Site icon Vistara News

ಸವಿಸ್ತಾರ ಅಂಕಣ | ಒಂದೇ ʼಸತ್ಯʼದೆಡೆಗೆ ಚಲಿಸಿದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಭಿನ್ನ ಎಣಿಸುವುದು ಅಪರಾಧವಲ್ಲವೇ?

freedom fighters1

ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಇದೊಂದೇ ಕಾರಣ, ಆ ಒಬ್ಬ ಮಹಾನ್ ನಾಯಕರಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಬಂತು ಎಂದು ಯಾರಾದರೂ ವಾದಿಸಿದರೆ, ನಕ್ಕು ಸುಮ್ಮನಾಗಿಬಿಡಿ. ಏಕೆಂದರೆ, ಅವರು ಇತಿಹಾಸ ಕುರಿತು ಮುಗ್ಧರಾಗಿರುತ್ತಾರೆ ಇಲ್ಲವೇ ಇತಿಹಾಸದ ಎಬಿಸಿಡಿ ಗೊತ್ತಿಲ್ಲದವರೇ ಆಗಿರುತ್ತಾರೆ. ಗೊತ್ತಿದ್ದೂ ಉದ್ದೇಶಪೂರ್ವಕವಾಗಿ ಮಾತನಾಡುತ್ತಿದ್ದಾರೆ ಎಂದರೆ, ಅವರು `ಬುದ್ಧಿವಂತ’ ವಂಚಕರೇ ಆಗಿರುತ್ತಾರೆ ಎಂದು ತೀರ್ಮಾನಿಸಬಹುದು.

ಸ್ವಾತಂತ್ರ್ಯ ಸಂಗ್ರಾಮ ಎಂಬುದು ನಿಗದಿತ ಗುರಿ ಇರಿಸಿಕೊಂಡು ನಡೆದ ಹೋರಾಟವಲ್ಲ. ಮಹಾತ್ಮ ಗಾಂಧೀಜಿ(೧೮೬೯) ಹುಟ್ಟುವ ೧೨ ವರ್ಷಗಳ ಮೊದಲು ನಡೆದ ಸಿಪಾಯಿದಂಗೆಯನ್ನು(೧೮೫೭) ವಿನಾಯಕ ದಾಮೋದರ ಸಾವರ್ಕರ್ ಸ್ವಾತಂತ್ರ್ಯ ಹೋರಾಟದ ಮೊದಲ ಸಂಗ್ರಾಮ ಎಂದು ಬಣ್ಣಿಸಿದರೆ, ಮೈಸೂರಿನ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ೧೭೮೯ರಲ್ಲಿ ನಡೆಸಿದ ಸಮರವೂ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ ಎಂದು ಇತ್ತೀಚಿನ ದಿನಗಳಲ್ಲಿ ಮಾರ್ಕ್ಸ್‌ವಾದಿಗಳು ಹೊಸ ಥಿಯರಿಯನ್ನು ಕಟ್ಟುತ್ತಿದ್ದಾರೆ.

ಇದರ ಸತ್ಯ-ಮಿಥ್ಯೆಗಳು ಏನೇ ಇರಲಿ, ದೇಶದಿಂದ ಬ್ರಿಟಿಷರನ್ನು ಓಡಿಸಬೇಕು ಎಂಬ ಸ್ವಾತಂತ್ರ್ಯದ ತಹ ತಹಕ್ಕೆ ಕನಿಷ್ಠ ಎರಡು ಶತಮಾನಗಳ ಇತಿಹಾಸವೇ ಇದೆ !

ಇಂಥಾ ಸುದೀರ್ಘ ಹೋರಾಟವನ್ನು ಯಾವುದೋ ಒಂದು ತಲೆಮಾರಿನ ಹೋರಾಟ ಗಣ ನಮಗೆ ದೊರಕಿಸಿಕೊಟ್ಟಿತು ಎಂಬ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಭಾರತದ ಸ್ವಾತಂತ್ರ್ಯ ಹೋರಾಟ ಎಂಬುದು ಒಂದು ಸರಳ ಘಟನೆಯೋ, ಸಂಕೀರ್ಣ ವಿದ್ಯಮಾನವೋ ಅಲ್ಲ. ಅದೊಂದು ಮಹಾ ಪ್ರಕ್ರಿಯೆ, ಹೋರಾಟದ ಮಹಾ ಸಾಗರ !

ನಿಜ, ಈ ಹೋರಾಟದಲ್ಲಿ ಕೆಲವರ ಪಾತ್ರ, ಬೀರಿದ ಪ್ರಭಾವ-ಪರಿಣಾಮಗಳಲ್ಲಿ ವ್ಯತ್ಯಾಸವಿರಬಹುದು. ಗಾಂಧಿಯ ಪಾತ್ರ ಹಿರಿದೇ ಆಗಿರಬಹುದು. ಆದರೆ, ಆ ಒಂದು ಕಾರಣದಿಂದ ಅವರಿಂದಲೇ, ಅವರ ನೇತೃತ್ವದಿಂದಲೇ, ಅವರ ಕಾಲಘಟ್ಟದ ಬೆಳವಣಿಗೆಗಳಿಂದಲೇ ಸ್ವಾತಂತ್ರ್ಯ ಬಂತು ಎಂಬುದು ಇತಿಹಾಸ ಗ್ರಹಿಕೆಯ ಕ್ರಮವಲ್ಲ.

“13 ಬ್ರಿಟಿಷ್ ಕಾಲೊನಿಗಳಲ್ಲಿ ವಿಧಿಸುತ್ತಿದ್ದ ತೆರಿಗೆ ಹಾಗೂ ರಾಜಕೀಯ ಪ್ರಾತಿನಿಧ್ಯದ ಕೊರತೆಯ ಕಾರಣಕ್ಕೆ ಅಮೆರಿಕ ಸಂಯಕ್ತ ಸಂಸ್ಥಾನ ರಚನೆಯಾಗುವ ಪ್ರಕ್ರಿಯೆ 17ನೇ ಶತಮಾನದಲ್ಲಿ ನಡೆಯಿತು,” ಎಂದು ಕೆಲವರು ಅಮೆರಿಕಾದ ಬೆಳವಣಿಗೆ ಕುರಿತು ಸರಳವಾಗಿ ತೀರ್ಮಾನ ನೀಡುತ್ತಾರೆ. ಭಾರತೀಯ ಸ್ವಾತಂತ್ರ್ಯ ಹೋರಾಟವನ್ನೇ ಈ ನೆಲೆಯಲ್ಲಿಯೇ ವ್ಯಾಖ್ಯಾನಿಸುತ್ತಾರೆ. ಆದರೆ, ಇದು ಒಂದು ಸಾಲಿನಲ್ಲಿ ಹೇಳಬಹುದಾದಷ್ಟು ಸರಳವಲ್ಲ.

ಇಷ್ಟೆಲ್ಲಾ ಪೀಠಿಕೆ ಏಕೆಂದರೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮೃದ್ಧ ಫಲವನ್ನು ಅನುಭವಿಸುತ್ತಿರುವ ನಾವೆಲ್ಲರೂ ಸ್ವಾತಂತ್ರ್ಯವನ್ನೂ, ಸ್ವಾತಂತ್ರ್ಯ ಹೋರಾಟಗಾರರನ್ನೂ ನಮ್ಮ ನಮ್ಮ ಇಷ್ಟ-ಕಷ್ಟ, ನಂಬಿರುವ ರಾಜಕೀಯ ಸಿದ್ಧಾಂತಗಳಿಗೆ ಅನುಗುಣವಾಗಿ ವ್ಯಾಖ್ಯಾನಿಸುತ್ತಾ, ನಮಗೆ ಆಗದ, ನಮ್ಮ ಮುತ್ತಜ್ಜ-ಗಿರಿಯಜ್ಜನ ಓರಿಗೆಯ ಹೋರಾಟಗಾರನ್ನು ಟೀಕಿಸಲು ಆರಂಭಿಸಿದ್ದೇವೆ. ಅಪಹಾಸ್ಯ ಮಾಡಲು ಆರಂಭಿಸಿದ್ದೇವೆ. ಭಾರತದ ಸ್ವಾತಂತ್ರ್ಯ ಹೋರಾಟ ಅನೇಕ ಮಜಲುಗಳಲ್ಲಿ ನಡೆದಿದೆ. ಪ್ರಮುಖವಾಗಿ ಗುರುತಿಸಬಹುದಾದವೆಂದರೆ, ಕ್ರಾಂತಿಕಾರಿ ಹೋರಾಟ, ಅಹಿಂಸಾತ್ಮಕ ಚಟುವಟಿಕೆ, ಸಾಮಾಜಿಕ ಸುಧಾರಣೆ, ಧಾರ್ಮಿಕ ಚಳವಳಿ, ರಾಜಮನೆತನಗಳ ಸಮರ, ರಾಜತಾಂತ್ರಿಕತೆ. ಇವು ಕೆಲವು ಉದಾಹರಣೆಗಳಷ್ಟೆ. ಈ ಎಲ್ಲವನ್ನೂ ಹೊರತುಪಡಿಸಿದ ಅನೇಕ ಮಜಲುಗಳು ಈ ಹೋರಾಟದ ಸಾಗರದಲ್ಲಿ ಮಿಳಿತವಾಗಿವೆ. ಇತಿಹಾಸವನ್ನು ಸರಿಯಾಗಿ ಓದಿದರೆ, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಒಂದಿಷ್ಟು ಬ್ರಿಟಿಷ್ ಅಧಿಕಾರಿಗಳ ಅಧ್ಯಾಯವೂ ಕಾಣಸಿಗುತ್ತದೆ.

ಬ್ರಿಟಿಷರ ವಿರುದ್ಧದ ಹೋರಾಟವೇ ಸ್ವಾತಂತ್ರ್ಯದ ಕಹಳೆ ಎನ್ನಬಹುದಾದರೆ, ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿಯಿಂದ ಬಹದ್ದೂರ್ ಷಾವರೆಗೆ ಹತ್ತಾರು ರಾಜವಂಶಸ್ಥರು ಕಾಣಸಿಗುತ್ತಾರೆ. ಬಳಿಕ ಎದುರಾಗುವುದು ಕ್ರಾಂತಿಕಾರಿಗಳು.

ಲಾಲಾ ಲಜಪತ್‌ರಾಯ್‌, ಬಾಲಗಂಗಾಧರ ತಿಲಕ್‌, ಬಿಪಿನ್‌ಚಂದ್ರ ಪಾಲ್

೧೯ನೇ ಶತಮಾನದ ಅಂತ್ಯ ಹಾಗೂ ೨೦ನೇ ಶತಮಾನದ ಆದಿಯಲ್ಲಿ ಕ್ರಾಂತಿಕಾರಿಗಳ ಹೋರಾಟ ದೊಡ್ಡ ಮಟ್ಟದಲ್ಲಿ ನಡೆದಿತ್ತು. ಚಂದ್ರಶೇಖರ ಆಜಾದ್, ಭಗತ್ ಸಿಂಗ್ ಅವರಂಥ ಕ್ರಾಂತಿಕಾರಿಗಳು ದೇಶದೊಳಗೆ ಬ್ರಿಟಿಷರನ್ನು ನಡುಗಿಸುತ್ತಿದ್ದರೆ, ನೇತಾಜಿ ಸುಭಾಷ್ಚಂದ್ರ ಬೋಸ್ ಅವರಂಥ ಮೇಧಾವಿಗಳು ದೇಶದ ಹೊರಗಿನಿಂದಲೂ ಬ್ರಿಟಿಷರ ಬೆವರಿಳಿಸಿದರು. ಲಾಲ್-ಬಾಲ್-ಪಾಲ್ ಎಂದೇ ಪ್ರಸಿದ್ಧಿಯಾಗಿರುವ ಲಾಲ ಲಜಪತರಾಯ್ ಪಂಜಾಬಿನಲ್ಲೂ, ಬಾಲಗಂಗಾಧರ ನಾಥ ತಿಲಕ್ ಅವರು ಮಹಾರಾಷ್ಟ್ರದಲ್ಲೂ, ಬಿಪಿನ್ ಚಂದ್ರಪಾಲ್‌ ಅವರು ಕೋಲ್ಕತ್ತಾದಲ್ಲೂ ನಡೆಸುತ್ತಿದ್ದ ತೀವ್ರಗಾಮಿ-ಕ್ರಾಂತಿಕಾರಕ ಸತ್ಯಾಗ್ರಹಿ ಹೋರಾಟವನ್ನು, ೧೯೨೦ರ ಬಳಿಕ ಮಹಾತ್ಮಾ ಗಾಂಧಿ ಅವರು ಅಹಿಂಸಾತ್ಮಕ ಮಾರ್ಗದಲ್ಲಿ ಮುಂದುವರಿಸಿದರು. ಅವರಿಗೆ ಜತೆಯಾದವರು ಸರ್ದಾರ್ ವಲ್ಲಭಬಾಯಿ ಪಟೇಲ್, ಜವಹಾರ್ ಲಾಲ್ ನೆಹರು ಮತ್ತು ಚಕ್ರವರ್ತಿ ರಾಜಗೋಪಾಲಚಾರಿ ಅಂಥ ಮಂದಗಾಮಿಗಳು.

ಹೊರಗಿನವರ ದಬ್ಬಾಳಿಕೆ ಖಂಡಿಸಿ, ಅದರಿಂದ ಮುಕ್ತಿ ಬಯಸಿ ಈ ಎಲ್ಲರೂ ಒಂದೆಡೆ ಹೋರಾಟ ನಡೆಸುತ್ತಿದ್ದರೆ, ಮಹಾರಾಷ್ಟ್ರವನ್ನು ಕೇಂದ್ರವಾಗಿಟ್ಟುಕೊಂಡು ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರು ದೇಶದ ಒಳಗಿನ, ಒಳಗಿನವರ ದೌರ್ಜನ್ಯದ ವಿರುದ್ಧ ಹೋರಾಟ ನಡೆಸುತ್ತಿದ್ದರು. ಜಾತಿ ವಿರುದ್ಧದ ದಬ್ಬಾಳಿಕೆ, ಲಿಂಗ ತಾರತಮ್ಯ, ಅಸ್ಪೃಶ್ಯತೆ, ಕಂದಾಚಾರದ ವಿರುದ್ಧ ಅಂಬೇಡ್ಕರ್ ನಡೆಸುತ್ತಿದ್ದ ಹೋರಾಟವೂ ನಿಜ ಅರ್ಥದಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವೇ ಆಗಿತ್ತು ! (ಇಂಥದ್ದೊಂದು ಸಾಮಾಜಿಕ ಕಾಳಜಿಯನ್ನು, ಆಧುನಿಕ ಶಿಕ್ಷಣದ ಮಹತ್ವವನ್ನು ರಾಜಾರಾಂ ಮೋಹನ್ ರಾಯ್ (೧೭೭೪-೧೮೩೩) ಅವರು ೧೮ನೇ ಶತಮಾನದ ಶುರುವಿನಲ್ಲಿಯೇ ಈ ನೆಲದಲ್ಲಿ ಬಿತ್ತಿ ಹೋಗಿದ್ದರು. ಅಲ್ಲಿ ಇದ್ದದ್ದು ಕೂಡ ದಾಸ್ಯದಿಂದ ಬಿಡುಗಡೆಯ ಹಂಬಲವೇ ಆಗಿತ್ತು. ಅದು ಸ್ವಾತಂತ್ರ್ಯ ಹೋರಾಟವಲ್ಲದೇ ಮತ್ತೇನು?)

ಸ್ವಾತಂತ್ರ್ಯಕ್ಕಾಗಿ ಆಧ್ಯಾತ್ಮ ಕ್ಷೇತ್ರದ ಮಹನೀಯರು ನಡೆಸಿದ ಹೋರಾಟವನ್ನು ಮರೆಯಲಾದೀತೆ ? ಸ್ವಾಮಿ ವಿವೇಕಾನಂದರು, ರಮಣ ಮಹರ್ಷಿಗಳು, ಮಹರ್ಷಿ ಅರವಿಂದರು, ದಕ್ಷಿಣದ ನಾರಾಯಣ ಗುರುಗಳು ಸೇರಿದಂತೆ ಅನೇಕ ಮಹಾಪುರುಷರು ಈ ದೇಶದ ಚೈತನ್ಯವನ್ನು ಜಾಗೃತಗೊಳಿಸುತ್ತಲೇ ಇದ್ದರು. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ರವೀಂದ್ರನಾಥ ಠಾಗೋರ್ ಅವರು ಸಾಹಿತ್ಯ ಹಾಗೂ ಶಿಕ್ಷಣ ಕೃಷಿಯ ಮೂಲಕ ನಡೆಸುತ್ತಿದ್ದ ಹೋರಾಟವೇನು ಕಡಿಮೆಯೇ ?

ಗಾಂಧಿ ಕಾಲಘಟ್ಟದಲ್ಲಿ ಎಲ್ಲರೂ ಸ್ವಾತಂತ್ರ್ಯಕ್ಕಾಗಿ ಬೀದಿಗಿಳಿದಿದ್ದರೆ, ರಾಜಕೀಯ ಸ್ವಾತಂತ್ರ್ಯದ ಬಳಿಕ ದೇಶದ ಮಾನಸಿಕತೆಯನ್ನು ಸಿದ್ಧಪಡಿಸಲು ಡಾ. ಕೇಶವ ಬಲಿರಾಂ ಹೆಡಗೆವಾರ್ ಅಂಥವರು ತಮ್ಮದೇ ಮಾರ್ಗದಲ್ಲಿ ಪ್ರಯತ್ನಶೀಲರಾಗಿದ್ದರು.

ಒಟ್ಟಾರೆ ಸ್ವಾತಂತ್ರ್ಯ ಹೋರಾಟಕ್ಕೆ ಹೇಗೆ ಒಂದೇ ದಾರಿಯಿಲ್ಲವೊ, ಹಾಗೆಯೇ ಒಬ್ಬರೇ ವ್ಯಕ್ತಿಯಿಂದಲೂ ಅದು ಈಡೇರಿಲ್ಲ.

ನಾನು ಮೊದಲೇ ಹೇಳಿದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಎಲ್ಲರ ಗುರಿ ಒಂದೇ ಆಗಿದ್ದರೂ, ಗುರಿ ಸಾಧಿಸಲು ಕಂಡುಕೊಂಡ ಮಾರ್ಗಗಳು ಬೇರೆ ಬೇರೆ ಆಗಿದ್ದವು. ಇದರಲ್ಲಿ ಭಿನ್ನತೆ ಇದ್ದರೂ ಅವರೆಲ್ಲರ ನಡುವೆ ಪರಸ್ಪರ ಬೆಸುಗೆ ಇತ್ತು. ಭಿನ್ನತೆಯೊಂದಿಗೆ ಬೆರೆಯುತ್ತಿದ್ದರು.

ಅದು ಹೇಗೆ ಎಂಬುದನ್ನು ನೋಡೋಣ. ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಜತೆಜತೆಗೆ ಸಾಮಾಜಿಕ ಸುಧಾರಣೆ, ಸ್ವಾಭಿಮಾನ ಜಾಗೃತಿಯನ್ನೂ ತಮ್ಮ ಕಾರ್ಯಚಟುವಟಿಕೆಯ ಭಾಗವಾಗಿಸಿಕೊಂಡಿದ್ದರು. ಇದರಲ್ಲಿ, ಹಿಂದು ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ತೊಲಗಿಸಬೇಕು ಎನ್ನುವುದು ಅವರ ಮೊದಲ ಆಶಯವಾಗಿತ್ತು. ಹಾಗೆ ನೋಡಿದರೆ ಗಾಂಧೀಜಿಯವರು ಅಸ್ಪೃಶ್ಯತೆ ಕುರಿತು ಆಡಿದ ಮಾತುಗಳನ್ನು ಸಾವರ್ಕರರು ಐದು ವರ್ಷ ಮೊದಲೇ ಹೇಳಿದ್ದರು ಎನ್ನುವುದನ್ನು ಹಿಂದಿನ ಲೇಖನದಲ್ಲಿ ನೋಡಿದ್ದೇವೆ. ಅಸ್ಪೃಶ್ಯತೆ ಮಾತ್ರವಲ್ಲ, ಸ್ವದೇಶಿ ಚಳುವಳಿಯ ಆರಂಭವನ್ನೂ ಸಾವರ್ಕರರು ಗಾಂಧೀಜಿ ಅವರಿಗಿಂತ ಅನೇಕ ವರ್ಷಗಳ ಮೊದಲೇ ಮಾಡಿದ್ದರು. ಈ ವಿಷಯದಲ್ಲಿ ಅವರಿಬ್ಬರ ನಡುವೆ ಪರಸ್ಪರ ಗೌರವವಿತ್ತು.

ಇದನ್ನೂ ಓದಿ | ಸವಿಸ್ತಾರ ಅಂಕಣ | ʼಸಪ್ತಬಂದಿʼಯಲ್ಲಿ ಬಂಧಿಯಾದ ಹಿಂದು ಸಮಾಜ ಮುಕ್ತವಾಗಬೇಕು ಎಂದವರು ಸಾವರ್ಕರ್

ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದ ಬ್ರಿಟಿಷರು ಬಂಗಾಳದಿಂದ ತಮಗೆ ಎದುರಾಗುತ್ತಿರುವ ಪ್ರಬಲ ಪ್ರತಿರೋಧವನ್ನು ಮೆಟ್ಟಿನಿಲ್ಲಲು ಬಂಗಾಳವನ್ನು ಆಯ್ದುಕೊಂಡರು. ಕವಿ ರವೀಂದ್ರರಿಂದ ಹಿಡಿದು ನೇತಾಜಿವರೆಗಿನ ಕ್ರಾಂತಿಕಾರಿಗಳ ಕರ್ಮಭೂಮಿ ಅದು. ಮುಸ್ಲಿಮರು ಹೆಚ್ಚಾಗಿರುವ ಭಾಗವನ್ನು ಪೂರ್ವ ಬಂಗಾಳ ಎಂದು, ಹಿಂದುಗಳು ಹೆಚ್ಚಾಗಿರುವ ಭಾಗವನ್ನು ಪಶ್ಚಿಮ ಬಂಗಾಳ ಎಂದು 1905ರಲ್ಲಿ ಬ್ರಿಟಿಷರು ವಿಭಜಿಸಿದರು. ಸಹಜವಾಗಿಯೇ ಇದು ದೇಶಾದ್ಯಂತ ಕಿಚ್ಚನ್ನು ಹೆಚ್ಚಿಸಿತು. ಈ ಹೋರಾಟವನ್ನು ಮುಂದೆ ತೆಗೆದುಕೊಂಡು ಹೋಗಲು ಬಂಗಾಳದಲ್ಲಿ ಸ್ವದೇಶಿ ಆಂದೋಲನಕ್ಕೆ ಚಾಲನೆ ನೀಡಲಾಯಿತು. ವಿದೇಶಿ ವಸ್ತ್ರಗಳನ್ನು ಬಹಿಷ್ಕರಿಸುವುದು, ವಿದೇಶಿ ವಸ್ತ್ರಗಳನ್ನು ಬೆಂಕಿಯಲ್ಲಿ ಸುಡುವುದೂ ಈ ಚಳವಳಿಯ ಭಾಗವಾಗಿತ್ತು. ಬಂಗಾಳದ ಹೋರಾಟಕ್ಕೆ ದೂರದ ಮಹಾರಾಷ್ಟ್ರದಲ್ಲಿ ಬಾಲಗಂಗಾಧರ ತಿಲಕರು ಬೆಂಬಲ ನೀಡಿದರು. ತಿಲಕರ ಸ್ವದೇಶಿ ಆಂದೋಲನಕ್ಕೆ ಬೆನ್ನೆಲುಬಾಗಿ ನಿಂತವರು ಸಾವರ್ಕರ್ ಹಾಗೂ ಅವರ ಮಿತ್ರ ಮಂಡಳಿ. ಅಂದರೆ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ವಿದೇಶಿ ವಸ್ತ್ರಗಳನ್ನು ಸುಡುವುದು ಹಾಗೂ ಸ್ವದೇಶಿ ಉಡುವುದು ಕೂಡ ದೊಡ್ಡ ಅಧ್ಯಾಯವಾಗಿತ್ತು ಮತ್ತು ಇದನ್ನು ಅನೇಕರು ನಡೆಸಿದ್ದರು. ೧೯೧೦ರ ಅಸುಪಾಸಿನಲ್ಲಿ ತಿಲಕರು ಈ ಹೋರಾಟ ನಡೆಸುವ ಮುನ್ನವೇ ದಾದಾಭಾಯಿ ನೌರೋಜಿ, ಗೋಪಾಲಕೃಷ್ಣ ಗೋಖಲೆಯಂಥವರು ಸ್ವದೇಶಿ ಆಂದೋಲವನ್ನು ನಡೆಸಿಕೊಂಡು ಬಂದಿದ್ದರು. (ಸ್ವಾರಸ್ಯ ಅಂದರೆ 1871ರ ಆಸುಪಾಸಿನಲ್ಲಿಯೇ ನಾಮಧಾರಿ ಸಿಖ್ಖರೂ ವಿದೇಶಿ ವಸ್ತ್ರಗಳನ್ನು ಬಹಿಷ್ಕರಿಸಿದ್ದರು)

ಬಂಗಾಳ ವಿಭಜನೆ ನಂತರದ ಸ್ವದೇಶಿ ಆಂದೋಲನವನ್ನು 1921ರಲ್ಲಿ ಮಹಾತ್ಮಾ ಗಾಂಧೀಜಿ ಮುನ್ನಡೆಸಿದ್ದರು. ಮುಂಬೈಯ ಎಲ್ಫಿನ್ಸ್ಟನ್ ಮಿಲ್ ಕಾಂಪೌಂಡ್‌ನಲ್ಲಿ 1.5 ಲಕ್ಷ ಬ್ರಿಟಿಷ್ ವಸ್ತ್ರಗಳನ್ನು ಸುಟ್ಟರು. ಹೀಗೆ ಸ್ವದೇಶಿ ಹೋರಾಟದ ಹಾದಿಯಲ್ಲಿ ಮಂದಗಾಮಿಗಳು ಮತ್ತು ತೀವ್ರಗಾಮಿಗಳ ಹೆಜ್ಜೆ ಗುರುತನ್ನು ಕಾಣಬಹುದು.

ಭಗತ್‌ ಸಿಂಗ್‌, ಸುಭಾಶ್ಚಂದ್ರ ಬೋಸ್‌, ಚಂದ್ರಶೇಖರ ಆಜಾದ್

ಮತ್ತೆ ಮತ್ತೆ ಹೇಳುವೆ. ಸ್ವಾತಂತ್ರ್ಯ ಹೋರಾಟಗಾರರ ನಡುವೆ ಮಾರ್ಗಗಳಲ್ಲಿ ಭಿನ್ನಾಭಿಪ್ರಾಯವಿದ್ದವು. ಆದರೆ ಅಂತಿಮ ಗುರಿಯಲ್ಲಿ ವ್ಯತ್ಯಾಸ ಇರಲಿಲ್ಲ. ಪರಸ್ಪರರ ನಡುವೆ ಇದ್ದ ಸೈದ್ಧಾಂತಿಕ ಭಿನ್ನತೆಗಳು ಎಂದಿಗೂ ವೈಯಕ್ತಿಕ ನೆಲೆಗಟ್ಟಿಗೆ ಇಳಿಯಲೇ ಇಲ್ಲ. ಸಾವರ್ಕರರು ಆರಂಭಿಸಿದ ಹೋರಾಟವನ್ನು ಕೈಗೆತ್ತಿಕೊಳ್ಳಲು ಗಾಂಧೀಜಿ ಹಿಂದೇಟು ಹಾಕಲಿಲ್ಲ. ಕ್ರಾಂತಿಕಾರಿ ಚಟುವಟಿಕೆಯನ್ನೇ ಒಪ್ಪದ ಗಾಂಧೀಜಿಯವರ ಹೆಸರನ್ನೇ ನೇತಾಜಿ ಸುಭಾಷ್ಚಂದ್ರ ಬೋಸರು ತಮ್ಮ ಸೇನೆಯ ಒಂದು ತುಕಡಿಗೆ ಇಡುವುದನ್ನು ಮರೆಯಲಿಲ್ಲ. ಜಾತಿ ಪದ್ಧತಿಯನ್ನು ಹೋಗಲಾಡಿಸಲು ಶ್ರಮಿಸುತ್ತಿದ್ದ ಡಾ. ಬಿ.ಆರ್. ಅಂಬೇಡ್ಕರರು ಎಲ್ಲ ಟೀಕೆಗಳನ್ನು ಬದಿಗೊತ್ತಿ ಆರ್‌ಎಸ್‌ಎಸ್‌ ಶಿಬಿರಕ್ಕೆ ತೆರಳಿ ಅಲ್ಲಿನ ವ್ಯವಸ್ಥೆಯನ್ನು ಪ್ರಶಂಸಿಸುವುದಕ್ಕೆ ಹಿಂದೇಟು ಹಾಕಲಿಲ್ಲ. ಹಿಂದುತ್ವ ಸೇರಿ, ಆರ್‌ಎಸ್‌ಎಸ್‌ ಪ್ರತಿಪಾದಿಸುವ ಅನೇಕ ವಿಚಾರಗಳಿಗೆ ಸ್ವತಃ ಬಾಬಾ ಸಾಹೇಬರು ವಿರೋಧ ವ್ಯಕ್ತಪಡಿಸಿದರೂ ಮಹಾರಾಷ್ಟ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅಂಬೇಡ್ಕರರಿಗೆ ಬೆನ್ನೆಲುಬಾಗಿ ನಿಂತವರು ಇದೇ ಆರ್‌ಎಸ್‌ಎಸ್‌ ಸ್ವಯಂಸೇವಕರು. ಪ್ರಖರ ಹಿಂದುತ್ವವಾದಿ ಸಾವರ್ಕರರು ರಚಿಸಿದ್ದ 1857ರ ಕೃತಿ ಭಾರತದಲ್ಲಿ ಮರುಮುದ್ರಣಗೊಂಡಿದ್ದು ಗದರ್ ಕ್ರಾಂತಿಕಾರಿಗಳು ಹಾಗೂ ಭಗತ್ ಸಿಂಗ್ ಮೂಲಕ. ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಗಲ್ಲಿಗೇರಿಸಿದ ದಿನ, ರತ್ನಗಿರಿಯ ತಮ್ಮ ಮನೆಯ ಮೇಲೆ ಹಾರುತ್ತಿದ್ದ ಕೇಸರಿ ಧ್ವಜವನ್ನು ಕೆಳಗಿಳಿಸಿ ಕಪ್ಪು ಧ್ವಜ ಹಾರಿಸಿದವರು ಸಾವರ್ಕರ್. ಹೀಗೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಪರಸ್ಪರರನ್ನು ಗೌರವಿಸುವವರಾಗಿದ್ದರು ನಮ್ಮ ಸ್ವಾತಂತ್ರ್ಯ ಹೋರಾಟಗಾರರು. ಈಗಿನ ಕಾಲದಲ್ಲಿ ಇಂತಹ ಉದಾಹರಣೆಗಳು ಸಿಗಬಹುದೇ?

ಇದನ್ನೂ ಓದಿ | ಸವಿಸ್ತಾರ ಅಂಕಣ | ಗಡಿಗಳ ಎಲ್ಲೆ ಮೀರಿ ಮನ್ನಣೆ ಗಳಿಸಿದ್ದ ಸಾವರ್ಕರ್! ಅವರ ಪರ ಹೋರಾಡಿದ್ದ ಮಾರ್ಕ್ಸ್ ಮೊಮ್ಮಗ!

ಸಾವರ್ಕರರನ್ನು ಇದೀಗ ಹೆಚ್ಚು ಆರಾಧಿಸುವವರು, ಅವರ ಹೋರಾಟಗಳನ್ನು ಮುನ್ನೆಲೆಗೆ ತಂದಿರುವವರು ರಾಷ್ಟ್ರೀಯ ಸ್ವಯಂಸೇವಕ ಸಂಘ. ಹಾಗೆ ನೋಡಿದರೆ ಆರ್‌ಎಸ್‌ಎಸ್‌ ಮತ್ತು ಸಾವರ್ಕರ್ ವಿಚಾರಧಾರೆಯಲ್ಲಿ ಅನೇಕ ಭಿನ್ನಾಭಿಪ್ರಾಯಗಳಿವೆ. ಉದಾಹರಣೆಗೆ, ಗೋಹತ್ಯೆಯನ್ನು ನಿಷೇಧಿಸಬೇಕು ಎಂದು ಆರ್‌ಎಸ್‌ಎಸ್‌ ಹೇಳುವುದಕ್ಕಿಂತಲೂ ವಿಭಿನ್ನವಾಗಿ ಸಾವರ್ಕರ್ ವಾದಿಸುತ್ತಿದ್ದರು. ಗೋವು ಹಿಂದುಗಳ ತಾಯಿ ಎನ್ನುವುದನ್ನೇ ಅವರು ಒಪ್ಪಲಿಲ್ಲ, ಹಿಂದುಗಳನ್ನು ಪ್ರಚೋದಿಸಲು ಗೋವನ್ನು ಕಡಿಯುವುದು ಸಮಸ್ಯೆಯಾದರೂ, ಯಾರೋ ಅದರ ಮಾಂಸಕ್ಕಾಗಿ ವಧೆ ಮಾಡಿದರೆ ತೊಂದರೆಯೇನಿಲ್ಲ ಎಂಬುದು ಅವರ ನಿಲುವಾಗಿತ್ತು. ಆರ್‌ಎಸ್‌ಎಸ್‌, ಮಾತೃಭೂಮಿಯ ಪರಿಕಲ್ಪನೆ ಹೊಂದಿದ್ದರೆ ಸಾವರ್ಕರ್ ಪಿತೃಭೂಮಿಯನ್ನು ಪ್ರತಿಪಾದಿಸಿದರು.

ಆರ್‌ಎಸ್‌ಎಸ್‌ ಕಾರ್ಯವೈಖರಿ ಸೇರಿ ಅನೇಕ ವಿಚಾರಗಳಲ್ಲಿ ಸಾವರ್ಕರ್ ಭಿನ್ನಾಭಿಪ್ರಾಯ ಹೊಂದಿದ್ದರು. ಹಾಗಾಗಿಯೇ ಅವರು ಆರ್‌ಎಸ್‌ಎಸ್‌ ಸೇರಿಕೊಳ್ಳಲಿಲ್ಲ. ಆದರೆ ಆರ್‌ಎಸ್‌ಎಸ್‌ ಎಂದಿಗೂ ಸಾವರ್ಕರರನ್ನು ದೂರ ಇಡಲಿಲ್ಲ. ತನ್ನ ಸೈದ್ಧಾಂತಿಕ ನಿಲುವಿನಲ್ಲಿ ವಿರೋಧಗಳಿದ್ದರೂ ಸಾವರ್ಕರರು ದೇಶಕ್ಕೆ ನೀಡಿದ ಕೊಡುಗೆ, ತ್ಯಾಗಗಳನ್ನು ನೆನೆಯುವ ಕಾರ್ಯವನ್ನು ಮಾಡಲಾಗುತ್ತಿದೆ.

ಇಂದು ದೇಶದಲ್ಲಿ ಆಗಬೇಕಾದ್ದು ಇಂತಹದ್ದೇ ಮಾನಸಿಕತೆ. ಭಗತ್ ಸಿಂಗ್ ಮಾರ್ಕ್ಸ್ ಸಿದ್ಧಾಂತವನ್ನು ಒಪ್ಪಿದ್ದಕ್ಕೆ ನೆಚ್ಚಿಕೊಳ್ಳುವ ಕಮ್ಯುನಿಸ್ಟರು ಉಳಿದವರನ್ನು ದೂರ ಇಡುವಂತಾಗಬಾರದು. ಸ್ವಾತಂತ್ರ್ಯ ಹೋರಾಟಗಾರರನ್ನು ತಮ್ಮ ಸಿದ್ಧಾಂತಕ್ಕೆ ಸೀಮಿತವಾಗಿ ಸ್ವೀಕಾರ ಮಾಡುವುದು, ತಿರಸ್ಕಾರ ಮಾಡುವುದು ಸಲ್ಲ. ಸ್ವತಃ ಸ್ವಾತಂತ್ರ್ಯ ಹೋರಾಟಗಾರರಲ್ಲೇ ಇಲ್ಲದ ಅಂತರ, ಭಿನ್ನಾಭಿಪ್ರಾಯಗಳನ್ನು ಈಗಿನ ಸಮಾಜ ಕೃತಕವಾಗಿ ಸೃಷ್ಟಿಸಿಕೊಂಡು ಒಬ್ಬರನ್ನೊಬ್ಬರು ಅವಮಾನಿಸುತ್ತ ತಿರುಗುವುದು ಸರಿಯಲ್ಲ. “ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಮ್ । ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ” (ಆಕಾಶದಿಂದ ಬಿದ್ದ ಮಳೆಯ ನೀರು ಪುನಃ ಸಮುದ್ರವನ್ನೇ ಸೇರುವಂತೆ, ಎಲ್ಲ ದೇವರನ್ನೂ ಕುರಿತು ಮಾಡಿದ ಪೂಜೆ ಕೊನೆಗೆ ಕೇಶವನನ್ನೇ ಸೇರುತ್ತದೆ) ಎನ್ನುವಂತೆ, ನಮ್ಮೆಲ್ಲ ಪೂರ್ವಜರು ಸ್ವಾತಂತ್ರ್ಯ ಎನ್ನುವ ಒಂದೇ ಸಾಗರದ ಕಡೆಗೆ, ಸತ್ಯದೆಡೆಗೆ ನಡೆದವರು. ಅವರಲ್ಲಿ ಭಿನ್ನವನ್ನು ಎಣಿಸುವುದು, ನಮ್ಮ ಇತಿಹಾಸಕ್ಕೆ ಮಾಡಿಕೊಳ್ಳುವ ಅವಮಾನವೇ ಸರಿ.

ಇದನ್ನೂ ಓದಿ | ಸವಿಸ್ತಾರ ಅಂಕಣ | ಇತಿಹಾಸದ ಕಣ್ತೆರೆಸಿ ಸ್ವಾತಂತ್ರ್ಯ ಜ್ಯೋತಿ ಬೆಳಗಿಸಿದವರು ಸಾವರ್ಕ

Exit mobile version