Site icon Vistara News

Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?

Ramzan fasting

#image_title

ಹಾಶಿಂ ಬನ್ನೂರು (ಲೇಖಕರು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ)
ಇಸ್ಲಾಮಿಕ್ ಹಿಜರಿ ಕ್ಯಾಲೆಂಡರ್ ಪ್ರಕಾರ ಹನ್ನೆರಡು ತಿಂಗಳುಗಳಲ್ಲಿ ಅತ್ಯಂತ ಶ್ರೇಷ್ಠವಾದಂತಹ ತಿಂಗಳಾಗಿದೆ ಪವಿತ್ರ ರಮಳಾನ್. ಎಲ್ಲಾ ತಿಂಗಳುಗಳ ರಾಜ ಎಂಬ ಕೀರ್ತಿಯೂ ಈ ತಿಂಗಳಿಗಿದೆ. ಇಸ್ಲಾಮಿನ ಪವಿತ್ರ ಗ್ರಂಥ ಖುರ್-ಆನ್ ಅವತರಣಗೊಂಡದ್ದು ಈ ತಿಂಗಳಲ್ಲಿ. ಅಲ್ಲದೇ ಹಲವಾರು ಇಸ್ಲಾಮಿಕ್ ಚಾರಿತ್ರಿಕ ಘಟನೆಗಳಿಗೆ ಈ ತಿಂಗಳು ಸಾಕ್ಷಿಯಾಗಿದೆ.

ಇಸ್ಲಾಮಿನ ಕರ್ಮಶಾಸ್ತ್ರ ಪಂಚ ಸ್ಥಂಭಗಳಲ್ಲಿರುವ ಎರಡನೇಯ ಝಕಾತ್ (ದಾನ) ನೀಡುವುದು ಮತ್ತು ಮೂರನೇ ಉಪವಾಸ ವ್ರತಾಚರಣೆ ಕರ್ಮ ಈ ತಿಂಗಳ ಪ್ರಮುಖ ಆರಾಧನೆಯಾಗಿದೆ. ಅನಾರೋಗ್ಯ, ದೀರ್ಘ ಯಾತ್ರೆ ಮತ್ತು ಮುಟ್ಟಿನಂತಹ ಸಮಸ್ಯೆ ಇರುವವರನ್ನು ಹೊರತುಪಡಿಸಿ ಷರತ್ತುಗಳ ಅನ್ವಯದೊಂದಿಗೆ ಪ್ರತಿಯೊಬ್ಬ ಮುಸ್ಲಿಮನಿಗೂ ಈ ತಿಂಗಳ ವ್ರತಾಚರಣೆ ಕಡ್ಡಾಯವಾಗಿದೆ.

ವ್ರತಾಚರಣೆಯಿಂದ ಆಧ್ಯಾತ್ಮಿಕತೆಯ ವರ್ಧನೆ ಹಾಗೂ ದೇಹ ಇಚ್ಛೆಯನ್ನು ತ್ಯಜಿಸಿ ದೈವ ಇಚ್ಛೆಯನ್ನು ಮೈಗೂಡಿಸಿಕೊಂಡು ಪುಣ್ಯ ಪ್ರಾಪ್ತಿಯೇ ಮೂಲ ಉದ್ದೇಶ. ಹೆಚ್ಚಿನ ಸಮಯಗಳ ಕಾಲ ಖಾಲಿ ಹೊಟ್ಟೆಯಲ್ಲಿ ಇರುವುದರಿಂದ ಆಧ್ಯಾತ್ಮಿಕತೆ ಹೆಚ್ಚಿಸಲು ಮತ್ತು ಧ್ಯಾನಾರಾಧನೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ. ಕೇವಲ ಖಾಲಿ ಹೊಟ್ಟೆಯಲ್ಲಿ ಇರುವುದರಿಂದ ವ್ರತಾಚರಣೆ ಸಂಪೂರ್ಣವಲ್ಲ ನಮ್ಮ ಮನಸ್ಸು ಶುದ್ಧೀಕರಣಗೊಳಿಸಿ ದುಶ್ಚಟಗಳಿಂದ ದೂರವಿದ್ದು ಕಾಮಾಸಕ್ತಿಯಿಂದ ಮುಕ್ತವಾಗಿರಬೇಕು.

ಒಂದು ತಿಂಗಳ ಕಾಲ ನಿರಂತರವಾಗಿ ವ್ರತಾಚರಣೆಯಿಂದ ಹಲವಾರು ಉಪಯೋಗಗಳಿವೆ. ಇದು ಧಾರ್ಮಿಕ ಹಾಗೂ ವೈಜ್ಞಾನಿಕವಾಗಿ ಸಾಬೀತಾಗಿದೆ, ಇದಕ್ಕೆ ಪುರಾವೆಗಳು ಇವೆ. ಮನುಷ್ಯನಲ್ಲಿ ಚಿಂತನಾ ಶಕ್ತಿ ವೃದ್ಧಿಸುತ್ತದೆ, ದೇಹದೊಳಗಿನ ಟ್ಯಾಕ್ಸಿನ್ ಗಳು ನಿವಾರಣೆಯಾಗುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹೀಗಾಗಿಯೇ ಆಧುನಿಕ ವಿಜ್ಞಾನಿಗಳು ಹಲವಾರು ಮಾರಕ ರೋಗಗಗಳಿಗೆ ಉಪವಾಸ ವ್ರತಾಚರಣೆ ಸಿದ್ಧೌಷಧ ಎಂದು ಹೇಳಿದ್ದಾರೆ.

ಹೆಚ್ಚಿದ ದೀರ್ಘಾಯುಷ್ಯ, ಜೀವಕೋಶಗಳ ಪುನರುತ್ಪಾದನೆ ಮತ್ತು ದುರಸ್ತಿ, ಹೆಚ್ಚಿದ ನ್ಯೂರಾನ್ ಉತ್ಪಾದನೆ, ಹೆಚ್ಚು ಸಮತೋಲಿತ ಇನ್ಸುಲಿನ್ ಮಟ್ಟಗಳು ಮತ್ತು ಸುಧಾರಿತ ಮೆದುಳಿನ ಪ್ಲಾಸ್ಟಿಟಿ ಸೇರಿದಂತೆ ಹಲವಾರು ಪ್ರಯೋಜನಗಳನ್ನು ಉಪವಾಸವು ಒದಗಿಸುತ್ತದೆ ಎಂದು ಪಾಶ್ಚಿಮಾತ್ಯ ಔಷಧ ವಿಜ್ಞಾನವು ಈಗ ಗುರುತಿಸುತ್ತದೆ.

ಉಪವಾಸದ ಬಗ್ಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿಸ್ಟೋಕ್ರಾಟರ್ ರಂತಹ ಅನೇಕ ವೈದ್ಯರು ತಮ್ಮ ಬಳಿ ಬರುವ ರೋಗಿಗಳಿಗೆ ವ್ರತಾಚರಿಸುವಂತೆ ನಿರ್ದೇಶಿಸುತ್ತಿದ್ದರು ಎಂದು ಚರಿತ್ರೆಯ ಪುಟಗಳಿಂದ ತಿಳಿದು ಬರುತ್ತದೆ.

ಅಲ್ಲದೆ ಉಪವಾಸ ಹಾರ್ಟ್ ಅಟ್ಯಾಕ್, ಫ್ಯಾಟ್, ಕೊಲೆಸ್ಟ್ರಾಲ್, ರಕ್ತದೊತ್ತಡ, ಅಸ್ತಮಾ, ಚರ್ಮದ ಸಮಸ್ಯೆಗಳಿಗೆ ಸುಲಭ ಪರಿಹಾರ, ಕ್ಷಯ ಹಾಗೂ ಮಲೇರಿಯ ರೋಗಿಗಳು ಉಪವಾಸ ಕೈಗೊಂಡರೆ ಬೇಗನೆ ಗುಣಮುಖರಾಗಬಹುದೆಂದು ಅಧುನಿಕ ಸಂಶೋಧಕರ ಅಭಿಪ್ರಾಯ.

ವಿಶ್ವವಿಖ್ಯಾತ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್ ‘ಮಾನವ ಪೂರ್ಣ ಆರೋಗ್ಯದಿಂದಿರಬೇಕಾದರೆ ವ್ರತಚರಣೆ ಅನಿವಾರ್ಯ’ ಎಂದಿದ್ದಾರೆ. ‘ಅನೇಕ ಅಲೋಪತಿ ಔಷಧಗಳಿಂದ ಗುಣವಾಗದ ರೋಗಗಳನ್ನು ಉಪವಾಸದ ಮೂಲಕ ನಾನು ಗುಣಪಡಿಸುತ್ತಿದ್ದೆ. ಈ ಕುರಿತು ಜನರು ಹೆಚ್ಚು ಜಾಗೃತವಾದರೆ ಹಲವು ಮಾರಕ ರೋಗಗಳನ್ನು ತಡೆಯಲು ಖಂಡಿತಾ ಸಾಧ್ಯವಿದೆ’ ಎಂದು ಖ್ಯಾತ ವೈದ್ಯ ಡಾ. ಝಹರ್ ಬರ್ಟ್ ಹೇಳುತ್ತಾರೆ.

ಲಂಡನ್ ವಿಶ್ವವಿದ್ಯಾನಿಲಯದ ಡಾ. ಅಲೆಕ್ಸ್ ಕಂಫರ್ಟ್ ಎಂಬ ವಿಶ್ವವಿಖ್ಯಾತ ಸಂಶೋಧಕ ಕೆಲವು ಇಲಿಗಳಗೆ ಆಹಾರ ನೀಡಿಯೂ, ಇನ್ನೂ ಕೆಲವು ಇಲಿಗಳಿಗೆ ಆಹಾರ ನೀಡದೆಯೂ ಸಂಶೋಧನೆ ನಡೆಸಿದಾಗ, ಉಪವಾಸವಿದ್ದ ಇಲಿಗಳು ಆಹಾರ ತಿಂದ ಇಲಿಗಳಿಗಿಂತ ಹೆಚ್ಚು ಕಾಲ ಬದುಕುತ್ತವೆ ಎಂದು ಸಾಬೀತಾಯಿತು.

ಜಗತ್ತಿನ ಮನುಷ್ಯರೆಲ್ಲರೂ ಕೆಲವೊಂದು ಸಂದರ್ಭಗಳಲ್ಲಿ ಉಪವಾಸ ಕೈಗೊಂಡರೆ ದೀರ್ಘಾಯುಷ್ಯ ಲಭಿಸುತ್ತದೆ ಎಂದು ಡಾ. ಅಲೆಕ್ಸ್ ಕಂಫರ್ಟ್ ಅವರ ಅಭಿಮತ. ಬ್ಯಾಕ್ಟೀರಿಯಗಳ ಮನೆಯಾದ ಹೊಟ್ಟೆಗೆ ಉಪವಾಸದ ಸಮಯದಲ್ಲಿ ಅನ್ನ ಸೇರದಿರುವುದರಿಂದ ಜಠರದ ಮೇಲೆ ಒತ್ತಡ ಕಡಿಮೆಯಾಗಿ ಜೀರ್ಣಕ್ರಿಯೆ ಸುಲಭವಾಗುತ್ತದೆ. ಹೀಗೆ ಹಲವಾರು ವಿಜ್ಞಾನಿಗಳು ವೃತಾಚರಣೆಯ ಉಪಯೋಗಗಳ ಕುರಿತು ಸಂಶೋಧನೆಗಳು ನಡೆಸಿದ್ದಾರೆ ಅಲ್ಲದೇ ಬುದ್ಧಿ ಜೀವಿಗಳು ಮತ್ತು ಆರೋಗ್ಯ ತಜ್ಞರಿಂದಲೂ ಸಾಬೀತಾಗಿದೆ.

ಒಟ್ಟಿನಲ್ಲಿ ಎಲ್ಲಾ ವಿಧ ಮಾನವ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ, ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶ. ಬದುಕಿನಲ್ಲಿ ಮಾಡಿದ ಪಾಪ ಕರ್ಮಗಳಿಗೆ ಕ್ಷಮೆ ಯಾಚಿಸುತ್ತಾ, ಮನಸ್ಸಿನಲ್ಲಿ ಮೂಡುವ ದುಷ್ಟ ಚಿಂತನೆಗಳಿಂದ ವಿಮೋಚನೆ ಪಡೆಯಬೇಕಾದ ಕಾಲ. ಶಾಂತಿ ಸುಖ ನೆಮ್ಮದಿಯಿಂದ ಇರಬೇಕಾದ ಸಮಯ. ಬಡವರಿಗೆ ದಾನ ಧರ್ಮಗಳನ್ನು ಮಾಡುವ ಮೂಲಕ ಇನ್ನೊಬ್ಬರ ಕಷ್ಟದಲ್ಲೂ ಪಾಲ್ಗೊಳ್ಳಲು ಝಕಾತ್ ನೀಡುವುದು ಕೂಡ ಕಡ್ಡಾಯವಾಗಿಸಿದೆ. ರಂಝಾನ್ ತಿಂಗಳಿನಲ್ಲಿ ಬಡವರು ಶ್ರೀಮಂತರು ಎಂಬ ಭೇದ ಭಾವವಿಲ್ಲದೆ ಎಲ್ಲರೂ ಒಂದಾಗಿ ಪ್ರೀತಿ ವಿಶ್ವಾಸದಿಂದ ಕೂಡಿ ಹಬ್ಬವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ : Summer Juices: ರಂಜಾನ್‌ ತಿಂಗಳಲ್ಲಿ ದೇಹ ತಂಪಾಗಿರಿಸಲು ಕುಡಿಯಲೇ ಬೇಕಾದ ಪಾನೀಯಗಳಿವು!

Exit mobile version