Site icon Vistara News

ಸವಿಸ್ತಾರ ಅಂಕಣ | ‘ಭಾರತದ ಜಾತ್ಯತೀತತೆʼ ಎನ್ನುವುದು ʼತುಷ್ಟೀಕರಣʼಕ್ಕೆ ಹೊದಿಸಿದ ಕವಚ

secularism

ದೇಶಾದ್ಯಂತ ಉಗ್ರ ಚಟುವಟಿಕೆ, ದೇಶವಿರೋಧಿ ಕೃತ್ಯ ನಡೆಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತು ಅದರ ಸಹ ಸಂಘಟನೆಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಸರಕಾರ ಇಂಥದ್ದೊಂದು ಕ್ರಮ ಕೈಗೊಂಡರೆ ಅಲ್ಲೋಲ ಕಲ್ಲೋಲ ಆಗುತ್ತದೆ ಎಂದು ಎಣಿಸುತ್ತಾ ಕುಳಿತಿದ್ದ ಜನರೆಲ್ಲರೂ ಅಚ್ಚರಿ ಪಡುವಂತೆ, ಸಮಾಜ ಈ ಪ್ರಕ್ರಿಯೆಗೆ ಸ್ಪಂದಿಸಿದೆ. ಬ್ಯಾನ್ ನಂತರ ಯಾವುದೇ ಹಿಂಸೆ, ಗಲಭೆ, ಕಾನೂನು ಸುವ್ಯವಸ್ಥೆಗೆ ಭಂಗ ಆಗದಂತೆ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ. ಇದೇ ರೀತಿ ಪರಿಸ್ಥಿತಿ ಜಮ್ಮು ಕಾಶ್ಮೀರದಲ್ಲೂ ಮೂರು ವರ್ಷಗಳ ಹಿಂದೆ ಉದ್ಭವಿಸಿತ್ತು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸವಲತ್ತು ಒದಗಿಸುವ ಆರ್ಟಿಕಲ್ 370 ರದ್ದು ಪಡಿಸಿದಾಗಲೂ, ಕಣಿವೆಯಲ್ಲಿ ಕೋಲಾಹಲವೇ ಆಗುತ್ತದೆ ಎಂದೆಲ್ಲಾ ಈ ದೇಶದ ಒಂದಿಷ್ಟು ಮಂದಿ ಕಾದು ಕುಳಿತಿದ್ದರು. 370 ಅನ್ನು ಮುಟ್ಟಿ ನೋಡಿ ಎಂದೆಲ್ಲ ಸವಾಲು ಎಸೆಯುತ್ತಿದ್ದರು. ಆದರೆ ಕೇಂದ್ರ ಸರ್ಕಾರ ಗಟ್ಟಿ ಮನಸ್ಸು ಮಾಡಿ ಆ ವಿಧಿಯನ್ನು ಹೇಳ ಹೆಸರಿಲ್ಲದಂತೆ ಮಾಡಿದಾಗ, ಕಾದು ಕುಳಿತವರು ನಿರೀಕ್ಷಿಸಿದಂಥ ಅನಾಹುತವೇನೂ ಆಗಿಲ್ಲ. ಮೊದಲನೆಯದಾಗಿ ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮ ಇದಕ್ಕೆ ಕಾರಣ. ಇದಕ್ಕಿಂತ ಪ್ರಮುಖವಾದ ಕಾರಣ, ಜನ ಸರಕಾರದ ನಿರ್ಧಾರವನ್ನು ಬೆಂಬಲಿಸಿದರು. ಹಾಗಾಗಿ, ಆರ್ಟಿಕಲ್ 370 ಹಾಗೂ ಈಗ ಪಿಎಫ್ಐ ಬ್ಯಾನ್ ಎಂಬ ವಿದ್ಯಮಾನಗಳು, ಒಂದು ಸಮಾಜದ ಅಪೇಕ್ಷಿತ ಪ್ರಕ್ರಿಯೆಯಾಗಿ ಸಂದು ಹೋಯಿತು!

ಯಾವುದೇ ದೇಶದ ಜನರಿಗೆ ನೆಮ್ಮದಿಯ ಜೀವನ ಬೇಕು. ಇಹಲೋಕದಲ್ಲಿ ನೆಮ್ಮದಿಯೇ ಮೊದಲ ಆದ್ಯತೆ. ಇಹಲೋಕದಲ್ಲಿ ತಾವು ನೆಮ್ಮದಿಯಾಗಿದ್ದು, ಇತರರನ್ನೂ ನೆಮ್ಮದಿಯಾಗಿರಲು ಇಟ್ಟರೆ ಪರಲೋಕದಲ್ಲೂ ನೆಮ್ಮದಿ, ಮುಕ್ತಿ ದೊರಕುತ್ತದೆ ಎನ್ನುವುದು ಕರ್ಮಸಿದ್ಧಾಂತ. ಈಗ ಪಿಎಫ್ಐ ವಿಚಾರದಲ್ಲೂ ನಾಗರಿಕರು ಅದನ್ನೇ ಮಾಡುತ್ತಿದ್ದಾರೆ. ಪಿಎಫ್ಐ ಸಂಘಟನೆಯ ಸಮಾಜ ಘಾತುಕ ಕೃತ್ಯಗಳು, ಅವರ ಹಾವಳಿಯನ್ನು ಕಂಡು ಬೇಸತ್ತಿದ್ದ ನಾಗರಿಕರು ಅತ್ಯಂತ ಹರ್ಷದಿಂದ ಇದನ್ನು ಸ್ವಾಗತಿಸಿದ್ದಾರೆ. ಆದರೆ ಇಲ್ಲೊಂದು ರಾಜಕೀಯ ವರ್ಗ, ಅದರ ಹಿಂಬಾಲಕರು ಹಾಗೂ ಕೆಲ ಸೈದ್ಧಾಂತಿಕ ಆಸ್ಥಾನ ಪಂಡಿತರಿಗೆ ಇದು ಬೇಸರ ತರಿಸಿದೆ. ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಕೆಲವರಿಗೆ ಅದೇಕೊ ಪಿಎಫ್ಐ ಬ್ಯಾನ್ ಮಾಡಿದ್ದು ತಾಳಲಾಗುತ್ತಿಲ್ಲ. ತಮಗೇನೋ ಬಹಳ ಸಂಕಟವಾಗುತ್ತಿದೆ ಎಂಬಂತೆ ವರ್ತಿಸುತ್ತಿದ್ದಾರೆ. ಅವರಿಗೆ ಎಲ್ಲವೂ ಬ್ಯಾಲೆನ್ಸ್ ಆಗಿರಬೇಕು ! ಅವರ ಪ್ರಕಾರ ಪಿಎಫ್ಐ ಎನ್ನುವುದು ಮುಸ್ಲಿಮರಿಗೆ ಸಂಬಂಧಿಸಿದ ಸಂಘಟನೆ. ಹಾಗಾಗಿ ಹಿಂದುಗಳಿಗೆ ಸೇರಿದ ಸಂಘಟನೆಯನ್ನೂ ಬ್ಯಾನ್ ಮಾಡಿದರೆ ಎಲ್ಲವೂ ಬ್ಯಾಲೆನ್ಸ್ ಆಗುತ್ತದೆ. “ಒಂದು ಬಲಿಗೆ, ಮತ್ತೊಂದು ಬಲಿ ಪಡೆಯುವುದು, ಬೇಕಿಲ್ಲದಿದ್ದರೂ, ಅರ್ಹರಲ್ಲದಿದ್ದರೂ ಬಲಿ ಪಡೆದೇ ತೀರುವುದು,” ಎಂಬ ಪಂಚತಂತ್ರದ ಕುಟಿಲ ನೀತಿಯನ್ನು ಮೈಗಿಳಿಸಿಕೊಂಡಿದ್ದಾರೆ.

ಇದೇ ಜಾತ್ಯತೀತತೆ ಎನ್ನುವುದು ಅವರ ಭ್ರಮೆ. ಪಿಎಫ್ಐ ಒಂದು ದೇಶವಿರೋಧಿ ಸಂಘಟನೆ ಎನ್ನುವುದಕ್ಕಿಂತಲೂ ಅವರ ಕಣ್ಣಿಗೆ ಅದು ಮುಸ್ಲಿಂ ಸಂಘಟನೆಯಾಗಿ ಕಾಣುತ್ತಿದೆ. ಇದಕ್ಕಿಂತ ದುರಂತ ಎಂದರೆ, ಈ ಸಂಘಟನೆಗಳು ಮುಸ್ಲಿಂ ವೋಟ್ ಬ್ಯಾಂಕ್ ಆಗಿ ಗೋಚರಿಸಿದೆ ! ಅವರ ಪ್ರಕಾರ ಇದು ಪಕ್ಷಪಾತಿ ವಕ್ರದೃಷ್ಟಿಯಲ್ಲ, ಇದೊಂದು ಜಾತ್ಯತೀತ ತತ್ತ್ವ !

ಇದನ್ನೂ ಓದಿ | ಸವಿಸ್ತಾರ ಅಂಕಣ | ನೆಹರೂ, ಗಾಂಧಿ, ಸಾವರ್ಕರ್ ಇತ್ಯಾದಿ: ನಡೆಯಲಿ ʼಸೀಮೋಲ್ಲಂಘನೆʼ, ನಿಲ್ಲಲಿ ʼಮೂರ್ತಿ ಭಂಜನೆʼ

ಈ ಸಮಸ್ಯೆ ಎಲ್ಲಿಂದ ಬಂತು? ಅದು ಹೇಗೆ ಅನ್ವಯವಾಯಿತು ಎನ್ನುವುದನ್ನು ಅರಿಯದೇ ಇದ್ದರೆ ಪರಿಹಾರವೂ ಲಭಿಸುವುದಿಲ್ಲ. ಈ ನಿಟ್ಟಿನಲ್ಲಿ ಸ್ವಲ್ಪ ಇತಿಹಾಸಕ್ಕೆ ಹೊರಳೋಣ.

ಐರೋಪ್ಯ ಸಮಸ್ಯೆಗೆ ಪರಿಹಾರ ಸೆಕ್ಯುಲರಿಸಂ

ಈ ಜಾತ್ಯತೀತತೆ ಎನ್ನುವುದು ಎಲ್ಲಿಂದ ಬಂತು ಎಂಬುದನ್ನು ನೋಡಿದರೆ ಅದರ ಮೂಲ ವಿಚಾರ ತಿಳಿಯುತ್ತದೆ. 4ರಿಂದ 18ನೇ ಶತಮಾನದವರೆಗೆ ಪಾಶ್ಚಾತ್ಯ ಜಗತ್ತಿನಲ್ಲಿ, ವಿಶೇಷವಾಗಿ ಯುರೋಪಿನಲ್ಲಿ ಚರ್ಚುಗಳು ಪ್ರಬಲವಾಗಿದ್ದವು. ಅವುಗಳೇ ಸಮಾಜವನ್ನು ನಿಯಂತ್ರಣ ಮಾಡುತ್ತಿದ್ದವು. ಆದರೆ ನೇರವಾಗಿ ಅಲ್ಲ, ಸ್ಟೇಟ್(ಪ್ರಭುತ್ವದ) ಮೂಲಕ. ಸ್ಟೇಟ್‌ಗಳಿಗೆ ಎರಡು ಕೆಲಸ ಇತ್ತು. ಮೊದಲನೆಯದು ನಾಗರಿಕರು ಉತ್ತಮ ಜೀವನ ನಡೆಸುವಂತೆ ನೋಡಿಕೊಳ್ಳುವುದು. ಎರಡನೆಯದು, ಅವರು ಕ್ರಿಶ್ಚಿಯನ್ ಪದ್ಧತಿಗಳನ್ನು ಅನುಸರಿಸುತ್ತಲೇ, ಮರಣದ ನಂತರ ಮೋಕ್ಷ(ಸಾಲ್ವೇಷನ್) ಗಳಿಸುವಂತೆ ಮಾಡುವುದು. ಯಾವುದೇ ವ್ಯಕ್ತಿ ಕ್ರಿಶ್ಚಿಯನ್ ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದರೆ ಅಂಥವರ ಮೋಕ್ಷದ ಬಾಗಿಲುಗಳನ್ನು ಚರ್ಚ್ ಮುಚ್ಚಿಬಿಡುತ್ತಿತ್ತು. ಅಂಥವರಿಗೆ ಶಿಕ್ಷೆ ವಿಧಿಸುವ ಆದೇಶವನ್ನು ಸ್ಟೇಟ್‌ನಿಂದ ಚರ್ಚ್ ಪಡೆದಿರುತ್ತಿತ್ತು !

ಆದರೆ 19ನೇ ಶತಮಾನದ ವೇಳೆಗೆ ಅದೇಕೊ ಚರ್ಚ್ ಮತ್ತು ಸ್ಟೇಟ್ ನಡುವೆ ಸಂಘರ್ಷ ಏರ್ಪಟ್ಟಿತು. ತನ್ನ ಮೇಲೆ ಚರ್ಚ್ ದಬ್ಬಾಳಿಕೆ ನಡೆಸುತ್ತಿದೆ ಎಂದು ಪ್ರಭುತ್ವದ ಚುಕ್ಕಾಣಿ ಹಿಡಿದ ರಾಜಕಾರಣಿಗಳಿಗೆ ಅನುಮಾನ ಬಂತು. ನಾಗರಿಕರ ಹಿತರಕ್ಷಣೆ ಮಾಡುವುದಷ್ಟೆ ನಮ್ಮ ಕೆಲಸ. ಅವರಿಗೆ ಮೋಕ್ಷ ನೀಡುವುದು ನಮ್ಮ ಕರ್ತವ್ಯವೇ ಅಲ್ಲ. ಇಂಥ ಮತೀಯ (ರಿಲೀಜನ್) ವಿಚಾರಗಳಿಂದ ಸರ್ಕಾರ ದೂರ ಇರಬೇಕು ಎಂದು ಭಾವಿಸಿದರು. ಆಗ ಹುಟ್ಟಿಕೊಂಡಿದ್ದೇ ಈ ಸೆಕ್ಯುಲರಿಸಂ ಎಂಬ ಪದ ! ಇದನ್ನೇ ಭಾರತದಲ್ಲಿ ಧರ್ಮ ನಿರಪೇಕ್ಷತೆ, ಸರ್ವಧರ್ಮ ಸಮಭಾವ, ಜಾತ್ಯತೀತತೆ ಎಂಬೆಲ್ಲ ಹೆಸರುಗಳಿಂದ ಕರೆಯಲಾಗುತ್ತದೆ.

ಇದನ್ನೂ ಓದಿ | ಸವಿಸ್ತಾರ ಅಂಕಣ | ಒಂದೇ ʼಸತ್ಯʼದೆಡೆಗೆ ಚಲಿಸಿದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಭಿನ್ನ ಎಣಿಸುವುದು ಅಪರಾಧವಲ್ಲವೇ?

ಯುರೋಪಿನಲ್ಲಿ ಇಂಥದ್ದೊಂದು ವಿದ್ಯಮಾನ ಹರಳುಗಟ್ಟುವ ಸಂದರ್ಭದಲ್ಲಿಯೇ, ಭಾರತ ಸ್ವಾತಂತ್ರ್ಯ ಹೋರಾಟದ ಚುಕ್ಕಾಣಿ ಹಿಡಿದಿದ್ದ ಒಂದಿಷ್ಟು ಮುಖಂಡರಿಗೂ ಇದು ಕಿವಿಗೆ ಬಿತ್ತು. ಮುಖ್ಯವಾಗಿ ಪಂಡಿತ್ ಜವಾಹರಲಾಲ್ ನೆಹರೂ ಮತ್ತವರ ಸಂಗಾತಿಗಳಿಗೆ ಈ ನೀತಿಯನ್ನು ಭಾರತಕ್ಕೂ ಅನ್ವಯಿಸಬೇಕು ಎಂಬ ರುಚಿ ಹತ್ತಿತು. ಸ್ವಾತಂತ್ರ್ಯಾನಂತರದಲ್ಲಿ ಈ ದೇಶದಲ್ಲಿ ಹಿಂದುಗಳ ಸಂಖ್ಯೆ ಮತ್ತು ಶಕ್ತಿ ಹೆಚ್ಚಳವಾಗುತ್ತದೆ. ಆಗ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಹಕ್ಕುಗಳು ಧಕ್ಕೆಯಾಗುತ್ತವೆ. ಅದಕ್ಕಾಗಿ ಜಾತ್ಯತೀತ ತತ್ವದ ಮೂಲಕ ಮುಸ್ಲಿಂ ಸೇರಿ ಇತರೆ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನು ರಕ್ಷಣೆ ಮಾಡಬೇಕು ಎಂಬುದನ್ನು ಒಂದು ವಿವೇಕವೇನೋ ಎಂಬಂತೆ ಬಿತ್ತಲಾಯಿತು. ಜಾತ್ಯತೀತ ತತ್ವ ಎಂಬುದು ದೊಡ್ಡ ಮೌಲ್ಯ ಎಂಬಂತೆ ಪ್ರಚಾರ ಮಾಡಲಾಯಿತು. ಜಾತ್ಯತೀತ ತತ್ವ ಎಂಬುದು ಯುರೋಪಿಯನ್ ದೇಶಗಳಿಗೆ ಒಂದು ಮೌಲ್ಯವಾಗಿ ಸರಿ ಇತ್ತೇನೋ. ಆದರೆ, ಮೊದಲಿನಿಂದಲೂ ಸಹಬಾಳ್ವೆ, ಬಹುತ್ವ, ಸಹಿಷ್ಣುತೆಯನ್ನು ರಕ್ತಗತವಾಗಿ ಮೈಗೂಡಿಸಿಕೊಂಡು ಬಂದಿದ್ದ ಭಾರತಕ್ಕೆ ಈ ಸಿದ್ಧಾಂತದ ಅವಶ್ಯಕತೆಯೇ ಇರಲಿಲ್ಲ. ಭಾರತಕ್ಕೆ ಮೊದಲಿಗೆ ಕಾಲಿಟ್ಟ ಇಸ್ಲಾಮಿಕ್ ಆಕ್ರಮಣಕಾರರು ತಮ್ಮ ಮತವನ್ನು ಪ್ರಚಾರ ಮಾಡಲು ಇಲ್ಲಿ ಇನ್ನಿಲ್ಲದ ಅತ್ಯಾಚಾರ, ಅನಾಚಾರಗಳನ್ನು ಹಿಂದುಗಳ ಮೇಲೆ ಮಾಡಿದ್ದರು. ನಂತರ ಆಗಮಿಸಿದ ಕ್ರಿಶ್ಚಿಯನ್ನರೂ ನೇರವಾಗಿ ಆಕ್ರಮಣಗಳ ಜತೆಗೆ ಇಲ್ಲಿನ ದೇವದೇವತೆಗಳನ್ನು ಹೀಗಳೆಯುವ ಮೂಲಕ ತಮ್ಮ ಮತ ವಿಸ್ತರಣೆಗೆ ಮುಂದಾದರು. ಇವರ ರಕ್ಷಣೆಗೆ ಬ್ರಿಟಿಷ್ ಸರ್ಕಾರ ಕಟಿಬದ್ಧವಾಗಿತ್ತು. ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಆಡಳಿತದ ಸುಮಾರು 1 ಸಾವಿರ ವರ್ಷದಲ್ಲಿ ಇಲ್ಲಿನ ಹಿಂದುಗಳಿಂದ ದೌರ್ಜನ್ಯವಾದ ಒಂದೇ ಒಂದು ಉದಾಹರಣೆಯೂ ಇಲ್ಲ.

ಹಿಂದು ರಾಜರುಗಳ ಆಳ್ವಿಕೆಯಲ್ಲೂ ಈ ನೆಲದಲ್ಲಿ ಮುಸ್ಲಿಂ, ಕ್ರೈಸ್ತ ಸಮುದಾಯಗಳು ತಮ್ಮ ಮತಾಚರಣೆಗಳನ್ನು ನಡೆಸಲು ಮುಕ್ತವಾಗಿದ್ದವು. ಅದು ಶಿವಾಜಿ ಮಹಾರಾಜರ ಆಡಳಿತದಿಂದ ಮೈಸೂರು ಮಹಾರಾಜರ ಆಳ್ವಿಕೆವರೆಗೆ ಎಲ್ಲಿಯೂ ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನ ಮಾಡುವ ಕೆಲಸ ನಡೆದಿರುವ ಉದಾಹರಣೆಯೇ ಇಲ್ಲ. ಅದೇ ಮುಸ್ಲಿಂ ರಾಜರುಗಳ ಆಳ್ವಿಕೆ ಇದ್ದ ಸ್ಥಳಗಳಲ್ಲಿ ಇತರೆ ಮತೀಯರ ಮೇಲೆ ವಿವಿಧ ದುಬಾರಿ ತೆರಿಗೆ ವಿಧಿಸಲಾಯಿತು, ದೇವಸ್ಥಾನಗಳನ್ನು ಧ್ವಂಸ ಮಾಡಲಾಯಿತು, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಮಾಡಲಾಯಿತು. ಆದರೂ ಹಿಂದುಗಳಿಂದ ಅಲ್ಪಸಂಖ್ಯಾತರಿಗೆ ಅಪಾಯ ಎಂಬ ಭೂತವನ್ನು ಸೃಷ್ಟಿಸಲಾಯಿತು. ಇದೊಂದು ರೀತಿ, ಉಲ್ಟಾ ಚೋರ್ ಕೊತ್ವಾಲ್ ಕೊ ಡಾಂಟೆ ಎಂಬ ಹಿಂದಿ ಮಾತಿನಂತೆ. ಕಳ್ಳನೇ ಬಂದು ಪೊಲೀಸನನ್ನು ಬೈದಂತೆ !

ಸೆಕ್ಯುಲರಿಸಂ ಎನ್ನುವುದು ಪಶ್ಚಿಮ ಜಗತ್ತಿಗೆ ಅವಶ್ಯಕವಾಗಿತ್ತು. ಅಲ್ಲಿನ ಚರ್ಚ್ ದಬ್ಬಾಳಿಕೆಯನ್ನು ಹಿಮ್ಮೆಟ್ಟಿಸಬೇಕಿತ್ತು. ಅಲ್ಲಿನ ಸ್ಥಳೀಯ ಸಮಸ್ಯೆಗೆ ಸ್ಥಳೀಯ ಪರಿಹಾರ ಅದಾಗಿತ್ತು. ಆದರೆ ಅದನ್ನು ಕೃತಕವಾಗಿ ಭಾರತಕ್ಕೆ ತಂದಿದ್ದಷ್ಟೆ ಅಲ್ಲದೆ, ಅದನ್ನು ತಪ್ಪು ವ್ಯಾಖ್ಯಾನ ಮಾಡಲಾಯಿತು. ಜಾತ್ಯತೀತತೆ ಎಂದರೆ ಅಲ್ಪಸಂಖ್ಯಾತರಿಗೆ ಸವಲತ್ತುಗಳನ್ನು ನೀಡುವುದು ಎಂದು ಭ್ರಮಿಸಲಾಯಿತು. ಇದೇ ಕಾರಣಕ್ಕೆ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ಈ ದೇಶದ ಸಂಪನ್ಮೂಲಗಳನ್ನು ಬಳಸಿಕೊಳ್ಳುವಿಕೆಯಲ್ಲಿ ಅಲ್ಪಸಂಖ್ಯಾತರಿಗೆ ಮೊದಲ ಆದ್ಯತೆ ಎಂದು ಹೇಳಿದ್ದರು. ಇದನ್ನು ಜಾತ್ಯತೀತತೆ ಎಂದು ಬಣ್ಣಿಸಲಾಗಿತ್ತು. ಅಸಲಿಗೆ ಭಾರತದಲ್ಲಿ ಜಾತ್ಯತೀತತೆ ಎನ್ನುವುದು ಅಪೀಸ್ಮೆಂಟ್ (ತುಷ್ಟೀಕರಣ) ಎಂಬ ನಕಾರಾತ್ಮಕ ಪದಕ್ಕೆ ಹೊದಿಸಿರುವ ಸಕಾರಾತ್ಮಕ ಹೊದಿಕೆ. ಸೆಕ್ಯುಲರಿಸಂ ಹೆಸರಿನಲ್ಲಿ ನಡೆದಿದ್ದೆಲ್ಲ ತುಷ್ಟೀಕರಣವೇ.

ಇದನ್ನೂ ಓದಿ | ಸವಿಸ್ತಾರ ಅಂಕಣ | ʼಸಪ್ತಬಂದಿʼಯಲ್ಲಿ ಬಂಧಿಯಾದ ಹಿಂದು ಸಮಾಜ ಮುಕ್ತವಾಗಬೇಕು ಎಂದವರು ಸಾವರ್ಕರ್

ಅಪಾಯದ ಮಟ್ಟಕ್ಕೆ ಜಾತ್ಯತೀತತೆ

ಮುಸ್ಲಿಂ, ಕ್ರೈಸ್ತ ಸಮುದಾಯಗಳ ಏಳಿಗೆ, ಅಭಿವೃದ್ಧಿಗಾಗಿ ಮಾತ್ರವೇ ತುಷ್ಟೀಕರಣ ನಡೆದಿದ್ದರೆ ಅಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಅಲ್ಲಿನ ಕೆಲವರು ನಡೆಸುವ ದೇಶವಿರೋಧಿ ಕೃತ್ಯಗಳನ್ನೂ ಮುಚ್ಚಿಕೊಳ್ಳುವ ಕೆಲಸ ನಡೆಯಿತು. ಅದು ಭಾರತದ ಸ್ವಾತಂತ್ರ್ಯ ಹೋರಾಟದ ಮೇಲೆಯೂ ಪ್ರಭಾವ ಬೀರಿತು. ಅಲ್ಲೆಲ್ಲೋ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಟರ್ಕಿಯಲ್ಲಿ ಖಲೀಫನನ್ನು ಅಧಿಕಾರದಿಂದ ಕೆಡವಲಾಯಿತು ಎಂದು ಇಲ್ಲಿ ಭಾರತದ ಮುಸ್ಲಿಮರು ಸಿಟ್ಟಾದರು. ಅವರನ್ನು ಓಲೈಸಿಕೊಳ್ಳದಿದ್ದರೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸದು ಎಂದುಕೊಂಡ ಮಹಾತ್ಮ ಗಾಂಧೀಜಿ, ಖಿಲಾಫತ್ ಚಳವಳಿಗೆ ಬೆಂಬಲ ನೀಡಿದರು. ಈ ತುಷ್ಟೀಕರಣ ನೀತಿ, ಕೇರಳದಲ್ಲಿ ಮಾಪಿಳ್ಳೆಗಳು ಕಂಡಕಂಡಲ್ಲಿ ಹಿಂದುಗಳ ಹತ್ಯೆ ನಡೆಸುವವರೆಗೆ ತಲುಪಿತು. ಆದರೆ ಜಾತ್ಯತೀತತೆಯ ಮುಖವಾಡದಲ್ಲಿ ಮೋಪ್ಲಾ ಹತ್ಯಾಕಾಂಡವನ್ನು ಮುಚ್ಚಿ ಹಾಕಲಾಯಿತು. ಜೋರಾಗಿ ಹೇಳಿಬಿಟ್ಟರೆ ಮುಸ್ಲಿಮರಿಗೆ ಅಸಾಮಾಧಾನವಾಗುತ್ತದೆ ಎಂಬ ಭ್ರಮೆ. ಆದರೆ ಈ ತುಷ್ಟೀಕರಣದಿಂದ ಸಾಧಿಸಿದ್ದಾದರೂ ಏನು? 1947ರಲ್ಲಿ ದೇಶ ವಿಭಜನೆ ಎಂಬ ಕಪ್ಪು ಅಧ್ಯಾಯ. ಅದನ್ನು ಬಿಟ್ಟರೆ ಇದರಿಂದ ದೇಶಕ್ಕೂ ಲಾಭವಾಗಿಲ್ಲ, ಕನಿಷ್ಠ ಪಕ್ಷ ಕಾಂಗ್ರೆಸ್ ಪಕ್ಷಕ್ಕೂ ಉಪಯೋಗವಾಗಿಲ್ಲ. ಈ ಭ್ರಮೆಗಳು ಸ್ವಾತಂತ್ರ್ಯನಂತರದಲ್ಲೂ ಮುಂದುವರಿದು ಅನಾಹುತಗಳನ್ನು ಸೃಷ್ಟಿಸಿದೆ. ಅದರ ಕುರಿತು ಮುಂದಿನ ಲೇಖನದಲ್ಲಿ ಚರ್ಚೆ ಮಾಡೋಣ.

(ಆಕರ: ʼಭಾರತದ ಸೆಕ್ಯುಲರಿಸಂʼ- ಸೀತಾರಾಮ ಗೋಯೆಲ್)

Exit mobile version