಲ್ಲಿ ಪ್ರತಿಯೊಬ್ಬ ಪೈಲಟ್ ಸಹ ಗ್ರೇಡಿಂಗ್ ಪಡೆಯುತ್ತಾರೆ. ಆದರೆ ಇದಕ್ಕೆ ಕಳೆದ ಎರಡು ವರ್ಷಗಳಿಂದ ಅಡಚಣೆ ಉಂಟಾಗಿದೆ.
ಮೂಲತಃ ನೌಕಾ ವಿಮಾನ ಪೈಲಟ್ ಆಗಿದ್ದ, ಭಾರತೀಯ ನೌಕಾಪಡೆಯ ಚೀಫ್ ಅಡ್ಮಿರಲ್ (ನಿವೃತ್ತ) ಅರುಣ್ ಪ್ರಕಾಶ್ ಅವರು ಎಸ್‌ಬಿಟಿಎಫ್ ಭಾರತಕ್ಕೆ ಒಂದು ಆಸ್ತಿಯಾಗಿದೆ. ಇದು ಭಾರತೀಯ ಪೈಲಟ್‌ಗಳಿಗೆ ಅವರ ಹಾರಾಟ ಕೌಶಲ್ಯಗಳನ್ನು ನಿರ್ವಹಿಸಲು ಮತ್ತು ಇನ್ನಷ್ಟು ಅಭಿವೃದ್ಧಿ ಪಡಿಸಲು ನೆರವಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.
ಎಸ್‌ಬಿಟಿಎಫ್ ಹಾರಾಟ ಕೌಶಲಗಳನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಎಲ್ಲ ಆಯಾಮಗಳನ್ನು ಒದಗಿಸುತ್ತದೆ. ಆದರೆ ವಿಮಾನವಾಹಕ ನೌಕೆ ಒದಗಿಸುವ ಪಿಚ್, ರೋಲ್ ಹಾಗೂ ಓಡಾಟದ ಅನುಭವವನ್ನು ಮಾತ್ರ ಕೊಡಲು ಸಾಧ್ಯವಾಗುವುದಿಲ್ಲ. ಅರುಣ್ ಪ್ರಕಾಶ್ ಅವರು ವಿಮಾನವಾಹಕ ನೌಕೆಯ ಮೇಲೆ ಲ್ಯಾಂಡ್ ಆಗದಿರುವುದು ಒಂದು ಪ್ರಮುಖ ತೊಂದರೆ ಅಲ್ಲ, ಅದನ್ನು ಸುಲಭವಾಗಿ ಮೀರಲು ಸಾಧ್ಯವಾಗುತ್ತದೆ ಎನ್ನುತ್ತಾರೆ.
ವಿಕ್ರಮಾದಿತ್ಯ ಮರುಜೋಡಣೆ ಇನ್ನಷ್ಟು ತಡವಾಗಬಹುದು!
ಐಎನ್ಎಸ್ ವಿಕ್ರಮಾದಿತ್ಯ ಮೂಲತಃ ರಷ್ಯಾ ನಿರ್ಮಿತ ಅಡ್ಮಿರಲ್ ಗೋರ್ಷ್‌ಖೋವ್ ಎಂಬ ವಿಮಾನವಾಹಕ ನೌಕೆಯಾಗಿದ್ದು, ಇದನ್ನು 1996ರಲ್ಲಿ ರಷ್ಯಾ ಸೇವೆಯಿಂದ ನಿವೃತ್ತಿಗೊಳಿಸಿತ್ತು. ಬಳಿಕ ಭಾರತ 2004ರಲ್ಲಿ ಅದನ್ನು ರಷ್ಯಾದಿಂದ ಖರೀದಿಸಿ, ಅದನ್ನು ಮರುನಿರ್ಮಾಣಗೊಳಿಸಿ, 2013ರಲ್ಲಿ ಸೇವೆಗೆ ಸೇರ್ಪಡೆಗೊಳಿಸಿತು. ಮೂಲಗಳ ಪ್ರಕಾರ ಐಎನ್ಎಸ್ ವಿಕ್ರಮಾದಿತ್ಯ ಪ್ರಸ್ತುತ ‘ನಾರ್ಮಲ್ ರಿಫಿಟ್’ ಎಂದು ಕರೆಯಲಾಗುವ ಕಾರ್ಯಾಚರಣೆಗೆ ಒಳಪಡುತ್ತಿದೆ. ಅದರೊಡನೆ ಕೋವಿಡ್ ಪ್ಯಾನ್‌ಡೆಮಿಕ್ ಸಹ ಮರುಜೋಡಣಾ ಪ್ರಕ್ರಿಯೆ ನಿಧಾನಗೊಳ್ಳುವಂತೆ ಮಾಡಿತು. ಆ ಬಳಿಕ ಉಂಟಾದ ಅಗ್ನಿ ಆಕಸ್ಮಿಕ ಇಂಧನ ಪೈಪ್‌ಗಳು ಹಾಗೂ ಬ್ಲೋವರ್‌ಗಳನ್ನು ಹಾನಿಗೊಳಿಸಿ, ವಿಕ್ರಮಾದಿತ್ಯದ ಮರುಜೋಡಣೆಯನ್ನು ಇನ್ನಷ್ಟು ತಡವಾಗಿಸಿತು.
ಐಎನ್ಎಸ್ ವಿಕ್ರಮಾದಿತ್ಯ ನೌಕೆಯನ್ನು ಈ ಮೊದಲು 2018ರಲ್ಲಿ ಒಂದು ಬಾರಿ 700 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಐದು ತಿಂಗಳ ಅವಧಿಯ ರಿಫಿಟ್ ಪ್ರಕ್ರಿಯೆಗೊಳಗಾಗಿತ್ತು. 2013ರ ಅಂತ್ಯದಲ್ಲಿ ಸೇವೆಗೆ ಸೇರ್ಪಡೆಯಾದ ಬಳಿಕ ವಿಕ್ರಮಾದಿತ್ಯ ಎರಡು ಬಾರಿ ರಿಫಿಟ್ ಪ್ರಕ್ರಿಯೆಗೆ ಒಳಗಾಗಿದೆ. ಯಾವುದಾದರೂ ಯುದ್ಧ ನೌಕೆಗೆ ಈ ರೀತಿ ಪದೇ ಪದೇ ರಿಫಿಟ್ ಪ್ರಕ್ರಿಯೆ ನಡೆಸುವುದು ಸಹಜವೇ ಎಂದು ಪ್ರಶ್ನೆ ಮಾಡಿದರೆ, ಪ್ರತಿಯೊಂದು ನೌಕೆಗೂ ಅದರದ್ದೇ ಆದ ರಿಫಿಟ್ ಅವಧಿ ಎಂಬುದು ಇದ್ದೇ ಇರುತ್ತದೆ. ಭಾರತೀಯ ನೌಕಾಪಡೆಯಲ್ಲಿ ಒಂದು ನೌಕೆಗೆ ಮೂರು ಸಣ್ಣ ರೀಫಿಟ್‌ಗಳನ್ನು ನಡೆಸಲಾಗುತ್ತದೆ. ಅದರಲ್ಲಿ ಸಣ್ಣಪುಟ್ಟ ರಿಪೇರಿ ಕೆಲಸಗಳು ಪೂರೈಸುತ್ತವೆ. ಬಳಿಕ ನಡೆಯುವ ಸಾಮಾನ್ಯ ರೀಫಿಟ್ ನಲ್ಲಿ ನೌಕೆಯನ್ನು ದೊಡ್ಡ ಪ್ರಮಾಣದ ಪರೀಕ್ಷೆಗಳಿಗೆ ಒಳಪಡಿಸಿ, ಅದರಲ್ಲಿನ ಎಲ್ಲಾ ವ್ಯವಸ್ಥೆಗಳನ್ನೂ ಕೂಲಂಕುಷವಾಗಿ ಪರೀಕ್ಷೆ ನಡೆಸಲಾಗುತ್ತದೆ.
ಇದನ್ನೂ ಓದಿ | ಸಮರಾಂಕಣ | ವಿಮಾನದ ಚಕ್ರಗಳ ಹಿಂದೆ ಅಡಗಿದೆ ಅದ್ಭುತ ವಿಜ್ಞಾನ
ಒಂದು ನೌಕೆಯನ್ನು ಎರಡು ಬಾರಿ ಸಾಮಾನ್ಯ ರೀಫಿಟ್ ನಡೆಸಿದ ಬಳಿಕ, ಅದನ್ನು ಮಧ್ಯಮ ಪ್ರಮಾಣದ ರೀಫಿಟ್‌ಗೆ ಒಳಪಡಿಸಲಾಗುತ್ತದೆ. ಇದರಲ್ಲಿ ಡ್ರೈ ಡಾಕ್ ಕೆಲಸಗಳೂ ಸೇರಿದಂತೆ ಸಾಕಷ್ಟು ರಿಪೇರಿ ಕೆಲಸಗಳು ನಡೆಯುತ್ತವೆ. ಆದರೆ ವಿಕ್ರಮಾದಿತ್ಯ ಒಂದು ಹಳೆಯ ವಿಮಾನವಾಹಕ ನೌಕೆಯಾಗಿರುವುದರಿಂದ ಇಷ್ಟೊಂದು ರಿಪೇರಿ ಕೆಲಸಗಳಿರುತ್ತವೆ. ಆದರೆ ಇವುಗಳಿಗೆ ಹೋಲಿಸಿದರೆ ವಿಕ್ರಾಂತ್ ನೂತನ ನೌಕೆಯಾಗಿರುವುದರಿಂದ ಇದನ್ನು ಸದ್ಯದ ಭವಿಷ್ಯದಲ್ಲಿ ರಿಪೇರಿ ನಡೆಸುವ ಅಗತ್ಯವಿರುವುದಿಲ್ಲ.
ಇದನ್ನೂ ಓದಿ | ಸಮರಾಂಕಣ | ವಿಮಾನದ ಚಕ್ರಗಳ ಹಿಂದೆ ಅಡಗಿದೆ ಅದ್ಭುತ ವಿಜ್ಞಾನ
ಐಎನ್ಎಸ್ ವಿಕ್ರಮಾದಿತ್ಯ ಬೆಲೆ ಹೆಚ್ಚಳ
2004ರಲ್ಲಿ ಆಗ ಅಧಿಕಾರದಲ್ಲಿದ್ದ ಎನ್‌ಡಿಎ ಸರ್ಕಾರ ಐಎನ್ಎಸ್ ವಿಕ್ರಮಾದಿತ್ಯ ಖರೀದಿಗಾಗಿ 974 ಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ ಕಾಲ ಕಳೆದಂತೆ 2010ರಲ್ಲಿ ಈ ಒಪ್ಪಂದದ ಮೊತ್ತ 2.35 ಬಿಲಿಯನ್ ಡಾಲರ್ ತಲುಪಿತ್ತು. ಈ ಬೆಲೆಯಲ್ಲಿನ ಹೆಚ್ಚಳದ ಹಿಂದೆ ಅಡ್ಮಿರಲ್ ಗೋರ್ಷ್‌ಖೋವ್ ಒಪ್ಪಂದದಲ್ಲಿ ಭಾಗಿಯಾಗಿದ್ದ ಹಿರಿಯ ಅಧಿಕಾರಿಗೆ ಸಂಬಂಧಿಸಿದ ಸಮಸ್ಯೆ ಇರುವುದು 2010ರಲ್ಲಿ ಬೆಳಕಿಗೆ ಬಂತು.
2009ರಲ್ಲಿ ರಷ್ಯಾದ ಮಾಜಿ ಭಾರತೀಯ ರಾಯಭಾರಿ ವ್ಯಾಚೆಸ್ಲಾವ್ ಟ್ರುಬ್ನಿಕಾವ್ ಅವರು ಈ ಅಸಹಜ ಬೆಲೆ ಏರಿಕೆಯ ಹಿಂದಿನ ಒಂದು ಪ್ರಮುಖ ಅಂಶವನ್ನು ಬಯಲು ಮಾಡಿದ್ದರು. ಅದೆಂದರೆ, ಈ ಒಪ್ಪಂದಕ್ಕೆ ಸಹಿ ಹಾಕಿದ್ದ ಸಮಯದಲ್ಲಿ ರಷ್ಯಾದ ಕಂಪನಿಯಾದ ಸೆವ್‌ಮಾಷ್‌ಗೆ ಅಪಾರವಾದ ಹಣದ ಅವಶ್ಯಕತೆ ಇತ್ತು. ಅದೇ ಸಮಯದಲ್ಲಿ ಭಾರತ ಒಂದು ಆಧುನಿಕ ವಿಮಾನವಾಹಕ ಯುದ್ಧ ನೌಕೆಯನ್ನು ಅತ್ಯಂತ ಕನಿಷ್ಠ ದರದಲ್ಲಿ ಖರೀದಿಸಲು ಹುಡುಕಾಡುತ್ತಿತ್ತು.
ಇದನ್ನೂ ಓದಿ | ಸಮರಾಂಕಣ | ಭಾರತೀಯ ಸೈನ್ಯದ ಆಧುನಿಕ ಯುದ್ಧ ತಂತ್ರಗಳಿಗೆ ನೆರವಾಗಲಿದೆಯಾ 5ಜಿ ತಂತ್ರಜ್ಞಾನ?