Site icon Vistara News

ನನ್ನ ದೇಶ ನನ್ನ ದನಿ ಅಂಕಣ: ಸಾಂಚಿ ಎಂಬ ಅಚ್ಚರಿ

sanchi stupa

ಈ ಅಂಕಣವನ್ನು ಇಲ್ಲಿ ಕೇಳಿ:

http://vistaranews.com/wp-content/uploads/2023/02/sanchi.mp3

ಭಾರತವೇ ಹಾಗೆ. ಅದ್ಭುತಗಳ, ವಿಸ್ಮಯಗಳ ನಾಡು. ನಾನು ಇತ್ತೀಚೆಗೆ ಸಾಂಚಿ ಕ್ಷೇತ್ರಕ್ಕೆ (sanchi stupa) ಭೇಟಿ ನೀಡುವ ಮುನ್ನ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆ. ಸಹಜವೇ. ಅದು ಬುದ್ಧನ ನಾಡು. ಅಶೋಕನ ಬೀಡು. ಗೌತಮ ಬುದ್ಧನ ವಿಚಾರಗಳು, ಚಿಂತನೆಗಳು ಜಗತ್ತಿನಾದ್ಯಂತ ಅಪಾರ ಜನಪ್ರಿಯತೆ ಪಡೆದಿವೆ. ಕ್ರೈಸ್ತಮತಪೂರ್ವ ಕಾಲಘಟ್ಟದಲ್ಲಿಯೇ, ಇಸ್ಲಾಂಪೂರ್ವ ಅವಧಿಯಲ್ಲಿಯೇ, ಬುದ್ಧನ ಚಿಂತನೆಗಳು ತುಂಬ ತುಂಬ ದೇಶಗಳಿಗೆ ಪ್ರಸಾರವಾದವು. ಘೋಷಿತ ಹಿಂದೂ ರಾಷ್ಟ್ರಗಳಿಗೆ ಕೊರತೆಯಿರುವುದಾದರೂ, ಘೋಷಿತ ಬೌದ್ಧ ದೇಶಗಳು ತುಂಬಾ ಇವೆ. ಅಂತಹ ದೇಶಗಳಿಗೆ ಭಾರತವೆಂದರೆ ತುಂಬ ಪ್ರೀತಿ, ಆಕರ್ಷಣೆ. ಸಿದ್ಧಾರ್ಥ ಗೌತಮನು ಹುಟ್ಟಿದ್ದು ಲುಂಬಿನಿಯಲ್ಲಿ. ಅದು ನೇಪಾಳದಲ್ಲಿದೆ. ಅವನಿಗೆ ಜ್ಞಾನೋದಯವಾದುದು ಬುದ್ಧಗಯಾದಲ್ಲಿ. ಅವನು ಬುದ್ಧನಾದನಂತರ ಮೊದಲು ಉಪದೇಶ ಮಾಡಿದ್ದು ಕಾಶಿ ಬಳಿಯ ಸಾರನಾಥದಲ್ಲಿ. ಸಾರನಾಥ, ಬುದ್ಧಗಯಾಗಳು ಉತ್ತರ ಪ್ರದೇಶ, ಬಿಹಾರಗಳ ಮಧ್ಯಭಾಗದಲ್ಲಿವೆ. ಕಾಶಿ, ಸಾರನಾಥಗಳು ಉತ್ತರಪ್ರದೇಶಕ್ಕೆ ಸೇರಿದರೆ, ಬುದ್ಧಗಯಾ – ಗಯಾಗಳು ಬಿಹಾರಕ್ಕೆ ಸೇರುತ್ತವೆ.

ಬುದ್ಧಗಯಾದಲ್ಲಿ ಅನೇಕ ದೇಶಗಳ ಬೌದ್ಧ-ನಿರ್ಮಾಣಗಳಿವೆ. ಒಂದೊಂದರ ವಿನ್ಯಾಸವೂ ವಿಶಿಷ್ಟವೇ. ಬುದ್ಧನಿಗೆ ಜ್ಞಾನೋದಯವಾದ ಈ ಬುದ್ಧಗಯಾ ಎಂದರೆ, ಆ ಎಲ್ಲ ದೇಶಗಳಿಗೂ ಎಲ್ಲಿಲ್ಲದ ಗೌರವ. ಬುದ್ಧನಿಗೆ ಜ್ಞಾನೋದಯವಾದ ಆ ವೃಕ್ಷ ಸಹ ಆಕರ್ಷಣೆಯ ಕೇಂದ್ರ. ಬುದ್ಧನ ಅನಂತರದ ಎರಡು ಶತಮಾನಗಳ ಅವಧಿಯ ನಂತರ, ಮೌರ್ಯ ಸಾಮ್ರಾಜ್ಯಾಧಿಪತಿ ಅಶೋಕನಿಗೆ (samrat ashoka) ಕಳಿಂಗ ಯುದ್ಧಾನಂತರ ವೈರಾಗ್ಯ ಬಂದಿತು. ಹಿಂಸೆ, ಯುದ್ಧ, ರಕ್ತಪಾತಗಳನ್ನು ತೊಡೆದುಹಾಕಬೇಕೆನ್ನಿಸಿತು. ಸಮ್ರಾಟ್ ಅಶೋಕನು ಬೌದ್ಧ ಮತವನ್ನು ಅನುಸರಿಸಿದುದು ಭಾರತೀಯ ಇತಿಹಾಸದ ಬಹುದೊಡ್ಡ ತಿರುವು. ಬೌದ್ಧ ಮತದೆಡೆಗಿನ ಅಶೋಕನ ಪಯಣ ಸುಲಭದ ಹಾದಿಯಾಗಿರಲಿಲ್ಲ. ಅಶೋಕನ ಕುಟುಂಬದಲ್ಲಿಯೂ ವಿರೋಧದ ಬಡಬಾಗ್ನಿಯೇ ಭುಗಿಲೆದ್ದಿತ್ತು. ಈ ಸಿಟ್ಟಿನಲ್ಲಿ ಅಶೋಕನ ಹೆಂಡತಿ ತಿಸ್ಸರಖಾ ಎನ್ನುವವಳು ಮೂಲ ಬೋಧಿವೃಕ್ಷವನ್ನು ನಾಶಪಡಿಸಿದಳು, ಎನ್ನಲಾಗುತ್ತದೆ.

ಅಶೋಕನ ಮಗಳು ಸಂಘಮಿತ್ರೆಯು, ಸಾಮಾನ್ಯಯುಗಪೂರ್ವದ 288ರಲ್ಲಿ, ಬೋಧಿವೃಕ್ಷದ ಸಸಿಯೊಂದನ್ನು ಶ್ರೀಲಂಕೆಗೆ ತೆಗೆದುಕೊಂಡು ಹೋಗಿ, ಅಲ್ಲಿನ ಅನುರಾಧಪುರದಲ್ಲಿ ನೆಟ್ಟಳು. ಈ ವೃಕ್ಷವು ಈಗಲೂ ಅಲ್ಲಿದೆ. 19ನೆಯ ಶತಮಾನದಲ್ಲಿ, ಶ್ರೀಲಂಕೆಯಿಂದಲೇ ಆ ಬೋಧಿವೃಕ್ಷದ ಸಸಿಯೊಂದನ್ನು ಭಾರತಕ್ಕೆ ತಂದು ಮತ್ತೆ ಇಲ್ಲಿ ನೆಡಲಾಯಿತೆಂದು, ಬುದ್ಧಗಯಾದಲ್ಲಿ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿಯೋ  ಏನೋ, 1988ರಲ್ಲಿ ನಾನು ಬುದ್ಧಗಯಾ ನೋಡುವಾಗ, ಬೋಧಿವೃಕ್ಷದ ಬಳಿ ನಿಂತಾಗ, ಅಪರೂಪದ ಅನುಭೂತಿ ಎನ್ನಿಸಿತು.

ಅಶೋಕನ ಸ್ತೂಪಗಳ ನಿರ್ಮಾಣದ ತಾಣಗಳು ಪ್ರಸ್ತುತ ಭಾರತವನ್ನಿರಲಿ, ಸಾಂಸ್ಕೃತಿಕ ಭಾರತದ ವ್ಯಾಪ್ತಿಯನ್ನು ಸಹ ಮೀರುತ್ತವೆ. ನೇಪಾಳ, ಗಾಂಧಾರ (ಇಂದಿನ ಆಫಘನಿಸ್ಥಾನ), ಕೊರಿಯಾ, ಭೂತಾನ, ಥಾಯ್ ಲ್ಯಾಂಡ್, ಕಾಂಬೋಡಿಯಾ, ಜಪಾನ್, ಶ್ರೀಲಂಕಾ, ಹೀಗೆ ತುಂಬಾ ದೇಶಗಳಲ್ಲಿ ಅಶೋಕನು ಸ್ತೂಪಗಳನ್ನು ನಿರ್ಮಿಸಿದ. ಅವನು ಕಟ್ಟಿಸಿದ ಸ್ತೂಪಗಳ ಸಂಖ್ಯೆ ಎಂಬತ್ನಾಲ್ಕು ಸಾವಿರ ಎನ್ನುತ್ತಾರೆ. ಎಲ್ಲೆಡೆಯ ಸ್ತೂಪಗಳಿಗೆ ಭಗವಾನ್ ಬುದ್ಧನ ಚಿತಾಭಸ್ಮವನ್ನು ಕಳುಹಿಸಲಾಯಿತು ಎನ್ನಲಾಗುತ್ತದೆ. ಭಾರತದ ಒಳಗಡೆಯೂ ಕುಶೀನಗರ, ಅಮರಾವತಿ, ಪೇಷಾವರ (ಇಂದಿನ ಪಾಕಿಸ್ತಾನದಲ್ಲಿದೆ) ಮುಂತಾದ ಅನೇಕ ಕಡೆ ಸ್ತೂಪಗಳಿವೆ. ಅಶೋಕನು ನಿರ್ಮಿಸಿದ ಸ್ತಂಭಗಳ ಸಂಖ್ಯೆಯೂ ಎಂಬತ್ನಾಲ್ಕು. ದೆಹಲಿಯಲ್ಲಿರುವ ಅಶೋಕ ಸ್ತಂಭವಂತೂ ಜಗದ್ವಿಖ್ಯಾತ.

ಪ್ರಸ್ತುತ ಸಾಂಚಿಯಲ್ಲಿರುವ ಸ್ತೂಪವು (ನಂಬರ್ ಎರಡು) ಅತ್ಯಂತ ಹಳೆಯದು. ಸಾಮಾನ್ಯಯುಗಪೂರ್ವ 3ನೆಯ ಶತಮಾನದಲ್ಲಿಯೇ ಅಶೋಕನಿಂದ ಇದು ನಿರ್ಮಾಣವಾಯಿತು. ಇದು ಮಧ್ಯಪ್ರದೇಶದಲ್ಲಿದೆ. ಇದು ವಿಶ್ವದಲ್ಲಿಯೇ ಅತ್ಯಂತ ಹಳೆಯ ಸ್ತೂಪ ಎಂಬ ಕಾರಣಕ್ಕೂ ಎಲ್ಲೆಡೆಯಿಂದ ಭಕ್ತರು, ಪ್ರವಾಸಿಗಳು ಬರುತ್ತಾರೆ. ಭಾರತ ಸರ್ಕಾರದ ಇನ್ನೂರು ರೂಪಾಯಿ ನೋಟುಗಳ ಹಿಂಬದಿಯಲ್ಲಿಯೂ ಸಾಂಚಿಯ ಈ ಸ್ತೂಪದ ಚಿತ್ರವಿದೆ. ಯುನೆಸ್ಕೊ (UNESCO) ಈ ಸಾಂಚಿಯನ್ನು ವಿಶ್ವ ಪಾರಂಪರಿಕ ಕಟ್ಟಡಗಳ ಸರಣಿಯಲ್ಲಿ ಸೇರಿಸಿದೆ. ಈ ಎಲ್ಲ ಅಂಶಗಳನ್ನು ಮೀರಿಸುವಂತಹ ಅದ್ಭುತ ಎಂದರೆ ಸಾಂಚಿಯ ಸ್ತಂಭಗಳ ಮೇಲಿನ ಕೆತ್ತನೆಗಳು ಮತ್ತು ಅವು ವಿಶದೀಕರಿಸುವ ಅಚ್ಚರಿಗಳು.

ಬುದ್ಧನು ಮೊದಲ ಬಾರಿಗೆ ವೈಶಾಲಿಗೆ ಭೇಟಿ ನೀಡಿದಾಗ (ಇಂದಿನ ಬಿಹಾರ ರಾಜ್ಯದ ವ್ಯಾಪ್ತಿಗೆ ಬರುತ್ತದೆ) ಜನ ಮುಗಿಬೀಳುತ್ತಾರೆ. ಬುದ್ಧನಿಗೆ ಅನೇಕ ಕಾಣಿಕೆಗಳನ್ನು, ಆಹಾರವನ್ನು ಅರ್ಪಿಸಲು ಸಾಲುಗಟ್ಟುತ್ತಾರೆ. ಬರೀ ಜನರು ಮಾತ್ರವಲ್ಲ, ಒಂದು ಕೋತಿಯೂ ಕಾಯುತ್ತಿರುತ್ತದೆ. ಅದು ಬುದ್ಧ ಭಗವಾನನಿಗೆ ಜೇನುತುಪ್ಪ ತಂದಿದೆ. ಅದು ಜೇನುತುಪ್ಪ ಎನ್ನುವುದು ನಮಗೆ ನೋಡುವವರಿಗೆ ತಿಳಿಯುವುದಾದರೂ ಹೇಗೆ? ಮಧುಪಾತ್ರೆಯ ಮೇಲೊಂದು ನೊಣವನ್ನೂ ಶಿಲ್ಪಿಯು ಕೆತ್ತಿದ್ದಾನೆ. ಭಾರತೀಯ ಶಿಲ್ಪಿಗಳ ಇಂತಹ ಪ್ರಸ್ತುತಿಗಳೇ ಅದ್ಬುತ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ | ಭಾರತೀಯ ಇತಿಹಾಸದ ಧ್ರುವನಕ್ಷತ್ರ ಅಹಲ್ಯಾಬಾಯಿ ಹೋಳ್ಕರ್

ಹೆಣ್ಣುಮಕ್ಕಳು ಕ್ರಿಕೆಟ್ ಆಡಿದರೆ, ಕುಸ್ತಿಯಲ್ಲಿ ಗೆದ್ದರೆ, ಪ್ರತಿಭಾ ಸ್ಪರ್ಧೆಗಳಲ್ಲಿ ಉನ್ನತ ಸ್ಥಾನ ಗಳಿಸಿದರೆ ನಾವೆಲ್ಲಾ ಸಂಭ್ರಮಿಸುತ್ತೇವೆ. ಬ್ರಿಟಿಷ್ ವಸಾಹತೋತ್ತರ ಒಂದೆರಡು ಶತಮಾನಗಳ ಈಚಿನ ವಿದ್ಯಮಾನಗಳನ್ನು ಮಾತ್ರ ಗಮನಿಸುವ ನಮಗೆ ಇವೆಲ್ಲವೂ ಅದ್ಭುತವೇ! ರಣಚಂಡಿಯಂತಹ ಕನ್ನಡ ನಾಡಿನ ಬೆಳವಡಿ ಮಲ್ಲಮ್ಮ, 17ನೆಯ ಶತಮಾನದಲ್ಲಿ ಹೆಣ್ಣು ಮಕ್ಕಳ ಪ್ರತ್ಯೇಕ ಸೈನ್ಯವನ್ನೇ ಕಟ್ಟಿದ್ದಳು. ಅದು ವಿಶ್ವದ ಮೊದಲ ಮಹಿಳಾ ಸೇನೆ, ಎಂದರೆ ಅಚ್ಚರಿಯಾಗುತ್ತದೆ. ಅಂತೆಯೇ ಸಾಂಚಿ ಕೂಡ ಅಚ್ಚರಿಗಳ ಆಗರ. ಆನೆಗಳನ್ನು ಸಾಕುವ, ಪಳಗಿಸುವ, ತರಬೇತಿ ನೀಡುವ, ಚಾಲನೆ ಮಾಡುವ “ಮಾವುತ” ನಮಗೆ ಗೊತ್ತು. ಸಾಮಾನ್ಯಯುಗಪೂರ್ವ 3ನೆಯ ಶತಮಾನಕ್ಕಿಂತ ಮೊದಲೇ ಹೆಣ್ಣುಮಕ್ಕಳು ಈ ಎಲ್ಲ ವಿದ್ಯೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದರಿಂದಲೇ, ಇಲ್ಲಿನ ಶಿಲ್ಪಗಳಲ್ಲಿ “ಮಾವುತಿ”ಯರಿದ್ದಾರೆ. ಯಾವ ಕಾಲಘಟ್ಟದಲ್ಲಿ ಈ ಬಗೆಯ ತರಬೇತಿ ಸಾಧನೆಗಳ ಪರಿಕಲ್ಪನೆಗಳು ಮೈದಳೆದವೋ ಕಲ್ಪಿಸಿಕೊಂಡರೆ ರೋಮಾಂಚನವಾಗುತ್ತದೆ. ಅಶೋಕನ ಅವಧಿಯ ಈ ಸ್ತಂಭಗಳಲ್ಲಿರುವ ಉಬ್ಬುಶಿಲ್ಪಗಳು ಈ ಅದ್ಭುತಕ್ಕೆ ಪುರಾವೆಗಳಾಗಿವೆ. “ಮಾವುತಿ” ಸೂಕ್ತವಾದ ಪದವೋ ಅಲ್ಲವೋ ತಿಳಿಯದು. ಪ್ರಾಚೀನ ಶಾಸ್ತ್ರಗ್ರಂಥಗಳ ತಜ್ಞರೇ ಇದನ್ನು ನಿಷ್ಕರ್ಷಿಸಬೇಕು. ವಿಶೇಷವೆಂದರೆ, ಬರೀ ಆನೆಗಳನ್ನಷ್ಟೇ ಅಲ್ಲ, ಕುದುರೆ, ಹೋರಿ, ಒಂಟೆಗಳನ್ನೂ ಚಾಲನೆ ಮಾಡುವ ಸ್ತ್ರೀಯರನ್ನು ಇಲ್ಲಿ ನೋಡಬಹುದು. ಸ್ತ್ರೀ ಸಮಾನತೆಯ ಹರಿಕಾರರನ್ನು – ವಕ್ತಾರರನ್ನು ಬರೀ ಮಾಧ್ಯಮಗಳಲ್ಲಿ ನಾವು ನೋಡುತ್ತಿರುತ್ತೇವೆ. ಸಾಂಚಿಯಲ್ಲಿನ ಶಿಲ್ಪಗಳಲ್ಲಿ ಪುರುಷರಿಗೆ ಸಮಸಮವಾಗಿ ಈ ಎಲ್ಲ ಆನೆ, ಕುದುರೆ, ಹೋರಿ, ಒಂಟೆಗಳನ್ನು ಸವಾರಿ ಮಾಡುತ್ತಿರುವ ಸ್ತ್ರೀಯರನ್ನು ನೋಡಬಹುದು. ಒಂದುಕಡೆ ಪುರುಷರನ್ನೂ, ಇನ್ನೊಂದೆಡೆ ಸ್ತ್ರೀಯರನ್ನೂ ಇಲ್ಲಿ ಜೊತೆಜೊತೆಯಾಗಿಯೇ ಕೆತ್ತಿದ್ದಾರೆ. ಭಾರತದಲ್ಲಿನ ಸ್ತ್ರೀಪುರುಷ ಸಮಾನತೆಯ ಇತಿಹಾಸಕ್ಕೆ ಅನೇಕ ಸಹಸ್ರ ವರ್ಷಗಳ ಪರಂಪರೆಯಿದೆ. ಹೆಣ್ಣುಮಕ್ಕಳ ದೈಹಿಕ ವೈಶಿಷ್ಟ್ಯ – ಮಾಸಿಕ ಮಿತಿಯ ಪರಿಪ್ರೇಕ್ಷ್ಯದಲ್ಲಿ ಬೆಳವಡಿಯ ಮಹಿಳಾ ಸೈನಿಕರಾಗಲೀ, ಸಾಂಚಿಯಲ್ಲಿನ ಮಾವುತಿಯರಾಗಲೀ ಅಪಾರ ವಿಸ್ಮಯಕ್ಕೆ ಕಾರಣರಾಗುತ್ತಾರೆ.

ಭಾರತವೇ (ancient india) ಹಾಗೆ. ಅದ್ಭುತಗಳ, ವಿಸ್ಮಯಗಳ ನಾಡು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ: ಒಂದೆಡೆ ಭೂಮಿಯ ಕೇಂದ್ರ ಮಹಾಕಾಲ, ಇನ್ನೊಂದೆಡೆ ಕಾಲಭೈರವನಿಗೆ ಮದ್ಯಾರ್ಪಣೆ: ಸೋಜಿಗದ ಉಜ್ಜಯಿನಿ 

Exit mobile version