Site icon Vistara News

ಸವಿಸ್ತಾರ ಅಂಕಣ | Sorry ಎನ್ನಲು ಮನಸ್ಸಿಲ್ಲದ ಬ್ರಿಟನ್, ಭಾರತದಿಂದ ಕಲಿಯುವುದು ಸಾಕಷ್ಟಿದೆ

Rishi Sunak

ಭಾರತ ಮೂಲದ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿದ್ದಾರೆ. ಅವರು ಭಾರತೀಯ ಮೂಲದವರು ಎಂದು ನಾವು ಸಂತಸಪಡುತ್ತಿದ್ದೇವೆ. ನಮ್ಮನ್ನು ಇನ್ನೂರಕ್ಕೂ ಹೆಚ್ಚು ವರ್ಷ ಆಳಿದವರು ಬ್ರಿಟಿಷರು. ನಮ್ಮ ಸಂಗೊಳ್ಳಿ ರಾಯಣ್ಣನಿಂದ ಭಗತ್ ಸಿಂಗ್, ಮಂಗಲ್ ಪಾಂಡೆವರೆಗೆ ಅನೇಕ ಸ್ವಾತಂತ್ರ್ಯವೀರರನ್ನು ನಿರ್ದಯವಾಗಿ ಗಲ್ಲಿಗೇರಿಸಿದವರು ಬ್ರಿಟಿಷರು. ಮೋಸದಿಂದ, ಒಳಸಂಚಿನಿಂದ ಆಳುತ್ತಿದ್ದ ಪ್ರದೇಶಗಳನ್ನು ʼಸೂರ್ಯ ಮುಳುಗದ ಸಾಮ್ರಾಜ್ಯʼ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದವರು ಬ್ರಿಟಿಷರು. ಅಂತಹ ಬ್ರಿಟಿಷರ ನೆಲ ಬ್ರಿಟನ್. ಈ ರಾಷ್ಟ್ರವನ್ನು ಆಳಲು ಭಾರತೀಯ ಸಂಜಾತನೊಬ್ಬ ಮುಂದಾಗಿರುವುದು, ಶತಮಾನದ ನಮ್ಮ ನರಳಾಟಕ್ಕೆ ಬ್ರಿಟಿಷರಿಗೆ ನೀಡುತ್ತಿರುವ ಶಿಕ್ಷೆ ಎಂಬಂತಹ ಚರ್ಚೆಗಳು ನಡೆಯುತ್ತಿವೆ. ಇದರಿಂದ ಸಾಮಾನ್ಯ ಭಾರತೀಯರಿಗೆ ಏನೂ ಆಗದಿದ್ದರೂ, ಇದು ಅವರ ಆತ್ಮವಿಶ್ವಾಸವನ್ನು ವೃದ್ಧಿಸಿರುವುದು ಸುಳ್ಳಲ್ಲ.

ನಮ್ಮವನೊಬ್ಬ, ನಮ್ಮ ಮನುಷ್ಯನೊಬ್ಬ, ನಮ್ಮೂರಿನವನೊಬ್ಬ, ನಮ್ಮ ದೇಶದವನೊಬ್ಬ, ನಮ್ಮ ನೆಲದವನೊಬ್ಬ- ಹೀಗೆ ನಮ್ಮವ ಎಂಬ ಭಾವನೆಯೇ ಹಿರಿದಾದುದು. ಈ ರೀತಿ ಎಮೋಷನಲ್ ಆಗುವವರಲ್ಲಿ ಅನನ್ಯ ದೇಶಭಕ್ತಿ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇದೇ ಹೊತ್ತಲ್ಲಿ ರಿಷಿಯನ್ನು ನಮ್ಮವ ಎಂದು ಅಪ್ಪಿಕೊಳ್ಳುತ್ತಿರುವ ಭಾರತೀಯರ ಭಾವನೆಯನ್ನೇ ಗೇಲಿ ಮಾಡುವ, ಲಘುವಾಗಿ ಕಾಣುವವರನ್ನೂ ನಾವು ಕಾಣುತ್ತಿದ್ದೇವೆ.

ಇದೊಂದು ರೀತಿ ಬ್ರಿಟನ್ನಿನ ಉದಾರವಾದ ಎಂದು ವ್ಯಾಖ್ಯಾನಿಸುವವರು ಕಡಿಮೆ ಇಲ್ಲ. ನಿಜ, ರಿಷಿ ಸುನಾಕ್ ಅವರನ್ನು ದೇಶದ ಮೊದಲ ಪ್ರಜೆಯಾಗಿ ಸ್ವೀಕರಿಸಿರುವ ಆ ದೇಶದ ಸಂವಿಧಾನ ನಿಜಕ್ಕೂ ದೊಡ್ಡದೇ. ನಮ್ಮ ಸಂವಿಧಾನವೂ ಇಂಥದ್ದೊಂದು ದೊಡ್ಡ ಅವಕಾಶವನ್ನು ಕಲ್ಪಿಸಿಕೊಟ್ಟಿದೆ ಎಂಬುದನ್ನು ಮರೆಯಬಾರದು. ಅಂತೆಯೇ, ರಿಷಿ ಸುನಕ್ ಅವರಂಥ ಬಿಳಿಯೇತರ ವ್ಯಕ್ತಿಯೊಬ್ಬ ಬ್ರಿಟನ್ ಚುಕ್ಕಾಣಿ ಹಿಡಿದಿದ್ದಾನೆ ಎಂದು ಕೊರಗುವ ಮಂದಿ ಅಲ್ಲಿಯೂ ಇದ್ದಾರೆ ಎಂಬುದನ್ನು ಮರೆಯಬಾರದು.

ಇರಲಿ, ಉದಾರವಾದಿ ಬ್ರಿಟನ್ ಗ್ರೇಟ್ ಎಂದು ಹೇಳುತ್ತಿರುವವರು ಮರೆಯಬಾರದ ಇನ್ನೊಂದು ಬಹುಮುಖ್ಯವಾದ ಸಂಗತಿ ಇದೆ.

ನಿಜಕ್ಕೂ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿರುವುದು- ಬ್ರಿಟನ್ ಈಗ ಬರಿದಾಗಿದೆ, ಅದೀಗ ಸೂರ್ಯ ಮುಳುಗಿಹೋದ ದೇಶವಾಗಿದೆ! ಬರಿದಾಗಿದೆ ಎಂದ ಕೂಡಲೆ ನಮ್ಮ ಆಧುನಿಕ ಮನಸ್ಸಿಗೆ ಹಣದ ಚಿಂತೆಯೇ ಬರುತ್ತದೆ. ಬ್ರಿಟನ್ ಹಣದ ಮುಗ್ಗಟ್ಟು ಎದುರಿಸುತ್ತಿದೆ ಎಂದೇ ತಿಳಿಯುತ್ತೇವೆ. ಅದು ಸ್ವಲ್ಪಮಟ್ಟಿಗೆ ಸತ್ಯವೇ ಇರಬಹುದು. ಆದರೆ ಬ್ರಿಟನ್ ಅದಕ್ಕಿಂತಲೂ ದೊಡ್ಡ ದಾರಿದ್ರ್ಯವನ್ನು ಎದುರಿಸುತ್ತಿರುವುದು ಆರ್ಥಿಕ ದೃಷ್ಟಿಯಿಂದಲ್ಲ. ಸಾಂಸ್ಕೃತಿಕವಾಗಿ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅದನ್ನು ಬೌದ್ಧಿಕ ದಾರಿದ್ರ್ಯ, ನೈತಿಕ ದಾರಿದ್ರ್ಯ ಮತ್ತು ಜ್ಞಾನದ ದಾರಿದ್ರ್ಯ ಎನ್ನೋಣ.

ಇದನ್ನು ಒಂದು ಜನಪದ ಕತೆಯ ಮೂಲಕ ಅರಿಯುವ ಪ್ರಯತ್ನ ಮಾಡೋಣ. ನಮ್ಮ ಹಳ್ಳಿಯಲ್ಲಿ ಒಬ್ಬ ಜಮೀನ್ದಾರನ ಮಗ ಇರುತ್ತಾನೆ, ಆತ ಸುತ್ತಮುತ್ತಲಿನ ಜನರನ್ನು ಪ್ರೀತಿಯಿಂದ, ಗೌರವದಿಂದ, ಕೆಡುಕನ್ನು ಮಾಡುವವರನ್ನು ಗದರಿಸುತ್ತ ಇರುತ್ತಾನೆ ಎಂದುಕೊಳ್ಳೋಣ. ಆತನ ಮಗ ಅಥವಾ ಮಗಳು ಊರಿನಲ್ಲಿ ಹೇಗೆ ಇರುತ್ತಾರೆ? ತಮ್ಮದೇ ಠೀವಿಯಲ್ಲಿ ಊರಿನ ಜನರನ್ನು ಮಾತನಾಡಿಸುತ್ತಾರೆ. ಊರಿನ ಜನರೂ ಸಹಿತ ಜಮೀನ್ದಾರರ ಮಕ್ಕಳು ಎಂದು ಗೌರವದಿಂದ, ಅನೇಕ ಬಾರಿ ಹಿರಿಯರೂ ಬಹುವಚನದಲ್ಲೇ ಮಾತನಾಡಿಸುತ್ತಾರೆ.

ಇದೇ ಊರಿನಲ್ಲಿ ಒಬ್ಬ ಕಳ್ಳ, ಅತ್ಯಾಚಾರಿ ಇದ್ದ ಎಂದುಕೊಳ್ಳೋಣ. ಆತನ ಮಗನ ವರ್ತನೆ, ಅವನಿಗೆ ಊರವರು ನೀಡುವ ಗೌರವ ಹೇಗಿರುತ್ತದೆ? ಆತನ ಮನಸ್ಸಿನ ಒಳಗೊಳಗೇ ತನ್ನ ತಂದೆಯ ಹಿನ್ನೆಲೆ ಕೊರೆಯುತ್ತಿರುತ್ತದೆ. ಬಹುಶಃ ಎಲ್ಲರೂ ಇದನ್ನೇ ಮಾತನಾಡುತ್ತಿರಬೇಕು, ನಾನು ಆ ಕಡೆ ಹೋದಕೂಡಲೆ ನನ್ನನ್ನು ಆಡಿಕೊಳ್ಳಬಹುದು ಎಂದೇ ಯೋಚನೆ ಇರುತ್ತದೆ. ಆದರೆ ಮೇಲ್ನೋಟಕ್ಕೆ ಮಾತ್ರ ತಾನು ಇದ್ಯಾವುದನ್ನೂ ಯೋಚನೆ ಮಾಡುತ್ತಿಲ್ಲ ಎನ್ನುವಂತೆ Pretend ಮಾಡುತ್ತಿರುತ್ತಾನೆ. ಈಗ ಇಂಗ್ಲೆಂಡ್‌ಗೆ ಇರುವ ಸ್ಥಿತಿಯೂ ಇದೇ.

ಹಿಂದೊಮ್ಮೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮಾತನಾಡುತ್ತ, ಬ್ರಿಟನ್ನಲ್ಲಿರುವ ವಸ್ತು ಸಂಗ್ರಹಾಲಯಗಳನ್ನು ʼಚೋರ್ ಬಜಾರ್ʼ ಎಂದಿದ್ದರು. ಅಲ್ಲಿನ ವಸ್ತು ಸಂಗ್ರಹಾಲಯದಲ್ಲಿರುವ ವಸ್ತುಗಳು, ವಿಗ್ರಹಗಳು ಭಾರತ ಸೇರಿ, ಬ್ರಿಟಿಷರು ಆಳುತ್ತಿದ್ದ ಕಾಮನ್ವೆಲ್ತ್ ದೇಶಗಳಿಂದ ಕದ್ದೊಯ್ದಿದ್ದು. ಅಲ್ಲಿನ ಶ್ರೀಮಂತರ ಮನೆಗಳಲ್ಲಿರುವ ಪ್ರಾಣಿಗಳ ಮುಖ, ದೇಹಗಳು (ಟ್ರೋಫಿ), ಇಲ್ಲಿನ ಕಾಡುಗಳಲ್ಲಿ ನಿರ್ದಯವಾಗಿ ಬೇಟೆಯಾಡಿದವು. ಈ Guilt (ಅಪರಾಧಿ ಪ್ರಜ್ಞೆ) ಬ್ರಿಟಿಷರನ್ನು ಕಾಡುತ್ತಿದೆ. ಆದರೆ ಈ ಐತಿಹಾಸಿಕ ಪ್ರಮಾದವನ್ನು ನೇರವಾಗಿ ಒಪ್ಪಲು ಸಿದ್ಧವಾಗಿಲ್ಲ. 1919ರಲ್ಲಿ ಭಾರತದ ಪಂಜಾಬಿನ ಅಮೃತಸರದಲ್ಲಿ ನಡೆದ ಹತ್ಯಾಕಾಂಡ ಯಾರಿಗೆ ನೆನಪಿಲ್ಲ? ಸಿಖ್ಖರ ಪವಿತ್ರ ಕೇಂದ್ರವಾದ ಗೋಲ್ಡನ್ ಟೆಂಪಲ್‌ನಿಂದ ಸ್ವಲ್ಪವೇ ದೂರದಲ್ಲಿರುವ ಜಲಿಯನ್ ವಾಲಾ ಬಾಗ್ ನಲ್ಲಿ ಬೈಸಾಕಿ ಹಬ್ಬದ ದಿನ ಸೇರಿದ್ದ ಜನರ ಮೇಲೆ ಅಂಧಾದುಂದಿ ಗುಂಡು ಹಾರಿಸಿದವರು ಬ್ರಿಟಿಷರು.

ಹೆಂಗಸರು, ಮಕ್ಕಳೆನ್ನದೆ 1,500ಕ್ಕೂ ಹೆಚ್ಚು ಜನರು ಪ್ರಾಣ ತೆತ್ತರು. ಈ ಗೋಲಿಬಾರ್ ಗೆ ಆದೇಶ ನೀಡಿದ ಜನರಲ್ ಡಯರ್ ಮಾಡಿದ್ದು ಸರಿ ಎಂದು, ಆಂಗ್ಲೋ-ಇಂಡಿಯನ್ ಕಾದಂಬರಿಕಾರ ಜೋಸೆಫ್ ರುಡ್ಯರ್ಡ್ ಕಿಪ್ಲಿಂಗ್ ಸಮರ್ಥನೆ ಮಾಡಿಕೊಂಡಿದ್ದ. ಕಿಪ್ಲಿಂಗ್ ಯಾರು ಗೊತ್ತೇ? ನಾವೆಲ್ಲರೂ ಬಾಲ್ಯದಲ್ಲಿ ವೀಕ್ಷಿಸಿ, ಆನಂದಿಸಿದ ಧಾರಾವಾಹಿ ʼಜಂಗಲ್ ಬುಕ್ʼನ ಕರ್ತೃ. ಆದರೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಿಂದ ರವೀಂದ್ರನಾಥ ಟ್ಯಾಗೋರರು ಕುದ್ದು ಹೋದರು. ಬ್ರಿಟಿಷರು ತಮಗೆ ನೀಡಿದ್ದ ನೈಟ್ ಹುಡ್ ಪ್ರಶಸ್ತಿಯನ್ನು ಹಿಂದಿರುಗಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.

2019ಕ್ಕೆ ಈ ಘಟನೆ ನಡೆದು 100ನೇ ವರ್ಷ. ನೂರು ವರ್ಷವಾದ ನಂತರವಾದರೂ ಈ ಘಟನೆಗೆ ಬ್ರಿಟಿಷರು ಕ್ಷಮಾಪಣೆ ಕೇಳುತ್ತಾರೆ ಎಂದು ಭಾವಿಸಲಾಗಿತ್ತು. ಇದಕ್ಕೂ ಮೊದಲಿನಿಂದಲೇ ಬ್ರಿಟಿಷ್ ಸರ್ಕಾರದ ಮೇಲೆ ಭಾರತೀಯರಷ್ಟೆ ಅಲ್ಲದೆ ಬ್ರಿಟನ್‌ನ ಸೂಕ್ಷ್ಮ ಸಂವೇದನೆಯ ಕೆಲ ಸಂಸದರೂ ಒತ್ತಾಯ ಮಾಡುತ್ತಲೇ ಬಂದಿದ್ದಾರೆ. 2013ರಲ್ಲಿ ಭಾರತಕ್ಕೆ ಆಗಮಿಸಿದ್ದ ಪ್ರಧಾನಿ ಡೇವಿಡ್ ಕೆಮರೂನ್, ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಒಂದು ʼನಾಚಿಕೆಗೇಡಿನ ಸಂಗತಿʼ ಎಂದರು. ಭಾರತದ ಭೇಟಿ ಸಂದರ್ಭದಲ್ಲಿ ಜಲಿಯನ್ ವಾಲಾ ಬಾಗಿಗೆ ಭೇಟಿ ನೀಡಿದ್ದ ರಾಣಿ ಎಲಿಜಬೆತ್, ಪಾದರಕ್ಷೆ ತೆಗೆದು ಸ್ಮಾರಕದ ಬಳಿ ತೆರಳಿದ್ದರು. ಆದರೆ ಯಾರೂ ಸಹಿತ Sorry ಎಂಬ ಐದಕ್ಷರವನ್ನು ಹೇಳಲು ಸಿದ್ಧರಿಲ್ಲ. 2019ರಲ್ಲಿಯೂ ಪ್ರಧಾನಿ ತೆರೆಸಾ ಮೇ ಮಾತನಾಡುತ್ತ, ʻತೀವ್ರ ಸಂತಾಪʼ ಸೂಚಿಸಿದರಾದರೂ Sorry ಎನ್ನಲೇ ಇಲ್ಲ.

ಇದೆಲ್ಲವನ್ನೂ ನೋಡುತ್ತಿದ್ದ ಸೆಂಟರ್ಬರಿ ಆರ್ಚ್ ಬಿಷಪ್ ಜಸ್ಟಿನ್ ವೆಲ್ಬೀ, ʻಬ್ರಿಟಿಷ್ ಸರ್ಕಾರ Sorry ಕೇಳಲು ಸಿದ್ಧವಿಲ್ಲ. ಇಡೀ ದೇಶದ ಪರವಾಗಿ ನಾನು ಮಾತನಾಡಲು ಸಾಧ್ಯವಿಲ್ಲ. ಆದರೆ ಏಸುವಿನ ಹೆಸರಿನಲ್ಲಿ ನಾನು ಮಾತನಾಡಬಹುದು. ಇಂತಹ ಕೃತ್ಯ ನಡೆದಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ ಹಾಗೂ ಇದಕ್ಕಾಗಿ ನಾನು ವೈಯಕ್ತಿಕ ನೆಲೆಗಟ್ಟಿನಲ್ಲಿ ಕ್ಷಮೆ ಕೇಳುತ್ತೇನೆʼ ಎಂದಿದ್ದರು. ಇದಕ್ಕೇ ಹೇಳಿದ್ದು, ಬ್ರಿಟನ್ ಬೌದ್ಧಿಕ ದಾರಿದ್ರ್ಯ ಹೊಂದಿದೆ ಎಂದು.

ತನ್ನ ಪೂರ್ವಜರು ತಿಳಿದೋ, ತಿಳಿಯದೆಯೋ ಮಾಡಿದ ತಪ್ಪನ್ನು ಒಪ್ಪಿಕೊಳ್ಳದೇ ಏಳಿಗೆ ಸಾಧಿಸಲು ಸಾಧ್ಯವಿಲ್ಲ. ಭಾರತದಲ್ಲೂ ಅಸ್ಪೃಶ್ಯತೆಯಂತಹ ಕೀಳು ಆಚರಣೆ ಇದೆ. ಈ ಹಿಂದೆ ಅದು ಘೋರವಾಗಿತ್ತು. ದಲಿತರ ನೆರಳನ್ನೂ ಸೋಂಕಿಸಿಕೊಳ್ಳದಷ್ಟು ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿತ್ತು. ಇದನ್ನು ಬೇರಾರೂ ಖಂಡಿಸಲಿಲ್ಲ. ಮೊದಲಿಗೆ ಖಂಡನೆ ಮಾಡಿದ್ದೇ ಭಾರತೀಯರು. ಅದರಲ್ಲೂ, ತುಳಿತಕ್ಕೊಳಗಾದವರು ಮಾತ್ರವಲ್ಲ, ಸಮಾಜದಲ್ಲಿ ಎಲ್ಲ ಗೌರವಗಳನ್ನೂ ಯಥೇಚ್ಚವಾಗಿ ಪಡೆಯುತ್ತಿದ್ದವರೂ ವಿರೋಧಿಸಿದರು. ನಾರಾಯಣ ಗುರುಗಳಿಂದ, ಸ್ವಾಮಿ ವಿವೇಕಾನಂದರವರೆಗೆ, ಮಹಾತ್ಮಾ ಗಾಂಧಿಯಿಂದ ಡಾ. ಬಿ.ಆರ್. ಅಂಬೇಡ್ಕರರವರೆಗೆ ಈ ಸ್ಥಿತಿಯನ್ನು ಸರಿಪಡಿಸಲು ಯತ್ನಿಸಿದರು. ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಬರೋಡಾದ ಮಹಾರಾಜ ಸಯ್ಯಾಜಿರಾವ್ ಗಾಯಕ್ವಾಡ್, ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜ್ ವರೆಗೆ ಬಹಳಷ್ಟು ಆಳರಸರೂ ಈ ಪರಿಹಾರಕ್ಕೆ ದನಿಗೂಡಿಸಿದರು.

ಇದನ್ನೂ ಓದಿ | ಸವಿಸ್ತಾರ ಅಂಕಣ | ಗೊಂದಲದ ಮಾತಿನ ಮೂಲಕ ʼಭಾರತ ಭಂಜನೆʼ ಮಾಡುವಿರೇಕೆ?

1969ರ ಡಿಸೆಂಬರ್ 13, 14ರಂದು ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕ ಪ್ರಾಂತೀಯ ಸಮ್ಮೇಳನ, ಅಸ್ಪೃಶ್ಯತೆ ನಿವಾರಣೆಯ ಮಹತ್ವದ ಸಂದೇಶವನ್ನು ದೇಶಕ್ಕೆ ನೀಡಿತು. ದೇಶದ ಎಲ್ಲ ಮೂಲೆಗಳಿಂದ ಆಗಮಿಸಿದ್ದ 60 ಧರ್ಮಾಚಾರ್ಯರು, ವಿಹಿಂಪದ ಅಂದಿನ ಅಧ್ಯಕ್ಷ ಉದಯಪುರದ ಮಹಾರಾಣಾ, ಮಹಾಪೋಷಕಿಯಾಗಿದ್ದ ಗ್ವಾಲಿಯರ್ ರಾಜಮಾತೆ ವಿಜಯರಾಜೇ ಸಿಂಧಿಯಾ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಹಿರಿಯ ಲೇಖಕಿ ಜಯದೇವ ತಾಯಿ ಲಿಗಾಡೆ, ನಿವೃತ್ತ ಐಎಎಸ್ ಅಧಿಕಾರಿ ಆರ್. ಭರಣಯ್ಯ ಸೇರಿ ಅನೇಕರು ಈ ಸಮ್ಮೇಳನಕ್ಕೆ ಸಾಕ್ಷಿಯಾಗಿದ್ದರು. ಸಭೆಯಲ್ಲಿ ಅಸ್ಪೃಶ್ಯತೆ ಕುರಿತು ಚರ್ಚೆಗಳು ನಡೆದವು. ನಂತರ ಎಲ್ಲ ಸಾಧು ಸಂತರೂ ಒಗ್ಗಟ್ಟಿನ ಧ್ವನಿಯಲ್ಲಿ ‘ನ ಹಿಂದುಃ ಪತಿತೋ ಭವೇತ್’ (ಹಿಂದೂ ಆದವನು ಪಾಪಿಯಾಗಲು ಸಾಧ್ಯವೇ ಇಲ್ಲ) ಹಾಗೂ ‘ಹಿಂದವಃ ಸೋದರಾಃ ಸರ್ವೇ’ (ಹಿಂದೂಗಳೆಲ್ಲರೂ ಸೋದರರು) ಎಂಬ ಎರಡು ಘೋಷಣೆಗಳನ್ನು ಮೊಳಗಿಸಿದರು. ಈ ಉಸಿರಿನಲ್ಲಿಯೇ, ಅಸ್ಪೃಶ್ಯತೆಯು ಹಿಂದೂ ಧರ್ಮದೊಳಗೆ ತೂರಿಕೊಂಡಿರುವ ದೊಡ್ಡ ಕಳಂಕ ಎಂಬುದನ್ನು ಎಲ್ಲ ಸಾಧು ಸಂತರು, ಗಣ್ಯರು ಒಪ್ಪಿದರು. ಆದರೆ, ಅಸ್ಪೃಶ್ಯತೆಯು ಹಿಂದೂ ಧರ್ಮದ ಭಾಗವಾಗಿದೆ ಎಂಬ ತಥಾಕಥಿತ ವಾದ ಸಂಪೂರ್ಣ ಸುಳ್ಳು ಎಂಬುದನ್ನು ವಿಹಿಂಪ ಸಾಬೀತುಪಡಿಸಿತು. ಹಿಂದೂ ಧರ್ಮಶಾಸ್ತ್ರಗಳಲ್ಲಿ ಅಸ್ಪೃಶ್ಯತೆಗೆ ಅವಕಾಶವಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿತು.

ಹೀಗೆ ಘೋಷಣೆ ಮಾಡಿ ಐವತ್ತು ವರ್ಷ ಕಳೆದಿದೆ, ಭಾರತದಲ್ಲಿ ಅಸ್ಪೃಶ್ಯತೆ ಸಂಪೂರ್ಣ ನಿವಾರಣೆ ಆಯಿತೇ? ಇನ್ನೂ ಶೋಷಣೆ ಇಲ್ಲವೇ ಎಂದು ಪ್ರಶ್ನಿಸಬಹುದು. ಖಂಡಿತ ಇಂದಿಗೂ ಅಸ್ಪೃಶ್ಯತೆ ಇದೆ. ಗ್ರಾಮಾಂತರದ ಜತೆಗೆ ನಗರಗಳಲ್ಲೂ ವಿಭಿನ್ನ ಸ್ವರೂಪದಲ್ಲಿ ಇದೆ. ಆದರೆ ಇಲ್ಲಿ ಪ್ರಶ್ನೆ ಇರುವುದು, ಭಾರತದ ಆಡಳಿತಗಾರರು, ಚಿಂತಕರು, ಜನಾಭಿಪ್ರಾಯ ಮೂಡಿಸುವವರು ಇದನ್ನು ನಿರಾಕರಿಸಿದ್ದಾರೆಯೇ ಇಲ್ಲವೇ ಎನ್ನುವುದು. ಭಾರತದ ಬೌದ್ಧಿಕ ವಲಯ ಇಂದು ಅಸ್ಪೃಶ್ಯತೆಯನ್ನು ಒಪ್ಪುತ್ತಿಲ್ಲ. ಅದನ್ನು ಜನರ ಮನಸ್ಸಿನ ಆಳಕ್ಕೆ ಇಳಿಸಲು ಅದರದ್ದೇ ಆದ ಸಮಯ ತೆಗೆದುಕೊಳ್ಳುತ್ತದೆ. ಆದರೆ ಬ್ರಿಟನ್, ತನ್ನ ತಲೆಯಿಂದ ಇಂತಹದ್ದೊಂದು ಕಳಂಕವನ್ನು ಬೌದ್ಧಿಕವಾಗಿಯೂ ಕಳೆದುಕೊಳ್ಳಲು ಸಿದ್ಧವಾಗಿಲ್ಲ. ಬೌದ್ಧಿಕವಾಗಿಯೇ ಸಿದ್ಧವಾಗಿಲ್ಲ ಎಂದ ಮೇಲೆ ಆಚರಣೆಯಲ್ಲಿ ಹೇಗೆ ವ್ಯಕ್ತವಾಗುತ್ತದೆ?

ಇದೇ ಬೌದ್ಧಿಕ ದಾರಿದ್ರ್ಯದಿಂದಾಗಿ ಬ್ರಿಟನ್ ಇಂದು ಆರ್ಥಿಕವಾಗಿಯೂ ಸಂಕಷ್ಟದಲ್ಲಿದೆ. ಇತಿಹಾಸದಲ್ಲಿ ನಡೆಸಿದ ಪ್ರಮಾದಗಳ ಸಂಕೋಲೆಯಿಂದ ಬಿಡಿಸಿಕೊಳ್ಳದೆ, ಹೊಸತನಕ್ಕೆ ತೆರೆದುಕೊಳ್ಳಲು ಆಗುತ್ತಿಲ್ಲ. ಇಂತಹ ಹೊತ್ತಿನಲ್ಲಿ ಅಲ್ಲಿನ ಜನರಿಗೆ ಭಾರತೀಯನೊಬ್ಬ ಆಶಾಕಿರಣವಾಗಿ ಕಂಡಿದ್ದಾನೆ.

ಇದನ್ನೂ ಓದಿ | ಸವಿಸ್ತಾರ ಅಂಕಣ | ಪಿಎಫ್ಐ ಜತೆಗೆ ಆರ್‌ಎಸ್ಎಸ್ ಬ್ಯಾನ್ ಆಗಲಿ ಎನ್ನುವ ಕಾಂಗ್ರೆಸ್ ಈ ಸತ್ಯವನ್ನು ಅರಿಯಲಿ

ರಿಷಿ ಸುನಕ್ ನೇರವಾಗಿ ಭಾರತದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಅನೇಕರು ವಾದಿಸುತ್ತಾರೆ. ಅವರ ತಾತ ಹುಟ್ಟಿದ್ದು ಈಗಿನ ಪಾಕಿಸ್ತಾನದ ಪಂಜಾಬಿನಲ್ಲಿ, ಅಲ್ಲಿಂದ ಕೀನ್ಯಾಕ್ಕೆ ತೆರಳಿದರು. ಕೀನ್ಯಾದಿಂದ ಬ್ರಿಟನ್ ಗೆ ತೆರಳಿದ ಎರಡನೇ ಪೀಳಿಗೆಗೆ ರಿಷಿ ಸುನಕ್ ಜನಿಸಿದರು ಎನ್ನುವುದು ಈ ವಾದಕ್ಕಿರುವ ಪುಷ್ಟಿ. ಇದು ಸತ್ಯ. ಆದರೆ ಇಷ್ಟೆಲ್ಲದರ ನಂತರವೂ ರಿಷಿ ಸುನಕ್, ಭಾರತದ ಜ್ಞಾನ ಪರಂಪರೆಯನ್ನು ಬ್ರಿಟನ್‌ನಲ್ಲಿ ಪ್ರತಿನಿಧಿಸುತ್ತಿದ್ದಾರೆ ಎಂದೇ ಹೇಳಬೇಕು.
ಏಕೆಂದರೆ, ಈಗಾಗಲೆ ಅನೇಕರಿಗೆ ತಿಳಿದಿರುವಂತೆ ರಿಷಿ ಸುನಕ್ ಯಾವುದೇ ರಾಜಕೀಯ ಕುಟುಂಬದಿಂದ ಬಂದವರಲ್ಲ. ಯಾವುದೇ ಉದ್ಯಮಪತಿಯ ಕುಟುಂಬದವರಲ್ಲ. ಅವರು ಇಂದು ಬ್ರಿಟನ್ ಪ್ರಧಾನಿಯಾಗಿರುವುದು ಕೇವಲ ಎಂದರೆ ಕೇವಲ ಅವರ ಜ್ಞಾನ, ನೈತಿಕತೆಯಿಂದಾಗಿ. ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾದ ಕೂಡಲೆ ಭಾರತಕ್ಕೇನು ಲಾಭ ಎಂದು ಅನೇಕರು ಕೇಳುತ್ತಾರೆ. ಹಾಗೆ ಯೋಚಿಸುವುದೇ ತಪ್ಪು. ಮೊದಲನೆಯದಾಗಿ, ಭಾರತಕ್ಕೆ ಒಳಿತು ಮಾಡಲು ರಿಷಿ ಸುನಕ್ ಅವರನ್ನು ಅಲ್ಲಿನ ಜನರು ಆಯ್ಕೆ ಮಾಡಿಲ್ಲ. ಸ್ವತಃ ರಿಷಿ ಸುನಕ್ ಸಹ, ಬ್ರಿಟನ್ ಏಳಿಗೆಯನ್ನೇ ತಮ್ಮ ಮೊದಲ ಮತ್ತು ಕೊನೆಯ ಆದ್ಯತೆ ಎಂಬ ನಿಷ್ಠೆಯನ್ನು ಹೊಂದಿದ್ದಾರೆ ಎನ್ನುವುದು ಅವರ ಅನೇಕ ಭಾಷಣಗಳಿಂದಲೇ ತಿಳಿಯಬಹುದು.

ಎರಡನೆಯದು, ಭಾರತ ಎಂದಿಗೂ ತನ್ನ ಲಾಭವನ್ನು ಆಲೋಚಿಸುವುದೂ ಇಲ್ಲ. ʼಲೋಕಾ ಸಮಸ್ತಾ ಸುಖಿನೋ ಭವಂತುʼ ಎಂದ ದೇಶ ಭಾರತ. ವಿಶ್ವದ ಒಳಿತಿನಲ್ಲೇ ಭಾರತದ ಒಳಿತಿದೆ ಎಂದು ಭಾವಿಸುತ್ತದೆ. ಇದೇ ಕಾರಣಕ್ಕೆ ವಿಶ್ವಾದ್ಯಂತ ಭಾರತೀಯರನ್ನು ಕಂಡರೆ, ಅದರಲ್ಲೂ ಇಲ್ಲಿನ ಸನಾತನ ಪರಂಪರೆಯನ್ನು ಗೌರವಿಸುವ, ಆಚರಿಸುವವರನ್ನು ಕಂಡರೆ ಗೌರವವಿದೆ. ಅಂತಹವರ ನಿಷ್ಠೆಯ ಕುರಿತು ಕೊಂಚವೂ ಅನುಮಾನವನ್ನು ವ್ಯಕ್ತಪಡಿಸುವುದೇ ಇಲ್ಲ.

ವಿಶ್ವದಲ್ಲಿ ಇಲ್ಲಿಯವರೆಗೆ ಅನೇಕ ಶಕ್ತಿಗಳು ಕೆಲಸ ಮಾಡುತ್ತಿದ್ದವು. ಕೆಲಕಾಲ ಮಿಲಿಟರಿ ಶಕ್ತಿಯು ವಿಶ್ವವನ್ನು ಆಳುತ್ತಿದ್ದರೆ, ಕೆಲಕಾಲ ಹಣದ ಶಕ್ತಿಯು ಆಳ್ವಿಕೆ ನಡೆಸಿತು. 21ನೇ ಶತಮಾನ ಜ್ಞಾನದ ಶತಮಾನ. ಯಾರಲ್ಲಿ ಜ್ಞಾನವಿದೆಯೋ ಆತನನ್ನು ಜಗತ್ತು ಹಿಂಬಾಲಿಸುತ್ತದೆ. ಹಾಗಾಗಿ ಈಗ ಭಾರತಕ್ಕೆ, ಭಾರತದ ಜ್ಞಾನಕ್ಕೆ ಸಹಜವಾಗಿ ಮನ್ನಣೆ ಸಿಗುತ್ತಿದೆ. ಈ ಜ್ಞಾನ ಪರಂಪರೆಯು ವಿಶ್ವಾದ್ಯಂತ ಪಸರಿಸಿದ ಬಗೆಯನ್ನು ಮುಂದಿನ ಲೇಖನದಲ್ಲಿ ನೋಡೋಣ.

ಇದನ್ನೂ ಓದಿ | ಸವಿಸ್ತಾರ ಅಂಕಣ | ‘ಭಾರತದ ಜಾತ್ಯತೀತತೆʼ ಎನ್ನುವುದು ʼತುಷ್ಟೀಕರಣʼಕ್ಕೆ ಹೊದಿಸಿದ ಕವಚ

Exit mobile version