Site icon Vistara News

ಶಬ್ದ ಸ್ವಪ್ನ ಅಂಕಣ | ಪಾಡು ಹಾಡು

shabda swapna

ವ್ಯಾವಹಾರಿಕ ಬಳಕೆಯಲ್ಲಿ ಭಾಷೆ ವಿಷಯ, ಮಾಹಿತಿ, ವಿಚಾರ, ಭಾವನೆಗಳನ್ನು ಸಂವಹನಕ್ಕಾಗಿ ಉಪಯೋಗಿಸುವ ಮಾಧ್ಯಮ ಎಂಬುದು ಸಾಮಾನ್ಯ ತಿಳುವಳಿಕೆಯಾಗಿದೆ. ಆಲೋಚನೆ ಮತ್ತು ಅದನ್ನು ಅಭಿವ್ಯಕ್ತಿಸುವ ವಿಧಾನ ಪ್ರತ್ಯೇಕ ಎಂಬ ಗ್ರಹಿಕೆ ಇದಾಗಿದೆ. ಮನುಷ್ಯನ ಅನುಭವಕ್ಕೂ ಅದರ ಅಭಿವ್ಯಕ್ತಿಗೂ ಪ್ರತ್ಯೇಕ ಅಸ್ತಿತ್ವವನ್ನು ಪ್ರತಿಪಾದಿಸುವ ವಾದವನ್ನು ಹೇಯ್ಡೇಗರ್ ಹಾಗೂ ವಿಟ್ಗಿನ್ಸನ್ ನಿರಾಕರಿಸುತ್ತಾರೆ. ಹೇಯ್ಡೇಗರ್ ಪ್ರಕಾರ ಮನುಷ್ಯನ ಒಟ್ಟು ಸಾರವೇ ಭಾಷೆ; ಭಾಷೆ ಮನುಷ್ಯನ ಗುಣವಲ್ಲ; ಮನುಷ್ಯನೇ ಭಾಷೆ; ಭಾಷೆಯೇ ಆಲೋಚನೆ; ಆಲೋಚನೆ ಎಂಬ ಶಬ್ದದ ಮೂಲ ಧಾತು ‘ಲೋಚನ’; ಲೋಚನವೆಂದರೆ ಕಣ್ಣು; ಮೂಲಾರ್ಥದಲ್ಲಿ ಆಲೋಚನೆ ಎಂದರೆ ನೋಡುವುದಾಗಿದೆ. ಇರುವಿಕೆಯ ಅನಂತ ಸಾಧ್ಯತೆಗಳನ್ನು ಮೂರ್ತರೂಪಗಳಲ್ಲಿ ನೋಡುವ, ಹೇಳುವ ಮತ್ತು ನಮ್ಮನ್ನು ನಾವು ನಮ್ಮ ಇರುವಿಕೆಯಿಂದ ಪ್ರತ್ಯೇಕಿಸುವ ಸಾಮರ್ಥ್ಯವೇ ಭಾಷೆಯಾಗಿದೆ. ಮರಳಿ ಬಾರದ, ಕಳೆದ ನಿನ್ನೆ ಮತ್ತು ಸದ್ಯ ಇರದ ನಾಳೆಯನ್ನು ವರ್ತಮಾನ ವಾಸ್ತವದಲ್ಲಿ ಕಲ್ಪಿಸಿಕೊಳ್ಳುವ ಸಾಮರ್ಥ್ಯವನ್ನು ಸಾಧ್ಯವಾಗಿಸಿದ್ದು ಭಾಷೆಯ ತ್ರಿಕಾಲ ಮಹಿಮೆಯಾಗಿದೆ.

ಮೊದಲಿಗೆ ಆಲೋಚಿಸುತ್ತೇವೆ; ಆಮೇಲೆ ಅದರ ಅಭಿವ್ಯಕ್ತಿಗಾಗಿ ಭಾಷೆಯನ್ನು ನಿಯೋಜಿಸುತ್ತೇವೆ ಎಂಬ ನಂಬಿಕೆಯನ್ನು ಪ್ರಶ್ನಿಸಿ ವಿಟ್ಗಿನ್ಸನ್ ಅಭಿವ್ಯಕ್ತಿಯ ಪೂರ್ವದಲ್ಲಿ ಆಲೋಚನೆ ಎಲ್ಲಿರುತ್ತದೆ? ಹೇಗಿರುತ್ತದೆ? ಎಂದು ಕೇಳುತ್ತಾನೆ. ಏನಿದ್ದರೂ ಆಲೋಚನೆ ಮನಸಿನ ವ್ಯಾಪಾರ; ಭಾಷೆ ಹೊರಗಿನ ವಿದ್ಯಮಾನ ಎಂದು ವಿಭಜಿಸುವುದು ಅವನಿಗೆ ಒಪ್ಪಿಗೆಯಿಲ್ಲ. ಬೆಂಝಾಮಿನ್ ಲಿ. ವಾಘ್‌ನ ಸಂಶೋಧನೆ ಕುತೂಹಲಕರವಾಗಿದೆ. ಜಗತ್ತು ರೂಪರಹಿತ ವರ್ಣಲೋಕ; ಮನಸು ಗೆರೆಗಳನ್ನು ಕೊರೆಯಬಲ್ಲ ಚಿತ್ರಶಿಲ್ಪಿ; ವರ್ಣವನ್ನು ಬಳಸಿಕೊಂಡು ಗೆರೆಗಳ ಸಂಯೋಜನೆಯಿಂದ ಪ್ರಪಂಚವನ್ನು ಕತ್ತರಿಸಿ, ವಿಭಜಿಸಿ, ವರ್ಗೀಕರಿಸಿ ಆಕಾರವನ್ನು ಕೊಡುವುದೇ ಭಾಷೆಯಾಗಿದೆ ಎಂಬುದು ಅವನ ವಾದವಾಗಿದೆ. ವರ್ಣಚಿತ್ರದ ಪ್ರತಿಮೆಯ ಮೂಲಕ ಭಾಷೆಯ ಸ್ವರೂಪವನ್ನು ನಿರೂಪಿಸಿದ ಕ್ರಮ ಯೋಚಿಸಲು ಆಹ್ವಾನಿಸುತ್ತದೆ. ವರ್ಣ ಮತ್ತು ರೇಖೆ ಚಿತ್ರಕಲೆಯ ಅಂಗಾಂಗಗಳು; ಇವೆರಡರ ಹಾಸುಹೊಕ್ಕಿನ ಸಂಯೋಜನೆಯಿಂದ ಸೃಷ್ಟಿಯಾಗುವ ಭಾಷಾ ವ್ಯವಸ್ಥೆಯು ಆಲೋಚನಾ ವಿಧಾನವೂ ಹೌದು. ಭಾಷೆಯ ಬದಲಾವಣೆಯಿಂದ ಜಗತ್ತಿನಲ್ಲಿ ಮನುಷ್ಯನ ಇರುವಿಕೆಯನ್ನು ಅನಾವರಣಗೊಳಿಸುವ ಕ್ರಮವೂ ಇರುವನ್ನು ಗ್ರಹಿಸುವ ರೀತಿಯೂ ಬದಲಾಗುತ್ತದೆಯಲ್ಲವೆ? ಆಲೋಚನೆ ಮತ್ತು ಅಭಿವ್ಯಕ್ತಿಯ ಸಂಯುಕ್ತ ರೂಪವಾಗಿರುವ ಭಾಷೆ ವ್ಯಕ್ತಿಗತ ನೆಲೆಯನ್ನು ದಾಟಿದ ವ್ಯಕ್ತಿನಿರಪೇಕ್ಷಕ, ಜನಾಂಗದ ಸಮಷ್ಟಿಯ ವ್ಯಕ್ತವಾಣಿಯೂ ಜನಾಂಗದ ಸಮಷ್ಟಿ ಸುಪ್ತಪ್ರಜ್ಞೆಯೂ ಆಗಿರುತ್ತದೆ.

ಭಾಷೆ ಜನಾಂಗದ ಸ್ಮೃತಿಯ ನಾಭಿಯೂ ಹೌದು; ನಾಲಗೆಯೂ ಹೌದು. ಮಾನವ ಸಮುದಾಯದ ಸಾಧನೆ ಮತ್ತು ಶೋಧನೆಗಳು ಭಾಷೆಯ ಜೀವಕೋಶದಲ್ಲಿ ಅಂತಸ್ಥವಾಗಿರುತ್ತವೆ. ಸಮುದಾಯದ ಒಟ್ಟಂದದ ಸಾಂಸ್ಕೃತಿಕ ಸಾರವನ್ನು ಭಾಷೆ ತನ್ನ ಸಂರಚನೆಯಲ್ಲಿ ಅಂತರ್ಗತಗೊಳಿಸಿಕೊಂಡಿರುತ್ತದೆ. ಸೂಕ್ತ ಪ್ರತಿಭಾ ವಿಲಾಸದ ಸ್ಪರ್ಶದಿಂದ ವ್ಯಕ್ತಿಯಲ್ಲಿ ಅವು ಕಂಪಿಸುತ್ತ ಉದ್ದೀಪನಗೊಳ್ಳುವುದಲ್ಲದೆ ವ್ಯಕ್ತಿತ್ವದ ಮಿತಿಯನ್ನು ಮೀರುತ್ತವೆ. ಭಾಷೆ ಖಾಸಗಿ ಸೊತ್ತಾಗಿರುವುದರ ಜತೆಗೆ ಸಮುದಾಯದ ಸಂಪತ್ತೂ ಹೌದು. ಭಾಷೆಯ ಸೃಜನಶೀಲ ಧ್ಯಾನಸ್ಥ ಸ್ಥಿತಿಯಲ್ಲಿ ಭಾಷೆಯ ಸುಪ್ತ ಸಾರ ಪ್ರತ್ಯಕ್ಷವಾಗುತ್ತಲೇ ಜನಾಂಗದ ಭಾಷಾ ಪರಂಪರೆಯಲ್ಲಿ ವ್ಯಕ್ತಿತ್ವ ವಿಲೀನವಾಗುತ್ತದೆ. ಆನುವಂಶಿಕ ಗುಣಲಕ್ಷಣಗಳು ರಕ್ತವಾಹಿನಿಯ ಮೂಲಕ ತಲೆಮಾರುಗಳಲ್ಲಿ ಮುಂದುವರಿಯುವಂತೆ ಸಮುದಾಯದ ಅನುಕ್ತ ಅನುಭವಗಳು ಪುರಾಣ ಸಂಕೇತಗಳ, ಜಾನಪದ ಪ್ರತಿಮೆಗಳ, ಸಮೂಹದ ಮಿಥ್‍ಗಳ ರೂಪದಲ್ಲಿ ತೇಲುತ್ತ ಭಾಷಾ ದಾರ್ಶನಿಕನ ಮೂಲಕ ಮೂರ್ತಗೊಳ್ಳುತ್ತವೆ.

ಇದನ್ನೂ ಓದಿ | ಶಬ್ದಸ್ವಪ್ನ | ದೇವರನ್ನು ಕಾಣಿಸಿದ ಕಲಾವಿದ ರಾಜಾ ರವಿವರ್ಮ

ಇಲ್ಲಿ ಭಾಷಾ ದಾರ್ಶನಿಕ ಭಾಷೆಯನ್ನು ತಾತ್ವಿಕವಾಗಿಯೊ ಕಲಾತ್ಮಕವಾಗಿಯೊ ಅನುಭವಿಸಿ, ಅಭಿವ್ಯಕ್ತಿಸುವ ಸಾಮರ್ಥ್ಯವುಳ್ಳ ಕವಿ, ಕತೆಗಾರ ಯಾರೇ ಆಗಿರಬಹುದು. ಒಂದು ಯುಗದ ಜನಾಂಗದ ಮುಖವಾಣಿಯಾಗುವ ಕವಿಯನ್ನು ಭಾಷೆ ತನ್ನ ಅಭಿವ್ಯಕ್ತಿಯ ಮಾಧ್ಯಮವಾಗಿಸಿಕೊಳ್ಳುವುದು ಹೀಗೆ. ನಮ್ಮ ಜಾನಪದ ಅನಾಮಿಕ ಕವಿಗಳಿಗೆ ವ್ಯಕ್ತಿನಿರಪೇಕ್ಷತೆ ಸಾಧ್ಯವಾಯಿತು. ಸಮುದಾಯದ ದನಿಗೆ ಕೊರಳನ್ನು ಕೊಟ್ಟು, ಅಹಂಕಾರವನ್ನು ವಿಸರ್ಜಿಸಿಕೊಂಡು ಪರಂಪರೆಯಲ್ಲಿ ಕರಗಿ ಹೋಗುವ ಕಾವ್ಯ ಕವಿಗಿಂತ ದೊಡ್ಡದು ಎಂಬ ಸತ್ಯವನ್ನು ನಂಬಿದ್ದು ನಮ್ಮ ಮೌಖಿಕ ಜನಪದ. ಪಶ್ಚಿಮದ ಕಾವ್ಯದಲ್ಲಿ ಬಾರ್ಡ ಎಂಬ ಪದವಿದೆ; ಅದು ನಮ್ಮ ಲಾವಣಿಯಂತೆ ಇಡೀ ಜನಾಂಗದ ಸುಖ-ದುಃಖದ ಮುಖವಾಣಿಯಾಗಿದೆ.

ವ್ಯಕ್ತಿಗತ ಅನುಭವ ವ್ಯಕ್ತಿನಿರಪೇಕ್ಷ ಅನುಭಾವವಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಯನ್ನು ವಿವರಿಸಲು ‘ರಸ’ದ ಪರಿಭಾಷೆಯನ್ನು ಉಪಯೋಗಿಸುವುದು ಸಾಮಾನ್ಯ ಸಂಪ್ರದಾಯ. ವ್ಯಕ್ತಿಯ ಅನುಭವ ಒಂದು ನಿರ್ದಿಷ್ಟ ಸಂದರ್ಭದಿಂದ ಬಿಡುಗಡೆ ಹೊಂದಿ ಸಾಮಾನ್ಯೀಕೃತವಾಗುವ ಮಾಂತ್ರಿಕ ಪಲ್ಲಟದಿಂದ ಕವಿ ಕಾವ್ಯ ಸೃಷ್ಟಿಯಲ್ಲಿ ನಿಮಿತ್ತ ಮಾತ್ರವಾಗುತ್ತಾನೆ. ಪ್ರವಾಹೋಪಾದಿಯಲ್ಲಿ ಭಾಷೆ ಕವಿಯ ಮೂಲಕ ಹಾದು ಹೋಗುವಾಗ ಕವಿ ತನ್ನ ಸ್ವಂತಿಕೆಯನ್ನು ಸಾರ್ವತ್ರೀಕರಣಕ್ಕೆ ಒಪ್ಪಿಸಿಕೊಳ್ಳುತ್ತಾನೆ; ತನ್ನ ಸ್ವಂತಿಕೆಯ ಛಾಪನ್ನೂ ಮುದ್ರಿಸುತ್ತಾನೆ. ಪಾಡು ಹಾಡಾಗುವುದನ್ನು ಬೇಂದ್ರೆ ವಿವರಿಸುವುದು ಈ ಅರ್ಥದಲ್ಲಿಯೇ. ಕವಿ ಇಲ್ಲಿ ಕಾಲ ಪರಿಪಕ್ವವಾಗಲು ತನ್ನ ಅಂತಃಕರಣವನ್ನು ತೆರೆದುಕೊಂಡಿರುತ್ತಾನೆ. ಬೇಂದ್ರೆಯವರ ಪದ್ಯದ ಈ ಸಾಲುಗಳು ಹೇಳುವುದು ಇದನ್ನೇ: ‘ಅಚ್ಚರಿಯ ನನ್ನಿ ಜೀವಾಳದ ಪಾಡು ಹಾಡಿನೊಳಿಣಿಕಿತು/ ಶೋಕದೆಳೆಯಲಿ ಶ್ಲೋಕ ಹೆಣೆದಿರೆ ಲೋಕವೆ ರಸವುಂಡಿದೆ.’ ಈ ಸಾಲುಗಳು ಅಂಬಿಕಾತನಯನಿಂದ ಬಂದದ್ದು; ಬೇಂದ್ರೆಯಿಂದಲ್ಲ ಎಂಬ ಮಾತನ್ನು ಹೇಗೆ ಅರ್ಥೈಯಿಸಬೇಕು? ಈ ಸಾಲುಗಳಿಗೆ ರಾಮಾಯಣದ ಕ್ರೌಂಚಪಕ್ಷಿಗಳ ಸಾವು ಮತ್ತು ಅಗಲಿಕೆಯ ಶೋಕತಪ್ತ ವಿರಹದ ನೆನಪಿದೆ. ಅನುಭವ ವೈಯಕ್ತಿಕವಾದದ್ದು; ತಿಳುವಳಿಕೆಯಾಗಿ ಅದು ಎಲ್ಲರ ಬಾಳಿನ ರಸವಾಗಿ ಸಾರ್ವತ್ರಿಕವಾಗುತ್ತದೆ. ಪ್ರಕೃತಿಯಲ್ಲಿ ಒಂದಾಗುವ ಭಾವಸ್ಥಿತಿಯಲ್ಲಿ, ದೈವಿಕ ತನ್ಮತೆಯಲ್ಲಿ ವ್ಯಕ್ತಿತ್ವವನ್ನು ಲೀನಗೊಳಿಸುವ ಯೋಗ ಸಾಧನೆಯಲ್ಲಿ ಭಾಷೆ ವೈವಿಧ್ಯತೆಯನ್ನು ಮೀರಿ, ಐಕ್ಯತೆಗೇರಿ ಮೌನವಿಶ್ವವಾಗುತ್ತದೆ.

ಇದನ್ನೂ ಓದಿ | ಶಬ್ದಸ್ವಪ್ನ ಅಂಕಣ | ಕನಸು ಎಚ್ಚರಗಳ ನಡುವೆ ಮಾರ್ಕ್ವೇಜ್‌ನ ಮಾಯಾದರ್ಪಣ

ವಿಮರ್ಶಕ ಡಾ. ಕೆ. ವಿ. ನಾರಾಯಣ ಭೇಟಿ ಮಾಡಿದ ಸಂದರ್ಭದಲ್ಲಿ ಮಾಸ್ತಿ ತಮ್ಮ ಕಥನಗಾರಿಕೆಯ ಕುರಿತು ಆಡಿದ ಮಾತು, ಕತೆ ಎಂಬ ಭಾಷೆಯ ಸ್ವತಂತ್ರ ಅಸ್ತಿತ್ವದ ಬಗ್ಗೆ ವಿಶೇಷ ಬೆಳಕನ್ನು ಚೆಲ್ಲುತ್ತದೆ. ‘ನಾನು ಹೇಳೊ ಮಾತು ಎಲ್ಲರೂ ಕೇಳಬೇಕಾದ ಮಾತು. ನಾನು ಬರಿಯ ಉಪಕರಣ. I am the Gramaphone speaker through which my elders speak. ನನ್ನ ಮೂಲಕ ನನ್ನ ಹಿರಿಯರು ಮಾತಾಡತಾ ಇದ್ದಾರೆ. ನಾನು ಗ್ರಾಮಾಫೋನ್ ಸ್ಪೀಕರ್ ಇದ್ದ ಹಾಗೆ. ಈ ಮಾತು ಬಹುಪಾಲು ನನ್ನ ಸ್ವಂತದ್ದಲ್ಲ. ಸ್ವಂತ ಸ್ವಲ್ಪ ಇದೆ. ಅದು ಇರುವುದು ಸಮನ್ವಯದಲ್ಲಿ. ಅದರ ಮೊತ್ತ ಹಿರಿಯರದು.’ (ಬೇರು ಕಾಂಡ ಚಿಗುರು; ನುಡಿ ನಾಡು ಜನ: ಮಾಸ್ತಿ ಮನ-ಡಾ. ಕೆ. ವಿ. ನಾರಾಯಣ) ಇದು ಕೇವಲ ಮಾಸ್ತಿಯವರ ವಿನಯದ ಮಾತಲ್ಲ. ಗದುಗಿನ ವೀರನಾರಾಯಣ ಬರೆಹಗಾರ; ತಾನು ಲಿಪಿಗಾರ ಎಂದ ಕುಮಾರವ್ಯಾಸನ ಮಾತನ್ನು ಇಲ್ಲಿ ಸ್ಮರಿಸಬಹುದು.

ಭಾಷೆ ನಿಜವಾಗಲೂ ಒಂದು ಅಚ್ಚರಿ; ಸದಾ ಎಚ್ಚರದ ಸ್ಥಿತಿಯಲ್ಲಿ ನಾವು ಅದನ್ನು ಉಚ್ಚರಿಸುವುದಿಲ್ಲ. ಅರೆಪ್ರಜ್ಞಾವಸ್ಥೆಯಲ್ಲಿ ವ್ಯಕ್ತಿಯ ಸ್ಮೃತಿಯನ್ನೂ ಮತ್ತು ಸಮುದಾಯದ ಸಮಷ್ಟಿ ಸುಪ್ತಪ್ರಜ್ಞೆಯನ್ನೂ ಅಂತರ್ಗತಗೊಳಿಸಿಕೊಂಡೇ ಕಾರ್ಯಪ್ರವೃತ್ತವಾಗಿರುತ್ತದೆ. ಎಲ್ಲ ಮೊದಲೇ ತಿಳಿದು ಬರೆಯುವುದಲ್ಲ; ತಿಳಿದುಕೊಳ್ಳಲೆಂದೇ ಬರೆಯುವ, ಬರೆಯುತ್ತಲೇ ತಿಳಿಯುವ ಬೆರಗು ಎಂದು ಯಶವಂತ ಚಿತ್ತಾಲರು ಭಾಷೆಯ ಸ್ವಾಯತ್ತ ಅಸ್ತಿತ್ವವನ್ನು ಗುರುತಿಸಿದ್ದಾರೆ. ಬರೆಯುವ ಉತ್ಕಟ ಸ್ಥಿತಿಯಲ್ಲಿ ನಮ್ಮನ್ನು ಭಾಷೆ ಕೈ ಹಿಡಿದು ನಡೆಸಿಕೊಂಡು ಹೋಗುವ ದಾರಿಯನ್ನು ಸೃಷ್ಟಿಸಿಕೊಳ್ಳುತ್ತದೆ. ಏಕಾಂತದಲ್ಲಿ ಅನಂತವನ್ನು ಸಂಧಿಸಿದ ಕ್ಷಣದಲ್ಲಿ ಭಾಷೆ ತನ್ನೆಲ್ಲ ಸ್ಮರಣೆಯ ಸಂಯುಕ್ತ ಸಾರ ರೂಪದ ವಿವರದಲ್ಲಿ ಜೀವಂತವಾಗುತ್ತದೆ.

ಮನೋವಿಜ್ಞಾನಿ ಕಾರ್ಲ್ ಯುಂಗನನ್ನು ಉಲ್ಲೇಖಿಸಿ ಚಿತ್ತಾಲರು ಮನಸ್ಸು ಮತ್ತು ಭಾಷೆಯ ಸೃಷ್ಟಿಶೀಲ ಸಂಬಂಧವನ್ನು ನಿರೂಪಿಸಿದ್ದು ಅರ್ಥಪೂರ್ಣವಾಗಿದೆ: ‘ಮಾನವನ ಎಲ್ಲ ಚಟುವಟಿಕೆಗಳ ಉಗಮಸ್ಥಾನವೇ ಮಾನವ ಮನಸ್ಸು. ನಮ್ಮ ಸಂಸ್ಕೃತಿಯ ಇತಿಹಾಸವೆಂದರೆ ಮಾನವ ಮನಸ್ಸು ತನ್ನ ಅಜಾಗೃತ ಸ್ಥಿತಿಯಿಂದ ಜಾಗೃತ ಸ್ಥಿತಿಗೆ ವಿಕಾಸಗೊಂಡದ್ದರ ಇತಿಹಾಸ. ಪುರಾಣ, ವಿಧಿಕಾಂಡಗಳು, ಧರ್ಮ, ವಿಜ್ಞಾನ, ಕಲೆ, ಸಾಹಿತ್ಯ ಇವೆಲ್ಲವುಗಳ ಮುಖಾಂತರ ಈ ವಿಕಸನ ಕ್ರಿಯೆ ನಡೆಯುತ್ತದೆ; ಅಜಾಗೃತ ಚಿತ್ತ ಜಾಗೃತ ಪ್ರಜ್ಞೆಯಾಗಿ ಪ್ರಕಟವಾಗುತ್ತದೆ.’ (ಯಶವಂತ ಚಿತ್ತಾಲ: ಕೆಲವು ಅಧ್ಯಯನಗಳು-ಜಿ. ಎಸ್. ಭಟ್ಟ; ನಾನೇಕೆ ಬರೆಯುತ್ತೇನೆ?-ಯಶವಂತ ಚಿತ್ತಾಲ). ಭಾಷೆಯಲ್ಲಿ ಸುಪ್ತವಾಗಿರುವ ಸಮಷ್ಟಿಯ ಅನುಭವ ಆದಿಮ ಪ್ರತಿಮೆಯಾಗಿ, ಜನಾಂಗದ ಮಿಥ್ ಆಗಿ, ಪುರಾಣವಾಗಿ, ಸ್ವಪ್ನ ದರ್ಶನವಾಗಿ, ವಿಧಿಕಾಂಡಗಳ ಸಂಕೇತಗಳಾಗಿ ಪ್ರಕಟವಾಗುವ ಪವಾಡಸದೃಶ ವಿಸ್ಮಯ ಭಾಷೆಯ ಮೂಲ ಸ್ವಭಾವವೇ ಆಗಿರುತ್ತದೆ. ಬೇಂದ್ರೆಯವರ ಕೆಲ ಪದ್ಯಗಳ ಪ್ರತಿಮೆಗಳು ಸ್ವಪ್ನಗೋಚರವಾದವುಗಳೇ.

ಹೇಯ್ಡೇಗರ್ ಹೇಳುವಂತೆ ತಂತ್ರಜ್ಞಾನದ ಭಾಷೆಗಿಂತ ಸಾಂಪ್ರದಾಯಕ ದೇಸೀ ಭಾಷೆಯಲ್ಲಿ ಅನುಕ್ತವಾದ ಬೃಹತ್ ಪ್ರಪಂಚವೇ ಸುಪ್ತವಾಗಿದೆ. ಅದರ ಅಗಾಧ ಸಾಧ್ಯತೆಗಳನ್ನು ಭಾಷೆಯ ಮನಸ್ಸಿನಲ್ಲಿ ಅನಾವರಣಗೊಳಿಸಿದಾಗ ಜನಾಂಗದ ಮಾತು ಕಾವ್ಯದ ಎತ್ತರಕ್ಕೆ ಏರಬಲ್ಲದು.

ಇದನ್ನೂ ಓದಿ | ಶಬ್ದಸ್ವಪ್ನ ಅಂಕಣ | ಭಾಷಾ ಬೋಧನೆಯ ಸೃಜನಶೀಲ ನೆಲೆಗಳು

Exit mobile version