Site icon Vistara News

ಸವಿಸ್ತಾರ ಅಂಕಣ | ನೈತಿಕತೆ ಮೆರೆಯಲು ಅಂದು 6 ಶಾಸಕರನ್ನು ಉಚ್ಚಾಟಿಸಿದ ಪಕ್ಷಕ್ಕೆ ಇಂದು ರೌಡಿಗಳ ಅವಶ್ಯಕತೆ ಏಕೆ ಬಂತು?

savistara

ಇಂದಿನ ಅಂಕಣವನ್ನು, ದೇಶದ ಮುತ್ಸದ್ದಿ ರಾಜಕಾರಣಿಗಳಲ್ಲೊಬ್ಬರಾದ ಲಾಲ್ ಕೃಷ್ಣ ಆಡ್ವಾಣಿ ಅವರ ಮಾತುಗಳಿಂದ ಆರಂಭಿಸೋಣ. ಆಡ್ವಾಣಿಯವರು ತಮ್ಮ My Country My Life (ಕನ್ನಡದಲ್ಲಿ: ನನ್ನ ದೇಶ, ನನ್ನ ಜೀವನ; ಅನುವಾದ: ವಿಶ್ವೇಶ್ವರ ಭಟ್; ಪ್ರಕಾಶನ: ಸಪ್ನ) ಕೃತಿಯಲ್ಲಿ ದಾಖಲಿಸಿರುವ ಘಟನೆಯಿದು.

“ರಾಜಸ್ಥಾನ ವಿಧಾನಸಭೆಗೆ ನಡೆದ ಪ್ರಪ್ರಥಮ ಚುನಾವಣೆಯಲ್ಲಿ ನಮ್ಮ ಪಕ್ಷ ಗೆದ್ದಿದ್ದು ಕೇವಲ ಎಂಟು ಕ್ಷೇತ್ರಗಳಲ್ಲಿ. ಆಗ ರಾಜಸ್ಥಾನ ವಿಧಾನಸಭೆಯಲ್ಲಿ ಇದ್ದ ಒಟ್ಟು ಕ್ಷೇತ್ರಗಳ ಸಂಖ್ಯೆ 160. ಎಲ್ಲರೂ ಅಂದುಕೊಂಡಿದ್ದಂತೆಯೇ ಕಾಂಗ್ರೆಸ್ ಆ ಚುನಾವಣೆಯಲ್ಲಿ ಭಾರೀ ಬಹುಮತ ಪಡೆದು, ತನ್ನ ಸರ್ಕಾರವನ್ನು ರಚಿಸಿತು. ಇದಾದ ಕೆಲವೇ ದಿನಗಳಲ್ಲಿ ನಮ್ಮ ಜನಸಂಘದ ಶಾಸಕಾಂಗ ಪಕ್ಷದಲ್ಲಿ ಬಂಡಾಯ ಭುಗಿಲೆದ್ದಿತು. ಪರಿಣಾಮವಾಗಿ ನಮ್ಮ ಪಕ್ಷದಿಂದ ಆರು ಶಾಸಕರನ್ನು ಹೊರಹಾಕಲಾಯಿತು.”

“ಸ್ವಾತಂತ್ರ್ಯಕ್ಕೆ ಮೊದಲು ರಾಜಸ್ಥಾನವು 19 ಸಂಸ್ಥಾನಗಳನ್ನು ಒಳಗೊಂಡ ಪ್ರದೇಶವಾಗಿತ್ತು. ದೇಶದ ಉಳಿದ ಭಾಗಗಳ ಸಂಸ್ಥಾನಗಳೆಲ್ಲವೂ 1950ಕ್ಕೆ ಮುನ್ನ ಭಾರತ ಒಕ್ಕೂಟದಲ್ಲಿ ಲೀನವಾದಂತೆಯೇ ರಾಜಸ್ಥಾನ ಕೂಡ ಸೇರಿಕೊಂಡಿತು. ಆದರೆ, ಜಹಗೀರು ಪದ್ಧತಿ ಮಾತ್ರ ಹಾಗೆಯೇ ಮುಂದುವರಿದಿತ್ತು. ಜಹಗೀರು ಪದ್ಧತಿಯೆಂದರೆ, ಒಂದೊಂದು ಶ್ರೀಮಂತ ಕುಟುಂಬಗಳೇ ನೂರರಿಂದ ಹಿಡಿದು ಸಾವಿರಾರು ಎಕರೆ ಜಮೀನಿನ ಮೇಲೆ ಒಡೆತನ ಹೊಂದಲು ಅವಕಾಶ ಕೊಡುತ್ತಿದ್ದಂಥ ವ್ಯವಸ್ಥೆ ಅದು. ಜನಸಂಘವು ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ, ಖ್ಯಾತ ಚಿಂತಕ ಎಗೆಲ್ ಪ್ರತಿಪಾದಿಸಿದಂಥ ವ್ಯವಸ್ಥೆಯನ್ನು ಜಾರಿಗೆ ತರುವ ಒಂದು ಹೆಜ್ಜೆಯಾಗಿ ಈ ಜಹಗೀರು ಪದ್ಧತಿಯನ್ನು ನಿರ್ಮೂಲ ಮಾಡುವುದಾಗಿ ಆಶ್ವಾಸನೆ ನೀಡಿತ್ತು”.

“ಇದಕ್ಕೆ ಕಾರಣರಾದವರು ಡಾ. ಶಾಮಾಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ದೀನದಯಾಳ್ ಉಪಾಧ್ಯಾಯ. ಅವರಿಬ್ಬರ ಸೂಚನೆಯ ಮೇರೆಗೆ ಈ ಅಂಶವನ್ನು ನಮ್ಮ ಪ್ರಣಾಳಿಕೆಯಲ್ಲಿ ಸೇರಿಸಲಾಗಿತ್ತು. ವಿಚಿತ್ರವೆಂದರೆ, ಜನಸಂಘದಿಂದ ಆಯ್ಕೆಯಾಗಿದ್ದ ಎಲ್ಲ ಎಂಟು ಶಾಸಕರೂ ಸ್ವತಃ ಜಹಗೀರುದಾರರಾಗಿದ್ದರು! ಚುನಾವಣೆ ಮುಗಿದ ನಂತರ ಜನಸಂಘವು ಸಹಜವಾಗಿಯೇ ಜಹಗೀರು ಪದ್ಧತಿಯನ್ನು ನಿರ್ಮೂಲನೆ ಮಾಡುವಂತೆ ದನಿ ಎತ್ತಬೇಕೆಂದು ನಿರ್ಧರಿಸಿತು. ಆಗ ಇದನ್ನು ನಮ್ಮ ಪಕ್ಷದ ಆರು ಶಾಸಕರೇ ವಿರೋಧಿಸಿದರು! ನಮ್ಮ ಪಕ್ಷದ ಈ ನಿಲುವನ್ನು ಬೆಂಬಲಿಸಿದ್ದು ಕೇವಲ ಇಬ್ಬರು ಶಾಸಕರು ಮಾತ್ರ. ಅವರೆಂದರೆ ಭೈರೋಸಿಂಗ್ ಶೇಖಾವತ್ ಮತ್ತು ಜಗತ್ ಸಿಂಗ್ ಝಾಲಾ. ಆರು ಶಾಸಕರ ಬಂಡಾಯವನ್ನು ಪಕ್ಷದ ಕೇಂದ್ರ ನಾಯಕತ್ವದ ಗಮನಕ್ಕೆ ತರಲಾಯಿತು. ಆಗ ಡಾ.ಮುಖರ್ಜಿ ಮತ್ತು ದೀನದಯಾಳ್ ಇಬ್ಬರೂ ಕೂಡಲೇ ಜೈಪುರಕ್ಕೆ ಬಂದು, ಬಂಡಾಯವೆದ್ದಿದ್ದ ಪ್ರತಿಯೊಬ್ಬ ಶಾಸಕರೊಂದಿಗೂ ಕೂತು ಚರ್ಚಿಸಿದರು. ಆದರೆ ಪಕ್ಷದ ವಾದವನ್ನು ಒಪ್ಪಿಕೊಳ್ಳಲು ಅವರಾರೂ ಸಿದ್ಧರಿರಲಿಲ್ಲ. ಆಗ ನಮ್ಮ ನಾಯಕರು, ಇವರನ್ನೆಲ್ಲ ಪಕ್ಷದಿಂದ ವಜಾ ಮಾಡಿ. ತತ್ತ್ವ-ಸಿದ್ಧಾಂತಗಳ ವಿಚಾರದಲ್ಲಿ ರಾಜಿ ಸಾಧ್ಯವೇ ಇಲ್ಲ’ ಎಂದು ಘೋಷಿಸಿದರು”

ಇದಿಷ್ಟೂ ಆಡ್ವಾಣಿಯವರು ದಾಖಲಿಸಿರುವ ಅಂಶ. ಈ ವಿಚಾರವನ್ನು ಇಂದಿನ ಕರ್ನಾಟಕದ ಬೆಳವಣಿಗೆಗಳೊಂದಿಗೆ ತಾಳೆ ನೋಡೋಣ. ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಶೇ.35 ಅಂದರೆ 77 ಶಾಸಕರು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದರು. ಇದರಲ್ಲಿ ಬಿಜೆಪಿಯ 42, ಕಾಂಗ್ರೆಸ್ನ 23 ಹಾಗೂ ಜೆಡಿಎಸ್ನ 11 ಶಾಸಕರಿದ್ದರು. ಈ ವಿಚಾರವನ್ನು ಸ್ವತಃ ಅವರುಗಳೇ ನಾಮಪತ್ರ ಸಲ್ಲಿಕೆ ವೇಳೆ ತಿಳಿಸಿದ್ದರು.

ರಾಜಕಾರಣದಲ್ಲಿ ಮೊಕದ್ದಮೆಗಳನ್ನು ಎದುರಿಸುವುದು ಸರ್ವೇ ಸಾಮಾನ್ಯ. ಅನೇಕ ಸಂದರ್ಭಗಳಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಕಾನೂನನ್ನು ಮುರಿದು ಪ್ರತಿಭಟನೆಯನ್ನೋ, ಅಧಿಕಾರಿಯನ್ನು ಗದರಿಸಿಯೋ ಇರಬಹುದು. ಅಂತಹದ್ದಕ್ಕೆ ಸರ್ಕಾರ, ಪೊಲೀಸರು ಮೊಕದ್ದಮೆ ಹೂಡುತ್ತಾರೆ. ಇನ್ನು ಅನೇಕ ಸಂದರ್ಭಗಳಲ್ಲಿ ಸ್ಥಳೀಯ ರಾಜಕಾರಣಿಗಳು ದ್ವೇಷಕ್ಕಾಗಿ ಸುಳ್ಳು ಮೊಕದ್ದಮೆಗಳನ್ನು ಹೂಡುತ್ತಾರೆ. ಇಂಥವರನ್ನೆಲ್ಲ ಹೊತುಪಡಿಸಿ, ಹತ್ಯೆ ಯತ್ನ, ಅಪಹರಣ ಯತ್ನದಂತಹ ಗಂಭೀರ ಪ್ರಕರಣವನ್ನು ಎದುರಿಸುತ್ತಿರುವವರ ಸಂಖ್ಯೆಯೇ ಒಟ್ಟು 54 ಇತ್ತು.

ಇದೀಗ ʼಶಿಸ್ತಿನ ಪಕ್ಷʼ ಬಿಜೆಪಿಗೆ ಸೇರ್ಪಡೆಯಾಗಲು ರೌಡಿಗಳು ʼಪರೇಡ್ʼ ನಡೆಸುತ್ತಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ರೌಡಿ ಹಿನ್ನೆಲೆಯುಳ್ಳವರನ್ನು ಪಕ್ಷದ ವೇದಿಕೆಯಲ್ಲಿ ಬರಮಾಡಿಕೊಂಡರೆ ಇನ್ನೊಂದು ಕಾರ್ಯಕ್ರಮದಲ್ಲಿ ಇಬ್ಬಿಬ್ಬರು ಸಂಸದರು ಹೋಗಿ ಪೋಸ್ ಕೊಟ್ಟಿದ್ದಾರೆ, ಮತ್ತೊಬ್ಬ ಹಿರಿಯ ಶಾಸಕರನ್ನು ರೌಡಿಯೊಬ್ಬ ಭೇಟಿಯಾಗಿ ಬಂದಿದ್ದಾನೆ. ಇದನ್ನು ಅಸ್ತ್ರವಾಗಿ ಬಳಸಿಕೊಂಡಿರುವ ಕಾಂಗ್ರೆಸ್, ಬಿಜೆಪಿಯಲ್ಲಿ ರೌಡಿ ಮೋರ್ಚಾ ಆರಂಭಿಸಲಾಗುತ್ತಿದೆಯೇ ಎಂದು ಗೇಲಿ ಮಾಡುತ್ತಿದೆ.

ಹಾಗೆಂದು ಕಾಂಗ್ರೆಸ್ ಏನು ಈ ವಿಷಯದಲ್ಲಿ ಸಭ್ಯಸ್ಥ ಎಂದು ಹೇಳಿಕೊಳ್ಳುವ ಪರಿಸ್ಥಿತಿಯಂತೂ ಇಲ್ಲ. ಯಾವ ಪಕ್ಷಕ್ಕೂ ಆ ನೈತಿಕತೆ ಉಳಿದಿಲ್ಲ. ಎಲ್ಲವೂ ಗಾಜಿನ ಮನೆಯಲ್ಲಿ ಕುಳಿತಿವೆ.

ಹಾಗಂತ ರಾಜಕಾರಣಕ್ಕೂ ರೌಡಿಸಂಗೂ ಇದೇ ಮೊದಲು ನಂಟು ಇದೆ ಎಂದಲ್ಲ. ಬೆಂಗಳೂರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಅವರು ಹೇಳುವಂತೆ, ಬೆಂಗಳೂರಿನಲ್ಲಿ ಮುಖ್ಯವಾಗಿ ಕೆಲವು ಗರಡಿ ಮನೆಗಳು, ಕಬಡ್ಡಿ ತಂಡಗಳ ಆಟಗಾರರು ಹಾಗೂ ಹಾಲು ಕರೆಯುವ ವ್ಯಾಪಾರ ನಡೆಸುತ್ತಿದ್ದ ಕೆಲವರು ರೌಡಿಸಂಗೆ ಬರುತ್ತಿದ್ದರು. ಏಕೆಂದರೆ ಆಗಿನ ರೌಡಿಗಳಿಗೆ ಭುಜಬಲ ತುಂಬಾ ಬೇಕಾಗುತ್ತಿತ್ತು. ಮತಗಟ್ಟೆಗಳನ್ನು ಕಬ್ಜಾ ಮಾಡಿಕೊಳ್ಳಲು (ಬೂತ್ ಕ್ಯಾಪ್ಚರಿಂಗ್), ಮತದಾರರನ್ನು ಬೆದರಿಸಿ ಮತಗಟ್ಟೆಗೆ ಕರೆತರಲು, ಕೆಲವರು ಮತಗಟ್ಟೆ ಕಡೆಗೆ ಬಾರದಂತೆ ತಡೆಯಲೂ ರೌಡಿಗಳು ಬೇಕಾಗುತ್ತಿದ್ದರು.

ಈ ಚುನಾವಣಾ ಸಮಯಕ್ಕಾಗಿ ಇಡೀ ನಾಲ್ಕೂ ಮುಕ್ಕಾಲು ವರ್ಷ ರಾಜಕಾರಣಿಗಳು ರೌಡಿಗಳನ್ನು ಬೆಳೆಸುತ್ತಿದ್ದರು, ಸಾಕುತ್ತಿದ್ದರು. ಈಗ ಬಿಜೆಪಿ ವಿರುದ್ಧ ಹರಿಹಾಯುತ್ತಿರುವ ವಿವಿಧ ಪಕ್ಷಗಳ ಅನೇಕ ನಾಯಕರೂ ಒಂದಲ್ಲ ಒಂದು ಸಮಯದಲ್ಲಿ ರೌಡಿಗಳ ಜತೆಗೆ ಕೂತವರು, ಕೆಲವರಂತೂ ಅವರೇ ರೌಡಿಗಳಾಗಿದ್ದವರು ಎನ್ನುವ ಆರೋಪಗಳೂ ಇವೆ.

ಆದರೆ ನಂತರದ ದಿನಗಳಲ್ಲಿ, ಮುಖ್ಯವಾಗಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಈ ರೌಡಿಗಳೇ ಸರ್ಕಾರವನ್ನು ನಿಯಂತ್ರಿಸಲು ಮುಂದಾದಾಗ ಅವರನ್ನು ಮಟ್ಟ ಹಾಕಲು ನಿರ್ಧರಿಸಿದರು. ಅಂದಿನ ಪೊಲೀಸರಿಗೆ ನೀಡಿದ ಫ್ರೀ ಹ್ಯಾಂಡ್ ಕಾರಣಕ್ಕೆ ಅನೇಕ ರೌಡಿಗಳ ಹೆಣ ಬಿದ್ದವು. ನಂತರವೂ ರೌಡಿ ಕುಳಗಳು ಹುಟ್ಟುತ್ತಲೇ ಇದ್ದರಾದರೂ ಬೆಂಗಳೂರಿನಲ್ಲಿ ಉಂಟಾದ ರಿಯಲ್ ಎಸ್ಟೇಟ್ ಬೂಮ್ನಿಂದಾಗಿ ಬಹಳಷ್ಟು ರೌಡಿಗಳಿಗೆ ತೋಳ್ಬಲದ ಹೊಡೆದಾಟಕ್ಕಿಂತ ಹಣದ ರುಚಿ ಹತ್ತಿತು.

ಸಣ್ಣಪುಟ್ಟವರನ್ನು ಬೆದರಿಸಿ ಆಸ್ತಿಗಳನ್ನು ಕಡಿಮೆ ಬೆಲೆಗೆ ಖರೀದಿಸಿ ರಿಯಲ್ ಎಸ್ಟೇಟ್ ಉದ್ಯಮ ಮಾಡಲು ಮುಂದಾದರು. ಇಷ್ಟರ ವೇಳೆಗೆ ಚುನಾವಣೆ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾದವು. ಟಿ.ಎನ್. ಶೇಷನ್ ಅವರ ಕಾಲದಲ್ಲಿ ಚುನಾವಣಾ ಆಯೋಗ ತನ್ನ ನಿಜವಾದ ಶಕ್ತಿಯನ್ನು ತೋರಿಸಲು ಆರಂಭಿಸಿತು, ನಂತರದಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳು ಬಂದವು. ಮತಯಂತ್ರಗಳನ್ನು ಬೂತ್ ಕ್ಯಾಪ್ಚರಿಂಗ್ ಮಾಡುವ ಸನ್ನಿವೇಶವೇ ಉದ್ಭವಿಸಲಿಲ್ಲ. ಅಲ್ಲಿಗೆ ಆಂಧ್ರ, ಮಹಾರಾಷ್ಟ್ರ ಗಡಿಯ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಕರ್ನಾಟಕದ ಮಟ್ಟಿಗಂತೂ ನೇರವಾಗಿ ರೌಡಿಗಳ ಬಳಕೆ ಬಹುತೇಕ ಕಡಿಮೆಯಾಯಿತು.

ಇಂತಹ ರೌಡಿಗಳಾಗಿರತಕ್ಕವರು ಇಷ್ಟು ವೇಳೆಗೆ ಸಾಕಷ್ಟು ಹಣವನ್ನು ನೋಡಿದರು. ಇಲ್ಲಿವರೆಗೆ ರಾಜಕಾರಣಿಗಳಿಗೆ ಸೇವೆ ಮಾಡಿ ಮಾಡಿ ಸಾಕಾಗಿದೆ. ಈ ರಾಜಕಾರಣಿಗಳಿಗೆ ನಾವು ಬೇಡವಾಗಿದ್ದೇವೆ ಎನ್ನುತ್ತ, ತಾವೇ ರಾಜಕಾರಣಿಗಳಾಗೋಣ ಎಂಬ ಆಸೆ ಹುಟ್ಟಿತು. ಇದರ ಪ್ರತಿಫಲವಾಗಿಯೇ ಶಾಸಕರ ಪೈಕಿ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಲೇ ಇದೆ.

ಇಲ್ಲಿ ಇನ್ನೊಂದು ವಿಚಾರ ಹೇಳಬೇಕು. ಬಿಜೆಪಿ ಪಕ್ಷವು ರೌಡಿ ಹಿನ್ನೆಲೆಯವರನ್ನು ಬೆಂಬಲಿಸುತ್ತಿದೆ ಎಂಬುದಕ್ಕೆ ಆ ಪಕ್ಷದವರು, ಸಾರ್ವಜನಿಕರು ಆಕ್ಷೇಪಿಸುತ್ತಿರುವುದು ನೈತಿಕ ನೆಲೆಗಟ್ಟಿನಲ್ಲಿ ಮಾತ್ರ. ಕಾನೂನಿನ ಪ್ರಕಾರ, ಗಂಭೀರ ಅಪರಾಧಗಳಲ್ಲಿ ಭಾಗಿಯಾದವರು ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಶಿಕ್ಷೆಗೆ ಗುರಿಯಾಗಿದ್ದರೆ ಚುನಾವಣೆಗೆ ಸ್ಪರ್ಧೆ ಮಾಡುವಂತಿಲ್ಲ. ಅದೂ ಸಹ ಜೀವನ ಪರ್ಯಂತ ಅಲ್ಲ, ಅರು ವರ್ಷ ಅವಧಿಗೆ ಮಾತ್ರ. ಹಾಗಾಗಿ ಈಗ ಮಾತನಾಡುತ್ತಿರುವ ವಿಚಾರ ನೈತಿಕವಾದದ್ದೇ ವಿನಃ ಕಾನೂನು ಸಂಬಂಧಿಸಿದ್ದಲ್ಲ.

ಈಗ ವಿವಿಧ ಪಕ್ಷದ ನಾಯಕರು ರೌಡಿ ಹಿನ್ನೆಲೆಯವರನ್ನು ಸೇರಿಸಿಕೊಳ್ಳಲು ಇಂತಹ ತಾಂತ್ರಿಕವಾದ ಕಾನೂನು ಕಾರಣ ನೀಡುತ್ತಿದ್ದಾರೆ. ಆದರೆ ಮೇಲೆ ಎಲ್ಕೆ. ಆಡ್ವಾಣಿ ಅವರು ನೀಡಿದ ಉದಾಹರಣೆ ಕಾನೂನಿಗೆ ಸಂಬಂದಿಸಿದ್ದಲ್ಲ, ನೈತಿಕತೆಗೆ ಸಂಬಂಧಿಸಿದ್ದು. ಮೊದಲನೆಯದಾಗಿ ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರದಲ್ಲೇ ಇರಲಿಲ್ಲ. ಕೇವಲ ಎಂಟು ಶಾಸಕರು ಗೆದ್ದಿದ್ದರು. ನಮ್ಮ ಸರ್ಕಾರ ಬಂದರೆ ತಾನೆ ಪ್ರಣಾಳಿಕೆ ಈಡೇರಿಸುವುದು? ಸೋತಮೇಲೆ ಪ್ರಣಾಳಿಕೆಗೂ ತಮಗೂ ಸಂಬಂಧ ಇಲ್ಲ ಎಂದು ಇಂದು ಅನೇಕ ಪಕ್ಷಗಳು ಹೇಳುವಂತೆ ನುಣುಚಿಕೊಳ್ಳಬಹುದಿತ್ತು. ಆದರೆ ನೈತಿಕತೆಯ ಧ್ವನಿಯನ್ನು ಆಲಿಸಿದ ಜನಸಂಘದ ನಾಯಕರು ಆರು ಶಾಸಕರನ್ನು ಪಕ್ಷದಿಂದ ಕಿತ್ತೊಗೆದರು. ಕಥೆ ಇದಿಷ್ಟೇ ಅಲ್ಲ. ಮುಂದೆ ಇನ್ನೂ ರೋಚಕವಾಗಿದೆ.

ಆರು ಶಾಸಕರನ್ನು ಕಿತ್ತೊಗೆದ ಜನಸಂಘ ಅಲ್ಲೇನು ನಿರ್ಮೂಲನೆ ಆಯಿತೇ? ಖಂಡಿತ ಇಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧವಾಗಿ ಜಮೀನ್ದಾರಿ ಪದ್ಧತಿಯನ್ನು ವಿರೋಧಿಸಿದ ಭೈರೋಸಿಂಗ್ ಶೇಖಾವತ್ ನಂತರದ ದಿನದಲ್ಲಿ ರಾಜಸ್ಥಾನದ ವರ್ಚಸ್ವೀ ನಾಯಕರಾಗಿ ಬೆಳೆದರು. ಒಂದಲ್ಲ, ಎರಡಲ್ಲ, ಮೂರು ಬಾರಿ ರಾಜಸ್ಥಾನದ ಮುಖ್ಯಮಂತ್ರಿ ಆದರು. ಆನಂತರ ಭಾರತದ ಉಪರಾಷ್ಟ್ರಪತಿಯೂ ಆದರು. “ಅವರು ಈ ಹಿಂದೆ ಜಹಗೀರು ಪದ್ಧತಿಯನ್ನು ನಿರ್ಮೂಲನೆ ಮಾಡಬೇಕೆಂಬುದರ ಪರವಾಗಿ ಧೈರ್ಯವಾಗಿ ನಿಂತಿದ್ದೇ ಅವರ ದೀರ್ಘ ಹಾಗೂ ಯಶಸ್ವಿ ರಾಜಕೀಯ ಬದುಕಿನ ತಳಹದಿಯಾಯಿತು ಎಂದು ನಾನು ಹೇಳಬಲ್ಲೆ” ಎಂದು ಆಡ್ವಾಣಿಯವರು ಹೇಳುತ್ತಾರೆ.

ಅಂದರೆ ನೈತಿಕತೆಯನ್ನು ಅನುಸರಿಸುವುದು ನಷ್ಟದ ಲೆಕ್ಕ ಅಲ್ಲ. ತಕ್ಷಣಕ್ಕೆ ನಷ್ಟ ಎನ್ನಿಸಿದರೂ ಭವಿಷ್ಯದಲ್ಲಿ ಹಾಗೂ ದೀರ್ಘಕಾಲದವರೆಗೆ ಅದರ ಧನಾತ್ಮಕ ಫಲ ದೊರಕುತ್ತದೆ. ಇಂತಹ ಹಿನ್ನೆಲೆಯನ್ನು ಹೊಂದಿದ್ದಕ್ಕಾಗಿಯೇ ಪಾರ್ಟಿ ವಿದ್ ಡಿಫರೆನ್ಸ್ ಎಂದು ಬಿಜೆಪಿಯನ್ನು ಕರೆಯಲಾಗುತ್ತದೆ.

ಬಿಜೆಪಿ ಪಕ್ಷವು ರೌಡಿ ಹಿನ್ನೆಲೆಯವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಘೋಷಣೆ ಮಾಡಿರುವುದು ಸದ್ಯದ ಮಟ್ಟಿಗಂತೂ ನೈತಿಕತೆಯ ಹಿನ್ನೆಲೆಯಲ್ಲಿ ಅಲ್ಲ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತು. ರೌಡಿ ಹಿನ್ನೆಲೆಯವರನ್ನು ಪಕ್ಷದ ವೇದಿಕೆಯಲ್ಲಿ ಕಂಡೊಡನೆಯೇ ಮೊದಲಿಗೆ ನಿರಂತರ ವರದಿ ಪ್ರಸಾರ ಮಾಡಲು ಆರಂಭಿಸಿದ್ದು ʼವಿಸ್ತಾರ ನ್ಯೂಸ್ʼ. ಆರಂಭವಾಗಿ ಇನ್ನೂ ಒಂದು ತಿಂಗಳಾಗಿಲ್ಲವಾದರೂ ಜನಪರವಾದ ನಿಲುವನ್ನು ತಳೆಯುವಲ್ಲಿ ನಾವು ಹಿಂಜರಿಯಲಿಲ್ಲ. ಈ ವಿಚಾರದಲ್ಲಿ ಸತ್ವ ಇದ್ದದ್ದರಿಂದ ರಾಜ್ಯದ ಇನ್ನಿತರೆ ಎಲ್ಲ ಸಹ-ಮಾಧ್ಯಮ ಸಂಸ್ಥೆಗಳೂ ದನಿಗೂಡಿಸಿದವು. ಇದೆಲ್ಲದರ ಒಟ್ಟು ಮೊತ್ತವೇ ಇಂದು ಪಕ್ಷದ ಅಧಿಕೃತ ಹೇಳಿಕೆ ಹೊರಬಿದ್ದಿರುವುದು ಹಾಗೂ ರಾಜಕಾರಣಿಗಳು ತಮ್ಮನ್ನು ರೌಡಿಗಳಿಂದ ದೂರ ಇರಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು. ಇಂದು ವಿಧಾನಮಂಡಲದಲ್ಲಿ ಜನರಿಗೆ ಅಗತ್ಯವಾದ ಚರ್ಚೆಗಳು ನಡೆಯುತ್ತಿಲ್ಲ ಎನ್ನುವುದನ್ನು ರಾಜ್ಯದ ಜನರು ನೋಡುತ್ತಾರೆ. ಕರ್ನಾಟಕದ ಮಾಧ್ಯಮ ಕ್ಷೇತ್ರವು ಅತ್ಯಂತ ಕಡಿಮೆ ಸಮಯದಲ್ಲಿ ರಾಜಕಾರಣಿಗಳು ನೈತಿಕ ಪರವಾದ ನಿರ್ಧಾರ ಕೈಗೊಳ್ಳಲು ಅನಿವಾರ್ಯತೆ ಸೃಷ್ಟಿಸಿದ್ದು ನಮಗೆಲ್ಲರಿಗೂ ಹೆಮ್ಮೆಯ ಹಾಗೂ ಸಂತೋಷದ ವಿಚಾರವಾಗಬೇಕು.

ಆದರೆ ಇದೆಲ್ಲದಕ್ಕೂ ಮುನ್ನವೇ ರಾಜಕೀಯ ಪಕ್ಷಗಳು ನೈತಿಕತೆಯನ್ನು ಮರೆಯಲಿ. ನೈತಿಕ ಅಧಃಪತನ ಹೊಂದಿದ ವ್ಯಕ್ತಿಯಂತೆಯೇ ನೈತಿಕ ಅಧಃಪತನ ಹೊಂದಿದ ಪಕ್ಷವೂ ಸಮಾಜಕ್ಕೆ ಕಂಟಕವಾಗುತ್ತದೆ. ಮುಂದಿನ ದಿನಗಳಲ್ಲಿ ರೌಡಿಗಳು, ದುಷ್ಟರು, ಅತ್ಯಾಚಾರಿಗಳು, ಕೊಲೆಗಡುಗರು ಕಾನೂನಿನ ರಕ್ಷಣೆಗಾಗಿ ಚುನಾವಣೆ ಟಿಕೆಟ್ ಕೇಳಲು ಕದ ತಟ್ಟೇ ತಟ್ಟುತ್ತಾರೆ. ಪಕ್ಷಗಳು ಇಂಥವರನ್ನು ತಿರಸ್ಕರಿಸಬೇಕು. ಇಷ್ಟರ ನಂತರವೂ ಅಂತಹವರು ಪಕ್ಷೇತರರಾಗಿ ಸ್ಪರ್ಧಿಸಿದರೆ ತಕ್ಕ ಪಾಠ ಕಲಿಸುವ ಹೊಣೆಯನ್ನು ಜನರೇ ಹೊರಬೇಕು. ಇಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಯನ್ನು ಮಾಡಲು ಮಾಧ್ಯಮಗಳು ಎಂದಿಗೂ ಬದ್ಧವಾಗಿರುತ್ತೇವೆ, ಆದರೆ ಜಾಗೃತ ಮತದಾರರಿದ್ದರೆ ಮಾತ್ರವೇ ಈ ಪ್ರಯತ್ನ ಸಫಲವಾಗುತ್ತದೆ ಎನ್ನುವುದನ್ನು ಯಾರೂ ಮರೆಯುವಂತಿಲ್ಲ.

ಇದನ್ನೂ ಓದಿ | ಸವಿಸ್ತಾರ ಅಂಕಣ | ಮುಸ್ಲಿಂ ಪ್ರತ್ಯೇಕತೆ ಹೋಗಲಾಡಿಸಲು ಇದು ಪರಿಹಾರ ಆಗಬಲ್ಲದೇ?

Exit mobile version