ಪಿಎಫ್ಐ ಅನ್ನು ಬ್ಯಾನ್ ಮಾಡಿದ ಕೂಡಲೆ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು, ಆರ್‌ಎಸ್ಎಸ್ ಬ್ಯಾನ್ ಮಾಡಿ ಎನ್ನಲಾರಂಭಿಸುತ್ತಾರೆ. ಇದೊಂದು ರೀತಿಯಲ್ಲಿ ಪೊಲಿಟಿಕಲಿ ಕರೆಕ್ಟ್ ಆಗಿರುವ ಪ್ರಯತ್ನವಷ್ಟೆ. ಅಂದರೆ, ತನ್ನಿಂದ ಬೈಸಿಕೊಂಡ “ತಪ್ಪು ಮಾಡಿದ ಮಗ” ಬೇಸರ ಮಾಡಿಕೊಳ್ಳದಿರಲಿ ಎಂದು, ತಪ್ಪೇ ಮಾಡದ ಮಗನಿಗೂ ಅಪ್ಪನೊಬ್ಬ ಬೈದಂತೆ.
ಇಂಥಾ ಕರೆಕ್ಟ್‌ನೆಸ್‌ಗಳಲ್ಲಿ, ವಿನಕಾರಣ ಓಲೈಕೆ ಇರುತ್ತದೆ. ಹೆಚ್ಚೆಂದರೆ ಸುದ್ದಿಗೆ ಆಹಾರ ನೀಡುವ ಸರಕನ್ನಷ್ಟೇ ಕಾಣಬಹುದು. ಸತ್ಯಾಂಶ ಬೇರೆಯದ್ದೇ ಆಗಿರುತ್ತದೆ. 1925ರಲ್ಲಿ ಆರಂಭವಾಗಿ ಇನ್ನೇನು 100 ವರ್ಷ ಸಮೀಪಿಸುತ್ತಿರುವ ಆರ್‌ಎಸ್ಎಸ್‌ಗೆ ಬ್ಯಾನ್ ಭೀತಿ ಹೊಸದೇನಲ್ಲ. ತನ್ನ ಆರಂಭಿಕ ದಿನಗಳಲ್ಲಿಯೇ ಇಂಥವುಗಳನ್ನು ಎದುರಿಸಿದೆ ಹಾಗೂ ಎದುರಿಸುತ್ತಲೇ ಗಟ್ಟಿಯಾಗಿ ಬೆಳೆದಿದೆ. ಮೊದಲಿಗೆ ಗಾಂಧೀಜಿ ಹತ್ಯೆ ಪ್ರಕರಣದಲ್ಲಿ, ನಂತರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂಘವನ್ನು ನಿಷೇಧ ಮಾಡಲಾಗಿತ್ತು. ನಂತರ ಯಥಾವಿಧಿ, ಕಾನೂನು ಪಾಲನೆಯ ತನ್ನ ಬದ್ಧತೆಯನ್ನು ಸಾಕ್ಷೀಕರಿಸಿ ತನ್ನ ನಿಷೇಧವನ್ನು ಆರ್‌ಎಸ್ಎಸ್ ತೆರವುಗೊಳಿಸಿಕೊಂಡಿದೆ.
ಹಾಗೆಂದ ಮಾತ್ರಕ್ಕೆ ಯಾವುದೇ ಸಂಘಟನೆಯನ್ನು ಮತ್ತೆ ನಿಷೇಧ ಮಾಡಬಾರದು ಎಂದಲ್ಲ. ಅದಕ್ಕೆ ಸೂಕ್ತ ಕಾರಣಗಳು ಬೇಕಾಗುತ್ತದೆ. ಕಾಂಗ್ರೆಸ್ ಮುಖಂಡರು ಹೇಳಿದ ಕೂಡಲೆ ಬ್ಯಾನ್ ಮಾಡುವುದಕ್ಕೆ ಭಾರತ ಬನಾನಾ ರಿಪಬ್ಲಿಕ್ ಅಲ್ಲ. ಇದು ಸಂವಿಧಾನಕ್ಕೆ ಅನುಸಾರವಾಗಿ ನಡೆಯುತ್ತಿರುವ, ಜಗತ್ತಿನ ಅತಿದೊಡ್ಡ ರಿಪಬ್ಲಿಕ್ !
ಈಗ ಮುಖ್ಯ ವಿಷಯಕ್ಕೆ ಬರೋಣ. ಆರ್‌ಎಸ್ಎಸ್ ಬ್ಯಾನ್ ಮಾಡಿ ಎಂದು ಆಗಾಗ್ಗೆ ಹೇಳುವ ಸಿದ್ದರಾಮಯ್ಯ ಅವರಿಗಾಗಲಿ, ಕಾಂಗ್ರೆಸ್‌ನ ಇತರೆ ನಾಯಕರಿಗಾಗಲಿ ಕಾನೂನು ಗೊತ್ತಿಲ್ಲವೇ? ಸ್ವತಃ ಸಿದ್ದರಾಮಯ್ಯ ವಕೀಲಿಕೆ ಓದಿದವರು. ಕಾನೂನು ಪ್ರಕ್ರಿಯೆಯ ಪ್ರಾಥಮಿಕ ಸಂಗತಿಯಾದರೂ ಗೊತ್ತಿರುತ್ತದೆ. ಆದರೂ ಏಕೆ ಈ ರೀತಿ ಮಾತನಾಡುತ್ತಾರೆ? ಇದನ್ನೇ ತುಷ್ಟೀಕರಣ ಎನ್ನುವುದು !
ಇಂಥಾ ತುಷ್ಟೀಕರಣದಿಂದಾಗಿಯೇ ಭಾರತದಲ್ಲಿ ಮುಸ್ಲಿಂ ಲೀಗ್ ಹುಟ್ಟಿತು. ಅಂದಿನ, ಅಖಂಡ ಭಾರತದ ಭಾಗವೇ ಆಗಿದ್ದ ಢಾಕಾದಲ್ಲಿ (ಈಗಿನ ಬಾಂಗ್ಲಾದೇಶ) 1906ರ ಡಿಸೆಂಬರ್ 30ರಂದು ಆಲ್ ಇಂಡಿಯಾ ಮುಸ್ಲಿಂ ಲೀಗ್ (ಎಐಎಂಎಲ್) ಜನ್ಮ ತಾಳಿತು. ಸೈಯದ್ ಅಹಮದ್ ಖಾನ್ ಆಲೋಚನೆಯಲ್ಲಿ 1886ರಲ್ಲಿ ಸ್ಥಾಪನೆಯಾಗಿದ್ದ ಮೊಹಮ್ಮದನ್ ಎಜುಕೇಷನಲ್ ಕಾನ್ಫರೆನ್ಸ್ ಮುಂದುವರಿಕೆಯಾಗಿ ಎಐಎಂಎಲ್ ಸ್ಥಾಪನೆ ಆಯಿತು. ಮೊಹಮ್ಮದನ್ ಎಜುಕೇಷನಲ್ ಕಾನ್ಫರೆನ್ಸ್ ಸಂಘಟನೆಯು, “ಸಮುದಾಯದ ಅನುಕೂಲಕ್ಕಾಗಿ” ಬ್ರಿಟಿಷರೊಂದಿಗೆ ಉತ್ತಮ ಸಂಬಂಧ ಇರಿಸಿಕೊಳ್ಳಲು ಸೂಚಿಸಲಾಗಿತ್ತು. ರಾಜಕೀಯದಿಂದ ಸಂಪೂರ್ಣ ದೂರವೇ ಉಳಿದಿದ್ದ ಸಂಘಟನೆ, 1906ರಲ್ಲಿ ನಡೆದ ಸಮಾವೇಶದಲ್ಲಿ ರಾಜಕೀಯ ಪ್ರತಿಬಂಧವನ್ನು ತೆಗೆಯುವ ಮೂಲಕ ಎಐಎಂಎಲ್ ಆರಂಭವಾಯಿತು.
ಎಐಎಂಎಲ್ ಸ್ಥಾಪನೆಗೆ ಇದ್ದ ಮುಖ್ಯ ಕಾರಣ, ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯದ ಅವಶ್ಯಕತೆಗಳನ್ನು ಆಲಿಸುತ್ತಿಲ್ಲ ಹಾಗೂ ಅದರ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂಬ ಕೊರಗು. 1913ರಲ್ಲಿ ಈ ಪಕ್ಷಕ್ಕೆ ಮೊಹಮ್ಮದ್ ಆಲಿ ಜಿನ್ನಾ ಸೇರಿಕೊಂಡರು. ಬಳಿಕ ಸ್ವತಂತ್ರ ಸರ್ಕಾರವನ್ನು ಸ್ಥಾಪಿಸುವ ಕಾಂಗ್ರೆಸ್ ಹೋರಾಟದಿಂದ ಎಐಎಂಎಲ್ ಸಂಪೂರ್ಣ ವಿಮುಖವಾಯಿತು. ಜತೆಗೆ, ದೇಶದಲ್ಲಿ ಬೆಳೆಯುತ್ತಿದ್ದ ರಾಷ್ಟ್ರೀಯತೆಯನ್ನು ಹತ್ತಿಕ್ಕಲು ಬ್ರಿಟಿಷ್ ಸರ್ಕಾರಕ್ಕೆ ಸಹಾಯ ಮಾಡಿತು. ತಮಗೆ ಉತ್ತಮ ಸೌಕರ್ಯ-ಸವಲತ್ತು ಬೇಕು ಎನ್ನುವುದಕ್ಕೆ ಸೀಮಿತವಾಗಿದ್ದ ಮುಸ್ಲಿಮರ ಮನಸ್ಸಿನಲ್ಲಿ ದ್ವಿರಾಷ್ಟ್ರದ ಬೀಜವನ್ನುಕೆಲವು ಮುಖಂಡರು ವ್ಯವಸ್ಥಿತವಾಗಿ ಬಿತ್ತಿದರು. 1940ರಲ್ಲಿ ಈ ಆಲೋಚನೆಗೆ ಸ್ಪಷ್ಟ ರೂಪ ನೀಡಿದವರು ಜಿನ್ನಾ. ಜಿನ್ನಾ ಮಾತನ್ನು ವಿರೋಧಿಸಿದ ಕೆಲ ಮುಸ್ಲಿಂ ಮುಖಂಡರು ಪ್ರತ್ಯೇಕಗೊಂಡು ಆಲ್ ಇಂಡಿಯಾ ಜಮ್ಹೂರ್ ಮುಸ್ಲಿಂ ಲೀಗ್(ಎಐಜೆಎಂಎಲ್) ಸ್ಥಾಪಿಸಿಕೊಂಡರು, ನಂತರ ಈ ಬಣವು ಕಾಂಗ್ರೆಸ್‌ನಲ್ಲಿ ವಿಲೀನವಾಯಿತು.
ಅಸಲಿಗೆ ಮುಸ್ಲಿಂ ಲೀಗ್‌ಗೆ ಭಾರತದ ಎಲ್ಲ ಮುಸ್ಲಿಮರೂ ಬೆಂಬಲ ನೀಡಿರಲಿಲ್ಲ. 1937ರಲ್ಲಿ ಮುಸ್ಲಿಂ ಲೀಗ್, ಭಾರತದ ಯಾವುದೇ ಪ್ರಾಂತ್ಯದಲ್ಲಿ ಸರ್ಕಾರ ರಚಿಸಲು ವಿಫಲವಾಯಿತು. ಅಷ್ಟೇ ಅಲ್ಲ, 125 ನಾನ್ ಜನರಲ್ ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳನ್ನು ಮುಸ್ಲಿಮರಿಗೆ ಮೀಸಲಿಡಲಾಗಿತ್ತು. ಅದರಲ್ಲೂ 25ರಲ್ಲಿ ಕಾಂಗ್ರೆಸ್ಸಿನ ಮುಸ್ಲಿಂ ಅಭ್ಯರ್ಥಿಗಳೇ ಜಯಿಸಿದ್ದರು. ಅದರಲ್ಲೂ 15 ಸೀಟುಗಳು, ಮುಸ್ಲಿಮರೇ ಪ್ರಬಲವಾಗಿದ್ದ ವಾಯವ್ಯ ಪ್ರಾಂತ್ಯದಿಂದಲೇ ಕಾಂಗ್ರೆಸ್‌ಗೆ ಲಭಿಸಿದ್ದವು. ಆದರೂ ಪ್ರತ್ಯೇಕತಾ ಭಾವವನ್ನೇ ಮುಂದುವರಿಸಿದ ಮುಸ್ಲಿಂ ಲೀಗ್, ಬ್ರಿಟಿಷರನ್ನು ಓಲೈಸಿ ಒಪ್ಪಿಸಿ 1947ರಲ್ಲಿ ಪ್ರತ್ಯೇಕ ದೇಶ ರಚಿಸಿಕೊಂಡಿತು. ಪ್ರತ್ಯೇಕ ದೇಶವಾಗಲು ಕಾಂಗ್ರೆಸ್ ವಿರೋಧ ಮಾಡುತ್ತಲೇ ಇತ್ತು ಎನ್ನುವುದು ಸತ್ಯವಾದರೂ, ಪ್ರಾರಂಭದಿಂದಲೂ ಮುಸ್ಲಿಂ ಪ್ರತ್ಯೇಕತಾವಾದಕ್ಕೆ ನೀರೆರೆದು ಪೋಷಿಸಿದ ಹೊಣೆಯನ್ನು ಕಾಂಗ್ರೆಸ್ ಪಕ್ಷವೇ ಹೊರಬೇಕಾಗುತ್ತದೆ.
ಸ್ವಾತಂತ್ರ್ಯಾನಂತರ ಅನಧಿಕೃತವಾಗಿ ಭಾರತದಲ್ಲಿ ಆಲ್ ಇಂಡಿಯಾ ಮುಸ್ಲಿಂ ಲೀಗ್ ಅನ್ನು ನಿಷ್ಕ್ರಿಯಗೊಳಿಸಲಾಯಿತಾದರೂ ಅದರ ಒಂದು ಭಾಗವಾಗಿ ಇಂಡಿಯನ್ ಮುಸ್ಲಿಂ ಲೀಗ್ ಕೇರಳದಲ್ಲಿ ಅಸ್ತಿತ್ವ ಹೊಂದಿದೆ. ಪರಿಸ್ಥಿತಿಯ ವ್ಯಂಗ್ಯವೆಂದರೆ, ಕೇರಳದಲ್ಲಿ ಅಸ್ತಿತ್ವ ಹೊಂದಿರುವ ಇಂಡಿಯನ್ ಮುಸ್ಲಿಂ ಲೀಗ್ ಜತೆಗೆ ರಾಜಕೀಯವಾಗಿ ಕಾಂಗ್ರೆಸ್ ಪಕ್ಷ ಈಗಲೂ ಹೊಂದಾಣಿಕೆ ಮಾಡಿಕೊಂಡಿದೆ. ಒಂದೆಡೆ ಮುಸ್ಲಿಂ ಲೀಗ್ ಧೋರಣೆಗಳನ್ನು ವಿರೋಧಿಸಿಕೊಂಡು ಬಂದ ಕಾಂಗ್ರೆಸ್ ಇದೀಗ ಅದೇ ಪಕ್ಷದೊಂದಿಗೆ ರಾಜಕೀಯ ವೇದಿಕೆ ಹಂಚಿಕೊಂಡಿದೆ. ಮೈತ್ರಿ ಮಾಡಿಕೊಂಡು ಕೇರಳದಲ್ಲಿ ಸರಕಾರವನ್ನೂ ರಚಿಸಿದೆ. ಇಷ್ಟಾದ ಮೇಲೂ- ಕೋಮುವಾದಿ ಪಕ್ಷಗಳೊಂದಿಗೆ ಬೆರೆಯಲಾರೆ ಎನ್ನುತ್ತದೆ !
ಇದೊಂದು ಉದಾಹರಣೆ ಅಷ್ಟೆ. ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರ ಮಾತು ಹಾಗೂ ಕೃತಿಗಳಲ್ಲಿ ಅಂತರ ಇರುವುದು ಅನೇಕ ಸಂದರ್ಭದಲ್ಲಿ ಕಂಡುಬರುತ್ತದೆ. ಒಂದೆಡೆ ದೇಶ, ರಾಷ್ಟ್ರೀಯತೆ ಎಂದು ಮಾತನಾಡುತ್ತಲೇ ಮತ್ತೊಂದೆಡೆ ಮೃದು ಮುಸ್ಲಿಂ ತೀವ್ರವಾದವನ್ನು ಒಳಗೊಳಗೆ ಬೆಂಬಲಿಸುತ್ತದೆ. ಜತೆಗೆ, ಮುಸ್ಲಿಂ ಮೂಲಭೂತವಾದವನ್ನು ತೀವ್ರಗೊಳಿಸುವ ಸಂಸ್ಥೆಗಳೊಂದಿಗೆ ಸಂಬಂಧ ಇರಿಸಿಕೊಂಡಿದೆ !
ಬಹುಶಃ ಈ ಇಬ್ಬಂದಿ ನೀತಿಯಿಂದಾಗಿಯೇ ಕಾಂಗ್ರೆಸ್ ಪಕ್ಷ ಇಂದು ಈ ಸ್ಥಿತಿ ತಲುಪಿದೆ. ಒಂದೆಡೆ ಹಿಂದುಗಳನ್ನೂ ಬೆಂಬಲಿಸದೆ ಅತ್ತ ಮುಸ್ಲಿಮರಲ್ಲೂ ಪೂರ್ಣ ಸ್ವೀಕಾರವಾಗದೆ ಅತಂತ್ರವಾಗಿಯೇ ಮುಂದುವರಿದಿದೆ. ಮುಸ್ಲಿಂ ಸಮುದಾಯ ಮಾತ್ರವೇ ಅಲ್ಲ, ಕ್ರೈಸ್ತರೊಂದಿಗೂ ಕಾಂಗ್ರೆಸ್ಸಿನದ್ದು ಇದೇ ಸಂಬಂಧ.
ಇದನ್ನೂ ಓದಿ | ಸವಿಸ್ತಾರ ಅಂಕಣ | ‘ಭಾರತದ ಜಾತ್ಯತೀತತೆʼ ಎನ್ನುವುದು ʼತುಷ್ಟೀಕರಣʼಕ್ಕೆ ಹೊದಿಸಿದ ಕವಚ
ಕ್ರೈಸ್ತ ಸಮುದಾಯದವರು ಮತಾಂತರ ಮಾಡುವ ಸಂದರ್ಭದಲ್ಲಿ ಹಿಂದು ದೇವಾನುದೇವತೆಗಳನ್ನು ಹೀಯಾಳಿಸುವುದು ಹೊಸತೇನಲ್ಲ. ಅವರು ಅಲ್ಲಲ್ಲಿ ಬೃಹತ್ ಪ್ರಮಾಣದಲ್ಲಿ ನಡೆಸುವ ‘ಸುವಾರ್ತೆʼ ಕೂಟಗಳಲ್ಲಿ ಮೂಢನಂಬಿಕೆ ಬಿತ್ತುವುದು ಬಿಟ್ಟು ಬೇರೆ ಏನೂ ಇರುವುದಿಲ್ಲ. ಕೈ ಕಾಲಿಲ್ಲದವ ಇದ್ದಕ್ಕಿದ್ದಂತೆ ಎದ್ದು ಓಡುವ ವಿಡಿಯೋಗಳ ಮೂಲಕ ಸಮಾಜದಲ್ಲಿ ಮೌಢ್ಯವನ್ನೇ ಬಿತ್ತುವ ಈ ಸಂಘಟನೆಗಳಿಗೂ ಭಾರತದಲ್ಲಿ ರಾಜಕೀಯ ಅಸ್ತಿತ್ವ ನೀಡಿರುವುದೇ ಕಾಂಗ್ರೆಸ್. ಯಾವುದೇ ಧರ್ಮವನ್ನು ನಿಂದನೆ ಮಾಡಬಾರದು, ಭಾರತದಲ್ಲಿ ಭ್ರಾತೃತ್ವ ಭಾವನೆ ಹೊಂದಬೇಕು ಎಂದು ಸಂವಿಧಾನವನ್ನು ಉದಾಹರಿಸುವ ಕಾಂಗ್ರೆಸ್ ನಾಯಕರ ಉಪದೇಶ, ಈ ಹಿಂದೆಯೇ ತಿಳಿಸಿರುವಂತೆ ಹಿಂದುಗಳಿಗೆ ಮಾತ್ರವೇ ಸೀಮಿತವಾಗಿರುತ್ತದೆ. ಬೆನ್ನಿ ಹಿನ್‌ನಂಥ ಕ್ರೈಸ್ತ ಪುರೋಹಿತಶಾಹಿಗಳ ಕಾರ್ಯಕ್ರಮಕ್ಕೆ ವೇದಿಕೆಯನ್ನೂ ನೀಡುವ ಕಾಂಗ್ರೆಸ್ ಮುಖಂಡರು, ತಾವೇ ಖುದ್ದಾಗಿ ಹೋಗಿ ಅಂಥ ಮೌಢ್ಯಗಳಿಗೆ ಸಾಕ್ಷಿಯಾಗುತ್ತಾರೆ !
ಮುಸ್ಲಿಂ ಸಮುದಾಯಕ್ಕೇ ದೂರಗಾಮಿಯಾಗಿ ಉಪಯೋಗವಾಗುವ ತ್ರಿವಳಿ ತಲಾಖ್ ನಿಷೇಧದ ಸಂದರ್ಭದಲ್ಲಿಯೂ ಕಾಂಗ್ರೆಸ್ ತುಷ್ಟೀಕರಣವನ್ನು ಬಿಡಲಿಲ್ಲ. ಮುಸ್ಲಿಂ ಮೂಲಭೂತವಾದಿ ಸಂಘಟನೆಗಳನ್ನೂ ಮೀರುವಂತೆ ಈ ಕಾನೂನನ್ನು ಕಾಂಗ್ರೆಸ್ ವಿರೋಧಿಸಿತು. ಹಿಜಾಬ್ ವಿಚಾರದಲ್ಲೂ ಅಷ್ಟೆ. ಮಾತು ಮಾತಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಕ್ಕೆ ಬದ್ಧ ಎನ್ನುವ ಕಾಂಗ್ರೆಸ್ ಪಕ್ಷಕ್ಕೆ, ಬುರ್ಖಾ, ಹಿಜಾಬ್ ಕುರಿತು ಅಂಬೇಡ್ಕರರು ಆಡಿದ ಮಾತುಗಳು ಕೇಳುತ್ತಲೇ ಇಲ್ಲ. ಮುಸ್ಲಿಂ ಮೂಲಭೂತವಾದ ಎನ್ನುವುದು ಭಾರತಕ್ಕೆ ಮಾತ್ರ ಸೀಮಿತವಾದ ವಿಚಾರವಲ್ಲ. ಅದು ಎಲ್ಲೆಲ್ಲೂ ಹಬ್ಬಿದ್ದು, ಇಡೀ ಜಗತ್ತಿನ ಕಣ್ಣಿಗೆ ರಾಚುವಂತೆ ಕಾಣುತ್ತಿದೆ. ಈ ಸತ್ಯವನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ಸುತಾರಾಂ ಸಿದ್ಧವಿಲ್ಲ ಎನ್ನುವುದೇ ವಿಪರ್ಯಾಸ.
ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಮುಸ್ಲಿಂ ಮೂಲಭೂತವಾದ ಬಲಗೊಂಡ ರೀತಿ, ಅದಕ್ಕೆ ಆಯಾ ದೇಶಗಳಲ್ಲಿ ಕಾಂಗ್ರೆಸ್ ರೀತಿಯ ರಾಜಕಾರಣಿಗಳು ನೀಡಿದ ಬೆಂಬಲ, ಅದೆಲ್ಲದರಿಂದ ಎದುರಾದ ಘೋರ ಪರಿಸ್ಥಿತಿಗಳ ಕುರಿತು ಮುಂದಿನ ಲೇಖನದಲ್ಲಿ ಚರ್ಚಿಸೋಣ.
ಕಡೆಯ ಮಾತು: ಯಾವಾಗಲೂ ಪೊಲಿಟಿಕಲಿ ಕರೆಕ್ಟ್ ಆಗಿರಲು, ಸದಾ ತುಷ್ಟೀಕರಣ ನೀತಿಯನ್ನೇ ಅಳವಡಿಸಿಕೊಂಡರೆ, ಕಾಲಾನುಕ್ರಮದಲ್ಲಿ ಅವಿವೇಕಿ ಮಗನೇ ತನ್ನನ್ನು ಓಲೈಸಿದ ಅಪ್ಪನ ವಿರುದ್ಧ ತಿರುಗಿ ಬೀಳುತ್ತಾನೇ. ತನ್ನನ್ನು ಸಂತೈಸಲೆಂದು ವಿವೇಕಿ ಮಗನಿಗೆ ವಿನಾಕಾರಣ ಬೈಯುವ ಬದಲು, ನನಗೆ ಕಿವಿ ಹಿಂಡಿದ್ದರೆ ನಾನೂ ವಿವೇಕಿಯಾಗುತ್ತಿದ್ದೆ ಎಂಬ ಸತ್ಯ ಅವಿವೇಕಿ ಮಗನಿಗೂ ಒಂದಲ್ಲ ಒಂದು ಕಾಲಕ್ಕೆ ಗೊತ್ತಾಗಿಯೇ ಗೊತ್ತಾಗುತ್ತದೆ !
ಇದನ್ನೂ ಓದಿ | ಸವಿಸ್ತಾರ ಅಂಕಣ | ನೆಹರೂ, ಗಾಂಧಿ, ಸಾವರ್ಕರ್ ಇತ್ಯಾದಿ: ನಡೆಯಲಿ ʼಸೀಮೋಲ್ಲಂಘನೆʼ, ನಿಲ್ಲಲಿ ʼಮೂರ್ತಿ ಭಂಜನೆʼ