Site icon Vistara News

ಶಬ್ದಸ್ವಪ್ನ ಅಂಕಣ | ಗೋಕರ್ಣವೆಂಬ ಸ್ಮೃತಿ ಸಮುದ್ರ

gokarna

ಭಾಗ 1

ನನಗಾಗ ಹತ್ತು ವರುಷ. ಶಾಲೆಗೆ ಶನಿವಾರದ ಮಧ್ಯಾಹ್ನದ ಸೂಟಿಯಿತ್ತು. ಸಂಜೆ ಮನೆಯಂಗಳದಲ್ಲಿ ಹಳದಿ ಬಿಸಿಲಿಳಿದು ನೆರಳನ್ನು ನೇಯುತ್ತಿದ್ದಾಗ ಕೇರಿಯ ದಾರಿಯಿಂದ ಜೋಳಿಗೆಯ ವ್ಯಾಪಾರಿಯೊಬ್ಬ ಬಂದು ನಾನು ನಿಂತಿದ್ದ ಬೆಚ್ಚಗಿನ ಚಿಟ್ಟೆಯ ಮೇಲೆ ಕುಳಿತು ಮಾರಾಟಕ್ಕೆ ತಂದಿದ್ದ ಕರಿ ಫ್ರೇಮಿನ ಆಯತಾಕಾರದ ಗಾಜಿನ ಫೋಟೊಗಳನ್ನು ಒಂದೊಂದಾಗಿ ತೋರಿಸಿದ. ಸಮುದ್ರದಂಚಿನ ಮುಸ್ಸಂಜೆಯ ದೃಶ್ಯದ ಫೋಟೊವನ್ನು ಅಬ್ಬೆ ವ್ಯಾಪಾರ ಜಮಾಯಿಸಿ ಖರೀದಿಸಿದಳು. ‘ಒಡೀತೆ ಒಡೀತೆ’ ಎಂದ ಅವಳ ಎಚ್ಚರಿಕೆಯನ್ನು ಆಲಿಸುತ್ತಲೆ ನಾನು ಖುಷಿಯಿಂದ ಅದನೆತ್ತಿ ಜಗಲಿಗೆ ಸಾಗಿಸಿ ನೋಡತೊಡಗಿದೆ: ನಸುಗೆಂಪು ದಿಗಂತದಲ್ಲಿ ಇಳಿಯುತ್ತಿರುವ ಮುಸ್ಸಂಜೆಯ ಹೊಳಪಿನಲ್ಲಿ ತೊಯ್ಯುತ್ತಿರುವ ಸಮುದ್ರದ ಅಲೆಗಳ ತೀರ; ಯಕ್ಷಗಾನದ ರಾಜನ ವೇಷಧಾರಿ ಬೊಗಸೆ ಚಾಚಿ ತುಸು ಬಾಗಿದ ಭಂಗಿಯಲ್ಲಿ ನಿಂತಿದ್ದಾನೆ; ಬಡಕಲು ಬಾಲವಟುವಿನ ಅಂಗೈಯಲ್ಲಿ ಪ್ರಭಾವಳಿಯ ಲಿಂಗವಿದೆ. ಅವರಿಬ್ಬರ ಹಿನ್ನೆಲೆಯಲ್ಲಿ ಭೋರ್ಗೆರೆಯುವ ಸಮುದ್ರ. ಈ ವರ್ಣಚಿತ್ರದ ಕತೆಯನ್ನು ಕಾಡಿ ಅಬ್ಬೆಯಿಂದ ನಾನು ನಿರೂಪಿಸಿಕೊಂಡೆ. ದೇವತೆಗಳು ಉಪಾಯದಿಂದ ಲಂಕೆಗೆ ರಾವಣೇಶ್ವರ ಒಯ್ಯುತ್ತಿರುವ ಪ್ರಾಣಲಿಂಗವನ್ನು ವಟುವೇಷಧಾರಿ ಗಣಪತಿಯಿಂದ ಗೋಕರ್ಣದಲ್ಲಿ ಇರಿಸಿಕೊಳ್ಳುವ ಕತೆ ಎಂದು ಅವಳು ಹೇಳಿದಳು. ಕೆಲವು ದಿನಗಳ ತರುವಾಯ ಅಬ್ಬೆ ಮತ್ತು ಅಣ್ಣ ಜಾತಕ ತೋರಿಸಿ ಗ್ರಹಚಾರಕ್ಕೆ ತೀರ್ಥಕೇತ್ರದಲ್ಲಿ ಪೂಜೆ ಸಲ್ಲಿಸಲು ಗೋಕರ್ಣಕ್ಕೆ ಹೋಗುವ ಸುದ್ದಿ ತಿಳಿದು ನಾನು ಹಠದಿಂದ ಅವರ ಬೆನ್ನು ಬಿದ್ದೆ. ಕಳೆದ ಸಲ ಗೋಕರ್ಣದ ಪುರೋಹಿತರ ಛತ್ರದಲ್ಲಿ ನಡೆದ ಅಕ್ಕನ ಮದುವೆಗೆ ನನ್ನ ಮನೆ ಕಾಯಲು ಬಿಟ್ಟು ಹೋದದ್ದಕ್ಕೆ ಸೇಡು ತೀರಿಸಿಕೊಳ್ಳುವಂತೆ ನಾನು ದುಂಬಾಲು ಬಿದ್ದು ಪರಿಷೆಗೆ ಅವರೊಂದಿಗೆ ಹೊರಡುವ ಹಕ್ಕನ್ನು ಚಲಾಯಿಸಿ ಗೆದ್ದು ಬಿಟ್ಟೆ.

ಕರ್ಣದಲಿ ಭೋರ್ಗರೆವ ಗೋಕರ್ಣ

ಗೋಕರ್ಣ ಕ್ಷೇತ್ರದ ಕನಸು ಬೀಳಲು ಶುರುವಾದ ಕ್ಷಣ ಅದು. ಪ್ರತಿವರ್ಷ ನಮ್ಮೂರಿಗೆ ಎರಡು ಸಲ ಗೋಕರ್ಣದ ಪುರೋಹಿತರು ತಿರುಗಾಗಟಕ್ಕೆ ಬಂದು ಹೋಗುತ್ತಿದ್ದರು. ಮಳೆಗಾಲ ಮುಗಿಯುತ್ತಲೆ ಕನವರಿಸುತ್ತ ಎಳೆಬಿಸಿಲಲ್ಲಿ ಹಣಕುವ ನವರಾತ್ರಿಗೆ ಮನೆ ಮನೆಯಲ್ಲಿ ಪಾರಾಯಣ ಮಾಡಲು ಸೊಂಟಕ್ಕೆ ಬಿಳಿ ಪಂಜಿ ಸುತ್ತಿ, ಬೆವರೊರಿಸಿಕೊಳ್ಳಲು, ಗಾಳಿ ಬೀಸಿಕೊಳ್ಳಲು ಹೆಗಲಿಗೊಂದು ಪಂಜಿ ಹಾಕಿ ಕೇರಿಯ ದಾರಿಗಳಲ್ಲಿ ಅವಲಕ್ಕಿ ಗಂಜಿಯ ಪಳಾರದಲ್ಲೆ ಅಲೆಯುತ್ತಿದ್ದ ಅವರು ಶಾಲೆಗೆ ಕೊಡೆ ಹಿಡಿದು ನಡೆಯುತ್ತಿದ್ದ ನಮಗೆ ದಾರಿಯಲ್ಲಿ ಸಿಗುತ್ತಿದ್ದರು; ಇದಕ್ಕೂ ಮುನ್ನ ಶ್ರಾವಣದ ಮಳೆಯಲ್ಲಿ ಪುರಾಣ ಓದಲು ಬರುತ್ತಿದ್ದರು; ಜಗಲಿಯ ಮೇಲೆ ವ್ಯಾಸಪೀಠದಲ್ಲಿ ಮುಟ್ಟಿದರೆ ಮುರಿದು ಹೋಗುತ್ತಿದ್ದ ಹಳೆಯ ಲಡ್ಡಾದ ಪುಸ್ತಕವಿಟ್ಟು ಸಂಸ್ಕೃತದಲ್ಲಿದ್ದ ಶ್ಲೋಕಗಳನ್ನು ಅನುನಾಸಿಕ ಸ್ವರದಲ್ಲಿ ಓದಿ ಆಡು ಭಾಷೆಯಲ್ಲಿ ಅದರ ಕಥೆಯ ಸಾರಾಂಶವನ್ನು ವಿವರಿಸುತ್ತಿದ್ದರು. ಅವರ ಹಲ್ಲುಗಳಿಲ್ಲದ ಬಾಯಿಂದ ತೊದಲಿ ಉಚ್ಚಾರಗೊಳ್ಳಲು ಪೇಚಾಡುತ್ತಿದ್ದ ವಿಕಲಾಂಗ ಶಬ್ದಗಳು ನಗು ತಡೆದುಕೊಳ್ಳಲು ಸಾಧ್ಯವಾಗದಷ್ಟು ತಮಾಷೆಯಾಗಿ ಇರುತ್ತಿದ್ದವು; ಅದು ಪುಣ್ಯ ಕಥಾಶ್ರವಣ ಆಗಿದ್ದರಿಂದ ನಾವು ಆದಷ್ಟು ಸಹನೆಯಿಂದ ಭಕ್ತಿಪೂರ್ವಕವಾಗಿ ಆಲಿಸಲು ಯತ್ನಿಸುತ್ತಿದ್ದೆವು. ಹೀಗೆ ನನ್ನ ಸನಿಹ ಬಂದ ಗೋಕರ್ಣವನ್ನು ಒಮ್ಮೆ ನನ್ನ ಅಬ್ಬೆ ಎರಡೂ ಕೈಗಳಿಂದ ಕಿವಿಗಳನ್ನು ಮುಚ್ಚಿ ಕಣ್ಮುಚ್ಚಿ ಆಲಿಸಲು ಹೇಳಿದಳು. ಆಗ ಕೇಳಿಸುತ್ತಿದ್ದ ಸದ್ದು ಗೋಕರ್ಣ ಸಮುದ್ರದ ಭೋರ್ಗೆರೆತ ಎಂದು ಅವಳು ಹೇಳಿದ್ದನ್ನು ನಾನು ನಂಬಿ ಬೆರಗಾದೆ.

ಪರಿಷೆಯ ಪುರಾಣ

ಪರಿಷೆಯ ತಯಾರಿ ವಾರದುದ್ದಕ್ಕೂ ಇರುತ್ತಿತ್ತು: ಹೊಸ ಪಂಜಿಯಲ್ಲಿ ಅಬ್ಬೆ ದಿನದ ಊಟದ ಅಕ್ಕಿಯನ್ನು ಅಟವೆಯಲ್ಲಿ ಹತ್ತು ಸಲ ಅಳೆದು ಗಂಟು ಕಟ್ಟಿಡುತ್ತಿದ್ದಳು; ತೆಂಗಿನ ಕಾಯಿಗಳನ್ನು ಸುಲಿದು ಅವುಗಳ ರೊಣೆಯಂತ ಸುಂಗನ್ನು ಕಿತ್ತು ನುಣುಪಾಗಿಸಿ ಬಟವೆಯಲ್ಲಿ ತುಂಬಿಡುತ್ತಿದ್ದಳು; ಆಮೇಲೆ ನೆಲ ಬಳಿಯಲೆಂದು ಹಾಳೆಕಡಿಯ ಕಟ್ಟು, ಏಲಕ್ಕಿ ಪೊಟ್ಟಣ, ಸಿಗರಬೆಟ್ಟೆ ಕೆಂಪಡಿಕೆಗಳನ್ನು ಬಟವೆಯ ಅಕ್ಕಪಕ್ಕ ಇಡುತ್ತಿದ್ದಳು; ಹೊರಡುವ ಮುಂಚಿನ ದಿನ ಬಿಲ್ವಪತ್ರೆ ಮತ್ತು ದೂರ್ವೆ ಜೋಡಿಸುತ್ತಿದ್ದಳು. ಈ ಪದಾರ್ಥಗಳೆಲ್ಲ ಪುರೋಹಿತರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದಷ್ಟು ದಿನಗಳ ನಮ್ಮ ನಿತ್ಯ ಖರ್ಚಿಗೆ ಜಮಾ ಆಗಬೇಕಾದದ್ದು ಎಂದು ಆಮೇಲೆ ನನಗೆ ತಿಳಿಯಿತು. ಏಕೆಂದರೆ, ಆ ದಿನಗಳಲ್ಲಿ ವಸತಿಗೃಹಗಳಿರಲಿಲ್ಲ; ಛತ್ರಗಳಿದ್ದರೂ ಅಲ್ಲುಳಿಯುವ ಸಂಪ್ರದಾಯ ರೂಢಿಯಲ್ಲಿರಲಿಲ್ಲ. ಪೌರೋಹಿತ್ಯದಿಂದಲೇ ದಿನದ ಅನ್ನ ಗಳಿಸಬೇಕಾಗಿದ್ದ ಅವರಿಗೆ ನಮ್ಮ ವಾಸ್ತವ್ಯ ಭಾರವಾಗಬಾರದು ಎಂದು ಈ ಏರ್ಪಾಡು ಇರುತ್ತಿತ್ತು. ಗೋಕರ್ಣ ಮಂಡಲದ ಪುರೋಹಿತರಿಗೆ ಹಲವು ಸೀಮೆಯ ಮನೆಗಳ ಅವರ ಶಿಷ್ಯಕೋಟಿಯ ಮೇಲೆ ಧಾರ್ಮಿಕ ಹಕ್ಕನ್ನು ಚಲಾಯಿಸುವ ಅಲಿಖಿತ ಶಾಸನವನ್ನು ಕದಂಬರ ಕಾಲದಲ್ಲೇ ನೀಡಲಾಗಿದೆಯಂತೆ. ಈ ನಿಯಮದಂತೆ ಮದುವೆ-ಮುಂಜಿಯನ್ನೂ ಒಳಗೊಂಡು ಅಶೌಚ, ಅಪರಕ್ರಿಯೆಗಳ ಕುರಿತ ಶಾಸ್ತ್ರಾಚಾರಗಳನ್ನು ನಡೆಸಲು ಮಹಾಮಂಡಲದ ಅನುಮತಿಯನ್ನೂ ಮಾರ್ಗದರ್ಶನವನ್ನೂ ಪಡೆಯುವ ಪರಂಪರೆಯಿದೆ. ಇದು ಗೋಕರ್ಣದಲ್ಲಿ ಕೈಗೊಳ್ಳಬೇಕಾದ ತೀರ್ಥಕ್ಷೇತ್ರ ಯಾತ್ರಾವಿಧಿಗಳನ್ನೂ ಮಂಡಲದ ಅಧೀನದಲ್ಲಿರುವ ಮನೆಗಳಲ್ಲಿ ಜರುಗುವ ಮಾಂಗಲ್ಯ ಮತ್ತು ದೇವತಾ ಕಾರ್ಯಗಳನ್ನು ಒಳಗೊಳ್ಳುತ್ತದೆ. ಮದುವೆಯ ಮುಹೂರ್ತವನ್ನು ಅವರೇ ಇಟ್ಟುಕೊಡುವ ಪರಿಪಾಠವನ್ನು ಮತ್ತು ಕ್ಷೇತ್ರಪುರೋಹಿತರ ಹೆಸರಿನೊಂದಿಗೆ ಆಮಂತ್ರಣ ಪತ್ರಿಕೆಯಲ್ಲಿ ಶುಭಾಶೀರ್ವಾದದ ಸಾಲನ್ನು ಅಚ್ಚು ಹಾಕಿಸಲು ಮರೆಯಬಾರದ ಒಪ್ಪಂದವಿರುತ್ತಿತ್ತು. ಈ ಮಂಡಲದ ವ್ಯವಸ್ಥೆಗೆ ಆಯಾ ಸೀಮೆಗಳ ಮಠಗಳ ಮನ್ನಣೆಯೂ ಇದೆ. ಸುಗ್ಗಿಯ ಕಿಂಚಿತ್ ಪಾಲನ್ನು ಸರ್ತೆಯ ಹೆಸರಿನಲ್ಲಿ ಮಂಡಲದ ಪುರೋಹಿತರಿಗೆ ಸಂದಾಯ ಮಾಡುವ ಪರಿಪಾಠವೂ ಇದೆ.

ಕ್ಷೇತ್ರ ಪ್ರವೇಶ

ಅಂದು ನಾವು ಮೂವರು ಮಧ್ಯಾಹ್ನದ ಊಟವನ್ನು ಬೇಗನೆ ಮನೆಯಲ್ಲಿ ಮುಗಿಸಿ, ಏಳು ಮೈಲು ಮಣ್ಣಿನ ರಸ್ತೆಯಲ್ಲಿ ನಡೆದು, ಇಡಗುಂದಿಯ ಟಪಾಲು ಮನೆಯ ಸನಿಹ ಹುಬ್ಬಳ್ಳಿ-ಬಂಕಿಕೊಡ್ಲು ಬಸ್ ಹಿಡಿದೆವು. ಅಂದಿನ ದಿನಗಳಲ್ಲಿ ಅನುದಿನವೂ ಓಡಾಡುತ್ತಿದ್ದ ನಂಬಿಗಸ್ಥ ಏಕಮಾತ್ರ ಬಸ್ ಅದಾಗಿತ್ತು; ಏಕೆಂದರೆ ಅದು ಟಪಾಲು ಒಯ್ಯುವ ಬಸ್ಸು. ಬೆಳಿಗ್ಗೆ ಬಂಕಿಕೊಡ್ಲಿನಿಂದ ಹೊರಟು ಸಂಜೆ ಹುಬ್ಬಳ್ಳಿಯಿಂದ ವಾಪಸ್ಸಾಗುತ್ತಿತ್ತು. ಅದೇ ನನ್ನ ಜೀವನದ ಮೊದಲ ಅತ್ಯಂತ ದೀರ್ಘ ಪ್ರಯಾಣವಾಗಿತ್ತು; ಮಲೆನಾಡಿನ ಘಟ್ಟ ಇಳಿದು ಕರಾವಳಿಯ ಬಿಸಿ ಗಾಳಿಯ ಭೂಗೋಲದಲ್ಲಿ ಸಂಚರಿಸಿದ್ದೂ ಅದೇ ಮೊದಲು. ಕಾಡು, ಸೇತುವೆಯ ನದಿಗಳು, ಹೊಗೆ ಉಗುಳುವ ಗೋಪುರದ ಹಂಚಿನ ಕಾರ್ಖಾನೆ, ಹಸುರು ಬೆಟ್ಟಗಳ ಶ್ರೇಣಿಗಳು, ಸಪಾಟಾದ ಸಣ್ಣ ಸಣ್ಣ ಗದ್ದೆಯ ಬಯಲುಗಳು, ಸಾಣೆಕಟ್ಟೆಯ ಉಪ್ಪಿನ ಆಗರ ದಾಟಿ ಗೋಕರ್ಣ ಪ್ರವೇಶಿಸಿದಾಗ ಅಡ್ಡ ಬಿಸಿಲಿನ ಸಂಜೆಯ ಸಮಯವಾಗಿತ್ತು; ಮಲೆನಾಡ ಬೇಸಿಗೆಯ ಕಾಡ್ಗಿಚ್ಚಿನ ಕಂದು ಹೊಗೆಯಿಂದ ಮಂಕಾದ ಮಂದ ಬಿಸಿಲಿನ ವಾತಾವರಣವಿತ್ತು. ಇಕ್ಕಟ್ಟಾದ ಡೊಂಕು ರಸ್ತೆಗೆ ಇಣುಕಿದ ಒಣಗಿದ ಹುಲ್ಲುಗರಿಯ ಹಳೆಯ ಮನೆಗಳ ತಗ್ಗು ಹಂಚಿನ ಮಾಡುಗಳು; ತೆರೆದ ಗಟಾರಿನ ಚಿಟ್ಟೆಯ ಮೇಲೆ ಅಂಗಡಿಯ ಮುಂಗಟ್ಟುಗಳು; ಅಲ್ಲಲ್ಲಿ ಪೊರೆ ಕಳಚಿದ ಮರಗಳ ನೆರಳುಗಳು; ಬಾಂಕಿನ ಚಾದಂಗಡಿಯ ಪೆಠಾರಿಯ ಮೇಲೆ ಸಾಲಾಗಿಟ್ಟ ಶಂಕರಪೊಳೆ, ಚುಡುವ ತುಂಬಿದ ಗಾಜಿನ ಭರಣಿಗಳ ಕನ್ನಡಿ ಗುಂಟ ಹಾದು ಹೋಗುವ ನಮ್ಮ ಬಸ್ಸು, ನಮ್ಮ ಮುಖಗಳು; ಅಲ್ಲಲ್ಲಿ ರಸ್ತೆಯ ಅಕ್ಕಪಕ್ಕ ಕಂಡೂ ಕಾಣದಂತೆ ಓಡುವ ಚಿರೆಗಲ್ಲಿನ ಪಾಗಾರದ ಓಣಿಗಳು; ನಡುವೆ ತಣ್ಣನೆಯ ನಸುಕಿನ ಹಿತ್ತಲವರೆಗೆ ಚಾಚಿದ ಹೊಳೆವ ಒಳಗಳ ಮನೆಗಳು; ಅವುಗಳ ಹೊರ ಗೋಡೆಗಳ ಮೇಲೆ ಬರೆದ ಗಜಕರ್ಣ ಔಷಧಿಯ ಜಾಹೀರಾತಿನ ಚಿತ್ರಗಳು; ದಾರಿಹೋಕರ ಹಂಗಿನಲ್ಲಿ ಹಸಿದು ಕೂತ ಒಣಗಿದ ಹೂವು ಮತ್ತು ಎಣ್ಣೆಯ ಜಿಡ್ಡಿನಿಂದ ಜಡವಾಗಿ ಹೋದ ಉಪದೇವತೆಗಳ ಗುಡಿಗಳು.

ರಥಬೀದಿಯ ಕೊನೆಯಲ್ಲಿ ಬಸ್ ಇಳಿದು ನಾವು ಅದೇ ರಸ್ತೆಯಲ್ಲಿ ವಾಪಸ್ ಹೆಜ್ಜೆ ಹಾಕಿದೆವು. ಕಳಚಿಟ್ಟ ಶಿವರಾತ್ರಿಯ ಬೃಹತ್ ತೇರಿನ ಹೊಟ್ಟೆಯಿಂದ ಹುಟ್ಟಿದಂತಿದ್ದ ರಥಬೀದಿಯ ಎರಡೂ ಪಕ್ಕ ಶಂಖ, ಹವಳದ ಹಾರ, ಚಿಪ್ಪುಗಳ ಸರ, ಉರುಟಾದ ಗಂಧ ತೇಯುವ ಮಣೆಗಳು, ವಿವಿಧ ಗಾತ್ರದ ದೇವತೆಗಳ ವಿಗ್ರಹಗಳು, ಬಣ್ಣದ ಭಗವಂತರ ಗಾಜಿನ ಫೋಟೊಗಳ ಅಂಗಡಿಗಳಿದ್ದವು. ಇವೆಲ್ಲ ಕವಿತೆಯ ಪ್ರತಿಮೆಗಳಾಗಲೊ ಕಥೆಯ ರೂಪಕ ಚಿತ್ರಗಳಾಗಲೊ ನಾಟಕದ ದೃಶ್ಯಗಳಾಗಲೊ ಕಾದಂತಿದ್ದವು. ಸೆಖೆಗೆ ಬೆವರುತ್ತ ತಾಳೆಯ ಬೀಸಣಿಕೆ ಬೀಸುತ್ತ ಪಂಜಿಯುಟ್ಟ ಕರಿಗೂದಲ ಎದೆಯ ಮೇಲೆ ಬೈರಾಸು ಎಸೆದು ರುದ್ರಾಕ್ಷಿಸರ ತೊಟ್ಟು ಪೂಜೆಯ ಅವಸರದಲ್ಲಿ ಅಲೆಯುವ ಪುರೋಹಿತರೂ ಕರಿಮಣಿಯ ಗೌಡ್ತಿಯರೂ ಮಹಾರಾಷ್ಟ್ರದ ವಾರಕರಿಯ ಬಿಳಿ ಟೊಪ್ಪಿಯ ಭಜನಾ ಮೇಳದವರೂ ಬಯಲು ಸೀಮೆಯಿಂದ ಅದಾಗ ತಾನೆ ಬಸ್ಸಿಳಿದು ಬೆರಗಿನಲ್ಲಿ ಬೀದಿ ಮಧ್ಯ ನಿಂತು, ‘ಏ ಬಾರಲೇ’ ಎಂದು ಒದರುವ ಯಾತ್ರಿಕರೂ ಸಮುದ್ರದತ್ತ ದಾಪುಗಾಲು ಹಾಕುತ್ತ ನಡೆದ ಹೊಸ ಜೋಡಿಗಳೂ ಕೋಲಾ ಕುಡಿಯುತ್ತ ಕಾಮತರ ಕೋಲ್ದ್ರಿಂಕ್ಸ್ ಕೆಫೆಯಲ್ಲಿ ಕೂತ ಬಿಳಿಯರೂ ಇವ್ಯಾವವೂ ಸಂಬಂಧವಿರದಂತೆ ನಿರಾಳ ನಿಂತು ಮೆಲಕಾಡುವ ಗೂಳಿಗಳು ಅಂಗಡಿಯ ಮಾಡಿನ ಸಂಧಿಯಲ್ಲಿ ಕಟ್ಟಿದ ಹುಲ್ಲಿನ ಗೂಡಿನಿಂದ ಚೀರುತ್ತ ತೆಕ್ಕೆ ಬಿದ್ದು ಜಗಳವಾಡುತ್ತ ಪಾದದ ಸನಿಹ ಉರುಳಾಡುವ ಗುಬ್ಬಿಗಳೂ ನಮ್ಮನ್ನು ತಮ್ಮವರನ್ನಾಗಿಸಿಕೊಂಡವು.

ಇದನ್ನೂ ಓದಿ | ಶಬ್ದಸ್ವಪ್ನ | ದೇವರನ್ನು ಕಾಣಿಸಿದ ಕಲಾವಿದ ರಾಜಾ ರವಿವರ್ಮ

ಕೋಟಿತೀರ್ಥ

ರಥಬೀದಿಯ ಶುರುವಿನಲ್ಲಿ ವೆಂಕಟರಮಣ ದೇವಸ್ಥಾನದೆದುರು ಬಲಕ್ಕೆ ಹೊರಳಿ ಎತ್ತರದ ಚಿಟ್ಟೆಯ ಸಾಲುಮನೆಗಳ ನಡುವೆ ರಂಗೋಲಿ ದಾಟುತ್ತ ಕೋಟಿತೀರ್ಥದ ಸನಿಹ ಅಶ್ವತ್ಥಕಟ್ಟೆಯ ಎಡಕ್ಕೆ ತಿರುಗಿ ಪುರೋಹಿತರ ಮನೆಯ ಗೇಟು ದೂಡಿ ಅಬ್ಬೆ ಮತ್ತು ಅಣ್ಣ ಒಳಗೆ ನಡೆದರು. ನಾನು ತಿರುಗಿ ಕೋಟಿತೀರ್ಥದ ಕಟ್ಟೆಗೆ ಚಾಚಿ ನಿಂತೆ: ಆಯತಾಕಾರದ ಜಾರುವ ಪಾಚಿಯ ಪಾವಟಿಗೆಗಳ ಕೆಳಗೆ ಪಾದ ನೆಕ್ಕುವ ನೀರು; ನಡುವೆ ಕಲ್ಲಿನ ಮಂಟಪ; ಸಾಹಸಿಗಳು ಕೆಲವರು ಅಲ್ಲಿ ಈಜುತ್ತಿದ್ದಾರೆ; ಪಾವಟಿಗೆಗಳ ಮೇಲೆ ಪರಿಷೆಗೆ ಬಂದವರಿಗೆ ಪಿಂಡಪ್ರದಾನ ಮಾಡಿಸುತ್ತಿರುವ ಪುರೋಹಿತರು; ಅವರ ಮಂತ್ರದಿಂದ ಹೂ ಎಸಳು ತೇಲುವ ಕಲಕಿದ ನೀರಲ್ಲಿ ಅಲೆ ಎದ್ದು ಆರತಿಯ ದೀಪ ಚೂರಾಗಿದೆ; ತಗಡಿನ ಶೆಡ್ಡಿನ ಮೇಲಿಟ್ಟ ಪಿಂಡವನ್ನು ಪರಿವಾರ ಸಹಿತ ಭೋಜನ ಮಾಡುತ್ತಿರುವ ಕರ್ರಗೆ ಕಿರುಚುವ ಕಾಗೆಗಳು; ಕೋಟಿತೀರ್ಥದ ಮೂಲೆಯಲ್ಲಿ ಯಾರೋ ಸೆಳೆಯುತ್ತಿದ್ದ ವಸ್ತ್ರದ ಚಪ್ಪಟೆ ಸಪ್ಪಳ ಸುತ್ತಲಿನ ಗೋಡೆಗೆ ಅಪ್ಪಳಿಸಿ ಪ್ರತಿಧ್ವನಿಸುತ್ತಿದೆ; ಪಶ್ಚಿಮದ ನಸುಗೆಂಪು ಮುಸ್ಸಂಜೆ ಬಣ್ಣದ ಮುಗಿಲು ಮತ್ತು ತೋಟದ ನೆರಳಿನ ಚಾಪೆ ಹಾಸಿ ಪಟ್ಟಾಂಗಕ್ಕೆ ಕರೆಯುತ್ತಿದೆ; ಅಲ್ಲಿಯ ಸಪೂರಾದ ಓಣಿಯ ನೀರವ ಕಿರು ದಾರಿಗಳು ಅಪರಲೋಕಕ್ಕೆ ಕರೆದೊಯ್ಯುವಂತೆ ಭಾಸವಾಯಿತು.

ಅಬ್ಬೆ ಗೇಟಿಗೆ ಬಂದು ನನ್ನ ಕರೆದಳು. ಪುರೋಹಿತರ ಮನೆಯ ಜಗಲಿಯ ಸಿಮೆಂಟಿನ ನೆಲ ನುಣುಪಾಗಿ ತಂಪಾಗಿತ್ತು; ಅಬ್ಬೆ ತಂದ ಗಂಟುಗಳು ತುಟಿ ಬಿಚ್ಚದೆ ಅಲ್ಲೆ ಇದ್ದವು; ಕುರ್ಚಿ ಬಿಟ್ಟು ವಿಧೇಯತೆಯಿಂದ ಕೆಳಗೆ ಹಾಸಿದ ಚಾಪೆಯ ಮೇಲೆ ಕುಳಿತೆವು. ಅಂಕಣದ ಜಗಲಿಯ ಬಾಗಿಲ ಮೇಲೆ ಪುರೋಹಿತರ ತಂದೆ-ತಾಯಿಯ ಮಾಸಿದ ಫೋಟೊ; ಫ್ರೇಮಿನ ಸುತ್ತ ಹರಿಯುವ ಬೆಳಕಿನ ಬಳ್ಳಿ; ಮೊಳೆಗೆ ತೂಗಿದ ಪಂಚಾಂಗ; ಗಿಳಿಗುಟ್ಟಕ್ಕೆ ಮಡಿ ವಸ್ತ್ರ; ಲೋಬಾನದ ಪರಿಮಳ; ಅಲ್ಲಿ ಅಕಾಲಿಕ ಮುಸ್ಸಂಜೆ ಕವಿದಿತ್ತು; ತೊಳೆದ ಕೈಕಾಲುಗಳನ್ನು ಒರೆಸದೆ ಒದ್ದೆಯ ಅಲವರಿಕೆಯಲ್ಲಿಯೇ ಅವಲಕ್ಕಿ ಮತ್ತು ತಣಿದ ಹಾಲ್ನೀರು ಸೇವಿಸಿದೆವು. ಅಂದು ಮನೆಯಲ್ಲಿ ಕಿವಿ ಮುಚ್ಚಿದಾಗ ಕೇಳಿದ ಸಮುದ್ರದ ಸದ್ದು ಈಗ ಪ್ರತ್ಯಕ್ಷವಾಗಿತ್ತು; ಸಮುದ್ರಕ್ಕೆ ಹೋಗುವ ನನ್ನ ಉತ್ಸಾಹ ನೋಡಿ ಪುರೋಹಿತರೆ, ‘ಮಾಬ್ಲೇಶ್ವರನ ದರ್ಶನ ಮಾಡ್ಕಂಡು ಬನ್ನಿ’ ಎಂದು ಅಪ್ಪಣೆ ಕೊಟ್ಟರು.

(ಮುಂದುವರಿಯುತ್ತದೆ)

Exit mobile version