“ಭಯೋತ್ಪಾದನೆಯನ್ನು ನಾವು ಸಹಿಸುವುದು ಅಸಾಧ್ಯ, ಅದನ್ನು ತೊಲಗಿಸಬೇಕು, ನಮ್ಮದು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆ, ಭಾರತವನ್ನು ಭಯೋತ್ಪಾದಕರು ಕಬಳಿಸಲು ಬಿಡುವುದಿಲ್ಲ, ಕಾನೂನಿನ ಪ್ರಕಾರ ಭಯೋತ್ಪಾದಕರಿಗೆ ಶಿಕ್ಷೆ ಆಗುತ್ತದೆ…” ಇಂತಹ ಅನೇಕ ಮಾತುಗಳನ್ನು ಕೇಳುತ್ತಲೇ ಇರುತ್ತೇವೆ.
ಇದು ಸ್ವಾತಂತ್ರ್ಯಾನಂತರದ 75 ವರ್ಷಗಳಿಂದಲೂ ಕೇಳಿಕೊಂಡೇ ಬಂದಿರುವ ಮಾತುಗಳು. ಆಗಿಂದಾಗ್ಗೆ ಭಯೋತ್ಪಾದನಾ ದಾಳಿಗಳು ಆಗುತ್ತಲೇ ಸಾಗುತ್ತವೆ. ಇದೀಗ ನವೆಂಬರ್ 19ರಂದು ಮಂಗಳೂರಿನ ನಾಗುರಿ ಪ್ರದೇಶದಲ್ಲಿ ಅಚಾನಕ್ಕಾಗಿ ಕುಕ್ಕರ್ ಬಾಂಬ್ ಸ್ಫೋಟವಾಗಿದೆ. ಆಟೋದಲ್ಲಿ ತೆರಳುತ್ತಿರುವಾಗ ಸ್ಫೋಟವಾಗಿದೆ. ಆಟೊ ಚಾಲಕನಿಗೆ ಗಾಯಗಳಾಗಿವೆ, ಅವರು ಸುಧಾರಿಸಿಕೊಳ್ಳುತ್ತಿರುವುದು ಸುದೈವ. ಬಹುಶಃ ಈ ಬಾಂಬ್ ಅನ್ನು ಯಾವುದೋ ಜನಜಂಗುಳಿಯ ಪ್ರದೇಶದಲ್ಲಿ ಸ್ಫೋಟಿಸಲು ಶಂಕಿತ ಉಗ್ರ ಒಯ್ಯುತ್ತಿದ್ದ ಹಾಗೂ ಆತ ಸೂಸೈಡ್ ಬಾಂಬರ್ ಆಗಿದ್ದ ಎಂಬ ಮಾಹಿತಿಗಳು ಸದ್ಯದ ಮಟ್ಟಿಗೆ ಲಭಿಸುತ್ತಿವೆ. ಅದರ ಪರಿಣಾಮವನ್ನು ಕಲ್ಪಿಸಿಕೊಳ್ಳಲೂ ಮನಸ್ಸು ಒಪ್ಪುವುದಿಲ್ಲ.
ಇದೀಗ ಈ ಪ್ರಕರಣದ ಕುರಿತೂ ವಿಚಾರಣೆ ನಡೆಯುತ್ತಿದೆ. ಈ ಬಾಂಗ್ ಸ್ಫೋಟಿಸಲು ಕುಕ್ಕರ್ ಎಲ್ಲಿಂದ ತಂದ? ಡೆಟೊನೇಟರ್ ಎಲ್ಲಿ ಸಿಕ್ಕಿತು? ಟೈಮರ್ ಎಲ್ಲಿಂದ ಖರೀದಿಸಿದ? ಇದರ ತರಬೇತಿ ಯಾರು ನೀಡಿದರು? ಎಂಬೆಲ್ಲ ಚರ್ಚೆಗಳು ನಡೆಯುತ್ತಿವೆ. ಆದರೆ ಮೂಲ ಪ್ರಶ್ನೆಗೆ ಹೋಗುವ ಸಾಹಸವನ್ನು ನಾವು ಮಾಡುವುದೇ ಇಲ್ಲ.
ಈ ರೀತಿ ಸ್ಫೋಟ ಮಾಡಬೇಕು ಎಂದು ಆ ಯುವಕನಿಗೆ ಅನಿಸಿದ್ದು ಯಾಕಾಗಿ? ಅವನಿಗೇನು ಇದರಿಂದ ಹಣ ಸಿಗುವ ಆಸೆಯೇ? ಆಸ್ತಿಯ ಆಮಿಷವೇ? ಶೋಕಿಯೇ? ಈ ಪ್ರಶ್ನೆಗೆ ಖಾರವಾದ ಉತ್ತರವನ್ನು ಈಗಾಗಲೆ ಅನೇಕರು ನೀಡಿದ್ದಾರೆ. ಮುಖ್ಯವಾಗಿ ವಾಯ್ಸ್ ಆಫ್ ಇಂಡಿಯಾ ಸರಣಿಯ ಮೂಲಕ ಮುಸ್ಲಿಂ ಮಾನಸಿಕತೆಯ ಕುರಿತು ಹೊಸ ಮಾಹಿತಿಗಳನ್ನು ಹೊರಹಾಕಿದ ಸೀತಾರಾಮ್ ಗೋಯೆಲ್ ಅವರು ʼಮುಸ್ಲಿಂ ಸೆಪರೇಟಿಸಂʼ (ಕನ್ನಡ ಅನುವಾದ: ಎಚ್. ಮಂಜುನಾಥ ಭಟ್, ಪ್ರಕಾಶನ: ಸಾಹಿತ್ಯ ಸಿಂಧೂ ಪ್ರಕಾಶನ) ಕೃತಿಯಲ್ಲಿ ವಿವರಿಸಿದ್ದಾರೆ.
ಸಾಮಾನ್ಯವಾಗಿ ಮುಸ್ಲಿಂ ಪ್ರತ್ಯೇಕತಾವಾದದ ಕುರಿತು ಹೇಳುವ ಒಂದು ಮಾತಿದೆ. ಬ್ರಿಟಿಷರು ಆಗಮಿಸುವ ಮುನ್ನ ಭಾರತದಲ್ಲಿ ಹಿಂದು-ಮುಸ್ಲಿಂ ಅನ್ಯೋನ್ಯವಾಗಿದ್ದರು. ಬ್ರಿಟಿಷರು ಇಲ್ಲಿ ಆಳುವ ಸಲುವಾಗಿ ಹಿಂದು-ಮುಸ್ಲಿಮರ ನಡುವೆ ಒಡೆದು ಆಳುವ ನೀತಿಯನ್ನು ಅನುಸರಿಸಿದರು. ಅದು ಬಿಟ್ಟರೆ ಮುಸ್ಲಿಮರಲ್ಲಿ ಪ್ರತ್ಯೇಕತಾ ಭಾವ ಇರಲಿಲ್ಲ ಎನ್ನುತ್ತಾರೆ. ಆದರೆ ಸೀತಾರಮ ಗೋಯೆಲ್ ಅವರು ಈ ವಾದವನ್ನು ಸಂಪೂರ್ಣ ನಿರಾಕರಣೆ ಮಾಡುತ್ತಾರೆ. ಮುಸ್ಲಿಮರ ಮೂಲ ಮನಸ್ಥಿತಿಯೆ ಪ್ರತ್ಯೇಕತೆ, ಇಸ್ಲಾಂಗೆ ಬ್ರಿಟಿಷರು ಸಮಸ್ಯೆ ಅಲ್ಲ ಎಂದು ಹೇಳುತ್ತಾರೆ. ಅಸಹಿಷ್ಣುತೆ ಎನ್ನುವುದು ಹೊರಗಿನಿಂದ ಬರಬೇಕಿಲ್ಲ, ಮುಸ್ಲಿಮರೊಳಗೇ ಇದೆ ಎಂದು ವಾದಿಸುತ್ತಾರೆ. ಸೀತಾರಾಮ್ ಗೋಯೆಲ್ ಅವರು ತಮ್ಮ ಸರಣಿ ಪುಸ್ತಕಗಳಲ್ಲಿ ಎಲ್ಲಿಯೂ ಕಪೋಲಕಲ್ಪಿತ ಮಾಹಿತಿ ನೀಡಿಲ್ಲ. ಅವೆಲ್ಲದಕ್ಕೂ ಪುರಾವೆಗಳನ್ನು ಇಟ್ಟಿದ್ದಾರೆ.
ಮುಸ್ಲಿಂ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಬೇಕು ಎಂದು ದೊಡ್ಡ ಪ್ರಯತ್ನ ಮಾಡಿದವರು ಮಹಾತ್ಮಾ ಗಾಂಧೀಜಿ. ಮುಸ್ಲಿಮರು ಸ್ವಾತಂತ್ರ್ಯ ಹೋರಾಟಕ್ಕೆ ಜತೆಯಾಗದೇ ಹೋದರೆ ಭಾರತಕ್ಕೆ ಸ್ವಾತಂತ್ರ್ಯ ಸಿಗುವುದು ತಡವಾಗುತ್ತದೆ ಎನ್ನುವುದರ ಜತೆಗೆ ಆ ಸ್ವಾತಂತ್ರ್ಯ ಅಪೂರ್ಣವಾಗುತ್ತದೆ ಎನ್ನುವುದು ಗಾಂಧೀಜಿಯವರ ವಾದವಾಗಿತ್ತು. ಹಾಗಾಗಿ ಮುಸ್ಲಿಮರು ಸ್ವಾತಂತ್ರ್ಯ ಹೋರಾಟಕ್ಕೆ ಜತೆಯಾಗುವುದಾದರೆ ನಾವು ಅವರ ಖಿಲಾಫತ್ ಚಳವಳಿಗೆ ಬೆಂಬಲ ನೀಡುತ್ತೇವೆ ಎಂದರು. ಅದರಂತೆ ಖಿಲಾಫತ್ ಚಳವಳಿಗೆ ಕಾಂಗ್ರೆಸ್ ಬೆಂಬಲವನ್ನೂ ನೀಡಿತು. ಆದರೆ ಅದರ ಪರಿಣಾಮ ಏನೂ ಆಶಾದಾಯಕವಾಗಿರಲಿಲ್ಲ. ಕೇರಳದಲ್ಲಿ ಮಾಪಿಳ್ಳೆಗಳು ಹಿಂದುಗಳನ್ನೇ ಕೊಂದರು ಎಂಬುದು ಇತಿಹಾಸ.
ನಂತರವೂ ಗಾಂಧೀಜಿ ಮುಸ್ಲಿಂ ಸಮುದಾಯವನ್ನು ಬಿಟ್ಟುಕೊಡಲಿಲ್ಲ. ಮುಸ್ಲಿಂ ನಾಯಕರನ್ನು ಪೋಷಣೆ ಮಾಡುತ್ತಲೇ ಹೋದರು. ಈ ಪೋಷಣೆಯು ಅತಿಯಾಗಿ ತುಷ್ಟೀಕರಣವೂ ಆಯಿತು. ಅದರಿಂದಾಗಿ ಅಂತಿಮವಾಗಿ ಪ್ರತ್ಯೇಕ ದೇಶ ಉದಯವಾಯಿತು, ಭಾರತ ವಿಭಜನೆ ಆಯಿತು. ಈ ಸಂದರ್ಭದಲ್ಲಿಯೂ ಗಾಂಧೀಜಿ ಮನಸ್ಸು ಬದಲಾಗಲಿಲ್ಲ. ಮುಸ್ಲಿಮರಿಗೆ ಪ್ರತ್ಯೇಕ ದೇಶ ನೀಡಿದ ಮೇಲೆ ಜನಸಂಖ್ಯೆಯ ಸ್ಥಳಾಂತರ ಆಗಲಿ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದರು. ಭಾರತದಲ್ಲಿರುವ ಮುಸ್ಲಿಮರೆಲ್ಲರೂ ಪಾಕಿಸ್ತಾನಕ್ಕೆ ಹೋಗಲಿ, ಪಾಕಿಸ್ತಾನದಲ್ಲಿರುವ ಹಿಂದುಗಳೆಲ್ಲ ಭಾರತಕ್ಕೆ ಬರಲಿ ಎಂದರು. ಆದರೆ ಅದಕ್ಕೂ ಗಾಂಧೀಜಿ ಒಪ್ಪಲಿಲ್ಲ. ಒಟ್ಟಿನಲ್ಲಿ ಮುಸ್ಲಿಂ ಸಮುದಾಯವನ್ನು ಭಾರತದಿಂದ ಪ್ರತ್ಯೇಕವಾಗಿ ನೋಡಲು ಗಾಂಧೀಜಿ ಎಂದೂ ಬಯಸಲಿಲ್ಲ.
ಸ್ವಾತಂತ್ರ್ಯದ ನಂತರವೂ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಲೇ ಇವೆ. ಬುದ್ಧೀಜೀವಿ ಎನಿಸಿಕೊಂಡವರನ್ನು ಕೇಳಿದರೆ, ೧೯೯೨ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಬಾಬ್ರಿ ಕಟ್ಟಡ ನೆಲಸಮದಿಂದ ಮುಸ್ಲಿಮರಲ್ಲಿ ಕೋಪ ಉಕ್ಕಿ ಬಂದು 1993ರ ಮುಂಬೈ ಸರಣಿ ಸ್ಫೋಟಕ್ಕೆ ಕಾರಣವಾಯಿತು ಎನ್ನುತ್ತಾರೆ. ಮಂಗಳೂರಿನಲ್ಲಿ ಏಕೆ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚು ಎಂದರೆ, ಆರ್‌ಎಸ್‌ಎಸ್‌ನವರ ದಬ್ಬಾಳಿಕೆ ಎಂದೂ ಹೇಳಬಹುದು. ಆದರೆ ಇಂತಹವರು ಉತ್ತರಿಸಬೇಕಾದ ಪ್ರಶ್ನೆ ಎಂದರೆ, 1947ರಿಂದಲೂ ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ನಡೆಯುತ್ತಿವೆಯಲ್ಲ, ಆಗ ಯಾವ ಅಯೋಧ್ಯೆ ಕಟ್ಟಡ ಧ್ವಂಸವೂ ಆಗಿರಲಿಲ್ಲವಲ್ಲ? ಅಲ್ಲಿ ಆರ್‌ಎಸ್‌ಎಸ್ ಹೆಸರೇಳಲೂ ಯಾರೂ ಇರಲಿಲ್ಲವಲ್ಲ? ಅಲ್ಲೆಲ್ಲ ಏಕೆ ಪ್ರತ್ಯೇಕತಾವಾದ ಬೆಳೆಯಿತು?
ಕನ್ನಡದ ಚಿಂತಕರೊಬ್ಬರ ಮಾತು ನೆನಪಾಗುತ್ತಿದೆ. ಅವರು ಹಿಂದೊಮ್ಮೆ ಹೇಳಿದ್ದರು, ಸಾವಿರಾರು ವರುಷಗಳಿಂದ ಅಸ್ಪೃಶ್ಯತೆಯ ನೋವಿನಲ್ಲಿ ಮಿಂದೆದ್ದ ನನ್ನ ದೇಶದ ತಳಸಮುದಾಯ, ಪ್ರತೀಕಾರಕ್ಕೆ ನಿಂತಿದ್ದರು ಆ ಸಮುದಾಯದ ಒಬ್ಬೊಬ್ಬರು ಸೂಸೈಡ್ ಬಾಂಬರ್ ಆಗಬೇಕಿತ್ತು. ಆದರೆ, ಆ ರೀತಿ ಆಗಲಿಲ್ಲ !
ಇದೆಲ್ಲವನ್ನೂ ನೋಡಿದಾಗ, ಸೀತಾರಾಮ್ ಗೋಯೆಲ್ ಅವರು ತಿಳಿಸಿದ ಕಾರಣಗಳು ಸರಿ ಎನ್ನಬಹುದು. ಸರಿ, ಕಾರಣ ತಿಳಿಯಿತು. ಪರಿಹಾರ ಏನು?
ಇಲ್ಲಿ ಇನ್ನೊಂದು ಪ್ರಶ್ನೆಯನ್ನೂ ಕೇಳಬಹುದು. ಕಾಶ್ಮೀರದಲ್ಲಿ ಹಿಂದುಗಳ ಸತತ ಹಿಂಸಾಚಾರಗಳು, ಹತ್ಯಾಕಾಂಡಗಳು ನಡೆದರೂ ಕಾಶ್ಮೀರಿ ಪಂಡಿತರೇಕೆ ಭಯೋತ್ಪಾದಕರಾಗಲಿಲ್ಲ? ಅವರೂ ಒಂದು ಗುಂಪು ಮಾಡಿಕೊಂಡು ಅಥವಾ ಬೇರೆ ಭಯೋತ್ಪಾದಕರ ಜತೆ ಸೇರಿಕೊಂಡು ಏಕೆ ಭಯೋತ್ಪಾದಕರಾಗಲಿಲ್ಲ? ಏಕೆಂದರೆ ಇದೆಲ್ಲದಕ್ಕೂ ಧಾರ್ಮಿಕ ಕಾರಣಗಳಿರುತ್ತವೆ. ಧಾರ್ಮಿಕ ನೇತೃತ್ವ ವಹಿಸಿರುವವರು ಇಂತಹ ವಾತಾವರಣವನ್ನು ನಿರ್ಮಾಣ ಮಾಡುತ್ತಾರೆ. ಬಾಬ್ರಿ ಕಟ್ಟಡ ಪ್ರಕರಣದಲ್ಲಿ ಕಾನೂನಿನ ಪ್ರಕಾರ ಸೋಲಾದರೆ ಇಡೀ ಇಸ್ಲಾಮಿಗೇ ಸೋಲಾಯಿತು ಎನ್ನುವಂತೆ ಮನಸ್ಸಿನಲ್ಲಿ ಬೀಜ ಬಿತ್ತಲಾಗುತ್ತದೆ. ಎಲ್ಲ ವಿಚಾರದಲ್ಲೂ ವಿಕ್ಟಿಮ್ಹುಡ್ ಪ್ಲೇ ಮಾಡುವ ಕೆಲಸ ಆಗುತ್ತಲೇ ಸಾಗುತ್ತದೆ. ಸುತ್ತಮುತ್ತ ಇರುವವರೆಲ್ಲರೂ ತಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ, ಎಲ್ಲರೂ ತಮ್ಮನ್ನು ದ್ವೇಷಿಸುತ್ತಾರೆ, ಎಲ್ಲರೂ ಕೆಟ್ಟವರು ಎಂಬಂತೆ ಪ್ರಪಂಚವನ್ನು ಬಿಂಬಿಸಲಾಗುತ್ತದೆ. ಇದೆಲ್ಲದರಿಂದ ಪ್ರೇರಿತಗೊಳ್ಳುವ ಮುಸ್ಲಿಂ ಯುವಕರನ್ನು ಮತ್ತಷ್ಟು ಹುಚ್ಚೆಬ್ಬಿಸುವ ಭಯೋತ್ಪಾದಕ ಸಂಘಟನೆಗಳು ಅವರನ್ನು ಅಸ್ತ್ರಗಳಾಗಿ ಬಳಸಿಕೊಳ್ಳುತ್ತವೆ. ಕಾಶ್ಮೀರಿ ಪಂಡಿತರೇಕೆ ಭಯೋತ್ಪಾದಕರಾಗಲಿಲ್ಲ ಎಂದರೆ ಅವರನ್ನು ಭಯೋತ್ಪಾದಕರಾಗಿ ರೂಪುಗೊಳಿಸುವ Eco System ಅವರ ಸುತ್ತ ಇರಲಿಲ್ಲ, ಅದಕ್ಕೆ.
ಎಲ್ಲ ಮುಸ್ಲಿಂ ಧಾರ್ಮಿಕ ವ್ಯಕ್ತಿಗಳೂ ಹೀಗೆಯೇ ಇದ್ದಾರೆ ಎಂದಲ್ಲ. ಆದರೆ ಇಂತಹವರು ಇರುವುದಂತೂ ನಿಜ. ಅಲ್ಲದಿದ್ದರೆ, ಹಿಂದೆಲ್ಲ ಭಯೋತ್ಪಾದಕರು ವಿದೇಶದವರೇ ಆಗಿರುತ್ತಿದ್ದರು. ಸ್ಥಳೀಯರು ಕೇವಲ ಅವರಿಗೆ ಸಹಾಯ ಮಾಡಿರುತ್ತಿದ್ದ ಆರೋಪದಲ್ಲಿ ಬಂಧನವಾಗುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಮೂಲದವರೇ ನೇರ ಭಯೋತ್ಪಾದನೆ ಚಟುವಟಿಕೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಅಂದರೆ ಸ್ಥಳೀಯ ಯುವಕರನ್ನು ಸೆಳೆಯುವಲ್ಲಿ ಭಯೋತ್ಪಾದಕ ಸಂಘಟನೆಗಳು ಸಫಲವಾಗುತ್ತಿವೆ ಎಂದಾಯಿತಲ್ಲವೇ?
ಮುಸ್ಲಿಂ ಪ್ರತ್ಯೇಕತಾವಾದ ಎನ್ನುವುದು ಕೇವಲ ಭಾರತಕ್ಕೆ, ಕಾಶ್ಮೀರಕ್ಕೆ, ಆರ್‌ಎಸ್‌ಎಸ್‌ಗೆ ಪ್ರತಿಕ್ರಿಯೆಯಾಗಿ ಇರುವ ವಿಚಾರ ಅಲ್ಲ. ಅದಕ್ಕೆ ಒಂದು ಧಾರ್ಮಿಕ ದೃಷ್ಟಿಕೋನವಿದೆ. ಅದಕ್ಕೆ ಒಂದು ರಾಜಕೀಯ ಕಾರಣವಿದೆ. ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತದೆ. ಇದಕ್ಕೆ ಪರಿಹಾರ ಏನು? ವಿಶ್ವದ ಮಟ್ಟಿಗಂತೂ ಇದಕ್ಕೆ ಸದ್ಯ ಪರಿಹಾರವಿಲ್ಲ. ಭಾರತದಲ್ಲೂ ಯಾವುದೇ ಸಿದ್ಧಸೂತ್ರಗಳಿಲ್ಲ. ಆದರೆ ಪ್ರಯತ್ನವನ್ನಂತೂ ಎಲ್ಲರೂ ಮಾಡಲೇಬೇಕಲ್ಲ?
ಈಗ ಕಳಂಕ ಮುಸ್ಲಿಂ ಸಮುದಾಯದ ಮೇಲೆ ಅಂಟಿಕೊಳ್ಳುತ್ತಿದೆ. ಅದಕ್ಕೆ ಹೊರಗಿನವರು ಎಷ್ಟು ಕಾರಣರೋ ಅದಕ್ಕಿಂತಲೂ ಹೆಚ್ಚು ಸ್ವತಃ ಮುಸ್ಲಿಂ ಸಮುದಾಯವೇ ಕಾರಣ. ಈ ಕಳಂಕವನ್ನು ನೀಗಿಸಿಕೊಳ್ಳುವ ಹೊಣೆಗಾರಿಕೆಯು, ಬೇರೆ ಸಮುದಾಯಕ್ಕಿಂತಲೂ ಮುಸ್ಲಿಂ ಸಮುದಾಯಕ್ಕೇ ಹೆಚ್ಚಿದೆ.
ಒಳ್ಳೆಯತನವನ್ನು ಪ್ರದರ್ಶನ ಮಾಡುತ್ತ ಹೋದರೆ ಭಾರತದಿಂದ ತಮ್ಮನ್ನು ಹೊರಹಾಕಲಾಗುತ್ತದೆ ಎಂಬ ಕೃತಕ ಭಯವನ್ನು ಕೆಲವರು ಮುಸ್ಲಿಮರ ಮನದಲ್ಲಿ ತುಂಬಬಹುದು. (ಭಾರತದಲ್ಲಿರುವ ಮುಸ್ಲಿಮರಿಗೆ ಸಂಬಂಧವೇ ಇಲ್ಲದ, ಕೇವಲ ಹೊರ ದೇಶಗಳಿಂದ ಅಕ್ರಮವಾಗಿ ನುಸುಳಿರುವ ಮುಸ್ಲಿಮರಿಗೆ ಸಂಬಂಧಿಸಿದ ಎನ್ಆರ್ಸಿ-ಸಿಎಎ ಉದಾಹರಣೆಯನ್ನೇ ನೀಡಿ ಮುಸ್ಲಿಂ ಸಮುದಾಯವನ್ನು ಎತ್ತಿಕಟ್ಟುವವರು ಇದ್ದಾರೆ ಎನ್ನುವುದೇ ಇದಕ್ಕೆ ಸಾಕ್ಷಿ.) ಆದರೆ ಮುಸ್ಲಿಂ ಸಮುದಾಯವನ್ನು ದೇಶದಿಂದ ಹೊರಹಾಕುವುದು ಅಸಾಧ್ಯವಾದ ಮಾತು. ದೇಶದ ಸುಮಾರು 20 ಕೋಟಿ ಜನರನ್ನು ಹೊರಹಾಕುವುದು ಸಾಧುವೂ ಅಲ್ಲ, ಸಾಧ್ಯವೂ ಅಲ್ಲ.
ಇದಕ್ಕೆ ಕಾರಣ ಮೊದಲನೆಯದಾಗಿ, ಸನಾತನ ಧರ್ಮವು ಯಾರನ್ನೂ ದೂರ ತಳ್ಳುವ ಸಿದ್ಧಾಂತವನ್ನೇ ಹೊಂದಿಲ್ಲ. ಇಲ್ಲಿ ಸಂಖ್ಯೆಯಲ್ಲಿ ಹೆಚ್ಚಾಗಿರುವ ಜನರು ಸನಾತನ ಧರ್ಮವನ್ನೇ ಅನುಸರಿಸುವವರಾದ್ಧರಿಂದ ಅಂತಹ ಆತಂಕಕ್ಕೆ ಆಸ್ಪದ ಇಲ್ಲ. ಎರಡನೆಯದಾಗಿ ನಮಗೆ ಲಿಖಿತ ಸಂವಿಧಾನವಿದೆ. ಬಾಬಾಸಾಹೇಬರು ನೀಡಿದ ಸಂವಿಧಾನದ ಯಾವುದೇ ಒಂದು ಮೂಲೆಯಲ್ಲೂ, ಅಲ್ಪಸಂಖ್ಯಾತರನ್ನು, ವಿಶೇಷವಾಗಿ ಮುಸ್ಲಿಮರನ್ನು ದ್ವಿತೀಯ ದರ್ಜೆಯ ನಾಗರಿಕರಾಗಿ ನಡೆಸಿಕೊಳ್ಳಬಹುದು ಎನ್ನುವುದಕ್ಕೆ ಆಸ್ಪದವೇ ಇಲ್ಲ. ಹಾಗಾಗಿ ಈ ಕುರಿತು ಸ್ಪಷ್ಟತೆಯನ್ನು ಮೂಡಿಸಿಕೊಳ್ಳಬೇಕು.
ಮುಸ್ಲಿಮರನ್ನು ಪ್ರತ್ಯೇಕತೆಯಿಂದ ಮುಖ್ಯವಾಹಿನಿಗೆ ತರಲು ಗಾಂಧೀಜಿ ಪ್ರಯತ್ನ ಮಾಡಿದರು. ಆದರೆ ಸೀತಾರಾಮ್ ಗೋಯೆಲ್ ಹೇಳಿದ ಧಾರ್ಮಿಕ ಕಾರಣಗಳಿಂದಾಗಿಯೋ ಅಥವಾ ನಾಯಕತ್ವದ ಸ್ವಾರ್ಥದ ಕಾರಣಕ್ಕೋ ಆ ಪ್ರಯೋಗ ಯಶ ಕಾಣಲಿಲ್ಲ. ಆದರೆ ಈಗ ಸ್ವತಃ ಮುಸ್ಲಿಂ ಸಮುದಾಯ ಈ ಪ್ರಯತ್ನವನ್ನು ಕೈಗೆತ್ತಿಕೊಳ್ಳಬೇಕು. ತನ್ನ ಯುವಜನರು ದಾರಿ ತಪ್ಪದಂತೆ ತಡೆಯುವ ಜತೆಗೆ, ಮುಸ್ಲಿಮೇತರ ಸಮಾಜದಲ್ಲಿ ಇಸ್ಲಾಂ ಕುರಿತ ತಿಳುವಳಿಕೆಯನ್ನು ತಿಳಿಗೊಳಿಸುತ್ತಾ ಸಾಗಬೇಕು.
ಇದನ್ನೂ ಓದಿ | ಸವಿಸ್ತಾರ ಅಂಕಣ | ಆರ್‌ಎಸ್‌ಎಸ್ ಚಿಂತನೆಗಳೊಂದಿಗೆ ಬಿಜೆಪಿ ನಾಯಕರ ಆಲೋಚನೆಗಳೇಕೆ ತಾಳೆ ಆಗುತ್ತಿಲ್ಲ?
ಮಸೀದಿಯ ಕುರಿತು ಮುಸ್ಲಿಮೇತರರಿಗೆ ತಿಳಿಸಿಕೊಡುವ ಪ್ರಯತ್ನ ನಡೆಯುತ್ತಿದೆ ಎನ್ನುವುದನ್ನು ಇತ್ತೀಚೆಗೆ ಕೇಳಿದ ನೆನಪು, ಇದು ಉತ್ತಮ ಪ್ರಯತ್ನ. ಇಸ್ಲಾಂ ಕುರಿತು ಸಾರ್ವಜನಿಕವಾಗಿ ಪ್ರಶ್ನೆಗಳೆದ್ದರೆ ಅದನ್ನು ಖಂಡಿಸುವ ಅಥವಾ ಅಂಥವರನ್ನು ಕೊಲ್ಲುವ ಬೆದರಿಕೆ ಹಾಕುವ ಬದಲಿಗೆ ಸಾವಧಾನದಿಂದ ಉತ್ತರಿಸುವ, ಮನವೊಲಿಸುವ ಪ್ರಯತ್ನ ಮಾಡಬೇಕು. ಮುಸ್ಲಿಂ ಸಮುದಾಯ ಒಂದು ಸಾವಿರ ವರ್ಷ ಭಾರತದಲ್ಲಿದ್ದರೂ ಅದರ ಸಾಮಾನ್ಯ ಸಂಪ್ರದಾಯಗಳು, ನಡವಳಿಕೆಗಳ ಕುರಿತು ಇನ್ನೂ ಬಹುತೇಕರಿಗೆ ಸೀಕ್ರೇಟ್ ಆಗಿಯೇ ಉಳಿದಿವೆ. ಇದನ್ನು ನೀಗಿಸಲು ಸಮುದಾಯ ಹೆಚ್ಚು ಮುಕ್ತ ಸಂವಾದಗಳನ್ನು ನಡೆಸಬೇಕು.
ಜತೆಗೆ, ಭಾರತೀಯ ಮುಸ್ಲಿಮರ ಶೈಕ್ಷಣಿಕ ಸ್ಥಿತಿಗತಿ ತುಂಬಾ ಶೋಚನೀಯವಾಗಿದೆ. ಆಧುನಿಕ ಶಿಕ್ಷಣ ಪಡೆದವರೂ ಕಡಿಮೆ. ಹಾಗಾಗಿ, ಯಾವುದೇ ಸರಕಾರ ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಸಹಾನುಭೂತಿಯಿಂದ ನೋಡಿ, ಅವರ ಕಲ್ಯಾಣಕ್ಕೆ ಮುಂದಾಗಬೇಕಿದೆ. ಮುಸ್ಲಿಮರು ಹಿಂದೊಮ್ಮೆ ಪ್ರಭುತ್ವವೇ ಆಗಿದ್ದರು, ಅವರ ಸಮುದಾಯದಲ್ಲಿ ರಾಜ-ಮಹಾರಾಜರು ಇಲ್ಲವೇ ಎಂಬಂಥ ಮಾತುಗಳು, ವರ್ತಮಾನದ ಸಮುದಾಯಕ್ಕೆ ಬಲ ನೀಡುವುದಿಲ್ಲ.
ಇಂತಹ ವಿನೂತನ ಕ್ರಮಗಳಿಂದ ಸಮುದಾಯವು ತನ್ನ ಮೇಲಿನ ಕಳಂಕವನ್ನು ತೊಡೆದುಕೊಳ್ಳಬಹುದು. ಈ ಕಾರ್ಯಕ್ಕೆ ಬಹುಸಂಖ್ಯಾತ ಹಿಂದು ಸಮಾಜ ಕೈ ಜೋಡಿಸುವುದು ಕರ್ತವ್ಯವೂ ಹೌದು. ಅಂತಹದ್ದೊಂದು ಪ್ರಯತ್ನವನ್ನು ಏಕೆ ಮುಸ್ಲಿಂ ಧಾರ್ಮಿಕ ಮುಖಂಡರು ಮಾಡಬಾರದು? ಅಷ್ಟಕ್ಕೂ ಈ ಮಾರ್ಗವನ್ನು ಬಿಟ್ಟು, ಭಾರತವನ್ನು ಶಾಂತಿಯಾಗಿರಿಸಲು ಹಾಗೂ ಇಲ್ಲಿನ ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳಲು ಬೇರೆ ಯಾವುದಾದರೂ ಮಾರ್ಗವಿದೆಯೇ? ತಿಳಿದವರಿದ್ದರೆ ಅದನ್ನಾದರೂ ತಿಳಿಸಬಹುದು.
ಇದನ್ನೂ ಓದಿ | ಸವಿಸ್ತಾರ ಅಂಕಣ | ಇವರೆಲ್ಲ ತಮ್ಮನ್ನು ತಾವು ʼಸಂವಿಧಾನದ ಕಾಲಾಳುʼ ಎಂದುಕೊಂಡಿರುವುದೇ ವಿಪರ್ಯಾಸ