ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್ ಅಮೆರಿಕದಲ್ಲಿ ಹುಟ್ಟಿದ ಕಂಪನಿಯಾದರೂ, ಅದಕ್ಕೆ ಇವತ್ತು ಅತಿ ಹೆಚ್ಚು ಬಳಕೆದಾರರು ಇರುವುದು (Sandhya Devanathan) ಅಮೆರಿಕದಲ್ಲಿ ಅಲ್ಲ, ಬದಲಿಗೆ ಭಾರತದಲ್ಲಿ!
ಮಾರ್ಕ್ ಜುಕರ್ ಬರ್ಗ್ ಸ್ಥಾಪಿಸಿದ ಫೇಸ್‌ಬುಕ್‌ನ ಮಾತೃ ಸಂಸ್ಥೆ ಮೆಟಾ. ಅದು ತನ್ನ ಭಾರತೀಯ ಘಟಕವಾದ ಮೆಟಾ ಇಂಡಿಯಾದ (Meta) ನೂತನ ಮುಖ್ಯಸ್ಥರನ್ನಾಗಿ ಸಂಧ್ಯಾ ದೇವನಾಥನ್ ಅವರನ್ನು ನೇಮಿಸಿದೆ. ಅಜಿತ್ ಮೋಹನ್ ರಾಜೀನಾಮೆ ಸಲ್ಲಿಸಿದ ಕೆಲ ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ. ೨೦೨೩ರ ಜನವರಿ 1ರಿಂದ ಹೊಸ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. ಮೆಟಾ ಎಪಿಎಸಿಯ ಉಪಾಧ್ಯಕ್ಷ ಡಾನ್ ನಿಯರ್ ಅವರಿಗೆ ರಿಪೋರ್ಟ್ ಮಾಡಲಿದ್ದಾರೆ. ಗುರುಗ್ರಾಮದಲ್ಲಿ ಪ್ರಧಾನ ಕಚೇರಿ ಹೊಂದಿರುವ ಮೆಟಾ ಇಂಡಿಯಾದಲ್ಲಿ 11,000 ಉದ್ಯೋಗಿಗಳಿದ್ದಾರೆ. ಅಂದರೆ ಒಟ್ಟು ಸಿಬ್ಬಂದಿ ಬಲದ 13%. ಮೆಟಾ ಕಂಪನಿಯು ಫೇಸ್‌ಬುಕ್, ವಾಟ್ಸ್ ಆ್ಯಪ್ ಮತ್ತು ಇನ್‌ಸ್ಟಾಗ್ರಾಮ್ ಮಾಲಿಕತ್ವವನ್ನು ಹೊಂದಿದೆ.
೪೬ ವರ್ಷ ವಯಸ್ಸಿನ ಸಂಧ್ಯಾ ದೇವನಾಥನ್ ಅವರು ಬ್ಯಾಂಕಿಂಗ್, ಪೇಮೆಂಟ್ ಟೆಕ್ನಾಲಜಿಯಲ್ಲಿ 22 ವರ್ಷಗಳ ಸುದೀರ್ಘ ವೃತ್ತಿಪರ ಅನುಭವ ಗಳಿಸಿದ್ದಾರೆ. ದಿಲ್ಲಿ ವಿವಿಯಲ್ಲಿ ಎಂಬಿಎಯನ್ನು 2000ರಲ್ಲಿ ಪೂರ್ಣಗೊಳಿಸಿದ್ದರು.
ಸಂಧ್ಯಾ ದೇವನಾಥನ್ 2016ರಲ್ಲಿ ಮೆಟಾವನ್ನು ಸೇರಿದ್ದರು. ಕಂಪನಿಯ ಸಿಂಗಾಪುರ ಮತ್ತು ವಿಯೆಟ್ನಾಂ ವಿಭಾಗದ ಬಿಸಿನೆಸ್ ಅನ್ನು ಅಭಿವೃದ್ಧಿಪಡಿಸಿದ್ದರು. 2020ರಲ್ಲಿ ಕಂಪನಿಯ ಗೇಮಿಂಗ್ ಉಪಕ್ರಮಗಳ ನೇತೃತ್ವ ವಹಿಸಿದ್ದರು. ಮೆಟಾ ಇಂಡಿಯಾದ ಮುಖ್ಯಸ್ಥ ಅಜಿತ್ ಮೋಹನ್ ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಅವರು ಸೋಶಿಯಲ್ ನೆಟ್ ವರ್ಕಿಂಗ್ ಕಂಪನಿ ಸ್ನಾಪ್ ಅನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಈ ಎಲ್ಲ ಹಿನ್ನೆಲೆಯಲ್ಲಿ ಮೆಟಾ ಇಂಡಿಯಾದ ನೂತನ ಸಾರಥಿ ಸಂಧ್ಯಾ ದೇವನಾಥನ್ ಎಂದರೆ ಯಾರು? ಅವರ ಹಿನ್ನೆಲೆ ಏನು? ಎಂಬಿತ್ಯಾದಿ ಪ್ರಶ್ನೆಗಳು ಈಗ ಚರ್ಚೆಗೀಡಾಗಿವೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿನ ಆಂಧ್ರ ಯುನಿವರ್ಸಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಹಳೆ ವಿದ್ಯಾರ್ಥಿ ಸಂಧ್ಯಾ ದೇವನಾಥನ್. 1994-1998ರಲ್ಲಿ ಅಲ್ಲಿ ಕೆಮಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು. ಬಳಿಕ ದಿಲ್ಲಿ ವಿವಿಯಲ್ಲಿ 1998-2000ರಲ್ಲಿ ಎಂಬಿಎ ಪದವಿ ಗಳಿಸಿದರು. 2014ರಲ್ಲಿ ಆಕ್ಸ್‌ಫರ್ಡ್ ವಿವಿಯಲ್ಲಿ ನಾಯಕತ್ವ ಕುರಿತ ಕೋರ್ಸ್ ಪೂರ್ಣಗೊಳಿಸಿದ್ದರು. ಅವರ ಪತಿ ಅಮಿತ್ ರಾಯ್ ಉದ್ಯಮಿ. ಮೆಟಾ ಕಂಪನಿಯನ್ನು ಸೇರುವುದಕ್ಕೆ ಮುನ್ನ ಸಿಟಿ ಬ್ಯಾಂಕ್ ಮತ್ತು ಸ್ಟಾಂಡರ್ಡ್ ಚಾರ್ಟರ್ಡ್‌ನಲ್ಲಿ ಉದ್ಯೋಗಿಯಾಗಿದ್ದರು. 2000ದ ಮೇಯಿಂದ 2009ರ ಡಿಸೆಂಬರ್ ತನಕ ಸಿಟಿ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿದ್ದರು. 2009-15ರಲ್ಲಿ ಸ್ಟ್ಯಾಂಡರ್ಡ್ ಚಾರ್ಟರ್ಡ್‌ನಲ್ಲಿ ಉದ್ಯೋಗಿಯಾಗಿದ್ದರು. ಈ ಹಿಂದೆ ನಾನಾ ಸಂಸ್ಥೆಗಳಲ್ಲಿ ಮಂಡಳಿಗಳಲ್ಲಿ ಸಕ್ರಿಯರಾಗಿದ್ದರು. ವಿಮೆನ್ಸ್ ಫೋರಮ್ ಫಾರ್ ದಿ ಎಕಾನಮಿ ಆಂಡ್ ಸೊಸೈಟಿ, ದಿ ನ್ಯಾಶನಲ್ ಲೈಬ್ರೆರಿ ಬೋರ್ಡ್ ಆಫ್ ಸಿಂಗಾಪುರ್, ದಿ ನ್ಯಾಶನಲ್ ಫೈನಾನ್ಸಿಯಲ್ ಸರ್ವೀಸ್ ಆಫ್ ಸಿಂಗಾಪುರ್, ಪೆಪ್ಪರ್ ಫೈನಾನ್ಷಿಯಲ್ ಸರ್ವೀಸ್ ಗ್ರೂಪ್, ಸಿಂಗಾಪುರ್ ಮ್ಯಾನೇಜ್‌ಮೆಂಟ್ ಯುನಿವರ್ಸಿಟಿಯಲ್ಲಿ ಸೇವೆ ಸಲ್ಲಿಸಿದ್ದರು. ಸಿಂಗಾಪುರದ ವಾರ್ತಾ ಮತ್ತು ಸಂಪರ್ಕ ಸಚಿವಾಲಯದಲ್ಲೂ ದುಡಿದಿದ್ದರು.
ಸಂಧ್ಯಾ ದೇವನಾಥನ್ ಅವರು ಬಿಸಿನೆಸ್ ವಿಸ್ತರಿಸುವುದರಲ್ಲಿ ನಿಸ್ಸೀಮರು. ಸಂಘಟನೆಯ ಕೌಶಲದಲ್ಲೂ ಸಿದ್ಧಹಸ್ತರು. ಪ್ರಾಡಕ್ಟ್ ಇನ್ನೋವೇಶನ್ ಮತ್ತು ಪ್ರಬಲ ಪಾಲುದಾರಿಕೆಯನ್ನು ಏರ್ಪಡಿಸುವುದರಲ್ಲಿ ಪರಿಣತಿ ಗಳಿಸಿದವರು ಎಂದು ಕಂಪನಿಯ ಬಿಸಿನೆಸ್ ಅಧಿಕಾರಿ ಮರೆನ್ ಲೆವಿನ್ ತಿಳಿಸಿದ್ದಾರೆ.
ಹೊಸ ಹುದ್ದೆಯಲ್ಲಿ ಸಂಧ್ಯಾ ಅವರ ಪಾತ್ರವೇನು?
ಸಂಧ್ಯಾ ದೇವನಾಥನ್ ಅವರು ಮೆಟಾ ಇಂಡಿಯಾದ ಒಟ್ಟಾರೆ ಮೇಲುಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ. ಪ್ರಮುಖ ಬ್ರಾಂಡ್‌ಗಳು, ಜಾಹೀರಾತುದಾರರು, ಪಾಲುದಾರರ ಜತೆಗೆ ವ್ಯೂಹಾತ್ಮಕ ಒಪ್ಪಂದಗಳನ್ನು ಬಲಪಡಿಸಲಿದ್ದಾರೆ. ಭಾರತದಲ್ಲಿ ಮೆಟಾದ ಆದಾಯ ವೃದ್ಧಿಸಲು ಅಗತ್ಯವಿರುವ ಕಾರ್ಯತಂತ್ರಗಳನ್ನು ಹೆಣೆಯಲಿದ್ದಾರೆ. ಭಾರತದಲ್ಲಿ ಮೆಟಾದ ದೀರ್ಘಕಾಲೀನ ಬಿಸಿನೆಸ್ ಕಾರ್ಯತಂತ್ರ ಮತ್ತು ಬದ್ಧತೆಯನ್ನು ಅವರು ಸಾಬೀತುಪಡಿಸಬೇಕಾಗಿದೆ.
ಬ್ಯಾಂಕಿಂಗ್ ಮತ್ತು ತಂತ್ರಜ್ಞಾನದ ಕೌಶಲ
ಸಂಧ್ಯಾ ದೇವನಾಥನ್ ಅವರು ಮೆಟಾದಲ್ಲಿ ಏಷ್ಯ ಪೆಸಿಪಿಕ್ ವಿಭಾಗದಲ್ಲಿ ಗೇಮಿಂಗ್ ಸೆಕ್ಷನ್‌ನ ಉಪಾಧ್ಯಕ್ಷರಾಗಿದ್ದರು. ತಂತ್ರಜ್ಞಾನ ಕ್ಷೇತ್ರದಲ್ಲಿನ ಅಗಾಧ ಪರಿಣತಿ ಅವರನ್ನು ಆ ಸ್ಥಾನಕ್ಕೆ ಕರೆದೊಯ್ದಿತ್ತು. ಅದಕ್ಕೂ ಮುನ್ನ ಬ್ಯಾಂಕಿಂಗ್ ಕ್ಷೇತ್ರದ ದುಡಿಮೆಯ ಅನುಭವವೂ ಅವರನ್ನು ಗಟ್ಟಿಗೊಳಿಸಿತ್ತು. ಬದಲಾವಣೆಗೆ ಕ್ಷಿಪ್ರವಾಗಿ ಹೊಂದಿಕೊಳ್ಳುವುದು ಅವರ ಸ್ವಭಾವ. 15 ವರ್ಷಗಳ ಕಾಲ ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಮೆಟಾದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದರು.
ಇದನ್ನೂ ಓದಿ | ವಾರದ ವ್ಯಕ್ತಿಚಿತ್ರ | ಧೈರ್ಯ, ಹುಂಬತನ, ಹುಮ್ಮಸ್ಸು, ಇದೇ ಎಲಾನ್ ಮಸ್ಕ್ ವರ್ಚಸ್ಸು
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇದ್ದಾಗ ಫಿನ್ ಟೆಕ್ ಬಗ್ಗೆ ತಿಳಿದುಕೊಂಡಿದ್ದರು. ಆದರೆ ಮೆಟಾಗೆ ಬಂದ ಬಳಿಕ ಡಿಜಿಟಲ್ ಗ್ರಾಹಕರ ತಂತ್ರಜ್ಞಾನ ಅಭ್ಯುದಯದ ಬಗ್ಗೆ ತಿಳಿದುಕೊಂಡಿದ್ದರು. ಸಾಂಪ್ರದಾಯಿಕ ಕಂಪನಿಗಳ ಬದಲು ತೀರ ಭಿನ್ನವಾಗಿ ನಡೆಯುವ ಕಂಪನಿಯನ್ನು ನಡೆಸುವುದು ಹೇಗೆ ಎಂಬುದನ್ನು ಕ್ಷಿಪ್ರವಾಗಿ ಕಲಿತುಕೊಂಡಿದ್ದರು ಸಂಧ್ಯಾ ದೇವನಾಥನ್.
ಕೋವಿಡ್ ಬಿಕ್ಕಟ್ಟಿನ ಬಳಿಕ ಜಗತ್ತು ಆಮೂಲಾಗ್ರವಾಗಿ ಬದಲಾಗಿದೆ. ಸಂಪರ್ಕ ಮತ್ತು ಸಂವಹನ ಈಗ ಹಿಂದೆಂದಿಗಿಂತ ಹೆಚ್ಚು ಮಹತ್ವ ಗಳಿಸಿದೆ. ಸಾಫ್ಟ್ ಸ್ಕಿಲ್‌ಗಳು ಅತ್ಯಂತ ಅವಶ್ಯಕ. ಈಗಿನ ಅನಿಶ್ಚಿತ ಕಾರ್ಪೊರೇಟ್ ಜಗತ್ತಿನಲ್ಲಿ ಅದನ್ನು ನಿರ್ವಹಿಸಲು ಕಲಿಯುವುದು ಅವಶ್ಯಕ. ಆರ್ಥಿಕತೆ ಅಥವಾ ಉದ್ದಿಮೆಯ ಕುಸಿತವನ್ನು ಎದುರಿಸುವುದು ನಿರ್ಣಾಯಕ ಎನ್ನುತ್ತಾರೆ ಅವರು.
ಮೆಟಾ ಕಂಪನಿ ತನ್ನ ವೆಚ್ಚ ಕಡಿತದ ಭಾಗವಾಗಿ ಇತ್ತೀಚೆಗೆ 11,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ ತಿಳಿಸಿತ್ತು. ವಾಟ್ಸ್ ಆ್ಯಪ್ ಮತ್ತು ಮೆಸೆಂಜರ್ ವಿಭಾಗದಲ್ಲಿ ಆದಾಯ ಗಳಿಸಲು ಕಂಪನಿ ಕಾರ್ಯಪ್ರವೃತ್ತವಾಗಿದೆ. ಸಿಇಒ ಜುಕರ್ ಬರ್ಗ್ ಅವರು ಕಂಪನಿಗೆ ಹೊಸ ಕಾಯಕಲ್ಪ ನೀಡಲು ಲಕ್ಷಾಂತರ ಡಾಲರ್ ಹೂಡಿಕೆ ಮಾಡುತ್ತಿದ್ದಾರೆ. ವಾಟ್ಸ್ ಆ್ಯಪ್ ಮತ್ತು ಮೆಸೆಂಜರ್ ಬಹುಶಃ ನಮ್ಮ ಆದಾಯದ ಪ್ರಮುಖ ಮೂಲವಾಗುವ ಸಾಧ್ಯತೆ ಇದೆ ಎಂದೂ ಇತ್ತೀಚೆಗೆ ಹೇಳಿದ್ದರು. ಇಂಥ ಸಂಕ್ರಮಣದ ಸಂದರ್ಭದಲ್ಲಿ ಸಂಧ್ಯಾ ದೇವನಾಥನ್ ಅವರು ಮೆಟಾ ಇಂಡಿಯಾದ ಮುಖ್ಯಸ್ಥರಾಗಿರುವುದು ಗಮನಾರ್ಹ.
ಇದನ್ನೂ ಓದಿ | ವಾರದ ವ್ಯಕ್ತಿಚಿತ್ರ | ಮತ್ತೆ ಪ್ರಧಾನಿ ಹುದ್ದೆಗೆ ಮರಳಿದ ಇಸ್ರೇಲಿಗಳ ಪ್ರೀತಿಯ ‘ಬೀಬಿ’ ಬೆಂಜಮಿನ್ ನೆತನ್ಯಾಹು!